೧೬. ಜಿಮ್‍ನ ಜೀತವಿಮುಕ್ತಿ.

೧೬. ಜಿಮ್‍ನ ಜೀತವಿಮುಕ್ತಿ.

ಮರುದಿನ ಬೆಳಿಗ್ಗೆ ತಿಂಡಿ ತಿಂದು ನಮ್ಮ ಚಿಟ್ಟುದೋಣಿಯ ಬಳಿ ಹೋದೆವು. ಮಧ್ಯಾಹ್ನದ ಊಟವನ್ನೂ ಜೊತೆಯಲ್ಲಿ ಕೊಂಡೊಯ್ದದ್ದರಿಂದ ಸಂಜೆಯಾಗುವವರೆಗೂ ಮೀನು ಹಿಡಿಯುತ್ತಾ ಇಲ್ಲವೇ ಸುಮ್ಮನೇ ಹೊಳೆಯಲ್ಲಿ ಸುತ್ತುತ್ತಾ ಕಾಲ ಹಾಕಿದೆವು. ಮಧ್ಯೆ ಒಮ್ಮೆ ಹೋಗಿ ನಮ್ಮ ತೆಪ್ಪದ ಕ್ಷಮತೆಯನ್ನೂ ಪರೀಕ್ಷಿಸಿದೆವು. ಸಂಜೆ ಮನೆಗೆ ಹಿಂತಿರುಗಿದಾಗ ಅಲ್ಲಿ ನಮ್ಮನ್ನು ಸೀದಾ ಮಲಗುವ ಕೋಣೆಗೆ ಕಳಿಸಲಾಯಿತು. ಏಕೆ ಎಂದು ಕೇಳಿದ ಪ್ರಶ್ನೆಗೆ ಯಾರೂ ಉತ್ತರ ಕೊಡಲಿಲ್ಲ. ಆದರೆ ಅವರೆಲ್ಲಾ ತುಂಬಾ ಹೆದರಿದ್ದರೆನ್ನುವುದು ನಮಗೆ ಗೊತ್ತಾಗುತ್ತಿತ್ತು. ಸ್ವಲ್ಪ ಸಮಯಯದ ನಂತರ ಮೆಲ್ಲನೆ ಕೆಳಗಿಲಿದು ಬಂದು ಅಡಿಗೆ ಕೋಣೆಗೆ ಹೋಗಿ ನಮ್ಮ ಮಧ್ಯರಾತ್ರಿಯ ಅಲ್ಪಾಹಾರವಾಗಿ ಸ್ವಲ್ಪವನ್ನು ತೆಗೆದುಕೊಮ್ದು ಮತ್ತೆ ಮೇಲಿನ ನಮ್ಮ ಮಲಗುವ ಕೋಣೆಗೆ ಹೋಗಿ ಮಲಗಿಬಿಟ್ಟೆವು. ಮತ್ತೆ ನಾವೆದ್ದಾಗ ರಾತ್ರಿ ಹನ್ನೊಂದೂವರೆಯಾಗಿತ್ತು. ನಮ್ಮ ಸಾಹಸಕ್ಕೆ ಬೇಕಾದ ಸಿದ್ದತೆಗಳೊಂದಿಗೆ ಹೊರಡುವಾಗ ಟಾಮ್ ಕೇಳಿದ "ಬೆಣ್ಣೆ ಎಲ್ಲಿ" ನಾನು ಅಡಿಗೆಮನೆಯಲ್ಲಿ ಬೆಣ್ಣೆ ತೆಗೆದಿಟ್ಟದ್ದು ನೆನಪಿನಲ್ಲಿತ್ತು. ಅಂದರೆ ಅಲ್ಲೇ ಬಿಟ್ಟು ಬಮ್ದಿರಬೇಕು. ಅದನ್ನೇ ಟಾಮ್‍ಗೆ ಹೇಲಿದೆ.
"ಸರಿ ನೀನು ಹೋಗಿ ಅದನ್ನ್ ತೆಗೆದುಕೊಂಡು ಬಾ.. ನಾನು ಹೋಗಿ ಜಿಮ್ ಸಿದ್ದನಾಗಿದ್ದಾನೋ ಇಲ್ಲವೋ ನೋಡುತ್ತೇನೆ" ಎಂದು ಕಿಟಕಿಯಿಂದ ಕೆಳಗಿಳಿದು ಹೋದ.
