RSVP ಅಂದರೆ ಏನು ಗೊತ್ತೇ...?

RSVP ಅಂದರೆ ಏನು ಗೊತ್ತೇ...?

ನೀವು ನಿಮಗೆ ಬರುವ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, ಮದುವೆ ಮುಂತಾದ ಶುಭ ಸಮಾರಂಭಗಳ ಆಹ್ವಾನ ಪತ್ರಿಕೆ, ಕೆಲವೊಂದು ಸಂಸ್ಥೆಗಳ ಅಧಿಕೃತ ಆಹ್ವಾನ ಪತ್ರಿಕೆಗಳ ಕೊನೆಯಲ್ಲಿ ‘RSVP’ ಎಂಬ ನಾಲ್ಕು ಆಂಗ್ಲ ಭಾಷೆಯ ಅಕ್ಷರವನ್ನು ಬರೆದಿರುತ್ತಾರೆ. ಕೆಲವೊಮ್ಮೆ ಈ ಅಕ್ಷರಗಳ ಜೊತೆಗೆ ಸಂಪರ್ಕಕ್ಕೆಂದು ಒಂದೆರಡು ದೂರವಾಣಿ ಸಂಖ್ಯೆಯೂ ನಮೂದಾಗಿರುತ್ತದೆ. ನೀವು ಎಂದಾದರೂ ಈ ಅಕ್ಷರಗಳ ಪೂರ್ಣರೂಪ ಏನಿರಬಹುದು ಎಂದು ಯೋಚನೆ ಮಾಡಿರುವಿರಾ? ಕೆಲವು ಆಸಕ್ತರು ಗೂಗಲ್ ಮಾಡಿ ಇದರ ಪೂರ್ಣರೂಪವನ್ನು ಪಡೆದುಕೊಂಡಿರಬಹುದು. ಆದರೆ ಅದರ ಅರ್ಥವೇನು ಎಂದು ತಿಳಿದಿದೆಯಾ? ಬಹುತೇಕರ ಉತ್ತರ ‘ಇಲ್ಲ' ಎಂದೇ ಆಗಿರುತ್ತದೆ. ಏಕೆಂದರೆ RSVP ಎಂಬ ಅಕ್ಷರಗಳ ಪೂರ್ಣ ವಿಸ್ತಾರ ರೂಪವು ಆಂಗ್ಲ ಭಾಷೆಯಲ್ಲೇ ಇಲ್ಲ. ಅದು ಇರುವುದು ಫ್ರೆಂಚ್ ಭಾಷೆಯಲ್ಲಿ. ಈ ಬಗ್ಗೆ ಮಾಹಿತಿ ನೀಡುತ್ತಾ ಪತ್ರಕರ್ತರಾದ ಶ್ರೀ ವಿಶ್ವೇಶ್ವರ ಭಟ್ ಇವರು ಇತ್ತೀಚೆಗೆ ‘ವಿಶ್ವವಾಣಿ' ಪತ್ರಿಕೆಯಲ್ಲಿ ಬಹಳ ಸ್ವಾರಸ್ಯಕರವಾದ ಸಂಗತಿಯೊಂದನ್ನು ಬರೆದಿದ್ದಾರೆ. ಅದನ್ನು ಯಥಾವತ್ತಾಗಿ ನಾನಿಲ್ಲಿ ಹಂಚಿಕೊಂಡಿರುವೆ....

“RSVP ಹೀಗೆಂದರೆ ಏನು ಅಂತ ಹತ್ತು ಜನರನ್ನು ಕೇಳಿ ಒಂಬತ್ತು ಮಂದಿಗೆ ಅದರ ಅರ್ಥ ಗೊತ್ತಿರುತ್ತದೆ. ಆದರೆ ಅದರ ಫುಲ್ ಫಾರಂ ಗೊತ್ತಿರುವುದಿಲ್ಲ. ಅದರ ಪೂರ್ಣ ಸ್ವರೂಪ ಗೊತ್ತಿಲ್ಲದವರೂ, ಆಮಂತ್ರಣ ಪತ್ರಿಕೆ ಮೇಲೆ RSVP ಅಂತ ಬರೆಯಿಸಿರುತ್ತಾರೆ. ಈ ದಿನಗಳಲ್ಲಿ RSVP ಇಲ್ಲದ ಆಮಂತ್ರಣ ಪತ್ರಿಕೆ ಅಪರೂಪ ಎಂಬಷ್ಟರ ಮಟ್ಟಿಗೆ ಅದರ ಬಳಕೆ ಸರ್ವವ್ಯಾಪಿಯಾಗಿದೆ.

