ಅಂಗಳದಿಂದ ಬೈನರಿಯವರೆಗೆ

ಅಂಗಳದಿಂದ ಬೈನರಿಯವರೆಗೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೇಘನಾ ಸುಧೀಂದ್ರ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೧೧೦.೦೦, ಮುದ್ರಣ: ೨೦೨೨

“ನಮ್ಮ ತಾಯ್ನುಡಿ ಕನ್ನಡದಲ್ಲಿ ಕ್ರಿಕೆಟ್ ಗೆ ಒತ್ತು ಕೊಟ್ಟು ಹೊರಬಂದಿರುವ ಈ ಬಗೆಯ ಪುಸ್ತಕವನ್ನು ನಾನೆಂದು ಕಂಡಿಲ್ಲ. ಆದುದರಿಂದ ಇದು ಒಂದು ವಿಶೇಷ ಹಾಗೂ ವಿಭಿನ್ನ ಪ್ರಯತ್ನ ಎನಿಸಿಕೊಂಡು ಒಬ್ಬ ಕ್ರಿಕೆಟಿಗನಾದ ನನ್ನ ಮನಸ್ಸಿಗೆ ಇನ್ನೂ ಹತ್ತಿರ ಆಗಿದೆ. ಕನ್ನಡದಲ್ಲಿ ಕ್ರಿಕೆಟ್ ನ ಟೆಕ್ನಿಕಲ್ ವಿಷಯಗಳನ್ನು ಈ ಪುಸ್ತಕದಲ್ಲಿ ಸರಳವಾಗಿ ಬರೆದಿರುವುದರಿಂದ ಕನ್ನಡಿಗರು ಆಟವನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಖಂಡಿತ ಸಹಕಾರಿಯಾಗಲಿದೆ ಎಂದೆನಿಸುತ್ತಿದೆ” ಎನ್ನುತ್ತಾರೆ ಮಾಜಿ ಅಂತರಾಷ್ಟ್ರೀಯ ಕ್ರಿಕೆಟರ್ ದೊಡ್ಡ ಗಣೇಶ. ಲೇಖಕಿ ಮೇಘನಾ ಸುಧೀಂದ್ರ. ಅವರ ‘ಅಂಗಳದಿಂದ ಬೈನರಿಯವರೆಗೆ’ ಕೃತಿಯಲ್ಲಿ ಬರೆದಿರುವ ಮುನ್ನುಡಿಯ ಮಾತು ನಿಮ್ಮ ಓದಿಗಾಗಿ..

“ನಮ್ಮೆಲ್ಲರ ನೆಚ್ಚಿನ ಕ್ರಿಕೆಟ್ ಆಟ ಕಳೆದ ಎರಡು ದಶಕಗಳಲ್ಲಿ ಅತ್ಯಂತ ವೇಗವಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈಗ ಮೂರು ಮಾದರಿಯ ಪಂದ್ಯಗಳಿರುವುದರಿಂದ ಆಟಗಾರರಿಗೆ ಮೂರೂ ಮಾದರಿಗಳಲ್ಲಿ ತಾವು ಸಲ್ಲುವಂತೆ ತಮ್ಮ ಆಟವನ್ನು ಅಳವಡಿಸಿಕೊಳ್ಳುವ ದೊಡ್ಡ ಸವಾಲು ಖಂಡಿತ ಇದೆ. ಪ್ರಸ್ತುತ ಕಾಲದಲ್ಲಿ ಎಡಬಿಡದೆ ನಡೆಯುವ ಅಂತರಾಷ್ಟ್ರೀಯ ಪ್ರವಾಸಗಳ ನಡುವೆ ಐಪಿಎಲ್ ಕೂಡ ಹುಟ್ಟಿಕೊಂಡಿರುವುದು ಕ್ರಿಕೆಟ್ ಗೆ ಹೊಸ ಆಯಾಮವನ್ನೇ ನೀಡಿದೆ ಎಂದರೆ ತಪ್ಪಾಗಲಾರದು. ಆಧುನಿಕ ಕ್ರಿಕೆಟರ್ ಗಳು ಬ್ಯಾಟಿಂಗ್ ಆಗಲಿ ಬೌಲಿಂಗ್ ಆಗಲಿ ಹೊಸ ಬಗೆಯ ಹೆಚ್ಚೆಚ್ಚು ತಂತ್ರಗಳನ್ನು ಕಲಿಯುತ್ತಾ, ತಮ್ಮ ಕುಂದುಗಳನ್ನು ಸುಧಾರಿಸಿಕೊಳ್ಳುತ್ತಾ ಪಕ್ವಗೊಂಡರಷ್ಟೇ ಉಳಿಗಾಲ. ಏಕೆಂದರೆ ಟೆಸ್ಟ್ ಮ್ಯಾಚ್ ನಲ್ಲಿ ಒಬ್ಬ ವೇಗದ ಬೌಲರ್ ಆಫ್ ಸ್ಟಂಪ್ ಲೈನ್ ನಲ್ಲಿ, ಒಂದು ಗುಡ್ ಲೆಂಗ್ತ್ ಬಾಲ್ ಸ್ವಿಂಗ್ ಮಾಡಿ, ಮೂರು ಸ್ಲಿಪ್ಸ್ ಒಂದು ಗಲ್ಲಿ ಇಟ್ಟು ಎಡ್ಜ್ ಮಾಡಿಸಿ ವಿಕೆಟ್ ಪಡೆಯಬಹುದು, ಆದರೆ ಟಿ-20 ಪಂದ್ಯದಲ್ಲಿ ಅದೇ ಗುಡ್ ಲೆಂಗ್ತ್ ಬಾಲ್ ಬ್ಯಾಟರ್ ನ ಪ್ರಹಾರಕ್ಕೆ ಸಿಕ್ಕು ಅಂಗಳದಿಂದ ಹೊರಹೋಗುವ ಸಂಭವವೇ ಹೆಚ್ಚಿರುತ್ತದೆ. ಮೇಲ್ನೋಟಕ್ಕೆ ಒಂದು ಮಾದರಿಯ ಆಟದಲ್ಲಿ ನಿಮ್ಮ ಬತ್ತಳಿಕೆಯಲ್ಲಿರುವ ದೊಡ್ಡ ಶಕ್ತಿಯೇ ಇನ್ನೊಂದು ಮಾದರಿಯಲ್ಲಿ ನಿಮಗೆ ಮುಳ್ಳಾಗಬಹುದು ಎಂದು ತಿಳಿಯುತ್ತದೆ. ಎರಡು ಬೇರೆ-ಬೇರೆ ಮಾದರಿಯ ಪಂದ್ಯಗಳಲ್ಲಿ ಆಟಗಾರರ ಮನಸ್ಥಿತಿಯಲ್ಲೇ ವ್ಯತ್ಯಾಸ ಇರುತ್ತದೆ. ಟೆಸ್ಟ್ ಮ್ಯಾಚ್ ಲಿ ಬಳಸುವ ಕೆಂಪು ಬಾಲ್ ಹೆಚ್ಚು ಸ್ವಿಂಗ್ ಆಗುವುದಲ್ಲದೆ, ಎದುರಾಳಿ ಅಣಿ ಮಾಡುವ ಆಕ್ರಮಣಕಾರಿ ಫೀಲ್ಡ್ ಸೆಟ್ಟಿಂಗ್ ಹಾಗೂ ಐದು ದಿನಗಳ ಪಂದ್ಯವೆನ್ನುವ ಕಾರಣದಿಂದ ಒಬ್ಬ ಬ್ಯಾಟರ್ ರನ್ ವೇಗವಾಗಿ ಬರದಿದ್ದರೂ ಅಡ್ಡಿ ಇಲ್ಲ, ತಾಳ್ಮೆಯಿಂದ ಆಡಿ ವಿಕೆಟ್ ಉಳಿಸಿಕೊಳ್ಳೋಣ ಎಂದು ರಕ್ಷಣಾತ್ಮಕ ಆಟಕ್ಕೆ ಮೊರೆಹೋಗುತ್ತಾನೆ. ಆದರೆ ಅದೇ ಬ್ಯಾಟರ್ ಟಿ-20 ಪಂದ್ಯದ ಮೊದಲ ಎಸೆತವನ್ನೇ ಔಟ್ ಆದರೂ ಅಡ್ಡಿ ಇಲ್ಲವೆಂದು ಬೌಲರ್ ಯಾರೆಂದು ಕೂಡ ಪರಿಗಣಿಸದೆ ಸಿಕ್ಸರ್ ಬಾರಿಸಲು ಬ್ಯಾಟ್ ಬೀಸುತ್ತಾನೆ. ನಮ್ಮ ಈ ಕ್ರಿಕೆಟ್ ಆಟದಲ್ಲಿ ಎಷ್ಟು ವ್ಯತ್ಯಾಸ ನೋಡಿ! ಹಾಗಾಗಿ ಈಗಿನ ವೃತ್ತಿಪರ ಕ್ರಿಕೆಟ್ ನ ದೊಡ್ಡ ಬೇಡಿಕೆಗಳಾನುಸಾರವಾಗಿ ಹಲವಾರು ಆಟಗಾರರು ಸಮತೋಲನ ಸಾಧಿಸಲಾಗದೆ ತ್ರಿಶಂಕು ಸ್ಥಿತಿ ತಲುಪಿ ಆಟದಿಂದಲೇ ವಿಮುಖರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಈ ದೆಸೆಯಲ್ಲಿ ಇತ್ತೀಚಿನ ದಿನಗಳಲ್ಲಿ ಒಬ್ಬ ಕ್ರಿಕೆಟರ್ ತನ್ನ ಆಟದ ಶಕ್ತಿ ಹಾಗೂ ಕುಂದುಗಳನ್ನರಿಯಲು ಕೋಚ್ ಒಟ್ಟಿಗೆ ತಂತ್ರಜ್ಞಾನದ ಮೊರೆ ಹೋಗುವುದನ್ನು ನಾವು ಕಾಣಬಹುದು.

