ಅಂಚೆಚೀಟಿಗಳಲ್ಲಿ ಭಾರತೀಯ ವಿಜ್ಞಾನಿಗಳು

ಅಂಚೆಚೀಟಿಗಳಲ್ಲಿ ಭಾರತೀಯ ವಿಜ್ಞಾನಿಗಳು

ಒಂದು ಕಾಲದಲ್ಲಿ ಅಂಚೆ ಚೀಟಿಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಬದಲಾದ ಕಾಲಘಟ್ಟದಲ್ಲಿ ಅಂಚೆ ಇಲಾಖೆಗೆ ಹೋಗುವ ಜನರೇ ಕಡಿಮೆಯಾಗಿದ್ದಾರೆ. ಖಾಸಗಿಯಾಗಿ ಪತ್ರಗಳನ್ನಂತೂ ಯಾರೂ ಬರೆಯುವುದೇ ಇಲ್ಲ. ಬಹಳಷ್ಟು ಮಂದಿಗೆ ಅಂಚೆ ಕವರ್, ಕಾರ್ಡ್, ಅಂತರ್ದೇಶೀಯ ಪತ್ರದ ಬೆಲೆಯೇ ಗೊತ್ತಿರಲಿಕ್ಕಿಲ್ಲ. ಆದರೆ ಈಗಲೂ ವಿಶೇಷ ಸಂದರ್ಭಗಳಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ಅಂಚೆ ಚೀಟಿ ಮತ್ತು ಅಂಚೆ ಕವರ್ ಬಿಡುಗಡೆ ಮಾಡುವುದ್ದಿದೆ. ಗಣ್ಯ ವ್ಯಕ್ತಿಗಳ ನಿಧನದ ಬಳಿಕ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಗುತ್ತದೆ. ಅಂಚೆ ಚೀಟಿ ಸಂಗ್ರಾಹಕರು ಇವುಗಳನ್ನು ಬಹಳ ಮುತುವರ್ಜಿಯಿಂದ ಸಂಗ್ರಹಿಸುತ್ತಾರೆ. ಹಲವಾರು ಭಾರತೀಯ ವಿಜ್ಞಾನಿಗಳ ಅಂಚೆ ಚೀಟಿಗಳು ಹೊರಬಂದಿವೆ. ಅವುಗಳಲ್ಲಿ ಕೆಲವು ಅಂಚೆಚೀಟಿಗಳ ಪರಿಚಯ ಇಲ್ಲಿದೆ.

ಸರ್ ಸಿ ವಿ ರಾಮನ್ (೧೯೮೮-೧೯೭೦): ‘ರಾಮನ್ ಎಫೆಕ್ಟ್' (ರಾಮನ್ ಪರಿಣಾಮ) ಮೂಲಕ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದ ಸಿ ವಿ ರಾಮನ್ ಅವರಿಗೆ ೧೯೩೦ರಲ್ಲಿ ಪ್ರತಿಷ್ಟಿತ ನೊಬೆಲ್ ಬಹುಮಾನ ಒಲಿದು ಬಂತು. ಆಗ ಅವರಿಗೆ ೪೨ ವರ್ಷ ವಯಸ್ಸು. ಈ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವ್ಯಕ್ತಿ ಸಿ ವಿ ರಾಮನ್ ಎನ್ನುವುದು ಹೆಚ್ಚುವರಿ ಹೆಗ್ಗಳಿಕೆ. ಇವರ ಹುಟ್ಟೂರು ತಮಿಳುನಾಡಿನ ತಿರುಚನಾಪಳ್ಳಿಯಾದರೂ ಬೆಂಗಳೂರಿನ ಜತೆ ದೀರ್ಘಕಾಲೀನ ನಂಟು ಹೊಂದಿದ್ದರು. 

