0೩. ಗಾಡಿ ಬಿಟ್ಟ ಪೋರ.
ನೀರಿಗೆ ಹಾರಿದ್ದರಿಂದ ಒದ್ದೆಯಾಗಿದ್ದ ಬಟ್ಟೆಗಳು, ಅಪ್ಪ ಏಳುವ ಹೊತ್ತಿಗೆ ಒಣಗಿತ್ತು. ಎದ್ದವನೇ ನನ್ನ ಬಳಿಗೆ ಬಂದು ನಮ್ಮೆಲ್ಲಾ ವಸ್ತುಗಳನ್ನೂ ಕ್ಯಾಬಿನ್ನಿನ ಒಳಗೆ ಹಾಕಲು ತಿಳಿಸಿದ. ಕ್ಯಾಬಿನ್ನಿನ ಒಳಗೇ ನನ್ನನ್ನೂ ಕೂಡಿಹಾಕಿ, ನಗರದ ದಿಕ್ಕಿನತ್ತ ತನ್ನ ದೊಣಿಯನ್ನೇರಿ ಹೊರಟುಬಿಟ್ಟ. ಅವನು ಎಲ್ಲಿಗೆ ಹೊಗುತ್ತಿದ್ದೇನೆಂದು ನನಗೆ ತಿಳಿಸಲಿಲ್ಲವಾದರೂ, ಆ ದಿಕ್ಕಿಗೆ ಹೋದರೆ, ರಾತ್ರಿ ಬರುವುದಿಲ್ಲವೆಂದು ನನಗೆ ಗೊತ್ತಿತ್ತು. ಇದು ನನಗೆ ಸುವರ್ಣಾವಕಾಶವಾಗಿತ್ತು.
ಅವನು ಕಣ್ಣಿಂದ ಮರೆಯಾಗುವುದಕ್ಕೂ ಮೊದಲೇ ನಾನು, ನಾನೇ ಕೊರೆದಿದ್ದ ಕನ್ನದಿಂದ ಈಚೆ ಬಂದು, ಕ್ಯಾಬಿನ್ನಿನಲ್ಲಿದ್ದ ಉಪಯುಕ್ತ ವಸ್ತುಗಳನ್ನೆಲ್ಲಾ ನನ್ನ್ ಚಿಟ್ಟುದೋಣಿಗೆ ಸಾಗಿಸಿದೆ. ಎಲ್ಲ ಸಾಗಿಸಿದ ನಂತರ ಮೊದಲಿನ ಹಾಗೇ ಕನ್ನವನ್ನು ಭದ್ರಪಡಿಸಿ, ಕೊಡಲಿ ಹಿಡಿದು ಮುಂಬಾಗಿಲನ್ನು ಒಡೆದು ಹಾಕಿದೆ. ಒಳಗಿದ್ದ ಇತರೇ ಪದಾರ್ಥಗಳನ್ನೆಲ್ಲಾ ಮುರಿದೋ, ಒಡೆಸೋ, ಕ್ಷತ-ವಿಕ್ಷತಗೊಳಿಸಿದೆ. ಬಂದೂಕು ಹಿಡಿದು ಹೊಡೆಯಲು ಯಾವುದಾದರೂ ಹಕ್ಕಿ ಸಿಗುತ್ತದೇನೋ ಎಂದು ಕಾದೆ. ಯಾವ ಹಕ್ಕಿಯೂ ಸಿಗಲಿಲ್ಲ. ಆದರೆ ತೋಪಿನೊಳಕ್ಕೊಂದು ವರಾಹ ಬಂತು. ಈಡು ಹೊಡೆದೆ, ಹಂದಿ ಬಿತ್ತು. ಅದನ್ನೆತ್ತಿಕೊಂಡು, ನಮ್ಮ ಕ್ಯಾಬಿನ್ನಿನ ಮೇಜಿನ ಮೇಲಿರಿಸಿ, ಅದರ ಗಂಟಲು ಸೀಳಿ ಅದರ ರಕ್ತ ಅಲ್ಲೆಲ್ಲಾ ಹರಿಯುವಂತೆ ಮಾಡಿದೆ. ಕೊಡಲಿಯಿಂದ ನನ್ನ ತಲೆಕೂದಲನ್ನು ಹಿಡಿಯಷ್ಟು ಕೊಯ್ದು, ಕೊಡಲಿಯ ಅಲಗಿಗೆ ಅದನ್ನು ರಕ್ತದಲ್ಲದ್ದಿ ಅಂಟಿಸಿದೆ. ಹಂದಿಯನ್ನು ರಕ್ತ ಸೋರುತ್ತಿರುವಂತೆಯೇ ಎಳೆದುಕೊಂಡು ಹೋಗಿ ನದಿಯೊಳಕ್ಕೆ ಎಸೆದೆ.
ಅಲ್ಲಿಗೆ ನನ್ನ ಕೆಲಸ ಪೂರ್ತಿಯಾಗಿತ್ತು.
