ಅಂಗಡಿಯಲ್ಲಿ ಕನ್ನಡ ನುಡಿ

ಅಂಗಡಿಯಲ್ಲಿ ಕನ್ನಡ ನುಡಿ

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಬಿ.ಆರ್.
ಪ್ರಕಾಶಕರು
ಬನವಾಸಿ ಬಳಗ, ತ್ಯಾಗರಾಜನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೦.೦೦, ಮುದ್ರಣ : ೨೦೧೧

ಅಂಗಡಿಯಲ್ಲಿ ಕನ್ನಡ ನುಡಿ ಎಂಬುವುದು ಒಂದು ಪುಟ್ಟ ಪುಸ್ತಕ. ಆದರೆ ಬಹಳ ಮಾಹಿತಿ ಪೂರ್ಣವಾಗಿದೆ. ಕನ್ನಡಾಭಿಮಾನವನ್ನು ಸ್ವಲ್ಪಮಟ್ಟಿಗೆ ಬಡಿದೆಬ್ಬಿಸ ಬಲ್ಲ ಪುಸ್ತಕ ಇದು. ನಿಮ್ಮ ಕನ್ನಡ ಜ್ಞಾನವನ್ನು ವ್ಯವಹಾರಿಕವಾಗಿ ಎಲ್ಲೆಲ್ಲಾ ಬಳಸಬಹುದು ಎಂಬುವುದಾಗಿ ಈ ಪುಸ್ತಕ ಹೇಳುತ್ತದೆ. ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ “ಗ್ರಾಹಕ ಹಕ್ಕುಗಳ ಬಗ್ಗೆ ನಾನಾ ರೀತಿಯ ಜಾಗೃತಿ ಅಭಿಯಾನಗಳು ಎಲ್ಲೆಡೆ ನಡೆಯುತ್ತಾ ಇರುತ್ತವೆ. ತೂಕ, ಅಳತೆ, ಪ್ರಮಾಣ, ಬೆಲೆ, ಗುಣಮಟ್ಟ, ಸೇವೆ ಇವೆಲ್ಲವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಗ್ರಾಹಕ ಹಕ್ಕುಗಳನ್ನು ಆಳವಾಗಿ ಪರಿಶೀಲಿಸಿದಾಗ ಇಲ್ಲಿ ಭಾಷೆಯ ಪಾತ್ರವನ್ನೇ ಮರೆತಿರುವುದು ಕಾಣುತ್ತದೆ. ಅಂತಹ ಭಾಷಾ-ಆಯಾಮ ಇಲ್ಲದ ಕಾರಣದಿಂದಲೇ ಗ್ರಾಹಕರಿಗೆ ನಾನಾ ರೀತಿಯಲ್ಲಿ ತೊಡಕಾಗುತ್ತದೆ. ಈ ಬಗ್ಗೆ ಅರಿವು ಮೂಡಿಸುವ, ಈ ದಿಕ್ಕಿನಲ್ಲಿ ನಿಮ್ಮನ್ನು ಯೋಚಿಸಲು ಪ್ರೇರೇಪಿಸುವ ಉದ್ದೇಶದಿಂದ ಈ ಕೊಳ್ಳುಗರ ಕೈಪಿಡಿಯನ್ನು ರೂಪಿಸಿ ನಿಮ್ಮ ಕೈಗಿಟ್ಟಿದ್ದೇವೆ.”

ಪುಸ್ತಕದ ಮುನ್ನುಡಿಯಲ್ಲಿ “...ಈ ದಿಕ್ಕಿನಲ್ಲಿ ಬನವಾಸಿ ಬಳಗವು ‘ಅಂಗಡಿಯಲ್ಲಿ ಕನ್ನಡ ನುಡಿ' ಎನ್ನುವ ಈ ಹೊತ್ತಗೆಯನ್ನು ಹೊರತರುತ್ತಿದೆ. ಹೆಸರೇ ಹೇಳುವಂತೆ ಇದು ಕನ್ನಡನಾಡಿನ ಮಾರುಕಟ್ಟೆಯಲ್ಲಿ ಕನ್ನಡ ನುಡಿಯ ಸ್ಥಿತಿಗತಿಯ ಬಗ್ಗೆ ಸ್ಥೂಲವಾಗಿ ತಿಳಿಸಿಕೊಡುತ್ತದೆ. ಇದಷ್ಟೇ ಅಲ್ಲದೆ ಇದು ಕನ್ನಡಿಗರಿಗೆ ಅಂಗಡಿಯಲ್ಲಿ ಕನ್ನಡವನ್ನು ನುಡಿಯಿರಿ ಎಂದು ನೀಡುತ್ತಿರುವ ಕರೆಯೂ ಆಗಿದೆ. ಒಟ್ಟಾರೆ ಈ ಹೊತ್ತಗೆಯು ಮಾರುಕಟ್ಟೆಯಲ್ಲಿ ನಮ್ಮ ಹಕ್ಕಿನ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನ. ಈ ದಿನ ನಾಡಿನ ಮಾರುಕಟ್ಟೆಯಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗುತ್ತಿಲ್ಲ ಎನ್ನುವುದು ಒಂದೆಡೆ ಎದ್ದು ತೋರುತ್ತಿದ್ದರೆ, ಹಲವೆಡೆ ನಮ್ಮ ಜನರಿಗೇ ‘ಇಂತಿಂತಹ ಕಡೆಗಳಲ್ಲಿ ಕನ್ನಡ ಬಳಸಬಾರದು, ಬಳಸಲಾಗಲ್ಲ'ಎನ್ನುವ ಮನಸ್ಥಿತಿ ಇದೆಯೇನೋ ಎನ್ನುವಂತೆ ತೋರುತ್ತದೆ. ಬ್ಯಾಂಕುಗಳಲ್ಲಿ ಕನ್ನಡ ಬರೆಯಬಾರದು, ಕಾರ್ ಮಾರುವ ಅಂಗಡಿಗಳಲ್ಲಿ ಕನ್ನಡ ಬಳಸಬಾರದು, ಮಾಲ್ ಗಳಿಗೆ ಹೋದಾಗ, ವಿಮಾನ ನಿಲ್ದಾಣಕ್ಕೆ ಹೋದಾಗಲೆಲ್ಲಾ ನಾವುಗಳು ಇಂಗ್ಲೀಷಲ್ಲೇ ಮಾತಾಡಬೇಕು... ಇತ್ಯಾದಿ ಭ್ರಮೆಗಳು ನಮ್ಮಲ್ಲಿರುವಂತೆ ತೋರುತ್ತದೆ. ಒಟ್ಟಾರೆ ನಮ್ಮ ಜನರು ಗ್ರಾಹಕ ಸೇವೆಯಲ್ಲಿ ನಮ್ಮ ನುಡಿಯ ಮಹತ್ತರವಾದ ಪಾತ್ರವನ್ನೇ ಮರೆತಿರುವಂತೆ ತೋರುತ್ತದೆ. ಈ ಮರೆವನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ನಾವು ಈ ಹೊತ್ತಗೆಯನ್ನು ಹೊರತರುತ್ತಿದ್ದೇವೆ.”