ಐನ್ ಸ್ಟೀನ್ ಮತ್ತು ಸೋಮರ್ ಫೆಲ್ಡ್ ಸೇರಿದಂತೆ ಜಗತ್ತಿನ ಖ್ಯಾತ ವಿಜ್ಞಾನಿಗಳು ಮುಕ್ತವಾಗಿ ಸ್ವಾಗತಿಸಿದ್ದ ‘ರಾಮನ್ ಪರಿಣಾಮ'ವು ಎಷ್ಟು ಮಹತ್ವದ್ದಾಗಿತ್ತೆಂದರೆ ಅದು ಮುಂದೆ ಹಲವಾರು ಆವಿಷ್ಕಾರಗಳಿಗೆ ದಾರಿ ಮಾಡಿಕೊಟ್ಟಿತು. ರಾಮನ್ ಪರಿಣಾಮದ ಮೇಲೆ ಅಥವಾ ಅದನ್ನು ಬಳಸಿಕೊಂಡು ಬರೆದ ವಿಜ್ಞಾನ ಪ್ರಬಂಧಗಳ ಸಂಖ್ಯೆ ೧೯೮೭ರ ಹೊತ್ತಿಗೆ, ಸುಮಾರು ಐದು ಸಾವಿರವನ್ನು ಮುಟ್ಟಿತ್ತು. ರಾಮನ್ ಪರಿಣಾಮವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿವರಿಸಿದ ಸ್ಮರಣಾರ್ಥ ಫೆಬ್ರವರಿ ೨೮ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 

ಡಾ. ಶಾಂತಿ ಸ್ವರೂಪ್ ಭಟ್ನಾಗರ್ (೧೮೯೪-೧೯೫೫):  ‘ಸಂಶೋಧನಾ ಪ್ರಯೋಗಾಲಯಗಳ ಪಿತಾಮಹ' ಎಂಬ ಗೌರವಕ್ಕೆ ಪಾತ್ರರಾಗಿರುವ ವಿಜ್ಞಾನಿ ಡಾ. ಶಾಂತಿ ಸ್ವರೂಪ್ ಭಟ್ನಾಗರ್. ಇವರು ಫೆಬ್ರವರಿ ೧೨, ೧೮೯೪ರಲ್ಲಿ ಜನಿಸಿದರು. ೧೨ ವರ್ಷಗಳ ಕಾಲ ರಾಸಾಯನಿಕ ವಿಜ್ಞಾನದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದ ಇವರು ಹಲವಾರು ರಾಸಾಯನಿಕ ಪ್ರಯೋಗಾಲಯಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಹಾರ ಸಂಸ್ಕರಣ ತಂತ್ರಜ್ಞಾನ ಸಂಸ್ಥೆ ಮೈಸೂರು, ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ ಪುಣೆ, ರಾಷ್ಟ್ರೀಯ ಲೋಹ ವಿಜ್ಞಾನ ಪ್ರಯೋಗಾಲಯ, ಜೆಮ್ ಶೆಡ್ ಪುರ ಮೊದಲಾದ ಹಲವಾರು ಸಂಸ್ಥೆಗಳ ಸ್ಥಾಪನೆಯ ಹಿಂದೆ ಇವರ ಶ್ರಮವಿದೆ. ೧೯೪೧ರಲ್ಲಿ ಬ್ರಿಟೀಷ್ ಸರಕಾರದಿಂದ ನೈಟ್ ಹುಡ್ ಪದವಿಗೆ ಪಾತ್ರರಾದ ಡಾ. ಭಟ್ನಾಗರ್ ವೈಜ್ಞಾನಿಕ ಮತ್ತು ಕೈಗಾರಿಕ ಸಂಶೋಧನ ಮಂಡಳಿಯ ಮೊದಲ ಡೈರೆಕ್ಟರ್ ಜನರಲ್. ಡಾ. ಭಟ್ನಾಗರ್ ಕೇವಲ ವಿಜ್ಞಾನಿಯಲ್ಲ, ಹಿಂದಿ ಭಾಷೆಯಲ್ಲಿ ಶ್ರೇಷ್ಟ ಕವಿಯೂ ಕೂಡ ಆಗಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ‘ಕುಲಗೀತೆ' ಯನ್ನು ಬರೆದವರು ಇವರೇ ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ.

