0೨. ಅಪ್ಪನನ್ನು ಮತ್ತೆ ಕಂಡ ಹಕ್.

0೨. ಅಪ್ಪನನ್ನು ಮತ್ತೆ ಕಂಡ ಹಕ್.

ಹಾಗೇ ಮೂರ್‍ನಾಲ್ಕು ತಿಂಗಳು ಕಳೆಯಿತು. ಹಿಮ ಸುರಿದು, ಚಳಿ ಹೆಚ್ಚಿ ಶರದೃತು ಬಂತು. ಶಾಳೆಗೆ ಹೋಗುವುದು ನನಗೀಗ ಒಂಥರಾ ಒಗ್ಗಿಕೊಂಡಿತ್ತು ಅನಿಸುತ್ತದೆ. ಮೊದಮೊದಮೊದಲು ಶಾಲೆಗೆ ಹೋಗುವುದೆಂದರೆ ನನಗಾಗುತ್ತಲೇ ಇರಲಿಲ್ಲ. ನನ್ನಪ್ಪನೂ ಶಾಲೆಗಳ ಬಗ್ಗೆ ಗೌರವವನ್ನೇನೂ ಇಟ್ಟುಕೊಂಡಿರಲಿಲ್ಲ., ಹಾಗೂ ನಾನು ಹೆಚ್ಚು ಕಲಿಯುವುದನ್ನೂ ಅವನು ಇಷ್ಟಪಟ್ಟಿರಲಿಲ್ಲ. ಆದರೆ ಬಹುದಿನಗಳಿಂದ ಅವನು ಕಂಡಿರಲಿಲ್ಲವೆಂದು ನಿಮಗಾಗಲೇ ಹೇಳಿದ್ದೆನಲ್ಲಾ, ಸುಮ್ಮನೆ ಕುಳಿತು ಕಾಲ ಕಳೆಯುತ್ತಾ, ನಮ್ಮಪ್ಪನಿಂದ ಏಟು ತಿನ್ನುವುದಕ್ಕಿಂತಲೂ, ಶಾಲೆಗೆ ಹೋಗಿ ಪಾಠ ಕ್ಲಿಯುವುದರಲ್ಲಿ ಸುಖವಿದೆ ಎಂದು ನನಗೀಗ ಅನಿಸತೊಡಗಿತ್ತು.

ಅದೊಂದು ದಿನ, ತಿಂಡಿ ತಿನ್ನಲು ಕುಳಿತಿರುವಾಗ, ಉಪ್ಪಿನ ಕುಡಿಕೆಗೆ ಕೈ ತಾಗಿ ಉಪ್ಪು ಚೆಲ್ಲಿಬಿಟ್ಟಿತು. ನಮ್ಮ ಕಡೆ ಉಪ್ಪು ಚೆಲ್ಲಿದರೆ ಅದೊಂದು ಅಪಶಕುನ. ಕಷ್ಟದ ದಿನಗಳು ಬರುತ್ತವೆಂಬುದರ ಮುನ್ಸೂಚನೆ. ಅದಕ್ಕೆ ತಕ್ಷಣ ಉಪ್ಪನ್ನು ಭುಜದ ಹಿಂದಕ್ಕೆ ಹಾರಿಸಿಬಿಡಬೇಕಂತೆ. ನಾನು ಹಾಗೆ ಮಾಡಲು ಹೋದಾಗ, ವಾಟ್ಸನ್ ಆಂಟಿ, ತಡೆದು ಬೈದುಬಿಟ್ಟಳು. ಇದರಿಂದಾಗಿ ನನಗೆ ಕಂಡಿತಾ ಕಷ್ಟಕಾಲ ಪ್ರಾಪ್ತಿಯಾಗುತ್ತದೆಂದು ಖಚಿತವಾಯಿತು. ಈಗಂತೂ ಹಿಮ ಸುರಿತ ವಿಪರೀತ ದಟ್ಟವಾಗಿತ್ತು. ಅದೇ ಯೋಚನೆಯಲ್ಲಿ ಮನೆಯಿಂದ ಹೊರಬಂದು, ತೋಟ ಹಾಯ್ದು, ಬೇಲಿ ಹಾರಿದಾಗ ಕಣ್ಣಿಗೆ ಬಿತ್ತೊಂದು ಹೆಜ್ಜೆ ಗುರುತು. ಅದನ್ನೇ ನಿಡಿದಾಗಿ ದಿಟ್ಟಿಸಿದಾಗ ಕಂಡಿದ್ದು.......