ಇತೀಚೆಗೆ ನನ್ನ ಸ್ನೇಹಿತರು ತಮ್ಮ ದಾಂಪತ್ಯ ಜೀವನದ ಇಪ್ಪತ್ತೈದನೇ ವರ್ಷದ ನಿಮಿತ್ತ ಒಂದು ಪಾರ್ಟಿಯನ್ನು ಪಂಚತಾರಾ ಹೋಟೇಲಿನಲ್ಲಿ ಏರ್ಪಡಿಸಿದ್ದರು. ಆ ಪ್ರಯುಕ್ತ ಒಂದು ಸುಂದರವಾದ ಆಮಂತ್ರಣ ಪತ್ರ ಕಳಿಸಿದ್ದರು. ಅದರ ಕೊನೆಯಲ್ಲಿ RSVP ಅಂತ ಬರೆದಿತ್ತು. ನಾನು ಅವರಿಗೆ ಫೋನ್ ಮಾಡಿ ಅವರ ಕಾಲೆಳೆಯಲೆಂಬಂತೆ “ಸರ್, ಇನ್ವಿಟೇಷನ್ ಕೊನೆಯಲ್ಲಿ RSVP ಅಂತ ಬರೆದಿರುವಿರಲ್ಲ, ಹಾಗಂದ್ರೆ ಏನು?” ಎಂದು ಕೇಳಿದೆ. ಅದಕ್ಕೆ ಅವರು “RSVP ಅಂದ್ರೆ, ನೀವು ಕಾರ್ಯಕ್ರಮಕ್ಕೆ ಬರ್ತೀರೋ ಇಲ್ಲವೋ? ಬರುವುದಿದ್ದರೆ ಎಷ್ಟು ಜನ ಬರ್ತೀರಿ? ಮುಂತಾದ ವಿವರಗಳನ್ನು ತಿಳಿಸಿದರೆ ಆ ಪ್ರಕಾರ ಸಿದ್ಧತೆ ಮಾಡಲು ಅನುಕೂಲವಾಗಲಿ ಎಂದು ತಿಳಿಸುವ ವ್ಯವಸ್ಥೆ. ಇದರಿಂದ ಎಷ್ಟು ಮಂದಿ ಅತಿಥಿಗಳು ಬರುತ್ತಾರೆ ಎಂಬುದು ಕಾರ್ಯಕ್ರಮ ಸಂಘಟಕರಿಗೆ ಮೊದಲೇ ಗೊತ್ತಾಗುತ್ತದೆ, ಆ ಪ್ರಕಾರ ಸೂಕ್ತ ಪೂರ್ವ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ” ಎಂದು ನನಗೆ ಏನೂ ಗೊತ್ತಿಲ್ಲ ಎಂದು ಭಾವಿಸಿ ವಿವರಿಸಲಾರಂಭಿಸಿದರು.

“ಸ್ವಾಮೀ, ನನಗೆ ಅವೆಲ್ಲ ಗೊತ್ತು. ಅದರ ಫುಲ್ ಫಾರಂ ಅರ್ಥಾತ್ ಪೂರ್ಣ ವಿಸ್ತಾರ ರೂಪ ಹೇಳ್ತೀರಾ?” ಎಂದು ಕೇಳಿದೆ. ಅದಕ್ಕೆ ಅವರು ‘ಹಾಗಂದ್ರೆ... ಹಾಗಂದ್ರೆ...' ಎಂದು ಏನೋ ಯೋಚಿಸಲಾರಂಭಿಸಿದರು. ‘ಹಾಗಂದ್ರೆ ಏನೋ ಇದೇರಿ...ತಕ್ಷಣ ನೆನಪಾಗ್ತಾ ಇಲ್ಲ...ನಿಮಗೆ ತಿಳಿಸುತ್ತೇನೆ' ಎಂದು ಫೋನಿಟ್ಟರು. ನಂತರ ಅವರ ಫೋನ್ ಬರಲಿಲ್ಲ. ಆಮಂತ್ರಣ ಪತ್ರದ ಮೇಲೆ ಹೀಗೆ ಬರೆಯಿಸಿದವರಿಗೂ ಅದರ ವಿಸ್ತಾರ ರೂಪ ಗೊತ್ತಿರುವುದಿಲ್ಲ ಎಂಬುದು ಅವರು ಸಾಬೀತು ಮಾಡಿದರು.

