0೧. ಢಕಾಯಿತರ ತಂಡ ಕಟ್ಟಿದ ಕತೆ.
೧. ಢಕಾಯಿತರ ತಂಡ ಕಟ್ಟಿದ ಕತೆ.
ನೀವು ನಮ್ಮ ಟಾಮ್ ಸಾಯರ್ ನ ಸಾಹಸಗಳ ಕತೆ ಓದದೇ ಇದ್ದರೆ, ನಾನಾರೆಂದು ನಿಮಗೆ ತಿಳಿದಿರುವುದಿಲ್ಲ. ಹಾಗೆ ತಿಳಿದಿರಬೇಕಾದುದೂ ಏನೂ ಇರಲಿಲ್ಲ ಅಂತಲೇ ಇಟ್ಟುಕೊಳ್ಳಿ. ಆದರೆ, ನನ್ನ ಜೀವನದ ಸಾಹಸಗಳ ಕತೆ ನಿಮಗೆ ಹೇಳುವ ಮುಂಚೆ ನಾನಾರೆಂದು ನಿಮಗೆ ತಿಳಿಸಲೇಬೇಕಲ್ಲ. ನನ್ನ ಹೆಸರು ಹಕಲ್ ಬೆರಿ ಫ಼ಿನ್. ನನಗಾರೂ ಅಣ್ಣ-ತಮ್ಮ, ಅಕ್ಕ-ತಂಗಿಯರಿಲ್ಲ. ಅಷ್ಟೇಕೆ ಅಮ್ಮನೂ ಇಲ್ಲ. ನನ್ನಪ್ಪ ಇದ್ದರೂ, ಅವನು ನನ್ನ ಕಣ್ಣಿಗೆ ಬಿದ್ದು, ಸುಮಾರು ತಿಂಗಳುಗಳೇ ಆಗಿವೆ. ಸದ್ಯಕ್ಕೆ ಅವನು ಕಾಣೆಯಾದಾಗಿನಿಂದ ಇದುವರೆಗೂ ಅವನ ಕಾಟ ನನಗಿಲ್ಲ. ಏಕೆಂದರೆ ಅವನೊಬ್ಬ ಕುಡುಕ. ಸದ್ಯಕ್ಕೆ ನಾನು ಡಗ್ಲಾಸ್ ಆಂಟಿಯ ಮನೆಯಲ್ಲೇ ಇರುವುದು. ಆವಳೊಬ್ಬ ಗಂಡ ಇಲ್ಲದ ಮುದುಕಿ. ಸಾಧು, ಆದರೆ ತುಂಬಾ ಶಿಸ್ತಿನವಳು. ನನ್ನ ಸ್ನೇಹಿತರೆಲ್ಲ ನನ್ನನ್ನು 'ಹಕ್' ಎಂದು ಕರೆಯುತ್ತಾರೆ.