ಎಡಗಾಲಿನ ಬೂಟಿನಲ್ಲಿ ಎರಡು ಅಡ್ಡ ಮೊಳೆ ಹೊಡೆದು ಶಿಲುಬೆಯಾಕಾರದ ಗುರುತಾಗುವಂತೆ ಮಾಡಿದ್ದು, ಅದು ನಿಚ್ಚಳವಾಗಿ ಹಿಮದಲ್ಲಿ ಗುರುತು ಮೂಡಿಸಿತ್ತು. ಆ ರೀತಿಯ ಬೂಟುಗಳನ್ನು ಧರಿಸುವವರಾರೆಂದೂ ನನಗೆ ಚೆನ್ನಾಗಿ ತಿಳಿದಿತ್ತು..... ಅದು ನನ್ನಪ್ಪ.

ಕೂಡಲೇ ಮಲೆಯಿಳಿದು, ಕೆಳಗಿನ ಬೀಡಿನಲ್ಲಿರುವ, ನ್ಯಾಯಾಧೀಶ ಥ್ಯಾಚರ್ ರವರ ಮನೆಯವರೆಗೂ ನಿಲ್ಲದೆ ಓಡಿದೆ. ಟಾಮ್ ಜೊತೆ, ಯಾರೋ ಢಕಾಯಿತಿ ತಂಡದವರು ಗುಹೆಯೊಂದರಲ್ಲಿ, ಮುಚ್ಚಿಟ್ಟಿದ್ದ ಆರು ಸಾವಿರ ಡಾಲರ್‌ಗಳನ್ನು, ಕಂಡು ಹಿಡಿದು ನ್ಯಾಯಾಧೀಶ ಥ್ಯಾಚರ್‌ರವರಿಗೆ ಕೊಟ್ಟಾಗ, ಅವರು ಈ ಹಣವನ್ನು ನಮಗಾಗಿ ಬ್ಯಾಂಕಿನಲ್ಲಿಡುವ ವ್ಯವಸ್ಥೆ ಮಾಡಿದ್ದರು. ನಮಗೆ ಬೇಕಾದಾಗ ಖರ್ಚಿಗೆಂದು ಹಣವನ್ನೂ ಕೊಡುತ್ತಿದ್ದರು. ಒಳ್ಳೆಯ ಹೃದಯದ ಥ್ಯಾಚರ್ ನ್ಮಗೆ ಆಪ್ತಮಿತ್ರನಂತಿದ್ದರು.
http://localhost/
ಬಾಗಿಲಿನಲ್ಲೇ ಕುಳಿತಿದ್ದ ಥ್ಯಾಚರ್ ನನ್ನನ್ನು ನೋಡಿ "ಏನೋ ಹಕ್? ಇಷ್ಟು ದೂರ... ದುಡ್ಡೇನಾದರೂ ಬೇಕೇನೋ?" ಎಂದರು.

"ಬೇಡ, ಬೇಡ... ನನಗೇನೂ ಹಣ ಬೇಡ, ಸಾರ್, ಅದೆಲ್ಲವನ್ನೂ ನೀವೆ ಇಟ್ಟುಕೊಂಡು ಬಿಡಿ."
"ಏನು...?!"
"ಸಾರ್.., ನನ್ನನ್ನೇನೂ ಕೇಳಬೇಡಿ, ಆದರೆ ದಯವಿಟ್ಟು ದುಡ್ಡನ್ನೆಲ್ಲಾ ತಗೊಂಡುಬಿಡಿ.... ತಗೋತೀರಲ್ಲವಾ....?"