ನನ್ನ ಆಟದ ದಿನಗಳಲ್ಲಿ ಮೊದಲ ಬಾರಿಗೆ ಲ್ಯಾಪ್ ಟಾಪ್ ನಮ್ಮ ಡ್ರೆಸ್ಸಿಂಗ್ ರೂಮ್ ಒಳಹೊಕ್ಕಾಗ, ಈ ವಸ್ತು ನಮಗೆ ಕ್ರಿಕೆಟ್ ಹೇಗೆ ಕಲಿಸಲು ಸಾಧ್ಯ? ಅಂಗಳದಲ್ಲಿ ಬೆವರು ಹರಿಸೋ ನಮಗೆ ಇದರ ಪ್ರಯೋಜನವಾದರೂ ಏನು? ಎಂದು ನನ್ನೊಂದಿಗೆ ಕರ್ನಾಟಕ ತಂಡದ ಕೆಲವು ಆಟಗಾರರೂ ಅಚ್ಚರಿ ಸೂಚಿಸಿದ್ದು ಸುಳ್ಳಲ್ಲ. ಜೊತೆಗೆ ನಮಗೆಲ್ಲಾ ಲ್ಯಾಪ್ ಟಾಪ್ ಬಗ್ಗೆ ಕುತೂಹಲ ಕೂಡ ಇದ್ದೇ ಇತ್ತು. ಆದರೆ ನನ್ನ ಆಟದ ಕಡೇ ದಿನಗಳಲ್ಲಿ ನಾನೂ ಕೂಡ ಒಂದು ಸಾಫ್ಟ್ವೇರ್ ಖರೀದಿಸಿ ನನ್ನ ಬೌಲಿಂಗ್ ಅನ್ನು ಸುಧಾರಿಸಿಕೊಳ್ಳಲು, ನನ್ನ ನೋ-ಬಾಲ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಸಿಕೊಂಡೆ. ಕೋಚ್ ಗಳು ನಮಗೆ ಡ್ರಿಲ್ ಗಳನ್ನು ಹೇಳಿಕೊಟ್ಟು ಕಠಿಣ ಅಭ್ಯಾಸ ಮಾಡಿಸಿದರೆ; ಆಟದ ಜೊತೆಗೆ ಡೇಟಾ ಹಾಗೂ ತಂತ್ರಜ್ಞಾನದ ಅರಿವು ಇರುವ ಅನಾಲಿಸ್ಟ್ ಗಳು ಇಂದು ತಮ್ಮ ಕೌಶಲ್ಯದಿಂದ ಆಟಗಾರರಿಗೆ ನೆರವಾಗುತ್ತಿದ್ದಾರೆ. ಆಧುನಿಕ ಕ್ರಿಕೆಟ್ ನಲ್ಲಿ ಅವರ ಉಪಯುಕ್ತತೆಯನ್ನು ತಳ್ಳಿಹಾಕುವಂತಿಲ್ಲ. ಆದರಿಂದಲೇ ನಾವು ಈಗ ಅಂತರಾಷ್ಟ್ರೀಯ ಪಂದ್ಯಗಳು ಮಾತ್ರವಲ್ಲದೆ ದೇಸೀ ಕ್ರಿಕೆಟ್ ನಲ್ಲೂ ಈ ಅನಾಲಿಸ್ಟ್ ಗಳನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ನೋಡಬಹುದು. ಈಗ ಬ್ಯಾಟ್ ಮಾಡಲು ಬಂದ ಬ್ಯಾಟರ್ ನ ಸ್ಟಾಟ್ಸ್ ಏನು? ಅವನು ಯಾವ ಬಗೆಯ ಎಸೆತಗಳಿಗೆ ಹೆಚ್ಚು ಔಟ್ ಆಗಿದ್ದಾನೆ? ಶಾರ್ಟ್ ಬಾಲ್ ಎದುರು ಆಡಬಲ್ಲ ಟೆಕ್ನಿಕ್ ಅವನಲ್ಲಿದೆಯೇ? ಸ್ಪಿನ್ನರ್ ಎದುರು ಹೇಗೆ ಆಡಿದ್ದಾನೆ? ಹೀಗೆ ಎದುರಾಳಿ ಪಾಳಯದಲ್ಲಿ ಹೊರಹೊಮ್ಮುವ ಇಂತಹ ಎಲ್ಲಾ ಬಗೆಯ ಪ್ರಶ್ನೆಗಳಿಗೆ ಕ್ಷಣ ಮಾತ್ರದಲ್ಲಿ, ಆ ಬ್ಯಾಟರ್ ತನ್ನ ಮೊದಲ ಬಾಲ್ ಎದುರಿಸುವ ಮುನ್ನವೇ, ಒಂದು ಕಮಾಂಡ್ ನಿಂದ ಸ್ಟಾಟ್ಸ್ ಎಳೆತಂದು ನಮಗೆ ನೀಡುತ್ತಾರೆ ಈ ಅನಾಲಿಸ್ಟ್ ಗಳು ಎಂದರೆ ನೀವು ಹೌಹಾರಬಹುದು! ಒಂದು ದೇಸೀ ತಂಡದ ಕೋಚ್ ಆಗಿರುವ ನಾನು ಅವರ ಅಗತ್ಯತೆ ಹಾಗೂ ಉಪಯುಕ್ತತೆಯನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ. ಖಂಡಿತವಾಗಿ ಅವರ ಆಗಮನ ಕ್ರಿಕೆಟ್ ಗೆ ವರವೇ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂತ್ರಜ್ಞಾನವಿಲ್ಲದ ಕ್ರಿಕೆಟ್ ಡ್ರೆಸ್ಸಿಂಗ್ ಕೋಣೆಯನ್ನು ಇಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆ ಮಟ್ಟಕ್ಕೆ ತಂತ್ರಜ್ಞಾನ ಇಂದು ಕ್ರಿಕೆಟ್ ನೊಟ್ಟಿಗೆ ಬೆರೆತು ಹೋಗಿದೆ.

ಇನ್ನು ವೃತ್ತಿಪರ ಕ್ರಿಕೆಟ್ ನಲ್ಲಿ ಯಶಸ್ಸಿಗಾಗಿ ಹಾತೊರೆಯುತ್ತಿರುವ ಒಬ್ಬ ವೇಗದ ಬೌಲರ್ ಹಾಗೂ ಅನಲಿಸ್ಟ್ ನ ನಡುವಿನ ಸಂಬಂಧವನ್ನು ಅಡಿಪಾಯವಾಗಿಟ್ಟುಕೊಂಡು ಹೆಣೆದಿರುವ ಮೇಘನಾ ಸುಧೀಂದ್ರರವರ ಈ ಕಥನ ಸೊಗಸಾಗಿ ಮೂಡಿ ಬಂದಿದೆ. ಭಾರತದ ಬ್ಯಾಟಿಂಗ್ ನೋಡಿದರೆ ಸಾಕು ಎಂಬ ಮನೋಭಾವದಿಂದ ಕ್ರಿಕೆಟ್ ನೋಡಲು ಶುರು ಮಾಡುವ ಹೆಚ್ಚು ಅಭಿಮಾನಿಗಳಿರುವ ನಮ್ಮ ದೇಶದಲ್ಲಿ ಐತಿಹಾಸಿಕವಾಗಿ ಯಾವಾಗಲೂ ಬ್ಯಾಟರ್ ಗಳೇ ಹೆಚ್ಚು ಮುನ್ನೆಲೆಗೆ ಬಂದು ದೇಶದ ಹೀರೋಗಳಾಗಿ ಮೆರೆದಿದ್ದಾರೆ. ಹಾಗಂತ ನನಗೇನು ನಮ್ಮ ನಾಡಿನ ಬ್ಯಾಟರ್ ಗಳ ಮೇಲೆ ಹೊಟ್ಟೆಕಿಚ್ಚು ಅಂತಲ್ಲ. ಆದರೆ ಈಗಿನ ಕಾಲದ ಪ್ರಸ್ತುತ ಆಟದಲ್ಲಿ ಪಂದ್ಯ ಗೆಲ್ಲಿಸುವ ಬೌಲರ್ ಗಳೂ (ಅದರಲ್ಲೂ ವೇಗಿಗಳು) ಬ್ಯಾಟರ್ ಗಳಷ್ಟೇ ಜನಪ್ರಿಯರಾಗಿರುವುದು ಮಾತ್ರವಲ್ಲದೆ ಭಾರತದ ಸ್ಟಾರ್ ಬ್ಯಾಟರ್ ಗಳಿಗೆ ಪೈಪೋಟಿ ನೀಡುತ್ತಿದ್ದಾರೆ ಎಂದು ನಿಸ್ಸಂದೇಹವಾಗಿ ಹೇಳಬಲ್ಲೆ. ಇದು ಹೆಮ್ಮೆಯ ಸಂಗತಿ ಕೂಡ. ಏಕೆಂದರೆ ಕ್ರಿಕೆಟ್ ಎಂದರೆ ಬ್ಯಾಟಿಂಗ್ ಒಂದೇ ಅಲ್ಲ. ಹಾಗಾಗಿ ಈ ಪುಸ್ತಕದಲ್ಲಿ ನನ್ನಂತಹ ಒಬ್ಬ ವೇಗದ ಬೌಲರ್ ಕಥಾನಾಯಕ ಆಗಿರುವುದು ನನಗೆ ಸಂತಸ ಹಾಗೂ ಹಿಗ್ಗು ತಂದಿದೆ. ಅದರಲ್ಲೂ ನಮ್ಮ ತಾಯ್ನುಡಿ ಕನ್ನಡದಲ್ಲಿ ಕ್ರಿಕೆಟ್ ಗೆ ಒತ್ತು ಕೊಟ್ಟು ಹೊರಬಂದಿರುವ ಈ ಬಗೆಯ ಪುಸ್ತಕವನ್ನು ನಾನೆಂದು ಕಂಡಿಲ್ಲ. ಆದುದರಿಂದ ಇದು ಒಂದು ವಿಶೇಷ ಹಾಗೂ ವಿಭಿನ್ನ ಪ್ರಯತ್ನ ಎನಿಸಿಕೊಂಡು ಒಬ್ಬ ಕ್ರಿಕೆಟಿಗನಾದ ನನ್ನ ಮನಸ್ಸಿಗೆ ಇನ್ನೂ ಹತ್ತಿರ ಆಗಿದೆ. ಕನ್ನಡದಲ್ಲಿ ಕ್ರಿಕೆಟ್ ನ ಟೆಕ್ನಿಕಲ್ ವಿಷಯಗಳನ್ನು ಈ ಪುಸ್ತಕದಲ್ಲಿ ಸರಳವಾಗಿ ಬರೆದಿರುವುದರಿಂದ ಕನ್ನಡಿಗರು ಆಟವನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಖಂಡಿತ ಸಹಕಾರಿಯಾಗಲಿದೆ ಎಂದೆನೆಸುತ್ತಿದೆ. ಪುಸ್ತಕದುದ್ದಕ್ಕೂ ಓದುಗರನ್ನು ಹಿಡಿದಿಟ್ಟುಕೊಳ್ಳುವಂತೆ ಚಿತ್ರಿಸುವ ಮೇಘನಾರ ಪ್ರಯತ್ನಕ್ಕೆ ನನ್ನ ಮೆಚ್ಚುಗೆ ಸೂಚಿಸಲು ಇಚ್ಛಿಸುತ್ತೇನೆ.ಇಲ್ಲಿನ ಕೆಲವು ಸನ್ನಿವೇಶಗಳು ನಾನು ೧೯೯೮-೯೯ ರ ಕಾಲಘಟ್ಟದಲ್ಲಿ ಭಾರತ ತಂಡಕ್ಕೆ ಮರಳುವ ಉದ್ದೇಶದಿಂದ ಮಾಡಿದ ಶತಾಯಗತಾಯ ಪ್ರಯತ್ನವನ್ನು ನನಗೆ ಮತ್ತೆ ನೆನಪಿಸಿ ನನ್ನ ಕಣ್ಣಾಲೆಗಳು ಒದ್ದೆಯಾಗುವಂತೆ ಮಾಡಿತು.