ನಾನು ಮೆಲ್ಲನೆ ಮೆಟ್ಟಿಲಿಳಿದು ಅಡುಗೆ ಕೋಣೆಗೆ ಹೋದೆ. ಬೆಣ್ಣೆಯ ಬಟ್ಟಲು ನಾನು ಬಿಟ್ಟ ಜಾಗದಲ್ಲೇ ಇತ್ತು. ಅದನ್ನು ತೆಗೆದುಕೊಂಡು ಮೆಲ್ಲನೆ ಮೆಟ್ಟಿಲೇರುತ್ತಿರುವಾಗ, ಮೇಣದ ಬತ್ತಿ ಹಿದಿದು ಮೆಟ್ಟಿಲಿಲಿದು ಬಂದ ಸ್ಯಾಲಿ ಆಂಟಿಯ ಕೈಗೆ ಸಿಕ್ಕಿಕೊಂಡೆ. ಕೂಡಲೇ ಕೈಯಲ್ಲಿದ್ದ ಬೆಣ್ಣೆಯ ಬಟ್ಟಲನ್ನು ತಲೆಯ ಮೇಲಿಟ್ಟುಕೊಂಡು ಅದರ ಮೇಲೆ ನನ್ನ ಟೋಪಿ ಹಾಕಿಕೊಂಡು ಬಿಟ್ಟೆ.
"ಕೆಳಗಿಳಿದು ಹೋಗಿದ್ದೆಯಾ?" ಸ್ಯಾಲಿ ಆಂಟಿ ನನ್ನನ್ನು ತೀಕ್ಷ್ಣವಾಗಿ ಕೇಳಿದಳು.
"ಹ್ಞೂ"
"ಏತಕ್ಕೆ?"
"ಸುಮ್ಮನೆ"
"ಸುಮ್ಮನೆ ನಿನ್ನನ್ನು ನಂಬಲಾಗುವುದಿಲ್ಲ. ನಡಿ ನನ್ನ ಜೊತೆ" ಎನ್ನುತ್ತಾ ನನ್ನ ಕೈಹಿಡಿದು ನನ್ನನ್ನು ಹಜಾರಕ್ಕೆ ಕರೆದುಕೊಂಡು ಬಂದಳು. ಅಲ್ಲಿ ಸುತ್ತಮುತ್ತಲಿನ ಸುಮ್ಮರು ಹದಿನೈದು ಜನ ರೈತರು ತಮ್ಮ ತಮ್ಮ ಬಂದೂಕುಗಳನ್ನು ಹಿದಿದು ಸಿದ್ದರಾಗಿದ್ದರು. ಅವರನ್ನು ನೋಡಿ ನನಗೇನೋ ತಳಮಳ ಶುರುವಾಯಿತು. ನನ್ನನ್ನು ಅಲ್ಲೊಂದು ಖುರ್ಚಿಯಲ್ಲಿ ಕುಳ್ಳಿರಿಸಲಾಯಿತು. ಅವರೆಲ್ಲರೂ ತಮ್ಮ ತಮ್ಮಲ್ಲೇ ಪಿಸುಗುಟ್ಟುತ್ತಾ ಆ ಹಜಾರದಲ್ಲೇ ಶತಪಥ ಹಾಕುತ್ತಿದ್ದರು.
