೧೭. ಪಾಲಿ ಆಂಟಿ ಬಿಡಿಸಿದ ರಹಸ್ಯ

೧೭. ಪಾಲಿ ಆಂಟಿ ಬಿಡಿಸಿದ ರಹಸ್ಯ

ಅಂದು ಬೆಳಿಗ್ಗೆ ತಿಂಡಿಗೂ ಮುಂಚೆ ಒಮ್ಮೆ ಸಿಲಾಸ್ ಚಿಕ್ಕಪ್ಪ ಪೇಟೆಗೆ ಹೋಗಿ ನೋಡಿ ಬಂದರು. ಆದರೆ ಸಮಾಚಾರವೇನೂ ಸಿಕ್ಕಿರಲಿಲ್ಲ. ತಿಂಡಿ ತಿನ್ನುವ ಮುಂಚೆ ಚಿಕ್ಕಪ್ಪ ಚಿಕ್ಕಮ್ಮನಿಗೆ "ನಾನು ನಿನಗೆ ಬಂದ ಪತ್ರ ಕೊಟ್ಟೆನಾ?" ಎಂದು ಕೇಳಿದರು
"ಯಾವುದೋ?"
"ಅದೇ ನಿಮ್ಮಕ್ಕ ಸೇಂಟ್ ಪೀಟರ್ಸ್‍ಬರ್ಗ್‍ನಿಂದ ಬರೆದಿರುವುದು."
ನಾನು ಅಲ್ಲಿಂದ ಓಡಿಬಿಡಬೇಕೆಂದುಕೊಂಡೆ. ಆದರೆ ಅವಕಾಶವಿರಲಿಲ್ಲ. ಅವಳು ಆ ಪತ್ರವನ್ನು ಓದಲು ಒಡೆಯುತ್ತಿದ್ದಾಗ, ಹೊರಗೇನೋ ಗದ್ದಲವಾಯಿತು. ಜನರ ಗುಂಪು ಟಾಮನ್ನು ಹೊತ್ತುಕೊಂಡು ಬರುತ್ತಿತ್ತು. ಆ ಗುಂಪಿನಲ್ಲಿ ನಾನು ನಿನ್ನೆ ಕಳಿಸಿದ್ದ ವೈದ್ಯನೂ ಇದ್ದ. ಮತ್ತು ಜಿಮ್ ಕೂಡಾ ಇದ್ದ ! ಅದನ್ನು ನೋಡಿದ ಚಿಕ್ಕಮ್ಮನ ಕೈಯಿಂದ ಪತ್ರ ಜಾರಿ ಬಿತ್ತು. ಕೂಡಲೇ ಅವರ ಗಮನ ಬೇರೆಡೆಗೆ ಇರುವಾಗಲೇ ಅದನ್ನೆತ್ತಿ ಅವಿಸಿಟ್ಟುಕೊಂಡೆ. ಚಿಕ್ಕಮ್ಮನಿಗಂತೂ ಆ ದೃಶ್ಯ ನೋಡಿ ಕಣ್ಣಾಲಿಗಳಲ್ಲಿ ನೀರು ಹರಿದು ಹೋಯಿತು. ಅವಳು ಟಾಮ್ ಸತ್ತೇ ಹೋಗಿರಬೇಕೆಂದು ಭಾವಿಸಿದ್ದಳು. ಆದರೆ ಕನವರಿಸುತ್ತಿರುವ ಟಾಮ್‍ನನ್ನು ನೋಡಿ ಅವಳಿಗೆ ತುಂಬಾ ಸಂತೋಷವಾಯಿತು. ಚಿಕ್ಕಮ್ಮನೂ, ವೈದ್ಯನೂ ಸೇರಿ ಟಾಮ್‍ನನ್ನು ಮೇಲಿನ ಮಹಡಿಯ ಮಲಗುವ ಕೋಣೆಗೆ ಕರೆದೊಯ್ದರು. ಕೆಳಗಿದ್ದ ಜನ ಜಿಮ್‍ನನ್ನು ನೇಣು ಹಾಕಬೇಕೆಂಬ ನಿರ್ಧಾರಕ್ಕೆ ಬಂದಂತಿತ್ತು. ಆದರೆ ಎಲ್ಲರೂ ಮೌನವಾಗಿದ್ದರು. ಸ್ವಲ್ಪ ಸಮಯದ ನಂತರ ಮೆಟ್ಟಿಲಿಳಿದು ಬಂದ ವೈದ್ಯ, ಜಿಮ್‍ನ ಬಗ್ಗೆ ಯಾರೂ ಆಕ್ರೋಶಪಡಬಾರದೆಂದೂ, ಆ ಹುಡುಗನ ಕಾಲಿನಲ್ಲಿ ಹೊಕ್ಕಿದ್ದ ಗುಂಡು ತೆಗೆಯಲು ಜಿಮ್ ತನ್ನ ಅಡಗುದಾಣದಿಂದ ಹೊರಬಂದು ಸಹಾಯ ಮಾಡಿದನೆಂದೂ, ಹಾಗೂ ಹಾಗೆ ಮಾಡುವ ಮೂಲಕ ಮತ್ತೆ ಬಂಧಿತನಾದನೆಂದೂ, ತಪ್ಪಿಸಿಕೊಂಡು ಹೋಗಲು ಅವನಿಗೆ ಅವಕಾಶವಿದ್ದರೂ, ಹುಡುಗನ ಪ್ರಾಣ ಉಳಿಸಲು ಮುಂದೆ ಬಂದ ಅವನ ಬಗ್ಗೆ ಎಲ್ಲರಿಗೂ ಕುಣೆಯಿರಬೇಕೆಂದೂ ಹೇಳಿದನು. ಆ ಮಾತುಗಲನ್ನು ಕೇಳಿ ಎಲ್ಲರಿಗೂ ಜಿಮ್‍ನ ಬಗ್ಗೆ ಇದ್ದ ಆಕ್ರೋಶ ಕಡಿಮೆಯಾಯಿತು. ಆದರೂ ಮುಂಚಿಗಿಂತಲೂ ಹೆಚ್ಚಿನ ಬಂದೋಬಸ್ತಿನೊಂದಿಗೆ, ಸರಪಳಿಗಳೊಂದಿಗೆ ಬಿಗಿದು ಜಿಮ್‍ನನ್ನು ಮತ್ತೆ ಕ್ಯಾಬಿನ್ನಿನಲ್ಲಿ ದೂಡಲಾಯ್ತು.

ಒಂದೆರಡು ದಿನಗಳಲ್ಲೇ ಟಾಮ್ ಹುಷಾರಾದ. ಒಂದು ದಿನ ಬೆಳಿಗ್ಗೆ ನಾನೂ ಟಾಮ್ ಮಾತಾಡುತ್ತಿರುವಂತೆಯೇ ಸ್ಯಾಲಿ ಚಿಕ್ಕಮ್ಮ ಒಳಗೆ ಬಂದಳು. ಅವಳು ಬರುತ್ತಿದ್ದಂತೆಯೇ ಟಾಮ್ ಗಾಢನಿದ್ರೆಯಿಂದ ಆಗ ತಾನೇ ಎಚ್ಚೆತ್ತವನಂತೆ ನಟಿಸಿದ..
"ಅರೇ ನಾನು ಮನೆಯಲ್ಲಿದ್ದೇನೆ. ತೆಪ್ಪ ಎಲ್ಲಿ?"
"ಅಲ್ಲೇ ಇದೆ" ಎಂದೆ ನಾನು.
"ಜಿಮ್"
"ಅವನೂ ಚೆನ್ನಾಗಿದ್ದಾನೆ"
"ಚಿಕ್ಕಮ್ಮನಿಗೆ ವಿಷಯ ತಿಳಿಸಿದೆಯಾ?"
ನಾನು ಹೂ ಅನ್ನುತ್ತಿದ್ದೆ. ಅಷ್ಟರಲ್ಲಿ ಚಿಕ್ಕಮ್ಮ "ಯಾವ ವಿಷಯ ಸಿದ್?" ಎಂದಳು.
"ಅರೇ ನಾವು ಜಿಮ್‍ನನ್ನು ಬಿಡಿಸಿದ್ದು ಹೇಗೆ ಅಂತ ನಿಮಗೆ ಯಾರೂ ಹೇಳಲಿಲ್ಲವಾ?"