ಒಂದು ನಿಮಿಷ ಯೊಚಿಸಿದ ಅವರಿಗೆ ಏನೆನ್ನಿಸಿತೋ, 'ಒಂದು ನಿಮಿಷ ಇರು' ಎಂದವರೇ ಒಳಗೆ ಹೋಗಿ ಏನೋ ಬರೆದ ಹಾಳೆಯೊಂದನ್ನು ತಂದು ನನಗೆ ತೋರಿಸಿದರು. ಅದು ನನಗೇನೂ ಅರ್ಥವಾಗಲಿಲ್ಲ. ಓದಿದರೇ ತಾನೇ ಅರ್ಥವಾಗುವುದು.., ನನಗೆ ಸರಿಯಾಗಿ ಒದಲೂ ಬರುವುದಿಲ್ಲವಲ್ಲ..! ಆ ಹಾಳೆಯ ಕೆಳಗೆ ಅವರು ಕೈ ತೋರಿದ ಜಾಗದಲ್ಲಿ ಸಹಿ ಮಾಡಿದೆ.(ನಾನು ಸಹಿ ಮಾಡುವುದನ್ನು ಕಲಿತಿದ್ದೆ).

"ನೋಡಪ್ಪ, ಈಗ ನಿನ್ನ ದುಡ್ಡೆಲ್ಲಾ ನನ್ನದು, ಸದ್ಯಕ್ಕಂತೂ ನನ್ನದೇ" ಎಂದು ಮುಗುಳ್ನಕ್ಕರು. ನಾನು ಅವರಿಗೆ ಕೃತಙ್ಞತೆಗಳನ್ನು ಹೇಳಿ ಅಲ್ಲಿಂದ ಮನೆಗೆ ಬಂದೆ. ಬಹಳ ದಿನಗಳಿಂದ ಕಾಣೆಯಾಗಿದ್ದ ಅಪ್ಪನ ಬಗ್ಗೆ ತಿಳಿಯಲು ಮನಸ್ಸು ಕಾತುರಗೊಂಡಿತ್ತು. ಸಂತಸದಿಂದೇನೂ ಅಲ್ಲ. ಮನೆಯ ಕೆಲಸದಾಳು ಜಿಮ್‍ಗೇನಾದರೂ ಗೊತ್ತಿರಬಹುದೆಂದು ಅವನ್ನು ವಿಚಾರಿಸಿದರೂ ಅದರಿಂದೇನೂ ಪ್ರಯೋಜನವಾಗಲಿಲ್ಲ.

