`ತಿಂಗಳು' ಬೆಳಕಿನಲ್ಲಿ ಜಿ.ಪಿ.ಬಸವರಾಜು!

`ತಿಂಗಳು' ಬೆಳಕಿನಲ್ಲಿ ಜಿ.ಪಿ.ಬಸವರಾಜು!

 

 

`ಮಯೂರ'ಕ್ಕೆ ಹೊಸ ರೂಪ, ಘನತೆ ತಂದುಕೊಟ್ಟು ಸಾಹಿತ್ಯ ಪತ್ರಿಕೆಗಳ ಉತ್ತಮಾಂಶಗಳನ್ನೆಲ್ಲ ಮೈಗೂಡಿಸಿಕೊಂಡೂ ಜನಪ್ರಿಯ ಮಾಸಿಕವೊಂದನ್ನು ನಡೆಸಿದ, ಹೊಸ ಪರಂಪರೆಯನ್ನು ಸೃಷ್ಟಿಸಿದ ಜಿ.ಪಿ.ಬಸವರಾಜು ಈಗ ಹೊಸ ಪತ್ರಿಕೆಯೊಂದರ ಕೊಡುಗೆಯೊಂದಿಗೆ ನಿಂತಿದ್ದಾರೆ. ಕನ್ನಡದಲ್ಲಿ ಸಾಹಿತ್ಯವನ್ನೇ ಜೀವಾಳವಾಗಿರಿಸಿಕೊಂಡ ಗುಣಮಟ್ಟದ ಒಳ್ಳೆಯ ಮಾಸ ಪತ್ರಿಕೆಯ ಕೊರತೆಯನ್ನು ನೀಗಿ `ಮಯೂರ'ವನ್ನು ಅನನ್ಯವಾಗಿಸಿದ ಜಿಪಿ, ಒಳ್ಳೆಯ ಸಾಹಿತ್ಯದ ಓದನ್ನು ಪ್ರತಿ ತಿಂಗಳೂ ನಮಗೆಲ್ಲ ದಕ್ಕಿಸಿದ್ದರು. ಅದು ಮಾರ್ಕೆಟ್ ಆಕರ್ಷಣೆಗಳಿಗೆ ತಕ್ಕಂತೆ ಬದಲಾಗದಂತೆ ಕೂಡ ಎಚ್ಚರವಹಿಸಿದ್ದರು. `ಮಯೂರ' ನೋಡಿದರೆ ನಮಗೆಲ್ಲ ಜಯಂತ ಕಾಯ್ಕಿಣಿಯವರ `ಭಾವನಾ' ನೆನಪಾಗುವಂತಿತ್ತು. ಇವತ್ತು ಅದನ್ನು ಕನ್ನಡದ ಪ್ರಮುಖ ಕತೆಗಾರ ರಘುನಾಥ ಚ.ಹ. ಇನ್ನೂ ಒಂದು ಮಜಲು ಮೇಲೆ ಕೊಂಡೊಯ್ಯುತ್ತಿದ್ದಾರೆಂದರೆ ಜಿಪಿ ಅದಕ್ಕೆ ಪೂರ್ವಭಾವಿಯಾಗಿ ಸೃಜಿಸಿಕೊಟ್ಟ ನೆಲೆಗಟ್ಟು ಕೂಡಾ ಕಾರಣವೆನ್ನಬಹುದು.

`ತಿಂಗಳು' ಮಾಸ ಪತ್ರಿಕೆ ಜಿ ಪಿ ಬಸವರಾಜು ಅವರ ಸಂಪಾದಕತ್ವದಲ್ಲಿ ಮೈತಳೆಯಬಹುದಾದ ಬೆರಗಿಗೆ ಈಗ ನಾವೆಲ್ಲ ಕಾಯುವಂತಾಗಿದೆ! ಈ ಚಿತ್ರದಲ್ಲಿ ಚಂದಾದಾರರಾಗಲು ಅಗತ್ಯವಾದ ಫಾರಂ ಕೂಡಾ ಇದೆ. ಎಲ್ಲರೂ ನೂರಿಪ್ಪತ್ತು ರೂಪಾಯಿಯ ಚಂದಾ ನೀಡಿ ಜಿ.ಪಿ. ಬಸವರಾಜರ ಪತ್ರಿಕೆಯನ್ನು ಬೆಂಬಲಿಸಿದರೆ ಈ ಪತ್ರಿಕೆ `ತಿಂಗಳು' - ತಿಂಗಳು ನಮ್ಮನ್ನು ಶ್ರೀಮಂತಗೊಳಿಸುವುದರಲ್ಲಿ ಅನುಮಾನವಿಲ್ಲ!

ಚಂದಾ ಕಳುಹಿಸಬೇಕಾದ ವಿಳಾಸ:

ಅಭಿರುಚಿ ಪ್ರಕಾಶನ ನಂ.386, 14ನೇ ಮುಖ್ಯ ರಸ್ತೆ

3ನೇ ಅಡ್ಡ ರಸ್ತೆ, ಸರಸ್ವತೀಪುರ ಮೈಸೂರು -570 009

ಸಂಪರ್ಕ: 9980560013, 9448608926