ನೆನಪಿನ ಚಿತ್ರಕಲಾ ಶಾಲೆ: ಭಾಗ ೧೩ - ’ಅನುಮಾನಕ್ಕೆ ಅವಿಶ್ವಾಸವೇ ತೀರ್ಮಾನ’

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೩ - ’ಅನುಮಾನಕ್ಕೆ ಅವಿಶ್ವಾಸವೇ ತೀರ್ಮಾನ’

 (೩೪)

ವಾರವೊಂದರ ನಂತರ ಒಮ್ಮೆ ಬಿಡಾನ ಮನೆಯಲ್ಲಿ ಆತನನ್ನು ಮತ್ತು ಮಮಾನನ್ನು ಭೇಟಿಮಾಡಿ ಸೂಚ್ಯವಾಗಿ ಈ ’ಜಾರಿದ ಕಾಲ’ದ ಬಗ್ಗೆ ಸೂಚನೆ ನೀಡಿದೆ. ನೋಟ್‌ಬುಕ್ಕಿನಲ್ಲಿ ಸೇವ್ ಮಾಡಲಾಗಿದ್ದ ಅನೇಖ  ಮತ್ತು ನನ್ನ ನಡುವಣ ಮಾತುಕಥೆಗಳನ್ನು ಸುವಿಸ್ತಾರವಾಗಿ ಅವರುಗಳಿಗೆ ತೋರಿಸಿದೆ. ಅವರುಗಳು ’ಇರಬಹುದು’, ’ಸಾಧ್ಯವೆ? ಸಾಧ್ಯವೇನೋಪ್ಪ!’ ’ಎಲಾ ಇವ್ಳಾ, ಮಾಯಾಬಜಾರ್ ಚಿತ್ರ ತೋರಿಸ್ತಿದ್ದೀಯ?’ ಎಂದೆಲ್ಲ ಹೇಳುವಾಗ ನಾನೇ ತೀವ್ರ ಅನುಮಾನಿಯಂತೆ ನಟಿಸಿದೆ. ನಾನು ನಂಬಿದ ಸತ್ಯವನ್ನು ಮತ್ತೊಬ್ಬರಿಗೆ ಮನದಟ್ಟಾಗುವಂತೆ ನಿರೂಪಿಸುವಾಗ, ಅದನ್ನು ನಂಬುವವರಲ್ಲಿ ಕೊನೆಯವಳು ನಾನೇ ಎಂದು ಅವರನ್ನು ಮೊದಲು ನಂಬಿಸುವುದು ನನಗೆ ಸಹಾಯಕಾರಿಯಾಗಿತ್ತು. ಕಲಾಇತಿಹಾಸದ, ವಿಮರ್ಶೆಯ ನಿರಂತರ ಬರವಣಿಗೆಯಿಂದಾಗಿ ನನಗೆ ಒದಗಿಬಂದಿದ್ದ ರೂಢಿಯಿದು.
"ನೀನು ಹೇಳುವುದನ್ನು ನಂಬಲು ಒಂದೇ ದಾರಿ ಎಂದ" ಮಮಾ, "ಈಗ ನಾವೆಲ್ಲಾ ಸೇರಿ ಫೇಸ್‌ಬುಕ್ಕಿನಲ್ಲಿ ಆನೇಖನಿಗೆ ಮೆಸೇಜ್ ಕಳಿಸುವ ಪರೀಕ್ಷೆ ಏರ್ಪಡಿಸಿಕೊಳ್ಳುವ," ಎಂದ. ನಾನು ಬರೆಯತೊಡಗಿದೆ, ’ಹಾಯ್ ಅನೇಖ. ಬಿಡಾ ಮತ್ತು ಮಮಾ ನನ್ನ ಜೊತೆಗಿದ್ದಾರೆ. ನಿನ್ನ ಜೊತೆ ಮಾತನಾಡಬೇಕಂತೆ’ ಎಂದು. ಅದಕ್ಕಾಗಿಯೇ ಕಾದಿದ್ದಂತೆ ಆ ಕಡೆಯಿಂದ ’ಏನಂತೆ?’ ಎಂದು ಉತ್ತರ ಬಂದಿತು ೧೯೮೮ರ ಅನೇಖನಿಂದ. ಅಷ್ಟರಲ್ಲಿ ನಾವಿದ್ದ ಬಿಡಾನ ಸ್ಟುಡಿಯೋ (’ಪ್ರಶಾಂತಿ ನಿಲ್ಲಯ್ಯ’ ಎಂದು ಕರೆಯುತ್ತಿದ್ದೆವು ಅದನ್ನ) ಬಾಗಿಲು ಕರೆಗಂಟೆ ಒತ್ತಿದರು ಅದಾರೋ. ಬಾಗಿಲು ತೆಗೆಯಲಾಗಿ, ಅನೇಖ ಅಲ್ಲಿ ನಿಂತಿದ್ದ!, ಬಹುದೀರ್ಘ ಸಮಯದ ನಂತರ ನಮ್ಮನ್ನೆಲ್ಲಾ ಭೇಟಿಯಾಗಲು, ಯೋಗಾಯೋಗವೆಂಬಂತೆ ಅಂದೇ, ಅದೇ ಸಮಯಕ್ಕೆ ಆಗಮಿಸಿದ್ದ ಅನೇಖ. 
