ಅಂಗರಚನೆ ಅಭ್ಯಾಸಕ್ಕೆ ಗೂಗಲ್ ಬಾಡಿ ಬ್ರೌಸರ್
ಅಂಗರಚನೆ ಅಭ್ಯಾಸಕ್ಕೆ ಗೂಗಲ್ ಬಾಡಿ ಬ್ರೌಸರ್
ಆಗಸದಿಂದ ನೋಡಿದರೆ ನಮ್ಮ ಭೌಗೋಳಿಕ ಪರಿಸರ ಹೇಗಿರುತ್ತದೆ ಎನ್ನುವುದನ್ನು ಅರಿಯಲು ಗೂಗಲ್ ಮ್ಯಾಪ್ ಬಳಸಿದರೆ ಸಾಕು.ಈಗ ಅದೇ ರೀತಿಯ ಸೌಕರ್ಯ ದೇಹ ರಚನೆಯನ್ನು ಕಲಿಯಲೂ ಸಿಗಲಿದೆ.ಗೂಗಲ್ ಕೃಪೆಯಿಂದ ಲಭ್ಯವಾಗುವ ಬಾಡಿ ಬ್ರೌಸರ್ ಎನ್ನುವ ತಂತ್ರಾಂಶವನ್ನು ಬಳಸಲು ಗೂಗಲ್ ಕ್ರೋಮ್ ಬ್ರೌಸರನ್ನು ಹೊಂದಿರಬೇಕು.http://bodybrowser.googlelabs.com/ ವಿಳಾಸಕ್ಕೆ ಸಂಪರ್ಕಿಸಿ ನೋಡಿ.ಈಗ ನಿಮ್ಮ ಮುಂದಿನ ಕಂಪ್ಯೂಟರ್ ತೆರೆಯಲ್ಲಿ ಮಾನವ ದೇಹದ ಯಾವುದೇ ಕೋನದ ವೀಕ್ಷಣೆಯ ಅವಕಾಶ ನಿಮಗೆ ಸಿಗುತ್ತದೆ.ದೇಹದೊಳಗಿನ ಮೂಳೆಗಳು,ಭಾಗಗಳು ಇವೆಲ್ಲವುಗಳ ವೀಕ್ಷಣೆ ಸಾಧ್ಯವಾಗುತ್ತದೆ.ವೈದ್ಯಕೀಯ ವಿದ್ಯಾರ್ಥಿಗಳಿಗೆ ದೇಹವನ್ನು ನೈಜವಾಗಿ ನೋಡುವ ಅವಕಾಶ ಸಿಗಬಹುದು.ಆದರೆ ಕಲಾವಿದರಿಗೋ,ಸುಮ್ಮನೆ ನಮ್ಮ ದೇಹದ ರಚನೆಯನ್ನು ಅರಿಯುವುದಿನ್ನು ಕಂಪ್ಯೂಟರ್ ಮುಂದಿನ ಆಟವಾಗಲಿದೆ.