ಮೇಘನಾದ ಸಹಾ (೧೮೯೩- ೧೯೫೬) : ಅಕ್ಟೋಬರ್ ೬, ೧೮೯೩ರಲ್ಲಿ ಢಾಕಾ (ಈಗ ಬಾಂಗ್ಲಾದೇಶದ ರಾಜಧಾನಿ) ಎಂಬ ರಾಜ್ಯದ ಸಿಯೋತರಲಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಮೇಘನಾದ ಸಹಾ ಓರ್ವ ಭಾರತೀಯ ಭೌತ ವಿಜ್ಞಾನಿ. ೧೯೨೦ರಲ್ಲಿ ಇವರು ರೂಪಿಸಿದ ಉಷ್ಣ ಅಯಾನೀಕರಣ ಸಮೀಕರಣ (Thermal Ionization Equation) ನಹಳ ಪ್ರಸಿದ್ಧ. ಇದನ್ನು ‘ಸಹಾ ಸಮೀಕರಣ' ಎಂದೇ ಕರೆಯಲಾಗುತ್ತದೆ. ಇದು ನಕ್ಷತ್ರಗಳಲ್ಲಿ ನಡೆಯುವ ರಾಸಾಯನಿಕ ಹಾಗೂ ಭೌತಿಕ ಸಂಯೋಜನೆಗಳನ್ನು ಪರಿಣಾಮಕಾರಿಯಾಗಿ ವಿವರಿಸಲು ನೆರವಾಗುತ್ತದೆ. ಕೋಲ್ಕತಾ ಪರಮಾಣು ಭೌತವಿಜ್ಞಾನ ಸಂಸ್ಥೆಯ ಸ್ಥಾಪನೆಯಲ್ಲಿ ಡಾ. ಸಹಾ ಪಾತ್ರ ಗಣನೀಯ. ಇವರು ಸಂಸತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸತ್ಯೇಂದ್ರನಾಥ ಬೋಸ್ (೧೮೯೪-೧೯೭೪) : ಸಂಖ್ಯಾ ಶಾಸ್ತ್ರದಲ್ಲಿ ವಿಶೇಷ ಹಿಡಿತವಿದ್ದ ಭಾರತೀಯ ಭೌತ ವಿಜ್ಞಾನಿ ಸತ್ಯೇಂದ್ರನಾಥ ಬೋಸರು ಹುಟ್ಟಿದ್ದು ಬಂಗಾಳದ ಕೋಲ್ಕತ್ತಾದಲ್ಲಿ. ಇವರು ಆಲ್ಬರ್ಟ್ ಐನ್ ಸ್ಟೀನ್ ಅವರ ಜೊತೆಗೂಡಿ ಅಭಿವೃದ್ಧಿ ಪಡಿಸಿದ ‘ಬೋಸ್ - ಐನ್ ಸ್ಟೀನ್ ಸ್ಟಾಟಿಸ್ಟಿಕ್', ‘ಬೋಸ್- ಐನ್ ಸ್ಟೀನ್ ಕಂಡನ್ಸೇಟ್' ಸಿದ್ಧಾಂತಗಳು ಮಹತ್ವದ್ದಾಗಿವೆ. ‘ಬೋಸ್ - ಐನ್ ಸ್ಟೀನ್ ಸ್ಟಾಟಿಸ್ಟಿಕ್’ ನಿಯಮಗಳನ್ನು ಅನುಸರಿಸುವ ಕಣಗಳಿಗೆ ‘ಬೋಸಾನ್' ಎಂಬ ಹೆಸರೇ ಬಂದಿದೆ. ದೇವಕಣದ ಸಂಶೋಧನೆಯ ಸಮಯದಲ್ಲಿ ಕೂಡ ಕೇಳಿ ಬಂದ ಹೆಸರು ‘ಹಿಗ್ಸ್ ಬೋಸಾನ್' ಎಂದೇ. ೧೯೯೪ರಲ್ಲಿ ಇವರ ಜನ್ಮಶತಾಬ್ದಿಯ ಸವಿನೆನಪಿಗಾಗಿ ಅಂಚೆ ಚೀಟಿಯೊಂದನ್ನು ಹೊರ ತರುವ ಮೂಲಕ ಗೌರವ ಸಲ್ಲಿಸಲಾಗಿದೆ.