ಸ್ಯಾಲಿ ಚಿಕ್ಕಮ್ಮ ಹಿಂತಿರುಗಿ ಬರಲು ಸ್ವಲ್ಪ ಸಮಯವೇ ಹಿಡಿಯಿತು. ಬಂದವಳೇ ನನಗೆ ಹಲವಾರು ಪ್ರಶ್ನೆಗಳನ್ನು ಒಟ್ಟಿಗೆ ಹಾಕಿದಳು. ಆದರೆ ಅದಕ್ಕೆ ನಾನು ಉತ್ತರಿಸಬೇಕಾದ ಪ್ರಮೇಯ ಬರಲಿಲ್ಲ. ಏಕೆಂದರೆ ಈಗಾಗಲೇ ಮಧ್ಯರಾತ್ರಿ ಸಮೀಪಿಸುತ್ತಿರುವುದರಿಂದ ಸುತ್ತಲಿದ್ದ ಜನ ಆತಂಕಿತರಾಗಿದ್ದರು. ಕೆಲವರು ನಿಶ್ಯಬ್ದವಾಗಿ ಕುರಿ ಕೂಗುವ ಸೂಚನೆಗೆ ಕಾಯೋಣವೆಂದರೆ, ಇನ್ನೂ ಕೆಲವೆರು ತಾವೇ ಕ್ಯಾಬಿನ್ನಿಗೆ ಹೋಗಿ ಅಲ್ಲೇ ಕಾಯುವ ಸೂಚನೆ ನೀಡುತ್ತಿದ್ದರು. ಒಟ್ಟಿನಲ್ಲಿ ಅಲ್ಲೊಂದು ಭಯ ತುಂಬಿದ ವಾತಾವರಣ ಸೃಷ್ಠಿಯಾಗಿತ್ತು. ಆ ವಾತಾವರಣದಲ್ಲಿ ನನ್ನ ಮೈ ಕಾವೇರತೊಡಗಿತು. ತೆಲೆಯ ಮೇಲಿದ್ದ ಬೆಣ್ಣೆ ಕರಗಿ ನಿಧಾನವಾಗಿ ಹಣೆಯ ಮೇಲೆ ಹರಿದು ಬಂತು.! ಅದನ್ನು ನೋಡಿದ ಸ್ಯಾಲಿ ಆಂಟಿ ಬಿಳುಚಿಕೊಂಡಳು. ಅವಳ ಮುಖದಲ್ಲಿ ಭಯ ತಾಂಡವವಾಡತೊಡಗಿತು. "ದೇವರೇ ಮಗುವಿಗೆ ಮಿದುಳು ಜ್ವರ ಬಂದಿದೆ. ಅವನ ಮಿದುಳು ಕರಗಿ ನೀರಾಗಿ ಹರಿದು ಬರುತ್ತಿದೆ" ಎಂದು ಚೀರಿದಳು. ಎಲ್ಲರೂ ನನ್ನನ್ನು ನೋಡಲು ಓಡಿ ಬಮ್ದರು. ಸ್ಯಾಲಿ ಆಂಟಿ ಹತ್ತಿರ ಬಂದು ನನ್ನ ಟೋಪಿಯನ್ನು ತೆಗೆದು ನೋಡಿದವಳೇ, ನನ್ನನ್ನು ತಬ್ಬಿಕೊಂಡು "ಮಗೂ ಹಸಿವಾಗ್ತಿದೆ, ಅಂತ ಹೇಳಬಾರದಾ? ನಾನೆಷ್ಟು ಹೆದರಿಬಿಟ್ಟೆ ಗೊತ್ತಾ?" ಎಂದು ಮುದ್ದಿಸಿದಳು. ಮತ್ತು ನನಗೆ ನನ್ನ ಕೋಣೆ ಸೇರಿ ಮಲಗಲು ಹೇಳಿದಳು.
ಒಂದೇ ಕ್ಷಣದಲ್ಲಿ ಅಲ್ಲಿಂದ ಹಾರಿ, ಮೇಲಿನಕೊಠಡಿ ಸೇರಿ, ಮತ್ತೆ ಅಲ್ಲಿಂದಲೂ ನೀರಿನ ಕೊಳವೆಯ ಮೇಲಿಂದ ಜಾರಿ, ಶೆಡ್‍ನ ಕಡೆಗೆ, ಟಾಮ್ ಕಣ್ಣಿಗೆ ಬೀಳುವವರೆಗೂ ಓಡಿದೆ. "ಟಾಮ್ ನಾವು ತಕ್ಷಣ ಇಲ್ಲಿಂದ ಹೊರಟುಬಿಡಬೇಕು. ಮನೆಯಲ್ಲಿ ಏನಿಲ್ಲಾಂದ್ರೂ ಹದಿನೈದು ಜನ ಬಂದೂಕು ಹಿಡಿದು ಕಾಯ್ತಿದ್ದಾರೆ."
"ವ್ಹಾ..ವ್ಹಾಅ.. ಈ ಕಾರ್ಯಕ್ರಮಾನ ಇನ್ನೂ ಒಂದು ವಾರ ಮುಂದಕ್ಕೆ ಹಾಕಿದರೆ, ಸುಮಾರು ಇನ್ನೂರು ಜನ ಸೇರಬಹುದಲ್ಲವಾ? ಆಗ ಸಾಹಸ ಮಾಡಿದರೆ ಅದರ ಮಜಾನೇ ಬೇರೆ."
