ಕರಿಬಸರಿಯ ಹಸಿರು ಹೆರಿಗೆ

"ಹೆಸರು ಗುರುತಿಸುವಾಗ ಯಾವತ್ತೂ 'ಅವಳು ಬಸುರಿ' ಎಂದು ಕರಿಬಸರಿಯನ್ನು ತಮಾಷೆಗೆ ಕರೆಯುತ್ತಿದ್ದೆವು. ಬಸುರಿಯಾದವಳು ಹೆರಬೇಕು. ಇದು ನಿಸರ್ಗ ನಿಯಮ. ಈಗ ಕರಿಬಸರಿ ಹೆಸರಿಗೆ ತಕ್ಕಂತೆ ಹಸಿರು ಹೆರಿಗೆಯ ಸಾರ್ಥಕ ಕೆಲಸ ಮಾಡುತ್ತಿದೆ. “ ಕರಿಬಸರಿ ಮರ ನೋಡಿದಾಗ ವಿಚಿತ್ರ ಕಾಣುತ್ತಿದೆ. ಎಳ್ಳಿನ ಗಾತ್ರದ ಇದರ ಬೀಜಕ್ಕೆ ನೇರ ನೆಲಕ್ಕೆ ಬಿದ್ದರೆ ಹುಟ್ಟುವುದಕ್ಕೆ ತಾಕತ್ತಿಲ್ಲ. ಪಕ್ಷಿಗಳು ಹಣ್ಣು ತಿಂದು ಅವುಗಳ ಹೊಟ್ಟೆಸೇರಿ ಬೀಜೋಪಚಾರ ಪಡೆದು ಹಿಕ್ಕೆಯ ಮೂಲಕ ಹೊರಬರಬೇಕು. ಯಾವುದೋ ಮರದ ಟೊಂಗೆಗಳ ಮೇಲೆ ಹಕ್ಕಿಯ ಹಿಕ್ಕೆಯ ಜೊತೆ ಬಿದ್ದು ಮೊಳಕೆಯೊಡೆಯಬೇಕು. ವೃಕ್ಷದ ಟೊಳ್ಳು ಜಾಗಗಳಲ್ಲಿ ಕಷ್ಟಪಟ್ಟು ಬೆಳೆದು ಕೊನೆಗೆ ತನಗೆ ಆಶ್ರಯ ನೀಡಿದ ಮರವನ್ನು ಬಿಗಿದಪ್ಪಿ ಹತ್ಯೆ ಮಾಡುವ ಚಾಳಿ ಇದರದು! ಸಸ್ಯಲೋಕದ ಖಳನಾಯಕನಂತೆ ತಕ್ಷಣಕ್ಕೆ ಮರ ಕಾಣಿಸಬಹುದು. ಪಶುವೈದ್ಯೆ ಮಿತ್ರ ಡಾ. ಎನ್.ಬಿ. ಶ್ರೀಧರ ಕರಿಬಸರಿ ಮರದ ಎಲೆಗಳನ್ನು ಜಾನುವಾರು ತಿಂದರೆ ವಿಷವೆಂದು ಗುರುತಿಸಿದವರು. ದನಕರು ಸಾವನಪ್ಪುತ್ತಿವೆಯೆಂದು ಸಾಬೀತು ಪಡಿಸಿದವರು. ತಾನು ಹುಟ್ಟುವಾಗ ಆಶ್ರಯವಿತ್ತ ಮರವನ್ನು ಕೊಲ್ಲುತ್ತದೆ, ಮತ್ತೆ ಎಲೆಗಳಿಂದ ದನಕರು ಕೊಲ್ಲುತ್ತಿದೆಯಲ್ಲ. ಮಾಧ್ಯಮಗಳಲ್ಲಿ ಕರಿಬಸರಿ ಕುರಿತ ಲೇಖನಗಳು ಪ್ರಕಟವಾದಗಂತೂ ನಮ್ಮ ಹಳ್ಳಿಗರು ಕರಿಬಸರಿ ಕಂಡರೆ ಕತ್ತಿ ಎತ್ತುವ ರೋಷದ ಮಾತಾಡಿದ್ದರು. ಹತ್ತಾರು ಅಡಿ ಎತ್ತರದಲ್ಲಿ ಗುಪ್ತವಾಗಿ ಆಶ್ರಯ ಪಡೆದು ಕ್ರಮೇಣ ನೆಲಕ್ಕೆ ಬೇರಿಳಿಸಿ ಬದುಕುವ ಇದನ್ನು ಹತ್ಯೆಗೈಯ್ಯುವುದು ಮಾತಾಡಿದಷ್ಟು ಸುಲಭದ ಕೆಲಸವಲ್ಲ, ಕಡಿದಂತೆ ಚಿಗುರುವ ದೈತ್ಯ ಶಕ್ತಿ ಇದಕ್ಕಿದೆ. ಮರದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ದನಕರುಗಳನ್ನು ಸೊಪ್ಪಿನ ಬೆಟ್ಟದಲ್ಲಿ ಮೇಯಿಸುತ್ತಿದ್ದೆ. ಅಲ್ಲಿ ಹೊನ್ನೆಮರ ಆಶ್ರಯಿಸಿ ಸುತ್ತೆಲ್ಲ ಟೊಂಗೆಗಳನ್ನು ಚಾಚಿ ಬೆಳೆದ ಕರಿಬಸರಿ ಎದುರಾಯಿತು. ಇದರ ಸೊಪ್ಪುಗಳನ್ನು ತಿಂದರೆ ಸಮಸ್ಯೆ, ಒಮ್ಮೆ ಕಡಿದುರುಳಿಸುವುದು ಒಳ್ಳೆಯದೆಂದು ಯೋಚಿಸಿದೆ. ಆಪಾದನೆಗಳ ಪಟ್ಟಿ ಹಿಡಿದು ಪೋಲೀಸರಂತೆ ಮರ ಪರೀಕ್ಷಿಸಿದೆ. ಅದು ಬೆಲೆ ಬಾಳುವ ಹೊನ್ನೆಯನ್ನು ಬಿಗಿದಪ್ಪಿ ಕೊಲ್ಲುವ ಹಂತದಲ್ಲಿತ್ತು. ಉರುವಲು, ನಾಟಾಕ್ಕೆ ಪ್ರಯೋಜನಕ್ಕಿಲ್ಲದ ಈ ಹಾಲುವೃಕ್ಷದ ಬಗೆಗೆ ಅಂತಹ ಅಕ್ಕರೆಯಿರಲಿಲ್ಲ. ಮರದ ಎಲೆ ವಿಷವಾಗುವುದಾದರೆ ಇದರ ಹಣ್ಣು ವಿಷವೇ? ಪ್ರಶ್ನೆಗಳೆದ್ದವು. ಅಚ್ಚರಿಯೆಂದರೆ ವರ್ಷಕ್ಕೆ ಎರಡು ಮೂರು ಸಾರಿ ಹಣ್ಣು ಬಿಡುತ್ತಿತ್ತು. ಅದನ್ನು ತಿನ್ನಲು ಕಾಜಾಣ, ಬುಲ್‍ಬುಲ್, ಪಾರಿವಾಳ, ಗಿಳಿ, ಗ್ರೇ ಹಾರ್ನಬಿಲ್, ಅರಸಾನ ಹಕ್ಕಿಯಿಂದ ಶುರುವಾಗಿ ಹತ್ತಿಪ್ಪತ್ತು ಜಾತಿಯ ಪಕ್ಷಿಗಳು ತಂಡತಂಡವಾಗಿ ಬಂದು ಹಣ್ಣು ತಿನ್ನುತ್ತ ಸಂಭ್ರಮಿತ್ತಿದ್ದವು. ಪುಟ್ಟ ಪುಟ್ಟ ಹಣ್ಣಿಗಾಗಿ ಮರದಲ್ಲಿ ಚೆಂದದ ಕಲರವವಿತ್ತು. ಮರದ ಕೆಳಗಡೆ ವೀಕ್ಷಿಸಿದರೆ ಹತ್ತಾರು ಗಿಡ ಜಾತಿಗಳು ಸಮೃದ್ಧವಾಗಿ ಬೆಳೆಯುತ್ತಿದ್ದವು. ಅಕ್ಕಪಕ್ಕದಲ್ಲಿ ಎಲ್ಲೂ ಬೆಳೆಯದ ಗಿಡಗಳು ಮರದ ಕೆಳಗಡೆ ನಗುತ್ತಿದ್ದವು. ಫಾರೆಸ್ಟ್ ನರ್ಸರಿಯ ನಿಷ್ಠಾವಂತ ಕಾವಲುಗಾರ್ತಿಯಂತೆ ಮರ ತನ್ನ ನೆರಳಲ್ಲಿ ಗಿಡಗಳ ಜೋಪಾನ ನಡೆಸಿತ್ತು! ಕಾರೆ, ಕಾಡು ಮಲ್ಲಿಗೆ, ಹೊಳೆ ದಾಸವಾಳ, ನೆಲತಗ್ಗಿ, ನೇರಲು, ಕುಂಟುನೇರಲು, ಜುಮ್ಮಿನ ಗಿಡಗಳು ಸೇರಿದಂತೆ 26 ಜಾತಿಯ ಗಿಡಗಳು ಪತ್ತಯಾದವು. ಇಷ್ಟೆಲ್ಲ ಸಸಿ ಮರದಡಿ ಮಾತ್ರ ಹೇಗೆ ಬೆಳೆದವು? ಬೀಜಗಳು ಇಲ್ಲಿಗೆ ಬಂದದ್ದು ಹೇಗೆ? ಕರಿಬಸರಿ ಕಡಿಯಲು ಯೋಚಿಸಿದವ ತಲೆ ತಗ್ಗಿಸಿದೆ. ಬೇವಿನ ಮರದ ಕೆಳಗಡೆ ಬೇವಿನ ಬೀಜಗಳು ಬಿದ್ದು ಬೇವಿನ ಸಸಿ ಜನಿಸುತ್ತವೆ. ಹಲಸು, ಹೊಂಗೆ, ಮಾವು, ನೇರಳೆ ಹೀಗೆ ಎಲ್ಲ ಮರಗಳ ಕೆಳಗಡೆಯೂ ಮರದ ಮಕ್ಕಳನ್ನು ನೋಡಬಹುದು. ಕರಿಬಸರಿ ತನ್ನಕುಲದ ಒಂದೇ ಒಂದು ಸಸಿಯನ್ನೂ ಬೆಳೆಸಿರಲಿಲ್ಲ! ಆದರೆ ಬೇರೆ ಬೇರೆಜಾತಿಯ ಸಸ್ಯಗಳಿಗೆ ಆಶ್ರಯ ನೀಡಿತ್ತು. ದನಕರು ವೈರಿಯಂತೆ ಕಾಣುತ್ತಿದ್ದ ಮರದ ಇನ್ನೊಂದು ಮುಖ ಅನಾವರಣವಾಯಿತು. ಪಕ್ಷಿಗಳು ಕರಿಬಸರಿ ಹಣ್ಣು ತಿನ್ನಲು ಬರುತ್ತಿದ್ದವು. ಅವುಗಳ ಹಿಕ್ಕಿಗಳಲ್ಲಿ ಬೀಜ ನೆಲಕ್ಕೆ ಬಿದ್ದು ಸಸಿಗಳು ಜನಿಸಿದವು. ಈ ಗಿಡಗಳ ಮೂಲ ಮರಗಳೆಲ್ಲ ಕಿಲೋಮೀಟರ್ ಸುತ್ತಳತೆಯಲ್ಲಿದ್ದವು. ಪಕ್ಷಿಗಳಿಂದ ಅರಣ್ಯ ಕೃಷಿ ಕಾಯಕ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಮರದ ನೆರಳು ಭೂಸವಳಿಕೆ ತಡೆಯಿತು, ನೆಲಕ್ಕೆ ಉದುರಿದ ಎಲೆಗಳು ಹ್ಯೂಮಸ್ ಹೆಚ್ಚಿಸಿ ತೇವಾಂಶ ರಕ್ಷಣೆಯಾಯಿತು, ಮಣ್ಣು ಫಲವತ್ತಾಯಿತು. ಪಕ್ಷಿಗಳ ಹಿಕ್ಕೆಯಲ್ಲಿದ್ದ ಬೀಜಗಳು ಜೋಪಾನವಾಗಿ ಮಣ್ಣಿಗೆ ಬಿದ್ದು ಬೆಳೆದವು. ಬೇಸಿಗೆಯ ಉರಿಬಿಸಿಲಿನಲ್ಲೂ ಬದುಕಿ ಉಳಿದವು. ಕಳೆದ ನಾಲ್ಕು ವರ್ಷಗಳಿಂದ ಮರದ ಕೆಳಗೆ ಜನಿಸಿದ ಸಸ್ಯ ಸೂಕ್ಷ್ಮಗಳನ್ನು ಗಮನಿಸಿ ದಾಖಲಿಸಿದೆ. ಒಂದು ಮರ ಕಾಡು