 
     "ಬಾರಪ್ಪಾ ದೊರೆ. ನಿನ್ನ ಪೂರ್ವಾಶ್ರಮದೊಂದಿಗೆ ಸಂವಾದಿಸುತ್ತಿದ್ದೇವೆ, ಪ್ರಭುಗಳೇ" ಎಂದು ಮಮಾ ನಾಟಕೀಯವಾಗಿ, ಸಾದ್ಯಂತವಾಗಿ ಎಲ್ಲವನ್ನೂ ವಿವರಿಸಿದ ಸಕಾಲಿಕವಾಗಿ. ಪ್ರೇತಗಳ ಬಗ್ಗೆ ಅದನ್ನು ನಂಬದವರೆಲ್ಲ ಚರ್ಚಿಸುವಾಗ, ಎದುರಿನ ಟೇಬಲ್ಲಿನ ಮೇಲಿನ ಹೂಜಿ ಅಚಾನಕ್ಕಾಗಿ ಗುರುತ್ವವನ್ನು ಮೀರಿ ಮೇಲೆ ನಿಂತಂತಾಗಿತ್ತು ನಮ್ಮಗಳ ಅನುಭವ.
 
     ’೧೯೮೮ರ ಬಿಡಾನಿಗೆ ಹಾಯ್ ಹೇಳಿಬಿಡು’ ಎಂದು ಒಂದೇ ಬೆರಳಿನಲ್ಲಿ ಅಕ್ಷರಗಳನ್ನು ಒತ್ತಿದ ೨೦೧೧ರ ಬಿಡಾ, ೧೯೮೮ರ ಮಮಾನಿಗೆ "ನಿನ್ನ ಎಲ್ಲಾ ಚಟಗಳೊಂದಿಗೂ, ವಿಷಯಲೋಲುಪ್ತತೆಯಿದ್ದಾಗ್ಯೂ ಇನ್ನೂ ಇಪ್ಪತ್ತೊಂದು ವರ್ಷವಾದರೂ ಬದುಕಿರುತ್ತೀಯ ಎಂದು ತಿಳಿಸಿಬಿಡು" ಎಂದು ಮೆಸೇಜು ಮಾಡಿದ ಮಮಾ. "ಸಿವಾ, ಈ ಕಡೆಯಿಂದ ನೀನೇ ಮಾತಾಡ್ತಿರೋದು. ಅಥವ ಅಲ್ಲಿರುವ ನಾನುವಿಗೆ ಇಲ್ಲಿರುವ ನೀನುವಿನ ನಮಸ್ಕಾರಗಳು" ಎಂದು ಪಟಪಟನೆ ಮೆಸೇಜನ್ನು ಫೇಸ್‌ಬುಕ್ಕಿನಲ್ಲಿ ಕುಟ್ಟಿ ನಗತೊಡಗಿದ ಅನೇಖ, ೨೦೧೧ರ ಅನೇಖ!
 
ಕಂಪ್ಯೂಟರ್ ನೋಟ್‌ಬುಕ್ ಕರೆಂಟು ಸ್ವತಃ ಹೊಡಿಸಿಕೊಂಡಂತೆ ಅಲುಗತೊಡಗಿತು. ಒಮ್ಮೆಲೆ ನೋಟ್‌ಬುಕ್ಕಿನ ಒಳಗೆ ಶೇಖರಣೆಯಾಗಿರುವ ಒಟ್ಟೂ ಸುಮಾರು ೧೦೦ಜೀ.ಬಿ. ಮೆಮೊರಿ ಡ್ಯಾಟಾ (ದಾಖಲೆಗಳು) ಒಂದರ ನಂತರದ ಒಂದು ಚಿತ್ರವಾಗಿ ಪಟಪಟನೆ, ಸ್ಲೈಡ್ ಶೋವಿನಂತೆ ನೋಡುವ ಕಂಗಳ ಮೇಲೆ ದಾಳಿಯಿಡತೊಡಗಿದವು. ಇದು ನಿರಂತರ ಎನಿಸತೊಡಗಿದಾಗಲೇ, ಕೇವಲ ಅರವತ್ತು ಸೆಕೆಂಡುಗಳಲ್ಲಿ ಎಲ್ಲವೂ ಏನೂ ಆಗೇ ಇಲ್ಲವೇನೋ ಎಂಬಂತೆ ಫೇಸ್‌ಬುಕ್ ಕಾಗದ ತೆರೆದು, ಸ್ಥಿರವಾಯಿತು. ಅನೇಖ ತನ್ನನ್ನೇ ಇಪ್ಪತ್ತುಮೂರು ವರ್ಷದ ಹಿಂದಿನ ತನ್ನ ಭೂತವನ್ನು, ಅಥವ ಇಪ್ಪತ್ತು ವರ್ಷದ ಹಿಂದಿನ ಅನೇಖ ತನ್ನ ಭವಿಷ್ಯದೊಂದಿಗೆ ಸಂವಾದಿಸಿದ್ದರಿಂದ ಆದುದಿದು. "ಕಾಲವನ್ನೇ ಸ್ಥಿರವಾಗಿಸಿ, ದಿಕ್ಕುಗೆಡಿಸುವ ಕಲಿಗಾಲ ಮಗಾ ಇದೂ. ಮಗು ಭೀಮ ದ್ರೋಣಾಚಾರ್ಯರ ಹತ್ತಿರವೊಮ್ಮೆ ಬಿಲ್ಲಿನಿಂದ ಬಾಣವನ್ನು ಚಿಮ್ಮಿಸಿದಾಗ, ಅದು ತಪ್ಪು ದಿಕ್ಕಿಗೆ ಹೋಗುತ್ತಿದೆ ಎಂದು ಗುರು ಹೇಳಿದಾಗ, ಚುರುಕು ಭೀಮನ ರಭಸ ಹೇಗಿತ್ತೆಂದರೆ, ಆತ ಕೂಡಲೆ ಓಡಿಹೋಗಿ, ವೇಗವಾಗಿ ಓಡುತ್ತಿದ್ದ ಬಾಣದ ದಿಕ್ಕನ್ನೇ ತಿರುಗಿಸಿಬಿಟ್ಟನಂತೆ, ಹಾಗಾಯಿತಿದು" ಎಂದು ಮಮಾ ಹಾಸ್ಯ, ವ್ಯಂಗ್ಯ, ಒಳನೋಟಗಳನ್ನು ಬೆರೆಸಿ ಎಂದಿನ ತನ್ನ ವರಸೆಯಲ್ಲಿ ಕಾಲದ ನಿಗೂಢತೆಯನ್ನೇ ಟುಸ್ ಎನ್ನಿಸಿಬಿಟ್ಟ. 
