Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
ಮುನ್ನುಡಿ: ಒಮ್ಮೆ ಅನಂತಮೂರ್ತಿಯವರು "ಇಸ್ಮಾಯಿಲ್ ನಂತೆ ಸಂದರ್ಶನ ಬೇರೊಬ್ಬರು ಮಾಡಿದ್ದಿಲ್ಲ" ಎಂದಿದ್ದರು. ನಾವುಗಳು ನಸುನಕ್ಕು ಸುಮ್ಮನಾಗಿದ್ದೆವು. ಈಗ ಸಂಪದದ ೭ನೇ podcast ಹೊರತರುತ್ತಿರುವ ಸಮಯದಲ್ಲಿ ಪ್ರತಿ ಬಾರಿಯೂ "ಬಹಳ ಒಳ್ಳೆಯ ಪ್ರಶ್ನೆ" ಎಂದು ಶಹಬ್ಬಾಸ್ ಎನಿಸಿಕೊಳ್ಳುವ ಇಸ್ಮಾಯಿಲ್ ಬಗ್ಗೆ ಅನಂತಮೂರ್ತಿಯವರ ಆ ಮಾತು ಉತ್ಪ್ರೇಕ್ಷೆಯೆಂದನಿಸದು. ೭ನೇ ಕಂತು ಸಂಪದವನ್ನು ಸಂಪದವಾಗಿಸಿದ ಇಸ್ಮಾಯಿಲ್, ಓ ಎಲ್ ಎನ್, ಹಾಗೂ ಉಳಿದೆಲ್ಲ ಸ್ನೇಹಿತರಿಗೆ ಮುಡುಪು.
ಗಮನಿಸಿ: ಈ ಸಂಚಿಕೆಯಿಂದ ಪ್ರಾರಂಭಿಸಿ ಸಂದರ್ಶನದ ಆಡಿಯೋ ogg vorbis ಫಾರ್ಮ್ಯಾಟಿನಲ್ಲಿ ಕೂಡ ಲಭ್ಯ. ಈ ಸಂದರ್ಶನದ ಲಿಖಿತ ರೂಪ ಕೂಡ ಲಭ್ಯವಿದೆ. ಬರೆಹ ರೂಪಕ್ಕೆ ಇಳಿಸಿದ್ದು. ಸುರೇಶ್ ಕೆ - ಹರಿ ಪ್ರಸಾದ್ ನಾಡಿಗ್
ಹರಿಪ್ರಸಾದ್ ಮತ್ತೊಂದು ಪಾಡ್ ಕ್ಯಾಸ್ಟಿಂಗ್ ಕೂಡಾ ನನ್ನಿಂದಲೇ ಮಾಡಿಸಿಬಿಟ್ಟರು! ಈ ಬಾರಿ ಅವರು ನನ್ನನ್ನು ಸ್ವಾವಲಂಬಿಯಾಗಲು ಪ್ರೇರಪಿಸಿದರು. ಈ ಬಾರಿ ಸಂದರ್ಶಕನೂ ನಾನೇ, ಧ್ವನಿಮುದ್ರಣ ತಂತ್ರಜ್ಞನೂ ನಾನೇ. ದೇವರು ದೊಡ್ಡವನನು (ಅವನಿದ್ದರೆ!). ಜತೆಗೆ ನನ್ನ ಗೆಳೆಯ ಹಾಗೂ ಉದಯವಾಣಿಯಲ್ಲಿ ನನ್ನ ಸಹೋದ್ಯೋಗಿ ಸುರೇಶ್ ಕೆ. ಇದ್ದರು. ನಮ್ಮ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇದ್ದರು. ಇಷ್ಟು