ನೋಡಿದವರು, ಯಾರೋ ನನ್ನ ಕೊಲೆ ಮಾಡಿ, ನದಿಯೊಳಕ್ಕೆ ಎಸೆದಿದ್ದಾರೆಂದು ತಿಳಿಯಬೇಕಿತ್ತು.
ನನ್ನ ಚಿಟ್ಟು ದೋಣಿಯನ್ನೇರಿ, ಸೀದಾ ಸ್ವಲ್ಪ ಮುಂದೆ, ನದಿಯ ಕೆಳಗೇ ಇದ್ದ ಜಾಕ್ಸನ್ ಐಲ್ಯಾಂಡ್ಗೆ ಹೊರಟೆ. ಅಲ್ಲಿ ನನ್ನನ್ನ್ಯಾರೂ ಹುಡುಕುವುದಿಲ್ಲ ಎಂಬ ನಂಬಿಕೆಯಿಂದ, ನಾನಾ ದ್ವೀಪವನ್ನೇ ಆರಿಸಿಕೊಂಡಿದ್ದೆ. ಆದೂ ಅಲ್ಲದೆ, ಈಗಾಗಲೇ ಬೈಗಾಗುತ್ತಿರುವುದರಿಂದ, ನನ್ನ ಸಾವಿನ ವಿಷಯ ಎಲ್ಲರಿಗೂ ತಿಳಿದು, ಹುಡುಕಾಟ ಶುರುವಾದರೂ, ಅದು ನಾಳೆ ಬೆಳಿಗ್ಗೆಯೇ ಎಂದು ನನಗೆ ಚೆನ್ನಾಗಿ ತಿಳಿದಿತ್ತು. ದ್ವೀಪ ತಲುಪಿದಾಗ ಚೆನ್ನಾಗಿ ಕತ್ತಲಾಗಿತ್ತು. ಚಿಟ್ಟುದೋಣಿಯನ್ನು ದಡಕ್ಕೆಳೆದು ಮಲಗಿದ ನನಗೆ ಚೆನ್ನಗಿ ನಿದ್ದೆ ಹತ್ತಿತ್ತು. ಬೆಳಗ್ಗಿನಿಂದ ಏನು ಕಡಿಮೆ ಆಯಾಸವಾಗಿತ್ತೇ? ಮರುದಿನ ಬೆಳಿಗ್ಗೆ ನನಗೆ ಎಚ್ಚರಾದಾಗ ಹೊತ್ತು ಮಾರು ಮೇಲೇರಿತ್ತು. ಬಹುಶಃ ಎಂಟು ಗಂಟೆಗೂ ಮಿಕ್ಕು ಸಮಯ ಹರಿದಿರಬೇಕು.
ದೂರದಲ್ಲೊಂದು ಬಾರಿ 'ಬೂಂ" ಎಂದಿತು. ನನಗೆ ಸ್ವಲ್ಪ ನಗು ಬಂತು. ಅವರು 'ನನ್ನನ್ನು' ಅಂದರೆ ನನ್ನ ಶವವನ್ನು ಹುಡುಕುತ್ತಿರಬೇಕು. ಮತ್ತೆ ಸ್ವಲ್ಪ ಹತ್ತಿರದಲ್ಲೇ ಅದೇ ಶಬ್ದ ಕೇಳಿಸಿತು. ಈಗೊಂದು ಹಾಯಿದೋಣಿಯೂ ಅದರಲ್ಲಿದ್ದ ಕೆಲವು ಜನರೂ ಕಾಣಿಸಿದರು. ನೀರಿನೊಳಕ್ಕೆ ಫ಼ಿರಂಗಿ ಹಾರಿಸಿ, ನನ್ನ ದೇಹ ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ದರು. ಹಾರಿಸಿದ ತೋಪಿನಿಂದ ಎದ್ದ ಹೊಗೆಯನ್ನು ನಾನು ಕಾಣಬಹುದಾಗಿತ್ತು. ದೋಣಿ ಮತ್ತೂ ಹತ್ತಿರಕ್ಕೆ ಬಂದಂತೆ, ಅದರಲ್ಲ್ಲಿ ಕುಳಿತಿದ್ದ ವಾಟ್ಸನ್ ಆಂಟಿ, ಥ್ಯಾಚರ್ ನ್ಯಾಯಾಧೀಶ, ನಮ್ಮಪ್ಪ ಹಾಗೂ ಟಾಮ್ ಸಾಯರ್ ಮತ್ತು ಪರಿಚಯದ ಇನ್ನೂ ಹಲವಾರು ಜನರಿದ್ದರು. ಅವರು ನನ್ನ ಕೊಲೆಯ ಬಗ್ಗೆ ಮಾತಾಡುತ್ತಿದ್ದುದನ್ನು, ಕೇಳಬಹುದಾಗಿತ್ತು. ಅವರಾರಿಗೂ ನಾನು ಬದುಕಿರಬಹುದೆಂಬ ಕಲ್ಪನೆಯೂ ಇರಲಿಲ್ಲ. ನನಗಂತೂ ಸಂತೋಷವಾಗಿತ್ತು. ಆ ದಿನ ನನಗಾಗಿ ಪುಟ್ಟದೊಂದು ಶಿಬಿರ ಕಟ್ಟಿಕೊಂಡೆ. ರಾತ್ರಿಯ ನೀಲಾಗಸದಲ್ಲಿ ಮಿನುಗುವ ನಕ್ಷತ್ರಗಳನ್ನೇ ದಿಟ್ಟಿಸುತ್ತಾ ನಿದ್ದೆ ಹೋದೆ. ನನಗೆ ಸಿಕ್ಕಿದ್ದ ಸ್ವಾತಂತ್ರ್ಯದಿಂದಾಗಿ ನಕ್ಷತ್ರಗಳೆಲ್ಲಾ ನಗುತ್ತಲಿವೆ ಎನ್ನಿಸಿತ್ತು. ಪ್ರಕೃತಿಯ ಮಡಿಲಲ್ಲಿ ನಾನು ಹೆಚ್ಚು ಸ್ವತಂತ್ರನಾಗಿದ್ದೆ.
ಮರುದಿನ ಬೆಳಿಗ್ಗೆ ಬೇಗನೇ ಎದ್ದು, ಕೋವಿ ಹಿಡಿದು ತಿನ್ನಲು ಏನಾದರೂ ಸಿಗುತ್ತದೇನೋ ಎಂದು ನೋಡಲು ಶಿಕಾರಿ ಹೊರಟೆ. ಅಲ್ಲಿ... ಆ ದ್ವೀಪದಲ್ಲಿ ಅಂಡಲೆಯುವಾಗ, ನಿನ್ನೆ ಹಚ್ಚಿದ್ದ ಬೆಂಕಿ ಕಣ್ಣಿಗೆ ಬಿತ್ತು. ಅದರ ಬೂದಿ ಇನ್ನೂ ಆರಿರಲಿಲ್ಲ. ಸಣ್ಣಗೆ ಹೊಗೆಯಾಡುತ್ತಲೇ ಇತ್ತು. ಅಂದರೆ,.... ಅಂದರೆ.... ಇಲ್ಲಿ ನಾನಲ್ಲದೇ ಇನ್ನೂ ಯಾರೋ ಇದ್ದಾರೆ. ಅಂದರೆ ನಾನಿಲ್ಲಿರುವುದು ಕಂಡಿತಾ ಕ್ಷೇಮವಲ್ಲ. ಈ ಕ್ಷಣವೇ ಈ ದ್ವೀಪ ತೊರೆದು ಹೋಗಬೇಕು. ನಾನೊಂದು ಕ್ಷಣವೂ ತಡಮಾಡಲಿಲ್ಲ. ನನ್ನ ಶಿಬಿರದ ಬಳಿಗೆ ಓಡಿದೆ. ನನ್ನೆಲ್ಲಾ ಚರಾಸ್ತಿಗಳನ್ನೂ ನನ್ನ್ ಚಿಟ್ಟು ದೋಣಿಗೆ ಸಾಗಿಸಿದೆ. ನಾನೂ ದೋಣಿಯನ್ನೇರಿ ಹೊರಟೆ. ಇಷ್ಟೆಲ್ಲಾ ಮಾಡಬೇಕಾದರೂ ಈ ದ್ವೀಪದಲ್ಲಿ ಇರುವ ಬೇರೊಬ್ಬ ವ್ಯಕ್ತಿ ಯಾರೆಂದು ತಲೆಯಲ್ಲಿ ಕೊರೆಯುತ್ತಲೇ ಇತ್ತು. ನನ್ನನ್ನು ಹುಡುಕಲೆಂದು ಬಂದವರೋ? ಅಥವಾ ಇಲ್ಲಿನ ನಿವಾಸಿಗಳೋ...? ಅಥವಾ ನನ್ನಂತೆ ನಿರಾಶ್ರಿತರಾಗಿ ಇಲ್ಲಿಗೆ ಬಂದವರೋ...? ನಾನು ಹೀಗೆ ಓಡುತ್ತಾ ಹೋದರೆ ಏನು ಪ್ರಯೋಜನ? ಇಲ್ಲಿರುವವರಾರೆಂದು ತಿಳಿದರೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಬಹುದಲ್ಲಾ.! ಈ ಯೋಚನೆ ಬಂದದ್ದೇ ಮತ್ತೆ ದ್ವೀಪಕ್ಕೆ ಹಿಂದಿರುಗಿದೆ. ಕೋವಿ ಹಿಡಿದು ಎಚ್ಚರಿಕೆಯಿಂದ ದ್ವೀಪವನ್ನೆಲ್ಲಾ ಅವಲೋಕಿಸುತ್ತಾ ಸಾಧ್ಯವಾದಷ್ಟೂ ಮರೆಯಲ್ಲೇ ಮುನ್ನಡೆದೆ.