(೩೫)
ಅಲ್ಲಿದ್ದ ನಾವು ನಾಲ್ವರೂ--ಅಂದರೆ ಬಿಡಾ, ಮಮಾ, ಅನೇಖ ಮತ್ತು ಸೋಕುಮಾರಿ ಉರುಫ್ ಕಲಾ.ಕೆ-ಎಂದೂ ಆದಿಭೌತಿಕ, ಆಧ್ಯಾತ್ಮ, ಪರಲೋಕ ಮುಂತಾದುವನ್ನು ಜನ್ಮಕ್ಕೆ ನಂಬಿದವರಲ್ಲ. "ನೀವು ಭಾರತೀಯ ಕಲಾವಿದರು ಯಾಕೆ ಶ್ರೀಕೃಷ್ಣನನ್ನು, ಆತನ ಜೀವನ ಚರಿತ್ರೆಯಲ್ಲಿ, ಐತಿಹ್ಯಗಳನ್ನು ಚಿತ್ರಿಸಬಾರದು. ಯಾಕೆ ಎಲ್ಲರೂ ಪಾಶ್ಚಾತ್ಯ ಕಲೆಯನ್ನೇ ಅನುಕರಿಸುತ್ತಿದ್ದೀರ?" ಎಂದಿದ್ದ ಹರೇರಾಮ ಹರೇಕೃಷ್ಣ ಗೆಟಪ್ಪಿನಲ್ಲಿದ್ದ ಡಚ್ ಪ್ರಜೆಯೊಬ್ಬ, ಶಾಂತಿನಿಕೇತನದಲ್ಲೊಮ್ಮೆ, ಮುಂದೆ ೧೯೯೩ರ ಸುಮಾರಿಗೆ. ಆಗ ಅಲ್ಲಿಗೆ ಡಿಸರ್ಟೇಷನ್ ಸಲುವಾಗಿ ಬರೋಡದಿಂದ ಬಂದಿದ್ದ ಮಮಾ ತಿರುಗಿಬಿದ್ದಿದ್ದ, "ನೀವೇಕೆ ನಿಮ್ಮವನೇ ಆದ ಕಲಾವಿದ ವ್ಯಾನ್ ಗೋನಂತೆ ನಿಮ್ಮ ಎಡಗಿವಿಯನ್ನೇ ಕತ್ತರಿಸಿ ನಿಮ್ಮ ನಿಮ್ಮ ಗರ್ಲ್‌ಫ್ರೆಂಡ್ (ಅಥವ ಬಾಯ್‌ಫ್ರೆಂಡಿಗೆ) ಕೊಡಬಾರದು?" ಎಂದು ತಿರುಗಿಬಿದ್ದಿದ್ದ ಮಮಾ. ಹರೇಕೃಷ್ಣ ಆದ್ಮಿ ಗೋವಿಂದಾ ಗೋವಿಂದ ಎಂದುಕೊಂಡೇ ದಡದಡನೆ ನಡೆದುಹೋಗಿಬಿಟ್ಟಿದ್ದ. ದೇವರನ್ನು ನಂಬುವುದೂ ಒಂದು ಸಾಮರ್ಥ್ಯವೇ. ನಾವುಗಳೆಲ್ಲಾ ಎಷ್ಟೇಷ್ಟೋ ವರ್ಷಗಳ ಕಾಲ ದೇವರನ್ನು ನಂಬಲು ಪ್ರಯತ್ನಿಸಿ, ಸಾಧ್ಯವಾಗದೆ ಆತನ ತಂಟೆಯೇ ಬೇಡವೆಂದು ಬಿಟ್ಟುಬಿಟ್ಟಿದ್ದೆವು. ಅದಕ್ಕೆ ಪೂರಕವೋ ಎಂಬಂತೆ ಕವಿ ರಾಮಚಂದ್ರ ಶರ್ಮರೂ ಸಹ, ರೀ, ಅವ್ನ ಸಹವಾಸ ಬೇಡ ಕಣ್ರೀ. ನಂಬಿದ್ರೆ, ನಿಮ್ಮಗಳ ಮೇಲೆ ಪ್ರೀತಿ ಅತಿಯಾಗಿ ಬೇಗ ತನ್ನ ಬಳಿ ಕರೆಸಿಕೊಂಡುಬಿಡ್ತಾನೆ ಎಂದಿದ್ದರು. ಮತ್ತೊಂದು ದಿನ ಬಿಡಾ ಒಳ್ಳೆಯ ಸ್ಮೈಲಿ ಮೂಡಿನಲ್ಲಿದ್ದಾಗ ಹೇಳಿದ್ದ, ಕಲಾ.ಕೆ, ನಾನು ದೇವರ ಸಮಸ್ಯೆಯನ್ನು ಆತ್ಯಂತಿಕವಾಗಿ ಬಗೆಹರಿಸಿರುವೆ. ಆತನೇ ನಿಜವಾದ ಸಮಸ್ಯೆ, ಎಂದು ದಿವ್ಯ ಗುರೂಜೀಯ ನಗೆ ಚೆಲ್ಲಿದ್ದ.  