ಈ ಮುದುಕಿಗೊಂದು ಹುಚ್ಚು. ನನ್ನನ್ನು ನಾಗರಿಕನನ್ನಾಗಿ ಮಾಡುವ ಹುಚ್ಚು. ಅದಕ್ಕಾಗಿಯೇ ವಿಪರೀತ ಶಿಸ್ತನ್ನು ನನ್ನ ಮೇಲೆ ಹೇರಿದ್ದಳು. ಒಂದು ದಿನ ಅವಳ ಶಿಸ್ತಿನ ಕಾಟ ತಡೆಯಲಾರದೆ ನಾನು ಅವಳ ಮನೆಯಿಂದ ಓಡಿಹೋದೆ. ಆದರೆ ಕೆಲವೇ ಗಂಟೆಗಳಲ್ಲಿ ಅವಳ ಮನೆಯಲ್ಲಿಯೇ ಇದ್ದೆ, ಅವಳಿಗೂ ಅರಿವಾಗುವುದಕ್ಕೂ ಮುಂಚೆಯೇ. ಏಕೆ? ಏಕೆಂದು ನೀವು ನೀವು ಕೇಳುತ್ತೀರಿ ಎಂದು ನನಗೆ ಚೆನ್ನಾಗಿ ಗೊತ್ತು. ಕಾರಣ ಇಷ್ಟೆ. ನನ್ನ ಸ್ನೇಹಿತ ಟಾಮ್ ಸಾಯರ್, ಆಗಲೇ ಹೇಳಿದೆನಲ್ಲಾ ಅವನು ನನಗೊಂದು ವಿಷಯ ತಿಳಿಸಿದ. ನಾವೆಲ್ಲಾ ಸೇರಿ ಢಕಾಯಿತರ ತಂಡವೊಂದನ್ನು ಕಟ್ಟಿದರೆ ಹೇಗಿರುತ್ತದೆ ಎಂದು. ನಾನೇನೋ ಮನೆ ಬಿಟ್ಟು ಓಡಿಹೋಗಲು ಸಿದ್ದನಾಗಿಯೇ ಇದ್ದೆ. ಆದರೆ ಓಡಿಹೋದರೆ, ಮತ್ತೆ ಟಾಮ್ ನನ್ನನ್ನು ಭೇಟಿಯಾಗುವುದೆಂತು? ನಮ್ಮ ಢಕಾಯಿತರ ತಂಡಕ್ಕೆ ನಾನು ಸೇರುವುದೆಂತು. ಅದಕ್ಕೇ ಮೆಲ್ಲಗೆ ಮುದುಕಿ ಡಗ್ಲಾಸಳ ಮನೆಗೇ ಹಿಂತಿರುಗಿಬಿಟ್ಟೆ. ಅವತ್ತು ಸಾಯಂಕಾಲ ನನ್ನ್ ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಶಾಲೆಯಲ್ಲೇನೋ ಗಲಾಟೆ. ಮನೆಗೆಲಸ ಪೂರ್ತಿ ಮಾಡಿಲ್ಲವೆಂದೋ, ಮಗ್ಗಿ ಹೇಳಲಿಲ್ಲವೆಂದೋ, ಮಾಸ್ತರು ನನಗೆ ಬೈದಿದ್ದರು. ಸರಿಯಾಗೇ ಎರಡು ಹೊಡೆತ ಬಿದ್ದಿದ್ದವೆನ್ನಿ. ಅದೇ ಬೇಜಾರಿನಲ್ಲೇ ಮನೆಗೆ ಬಂದರೆ ವಾಟ಼್ನ್ ಆಂಟಿ ಬೈಯ್ಯಬೇಕೆ? ವಾಟ್ಸನ್ ಆಂಟಿ, ಡಗ್ಲಾಸ್ ಮುದುಕಿಯ ತಂಗಿ, ಸದಾ ಸತ್ಯವನ್ನೇ ಹೇಳಬೇಕು, ಒಳ್ಳೆಯ ನಡತೆಯನ್ನೇ ಅನುಸರಿಸಬೇಕು. ಶುಚಿಯಾಗಿರಬೇಕು, ಎಂದು ಏನೇನೋ ಹೇಳಿ ತಲೆ ತಿನ್ನುತ್ತಾಳೆ. ಈ ವಿಷಯಗಳ ಬಗ್ಗೆ ಮಾತನಾಡಲು ಬಾಯಿ ತೆರೆದರೆ, ಬಾಯಿ ಮುಚ್ಚುವ ಪ್ರಶ್ನೆಯೇ ಬರುವುದಿಲ್ಲ. ಅವತ್ತೂ ಅವಳ ಬೈರಿಗೆ ಮಾತನ್ನು ತುಂಬಾ ಹೊತ್ತಿನವರೆಗೆ ಕೇಳಿದೆ. ಬೇಸತ್ತು ಹಸಿಗೆಯ ಮೇಲೆ ಮೌನವಾಗಿ ಮಲಗಿ, ಇರುಳ ದನಿಗಳನ್ನೇ ಆಲಿಸುತ್ತಾ ಏನೋ ಯೋಚಿಸುತ್ತಿದ್ದೆ. ಇರುಳು ನಿಶ್ಯಬ್ದವಾಗಿಯೇ ಇತ್ತು. ಆ ನಿಶ್ಯಬ್ದ ರಾತ್ರಿಯ ಮೌನವನ್ನು ಭೇದಿಸಿ, ನನಗೆ ಕೇಳಿಸಿತು. ಮ್ಯಾಂವ್.... ಮಿಯಾವ್.!!!