"ಹ್ಞಾಂ" ಆಶ್ಚರ್ಯದಿಂದ ಬಾಯಿ ತೆರೆದು ಬೆಪ್ಪಾದ ಚಿಕ್ಕಮ್ಮನಿಗೆ ಟಾಮ್ ಎಲ್ಲಾ ವಿಷಯ ತಿಳಿಸಿದ. ಅವಳಿಗೆ ತುಂಬಾ ಸಿಟ್ಟು ಬಂತು. ಮತ್ತೊಮ್ಮೆ ನಾವು ಎಂದೂ ಜಿಮ್‍ನ ಸಹವಾಸ ಮಾಡಬಾರದೆಂದು ಹೇಳಿದಳು.
"ಯಾರ ಸಹವಾಸ ಮಾಡಬಾರದು?"
"ಅದೇ ಆ ಕರೀ ಗುಲಾಮನ ಸಹವಾಸ"
"ಈಗೆಲ್ಲಿದ್ದಾನೆ ಅವನು?"
"ಅದೇ ಕ್ಯಾಬಿನ್ನಿನಲ್ಲೇ ಕೂಡಿ ಹಾಕಿದ್ದೇವೆ."
ಈ ಮಾತನ್ನು ಕೇಳುತ್ತಲೇ ಟಾಮ್ ಕೆಟ್ಟ ಕನಸು ಕಂಡವನಂತೆ ಎದ್ದ. ಅವನ ಕಣ್ಣುಗಳು ಕೆಂಪಾದವು. ಮೂಗಿನ ಹೊಳ್ಳೆಗಳು ಅದುರುತ್ತಿದ್ದವು. ನನ್ನನ್ನು ನೋಡಿ "ಟಾಮ್, ಅವನು ಚೆನ್ನಗಿದ್ದಾನೆಂದು ನೀನು ಹೇಳಿದೆಯಲ್ಲಾ?" ಎಂದು ಕೇಳಿದ. ಮತ್ತೆ ಚಿಕ್ಕಮ್ಮನ ಕಡೆ ತಿರುಗಿ "ತಕ್ಷಣವೇ ಅವನನ್ನು ಬಿಡಿ. ಅವನನ್ನು ಹಿಡಿದಿಡಲು ಯಾರಿಗೂ ಯಾವ ಅಧಿಕಾರವೂ ಇಲ್ಲ. ಅವನು ನಮ್ಮ ಊರಿನ ಶ್ರೀಮತಿ ವ್ಯಾಟ್ಸನ್ನರ ಗುಲಾಮ. ಆಕೆ ಎರಡು ತಿಂಗಳ ಹಿಂದೆಯೇ ತೀರಿಕೊಂಡಳು. ಅವಳ ಮರಣಪತ್ರದಲ್ಲಿ ಜಿಮ್ ಸ್ವತಂತ್ರನೆಂದು ಘೋಷಿಸಿದ್ದಾಳೆ" ಎಂದ.
"ಹಾಗಿದ್ದರೆ ಅವನನ್ನು ನೀವು ಇಷ್ಟು ಸಾಹಸ ಮಾಡಿ ಬಿಡಿಸಿದ್ದೇಕೆ/"
"ಸಾಹಸದ ರೋಮಾಂಚಕತೆ ನಾವು ಬರೀ ಬಾಯಿಮಾತಿನಲ್ಲಿ ಹೇಳಿ ಬಿಡಿಸಿದ್ದರೆ ಸಿಗುತ್ತಿತ್ತಾ? ... ದೇವರೇ....." ಎನ್ನುತ್ತಾ ಮಾತು ನಿಲ್ಲಿಸಿದ.
ಬಾಗಿಲಿನಲ್ಲಿ ಟಾಮ್‍ನ ಇನ್ನೊಬ್ಬ ಚಿಕ್ಕಮ್ಮ ಪಾಲಿ ನಿಂತಿದ್ದಳು.
ಸ್ಯಾಲಿ ಅವಲನ್ನು ಖುಶಿಯಿಂದ ಆಲಂಗಿಸಿಕೊಂಡಳು. ಆ ಘಳಿಗೆಯಲ್ಲೇ ನಾನು ಮಂಚದಡಿಗೆ ತೂರಿಕೊಂಡೆ. ಅವರ ಕುಶಲೋಪರಿ ಮುಗಿಯುವ ಮುಂಚೆಯೇ ಪಾಲಿ ಚಿಕ್ಕಮ್ಮ " ಟಾಮ್ ಏನು ನಿನ್ನ ಆಟ?" ಎಂದು ಟಾಮ್‍ನನ್ನು ಕೇಳಿದಳು.