ಅನೇಖ ಆ ಅನೇಖನಿಗೆ ಬರೆದ ಮೆಸೇಜಿನ ನಂತರ ಭೂಕಂಪನವನ್ನು ಅನುಭವಿಸಿದ್ದ ಫೇಸ್‌ಬುಕ್ಕಿಗೆ ಅನಂತವೆನಿಸಿಬಿಟ್ಟಿದ್ದ ಕೇವಲ ಆ ಒಂದು ನಿಮಿಷದ ನಂತರ ಚಕ್ಕನೆ ಆ ಕಡೆಯಿಂದ ನನ್ನ ಅಕೌಂಟಿಗೆ ಪ್ರತ್ಯುತ್ತರ ಬಂದಿತು: "ಮಕ್ಳಾ, ತಮಾಷೆ ಮಾಡ್ತಿದ್ದೀರ? ಒಂದೊಂದೇ ಸಾಲಿನ ಕಾಗದಗಳನ್ನು ಬರೆಬರೆದು ಯಾಕೆ ಕಾಸು ವೇಸ್ಟ್ ಮಾಡಿಕೊಂಡು ನನಗೂ ದಂಡ ಹಾಕ್ತೀರ. ಜೊತೆಗೆ, ನೀವುಗಳು ಬರೆವಾಗ, ನನ್ನ ಹಸ್ತಾಕ್ಷರವನ್ನೂ ಅನುಕರಿಸಿ ನನ್ನ ಹೆಸರಿನಲ್ಲೇ ಪತ್ರ ಬರೆವ ಧಿಮಾಕು ಬೇರೆ. ಮೊನ್ನೆ ಏನು ಮಾಡಿದ್ದು ನೀವುಗಳು? ನೀವುಗಳೇ ನಿಮ್ಮ ಹಸ್ತಪ್ರತಿಯಲ್ಲೇ ನನಗೆ ಬರೆದ, ನಿಮ್ಮದೇ ಪತ್ರಗಳಿಗೆ ಉತ್ತರವನ್ನು ನೇರವಾಗಿ ನಿಮಗೇ ಮೌಖಿಕವಾಗಿ ಹೇಳುವ ಅಂತ ಕ್ಯಾಂಟೀನಿನ ಬಳಿ ಕುಳಿತಿದ್ದ ನಿಮಗೆ (ಮಮಾ ಮತ್ತು ಬಿಡಾರಿಗೆ) ನಿಮ್ಮದೇ ಹಸ್ತಾಕ್ಷರಗಳಿದ್ದ ನಿಮ್ಮದೇ ಪತ್ರಗಳನ್ನು ತೋರಿಸಿದರೆ ’ಘೊಳ್’ ಎಂದು ನಕ್ಕಿಬಿಟ್ಟಿರಲ್ಲ. 
 
ಎಲ್ಲರ ಎದುರಿಗೆ ನನಗೆ ಎಂತಹ ಅವಮಾನ ಮಾಡಿಬಿಟ್ಟಿರಿ. ನನ್ನನ್ನು ’ಎಲ್ಲರ ಕೈಬರಹಗಳನ್ನು ಅನುಕರಿಸಿ ಬರೆಯಬಲ್ಲ ಸಾಮರ್ಥ್ಯವುಳ್ಳವ’ ಎಂಬ ಹೊಗಳಿಕೆಯ ಹೊದ್ದಿಕೆಯುಳ್ಳ ಬಯ್ಗುಳದಿಂದ ನನಗೆ ಶವರ್ ನೀಡಿದವರಲ್ಲವೆ ನೀವುಗಳು. ನೇರವಾಗಿ ಮಾತನಾಡಲಾಗದೆ ಈಗ ಈ ಪತ್ರವನ್ನು ನಿಮಗೆಲ್ಲ ಒಟ್ಟಿಗೆ ಬರೆಯುತ್ತಿದ್ದೇನೆ, ಹುಷಾರ್. ಪುಣ್ಯಕ್ಕೆ ಒಂದೆರೆಡು ದಿನದ ಮೊದಲಷ್ಟೇ ನನಗೆ ಬಿ.ಬಿ.ಎಂ (ಬದುಕಿನ ಬೇನೆಗೆ ಮದ್ದು) ಕ್ಷಣವುಂಟಾಗಿದ್ದರಿಂದ, ನಿಮ್ಮ ಹೊಗಳಿಕೆ ರೂಪದ ಅಣಕವನ್ನೆಲ್ಲವನ್ನೂ ವಿಷಕಂಠನಂತೆ ನುಂಗಿ, ಗಂಟಲಲ್ಲೇ ಸಸ್ಪೆಂಡ್ ಮಾಡಿಕೊಂಡಿದ್ದೇನೆ. ಈಗ ನನಗೆ ತಿಳಿಯಬೇಕಿರುವುದು, ನನ್ನ ಕೈಬರಹವನ್ನು ಅನುಕರಿಸಿದವರು ಯಾರು? ಸಿವಾ, ಈ ಕಡೆಯಿಂದ ನೀನೇ ಮಾತಾಡ್ತಿರೋದು. ಅಥವ ಅಲ್ಲಿರುವ ನಾನುವಿಗೆ ಇಲ್ಲಿರುವ ನೀನುವಿನ ನಮಸ್ಕಾರಗಳು  ಎಂದು ಬರೆದಾತ ಬಿಡಾನೋ, ಮಮಾನೋ ಅಥವ ಸೋಕುಮಾರಿಯೋ? ಜೊತೆಗೆ ನನ್ನನ್ನು ಒಳ್ಳೆಯ ಅನುಕರಣೆಕಾರನೆಂದು ಹೊಗಳುವ ಹಿಂದೆ, ’ಅಸಲಿತನವಿಲ್ಲದವ’ ಎಂದು ಅಣಕಿಸುತ್ತೀರ ಬೇರೆ!" ಎಂದಿತ್ತು ೧೯೮೮ರ ಅನೇಖನ ಬರವಣಿಗೆ.
