ಕವಿಹೃದಯದ ನಿಸಾರ್‌ಗೆ ಪದ್ಮಶ್ರೀಯ ಗರಿ!

ಕವಿಹೃದಯದ ನಿಸಾರ್‌ಗೆ ಪದ್ಮಶ್ರೀಯ ಗರಿ!

ಬರಹ

ನಿಸಾರ್ ಅಹಮದ್
ಅತ್ಯಂತ ಸಹೃದಯಿ ಕವಿ, ಮೃದುಮಾತಿನ, ಮಾನವೀಯ ಕಳಕಳಿಯ ಸಾಹಿತಿ ನಿಸಾರ್‌ ಅಹಮ್ಮದ್‌ಗೆ ಈ ಬಾರಿಯ ಪದ್ಮಶ್ರೀ ಒಲಿದಿದೆ. ಇದು ಕನ್ನಡಕ್ಕೆ, ಕನ್ನಡದ ಸಂಸ್ಕಾರಕ್ಕೆ ಸಂದ ಗೌರವ. ನಿಸಾರರ ಕವನಗಳಲ್ಲಿ ತುಂಬಿರುವ ಸಾತ್ವಿಕವಾದ ಸೌಂದರ್ಯಾನುಭೂತಿ , ಅಬ್ಬರದ ಸದ್ದುಗದ್ದಲವಿಲ್ಲದ ಶಬ್ದಸಂಸ್ಕೃತಿ, ನವಿರಾದ ಗೇಯತೆಯ ಸಾಕಾರ, ಹೃದಯವೈಶಾಲ್ಯ ಒಂದೊಂದೂ ಕನ್ನಡ ನಾಡಿನ ಸಾಮಾನ್ಯನ ಸಹಜ ಸಂಸ್ಕಾರವಾಗಿದೆ. ನಿಸಾರ್ ತಮ್ಮ ಸಾಹಿತ್ಯದಿಂದ ಮುಗಿಲಿಗೆ ಕೈಚಾಚಿದವರಲ್ಲ. ಅವರ ನಿಲುವು ನೀತಿಗಳೆಲ್ಲ ಸಾಮಾನ್ಯರಲ್ಲಿ ಸಾಮಾನ್ಯರನ್ನು ಮನಸ್ಸಿನಲ್ಲಿಟ್ಟುಕೊಂಡೇ ರೂಪುಗೊಳ್ಳುತ್ತ ಬಂದವು. ಹಾಗಾಗಿಯೇ ಅವರು ಸಾಮಾನ್ಯರ ಸಖ.

ಸರ್ ಸಿ.ವಿ.ರಾಮನ್ ತೀರಿಕೊಂಡಾಗ ಅದು ಹನುಮನನ್ನು ತಟ್ಟಲಿಲ್ಲವಲ್ಲ ಎಂಬ ಅವರ ನೋವಿಗೆ ಹಲವು ಆಯಾಮಗಳಿವೆ. ಹನುಮನ ಅಜ್ಞಾನ ತೊಲಗಬೇಕು, ಅವನಿಗೆ ಸಿ.ವಿ.ರಾಮನ್ ತಲುಪಬೇಕು, ರಿಲೆವಂಟ್ ಆಗಬೇಕು ಎಂದು ನಿಸಾರ್ ಬಯಸುತ್ತಾರೆ. ಅದೇ ಹೊತ್ತಿಗೆ ಪ್ರಸಿದ್ಧಿ, ಕೀರ್ತಿ ಕ್ರಮೇಣ ಯಶಸ್ವಿ ವ್ಯಕ್ತಿಗಳನ್ನು ದಂತಗೋಪುರದೊಳಗೆ ಬಂಧಿಯಾಗಿಸುತ್ತದೇನೋ ಎಂಬ ನೋವೂ ಅವರಲ್ಲಿದೆ. ಹೀಗೆ ಸದಾ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿಗೆ ಕೈಚಾಚುವಾಗಲೂ ಸಾಮಾನ್ಯರ ಬದುಕು ನಿತ್ಯೋತ್ಸವವಾಗಬೇಕೆನ್ನುವ ಅವರ ಆಶಯವೇ ಅವರಲ್ಲಿ ತುಂಬಿರುತ್ತದೆ.

ಆದರೆ ವಿಚಿತ್ರ ನೋಡಿ, ಅವರು ದೂರವಿದ್ದಷ್ಟೂ ದೊಡ್ಡ ದೊಡ್ಡ ಪ್ರಶಸ್ತಿ, ಗೌರವಗಳು ನಿಸಾರರನ್ನು ಎಲ್ಲೆಲ್ಲಿಂದಲೋ ಹುಡುಕಿಕೊಂಡು ಬರುತ್ತಿವೆ, ಬರುತ್ತಲೇ ಇವೆ! ಬರಲಿ, ನಿಸಾರ್‌ರ ಕೀರ್ತಿ, ಗೌರವದ ಪತಾಕೆ ಇನ್ನೂ ಇನ್ನೂ ಎತ್ತರೆತ್ತರಕ್ಕೇರಲಿ ಅದರಿಂದ ಕನ್ನಡದ ಪ್ರತಿಷ್ಠೆ ಹೆಚ್ಚಲಿ, ಕನ್ನಡಕ್ಕೆ ಅದು ನಿತ್ಯೋತ್ಸವದ ಸಂಭ್ರಮವನ್ನು ತರಲಿ ಎಂದು ಹಾರೈಸುತ್ತ [:http://sampada.net/podcasts/7/K-S-Nisar-Ahmed|ಸಂಪದದ ಆರ್ಕೈವ್‌ನಲ್ಲಿರುವ ನಿಸಾರರ ಸಂದರ್ಶನದ ಪಾಡ್ ಕಾಸ್ಟ್‌ನಿಂದ ಆಯ್ದ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳೋಣ]:

“ನಾವೆಲ್ಲ ಹೈಸ್ಕೂಲ್‌ವರೆಗೂ ಮಣೆಗಳ ಮೇಲೆ ಕೂತುಕೊಂಡು ಕನ್ನಡ ಮಾಧ್ಯಮದಲ್ಲೇ ಕಲಿತಿದ್ವಿ. ಅದೂ ಇಂಗ್ಲೀಷರು ರಾಜ್ಯಭಾರ ಮಾಡ್ತಿರುವಾಗ! ಈಗ ನಮ್ಮವರು ರಾಜ್ಯಭಾರ ಮಡುವಾಗ ಬರೀ ಇಂಗ್ಲೀಷ್ ಶಾಲೆಗಳು! ಅಷ್ಟೇ ಅಲ್ಲ, ನಾಚಿಕೆಗೇಡಿನ ವಿಷಯವೆಂದರೆ, ಇಂಗ್ಲೀಷ್ ಆಡಳಿತವಿರುವಾಗ 3-4 ಕನ್ನಡ ದಿನಪತ್ರಿಕೆಗಳಿದ್ದವು, ಒಂದೇ ಒಂದು ಇಂಗ್ಲೀಷ್ ಪತ್ರಿಕೆ ಇತ್ತು. ಇವತ್ತು ಇಂಗ್ಲೀಷ್‌ನಲ್ಲಿ 6-7 ಪತ್ರಿಕೆಗಳು ರಾಜಧಾನಿಯಿಂದ ಹೊರಡುತ್ತಿವೆ. ಬೀದಿಯ 25 ಮನೆಗಳಲ್ಲಿ 10 ಇಂಗ್ಲೀಷ್ ಪತ್ರಿಕೆ, ಒಂದು ಕನ್ನಡ ಪತ್ರಿಕೆ ತರಿಸ್ತಾರೆ. ಇದು ನಮ್ಮ ಕನ್ನಡಾಭಿಮಾನ! ಹಾಗಾಗಿ ಕರ್ನಾಟಕದಲ್ಲಿ ಕಲಿಕೆಯ ಮಾಧ್ಯಮವೊಂದೇ ಅಲ್ಲ, ಆಡಳಿತ, ನ್ಯಾಯಾಂಗ, ಶಿಕ್ಷಣ - ಈ ಮೂರರಲ್ಲೂ ಕನ್ನಡ ಪ್ರಾಶಸ್ತ್ಯ ಪಡೆಯಬೇಕು ಅಂತ ನಾನು ಹೇಳುತ್ತೇನೆ. ಇವತ್ತು ಜ್ಞಾನ ಅಡಕವಾಗಿರೋದು ಇಂಗ್ಲೀಷ್‌ನಲ್ಲಿ. ಪ್ರತಿಯೊಂದಕ್ಕೂ ಕನ್ನಡದಲ್ಲಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಬರುವವರೆಗೂ ಇಂಗ್ಲೀಷ್‌ನಲ್ಲಿ ಅದನ್ನು ಪಡೆಯಬೇಕು. ಅದು ಬಿಟ್ಟು ಭಾಷೆ ಬೇಡ, ಕನ್ನಡದಲ್ಲಿ ಕಲಿಸಿ ಅನ್ನೋದು ದೊಡ್ದ ಅಪರಾಧ, ಅನ್ಯಾಯ. ಭಾಷೆಯಾಗಿ ಯಾವುದನ್ನಾದರೂ ಕಲಿಯಬಹುದು. ಆದರೆ ಅದಕ್ಕೂ ಮೊದಲು ಸಮಾಜದ ಸ್ತರೀಕರಣ ಹೋಗಬೇಕು, ಅಷ್ಟೆ.”

ಎಡಿಟ್:
[:podcasts/7/K-S-Nisar-Ahmed|ಪೂರ್ಣ ಸಂದರ್ಶನ ಇಲ್ಲಿ ಕೇಳಬಹುದು].