ಅದು ಕಂಡಿತಾ ಬೆಕ್ಕಲ್ಲ. ಅದು ಏನೆಂದು ನನಗೆ ಗೊತ್ತಿತ್ತು. ಮತ್ತೆ ದನಿಯನ್ನಾಲಿಸಿದೆ. ನನಗೆ ಅದು ನಮ್ಮ ತೋಟದಿಂದಲೇ ಬರುತ್ತಿರುವುದು ಗೊತ್ತಾಯಿತು. ನಾನೂ ಅದಕ್ಕೆ ಅಷ್ಟೇ ಮೆಲುವಾಗಿ ಮಾರುತ್ತರ ಕೊಟ್ಟು, ಬಟ್ಟೆ ತೊಟ್ಟು, ಕಿಟಕಿಯಿಂದ ಹಾರಿ ಕೊಟ್ಟಿಗೆಯ ಮಾಡಿನ ಮೇಲೆ ಸದ್ದಾಗದಂತೆ ನಡೆದು, ತೋಟದ ಹುಲ್ಲಿನ ಮೇಲೆ ನೆಗೆದೆ. ತೋಟದಲ್ಲಿ ನನಗಾಗಿ ಟಾಮ್ ಸಾಯರ್ ಕಾಯುತ್ತಿರುತ್ತಾನೆಂದು ನನಗೆ ಗೊತ್ತಿತ್ತು.
ಹುಲ್ಲಿನ ಮೇಲೆ, ಚೂರೂ ಸದ್ದಾಗದಂತೆ, ಮನೆಯ ಹಿಂಭಾಗಕ್ಕೆ ನಡೆದು ಹೋಗುತ್ತಿರಬೇಕಾದರೆ, ಅಡಿಗೆಯ ಮನೆಯ ಕಿಟಕಿ ಹಾಯುವಾಗ ನೆಲದ ಮೇಲೆ ಹರಡಿಕೊಂಡಿದ್ದ ಮರದ ಬೇರೊಂದನ್ನು ಎಡವಿ ಬಿದ್ದುಬಿಟ್ಟೆ. ಸದ್ದೂ ಜೋರಾಗಿಯೇ ಅಯಿತೆನ್ನಿ. ಹೆಬ್ಬಾಗಿಲ ಬಳಿ ಮಲಗಿದ್ದ, ಕಾವಲು ಕಾಯುವ, ಡಗ್ಲಾಸಳ ನೀಗ್ರೋ ಗುಲಾಮ ಜಿಮ್ಗೆ ಆ ಸದ್ದಿಗೆ ಎಚ್ಚರಾಗಿಬಿಟ್ಟಿತು. ಅವನು ಎದ್ದು ನಿಂತು ಕತ್ತಲೆಯಲ್ಲೇ ಇಣುಕುತ್ತಾ "ಯಾರಲ್ಲಿ?" ಎಂದ. ನಾವು ಮೆಲ್ಲಗೆ ಪೊದೆಗಳೊಳಗೆ ನುಸುಳಿ ಸದ್ದಿಲ್ಲದಂತೆ ಕೂತೆವು. ಜಿಮ್ ಸ್ವಭಾವತಃ ಧೈರ್ಯಶಾಲಿ. ದೆವ್ವ ಭೂತ ಇತ್ಯಾದಿ ಅಲೌಕಿಕ ಶಕ್ತಿಗಳನ್ನು ಬಿಟ್ಟರೆ, ಬೇರೇನಕ್ಕೂ ಅವನು ಹೆದರುತ್ತಿದ್ದಿಲ್ಲ. ಅವನು ಸದ್ದು ಏನೆಂದು ಪರೀಕ್ಷಿಸಿಯೇ ಬಿಡೋಣವೆಂದು ಎದ್ದು ನಾವು ಅಡಗಿದ್ಧಲ್ಲಿಗೆ ನಡೆದು ಬಂದುಬಿಟ್ಟ.