ಬೇಗನೇ ನಾನು ಮರಗಳಾಗಲೀ, ಪೊದೆಗಳಾಗಲೀ ಇಲ್ಲದ ಬಯಲು ಪ್ರದೇಶದ ಬಳಿಗೆ ಬಂದುಬಿಟ್ಟಿದ್ದೆ. ಅಲ್ಲಿ ಆ ಬಯಲಿನ ಅಂಚಿನಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಾ ಕುಳಿತಿದ್ದನೊಬ್ಬ ಕಂಬಳಿ ಹೊದ್ದ ಮನುಷ್ಯ. ನಾನು ಎಚ್ಚರಿಕೆಯಿಂದ ಅವನನ್ನೇ ಗಮನಿಸುತ್ತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಅವನು ಆಕಳಿಸುತ್ತಾ, ಮೈ ಮುರಿಯುತ್ತಾ ಎದ್ದು ನಿಂತ. ಅದು "ಜಿಮ್" ಆಗಿದ್ದ. ನನ್ನ ರಕ್ಷಕಿ ಡಗ್ಲಾಸಳ ತಂಗಿ, ವಾಟ್ಸನ್ನಳ ಗುಲಾಮ ಜಿಮ್. ನನಗೆ ರೋಮಾಂಚನವಾಯಿತು.
"ಹೇ.. ಜಿಮ್" ಅವನ ಬಳಿ ಓಡುತ್ತಾ ಕೂಗಿದೆ. ತಿರುಗಿ ನೋಡಿದ ಅವನು ಬೆಚ್ಚಿಬಿದ್ದ. ಒಂದೊಂದಾಗಿ ಹಿಂದಕ್ಕೆ ಹೆಜ್ಜೆಯಿಡುತ್ತಾ, ಬಿಟ್ಟ ಬಾಯಿ ಬಿಟ್ಟಂತೆ ಕಣ್ಣು ಕೂಡಾ ಮಿಟುಕಿಸದೆ ನನ್ನನ್ನು ನೋಡುತ್ತಿದ್ದ. ಅವನ ನರ ನಾಡಿಗಳಲ್ಲೂ, ತುಂಬಿ ಹರಿದು ನಿಂತಿದ್ದ ಭಯವನ್ನು ಯಾರೇ ಆದರೂ ಕೂಡಲೇ ಗುರುತಿಸಬಹುದಾಗಿತ್ತು.
"ಹಕ್ಕಣ್ಣಾ, ನಾನು ಯಾರ್ಗೂ ಕೇಡು ಮಾಡಿಲ್ಲ. ನಿಂಗಂತೂ ಯಾವತ್ತೂ ದ್ರೋಹ ಬಗ್ದಿಲ್ಲ. ಭೂತದ್ ಪೂಜೆ ಮಾಡಿದೀನಿ, ನನ್ನ ಬಿಟ್ಬಿಟ್ಟು ನೀನು ಎಲ್ಲಿಂದ ಬಂದ್ಯೋ ಅಲ್ಲಿಗೇ ಹೊರಟ್ಹೋಗಪ್ಪಾ.... ದಯ್ವಿಟ್ಟು ನದೀಗೇ ಹೊರಟ್ಹೋಗಪ್ಪಾ." ಹೀಗೇ ಏನೇನೋ ಬಡಬಡಿಸಲಾರಂಭಿಸಿದ. ನಾನು ನಕ್ಕು " ಅಲ್ಲೋ, ಜಿಮ್. ನಾನು ಭೂತಾನೂ ಅಲ್ಲ, ತಾತಾನೂ ಅಲ್ಲ. ಸತ್ತೋರು ತಾನೇ ಅದೆಲ್ಲಾ ಅಗೋದು, ನಾನಿನ್ನೂ ಸತ್ತಿಲ್ಲ ಕಣೋ' ಅಂದೆ. "ಹಂಗಾದ್ರೆ..... ಹಂಗಾದ್ರೆ..." ಎಂದು ಬೆಪ್ಪು ಬೆರಗಾಗಿ ಬಯ್ಬಾಯಿ ಬಿಡುತ್ತಿದ್ದ ಅವನನ್ನು ಕೂರಿಸಿಕೊಂಡು ನನ್ನ ಕತೆಯನ್ನೆಲ್ಲಾ ಹೇಳಿದೆ. ಎಲ್ಲವನ್ನೂ ಸಾವಧಾನವಾಗಿ ಅವನಿಗೆ ಸ್ವಲ್ಪ ನಂಬಿಕೆ ಬಂತು, ಎಂದು ನನಗೆ ಮನವರಿಕೆಯಾದ ಮೇಲೆ, ಅವನು ಇಲ್ಲಿ ಏನು ಮಾಡುತ್ತಿದ್ದಾನೆಂದು ಕೇಳಿದೆ.