"ಅಯ್ಯೋ ಸಿದ್ ಅಷ್ಟೊಂದು ಬದಲಾಗಿದ್ದಾನಾ? ಅದು ಸಿದ್ ಅಲ್ಲವಾ? ಟಾಮ್.. ಟಾಮ್.. ಅರೇ ಟಾಮ್ ಎಲ್ಲಿ ಹೋದ.?" ಎಂದಳು ಸ್ಯಾಲಿ ಚಿಕ್ಕಮ್ಮ.
"ಅಂದ್ರೆ ನೀನು ಹುಡುಕುತ್ತಾ ಇರೋದು ಹಕಲ್ಬೆರಿ ಫ಼ಿನ್‍ನನ್ನ.. ಹಕ್ ಮಂಚದ ಕೆಳಗಿಂದ ಈಚೆ ಬಾ..."
ನಾನು ಸುಮ್ಮನೆ ಹೊರಗೆ ಬಂದೆ.
"ಹಾಗಾದರೆ ಸಿದ್ ಎಲ್ಲಿ?"
"ವನು ಮನೆಯಲ್ಲೇ ಇದ್ದಾನೆ. ನೀನು ಟಾಮ್-ಸಿದ್ ಇಬ್ಬರೂ ಚೆನ್ನಾಗಿದ್ದಾರೆಂದು ಬರೆದ ಪತ್ರ ತಲುಪಿತು. ಅದಕ್ಕೆ ನಾನು ಬರೆದ ಉತ್ತರಕ್ಕೆ ನಿನ್ನ ಜವಾಬಿಲ್ಲ. ಅದೂ ಅಲ್ಲದೆ ಸಿದ್ ಊರಿನಲ್ಲಿಯೇ ಇದ್ದಾನೆ. ಅಂದರೆ ಇಲ್ಲಿ ಏನೋ ನಡೆಯುತ್ತಿದೆ ಎಂದು ಅರಿತು ನೋಡಿ ಹೋಗೋಣವೆಂದೇ ಬಂದೆ' ಎಂದಳು ಪಾಲಿ ಚಿಕ್ಕಮ್ಮ.
ಸ್ಯಾಲಿ ಚಿಕ್ಕಮ್ಮ ಆ ಕ್ಶಣದಲ್ಲಿ ಗೊಂದಲದ ದೇವತೆಯಂತೆ ಕಂಡುಬಂದಳು. ಅವಳಿಗೆ ಏನು ಹೇಳಬೇಕೋ ತಿಳಿಯಲಿಲ್ಲ. "ನೀನು ಪತ್ರ ಬರೆದೆಯಾ..? ನನಗೊಂದೂ ತಲುಪಲಿಲ್ಲವಲ್ಲಾ?"
"ಟಾಮ್ ಎಲ್ಲಾ ಪತ್ರಗಳನ್ನೂ ಇಲ್ಲಿ ಕೊಡು"
ಟಾಮ್ ಮನೆಯವರಿಗೆ ತಿಳಿಯದಂತೆ ಅಂಚೆ ಕಛೇರಿಯಿಂದ ತಂದಿದ್ದ ಪತ್ರಗಳನ್ನು ತನ್ನ ಪೆಟ್ಟಿಗೆಯ ಮೂಲೆಯಿಂದ ತೆಗೆದು ಕೊಟ್ಟ. ಇಲ್ಲಿಗೆ ಎಲ್ಲಾ ರಹಸ್ಯ ಬಯಲಾಗಿತ್ತು.

ಸ್ವಲ್ಪ ಸಮಯದ ನಂತರ ನಾವೆಲ್ಲಾ ಜಿಮ್‍ನನ್ನು ನೋಡಲು ಹೋದೆವು. ಆ ವೇಳೆಗೆ ಅವನು ಬಂಧನದಿಂದ ಬಿಡುಗಡೆ ಹೊಂದಿದ್ದ. ಎಲರೂ ಅವನನ್ನು ಆದರದಿಂದ ಕಾಣುತ್ತಿದ್ದರು. ಟಾಮ್ ಅವನಿಗೆ ಅವನ ಖೈದಿಯಾಗಿದ್ದಾಗಿನ ಒಳ್ಳೆಯತನಕ್ಕಾಗಿ ನಲವತ್ತು ಡಾಲರ್‌ಗಳನ್ನು ಬಹುಮಾನವಾಗಿ ಕೊಟ್ಟ.