ಸಾಲದು ಎಂಬಂತೆ ಈ ಟಿವಿ ಕನ್ನಡದಲ್ಲಿ ದುಡಿಯುತ್ತಿರುವ ನಮ್ಮ ಗೆಳೆಯರ ಬಳಗದ ಸದಸ್ಯೆ ಜ್ಯೋತಿ ಇರ್ವತ್ತೂರು ಕೂಡಾ ಜತೆಗೂಡಿದ್ದರು. ಈ ಪಾಡ್ ಕ್ಯಾಸ್ಟಿಂಗ್ ನ ಬಗ್ಗೆ ನಾವ್ಯಾರೂ ಯೋಚಿಸಿರಲಿಲ್ಲ. ಶನಿವಾರ ಬೆಳಿಗ್ಗೆ (16-12-2006) 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಕೆ.ಎಸ್. ನಿಸಾರ್ ಅಹಮದ್ ಅವರನ್ನು "ಉದಯವಾಣಿ"ಗಾಗಿ ಸಂದರ್ಶಿಸುವ ಉದ್ದೇಶದಿಂದ ನಾನು ಮತ್ತು ಸುರೇಶ್ ಅವರ ಮನೆಗೆ ಹೊರಟೆವು. ಪದ್ಮನಾಭ ನಗರದಲ್ಲಿರುವ ನಿಸಾರ್ ಅವರ ಮನೆಗೆ ಹೋಗುವ ಮುನ್ನ ದಾರಿ ಕೇಳಲು ಛಾಯಾಗ್ರಾಹಕ ಡಿ.ಸಿ ನಾಗೇಶ್ ಅವರಿಗೆ ಫೋನಾಯಿಸಿದರೆ ಅವರು ಇಲ್ಲೇ ಹತ್ತಿರ ಮೊದಲು ನಮ್ಮ ಮನೆಗೆ ಬನ್ನಿ ಎಂದರು. ನ್ಯಾಷನಲ್ ಕಾಲೇಜು ಫ್ಲೈ ಓವರ್ ಕೆಳಗಿರುವ ಅವನ ಮನೆಯಲ್ಲಿ ಒಳ್ಳೆಯ ಕಾಫೀ ಸಮಾರಾಧನೆಯ ಬಳಿಕೆ ಹೊಸ ಹೊಸ ಐಡಿಯಾಗಳು ಹೊಳೆಯತೊಡಗಿದವು. ಮೊದಲನೆಯದ್ದು ನಿಸಾರ್ ಅವರ ಹೊಸ ಭಂಗಿಯ ಫೋಟೋಗಳನ್ನು ತೆಗೆಸುವುದು. ಈ ಕುರಿತು ಚರ್ಚಿಸುತ್ತಿರುವಾಗಲೇ ಸಂಪದಕ್ಕೊಂದು ಪಾಡ್ ಕ್ಯಾಸ್ಟಿಂಗ್ ಯಾಕಾಗಬಾರದು ಎನಿಸಿತು. ತಕ್ಷಣ ಹರಿಪ್ರಸಾದ್ ಅವರಿಗೆ ಫೋನಾಯಿಸಿದರೆ ಅವರು ಪ್ರಸ್ತಾಪವನ್ನು ಒಪ್ಪಿದರು. ಆದರೆ "ನಾನು ನಿಮಗೆ ಲ್ಯಾಪ್ ಟಾಪ್ ಮತ್ತು ಮೈಕ್ ಕೊಡುತ್ತೇನೆ. ನನಗೆ ಸಂದರ್ಶನಕ್ಕೆ ಬರಲು ಸಾಧ್ಯವಿಲ್ಲ" ಎಂದರು.