(೩೬)
ಎಲ್ಲರೂ ಒಟ್ಟಾಗಿ, ಯಾರು ಕೀಬೋರ್ಡಿನ ಯಾವ ಕೀಯನ್ನು ಒತ್ತಿದರೋ ತಿಳಿಯದಂತೆ ಪಟಪಟನೆ ಕುಟ್ಟಿಹಾಕಿಬಿಟ್ಟೆವು, "ಎಲ್.ಓ.ಎ (ಲಾಫ್ ಔಟ್ ಲೌಡ್), ಓ.ಎಂ.ಜಿ (ಓಹ್ ಮೈ ಗಾಡಿ)" ಇತ್ಯಾದಿಯಾಗಿ. ಈಗ ೧೯೮೮ರ ಅನೇಖ ’ಎಫ್.ಯು.ಎಂ’ ಅಂತ ಮೆಸೇಜ್ ಮಾಡ್ತಾನೆ ನೋಡ್ತಿರಿ ಎಂದ ಮಮಾ ಪೋಲಿಯಾಗಿ. ಏನೋ ಪೋಲಿ ಅರ್ಥವೇ ಹೌದು ಎಂದುಕೊಂಡರೂ ಅದೇನೆಂದು ಸುಲಭಕ್ಕೆ ನನಗೆ ಬಿಡಿಸಲಾಗಲಿಲ್ಲ. ಅಲ್ಲಿಯೇ ’ಪ್ರಶಾಂತಿ ನಿಲ್ಲಯ್ಯ’ದ ಮರದ ಕೆಳಗೆ ಕುಳಿತಿದ್ದ ನನ್ನ ಶಿಷ್ಯನೊಬ್ಬ ಸಂಕೋಚದಿಂದ ಆದರೆ ಆತುರದಿಂದ ಅದನ್ನು ಮುಗ್ಧವಾಗಿ ವಿವರಿಸಿದ್ದ, "ಎಫ್.ಯು.ಎಂ ಅಂದ್ರೆ ಫಕ್ ಯು ಮ್ಯಾನ್ ಅಂತ ಮೇಡಂ".
 
     "ಮಮಾ, ೧೯೮೮ರ ಅನೇಖ ಹಾಗೆ ಬರೆದರೆ ಅದು ನಿನಗೆ, ಗಂಡಸಿಗೆ. ನನ್ನಂತ ಹೆಣ್ಣಿಗಲ್ಲ ಅಂತ ಗೊತ್ತಾಯ್ತಾ? ಏಕೆಂದರೆ ಆತ ’ಮ್ಯಾನ್’ ಎಂದಿದ್ದಾನೆಯೇ ಹೊರತು ’ವುಮನ್’ ಎಂದಿಲ್ಲ ನೋಡು. ಹಾಗೇನಾದ್ರೂ ಅವ್ನು ಬರೆದದ್ದನ್ನು ಆತ ನಿಜವಾದ ಅರ್ಥದಲ್ಲಿ ಬರೆದಿದ್ದಲ್ಲಿ ಆತ ಈಗಾಗಲೇ ’ಗೇ’ಆಗಿ ಎರಡು ದಶಕವಾಯ್ತು ಎಂದೂ ಅರ್ಥ" ಎಂದು ಮಮಾನಿಗೆ ತಿರುಗೇಟು ನೀಡಿದೆ. ಅಲ್ಲಿಯೇ ಇದ್ದ ೨೦೧೧ರ ಅಪರೂಪದ ಅತಿಥಿ ಅನೇಖನ ಮುಖ ಕೆಂಪಗಾಗಿತ್ತು. 
 
ಎಲ್ಲರೂ ನಿರೀಕ್ಷಿಸುತ್ತಿದ್ದೆವು, ಅನೇಖನಿಂದ ಮರುಟಿಪ್ಪಣಿ ಬಂದೀತೆಂದು. ನಾಲ್ಕಾರು ನಿಮಿಷಗಳ ನಂತರ ಮೆಸೇಜು ಬಂದಿತು. 