ಅವನೂ ನಾನು ತಪ್ಪಿಸಿಕೊಂಡ ಸಮಯದಲ್ಲೇ, ಸ್ವಲ್ಪ ಹೆಚ್ಚು ಕಡಿಮೆ, ವಾಟ್ಸನ್ನಳ ಮನೆಯಿಂದ ತಪ್ಪಿಸಿಕೊಂಡಿದ್ದ. ನನ್ನಂತೇ ಆಶ್ರಯ ಬಯಸಿ ಈ ದ್ವೀಪ ಸೇರಿದ್ದ. ನನ್ನ ಕತೆ ಕೇಳಿದ ಮೇಲೆ ಅವನ ಮುಖ ಹುಳ್ಳಗಾಯಿತು. "ಅಯ್ಯೋ, ಎಲ್ಲಾರೂ ನಾನೇ ನಿಮ್ಮನ್ನ ಸಾಯ್ಸಿ ಓಡಿಹೋಗಿರ್ತೀನಂತ ಮಾಡಿರ್ತಾರೆ." ಎಂದ. ಅದು ನಿಜವೂ ಆಗಿತ್ತು. ನಾನವನಿಗೆ ಧೈರ್ಯ ಹೇಳಿದೆ. ಯಾರಿಗೂ ಅವನು ಓಡಿ ಬಂದ ಗುಲಾಮನೆಂದು ಹೇಳುವುದಿಲ್ಲವೆಂದೂ, ನಾವಿಬ್ಬರೂ ಜೊತೆಯಾಗಿಯೇ ಮುಂದೆ ಪ್ರಯಾಣಿಸಬಹುದೆಂದು ಹೇಳಿದರೂ, ಅವನ ಮುಖದ ವಿಷಾದ ಮರೆಯಾಗಲಿಲ್ಲ.
ಜಾಕ್ಸನ್ ಐಲ್ಯಾಂಡ್, ಕೇವಲ್ ಕಾಲು ಮೈಲು ಅಗಲ, ಮೂರು ಮೈಲು ಉದ್ದದ ದ್ವೀಪ. ಆ ದ್ವೀಪದ ಮಧ್ಯದಲ್ಲಿ, ಸಮತಟ್ಟಾದ ಜಾಗದಲ್ಲಿ ಇಬ್ಬರೂ ಸೇರಿ, ಇಬ್ಬರಿಗಾಗುವಷ್ಟು ದೊಡ್ಡ, (ಇಬ್ಬರಿಗೇ ಆಗುವಷ್ಟು ಚಿಕ್ಕ) ಶಿಬಿರವೊಂದನ್ನು ನಿರ್ಮಿಸಿದೆವು. ಒಂದಷ್ಟು ದಿನ ನಮಗೆ ಹಾಯೆನಿಸಿತ್ತು. ಹಗಲೆಲ್ಲಾ ಈಜುವುದು, ಮೀನು ಹಿಡಿಯುವುದು, ಬಲೆ ಒಡ್ಡಿ ಪ್ರಾಣಿ ಶಿಕಾರಿ ಮಾಡುವುದು, ಅಷ್ಟೇ ನಮ್ಮ ಕೆಲಸ. ನದಿಯಲ್ಲಿ ಹರಿದು ಬಂದ ತೆಪ್ಪದೋಣಿಯೊಂದನ್ನು ಎಳೆದು ದಡ ಸೇರಿಸಿ ಮುಚ್ಚಿಟ್ಟಿದ್ದಷ್ಟೇ ಮುಖ್ಯ ಘಟನೆ. ಅದು ಮುಂದೆಂದಾದರೂ ಉಪಯೋಗಕ್ಕೆ ಬರುವುದೆಂಬುದು ನಮ್ಮ ಯೋಚನೆ.
ಹೀಗೇ ಒಂದು ರಾತ್ರಿ, ಹೊಳೆಯಲ್ಲಿ ಹರಿದು ಬರುವ ಅಮೂಲ್ಯ ವಸ್ತುಗಳಿಗೆ ಕಾಯುತ್ತಿದ್ದಾಗ, ಒಂದು ಮನೆ ದೋಣಿ ತೇಲಿಬಂತು. ಮನೆ ದೋಣಿ ಅಂದರೆ, ದೊಡ್ಡ ದೋಣಿಯೊಂದರಲ್ಲಿ ಮನೆಯಲ್ಲಿರುವ ಎಲ್ಲಾ ಸೌಕಲ್ಯಗಳೂ ಸಿಗುವಂತೆ ಮಾಡಿರುವ ದೋಣಿ. ಅದು ನೀರಿನಲ್ಲಿ ಆಗಲೇ ಒಂದು ಕಡೆಯಿಂದ ಮುಳುಗಲು ಶುರುವಾಗಿತ್ತು. ನನ್ನ ಚಿಟ್ಟು ದೋಣಿಯಲ್ಲಿ ನಾನೂ, ಜಿಮ್ ಅದರ ಬಳಿ ಸಾಗಿದಾಗ, ಮಸುಕು ಕತ್ತಲಿನಲ್ಲಿ ಏನೂ ಕಾಣಿಸಲಿಲ್ಲ. ಸ್ವಲ್ಪ ಬೆಳಕಾಗುವವರೆಗೆ ಕಾದು, ಮೆಲ್ಲನೆ ಆ ದೋಣಿಗೆ ಹತ್ತಿದೆವು. ಅಲ್ಲಿ ಎಲ್ಲಾ ಮುರಿದು ಬಿದ್ದಿತ್ತು. ಬಹುಶಃ ದೊಡ್ಡದೊಂದು ಹೊಡೆದಾಟವೇ ನಡೆದಿರಬೇಕು. ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬನ ಶವವನ್ನೂ ಕೂಡಾ ನೋಡಿದೆವು. ಅದರ ಬಳಿ ಹೋದ ಜಿಮ್ ಕನಿಕರದ ಮುಖಭಾವ ವ್ಯಕ್ತಪಡಿಸಿದ. ನಾನೂ ಕುತೂಹಲದಿಂದ ನೋಡಲು ಹೋದೆ. ಆದರೆ ಜಿಮ್ ಕೂಡಲೇ ಶವದ ಮುಖ ಮುಚ್ಚಿ, "ಭಯಂಕರ... ಭಯಂಕರ' ಎಂದ. ಎರಡು ಗುಂಡುಗಳು ಅವನ ಮೆದುಳನ್ನು ತೂರಿ ಹೋಗಿವೆಯೆಂದೂ, ನೋಡುವುದು ಅಸಹ್ಯ ಮತ್ತು ಭಯಂಕರ ಎಂದೂ ಅವನು ಹೇಳಿದ. ಆ ದೋಣಿಯಲ್ಲಿದ್ದ ಇತರ ಉಪಯುಕ್ತ ವಸ್ತುಗಳನ್ನು ಕಂಡ ನನಗೂ ಶವದ ವಿಷಯದಲ್ಲಿ ಆಸಕ್ತಿ ಬರಲಿಲ್ಲ. ಅಲ್ಲಿಂದ ನಾವು ಒಂದು ಲಾಟೀನು, ಮೇಣದ ಬತ್ತಿಗಳು, ಕತ್ತಿ, ಚಾಕು, ಸೂಜಿ, ಔಷಧಿಗಳೂ ಸೇರಿದಂತೆ ಹಲವಾರು ಉಪಯುಕ್ತ ವಸ್ತುಗಳನ್ನೆತ್ತಿಕೊಂಡೆವು.
ಅಷ್ತರಲ್ಲೇ ಬೆಳಕಾಗಿತ್ತು. ನಾವು ಆ ದೋಣಿ ಬಿಟ್ಟು ಎಚ್ಚರಿಕೆಯಿಂದ ಸಾಗುತ್ತಾ ನಮ್ಮ ಶಿಬಿರ ಸೇರಿಕೊಂಡೆವು. ಬೆಳಕಿನಲ್ಲಿ ನಾವು ಓಡಾಡುವುದು ಅಪರೂಪವೇ ಆಗಿತ್ತು. ಏಕೆಂದರೆ ಜಿಮ್ ಓಡ್ ಬಂದಿರುವ ಗುಲಾಮ. ಅವನನ್ನು ಹಿಡಿದರೆ ಶಿಕ್ಷೆ ಕಂಡಿತಾ. ಮತ್ತು ನಾನು ಅವನು ತಪ್ಪಿಸಿಕೊಳ್ಳಲು ಸಹಾಯ ಮಾಡಿರುವುದರಿಂದ ನನಗೂ ಶಿಕ್ಷೆ ತಪ್ಪಿದ್ದಲ್ಲ. ಅದಕ್ಕೇ ಜಿಮ್ ನನ್ನ ಚಿಟ್ಟು ದೋಣಿಯ ತಳದಲ್ಲಿ ಮಲಗಿದ್ದ. ನಾನು ಎಚ್ಚರಿಕೆಯಿಂದ ಹುಟ್ಟು ಹಾಕಿ, ಅಂತೂ ನಮ್ಮ ಶಿಬಿರ ಸೇರಿದೆವು. ಮುಂದಿನ ದಿನಗಳು ನಮ್ಮ ಪಾಲಿಗೆ ಅಷ್ಟೇನೂ ಒಳ್ಳೆಯವಾಗಿರಲಿಲ್ಲ. ಅದರ ಸೂಚನೆಯೂ ನಮಗೆ ಸಿಕ್ಕಿತ್ತು.
ಹೇಗೆಂದರೆ, ಒಂದು ದಿನ ದ್ವೀಪದಲ್ಲಿ ಅಲೆಯುತ್ತಿದ್ದಾಗ ಹಾವಿನ ಪೊರೆಯೊಂದನ್ನು ಕಂಡೆ. ಅದನ್ನು ಜಿಮ್ಗೆ ತೋರಿಸಿದಾಗ " ಅಯ್ಯೋ ದೇವ್ರೇ... ಹಾವಿನ ಪೊರೆ ಕಂಡ್ರೆ, ಕೆಟ್ಟ ಕಾಲ ಬಂತೂಂತ ' ಎಂದುಬಿಟ್ಟ. ಅವನ ಆ ಮೂಢನಂಬಿಕೆ ಕಂಡು ನನಗೆ ನಗು ಬಂತು. ನಾನು ಅದನ್ನೆಲ್ಲಾ ನಂಬಬೇಕೋ ಬೇಡವೋ ತಿಳಿದಿರಲಿಲ್ಲ. ಒಟ್ಟಿನಲ್ಲಿ ಮನಸ್ಸಿನಲ್ಲಿಯೇ ಜಿಮ್ಗೆ ಆಟ ಆಡಿಸಬೇಕೆಂದು ನಿಶ್ಚಯಿಸಿದೆ.