--------------------------------
ಟೈಮ್ ಪತ್ರಿಕೆಯು 2010 ವರ್ಷದ ವ್ಯಕ್ತಿಯಾಗಿ ಮಾರ್ಕ್ ಜುಕ್ಕರ್ಬರ್ಗ್ ಎನ್ನುವಾತನನ್ನು ಆಯ್ಕೆ ಮಾಡಿದೆ.ವ್ಯಕ್ತಿಯಾಗಿ ಈತನ ಪರಿಚಯ ನಮಗಿಲ್ಲದೆ ಇರಬಹುದು.ಆದರೆ,ಆತನ ಅಂತರ್ಜಾಲ ತಾಣ ಫೇಸ್ಬುಕ್ ಬಗ್ಗೆ ನಮಗೆಲ್ಲಾ ಗೊತ್ತಿದೆ.ಫೇಸ್ಬುಕ್ನ ಸಿ ಇ ಓ ಈತನೇ.ಏಳು ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ,ಜುಕ್ಕರ್ಬರ್ಗ್ ಆರಂಭಿಸಿದ ಫೇಸ್ಬುಕ್ ಈಗ ಎಪ್ಪತ್ತೈದು ದಶಲಕ್ಷ ಜನರ ಸದಸ್ಯತ್ವ ಹೊಂದಿದೆ.ಜಗತ್ತಿನ ರಾಷ್ಟ್ರಗಳ ಲೆಕ್ಕಕ್ಕೆ ಇದನ್ನೂ ಸೇರಿಸಿದರೆ,ಚೀನಾ ಮತ್ತು ಭಾರತದ ನಂತರ ಅತಿ ದೊಡ್ಡ ರಾಷ್ಟ್ರ ಇದೇ ಆಗಿಬಿಟ್ಟಿದೆ.ಜಗತ್ತಿನ ಜನರು ತಮ್ಮ ದೇಶ,ಧರ್ಮ,ಭಾಷೆಯನ್ನು ಮರೆತು ಇಲ್ಲಿ ಒಂದಾಗಿದ್ದಾರೆ.ಎಪ್ಪತ್ತೈದು ಭಾಷೆಗಳು ಇಲ್ಲಿ ಬಳಸಲ್ಪಡುತ್ತಿವೆ.ಇಂತಹ ಅದ್ಭುತ ವ್ಯವಸ್ಥೆಯ ಕಲ್ಪನೆಯ ಹಿಂದಿರುವ ಮಾರ್ಕ್ ಜುಕ್ಕರ್ಬರ್ಗ್ ವರ್ಷದ ವ್ಯಕ್ತಿಯಾದದ್ದು ಸಹಜವೇ ಆಗಿದೆ,ಅಲ್ಲವೇ? ಅಂದ ಹಾಗೆ ವಿಕಿಲೀಕ್ಸ್ನ ಅಸಾಂಗೆ,ಅಪ್ಘಾನ್ ಅಧ್ಯಕ್ಷ ಹಮೀಜ್ ಕರ್ಜಾಯಿ,ಚಿಲಿಯ ಗಣಿಯಲ್ಲಿ ಸಿಲುಕಿದರೂ ಧೈರ್ಯವಾಗಿ ಪರಿಸ್ಥಿತಿಯನ್ನೆದುರಿಸಿದ ಕೆಲಸಗಾರರನ್ನು ಕೂಡಾ ವರ್ಷದ ವ್ಯಕ್ತಿಗಳಾಗಿ ಪರಿಗಣಿಸಲಾಗಿತ್ತು.
--------------------------------
ಫ್ಲುಕಾರ್ಡ್ ಎಂಬ ಅದ್ಭುತ