 
     ೧೯೮೮ರ ಅನೇಖ ಬರೆದಿದ್ದ, "ಬಿಡಾ, ಮಮಾ ಮತ್ತು ಕಲಾ.ಕೆ (ಅನೇಖನನ್ನು ಅನೇಖನೇ ಹೇಗೆ ಮಾತನಾಡಿಸಿಯಾನು ಹೇಳಿ?), ನಿಮ್ಮ ತರಲೆಯನ್ನು ಜೀರ್ಣಿಸಿಕೊಳ್ಳುವ ತಾಕತ್ತು ನನಗಿದೆ. ನಮ್ಮಗಳ ಈ ವಿಚಿತ್ರ ಪತ್ರವ್ಯವಹಾರ ಆರಂಭವಾದಂದಿನಿಂದ ಇಂದಿನವರೆಗೂ ನಾನು ಗಮನಿಸದಿದ್ದ ಒಂದು ವಿಶೇಷ ನಡೆದಿದೆ. ಪ್ರತಿದಿನ ತರಗತಿಯಲ್ಲಿ ಭೇಟಿ ಮಾಡುವ ಕ್ಲಾಸ್‌ಮೆಟ್‌ಗಳೇ ನನಗೆ ಪತ್ರ ಬರೆಯುವುದೆಂದರೇನು, ಪತ್ರಗಳನ್ನು ಕುರಿತು ಮಾತನಾಡಲು ನೀವುಗಳು ನಿರಾಕರಿಸುವುದೆಂದರೇನು, ಅದೂ ಸರಿಯಾಗಿ ದೈನಂದಿನ ನಿಯತಕಾಲಿಕೆಯನ್ನೂ ಓದದ ನೀವುಗಳು ಮೊದಲಿಗೆ ಪತ್ರ ಬರೆವುದೆಂದರೇನು, ಅಕಟಕಟಾ. ಸದ್ಯದ ವಿಶೇಷವೆಂದರೆ, ನೀವುಗಳು ಪ್ರತಿನಿತ್ಯ ಬರೆದಿದ್ದ ಎಲ್ಲ ಇನ್‌ಲ್ಯಾಂಡ್ ಲೆಟರಿನ ಎಲ್ಲ ಅಕ್ಷರಗಳೂ ಇಪ್ಪತ್ತನಾಲ್ಕು ಗಂಟೆಗಳೊಳಗಾಗಿ ಮಾಯವಾಗುತ್ತಿವೆ. ಯಾವ ಪೆನ್ನು ಅಥವ ಇಂಕ್ ಬಳಸಿದಿರಿ ತಾವುಗಳು? ದಯಮಾಡಿ ತಿಳಿಸಿ. ತದನಂತರ ಹೇಗೆಂದರೆ, ಆಗ ತಾನೇ ಅಂಗಡಿಯಿಂದ ತಾಜಾ ಇನ್‌ಲ್ಯಾಂಡ್ ಲೆಟರನ್ನು ತಂದಂತೆ ಫ್ರೆಷ್ ಆಗಿಬಿಟ್ಟಿರುತ್ತವೆ ನೀವು ಬರೆದ ಪತ್ರಗಳು. ಆತ್ಮೀಯ ಗೆಳೆಯರು ಪರಸ್ಪರ ಮಾತುಕತೆ ತೊರೆದಂತೆ! ಪೋಸ್ಟ್‌ಮ್ಯಾನ್ ಹಾಕಿದ ಸ್ಟಾಂಪ್ ಕೂಡ ಮಾಯವಾಗಿಬಿಡುತ್ತಿದೆ. ಪರೀಕ್ಷಿಸಲೇ ಬೇಕೆಂದು ಅಂತಹ ಒಂದು ಅಳಿಸಿಹೋದ ಲಿಪಿಯ ಕಾಗದದಲ್ಲಿ ಮತ್ತೆ ನನಗೆ ನಾನೇ ಪತ್ರ ಬರೆದುಕೊಂಡು ಚಿತ್ರಕಲಾ ಪರಿಷತ್ತಿನ ಮರಕ್ಕೆ ಕಟ್ಟಿದ್ದ ಪೋಸ್ಟ್‌ಡಬ್ಬಾದ ಒಳಕ್ಕೆ ಪತ್ರ ಹಾಕಿದೆ. ಮಾರನೇ ದಿನ ಪೋಸ್ಟ್‌ಮ್ಯಾನ್ ಅದೇ ಕಾಗದಕ್ಕೆ ಫ್ರೆಶ್ ಆಗಿ ಸೀಲು ಒತ್ತಿ, ನನ್ನ ವಿಳಾಸಕ್ಕೆ ಅಂದರೆ ನನಗೆ ತಂದುಕೊಟ್ಟುಬಿಟ್ಟಿದ್ದ!"
 
ಈ ಫೇಸ್‌ಬುಕ್ ಮೆಸೇಜು ಓದಿ ಮಮಾ, ಬಿಡಾ, ನಾನು, ಅನೇಖ ಕೆಲವುಕ್ಷಣ ಮೌನವಾದೆವು. ಯಾವುದನ್ನು ನಂಬುವುದು, ಬಿಡುವುದು ಎಂಬುದೆರೆಡರ ನಡುವೆ ಇನ್ನೇನೂ ವ್ಯತ್ಯಾಸವಿನ್ನೇನೂ ಇಲ್ಲದಂತಾಗಿ ಹೋಗಿತ್ತು. ಬುದ್ಧನಿಗೆ ಮೋಕ್ಷ ದೊರಕಿದ ದಿನದ ಮುಂಚಿನ ದಿನ, ಮೋಸಸನಿಗೆ ಬೆಟ್ಟದಲ್ಲಿ ಹತ್ತು ಒಡಂಬಡಿಕೆಗಳು ದೊರಕುವ ಮುನ್ನಾ ದಿನ, ೨೦೧೧ರ ವರ್ಲ್ಡ್ ಕಪ್ ಫೈನಲ್ಸ್‌ನಲ್ಲಿ ಕೊನೆಯ ಬಾಲ್ ಸಿಕ್ಸ್ ಎತ್ತುವ ಮುನ್ನ ದೋನಿ ಇದ್ದ ಸ್ಥಿತಿಯಲ್ಲಿದ್ದೆವು ನಾವೆಲ್ಲ. ಆದರೂ ಸಾವರಿಸಿಕೊಂಡು ತುಂಟತನದಿಂದ ಒಂದು ಅಂತಿಮ ಪ್ರಶ್ನೆ ಕೇಳಿದ್ದೆ ನಾನು:"ಅನೇಖ, ನೀನು ಬರೆದು ಅಂಚೆಗೆ ಹಾಕಿ ನೀನೇ ವಾಪಸ್ ಪಡೆದ ಪತ್ರದಲ್ಲಿ ಏನು ಬರೆದಿದ್ದೆ?" ಎಂದು ಟಪ್ ಮಾಡಿ, ಪ್ರೆಸ್ ಬಟನ್ ಒತ್ತಿದೆ. ಅದೇ ಪ್ರಶ್ನೆಯನ್ನು ಪಕ್ಕದಲ್ಲೇ ಇದ್ದ ೨೦೧೧ರ ಅನೇಖನನ್ನು ಕೇಳಿದೆ.
 
ಒಂದು, ಎರಡು, ಮೂರು, ನಾಲ್ಕು, ಐದು ನಿಮಿಷಗಳು. ಅಂದರೆ ಪತ್ರ ತಲುಪಿ ಸುಮಾರು ಐದು ದಿನವಾಗಿತ್ತು ಅನೇಖನಿಗೆ. "ನಾನು ಬರೆಯುತ್ತಿರುವ ಈ ನೋಟನ್ನು ನಾನೇ ಆದ ನೀನು ಓದುವುದು ಒಂದು ನಾಲಾಯಕ್ ಕೆಲಸವೇ ಸರಿ. ನಾನು ಬರೆದುದನ್ನು ನಾನೇ ಹೇಗೆ ಓದಲು ಸಾಧ್ಯ? ಓದುವುದೆಂದರೆ, ಓದುತ್ತಿರುವುದನ್ನು ಈ ಮೊದಲೇ, ಭೂತದಲ್ಲೇ ಯಾರೋ ಬರೆದಿರಬೇಕು ಮತ್ತು ಬರೆಯುವುದೆಂದರೆ, "ಮುಂದೊಮ್ಮೆ, ಯಾವಾಗಲೂ ಭವಿಷ್ಯದಲ್ಲಿಯೇ ಓದುವವರು ದೊರಕುತ್ತಾರೆಂಬ ವಿಶ್ವಾಸಪೂರ್ಣ ನಿರೀಕ್ಷೆ". ಈ ಮೆಸೇಜನ್ನು ಜೋರಾಗಿ ಬಿಡಾ ಮತ್ತು ಮಮಾನಿಗೆ ನಾನು ಓದಿ ಹೇಳುತ್ತಿರುವಾಗ, ವಾಕ್ಯದ ಕೊನೆಯ ಭಾಗವನ್ನು, ಮೆಸೇಜು ನೋಡದೆಯೂ ಜೋರಾಗಿ ಬಾಯಿಪಾಠ ಮಾಡಿದಂತೆ ನನ್ನೊಂದಿಗೆ ದನಿಗೂಡಿಸಿದ್ದು ನನ್ನ ಪಕ್ಕದಲ್ಲಿದ್ದ ನಲ್ವತ್ತರ ಮಧ್ಯಭಾಗದಲ್ಲಿದ್ದ ಅನೇಖ. ನಾವೆಲ್ಲರೂ ಒಂದೇ ಓರಗೆಯವರು. ಡೆರಿಡನ ’ಮೀನಿಂಗ್ ಅಂಡ್ ರೆಪ್ರಸೆಂಟೇಷನ್’ ಲೇಖನ ನೆನಪಾಯಿತು. ಕಣ್ರೆಪ್ಪೆ ಮಿಟುಕಿಸುವ ಮುನ್ನ ನಮ್ಮೊಡನೆ ನಾವೇ ಸಂವಹಿಸಿಬಿಟ್ಟಿರುತ್ತೇವೆ. ಮತ್ತು ಅದು ಸಂವಹನವಾಗಿರುವುದಿಲ್ಲ. ಏಕೆಂದರೆ ಬರವಣಿಗೆ-ನಂತರ-ಓದಿನಂತೆ ಮೊದಲು ನಾವು ಸಂವಹಿಸಬೇಕು, ಅದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಬೇಕು. ಮತ್ತು ಎಲ್ಲಕ್ಕೂ ಹೆಚ್ಚಾಗಿ ಬರೆದ ’ನಂತರ’ ಓದಬೇಕು, ಒಬ್ಬರು ಸಂವಹಿಸಿದ್ದು ’ಆದ ಮೇಲೆ’ಯಷ್ಟೇ ಮತ್ತೊಬ್ಬರು ಪ್ರತಿಕ್ರಿಯಿಸಬೇಕು. ಇದು ಡೆರಿಡನ ವಾದ. ಇದನ್ನು ತಿರುವು ಮರುವು ಮಾಡಿದರೆ ಕಾಲ ಹಿಮ್ಮುಖವಾಗಬಹುದೇನೋ. ಅಥವ ಹಾಗೆ ತಿರುಗಿದಲ್ಲಿ ಮೊದಲು ಸಂವಹನ ಆಮೇಲೆ ಅದರ ಪ್ರಯತ್ನ ನಡೆಯುತ್ತದೆ! ಇಂತಹ ಅಮೂರ್ತ ಚಿಂತನೆಯ ಸೊಬಗನ್ನು ಸಾಮಾನ್ಯ ಓದುಗರು ನಿರಾಕರಿಸಲು ಕಾರಣವೂ ಹೊಳೆಯಿತು. ಅಂತಹ ಚಿಂತನೆಯನ್ನು ಜನ ಒಪ್ಪಿಬಿಟ್ಟರೆ, ಅವರುಗಳು ಅದರಂತೆ ನಡೆಯತೊಡಗುತ್ತಾರೆ, ಜಗತ್ತು ಹೆಚ್ಚು ಹೆಚ್ಚು ಸಂಕೀರ್ಣವಾಗಿಬಿಡುತ್ತದೆ. ನಿಗೂಢತೆಗಳನ್ನು ಇತಿಮಿತಿಗಳ ವಲಯದ ಒಳಗಿನಿಂದ ಮಾತ್ರ ಸ್ವೀಕರಿಸಲು ಜನ ಸಿದ್ಧರಿರುತ್ತಾರೆ. ಇತ್ಯಾದಿ, ಇತ್ಯಾದಿ.
 
ನಮ್ಮೆಲ್ಲರ ಮಿದುಳೇ ಆಂಟಿ-ಕ್ಲಾಕ್‌ವೈಸ್ ತಿರುಗತೊಡಗಿದಂತೆನಿಸಿತ್ತು. "ಅನೇಖ! ಎಂದ," ಮಮಾ.
"ಏನು?"
"೧೯೮೮ರ ನೀನು ೨೦೧೧ರ ನಿನಗೆ ಸಂವಹಿಸಿದನೆಂದರೆ, ೮೮ ಮೊದಲು, ೧೧ ನಂತರ ಅಲ್ಲವೆ?"
"ಅಲ್ಲ. ಎರಡೂ ಏಕಕಾಲಕ್ಕೆ ಯಾಕಾಗಿರಬಾರದು," ಎಂದ ಅಪರೂಪಕ್ಕೆ ಸಿಕ್ಕಿದ್ದ ಅನೇಖ, ಈ ಎಲ್ಲ ಇರಿಸುಮುರಿಸುಗಳ ಕೇಂದ್ರವು ತನ್ನ ಭೂತವೇ ಎಂದರಿತು ಅಷ್ಟೇ ಗೊಂದಲದಿಂದ ಹೊರಗೋಗಿ, ದಡದಡ ಮೆಟ್ಟಿಲಿಳಿದು ಹೊರಟುಹೋದ. 
"ಮೊದಲ ಬಾರಿಗೆ ಅನೇಖ ಬರೆದ ಪತ್ರವು ನಮ್ಮ ಫೇಸ್‌ಬುಕ್ಕಿನ ಅಕೌಂಟಿಗೆ ಬರಲಿಲ್ಲ ಏಕೆ ಗೊತ್ತೆ?" ಎಂದ ಬಿಡಾ.
"ಏಕೆಂದರೆ ಆತ ತನಗೆ ತಾನೇ ಬರೆದುಕೊಂಡಿದ್ದ ಪತ್ರವದು. ನಾನು ನನ್ನೊಡನೆ ಸಂವಹಿಸುವಾಗ ಕಾಲ ಸ್ಥಭ್ದವಾಗಿರುತ್ತದೆ, ಕಾಲ ವ್ಯತ್ಯಾಸವಾಗದು ಮತ್ತು ಕಾಲವೆಂಬ ಕಲ್ಪನೆಯೇ ಇರುವುದಿಲ್ಲ," ಎಂದು ತೀರ್ಮಾನಿಸಿದ ಮಮಾ.
"ಹಾಗಾದರೆ ಈಗಷ್ಟೇ ನಮ್ಮೊಂದಿಗಿರುವ ಅನೇಖನಿಗೆ ಯಾಕೆ ೮೮ರಲ್ಲಿ ಆತನ ಸುತ್ತ ನಡೆದಿರಬಹುದಾದ ಘಟನೆಗಳು ನೆನಪಿಲ್ಲವೆ?" ಎಂದ ಬಿಡಾ.
"ಇಲ್ಲವೆಂದವರ್ಯಾರು. ೮೮ರಿಂದ ೨೦೧೧ಕ್ಕೆ ಬಂದಿಲ್ಲ ನಾವ್ಗಳು. ಅಲ್ಲಿ ಮತ್ತು ಇಲ್ಲಿ, ಆಗ ಮತ್ತು ಈಗ ಒಮ್ಮೆಲೆ ನಾವುಗಳಿದ್ದೇವೆ ಎಂದರೆ ನಂಬುವೆಯ? ಮಲ್ಟಿವರ್ಸ್ ಅಂದರೆ ’ವಿಭಿನ್ನ ಅನಂತ ವಿಶ್ವ’ಗಳ ಪರಿಕಲ್ಪನೆಯನ್ನು ಕೇಳಿದ್ದೀಯ?" ಎಂದಿದ್ದೆ, ನಾನು ಮಾತನಾಡುತ್ತಿರುವುದನ್ನು ನಾನೇ ನಂಬದಂತೆ. ಅನುಮಾನವನ್ನು ಕೇಂದ್ರವಾಗಿಸಿಕೊಂಡ ತರ್ಕಕ್ಕೆ ಅವಿಶ್ವಾಸವೇ ತೀರ್ಮಾನ, ಅಲ್ಲವೆ? //
()

Comments