"ಯಾರೋ ಅದು? ಏನ್ರೋ ಅದು?" ಎಂದ.
ಅವನ ಪ್ರಶ್ನೆಗೆ ಮೌನವೇ ಉತ್ತರವಾಯಿತು. ನಾವು ಅಡಗಿದ್ದ ಜಾಗದಿಂದ ಅವನು ಕಾಣುತ್ತಿದ್ದರೂ, ಅವನಿಗೆ ನಾವು ಕಂಡಿರಲಿಲ್ಲ. ಮತ್ತೆ ಅವನು ಪ್ರಶ್ನಿಸಿದಾಗಲೂ ಅವನಿಗೆ ಮೌನವೇ ಉತ್ತರವಾಯಿತು. ಅವನಿಗೇನಾಯಿತೋ " ಸರಿ, ಮತ್ತೆ ಆ ಸದ್ದು ಕೇಳೋವರೆಗೂ ನಾನಿಲ್ಲೇ ಕೂತುಕೋತೀನಿ" ಎಂದು ಅಲ್ಲೇ ಕುಳಿತುಬಿಟ್ಟ, ಸರಿಯಾಗಿ ನಾನಿದ್ದ ಪೊದೆಗೂ, ಟಾಮ್ ಇದ್ದ ಪೊದೆಗೂ ಮಧ್ಯೆ. ನಾವು ಮತ್ತಷ್ಟು ಬಿಗಿಯಾಗಿ ಉಸಿರೂ ಆಡದಂತೆ ಕುಳಿತುಬಿಟ್ಟೆವು.
ಎಷ್ಟು ಹೊತ್ತು ಹಾಗೆ ಅಲುಗಾಡದೆ, ಶಬ್ದ ಕೂಡಾ ಕೇಳದಂತೆ ಉಸಿರಾಡಿಕೊಂಡಿರಲು ಸಾಧ್ಯ? ಆ ಯಮಸಾಹಸವನ್ನು ಮಾಡುತ್ತಿದ್ದಾಗಲೇ ಶುರುವಾಯಿತು ನೋಡಿ ಕಡಿತ, ಮೂಗಿನಲ್ಲಿ. ಮೆಲ್ಲಗೆ ಕೆರೆದೆ. ಮೂಗಿನಲ್ಲಿ ನಿಂತ ಕಡಿತ, ಕಿವಿಯಲ್ಲಿ ಶುರುವಾಯಿತು, ಅಲ್ಲಿಂದ ಕುತ್ತಿಗೆಗೆ ಹಬ್ಬಿ, ಹೊಟ್ಟೆ, ಬೆನ್ನಿಗೆ ಇಳಿದು, ಸರ್ವತನುಮಯವಾಯಿತು. ಅದೃಷ್ಟದಾಟ ಎನ್ನುವುದು ಇದನ್ನೇ ಏನೋ? ಈ ಕಡಿತ ತಾಳಲಸಾದ್ಯವಾಗಿ ಇನ್ನೇನು ಸಿಕ್ಕಿ ಬೀಳುತ್ತೇವೆಂದು ಯೋಚಿಸುವುದರಲ್ಲಿ 'ಜಿಮ್' ಕುಳಿತಲ್ಲಿಯೇ ಗೊರಕೆ ಹೊಡೆಯಲು ಶುರು ಮಾಡಿದ್ದ! ಪಾಪ ಬೆಳಿಗಿನಿಂದ ದುಡಿದು ದಣಿದ ದೇಹವಲ್ಲವೇ? ಅಲ್ಲಿಂದ ಓಡಿ ದೂರ ಹೋಗಲು ಎದ್ದಾಗ, ಟಾಮ್ " ಈ ಜಿಮ್ಗೇನಾದರೂ ಆಟ ಕಟ್ಟಿದರೆ ಬೆಳಿಗ್ಗೆಗೆ ಒಳ್ಳೆ ಮಜಾ ಬರುತ್ತಲ್ಲೇನೋ?" ಅಂದ. ಸರಿ ಏನು ಮಾಡುವುದು? ಜಿಮ್ ಒರಗಿ ಕುಳಿತಿದ್ದ ಮರಕ್ಕೇ ಅವನನ್ನು ಬಿಗಿದು ಕಟ್ಟಿಬಿಟ್ಟರೆ? ಆ ಪ್ರಯತ್ನದಲ್ಲಿ ಅವನಿಗೇನಾದರೂ ಎಚ್ಚರವಾದರೆ ನಮ್ಮ ಕತೆ ಮುಗಿದಂತೆಯೇ. ಅದಕ್ಕೆ ಆ ಪ್ರಾತ್ನವನ್ನು ಕೈಬಿಟ್ಟು, ಅವನ ಟೋಪಿಯನ್ನು ಅದೇ ಮರದ ಮೇಲಿನ ಕೊಂಬೆಯ ತುದಿಗೆ ತಗುಲಿಸಿ, ಅಲ್ಲಿಂದ ಜಾಗ ಬಿಟ್ಟೆವು.
ಅಲ್ಲಿಂದ ಹಳ್ಳಿಗ್ ಬಂದು, ಅಲ್ಲಿ ಕಾಯುತ್ತಿದ್ದ ಉಳಿದ ಹುಡುಗರನ್ನು ಸೇರಿಸಿಕೊಂಡು, ನದಿಯಲ್ಲಿ ತೆಪ್ಪವನ್ನೇರಿ ಹುಟ್ಟು ಹಾಕುತ್ತಾ, ಎರಡು ಮೈಲುಗಳ ದೂರದಲ್ಲಿ, ದಟ್ಟ ಪೊದೆಗಳಿಂದೊಡಗೂಡಿದ ದಡದ ಬಳಿ ಇಳಿದೆವು. ಅಲ್ಲಿ ಇಳಿಯುತ್ತಿದ್ದಂತೆಯೇ ತಾಮ್ ಎಲ್ಲರೂ ಆ ಜಾಗವನ್ನು ರಹಸ್ಯವಾಗಿಡಬೇಕೆಂದು ಪ್ರತಿಙ್ನೆ ಮಾಡಿಸಿಕೊಂಡ. ತೆಪ್ಪವನ್ನು ದಡದಲ್ಲಿದ್ದ ಮರವೊಂದಕ್ಕೆ ಕಟ್ಟಿ ಪೊದೆಗಳಲ್ಲಿ ನುಗ್ಗಿ ಬಂದಾಗ ಕಂಡಿತು, ದೊಡ್ಡದೊಂದು ಗವಿಯ ದ್ವಾರ. ಆ ವವಿಯಲ್ಲಿಯೇ ನಮ್ಮ ಡಕಾಯಿತರ ತಂಡದ ಮೊದಲನೆಯ ಸಭೆ. ಊರಿಂದ ನಾವು ತಂದಿದ್ದ ಮೇಣದ ಬತ್ತಿಗಳನ್ನು ಬೆಳಗಿ ಆ ಜಾಗೆಯನ್ನು ಬೆಳಕು ಮಾಡಿಕೊಂಡೆವು.
ನಮ್ಮೀ ಸಭೆಯ ಅಲಿಖಿತ ಅವಿರೋಧ ನಾಯಕನಾದ ಟಾಮ್ ಅದೇ ಅಧಿಕಾರವಾಣಿಯಲ್ಲಿ ಬಿತ್ತರಿಸಿದ.
" ಸ್ನೇಹಿತರೇ,"
ಎಲ್ಲರೂ ಟಾಮ್ ಎನು ಹೇಳುತ್ತಾನೋ ಎಂದು ಕಿವಿಗಣ್ಣಾದರು.