ಒಟ್ಟಿನಲ್ಲಿ ಹಗಲೆಲ್ಲ ಅಪ್ಪನ್ ವಿಷಯ ಅರಿಯಲು ಅಲೆದೂ, ಅಲೆದೂ ಸುಸ್ತಾಗಿ ಮನೆಗೆ ಹೋಗಿ, ದೀಪ ಹಚ್ಚಿದರೆ, ಅಲ್ಲಿ ನನ್ನ ಕೊಠಡಿಯಲ್ಲೇ, ನನ್ನ ಕುರ್ಚಿಯ ಮೇಲೇ ಕೂತಿದ್ದ ನನ್ನಪ್ಪ. ನಾನು ಬೆಚ್ಚಿಬಿದ್ದೆ. ನನ್ನಪ್ಪನನ್ನು ಕಂಡರೆ ನನಗೇನೋ ಹೆದರಿಕೆ, ಹೆದರಿಕೆ ಅಂತಲ್ಲ. ನಮ್ಮಪ್ಪ ಹೊಡೆಯುವ ಏಟಿಗೆ ನೀವೂ ಹೆದರಲೇಬೇಕು. ಆದರೆ ನಾನು ಏಟು ತಿಂದೂ, ತಿಂದೂ, ನನಗೀಗ ಒಂಥರಾ ಮೊಂಡು ಧೈರ್ಯ. ಈಗ ನಮ್ಮಪ್ಪನಿಗೆ ಐವತ್ತು ವರುಷಗಳ ಆಸುಪಾಸು ಇರಬೇಕು. ನೋಡಿದರೆ ಅದು ತಿಳಿಯುತ್ತಲೂ ಇತ್ತು. ಉದ್ದನೆಯ ಎಣ್ಣೆ ಕಾಣದ ಕೂದಲು, ಬೆಳ್ಳನೆಯ ಮುಖ, ಬೆಳ್ಳನೆಯ ಮುಖವೆಂದರೆ, ನಾವು ಬಿಳಿಅಯ್ ಮನುಷ್ಯರ ಬಿಳೀ ಮುಖವಲ್ಲ. ಎನೋ ಒಂದು ಥರಾ ಖಾಯಿಲೆಯಿಂದ ಮುಖ ಬಿಳಿಚಿಕೊಳ್ಳುತ್ತದಲ್ಲಾ, ಹಾಗೆ. ಭಾವನೆಗಳಿಲ್ಲದ ನಿರ್ಭಾವ ಬಿಳುಚು ಮುಖ. ಎನ್ನಬಹುದು. ಚಿಂದಿಯಾದ ಬಟ್ಟೆಗಳು, ನಾನು ಅಲ್ಲೇ ನಿಂತು ನಮ್ಮಪ್ಪನನ್ನೇ ದಿಟ್ಟಿಸಿ ನೋಡಿದೆ. ಅವನೂ ಒಂದೆರಡು ಕ್ಷಣ ಹಾಗೇ ದಿಟ್ಟಿಸಿದ. ಕಡೆಗೊಮ್ಮೆ ಮೌನ ಮುರಿದು ಅವನೇ ಮತಾಡಿದ. " ಹೊಸ ಬಟ್ಟೆಗಳು.... ಹೂ.. ಏನೋ ನಿಮ್ಮಪ್ಪ ಊರ ಸಾಹುಕಾರ ಅನ್ಕೊಂಡಿದಿಯೇನು? ಈ ಥರಾ ಬಟ್ಟೆಗಳು ಹಾಕ್ಕೊಂಡು ಮೆರೆಯೋಕೆ?"

ನಾನೇನೂ ಮಾತಾಡಲಿಲ್ಲ.
"ಹೇ, ಹೇ,... ನನಗ್ಗೊತ್ತೋ, ನೀನು ಶಾಲೆಗೆ ಹೋಗಿ ಓದು ಬರೆಹ ಕಲಿತು ನನ್ಗಿಂತ ದೊಡ್ಡವನಾಗಿದ್ಧೀನಿ ಅಂತ ಯೋಚಿಸ್ತಿದೀಯಾ.. ಹೂ ಇದಕ್ಕೆಲ್ಲಾ ಒಂದು ಗತಿ ಕಾಣಿಸ್ಲೇಬೇಕು".

