ಡಿ.೧೨: ಹುಬ್ಬಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ

ಡಿ.೧೨: ಹುಬ್ಬಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಹುಬ್ಬಳ್ಳಿಯ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಆಂಡ್ ರಿಸರ್ಚ್ ಸಹಭಾಗಿತ್ವದಲ್ಲಿ ಬರುವ ಶುಕ್ರವಾರ, ೧೨ ರಂದು ಹುಬ್ಬಳ್ಳಿಯಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕಾರ್ಯಾಗಾರ ಹಮ್ಮಿಕೊಂಡಿದೆ.

ಐ.ಎಂ.ಸಿ.ಆರ್ ಮಹಾವಿದ್ಯಾಲಯದ ಸಭಾ ಭವನದಲ್ಲಿ ಬೆಳಿಗ್ಗೆ ೧೦ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಐ.ಬಿ.ಎಂ.ಆರ್. ಬ್ಯುಸಿನೆಸ್ ಮೆನೇಜಮೆಂಟ್ ಆಂಡ್ ರಿಸರ್ಚ್ ಡೀನ್ ಪ್ರೊ. ಪಿ.ಎನ್.ಖಟಾವಕರ್, ಬ್ಯಾಂಕಿಂಗ್ ತಜ್ಞ, ಅಭಿವೃದ್ಧಿ ಬರಹಗಾರ ಅಡ್ಡೂರು ಕೃಷ್ಣರಾವ್, ಅಭಿವೃದ್ಧಿ ಬರಹಗಾರ ಡಾ.ಶಿವರಾಂ ಪೈಲೂರ್, ಕೃಷಿ ಮಾಧ್ಯಮ ಕೇಂದ್ರದ ನಿರ್ದೇಶಕಿ ಸು.ಶ್ರೀ. ಅನಿತಾ ಪೈಲೂರು, ದೇಶಪಾಂಡೆ ಪ್ರತಿಷ್ಠಾನದ ಕಾರ್ಯಕ್ರಮ ನಿರ್ದೇಶಕ ನವೀನ್ ಝಾ, ಐ.ಎಂ.ಸಿ.ಆರ್ ಪ್ರಾಚಾರ್ಯೆ ಡಾ. ನಯನಾ ಗಂಗಾಧರ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಬಳಿಕ ನಡೆಯುವ ಕಾರ್ಯಾಗಾರದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಮಹತ್ವ ಮತ್ತು ಸ್ವರೂಪ, ಕ್ಷೇತ್ರ ಭೇಟಿಯ ಕ್ರಮ, ಬರವಣಿಗೆಯ ತಂತ್ರಗಾರಿಕೆ, ಬದ್ಧತೆ ಮುಂತಾದ ವಿಷಯಗಳ ಕುರಿತು ಅಡ್ಡೂರು ಕೃಷ್ಣರಾವ್ ಹಾಗು ಶಿವರಾಂ ಪೈಲೂರು ಉಪನ್ಯಾಸ ನೀಡುವರು.

ಕನ್ನಡದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಬೆಳವಣಿಗೆಗಾಗಿ ಕೃಷಿ ಮಾಧ್ಯಮ ಕೇಂದ್ರ ಕಳೆದ ಎಂಟು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಕುರಿತು ಕೇಂದ್ರ ನಡೆಸುತ್ತಿರುವ ಒಂದು ವರ್ಷದ ಅವಧಿಯ ಅಂಚೆ ತೆರಪಿನ ತರಬೇತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ೫ ತಂಡಗಳಲ್ಲಿ ಯಶಸ್ವಿಯಾಗಿ ತರಬೇತಿ ಪೂರೈಸಿದ ೬೫ ಮಂದಿಯನ್ನು ‘ಕಾಮ್ ಫೆಲೋ’ ಗಳೆಂದು ಪರಿಗಣಿಸಲಾಗಿದೆ. ಕೃಷಿ ಲೇಖನಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ರಾಜ್ಯ ಮಟ್ಟದ ಪ್ರಶಸ್ತಿಯನ್ನೂ ನೀಡುತ್ತಿದೆ.

ಇದೀಗ ಕೃಷಿ ಮಾಧ್ಯಮ ಕೇಂದ್ರ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ನೆರವಿನೊಂದಿಗೆ ತನ್ನ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲ ಕಾರ್ಯಕ್ರಮ ಐ.ಎಂ.ಸಿ.ಆರ್ ನಲ್ಲಿ ಏರ್ಪಾಡಾಗಿದೆ.

ಕೃಷಿ ರಂಗ ಎದುರಿಸುತ್ತಿರುವ ಸಮಸ್ಯೆಗಳು, ಈ ವಲಯದಲ್ಲಿನ ಹೊಸ ಬೆಳವಣಿಗೆಗಳ ಸಾಧಕ-ಬಾಧಕಗಳು, ರೈತರಲ್ಲಿ ಭರವಸೆ ಮೂಡಿಸುವ ಯಶೋಗಾಥೆಗಳು, ಇತರರಿಗೆ ಪಾಠವಾಗಬಲ್ಲ ಸೋಲಿನ ಕಥೆಗಳು ಮುಂತಾದ ವಿಷಯಗಳ ಕುರಿತು ಆಳ ನೋಟವಿರುವ ಬರವಣಿಗೆ ಇಂದಿನ ಅಗತ್ಯವಾಗಿದೆ. ಇದಕ್ಕೆ ಪೂರಕವಾಗಿ ಕೃಷಿ ಮಾಧ್ಯಮ ಕೇಂದ್ರ ಕಾರ್ಯಾಗಾರ ಹಮ್ಮಿಕೊಂಡಿದೆ. ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾದದ್ದು ಎಂಬ ಆಶಯದೊಂದಿಗೆ ಯುವ ಬರಹಗಾರರಿಗೆ ಸೂಕ್ತ ತರಬೇತಿ ನೀಡುವುದು ಕಾರ್ಯಾಗಾರದ ಉದ್ದೇಶ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು..ಸು.ಶ್ರೀ.ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ, ೧೧೯, ೧ನೇ ಮುಖ್ಯ ರಸ್ತೆ, ೪ನೇ ಅಡ್ಡ ರಸ್ತೆ, ನಾರಾಯಣಪುರ, ಧಾರವಾಡ- ೫೮೦೦೦೮. ಅಥವಾ www.farmmedia.org or caam@sancharnet.in.

ನಾನು ಕೂಡ ಪರ್ಯಾಯ ಕೃಷಿ ಮಾಧ್ಯಮ ಕೇಂದ್ರದ ‘ಕಾಮ್ ಫೆಲೋ’ ಎಂಬುದು ನನಗೆ ಅಭಿಮಾನದ ಸಂಗತಿ. ಸಂಘಟಕರ ಪರವಾಗಿ ಎಲ್ಲರಿಗೂ ಈ ಕಾರ್ಯಾಗಾರಕ್ಕೆ ಮುಕ್ತ ಸ್ವಾಗತ ನೀಡುವುದು ನನ್ನ ಕರ್ತವ್ಯ. ಬನ್ನಿ, ಪಾಲ್ಗೊಳ್ಳಿ. ಕಾರ್ಯಾಗಾರ ಯಶಸ್ವಿಯಾಗಿಸಿ.