" ಈ ದಿನ ನಾವು ಈ ಢಕಾಯಿತರ ತಂಡ ಕಟ್ಟುತ್ತಿದ್ದೇವೆ. ಈ ತಂಡಕ್ಕೆ ಸದಸ್ಯನಾಗಲು ಇಚ್ಚಿಸುವವರು, ಪ್ರಮಾಣ ಮಾಡಿ ರಕ್ತದಲ್ಲಿ ತಮ್ಮ ರುಜು ಹಾಕಬೇಕು."
ಅಲ್ಲಿದ್ದವರೆಲ್ಲಾ ಸದಸ್ಯರಾಗಲು ಬಂದವರು ತಾನೇ? ಯಾರೂ ಕಮಕ್ ಕಿಮಕ್ ಎನ್ನಲಿಲ್ಲ. ಟಾಮ್ ಜೇಬಿಗೆ ಕೈಹಾಕಿ ಅಲ್ಲಿಂದ ಹಾಳೆಯೊಂದನ್ನು ತೆಗೆದು, ಅದರಲ್ಲಿದ್ದ ಪ್ರಮಾಣ ವಚನವನ್ನು ಓದಿದ.ಅದು ಪೂರ್ಣ ವಾಗಿ ನನಗೆ ನೆನಪಿನಲ್ಲಿಲ್ಲದಿದ್ದರೂ, ಸ್ಥೂಲವಾಗಿ, "ಎಲ್ಲರೂ ತಂಡಕ್ಕೆ ನಿಷ್ಟರಾಗಿದ್ದು, ತಂಡದ ರಹಸ್ಯಗಳನ್ನು ಕಾಪಾಡಿಕೊಳ್ಳಬೇಕೆಂದೂ, ತಂಡದ ಸದಸ್ಯರಿಗೇನಾದರೂ ಅಪಾಯವಾದರೆ, ಆ ಅಪಾಯಕ್ಕೆ ಕಾರಣವಾದವನನ್ನೂ ಅವನ ಕುಟುಂಬವನ್ನೂ ಕೊಂದು, ಅವರ ಎದೆಯ ಮೇಲೊಂದು ಶಿಲುಬೆಯ ಗುರುತನ್ನು ಚಾಕುವಿನಿಂದ ಮಾಡಬೇಕೆಂದೂ, ತಂಡದ ಸದಸ್ಯರೇನಾದರೂ ತಂಡದ ರಹಸ್ಯಗಳನ್ನು ಹೊರಜಗತ್ತಿಗೆ ಬಾಯಿಬಿಟ್ಟರೆ, ಅವರ ಗಂಟಲು ಸೀಳಿ ಕೊಲ್ಲಬೇಕೆಂದೂ, ಶವವನ್ನು ಸುಟ್ಟು, ಬೂದಿಯನ್ನು ಚೆಲ್ಲಿಬಿಡಬೇಕೆಂದೂ, ರಕ್ತ-ರುಜುವಿನಿಂದ ಅವನ ಹೆಸರನ್ನು ಹೊಡೆದು ಹಾಕಿ ಅವನನ್ನು ಮತ್ತೆಂದೂ ನೆನಸಿಕೊಳ್ಳದಿರುವುದೆಂದೂ" ತಿಳಿಸುತ್ತಿತ್ತು.
ಹುಡುಗರಿಗೆಲ್ಲಾ ಈ ಪ್ರಮಾಣವಚನ ತುಂಬಾ ಇಷ್ಟವಾಯಿತು. ಆದರೂ ಅದನ್ನು ಇನ್ನೂ ಉತ್ತಮ ಪಡಿಸಲು ಸಲಹೆಗಳು ಬಂದವು. ಅದರಲ್ಲೊಂದು ಅಮೂಲ್ಯ ಸಲಹೆಯೆಂದರೆ, "ತಂಡಕ್ಕೆ ನಿಷ್ಠನಾಗಿರದ ಸದಸ್ಯನ ಕುಟುಂಬವನ್ನೂ ಕೊಲ್ಲುವ' ಸಲಹೆ. ಟಾಮ್ಗೆ ಈ ಸಲಹೆ ತುಂಬಾ ಹಿಡಿಸಿತಾದರೂ ನನ್ನಿಂದಾಗಿ "ಧರ್ಮಸೂಕ್ಷ್ಮ" ತಲೆದೋರಿತು. ಏಕೆಂದರೆ ನನಗೆ ಕುಟುಂಬವೇ ಇರಲಿಲ್ಲ! ಇದ್ದೊಬ್ಬ ಅಪ್ಪನೂ ಸುಮಾರು ಒಂದು ಒಂದೂವರೆ ವರ್ಷಗಳಿಂದ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಕಡೆಗೆ ನನ್ನನ್ನು ನೋಡಿಕೊಳ್ಳುತ್ತಿರುವ ಡಗ್ಲಾಸ್ ಆಂಟಿಯನ್ನೇ ಕೊಲ್ಲಬಹುದೆಂದೂ, ಅವಳನ್ನು ಕೊಲ್ಲಲು ಸಾಧ್ಯವಿರುವುದರಿಂದ ನಾನು ತಂಡಕ್ಕೆ ಸೇರಬಹುದೆಂದೂ ತೀರ್ಮಾನವಾಯಿತು.
'ತಂಡದ ರೂಪು-ರೇಷೆಗಳೇನು? ತಂಡದ ಕಾರ್ಯ ವಿಧಾನ ಯಾವುದು?" ಇಲ್ಲಿಯವರೆಗೂ ಯಾರೂ ತಲೆ ಕೆಡಿಸಿಕೊಂಡಿರದ ಈ ಪ್ರಶ್ನೆ ಬೆನ್ರೋಗರನ ತಲೆಯಲ್ಲಿ ಕುಣಿದು ಬಾಯಲ್ಲಿ ಬಂದೇ ಬಿಟ್ಟಿತು. ಅಷ್ಟೇ ಸರಳವಾಗಿ "ಏನೂ ಇಲ್ಲ, ಬರೀ ಕೊಲೆ ಮತ್ತು ಸುಲಿಗೆ: ಎಂದು ಬಿಟ್ಟ ಟಾಮ್.
"ಸುಲಿಗೆ!! ಸುಲಿಗೆ ಮಾಡುವುದಾದರೂ ಏನನ್ನು? ಜನ-ಮನೆ-ದನ"
' ಛೇ! ಛೇ!! ದನಗಳನ್ನು ಲೂಟಿ ಮಾಡುವುದೇ, ನಾವು ಯಕಃಶ್ಚಿತ್ ಕಳ್ಳರಲ್ಲ. ನಮ್ಮದು ಢಕಾಯಿತಿ. ಮುಖವಾಡ ಧರಿಸಿ, ಹೆದ್ದರಿಯಲ್ಲಿ ಬರುವ ಗಾಡಿಗಳನ್ನು ನಿಲ್ಲಿಸಿ, ಜನಗಳನ್ನು ಕೊಂದು, ಒಡವೆ, ವಸ್ತು, ಉಡುಗೆ-ತೊಡುಗೆಗಳನ್ನು ಕೊಳ್ಳೆ ಹೊಡೆಯುವುದು"
"ಓಹೋ, ಸರಿ ಮತ್ತೆ"
"ಎಲ್ಲಾ ಸರಿ, ನಾವು ಯಾವಾಗಲೂ ಜನಗಳನ್ನು ಕೊಲ್ಲಬೇಕೋ?"
'ಅಲ್ಲವೇ ಮತ್ತೆ, ಹಾಗೆ ಮಾಡಿದರೇ ತಾನೇ ನಮಗೆ ಹೆಸರು ಬರುವುದು."
"ಒತ್ತೆಯಾಳಾಗಿಟ್ಟುಕೊಂಡರೆ?"
"ಅದೂ ಒಳ್ಳೆಯದೇ"
"ಹೌದು, ಒತ್ತೆಯಾಳಾಗಿಟ್ಟುಕೊಳ್ಳುವುದು ಅಂದರೆ...?"