ಹೀಗೇ ಒಂದು ಗಂಟೆ ಏನೇನೋ ಕೂಗಾಡಿದ. ಕಡೆಗೆ ನನ್ನಿಂದ ಒಂದು ಡಾಲರ್ ತೆಗೆದುಕೊಂಡು ಹೊರಟುಹೋದ. ಮಾರನೇ ದಿನ ನಮ್ಮಪ್ಪ ಬಂದಾಗ ಪೂರ್ತಿ ಕುಡಿದಿದ್ದ. ಆರು ಸಾವಿರ ಡಾಲರ್ ಪಡೆಯಲು ಶತ ಪ್ರಯತ್ನ ಪಟ್ಟ. ನ್ಯಾಯಾಲಯಕ್ಕೆ, ತನ್ನ ಮಗ ಬೇಕೆಂದು ಅರ್ಜಿ ಹಾಕಿಕೊಂಡ. ಅದನ್ನು ತಪ್ಪಿಸಲು, ಡಗ್ಲಾಸ್ ಆಂಟಿ ಮತ್ತು ನ್ಯಾಯಾಧೀಶ ಥ್ಯಾಚರ್ ಪ್ರಯತ್ನಿಸಿದರೂ, ಕಾನೂನಿನ ಪ್ರಕಾರ ಅದು ಸಾಧ್ಯವಾಗಲಿಲ್ಲ. ಅದರೆ ನಮ್ಮಪ್ಪ ನನ್ನನ್ನು ಪಡೆದುಕೊಂಡರೂಹಣ ಪಡೆದುಕೊಳ್ಳಲಾಗಲಿಲ್ಲ. ಏಕೆಂದರೆ ನಾನಾಗಲೇ ಅದನ್ನು ದಾನ ಕೊಟ್ಟುಬಿಟ್ಟಿದ್ದೆನಲ್ಲಾ.. ನಮ್ಮಪ್ಪ ಸಿಡುಕಾಡಿಕೊಂಡೇ ನನ್ನನ್ನು ಅವನ ಮನೆಗೆ ಕರೆದುಕೊಂಡು ಹೋದ.

ಅದೇನೂ ಮನೆಯಲ್ಲ. ನದೀ ದಡದ ತೋಪಿನಲ್ಲಿ ಮರದ ದಿಮ್ಮಿಗಳನ್ನೇ ಸೀಳಿ ಮಾಡಿದ್ದ ಕ್ಯಾಬಿನ್. ಆ ಕ್ಯಾಬಿನ್ನಿನಲ್ಲಿ ಸದಾ ಕಾಲವೂ ನನ್ನನ್ನು ಕೂಡಿಹಾಕಿದ್ದ ನನ್ನಪ್ಪ. ನದಿಯಲ್ಲಿ ಹಿಡಿದ ಮೀನುಗಳೋ, ಶಿಕಾರಿ ಹೊಡೆದ ಹಂದಿಗಳೋ, ನಮಗೆ ಆಹಾರ. ಅದಂತೂ ಶುದ್ದ ಸೊಂಭೇರಿ ಜೀವನ. ಮೊದಮೊದಲು ಅದೂ ಚೆನ್ನಾಗಿತ್ತೆನ್ನಿ. ಅದರೆ ನಮ್ಮಪ್ಪ ಎರಡೆರಡು ದಿನ ನನ್ನನ್ನು ಒಳಗೇ ಕೂಡಿಹಾಕಿ ಹೊರಗಿನಿಂದ ಬೀಗ ಹಾಕಿಕೊಂಡು ಹೋಗುತ್ತಿದ್ದುದರಿಂದಲೂ, ಹಾಗೆ ಕೂಡಿಹಾಕಿ ಹೋದವನು ಹಿಂತಿರುಗಿ ಬಂದಾಗ ಚೆನ್ನಾಗಿ ಕುಡಿದಿರುತ್ತಿದುದರಿಂದ ನನಗೆ ಚೆನ್ನಾಗಿ ಬಡಿಯುತ್ತಿದ್ದುದರಿಂದಲೂ, ನಾನು ಆ ಜೀವನವನ್ನು ದ್ವೇಷಿಸಲಾರಂಭಿಸಿದೆ. ನನ್ನ ಮೈ ಮೇಲೆಲ್ಲಾ ಬರೆಗಳೆದ್ದಿದ್ದವು. ನನಗಲ್ಲಿಂದ ತಪ್ಪಿಸಿಕೊಂಡು ಓಡಿಹೋಗಬೇನ್ನಿಸತೊಡಗಿತು. ಮನದಲ್ಲೇ ಯೋಜನೆ ಹಾಕಲಾರಂಭಿಸಿದೆ. ನಮ್ಮಪ್ಪ ಹೊರಗಿನಿಂದ ಬೀಗ ಹಾಕಿಕೊಂಡು ಹೋಗುವಾಗ ನನ್ನ ಕೈಗೆ ಯಾವ ಸಾಮಾನೂ ಸಿಕ್ಕದಂತೆ ಮಾಡಿ ಬೀಗ ಹಾಕಿಕೊಂಡು ಹೋಗುತ್ತಿದ್ದ. ಆದರೆ ಅವತ್ತು ಮಾಡಿನ ತೊಲೆಗೆ ಸ್ಕ್ಕಿಸಿದ್ದ, ತುಕ್ಕು ಹಿಡಿದ, ಹಿಡಿ ಇಲ್ಲದ ಗರಗಸ ನನ್ನ ಕಣ್ಣಿಗೆ ಬಿತ್ತು. ಅದು ಹೊರ ಪ್ರಪಂಚದ ಕೀಲಿಯಾಗಿತ್ತು. ಇನ್ನು ಸಮಯಾನುಕೂಲಕ್ಕಾಗಿ ಕಾಯಬೇಕಾಗಿತ್ತು.