ಈವರೆಗಿನ ಎಲ್ಲಾ ಪಾಡ್ ಕ್ಯಾಸ್ಟಿಂಗ್ ಗಳ ಅವಿಭಾಜ್ಯ ಅಂಗವಾಗಿದ್ದ ಹರಿಪ್ರಸಾದ್ ಅವರನ್ನು ಬಿಟ್ಟು ಹೋಗುವುದಕ್ಕೆ ನಮಗೆ ಮನಸ್ಸಿರಲಿಲ್ಲ. ಆದರೆ ಅವರಿಗೆ ಸಮಯವಿರಲಿಲ್ಲ. ನರಸಿಂಹರಾಜ ಕಾಲೋನಿಯಿಂದ ಪದ್ಮನಾಭ ನಗರಕ್ಕೆ ಲ್ಯಾಪ್ ಟಾಪ್ ಹೊತ್ತು ತಂದ ಹರಿ ತಕ್ಷಣ ಹಿಂದಿರುಗಿದರು. ಸುರೇಶ್ ಮತ್ತು ಜ್ಯೋತಿ ನನಗೆ ಬೆಂಬಲವಾಗಿ ನಿಂತು ಯಾವ ಪ್ರಶ್ನೆಗಳನ್ನು ಕೇಳಬಹುದೆಂಬುದನ್ನು ಸೂಚಿಸಿದರು. ಪಾಡ್ ಕ್ಯಾಸ್ಟಿಂಗ್ ಗೆ ಮಾನಸಿಕವಾಗಿ ಸಿದ್ಧನಾಗಿ ಇರದಿದ್ದ ನಾನು ಹಲವು ಪ್ರಶ್ನೆಗಳನ್ನು ತಡವರಿಸುತ್ತಾ ತಪ್ಪು ತಪ್ಪಾಗಿಯೇ ಕೇಳಿದ. ಹರಿಪ್ರಸಾದ್ ಅವರ ಸಂಪಾದನಾ ಕೌಶಲ್ಯದಲ್ಲಿ ಈ ತಪ್ಪುಗಳು ಕೆಲಮಟ್ಟಿಗೆ ಮುಚ್ಚಿ ಹೋಗಿವೆ. ನಿಸಾರ್ ರಲ್ಲಿ ಒಂದು ಕವನ ವಾಚಿಸುವಂತೆ ಕೇಳಿಕೊಳ್ಳಬಹುದಿತ್ತು ಎಂಬುದು ಈಗ ನೆನಪಾಗುತ್ತಿದೆ. ಕೆಲವೊಮ್ಮೆ ಇತಿಹಾಸವೂ ಪಾಠ ಕಲಿಸುವುದಿಲ್ಲ ಎಂಬುದಕ್ಕೆ ಇದೂ ಒಂದು ನಿದರ್ಶನವೇನೋ? ಕನ್ನಡ-ಇಂಗ್ಲಿಷ್ ಮಾಧ್ಯಮ ವಿವಾದಕ್ಕೆ ಸಂಬಂಧಿಸಿದಂತೆ ಈ ಸಂದರ್ಶನದಲ್ಲಿ ಬಹಳ ಚೆನ್ನಾಗಿ ಮಾತನಾಡಿದ್ದಾರೆ ಎಂಬುದು ನನ್ನ ಸ್ವಂತ ಅನಿಸಿಕೆ. ಹಾಗೆಯೇ ವಿಜ್ಞಾನ ಬರೆವಣಿಗೆ, ಮುಸ್ಲಿಂ ಸಂವೇದನೆಯಂಥ ವಿಷಯಗಳ ಬಗ್ಗೆಯೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಸಂಪದ' ಬಳದ ಪ್ರಯತ್ನಕ್ಕೆ ಅವರು ವಿಶೇಷಾಭಿನಂದನೆಗಳನ್ನು ತಿಳಿಸಿದ್ದಾರೆ. ಪಾಡ್ ಕ್ಯಾಸ್ಟಿಂಗ್ ಕೇಳಿ ನಿಮಗಿಷ್ಟವಾಯಿತೆ ಇಲ್ಲವೇ ಎಂದು ತಿಳಿಸಿ. ಎಲ್ಲದಕ್ಕಿಂತ ಮುಖ್ಯವಾಗಿ ನಿಸಾರ್ ಅವರ ವ್ಯಕ್ತಪಡಿಸಿರುವ ಹಲವು ವಿಷಯಗಳು ಕನ್ನಡದ ಬಗ್ಗೆ ಕಾಳಜಿಯುಳ್ಳ ಎಲ್ಲರನ್ನೂ ಚಿಂತನೆಗೆ ಹಚ್ಚುವಂಥವು. ನಿಮ್ಮ ನಿಮ್ಮ ಚಿಂತನೆಗಳನ್ನು ಸಂಪದದಲ್ಲಿ ದಾಖಲಿಸಿ.
ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. mp3 file (೪೫ MB)
ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. Ogg Vorbis file (೨೫ MB)