ಇನ್ನೂ ಏನು ಹೇಳುತ್ತಿದ್ದನೋ? "ಜಿಮ್ ಎಲ್ಲಿ?" ಎಂದೆ. "ಅಲ್ಲೇ ನೀನು ಕೈಚಾಚಿದರೆ ಸಿಕ್ತಾನಲ್ಲ. ಅವನು ಬಟ್ಟೆ ಬದಲಾಯಿಸಿಕೊಂಡು ಸಿದ್ದನಾಗಿದ್ದಾನೆ. ಸರಿ ಈಗ ನಾವು ಹೊರಗೆ ಹೋಗಿ, ಕುರಿ ಥರಾ ಕೂಗೋಣ." ಆದರೆ ಅಷ್ಟರಲ್ಲೇ ಹೆಜ್ಜೆಯ ಸಪ್ಪಳ ಕೇಳಿಸಿರು. ಹಿಂದೆಯೇ ದನಿಯೊಂದು "ಬಾಗಿಲು ತೆರೆದು ಒಳಗೇ ಕಾಯೋಣ" ಎನ್ನುತ್ತಾ ಹತ್ತಿರವಾಯಿತು.
ಕೂಡಲೇ ನಾವು ಒಬ್ಬರ ಹಿಂದೊಬ್ಬರಂತೆ ನಾವು ತೋಡಿದ್ದ ಬಿಲದೊಳಗೆ ತೂರಿ ಶೆಡ್ಡಿನಲ್ಲಿ ಹೊರಬಂದೆವು. ಅಲ್ಲಿಂದ ಹಿಂದಿನ ಮುಳ್ಳುಬೇಲಿಯನ್ನು ಹಾರಿದೆವು. ನಾನೂ ಜಿಮ್ ಯಾವುದೇ ತೊಂದರೆಯಿಲ್ಲದೆ ಹಾರಿದರೆ, ಟಾಮ್ ಹಾರುವಾಗ ತಂತಿಯ ಮುಳ್ಳಿಗೆ ಪ್ಯಾಂಟ್ ಸಿಕ್ಕಿಕೊಂಡು ಭಾರೀ ಶಬ್ದದೊಂದಿಗೆ ಧರೆಗುರುಳಿದ.
ತಕ್ಷಣವೇ ಹಲವಾರು ಧ್ವನಿಗಳು ಯಾರಲ್ಲಿ ಎಮ್ದು ಕೂಗಿದವು.
ನಾವರೂ ಉತ್ತರಿಸಲಿಲ್ಲ, ಸುಮ್ಮನೆ ಓಡಿದೆವು, ಹುಚ್ಚು ಹಿಡಿದವರಂತೆ. ಗುಂಪಿನಲ್ಲಾರೋ ಈಡು ಹಾರಿಸಿದರು. ನಾಲ್ಕಾರು ಗುಂಡುಗಳು ನಮ್ಮ ಸನಿಹವೇ ಹಾದು ಹೋದವು. ನಾವು ಓಡುವುದನ್ನು ನಿಲ್ಲಿಸಲಿಲ್ಲ.
"ಹಿಡಿಯರಿ ಅವರನ್ನ..... ಬಿಡಬೇಡಿ... ನಾಯಿಬಿಡಿ.. " ಇತ್ಯಾದಿ ದನಿಗಳೊಂದಿಗೆ ಗುಂಪು ನಮ್ಮ ಬೆನ್ನಟ್ಟಿತು.
ನಾವು ಸ್ವಲ್ಪ ದೂರ ಹೋಗಿ ಅಡಗಿ ಕುಳಿತೆವು. ಗುಂಪು ನಮ್ಮನ್ನು ದಾಟಿ ಮುಂದೆ ಹೋದ ಮೇಲೆ ಅವರ ಓಟದಲ್ಲಿ ನಾವೂ ಸೇರಿಕೊಂಡೆವು. ನಾಯಿಗಳು ನಮ್ಮನ್ನು ನೋಡಿದರೂ ಪರಿಚಿತರೇ ಆದ್ದರಿಂದ ಬೊಗಳಲಿಲ್ಲ. ಸ್ವಲ್ಪ ದೂರ ಗುಂಪಿನೊಡನೆ ಓಡಿ ಓಟವನ್ನು ನಿಧಾನ ಮಾಡಿದೆವು. ಗುಂಪು ದೂರ ಹೋದ ಮೇಲೆ ಅಲ್ಲಿಂದ ಚಿಟ್ಟುದೋಣಿಯೆಡೆಗೆ ಓಡಿಬಂದು, ಚಿಟ್ಟುದೋಣಿಯನ್ನೇರಿ, ನಮ್ಮ ತೆಪ್ಪದೆಡೆಗೆ ತೇಲಿದೆವು.

ತೆಪ್ಪವನ್ನೇರಿ ನಾನು ಜಿಮ್‍ಗೆ "ಜಿಮ್ಮಣ್ಣಾ, ನಿನಗೀಗ ಬಿಡುಗಡೆಯಾಯಿತು. ಮುಂದೆಂದೂ ನೀನು ಗುಲಾಮನಾಗಿರುವುದಿಲ್ಲ" ಎಂದೆ.
ಹೌದು, ಅದು ಎಂತಹಾ ಸಾಹಸ, ಯಾರೂ ಯೋಜಿಸಲಾಗದಂತಹ ಸಾಹಸ. ಯೋಜನೆ ಅದ್ಭುತ, ಕಾರ್ಯರೂಪಕ್ಕೆ ತಂದುದೂ ಅದ್ಭುತ. ಅಂತಹ ಯೋಜನೆ, ಆ ರೋಮಾಂಚಕತೆ ಅನುಭವಿಸಲು ಯಾರಿಗೂ ಸಾಧ್ಯವಿಲ್ಲ. ನಮಗೆಲ್ಲಾ ತುಂಬಾ ಸಂತೋಷವಾಗಿತ್ತು. ಆದರೆ ಎಲ್ಲರಿಗಿಂತ ಹೆಚ್ಚಿನ ಸಂತಸ ಟಾಮ್‍ನಿಗೆ. ಏಕೆಂದರೆ ಯಾರೋ ಹೊಡೆದ ಗುಂಡೊಂದು ಅವನ ಮೀನಖಂಡದಲ್ಲಿ ಕೂತಿತ್ತು...!!!!

ಟಾಮ್ ತಕ್ಷಣವೇ ನಾವೆಲ್ಲ ಅಲ್ಲಿಂದ ಹೊರಟುಬಿಡಬೇಕೆಂದು ಹೇಳಿದ. ಆದರೆ ಜಿಮ್ "ಇಲ್ಲಿಗೆ ವೈದ್ಯರು ಬಂದು ಈ ಕಾಲಿಗೆ ಚಿಕಿತ್ಸೆ ಮಾಡುವವರೆಗೂ ಅರವತ್ತು ವರ್ಷಗಳು ಕಳೆದರೂ ನಾನಿಲ್ಲಿಂದ ಒಂದು ಇಂಚೂ ಕದಲುವುದಿಲ್ಲ" ಎಂದು ಹಟ ಹಿಡಿದು ಕೂತ. ಟಾಮ್ ಹೇಳಿದ ಯಾವ ಮಾತೂ ಪ್ರಯೋಜನಕ್ಕೆ ಬರಲಿಲ್ಲ. ಜಿಮ್‍ನ ಪ್ರೀತಿಭರಿತ ಹಟದ ಮುಂದೆ ನಾವು ತಲೆಬಾಗಲೇ ಬೇಕಾಯಿತು. ವೈದ್ಯರನ್ನು ಕರೆತರಲು ನಾನು ಹೊರಟೆ. ಟಾಮ್ "ಅವರಿಗೆ ಕಣ್ಣು ಕಟ್ಟಿ ಕರೆದುಕೊಂಡು ಬಾ" ಎಂದ. ನಾನು ಹೂಗುಟ್ಟಿದೆ.

ಹತ್ತಿರದ ಹಳ್ಳಿಗೆ ಹೋಗಿ ವೈದ್ಯರನ್ನೇಳಿಸಿದಾಗ ಅವನು ಸಿಡಿಮಿಡಿಗೊಳ್ಳುತ್ತಲೇ ಬಾಗಿಲು ತೆರೆದ. ಈ ಸಮಯದಲ್ಲಿ ಗುಂಡೇಟು ಹೇಗೆ ಬಿತ್ತು? ನಾವು ಯಾರು? ಎಂದೆಲ್ಲಾ ವಿಚಾರಿಸಿದ. ನಾವು ಸಿಲಾಸ್ ಫ಼ೆಲ್ಪ್‍ನ ಅತಿಥಿಗಳೆಂದೂ, ಬೇಟೆಗೆಂದು ಬಂದು ಕಾಡಿನಲ್ಲಿ ತಂಗಿದ್ದಾಗ, ನಿದ್ದೆಯಲ್ಲಿ ಒದ್ದ ಬಂದೂಕಿನಿಂದ ಗುಂಡು ಹಾರಿ, ನನ್ನ ತಮ್ಮನನ್ನು ಗಾಯಗೊಳಿಸಿತೆಂದೂ ಅವನಿಗೆ ತಿಳಿಸಿ ಹೇಳುವಲ್ಲಿ ನನಗೆ ಸಾಕಾಯಿತು. ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದರೆ ಅವನು "ಏಕೆ?" ಎಂದ.
"ಏಕೆಂದರೆ ನಾವು ಎಲ್ಲರಿಗೂ ಒಂದು ಆಶ್ಚರ್ಯದ ಕತೆ ಹೇಳಬೇಕೂಂತಿದ್ದೇವೆ."
"ಗುಂಡೇಟಿನ ಬಗ್ಗೆ ಏನು ಹೇಳ್ತೀರಾ..?"
"ಕನಸಿನಲ್ಲಿ ಗುಂಡು ಹಾರಿತು. ಅದರಿಂದ ಅವನಿಗೆ ಗಾಯ ಆಯ್ತು" ಅಂತ.
ಈ ಮಾತನ್ನು ಕೇಳಿ ವಿಚಿತ್ರವಾಗಿ ನನ್ನೆಡೆಗೆ ನೋಡುತ್ತಾ, ತನ್ನ ಸಲಕರಣೆಗಳೊಂದಿಗೆ ಹೊರಡಲು ಅನುವಾದ. ನನ್ನ ಚಿಟ್ಟು ದೋಣಿಯನ್ನು ನೋಡಿ ಇದರಲ್ಲಿ ಇಬ್ಬರು ಹೋಗಲಾಗುವುದಿಲ್ಲ." ಎಂದ.
"ಅಯ್ಯೋ, ಅದರಲ್ಲಿ ನಾವು ಮೂವರು ಹೋಗಿದ್ದೇವೆ"
"ಯಾರು ಮೂವರು?"
"ಅಂದರೆ ನಾನು, ನನ್ನ ತಮ್ಮ, ಮತ್ತೆ, ಮತ್ತೆ ಬಂದೂಕುಗಳು. ಬಂದೂಕಗಳೆಂದರೆ ಕಾಡಿನಲ್ಲಿ ನಮ್ಮ ಗೆಳೆಯರೇ ತಾನೇ?"
ಆದರೂ ಅವನು ನಾವಿಬ್ಬರೂ ಅದರಲ್ಲಿ ಹೋಗಲು ಒಪ್ಪಲಿಲ್ಲ. ನಾನು ಅಲ್ಲೇ ತೋಪಿನಲ್ಲಿ ರಾತ್ರಿ ಕಳೆಯುವುದೆಂದೂ, ಅವನೊಬ್ಬನೇ ಹೋಗಿ ಬರುವುದೆಂದೂ ನಿರ್ಧಾರವಾಯಿತು. ನನ್ನ ತಮ್ಮನಿರುವ ಜಾಗದ ಎಲಾ ಗುರುತನ್ನೂ ಅವನಿಗೆ ನೀಡಿದ ನಂತರ, ಅವನು ಹೊರಟ.
ನಾನಲ್ಲೇ ತೋಪಿನಲ್ಲೇ ಮಲಗಿ ನಿದ್ರಿಸಿದೆ. ಎಚ್ಚರವಾದಾಗ ಸೂರ್ಯ ನೆತ್ತಿಯ ಮೇಲೇರಿದ್ದ. ವೈದ್ಯನ ಮನೆಗೆ ಓಡಿದೆ. ಅವನಿನ್ನೂ ಹಿಂದಿರುಗಿರಲಿಲ್ಲ. ತೆಪ್ಪದ ಬಳಿಗೆ ಹೋಗೋಣವೆಂದು ಹೊರಟೆ. ಆದರೆ ದಾರಿ ತಿರುಗುವಷ್ಟರಲ್ಲೇ ಸಿಲಾಸ್ ಚಿಕ್ಕಪ್ಪ ಎದುರಾದರು.

"ಟಾಮ್,.. ಇಷ್ಟು ಹೊತ್ತೂ ನೀನೆಲ್ಲಿದ್ದೆ?"
"ಅದೇ ಓಡಿ ಹೋದನಲ್ಲಾ ಆ ಗುಲಾಮ ಅವನನ್ನು ಹುಡುಕಿ ಹೊರಟಿದ್ದೆವು. "
"ಸಿದ್ ಎಲ್ಲಿ? ನಿಮ್ಮ ಚಿಕ್ಕಮ್ಮ ಗಾಬರಿಯಾಗಿದ್ದಾಳೆ"
"ಗಾಬರಿ ಯಾಕೆ?" ಅವನು ಪತ್ರ ತರೋದಿಕ್ಕೆ ಅಂಚೆ ಕಛೇರಿಗೆ ಹೋಗಿದ್ದಾನೆ."
ನಾವು ಅಂಚೆಕಛೇರಿ ತಲುಪಿದೆವು. ಆದರೆ "ಸಿದ್" ಅಲ್ಲಿರಲಿಲ್ಲ. ಅವನೆಲ್ಲಿಗೆ ಹೋಗುತ್ತಾನೆ ಮನೆಗೆ ಬರುತ್ತಾನೆ ಎಂದು ಅವರಿಗೆ ಸಮಾಧಾನ ಮಾಡಿದೆ. ಮನೆಗೆ ಹಿಂತಿರುಗಿದರೆ ಚಿಕ್ಕಮ್ಮ ನನ್ನನ್ನು ಕಂಡು ನಗುತ್ತಾ ಅತ್ತಳು ಅಥವಾ ಅಳುತ್ತಾ ನಕ್ಕಳು. ಅಲ್ಲಿ ಸಾಕಷ್ಟು ಜನ ಸೇರಿದ್ದರು. ಹೆಂಗಸರು, ಗಂಡಸರು, ಮುದುಕರು, ಮಕ್ಕಳು ಎಲ್ಲಾ.. ಎಲ್ಲರ ಬಾಯಲ್ಲಿಯೂ ಹಿಂದಿನ ರಾತ್ರಿ ತಪ್ಪಿಸಿಕೊಂಡ ಗುಲಾಮನ ಬಗ್ಗೆಯೇ ಮಾತು. ಅವರ ಮಾತಿನಿಂದ ಅವನನ್ನು ಬಿಡಿಸಿಕೊಂದು ಹೋಗಲು ಒಂದು ಸೈನ್ಯವೇ ಬಂದಿತ್ತೆಂದು ತಿಳಿದುಬಂದಿತು!!

ಹೆಂಗಸರಂತೂ ಗಂಟೆಗಟ್ಟಲೆ ಮಾತಾಡಿದರು.. ಕಡೆಗೆ ಚಿಕ್ಕಮ್ಮ ನನ್ನನ್ನು ಮಲಗಲು ಕಳಿಸಿದರು. ಸ್ವಲ್ಪ ಸಮಯದ ನಂತರ ಆಕೆಯನ್ನು ಚಿಕ್ಕಪ್ಪ ಕೊಠಡಿಗೆ ಕರೆದುಕೊಂಡು ಹೋದರು. ನಾನು ನನ್ನ ನೀರುಕೊಳವೆ ಜಾರಿ ಹೊರಬಂದು ನೋಡಿದೆ. ಚಿಕ್ಕಮ್ಮ ತನ್ನ ಕೊಠಡಿಯಿಂದಲೂ ದಾರಿಯತ್ತಲೇ ದೃಷ್ಟಿ ನೆಟ್ಟು ಕಾಯುತ್ತಿರುವುದು ಕಂಡುಬಂತು. ಅವಳ ಕಣ್ಣುಗಳಲ್ಲಿ ನೀರಿತ್ತು. ನಾನು ರಾತ್ರಿಯಲ್ಲಿ ಮೂರ್ನಾಲ್ಕು ಬಾರಿ ಬಂದು ನೋಡಿದೆ. ಅವಳ ಭಂಗಿ ಬದಲಾಗಿರಲಿಲ್ಲ. ಕಡೆಯ ಬಾರಿ ನಾನವಳನ್ನು ಕಂಡಾಗ ಬೆಳಕು ಹರಿಯುವುದರಲ್ಲಿತ್ತು.