ಟಾಮ್ ಮತ್ತೆ ಮಾತನಾಡುತ್ತಲೇ ಇದ್ದ. ಇಂತಹುದೇ ಏನಾದರೂ ದೊಡ್ಡ ಸಾಹಸಕ್ಕೆ ಕೈಹಾಕಬೇಕೆಂದು ಅವನ ಬಯಕೆಯಾಯಿತು. ನನಗೂ ಆ ಆಸೆ ಇದ್ದರೂ, ಅದಕ್ಕೆಲ್ಲಾ ಹಣ ಬೇಕಲ್ಲ. ನನ್ನ ಹಣ ನ್ಯಾಯಾಧೀಶ ಥ್ಯಾಚರ್ ಬಳಿ ಇದ್ದುದು ಇಷ್ಟು ಹೊತ್ತಿಗೆ ನಮ್ಮಪ್ಪನ ಕೈಗೆ ಸಿಕ್ಕು ಪೋಲಾಗಿರುತ್ತದೆಂದು ನನ್ನ ಲೆಕ್ಕಾಚಾರ. ಅದನ್ನೇ ಹೇಳಿದೆ.
"ಇಲ್ಲಾ.. ನಿನ್ನ ಅಷ್ಟೂ ಹಣ ಆರುಸಾವಿರ ಚಿಲ್ಲರೆ ಡಾಲರ್, ಹಾಗೇ ಸುರಕ್ಷಿತವಾಗಿದೆ. ನಿಮ್ಮಪ್ಪ ಆ ಹಣ ಕೇಳೋದಿಕ್ಕೆ ಬರಲೇ ಇಲ್ಲ"
ಜಿಮ್ ತಣ್ಣಗಿನ ವಿಷಾದ ತುಂಬಿದ ದನಿಯಲ್ಲಿ"ಬರೋದೂ ಇಲ್ಲ" ಎಂದ
"ಯಾಕೆ?"
ಅವನು ಮಾತಾಡಲಿಲ್ಲ. ನಾನು ಮತ್ತೆ ಮತ್ತೆ ಒತ್ತಾಯಿಸಿ ಕೇಳಿದ ಮೇಲೆ "ಅವತ್ತು ಒಂದು ಮುರಿದುಹೋದ ಮನೆದೋಣಿ ನೀರಲ್ಲಿ ತೇಲ್ತಾ ಬಂತಲ್ಲ. ಅದರಲ್ಲಿ ಒಂದು ಶವ ಇತ್ತಲ್ಲಾ? ಅದರ ಮುಖಾನ ನಾನು ಮುಚ್ಚಿ, ನೀನು ನೋಡೋಕೆ ಬಂದರೆ ನಾನು ಬಿಡಲಿಲ್ಲ, ನೆನಪಿದೆಯಾ..?"
"ಹೂ"
"ಅದು ನಿನ್ನ ತಂದೆಯ ಶವವಾಗಿತ್ತು ಮಗೂ"

--------------------೦೦೦೦೦೦೦೦೦೦------------------

ಟಾಮ್‍ನ ಕಾಲು ಈಗ ಗುಣವಾಗಿತ್ತು. ಕಾಲಿನಲ್ಲಿದ್ದ ಗುಂಡಿನ ಚೂರನ್ನು ಕೊರಳ ಸರದಲ್ಲಿ ಧರಿಸಿದ್ದ. ಎಲ್ಲರೂ ಸಂತಸದಿಂದಿದ್ದೆವು. ಸ್ಯಾಲಿ ಚಿಕ್ಕಮ್ಮ ನನ್ನನ್ನು ದತ್ತು ತೆಗೆದುಕೊಂಡು, ನಾಗರಿಕನನ್ನಾಗಿ ಮಾಡುವ ಯೋಚನೆ ಮಾಡಿದ್ದಳು. ಅದರ ಕಷ್ಟ-ಸುಖ ನಾನಾಗಲೇ ಕಂಡಿದ್ದೆ. ಅದಕ್ಕೇ ನಾನೊಪ್ಪಿಕೊಳ್ಳಲಿಲ್ಲ.

ಮತ್ತೆ ಭೇಟಿಯಾಗೋಣ.
ಇತಿ ನಿಮ್ಮವ
ಹಕಲ್ಬೆರಿ ಫಿನ್.