ಬೆಳೆಸುವ ಚೆಂದದ ಕತೆ ಹೇಳಿತು. ಆಲ, ಆಶ್ವತ್ಥ, ಅತ್ತಿ, ಕರಿಬಸರಿ ಇವು ಹಾಲು ಬರುವ ವೃಕ್ಷಗಳು. ಅರಣ್ಯಶಾಸ್ತ್ರದಲ್ಲಿ ಬುನಾದಿ ವೃಕ್ಷಗಳೆನ್ನುತ್ತೇವೆ. ಇವು ಪಕ್ಷಿ, ಕೀಟಗಳಿಗೆ ಆಹಾರ ಆಶ್ರಯ ನೀಡುತ್ತ ಕಾಡು ಬೆಳೆಸುವ ಕಾಯಕಕ್ಕೆ ಮುಂಚೂಣಿಯಲ್ಲಿ ನಿಲ್ಲುತ್ತವೆ. ಸುತ್ತಲಿನ ಜೀವಲೋಕವನ್ನು ಕೆಲಸಕ್ಕೆ ಅಣಿಹೊಳಿಸಿ ಅರಣ್ಯೇಕರಣ ನಡೆಸುತ್ತವೆ. ವಿದೇಶಿ ನೆರವು ಪಡೆದು ನೆಡುತೋಪು ಬೆಳೆಸುವುದನ್ನು ಅರಣ್ಯ ಅಭಿವೃದ್ಧಿ ಎನ್ನುತ್ತೇವೆ. ಒಂದು ಸಸಿ ನೆಟ್ಟು ಮೂರು ತಾಸು ಭರ್ಜರಿ ಭಾಷಣ ಬಿಗಿಯುವುದು ವನಮೋತ್ಸವ ಆಚರಣೆಯಾಗುತ್ತದೆ.ಪತ್ರಿಕಾ ಹೇಳಿಕೆ ನೀಡುವುದನ್ನು ಪರಿಸರ ಹೋರಾಟವೆನ್ನುವ ಕಾಲಘಟ್ಟದಲ್ಲಿ ಪಶ್ಛಿಮ ಘಟ್ಟವಿದೆ. ಮಾತಿನ ವನ ಕಟ್ಟುವುದು ಬಿಟ್ಟು ಕರಿಬಸರಿ ಮರದಡಿ ನಿಂತರೆ ಕಾಡು ಕಲಿಕೆಗೆ ಅಕ್ಕರೆಯ ಮ(ನೆ)ರ ಪಾಠವಿದೆ. ಬಣ್ಣ ಬಣ್ಣದ ಹತ್ತಾರು "ಹಕ್ಕಿಮೇಡಂ"ಗಳು ಅಲ್ಲಿ ನಡೆಸುವ ಚಿಲಿಪಿಲಿಗಳ ನಲಿಕಲಿ ಕ್ಲಾಸು ಬಹಳ ಚನ್ನಾಗಿದೆ. ಪಕ್ಷಿಹಳನ್ನು ಜೊತೆಗಿಟ್ಟುಕೊಂಡು ಮರ ಗಿಡ ಬೆಳೆಸುವ ರೀತಿ ಕಲಿಸುತ್ತದೆ.ಸಸ್ಯ ಹೆಸರು ಗುರುತಿಸುವಾಗ ಯಾವತ್ತೂ 'ಅವಳು ಬಸುರಿ' ಎಂದು ಕರಿಬಸರಿಯನ್ನು ತಮಾಷೆಗೆ ಕರೆಯುತ್ತಿದ್ದೆವು. ಬಸುರಿಯಾದವಳು ಹೆರಬೇಕು. ಇದು ನಿಸರ್ಗ ನಿಯಮ. ಈಗ ಕರಿಬಸರಿ ಹೆಸರಿಗೆ ತಕ್ಕಂತೆ ಹಸಿರು ಹೆರಿಗೆಯ ಸಾರ್ಥಕ ಕೆಲಸ ಮಾಡುತ್ತಿದೆ. ಹೆತ್ತದ್ದು ಹೆಣ್ಣೋ, ಗಂಡೋ ಎನ್ನುವುದಕ್ಕಿಂತ ಪಕ್ಷಿಗಳಿಗೆ ಅಗತ್ಯವಾದ ಹಣ್ಣಿನ ಗಿಡಗಳು ಎಂಬುದು ವಿಶೇಷ. ಹಸಿರು ಹೆತ್ತಮ್ಮನಿಗೆ ಸಾವಿರ ಶರಣು! -ಶಿವಾನಂದ ಕಳವೆ