ಒಮ್ಮೆ ಅಪ್ಪ ದಿನಸಿ ತರಲೆಂದೇನೋ ಪೇಟೆಗೆ ಹೋದ. ಹಾಗೆ ಹೋದರೆ ಅವನು ಬರುವುದು ರಾತ್ರಿಗೇ.... ಎಂದಿನಂತೆ ನನ್ನನ್ನು ಒಳಗೆ ಕೂಡಿಹಾಕಿ ಬೀಗ ಹಾಕಿಕೊಂಡು ಹೋಗಿದ್ದ. ಆ ದಿನವೆಲ್ಲಾ ಮೊಂಡು ಗರಗಸದಿಂದ ಕ್ಯಾಬಿನ್ನಿನ ಹಿತ್ತಲ ಮರದಗೋಡೆಯಲ್ಲೊಂದು ತೂತು ಮಾಡಿದೆ. ಆ ತೂತು ಯಾರ ಕಣ್ಣಿಗೂ ಬೀಳದ ಮೂಲೆಯಲ್ಲಿದ್ದು, ನನ್ನ ತಯ್ಯಾರಿ ನನಗೇ ಖುಶಿ ಕೊಡಲಾರಂಭಿಸಿತು.

ಅಂದು ರಾತ್ರಿ ಎಂದಿನಂತೆ ಅಪ್ಪ್ ಬಂದಾಗ ಪೂರ್ತಿ ಕುಡಿದಿದ್ದ. ಬಂದವಏ ಹಾಗೇ ಬಿದ್ದುಕೊಂಡ. ಧೀರ್ಘಶ್ವಾಸಗಳ ಅವನ್ ಉಸಿರಾಟದ ಸದ್ದು ವಿಕಾರವಾಗಿತ್ತು. ಇದ್ದಕಿದ್ದಂತೆ ಎದ್ದು ಏನೇನೋ ಕಿರುಚಿಕೊಳ್ಳುತ್ತಿದ್ದ. ನಾನೂ, ಹಾಗೇ ಕಣ್ಣು ಮುಚ್ಚಿದೆ. ಎಷ್ಟು ಹೊತ್ತು ನಿದ್ದೆ ಮಾಡಿದ್ದೆನೋ ಗೊತ್ತಿಲ್ಲ, ಯಾರೋ ಕಿರುಚಿದಂತಾಗಿ ಎದ್ದು ಕುಳಿತೆ. "ಹಾವೂ.. ಹಾವೂ... ಅಯ್ಯಯ್ಯೋ, ಮೈ ಮೇಲೆ ಹತ್ಬಿಡ್ತಲ್ಲಪ್ಪೋ... ಅಯ್ಯೋ ಓಡಿಸ್ರಪ್ಪೋ" ಎಂದರಚುತ್ತಿದ್ದ ನಮ್ಮಪ್ಪ. ಸ್ವಲ್ಪ ಹೊತ್ತು ಹೀಗೇ ಅರಚಿದವನು, ಎದ್ದು ಕಾಲು ಝಾಡಿಸಲು ಶುರು ಮಾಡಿದ. ಅವನ ಕಾಲಿಗೆ ಸಿಕ್ಕಿದ್ದೆಲ್ಲವೂ, ಉರುಳುವುದೋ, ಒಡೆಯುವುದೋ, ಮುರಿಯುವುದೋ, ಏನೋ ಒಂದಾಗಿ ಕ್ಷತವಾಗುತ್ತಿದ್ದವು. ಹಾಗೆ ಕುಣಿದಾಡಿದವನು ಮತ್ತೆ ನೆಲದ ಮೇಲೆ ಬಿದ್ದು ಮಲಗಿಬಿತ್ತ. ಈನ್ನು ಬೆಳಿಗ್ಗೆಯವರೆಗೂ ಅವನು ಏಳುವುದಿಲ್ಲವೆಂದು ನಾನು ಭಾವಿಸಿದೆ. ಆದರೆ........ ಆದರೆ ಅವನು ಸ್ವಲ್ಪ ಹೊತ್ತಿನಲ್ಲಿಯೇ ಎದ್ದ. "ಅವ್ವಲೇ,... ನನ್ನನ್ನು ಹಿಡ್ಕೊಂಬಿಡ್ತಾರೋ, ಸೂ..ಮಕ್ಳು ನನ್ಹಿಂದೆ ಬಿದ್ದವ್ರೋ" ಎಂದೇನೋ ಕೂಗಿಕೊಳ್ಳುತ್ತಿದ್ದ. ಆಗ ನನ್ನನ್ನು ನೋಡಿ, ಕೈಗೆ ಸಿಕ್ಕಿದ ಚಾಕು ಹಿಡಿದು ಅಟ್ಟಿಸಿಕೊಂಡು ಬಂದ. ನಾನವನಿಗೆ ಅಂತಕನ ದೂತನಂತೆ ಕಂಡೆನಂತೆ., ನನ್ನನ್ನು ಕೊಂದರೆ ಅವನಿಗೆ ನೆಮ್ಮದಿಯಂತೆ, ಹೀಗೆ ಇನ್ನೂ ಏನೇನೋ ಹೇಳಿದ. ನಾನು ಅವರಾರೂ ಅಲ್ಲ, ಬರೀ ಹಕಲ್‍ಬೆರಿ ಫ಼ಿನ್ ಎಂದು ಎಷ್ಟು ಹೇಳಿದರೂ ಅವನು ಕೇಳಲೇ ಇಲ್ಲ. ಕಡೆಗೊಮ್ಮೆ ನಾನು ತೊಟ್ಟಿದ್ದ ಜಾಕೆಟನ್ನು ಹಿಡಿದು ಅದಕ್ಕೆ ಕತ್ತಿ ಚುಚ್ಚಿಯೇಬಿಟ್ಟ. ನಾನು ಕಣ್ಣು ಮಿಟುಕಿಸುವಷ್ಟರಲ್ಲಿ, ಆ ಜಾಕೆಟನ್ನು ಅವನ ಕೈಗೆ ಬಿಟ್ಟು ಹೊರಗೆ ಹಾರಿದ್ದೆ. ಅದಕ್ಕೆ ಸಾಕಷ್ಟು ಚುಚ್ಚಿ, ಸುಸ್ತಾಗಿ ಅಲ್ಲೇ ಕುಸಿದು ಬಿದ್ದು ಗೊರಕೆ ಹೊಡೆಯಲಾರಂಭಿಸಿದ.