ಜಗದೀಶಚಂದ್ರ ಬೋಸ್ ( ೧೮೫೮- ೧೯೩೭) : ಪ್ರಾಣಿಗಳಂತೆ ಸಸ್ಯಗಳೂ ಕೂಡಾ ಬಾಹ್ಯ ಪ್ರಭಾವಗಳಿಗೆ ಸ್ಪಂದಿಸುತ್ತವೆ, ಅವುಗಳಿಗೂ ಜೀವವಿದೆ ಎಂದು ಜಗತ್ತಿಗೆ ವೈಜ್ಞಾನಿಕ ಪುರಾವೆಗಳ ಮೂಲಕ ತಿಳಿಸಿಕೊಟ್ಟ ಬಹುಮುಖ ಪ್ರತಿಭೆಯ ವಿಜ್ಞಾನಿ ಸರ್ ಜಗದೀಶಚಂದ್ರ ಬೋಸರು ಬಂಗಾಳ ಮೂಲದವರು. ಸಸ್ಯಗಳ ಬೆಳವಣಿಗೆಯ ದರವನ್ನು ದಾಖಲಿಸಲು ಅವರು ರೂಪಿಸಿದ ‘ಕ್ರೆಸ್ಕೋಗ್ರಾಫ್' ಪ್ರಸಿದ್ಧ. ರೇಡಿಯೋ ತಂತ್ರಜ್ಞಾನ, ದೂರ ಸಂಪರ್ಕ, ಭೌತವಿಜ್ಞಾನ, ಸಸ್ಯ ಜೀವ ಶಾಸ್ತ್ರ ಸೇರಿದಂತೆ ಹಲವಾರು ವಿಭಾಗಳಲ್ಲಿ ಸಂಶೋಧನೆ ನಡೆಸಿದ್ದ ಬೋಸ್ ತಮ್ಮ ಸಂಶೋಧನೆಗಳಿಗೆ ಪೇಟೆಂಟ್ ಪಡೆಯುವ ವಿಷಯದಲ್ಲಿ ಮಾತ್ರ ಅನಾಸಕ್ತರಾಗಿದ್ದರು. ‘ನಾನೇನು ಸೃಷ್ಟಿಕರ್ತನಲ್ಲ, ಈ ಲೋಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕೆಲವು ವಸ್ತು ವಿಶೇಷಗಳನ್ನು ತಿಳಿಸಿದ್ದಷ್ಟೇ ನನ್ನ ಕ್ಲಾರ್ಯ. ಹಾಗಾಗಿ ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು'. ಎನ್ನುವುದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿತ್ತು.

ವಿಕ್ರಮ್ ಸಾರಾಭಾಯಿ (೧೯೧೯-೧೯೭೧): ವಿಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದ ಹೊರತಾಗಿಯೂ ಕೈಗಾರಿಕೆ, ಉದ್ಯಮ, ಅಬಿವೃದ್ಧಿ ಸಂಬಂಧಿ ವಿಷಯಗಳಲ್ಲೂ ಆಸಕ್ತರಾಗಿದ್ದವರು ವಿಕ್ರಮ್ ಸಾರಾಭಾಯಿ. ಅವರು ಬಾಹ್ಯಾಕಾಶ ಸಂಶೋಧನೆ ಹಾಗೂ ಅಣುಶಕ್ತಿ ಅಭಿವೃದ್ಧಿ ಕಾರ್ಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟನ್ನು (IIM) ಸ್ಥಾಪಿಸಿದರು. ‘ಇಸ್ರೋ’ ಸ್ಥಾಪಕರಾಗಿ, ‘ತುಂಬಾ ರಾಕೆಟ್ ಉಡಾವಣಾ ಕೇಂದ್ರ'ವನ್ನು ಕಟ್ಟುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯ ಯಾನಕ್ಕೆ ