e- ಕಾಲ
ಕವನ
೨೦೦೫ರಲ್ಲಿ ನಮ್ಮ ಬ್ಯಾಂಕುಗಳು ಕಂಪ್ಯೂಟರೀಕರಣವಾದ ಸಮಯದಲ್ಲಿ ದೇಶದಾದ್ಯಂತ ಹಲವಾರು ಬದಲಾವಣೆಗಳು ಆಗಿದ್ದವು/ಆಗುತ್ತಲಿದ್ದವು. ಆಗ ನನಗನಿಸಿದ್ದನ್ನು ಕವನ ರೂಪದಲ್ಲಿ ಬರೆದಿದ್ದೆ. ಈಗ ಸಂಪದದಲ್ಲಿ ಮಿತ್ರರೊಂದಿಗೆ ಹಂಚಿಕೊಂಡಿದ್ದೇನೆ.
e- ಕಾಲ
ಇದೋ ಈ ಕಾಲವಿದೆಯಲ್ಲ
ಇದು e -ಕಾಲವಾಗಿದೆಯಲ್ಲ
ಗಣಕನಿವನಿಗೆ ಗಣಪನಂತೆ
ಅಘ್ರ ಪೂಜೆ ನಡೆಯುವುದಂತೆ
ವ್ಯಾಪಾರ ವ್ಯವಹಾರ ಲಾಭಕ್ಕೆ
ಲೆಕ್ಕಕ್ಕೆ ಲಾಟರಿಗೆ ಲೋಭಕ್ಕೆ
ಈ ಅಂಚೆ, ಆ ಹರಟೆಗೆ ಗಣಕ
ನಿಜಕ್ಕೂ ನವ ಯುಗದ ಜನಕ
ಶನಿಯನು ಬಿಡದ ರಾಕೇಟು
ಹೃದಯವೇ ಇಲ್ಲದ ರೋಬೋಟು
ಮಾಹಿತಿಗೆಷ್ಟೋ ವೆಬ್ ಸೈಟು
ನಿಲುಕದ ಕೈಗೂ ರಿಮೋಟು
ಅಂಗೈಯೊಳಗೆ ಮಾತಿನ ಮಲ್ಲಿ
ಬ್ಯಾಂಕಿನ ಹೊರಗೇ ದುಡ್ಡಿನ ನಲ್ಲಿ
ಕುಗ್ಗುತಿದ್ದರು ಅಂತರ್ಜಲ
ಹಿಗ್ಗುತಲಿದೆ ಅಂತರ್ಜಾಲ
ಕಾಣೆಯಾಯಿತೆ ಚನ್ನೇಮಣೆ
ಮಕ್ಕಳಿಗಾಡಲು ಕೀಲಿಮಣೆ
ಮಡಿವಂತಿಕೆಯಾ ಬಿಡಿ ಬಿಡಿ
ದೇವರ ಪೂಜೆಗೂ ಬಂದಿತೋ ಸಿ.ಡಿ.
ಐಟಿ ಬಿಟಿ ಪಾರ್ಕುಗಳು
ಉದ್ಯಾನ ನಗರಿಯ ಹಿರಿಮೆಗಳು
ಕನಸಿನ ಲೋಖದ ಅನಿಮೇಷನ್
ಹೆಮ್ಮೆಯ ಸಾಧನೆ ಟೆಲಿಮೆಡಿಸಿನ್
ಇಪ್ಪತ್ತೊಂದನೆ ಶತಮಾನ
ಕಂಪ್ಯೂಟರಣ್ಣನೆ ಯಜಮಾನ
ಮುವತ್ತಕ್ಕೇ ಟೆನಶನ್ನು
ನಲವತ್ತಕ್ಕೇ ಪೆನಶನ್ನು
ಬದುಕಿನ ಮಜಲು ಬದಲಾಗುತಿದೆ
ಕಾಲವು ಮುನ್ನಡೆ ಸಾಧಿಸಿದೆ
ಸುಮ್ಮನೆ ಒಪ್ಪಿಕೋ ಓ ಮನುಜ
ಬದಲಾವಣೆ ಇದು ಅತಿ ಸಹಜ
*****