ಹೆನ್ ಟ್ಯಾನ್ ಎನ್ನುವಾತನ ಹೆಸರನ್ನು ಕೇಳಿರುವಿರಾ?ಥಂಬ್ ಡ್ರೈವ್ಗಳೆಂಬ ಯು ಎಸ್ ಬಿ ಸ್ಮರಣ ಸಾಧನಗಳನ್ನು ಮೊದಲ ಬಾರಿಗೆ ತಯಾರಿಸಿದ ಖ್ಯಾತಿ ಈತನದ್ದು.ಆತನು ತನ್ನ ಕಂಪೆನಿಯ ಮೂಲಕ ಆ ಸಾಧನವನ್ನು ಜಗತ್ತಿನ ಮೂವತ್ತು ದೇಶಗಳಲ್ಲಿ ಮಾರಾಟ ಮಾಡುತ್ತಿದ್ದನಲ್ಲದೆ,ಥಂಬ್ ಡ್ರೈವ್ ಎಂಬ ಹೆಸರಿನ ಮೇಲೆ ಹಕ್ಕುಸ್ವಾಮ್ಯವನ್ನೂ ತನ್ನದಾಗಿಸಿಕೊಂಡಿದ್ದ,ಆದರೆ ಇತರ ದೊಡ್ಡ ಕಂಪೆನಿಗಳೂ,ಪೈರಸಿ ದಂಧೆಯವರೂ ಅದೇ ಬಗೆಯ ಸಾಧನಗಳನ್ನು ಮಾರುಕಟ್ಟೆಯಲ್ಲಿ ಒದಗಿಸಿ,ನ್ಯಾಯವಾಗಿ ಟ್ಯಾನ್ಗೆ ಸಲ್ಲಬೇಕಿದ್ದ ಲಾಭಕ್ಕೆ ಅಡ್ಡಗಾಲು ಹಾಕಿದರು.ಈಗ ಟ್ಯಾನ್ ಫ್ಲುಕಾರ್ಡ್ ಎಂಬ ಅಂಚೆಚೀಟಿಯ ಗಾತ್ರದ ಸ್ಮರಣಕೋಶವನ್ನು ತಯಾರಿಸಿದ್ದಾನೆ.ಇದರ ಹೆಗ್ಗಳಿಕೆ ಎಂದರೆ,ಇದು ಸ್ಮರಣಕೋಶ ಮಾತ್ರಾ ಆಗಿರದೆ,ನಿಸ್ತಂತು ಸಂಪರ್ಕವನ್ನೂ ಏರ್ಪಡಿಸಬಲ್ಲುದು.ಹೀಗಾಗಿ,ಇದನ್ನು ಬಳಸಿದಾಗ,ಕಡತಗಳನ್ನು ಅಂತರ್ಜಾಲಕ್ಕೆ ಅಪ್ಲೋಡ್ ಮಾಡುವುದು ಸುಲಭ.ಕ್ಯಾಮರಾದಂತಹ ಸಾಧನದಲ್ಲಿ ಫ್ಲುಕಾರ್ಡ್ ಇದ್ದರೆ ತೆಗೆದ ಚಿತ್ರವನ್ನು ಲಭ್ಯ ನಿಸ್ತಂತು ಜಾಲದ ಮೂಲಕ ಅಂತರ್ಜಾಲ ತಾಣಗಳಿಗೋ,ಬ್ಲಾಗಿಗೋ ಹಾಕುವುದು ಚಿಟಿಕೆ ಹೊಡೆದಷ್ಟು ಸುಲಭ ಮತ್ತು ವೇಗವಾಗಿ ಮಾಡಬಹುದು.ಯಾವುದೇ ಇಲೆಕ್ಟ್ರಾನಿಕ್ ಸಾಧನದಲ್ಲಿ ಬಳಸಬಹುದಾದ ಕಾರಣ,ಫ್ಲುಕಾರ್ಡ್ ಬಹು ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ.ಮಾರ್ಕೆಟಿಂಗ್ ಸುಲಭವಾಗಲೋಸುಗ,ಟ್ಯಾನ್ ಟೊಶಿಬಾ ಕಂಪೆನಿಯ ಜತೆ ಸೇರಿದ್ದಾನೆ.ಎಸ್ಡಿ ಸ್ಲೋಟ್ ಇರುವ ಸಾಧನದಲ್ಲಿ ಇದನ್ನು ಅಳವಡಿಸಲು ಬರುತ್ತದೆ.