ಅಂದು ಸಂಜೆ ನಿಜವಾದ ಹಾವೊಂದನ್ನು ಹುಡುಕಿ, ಹೊಡೆದು ಎತ್ತಿಕೊಂಡು ಬಂದು, ಜಿಮ್ನ ಹಾಸಿಗೆಯ ಮೇಲೆ ಹಾಕಿಬಿಟ್ಟೆ. ಅವನನ್ನು ಹೆದರಿಸಬೇಕೆಂದಷ್ಟೇ ಮಾಡಿದ ಕೆಲಸ ಇದು. ನನಗೆ ಬೇರಿನ್ನಾವ ದುರುದ್ದೇಶವೂ ಇರಲಿಲ್ಲ. ರಾತ್ರಿ ಊಟವಾಗುವ ಹೊತ್ತಿಗೇ ಈ ವಿಷಯವನ್ನು ನಾನು ಮರೆತುಬಿಟ್ಟೆ. ಶಿಬಿರದಲ್ಲಿ ನಾನು ದೀಪ ಹಚ್ಚುವಷ್ಟರಲ್ಲಿ, ಜಿಮ್ ತನ್ನ ಕಂಬಳಿಯಲ್ಲಿ ತೂರಿಕೊಂಡು, ಹಾಸಿಗೆಯಲ್ಲಿ ಮೈಚಾಚಿ ಬಿಟ್ಟಿದ್ದ. ನಾನು ಮಧ್ಯಾಹ್ನ ಹೊಡೆದಿದ್ದ ಹಾವಿನ ಸಂಗಾತಿ ಅವನಿಗಾಗೇ ಅಲ್ಲೇ ಕಾಯುತ್ತಿದ್ದಂತೆ ಕುಳಿತಿದ್ದು, ತನ್ನ ದಂತ ಪ್ರಹಾರ ನಡೆಸಿಬಿಟ್ಟಿತ್ತು. ಅದು ವಿಷದ ಹಾವಲ್ಲ ಎಂದು ನಾನು ಗಮನಿಸಿದ್ದರೂ, ಅದನ್ನು ಜಿಮ್ಗೆ ಎಷ್ಟೆ ಹೇಳಿದರೂ ಅವನು ಅದನ್ನು ನಂಬಲಿಲ್ಲ. ತನ್ನ ಕೊನೆಗಾಲ ಬಂತೆಂದು ನಂಬಿ ಹಾಸಿಗೆಯ ಮೇಲೆ ನರಳುತ್ತಾ ಮಲಗಿಬಿಟ್ಟ. ನಾನೂ ನನಗೆ ಗೊತ್ತಿದ್ದಂತೆ ಚಿಕಿತ್ಸೆ ಮಾಡಿದೆ. ಆದರೇನು ಅವನ ನಂಬಿಕೆ ಧೃಡವಾಗುವಂತೆ, ಅವನಿಗೆ ಜ್ವರ ಬಂದು, ನರಳಾಟ ಹೆಚ್ಚೇ ಆಯಿತು. ನನಗೂ ಅದು ವಿಷದ ಹಾವೇ ಇರಬೇಕೆಂಬ ನಂಬಿಕೆ ಬರಲುಪಕ್ರಮಿಸಿತ್ತು. ಹಾಗೇ ನಾಲ್ಕು ದಿನಗಳವರೆಗೆ ಜ್ವರದಲ್ಲಿ ನರಳಿದ ಅವನು ನಾಲ್ಕನೇ ದಿನ ಎದ್ದು ಕುಳಿತ. ಊಟವನ್ನೂ ಚೆನ್ನಾಗೇ ಮಾಡಿದ. ಮೂರು ದಿನಗಳಾದರೂ ತಾನು ಸಾಯದ್ದನ್ನು ಕಂಡು ಅವನಿಗೂ ಅದು ವಿಷದ ಹಾವಲ್ಲವೆಂಬ ನಂಬಿಕೆ ಬಂತೋ ಏನೋ, ಒಟ್ಟಿನಲ್ಲು ಸಂಜೆಯ ವೇಳೆಗೆ, ಜಿಮ್ ಪೂರ್ತಿ ಗುಣಮುಖನಾಗಿದ್ದ.