ಕರ್ನಾಟಕ ಕ್ರಿಕೆಟ್ ಗೆ ಒಂದು ಭವ್ಯ ಪರಂಪರೆ ಇದೆ. ೧೯೭೦ರ ದಶಕದಲ್ಲಿ ಮುಂಬೈನ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿ ಮೊದಲ ರಣಜಿ ಟೂರ್ನಿ ಗೆದ್ದ ನಮ್ಮ ತಂಡದ ಕತೆ ಅತ್ಯಂತ ರೋಚಕವಾದುದು. ಇಂದಿಗೂ ಭಾರತದ ಕ್ರಿಕೆಟ್ ವಲಯದಲ್ಲಿ ಕರ್ನಾಟಕದ ಆಟಗಾರರಿಗೆ ಸಿಗುವ ಮರ್ಯಾದೆ ತುಂಬಾ ವಿಶೇಷವಾದುದು. ಇದು ನಮ್ಮ ಹಿರಿಯರು ನಮಗೆ ಕೊಟ್ಟ ಬಳುವಳಿ ಎಂದು ಒಬ್ಬ ಕರ್ನಾಟಕದ ಆಟಗಾರನಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಸಭ್ಯತೆಗೆ ಹೆಸರುವಾಸಿ ನಮ್ಮ ನಾಡಿನ ಕ್ರಿಕೆಟಿಗರು. ಆಗಿನ ಎರಾಪಲ್ಲಿ ಪ್ರಸನ್ನರಿಂದ ಈಗಿನ ಕೆ.ಎಲ್ ರಾಹುಲ್ ರವೆರಗೂ ಕರ್ನಾಟಕದಿಂದ ಹತ್ತಾರು ದಿಗ್ಗಜರು ಭಾರತದ ಪರ ಆಡುವುದು ಮಾತ್ರವಲ್ಲದೆ ಎಷ್ಟೋ ಐತಿಹಾಸಿಕ ಪಂದ್ಯಾವಳಿಗಳನ್ನು ಗೆಲ್ಲಿಸಿ, ದಿಗ್ಗಜರಾಗಿ ಇತಿಹಾಸದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಬರೆದಿದ್ದಾರೆ. ಕನ್ನಡಿಗರು ಕ್ರಿಕೆಟ್ ಪ್ರೀತಿಸುವ ಪರಿ ಅದ್ವಿತೀಯ. ಅರ್ಧ ಶತಮಾನದಿಂದ ಕ್ರಿಕೆಟ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ನಾನು ಭಾವಿಸುತ್ತೇನೆ. ಕನ್ನಡಿಗರು ಅದರಲ್ಲೂ ಕ್ರಿಕೆಟ್ ಅಭಿಮಾನಿಗಳು ಖಂಡಿತ ಈ ಪುಸ್ತಕವನ್ನು ಓದಲು ಸಾಕಷ್ಟು ಕಾರಣಗಳಿವೆ. ಲೇಖಕಿ ಮೇಘನಾರಿಗೆ ತಮ್ಮ ಪುಸ್ತಕಕ್ಕಾಗಿ ಶುಭಾ ಕೋರುತ್ತಾ ಈ ಪುಸ್ತಕ ಹೆಚ್ಚೆಚ್ಚು ಕನ್ನಡಿಗರನ್ನು ತಲುಪಲಿ ಎಂದು ಹಾರೈಸುತ್ತೇನೆ.”

೧೨೦ ಪುಟಗಳ ಈ ಪುಸ್ತಕವು ಕ್ರಿಕೆಟ್ ಪ್ರಿಯರಿಗೆ ಇನ್ನಷ್ಟು ಆಪ್ತವಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕ್ರಿಕೆಟ್ ಬಗ್ಗೆ ಇನ್ನಷ್ಟು ತಿಳಿಯ ಬೇಕು ಅನ್ನುವವರಿಗೂ ಈ ಪುಟ್ಟ ಪುಸ್ತಕ ಉಪಯುಕ್ತ.