-----------------------------------
ತ್ರೀಜಿ:ವಿಡಿಯೋ ಕರೆ ನಿಲ್ಲಿಸಲು ಸೂಚನೆ
ಬಿಎಸೆಸೆನ್ನೆಲ್ ಮತ್ತು ಎಂಟಿಎನ್ನೆಲ್ಗಳು ತ್ರೀಜಿ ಸೇವೆಯ ಮೂಲಕ ವಿಡಿಯೋ ಕರೆಗಳನ್ನು ಒದಗಿಸುತ್ತಿವೆ.ಈಗ ಖಾಸಗಿ ರಂಗದವರ ತ್ರೀಜಿ ಸೇವೆಯೂ ಲಭ್ಯವಾಗುತ್ತಿದ್ದು,ಏರ್ಟೆಲ್,ಡೊಕೋಮೋ ಮತ್ತು ರಿಲಾಯನ್ಸ್ ಕಂಪೆನಿಗಳೂ ತ್ರೀಜಿ ಸೇವೆ ಒದಗಿಸುತ್ತಿವೆ.ಆದರೆ ವಿಡಿಯೋ ಕರೆಗಳನ್ನು ನೇರವಾಗಿ,ಪರಿಶೀಲಿಸುವ ತಂತ್ರಜ್ಞಾನ ಸದ್ಯ ಲಭ್ಯವಿಲ್ಲ.ಹಾಗಾಗಿ,ಖಾಸಗಿ ತ್ರೀಜಿ ಸೇವಾದಾತೃಗಳು ವಿಡಿಯೋ ಕರೆಗಳನ್ನು ಒದಗಿಸುವುದನ್ನು ಭದ್ರತಾ ಕಾರಣಗಳಿಗಾಗಿ,ತಡೆ ಹಿಡಿಯಬೇಕು ಎಂದು ಕೇಂದ್ರ ಸರಕಾರ ಸೂಚನೆ ನೀಡಿದೆ.ಇದಕ್ಕೆ ಕಂಪೆನಿಗಳು ಆಕ್ಷೇಪ ಸಲ್ಲಿಸಿ,ಟ್ರಾಯ್ ಅನ್ನು ಈ ಬಗ್ಗೆ ಹಸ್ತಕ್ಷೇಪ ಮಾಡುವಂತೆ ಮನವಿ ಮಾಡಿವೆ.ಸಾರ್ವಜನಿಕ ರಂಗದ ಬಿಎಸೆನ್ನೆಲ್ ಮತ್ತು ಎಂಟಿಎನ್ನೆಲ್ ಕಂಪೆನಿಗಳ ವಿಡಿಯೋ ಕರೆಗಳನ್ನೂ ನೇರವಾಗಿ ಪರಿಶೀಲಿಸಲು ಸಾಧ್ಯವಿಲ್ಲ.ಆದರೂ ಅವುಗಳ ಸೇವೆಯ ಮೇಲೆ ಇಲ್ಲದ ನಿಷೇಧ,ಖಾಸಗಿರಂಗದ ಕಂಪೆನಿಗಳ ವಿಡಿಯೋ ಕರೆಗಳ ಮೇಲೆ ಮಾತ್ರಾ ಏಕೆ ಎಂಬುದು ಅವುಗಳ ವಾದ.ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಏನು ಮಾಡಲಿದೆ ಎನ್ನುವುದು ಕುತೂಹಲದ ವಿಷಯವಾಗಿದೆ,
--------------------------------------
ಉದಯವಾಣಿ ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,ಉದಯವಾಣಿ ಡೈರಿ ಗೆಲ್ಲಿ.ಬಹುಮಾನ ಪ್ರಾಯೋಜಿಸಿದವರು ವಿಟಿಯು ವಿಜಿಎಸ್ಟಿ ಪ್ರಾಯೋಜಿತ ಶಿಕ್ಷಕ ವಿಕಸನ ಕಾರ್ಯಕ್ರಮ ಆಯೋಜಿಸಿರುವ ಎನ್ ಎಂ ಎ ಎಂ ಐ ಟಿ,ನಿಟ್ಟೆಯ ಕಂಪ್ಯೂಟರ್ ವಿಜ್ಞಾನ ಮತ್ತು ಇನ್ಫೊರ್ಮೇಶನ್ ಸಯನ್ಸ್ ಇಂಜಿನಿಯರಿಂಗ್ ವಿಭಾಗಗಳು.ವಿ ಎಲ್ ಎಸ್ ಐ ವಿಷಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಕಾರ್ಯಕ್ರಮವನ್ನು ಬರುವ ಜನವರಿ ಹತ್ತರಿಂದ ಹನ್ನೆರಡರವರೆಗೆ ಆಯೋಜಿಸಲಾಗಿದೆ.
*ವರ್ಷ 2010 ಅತ್ಯಂತ ಪ್ರಮುಖ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆ ಯಾವುದು?ಯಾಕೆ?
(ಉತ್ತರಗಳನ್ನು ashok567@gmail.comಗೆ ಮಿಂಚಂಚೆ ಮಾಡಿ,ವಿಷಯ:NS10 ನಮೂದಿಸಿ ).
(ಕಳೆದ ವಾರದ ಸರಿಯುತ್ತರಗಳು:
*ಮಿರರ್ ಸೈಟ್ ಎಂದರೆ ಅಂತರ್ಜಾಲ ತಾಣದ ಮೇಲಿನ ಅಧಿಕ ಒತ್ತಡವನ್ನು ನಿವಾರಿಸಲು ಬಳಸಲಾಗುವ ತದ್ರೂಪಿ,ಅಣಕು,ದರ್ಪಣ,ಕನ್ನಡಿ ತಾಣ.
*ಹ್ಯಾಕರ್ ಎಂದರೆ ಸ್ವಂತ ಲಾಭಕ್ಕಾಗಿ,ದುರುದ್ದೇಶದಿಂದ ಅಥವ ಛಲದಿಂದ ಇತರ ತಾಣಗಳನ್ನು ಬೇಧಿಸಲು ಯತ್ನಿಸುವ ಕಂಪ್ಯೂಟರ್ ನಿಷ್ಣಾತ.ಕನ್ನಡ ಪದ ನುಸುಳುಗಾರ ಸೂಚಿಸಿ ಬಹುಮಾನ ಗೆದ್ದವರು ಯಶಸ್ವಿನಿ.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*ಕಟುಕ ಬಲ್ಲ ತಾಳ ಯಾವುದು?ಖಂಡಚೋಪು.
*ವಿಕಿಲೀಕ್ಸ್ ನಮ್ಮ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನೂ ಲೀಕ್ ಮಾಡಿದ್ದರೆ ಚೆನ್ನಾಗಿರೋದು...
*ಕಾಯಿಲೆ ಬಿದ್ದ(ಇಲ್) ಹದ್ದು(ಈಗಲ್)-ಇಲ್ಲೀಗಲ್!
*ಧೂಮಪಾನಿಗಳು ಸಿಗರೇಟು ಬಿಟ್ಟ ಹಾಗೆ ಬಂಗಾರಪ್ಪನವರೂ ನಾಲ್ಕನೇ ಬಾರಿ ಕಾಂಗ್ರೆಸ್ ಬಿಟ್ಟರು :)
-------------------------------
ಅಂತರ್ಜಾಲ ಮೂಲಕ ಟಿವಿ ನೇರ ಪ್ರಸಾರ ಏಕಿಲ್ಲ?
ಅಂತರ್ಜಾಲದ ಮೂಲಕ ಟಿವಿ ಕಾರ್ಯಕ್ರಮಗಳ ಪ್ರಸಾರ ದಿನೇ ದಿನೇ ಹೆಚ್ಚುತ್ತಿದೆ.ತ್ರೀಜಿ ಜಾಲದ ಮೂಲಕ ಇವನ್ನು ಮೊಬೈಲಿನಲ್ಲಿಯೂ ನೋಡುವ ಚಾಳಿ ಹಬ್ಬುತ್ತಿದೆ.ಆದರಿನ್ನೂ ಟಿವಿ ಕಾರ್ಯಕ್ರಮಗಳ ನೇರಪ್ರಸಾರ ಅಂತರ್ಜಾಲ ಮೂಲಕ ಆಗುತ್ತಿಲ್ಲವೆಂದೇ ಹೇಳಬೇಕು.ಬ್ಯಾಂಡ್ವಿಡ್ತ್ ಒಂದು ಸಮಸ್ಯೆಯಾದರೆ,ಮುಖ್ಯ ಕಾರಣ ಹಣಕಾಸಿನ ವಿಚಾರದ್ದೇ ಆಗಿದೆ.ಅಂತರ್ಜಾಲ ಮೂಲಕ ಉಚಿತವಾಗಿ ಚಾನೆಲ್ ಕಾರ್ಯಕ್ರಮಗಳು ಲಭ್ಯವಾದರೆ,ಕೇಬಲ್ ತಿವಿ,ಡಿಟಿಎಚ್ ಸೇವೆಗಳ ಚಂದಾದಾರರ ಸಂಖ್ಯೆ ಎಲ್ಲಿ ಕುಸಿಯುವುದೋ ಎನ್ನುವ ಭೀತಿ ಸೇವೆ ಒದಗಿಸುತ್ತಿರುವ ಕಂಪೆನಿಗಳಲ್ಲಿ ಮಡುಗಟ್ಟಿ ನಿಂತಿದೆ.