ಈ ಪುಸ್ತಕದಲ್ಲಿ ೨೧ ಅಧ್ಯಾಯಗಳು ಇವೆ. ನಾವು ದಿನ ನಿತ್ಯ ಅಥವಾ ಅಗತ್ಯದ ಕೆಲಸಗಳಿಗೆ ತೆರಳುವ ಸ್ಥಳಗಳಲ್ಲಿ ಕನ್ನಡೇತರ ಭಾಷೆಗಳಿಗೆ ನೀಡುವ ಆದ್ಯತೆ ಕಮ್ಮಿಯಾಗಬೇಕು, ಕನ್ನಡವನ್ನೇ ಬಳಸಬೇಕು ಎನ್ನುವುದು ಇಲ್ಲಿರುವ ಬರಹಗಳ ನೈಜ ಕಳಕಳಿ. ಆಸ್ಪತ್ರೆಗಳಲ್ಲಿ ಮಾಹಿತಿ, ಬ್ಯಾಂಕ್ ವಹಿವಾಟಿಗೆ ಕನ್ನಡ ಬಳಕೆ, ರೈಲುಗಳ ಮೇಲಿನ ಸೂಚನೆ, ಸಂಚಾರ ವ್ಯವಸ್ಥೆಯಲ್ಲಿ ಕನ್ನಡ, ಹೋಟೇಲ್ ತಿಂಡಿಗಳ ಹೆಸರುಗಳು, ಮೊಬೈಲ್ ನಲ್ಲಿ ಕನ್ನಡ ಬಳಕೆ, ಮಾಲ್ ಗಳಲ್ಲಿ ಕನ್ನಡ ಬಳಕೆ, ಕನ್ನಡ ಮಾತಾಡಿದ್ರೆ ವಿಮಾನ ಹಾರಾಡಲ್ವಾ?, ಮೈಸೂರು ದಸರಾ ಬಗ್ಗೆ, ಪುಸ್ತಕದ ಅಂಗಡಿಗೆ ಭೇಟಿ ನೀಡಿದಾಗ ಮುಂತಾದ ಹಲವಾರು ಸಂಗತಿಗಳನ್ನು ಚುಟುಕಾಗಿ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ.

ಎಲ್ಲಾ ಅಧ್ಯಾಯಗಳಿಗೆ ಕಲಾವಿದ ರಾಮಕೃಷ್ಣ ಬೆಳ್ಳೂರು ಇವರು ಸೊಗಸಾದ ಚಿತ್ರಗಳನ್ನು ಬಿಡಿಸಿಕೊಟ್ಟಿದ್ದಾರೆ. ಮುಖಪುಟಕ್ಕಾಗಿ ರಾಹುಲ್ ರವೀಂದ್ರ ಅವರ ತೆಗೆದ ಛಾಯಾಚಿತ್ರ ಬಳಸಿಕೊಳ್ಳಲಾಗಿದೆ. ಪ್ರತೀ ಪುಟಗಳಲ್ಲಿ ಕನ್ನಡದ ಬಗ್ಗೆ ಚುಟುಕಾದ ಹಿತ ನುಡಿಗಳಿವೆ. ಸುಮಾರು ೫೦ ಪುಟಗಳ ಪುಟ್ಟ ಪುಸ್ತಕವನ್ನು ಒಂದೇ ಓದಿಗೆ ಮುಗಿಸಬಹುದು. ಪುಸ್ತಕ ಓದಿದ ಬಳಿಕ ನಮ್ಮಲ್ಲೂ ಕನ್ನಡ ಪ್ರೇಮ ಜಾಗೃತವಾದರೆ ಬನವಾಸಿ ಬಳಗದವರ ಶ್ರಮ ಸಾರ್ಥಕ.