ಅಲ್ಲಿಯ ರೋಮಾಂಚಕ ಜೀವನ, ಏಕತಾನತೆಯಿಂದ ನನಗಾಗಲೇ ಬೋರು ಹೊಡೆಯಲಾರಂಭಿಸಿತ್ತು. ಬದಲಾವಣೆಗಳೇ ಇಲ್ಲದ ಜೀವನ ನನಗಂತೂ ಬಲು ಬೋರು. ನಾನು ತಡೆಯದೆ ಜಿಮ್ನ ಬಳಿ " ನಾಳೆ ನಾನು ಪೇಟೆಗೆ ಹೋಗಿ ಬರ್ತೀನಿ ಕಣೋ" ಅಂದೆ. ಅವನು ಕೂಡಲೇ ಗಾಬರಿ ಬಿದ್ದ. ಆದರೂ ಸ್ವಲ್ಪ ಯೋಚಿಸಿ, "ಹೋಗೋದಾದ್ರೆ, ರಾತ್ರಿ ಹೊತ್ನಾಗೆ ಹೋಗಿ, ಹಗಲಲ್ಲಿ ಯಾರದ್ರೂ ನಿಮ್ಮನ್ನ ಗುರ್ತು ಹಿಡೀಬೋದು" ಅಂದ. "ಅದೂ ಸರಿ" ಎಂದು ನಾನು ಒಪ್ಪಿಕೊಳ್ಳುವಷ್ಟರಲ್ಲೇ 'ಅಲ್ಲಾ, ಹುಡ್ಗೀ ಹಂಗೆ ವೇಷ ಹಾಕ್ಕೊಂಡು ಹೋದ್ರೆ...?" ಅಂದ. ಅದು ನಿಜಕ್ಕೂ ಅತ್ಯುತ್ತಮ ಯೋಜನೆಯಾಗಿತ್ತು.
ಕೂಡಲೇ ಹಾಯಿದೋಣಿಯಿಂದ ನಾನು ತಂದ ಗೌನೊಂದನ್ನು ಕತ್ತರಿಸಿ, ನನ್ನ ಅಳತೆಗೆ ತಕ್ಕ ಫ಼್ರಾಕು ಮಾಡಿಕೊಂಡೆ. ಕುಚ್ಚುಟೋಪಿಯೊಂದಕ್ಕೆ ನನಗೆ ತಿಳಿದಂತೆ ಕುಸುರಿ ಕೆಲಸ ಮಾಡಿ, ಹುಡುಗಿಯರ ಟೋಪಿಯಂತೆ ಮಾಡಿಕೊಂಡೆ. ಅದನ್ನು ಧರಿಸಿ ಓಡಾಡುವುದನ್ನೂ ಅಭ್ಯಾಸ ಮಾಡಿದೆ. ಅದನ್ನು ನೋಡುತ್ತಿದ್ದ ಜಿಮ್ "ನೀವು ನಡದ್ರೆ ಹುಡುಗ್ರಾಗೇ ಕಾಣ್ತೀರಿ, ಇನ್ನೂ ಅಭ್ಯಾಸ ಮಾಡ್ಬೇಕು, ಸ್ವಲ್ಪ ಸೊಂಟ ಕುಲುಕಿಸೋದು" ಅಂದ. ಆಮೇಲೆ "ಪ್ಯಾಂಟ್ ಜೋಬಿಗೆ ಕೈ ಹಾಕೋಕೆ ಹಂಗೆಲ್ಲಾ ಲಂಗ ಎತ್ತಬ್ಯಾಡಿ' ಅಂದ. ಅಂತೂ ಇಂತೂ ಆ ಗುರುವಿನ ಸನ್ನಿಧಿಯಲ್ಲಿ ನನ್ನ ಅಭ್ಯಾಸ ನಡೆಯಿತು. ಸಂಜೆಯ ವೇಳೆಗೆ ತಕ್ಕ ಮಟ್ಟಿನ ಯಶಸ್ಸೂ ಸಿಕ್ಕಿತು. ಕತ್ತಲಾಗುತ್ತಿದ್ದಂತೆಯೇ ನನ್ನ ಚಿಟ್ಟು ದೋಣಿಯನ್ನೇರಿ, ನದಿಯ ಆಚೆ ದಡಕ್ಕೆ ಬಂದೆ. ನಗರದಿಂದ ತುಸು ದೂರದಲ್ಲಿ, ದಡದ ಬಳಿಯ ಮರವೊಂದಕ್ಕೆ ನನ್ನ ದೋಣಿಯನ್ನು ಕಟ್ಟಿ, ನಗರದ ಹೊರವಲಯದ, ನನಗೆ ತಿಳಿದಂತೆ ಖಾಲಿ ಬಿದ್ದಿದ್ದ, ಮನೆಯೊಂದರತ್ತ ನಡೆದೆ. ಮನೆಯಲ್ಲಿ ದೀಪವುರಿಯುತ್ತಿದ್ದುದು ದೂರದಿಂದ ಕಾಣಿಸುತ್ತಿತ್ತು. ಹತ್ತಿರವಾದಂತೆ ಆ ಮನೆಯಲ್ಲಿ ಮಧ್ಯವಯಸ್ಸನ್ನು ಮೀರಿದ ಹೆಂಗಸೊಬ್ಬಳು, ಮೇಣದ ಬತ್ತಿಯ ಬೆಳಕಿನಲ್ಲಿ ಏನನ್ನೋ ಹೆಣೆಯುತ್ತಿರುವುದು ಕಂಡಿತು.
ಅಲ್ಲೇ, ಒಂದೆರಡು ನಿಮಿಷ ನಿಂತು, ಎಲ್ಲಾ ಧೈರ್ಯವನ್ನೂ ಒಗ್ಗೂಡಿಸಿಕೊಂಡು ಬಾಗಿಲು ತಟ್ಟಿದೆ.