-------------------------------------
ವಿಜ್ಞಾನ ಕಲಿಕೆಗೆ ಅಂತರ್ಜಾಲ ತಾಣಗಳು
ವಿಜ್ಞಾನ ಕಲಿಯುವುದನ್ನು ಸುಲಭವಾಗಿಸುವ ಸಂಪನ್ಮೂಲಗಳನ್ನು ಹೊಂದಿರುವ ಅಂತರ್ಜಾಲತಾಣಗಳ ಕಡೆಗೆ ಕಣ್ಣು ಹಾಯಿಸಿದಾಗ,ನೂರಾರು ತಾಣಗಳಿವೆ.ಅವುಗಳ ಪೈಕಿ,ವೈವಿಧ್ಯಮಯ ವಿಷಯಗಳ ಮಾಹಿತಿ ನೀಡುತ್ತಿರುವ,ಉಪಯುಕ್ತ ಸಂಪನ್ಮೂಲಗಳನ್ನು ಹೊಂದಿರುವ,ವಿಜ್ಞಾನ ಕಲಿಕೆಯನ್ನು ಗಮ್ಮತ್ತಾಗಿಸುವ ಹತ್ತು ತಾಣಗಳನ್ನು ಪಟ್ಟಿ ಮಾಡಲಾಗಿದೆ.ವಿವರಗಳಿಗೆ http://mashable.com/2010/12/16/science-teacher-resources/ನೋಡಿ.
---------------------------------
ಚುಟುಕು-ಚೂರು
*ಎಲ್ಜಿ ಕಂಪೆನಿಯು ಒಪ್ಟಿಮಸ್ ಎಂಬ ಜಗತ್ತಿನ ಮೊದಲ ಜೋಡಿ ಸಂಸ್ಕಾರಕಗಳುಳ್ಲ ಫೋನ್ ಒದಗಿಸಿದೆ.ಇದರಿಂದ ಫೋನ್ ಹೆಚ್ಚು ಗಣಕ ಸಾಮರ್ಥ್ಯ ಹೊಂದಲಿದೆ.
*ಒರಾಕಲ್ ಕಂಪೆನಿಯ ಕ್ಲೌಡ್ ಸೇವೆ-ಪದಸಂಸ್ಕಾರಕ,ಸ್ಪ್ರೆಡ್ಶೀಟ್,ಪ್ರೆಸೆಂಟೇಶನ್ ತಂತ್ರಾಂಶಗಳು ಆನ್ಲೈನಿನಲ್ಲಿ ಲಭ್ಯವಾಗಲಿವೆ.ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳ ಕ್ಲೌಡ್ ಸೇವೆಗೆ ಇದು ಸ್ಪರ್ಧೆ ಒಡ್ಡಲಿದೆ.
*ನ್ಯೂಯಾರ್ಕಿನಲ್ಲಿ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಇಲ್ಲ.ಹೀಗಾಗಿ ಇಲ್ಲಿ ಟೆಕ್ ಕಂಪೆನಿಗಳು ಕಚೇರಿ ಆರಂಭಿಸುತ್ತಿಲ್ಲ.
Udayavani Unicode
Udayavani
*ಅಶೋಕ್ಕುಮಾರ್ ಎ
Comments
ಉ: ಅಂಗರಚನೆ ಅಭ್ಯಾಸಕ್ಕೆ ಗೂಗಲ್ ಬಾಡಿ ಬ್ರೌಸರ್
In reply to ಉ: ಅಂಗರಚನೆ ಅಭ್ಯಾಸಕ್ಕೆ ಗೂಗಲ್ ಬಾಡಿ ಬ್ರೌಸರ್ by ಶಿವ
ಉ: ಅಂಗರಚನೆ ಅಭ್ಯಾಸಕ್ಕೆ ಗೂಗಲ್ ಬಾಡಿ ಬ್ರೌಸರ್