ನಿಜಕ್ಕೂ RSVP ವಿಸ್ತಾರ ರೂಪ “Repondez, S’il Vous Plait”. ಹೀಗೆಂದರೆ ಯಾರಿಗೂ ಅರ್ಥವಾಗುವುದಿಲ್ಲ. ಇದು ಮೂಲತಃ ಫ್ರೆಂಚ್ ಪದ. ಇಟಾಲಿಯನ್ ಭಾಷೆಯಿಂದ ಕಡ ತಂದದ್ದು. ಹಾಗೆಂದರೆ Respond if you please ಅಥವಾ Please respond ಅಂತ ಅರ್ಥ. ನೀವು ಬರ್ತಿರೋ ಇಲ್ಲವೋ ಎಂಬುದನ್ನು ತಿಳಿಸಿ ಅಥವಾ ನಿಮ್ಮ ಉಪಸ್ಥಿತಿಯನ್ನು ಖಾತ್ರಿ ಪಡಿಸಿ ಎಂದರ್ಥ. ಇಷ್ಟು ಸರಳವಾಗಿ ಹೇಳುವುದನ್ನು, ಯಾರಿಗೂ ಪೂರ್ಣ ವಿಸ್ತಾರ ಗೊತ್ತಿಲ್ಲದ RSVP ಎಂದು ಯಾಕೆ ಮುದ್ರಿಸುತ್ತಾರೋ ಗೊತ್ತಿಲ್ಲ. ತಮಾಷೆ ಅಂದ್ರೆ, RSVP ವಿಸ್ತಾರ ಗೊತ್ತಿಲ್ಲದಿದ್ದರೇನಂತೆ, ಅದರ ಅರ್ಥ ಎಲ್ಲರಿಗೂ ಗೊತ್ತಿದೆ ಅದು ಫ್ರೆಂಚ್ ಭಾಷೆಯಲ್ಲಿದ್ದರೂ. ಇನ್ನೂ ತಮಾಷೆಯ ಸಂಗತಿಯೇನೆಂದರೆ, ಫ್ರಾನ್ಸ್ ದೇಶದಲ್ಲಿ ಇದನ್ನು ಬಳಸದಿರುವುದು. ಇದನ್ನು ವ್ಯಾಪಕವಾಗಿ ಬಳಸುವುದು ಭಾರತದಲ್ಲಿ. ಹಿಮಾಚಲ ಭಾಷೆಯಲ್ಲಿ RSVP ಅಂದರೆ Rona Sarian Vayaye Prant. ಹೀಗೆಂದರೆ ‘ಮದುವೆಯ ನಂತರ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ' ಎಂಬರ್ಥವಂತೆ !”

ಈಗ ಗೊತ್ತಾಯಿತಲ್ಲಾ RSVP ಎಂಬ ನಾಲ್ಕು ಅಕ್ಷರಗಳ ಹಿಂದಿನ ಮರ್ಮ. ಇದರ ವಿಸ್ತಾರ ರೂಪ ಗೊತ್ತಿಲ್ಲದವರೂ ಅರ್ಥ ಗೊತ್ತಿರುವ ಕಾರಣದಿಂದ RSVP ಮುದ್ರಿಸಿ ದೂರವಾಣಿ ಸಂಖ್ಯೆಯನ್ನು ಕೊಡುತ್ತಾರೆ. ನೀವು ಬರುವ ಬಗ್ಗೆ, ಸಮಯದ ಬಗ್ಗೆ, ನಿಮ್ಮೊಂದಿಗೆ ಬರುವ ಜನರ ಬಗ್ಗೆ ತಿಳಿಸಿ ಎಂದು.

ಮಾಹಿತಿ ಕೃಪೆ: ವಿಶ್ವವಾಣಿ

ಚಿತ್ರ ಕೃಪೆ: ಅಂತರ್ಜಾಲ ತಾಣ