"ಹ.. ಹ... ನನಗೂ ಸರಿಯಾಗಿ ತಿಳಿಯದು. ದೊಡ್ಡ ದೊಡ್ಡ ಢಕಾಯಿತರ ತಂಡಗಳು ಜನರನ್ನು ಒತ್ತೆಯಾಳಾಗಿಟ್ಟುಕೊಳ್ಳುತ್ತಾರಂತೆ."
"ಹಾಗೆಂದರೇನೆಂದು ಗೊತ್ತಿಲ್ಲದೇ ಹೇಗೆ ಒತ್ತೆಯಾಳಗಿಟ್ಟುಕೊಳ್ಳುವುದು?"
"ಅಯ್ಯೋ... ನಾನೂ ಪುಸ್ತಕದಲ್ಲಿ ಓದಿದ್ದೇ. ಹಾಗೆಂದರೆ ಅವರ ಜೀವ ಹೋಗುವವರೆಗೂ ನಮ್ಮ ಸೆರೆಯಲ್ಲಿಟ್ಟುಕೊಳ್ಳುವುದಿರಬೇಕು"
"ಓ ಹಾಗೋ... ಸರಿ.. ಸರಿ..."
ಅಲ್ಲಿಗೆ ನಮ್ಮ ತಂಡದ ಸಭೆ ಬರಖಾಸ್ತಾಗಲು ಬಂತು.
ಮತ್ತೊಂದು ದಿನ ಸಭೆ ಸೇರಿ ಮುಂದಿನ ರೂಪು-ರ್ಏಷೆಗಳನ್ನು ನಿರ್ಧರಿಸುವುದೆಂದೂ, ಈಗ ಮನೆಗೆ ಹೊರಡುವುದೆಂದೂ ನಿರ್ಧರಿಸಿ, ಹೊರಟೇ ಬಿಟ್ಟೆವು.
ಮನೆ ತಲುಪಿದಾಗ ನನಗೆ ತುಂಬಾ ಆಯಾಸವಾಗಿತ್ತು, ಮತ್ತು ಪ್ರಯಾಣದಿಂದ ಬಟ್ಟೆಯೂ ಕೊಳಕಾಗಿತ್ತು. ಬೆಳಿಗ್ಗೆ ನನಗೆ ಡಗ್ಲಾಸ್ ಮತ್ತು ವಾಟ್ಸನ್ ಆಂಟಿಗಳಿಬ್ಬರೂ ಬೈದರು. ಏಕೋ ಗೊತ್ತಿಲ್ಲ. ಜಿಮ್ ರಾತ್ರಿ ಯಾವುದೋ ಪಿಶಾಚಿ ಮನೆಯ ಸುತ್ತಾ ಸುತ್ತಿದೆ ಎಂದು ಹೇಳೀ ಬೈಸಿಕೊಂಡಿದ್ದ. ನಮ್ಮ ತಂಡ ಮುಂದಿನ ತಿಂಗಳಲ್ಲಿ ಮತ್ತೆ ಮೂರ್ನಾಲ್ಕು ಬಾರಿ ಸಭೆ ಸೇರಿತು. ನಮ್ಮ ಚಟುವಟಿಕೆ ಬರೀ ಸಭೆ ಸೇರುವಷ್ಟಕ್ಕೆ ಮಾತ್ರ ಸೀಮಿತವಾಗಿತ್ತು. ನಾವು ಯಾರನ್ನೂ ಕೊಲ್ಲಲೂ ಇಲ್ಲ. ದೋಚಲೂ ಇಲ್ಲ. ತಿಂಗಳು ಕಳೆದ ಮೇಲೆ ನಾನು ತಂಡವನ್ನು ಬಿಟ್ಟುಬಿಟ್ಟೆ. ಹಾಗೇ ಎಲ್ಲರೂ ಬಿಟ್ಟರು. ನಮ್ಮ ಈ ಢಕಾಯಿತರ ತಂಡ 'ಟಾಮ್ ಸಾಯರ್ಸ್ ಗ್ಯಾಂಗ್" ಹೀಗೆ ನಿಂತು ಹೋಯಿತು.