ನನಗಂತೂ ಎಷ್ಟು ಸಿಟ್ಟು ಬಂದಿತ್ತೆಂದರೆ, ಅವನ ಕೋವಿ ಹಿಡಿದು ಕೂತೆ. ಮತ್ತೇನಾದರೂ ಅವನು ಎದ್ದರೆ ಕೊಂದೇ ಹಾಕಿಬಿಡಬೇಕೆಂದು. ಎಷ್ಟು ಹೊತ್ತು ಹಾಗೇ ಕುಳಿತಿದ್ದೆನೋ, ಯಾವಾಗ ಜೋಮ್ಪು ಹತ್ತಿತೋ, ಅಂತೂ ಅಪ್ಪ " ಬೋ....ಮಗನೇ, ಯರನ್ನ ಸಾಯಿಸ್ಬೇಕೂಂತ ಕೂತಿದೀಯಾ..?" ಎಂದು ಕಿರುಚಿದಾಗಲೇ ನನಗೆ ಎಚ್ಚರವಾಗಿದ್ದು. ಒಂದೆರಡು ಕ್ಷಣ ನಾನೆಲ್ಲಿದ್ದೇನೆ, ಏನಾಗಿದ್ದೇನೆ ಎಂಬುದೇ ಅರಿವಾಗಲಿಲ್ಲ. ನಂತರ "ಬಂದೂಕ ತಗೊಂಡು ಏನ್ಮಾಡ್ತಿದ್ದೀಯೋ?" ಎಂದು ಅಪ್ಪ ಗದ್ದರಿಸಿದಾಗ, ಅವನಿಗೆ ರಾತ್ರಿಯ ವಿಷಯ ಏನೂ ತಿಳಿದಿಲ್ಲವೆಂದೂ ಅರಿವಾಯ್ತು. ನಾನೂ ನಿಜ ಹೇಳಿದೆ! "ರಾತ್ರಿ ಯಾರೊ ಒಳಕ್ಕೆ ಬರಲು ಪ್ರಯತ್ನ ಪಡ್ತಿದ್ದರು. ಅದಕ್ಕೇ"
"ಹಾಗಿದ್ದರೆ ನನ್ನನ್ನೇಕೆ ಏಳಿಸಲ್ಲಿಲ್ಲವೋ? ... ಮುಠ್ಠಾಳ.."
"ಏಳಿಸಿದೆ, ಆದರೆ ಮೈಮೇಲೆ ಎಚ್ಚರ ಇಲ್ಲದೆ ಬಿದ್ದಿದ್ದೆಯಲ್ಲಾ"
"ಮುಚ್ಚೋ ಬಾಯಿ, ಎದ್ದು ತಿಂಡಿ ಮಾಡು"

ಅವತ್ತಿನ ದಿನವೆಲ್ಲಾ, ಮೀನು ಹಿಡಿಯುತ್ತಾ, ನದಿಯಲ್ಲಿ ತೇಲಿ ಬಂದ ಮರದ ದಿಮ್ಮಿಗಳನ್ನು ಹಿಡಿಯುತ್ತಾ ಕಳೆದೆವು. ಮಧ್ಯಾಹ್ನದ ನಿದ್ದೆಗೆ ಅಪ್ಪ ತೂಗಿದ್ದಾಗ, ನದಿಯ ಮೇಲೆ ತೇಲುತ್ತಾ ಬಂತೊಂದು ಖಾಲಿ ಚಿಟ್ಟುದೋಣಿ. ಕೂಡಲೇ ನದಿಗೆ ಹಾರಿ ಅದನ್ನೆಳೆತಂದು, ಸಮೀಪದ ಪೊದೆಗಳ ನಡುವೆ ಅವಿಸಿಟ್ಟು, ಸೊಪ್ಪು ಮುಚ್ಚಿ ಬಂದು, ಮೀನು ಹಿಡಿಯುತ್ತಾ ಕುಳಿತೆ. ಇದೇ ಸರಿಯಾದ ಅವಕಾಶ. ಇನ್ನು ಆ ನಿಮಿಷಗಳಲ್ಲೇನು ಮಾಡಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ.