ಸೀಮಾ ಶುಲ್ಕ ಕಚೇರಿಯಲ್ಲಿ ಕನ್ನಡದ ಕಲರವ‌

ಸೀಮಾ ಶುಲ್ಕ ಕಚೇರಿಯಲ್ಲಿ ಕನ್ನಡದ ಕಲರವ‌

ಮಂಗಳೂರಿನ ಸೀಮಾ ಶುಲ್ಕ ಕಚೇರಿಯಲ್ಲಿ ಈ ವರ್ಷ ಕನ್ನಡ ರಾಜ್ಯೋತ್ಸವದ ಆಚರಣೆಗೆ ನಾಂದಿ ಹಾಡಲಾಯಿತು.ಈ ಸಂದರ್ಭದಲ್ಲಿ ನೌಕರರ ಮನೋರಂಜನಾ ಸಂಘದ ವತಿಯಿಂದ ವಿವಿಧ ಸ್ಪರ್ಧೆಗಳು ನಡೆದವು.ವಿಜೇತರಿಗೆ ಬಹುಮಾನಗಳನ್ನು ತಾ.೩೦-೧೧-೧೧ರಂದು ಸರಳ ಸಮಾರಂಭವೊಂದರಲ್ಲಿ ವಿತರಿಸಲಾಯಿತು.

ಮಂಗಳೂರು ಆಕಾಶವಾಣಿಯ ಮುಖ್ಯ ಕಾರ್ಯನಿರ್ವಾಹಕ[ನಿರ್ದೇಶಕ]ರೂ ಹಿರಿಯ ಸಾಹಿತಿಗಳೂ ಆದ ಡಾ.ವಸಂತಕುಮಾರ ಪೆರ್ಲ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಾ'ಕನ್ನಡ ಪಂಚದ್ರಾವಿಡ ಭಾಷೆಗಳಲ್ಲಿ ಪ್ರಾಚೀನತೆಯಲ್ಲಿ ತಮಿಳಿನ ಬಳಿಕ ಬರುತ್ತದೆ,ವಿಪುಲ ಸಾಹಿತ್ಯ ಹೊಂದಿದೆ.ನಮ್ಮ ಮಕ್ಕಳೊಂದಿಗೆ ನಾವು ಕನ್ನಡದಲ್ಲೇ ಮಾತನಾಡಬೇಕು.ಕನ್ನಡವನ್ನು ಮರೆತರೆ ತಾಯಿಬೇರನ್ನು ಕಡಿದ ಗಿಡದ ಹಾಗೆ ಪರಂಪರೆಯಿಂದ ಕಳಚಿಕೊಂಡ ಹಾಗಾಗುತ್ತದೆ.ಪರಂಪರೆಯೊಂದಿಗೆ ಸಾತತ್ಯವನ್ನು ನಾವು ಉಳಿಸಿಕೊಳ್ಳಬೇಕಾಗಿದೆ'ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ  ಸೀಮಾಶುಲ್ಕ ಆಯುಕ್ತ  ಶ್ರೀ ಎಂ.ವಿ.ಎಸ್.ಚೌಧರಿಯವರು ಕರ್ನಾಟಕದ ವಿಶಿಷ್ಟ ಚಾರಿತ್ರಿಕ ಹಿನ್ನೆಲೆಯನ್ನು ನೆನಪಿಸಿ,ಕೊಂಡಾಡಿದರು.

ಮುಖ್ಯ ಅತಿಥಿಗಳಿಂದ ಬಹುಮಾನ ವಿತರಣೆ ನಡೆಯಿತು.ಗೋಪಾಲಕೃಷ್ಣ ಭಟ್ಟರಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಇಲಾಖೆಯ ಸಂಪರ್ಕ ವಿಭಾಗದ ಉಪನಿರ್ದೇಶಕರಾದ ಶ್ರೀ ಎಸ್,ಜಿ.ಸುರೇಶ್ ಅವರು ಪ್ರಾಸ್ತಾವಿಕವಾಗಿ ಎರಡು ಮಾತುಗಳನ್ನಾಡಿದರು.ಕಚೇರಿಯ ಸಿಬ್ಬಂದಿಗಳಿಂದ ಗೀತಗಾಯನ ನಡೆಯಿತು.ಮಹೇಶ ಭಟ್ ಅವರು ಕಾರ್ಯಕ್ರಮ ನಿರೂಪಿಸಿದರು.ಸಂಘದ ಕಾರ್ಯದರ್ಶಿ ಶ್ರೀ ಎಚ್.ಎನ್.ರವಿಶಂಕರ್ ಅವರು ವಂದಿಸಿದರು.

ಈ ಸಂದರ್ಭದಲ್ಲಿ ಕಚೇರಿಯಲ್ಲಿ ಕನ್ನಡೇತರ ಸಿಬ್ಬಂದಿಗಳಿಗೆ ಕನ್ನಡ ಕಲಿಸುವ ಕಾರ್ಯಾಗಾರವನ್ನೂ ನಡೆಸಲಾಯಿತು.