ಅಂಗಳದಲ್ಲಿ ಅರಳಿದ ಮಲ್ಲಿಗೆ

ಅಂಗಳದಲ್ಲಿ ಅರಳಿದ ಮಲ್ಲಿಗೆ

ಕವನ

ಮನೆಯ ಅಂಗಳದಲ್ಲಿ ಗಿಡವೊಂದ ನೆಟ್ಟಿಹರು

ಟಿಸಿಲೊಡೆದು ಚಿಗುರು ನಳನಳಿಸಿತಲ್ಲಿ

ಎಂದುನೋಡ ನೋಡುತ್ತಿದ್ದಂತೆ ಶ್ವೇತವರ್ಣದಲಿ

ಮೊಗ್ಗೊಂದು ತನ್ನಿರವ ಸೂಚಿಸಿತಲ್ಲಿ

 

 ಮನೆಮಂದಿಯ ಕಣ್ಣೆಲ್ಲ ಮೊಗ್ಗಿನ ಮೇಲೆ

ಯಾವಾಗ ಅರಳಿ ಘಮಲ ಸೂಸುವುದೆಂದು

ಬಂದೇ ಬಿಟ್ಟಿತಲ್ಲ ಆ ದಿನ

ನಳನಳಿಸಿತು ಅಂಗಳದಲ್ಲಿ ಅರಳಿದ ಮಲ್ಲಿಗೆ 

 

ಮೆತ್ತಗೆ ಹೂವ ಕೊಯ್ಯಬೇಕೆಂಬ ಧ್ವನಿ

ಒಳಗಿಂದ ಅಮ್ಮನುಲಿದ ವಾಣಿ

ಗಿಡಕ್ಕೆ ಪೆಟ್ಟಾಗದಂತೆ ಜಾಗ್ರತೆ ಅಪ್ಪನೊಂದೆಡೆ

ಹೂವೋ ಸೌಂದರ್ಯದ ಖನಿ

 

ತಂದು ದೇವನ ಮುಡಿಗೇರಿಸಿದೆ

ನಕ್ಕಿತು ಕಣ್ಣಂಚಿನಲಿ ಸಾರ್ಥಕ್ಯ ಭಾವದಲಿ

ಓ ಪುಷ್ಪವೇ ನಿನ್ನ ನೆಲೆ-ಬೆಲೆಯಿಂದು

ನನಗೂ ಸಿಗಲೆಂದು ಬೇಡುವೆನು

 

ಸಂಭ್ರಮಿಸಿ ಸಂತಸಪಡಿ  ಬೇಡವೆನ್ನಲಾರೆ

ನನಗೂ ಬದುಕಲು ಅವಕಾಶ ನೀಡಿ

ಮೊಗ್ಗು ಅರಳುವ ಮುನ್ನವೇ

ಹೊಸಕಿ ಹಾಕದಿರಿ ಪ್ರಪಂಚದ ಬೆಳಕ ನೋಡುವೆ

 

ನಿಮ್ಮ ಆಸೆ ಆಕಾಂಕ್ಷೆಗಳ ಈಡೇರಿಸುವೆ

ಜಗಮೆಚ್ಚಿದ ಕುವರಿಯಾಗುವೆ

ಬಳಿಯೆನೆಂದೂ ಕರಿ ಮಸಿಯ ಮುಖಕ್ಕೆ

ನಿಮ್ಮ ಮಡಿಲ ಮೋಹದ ಅರಗಿಣಿಯಾಗುವೆ

(ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ)

 

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್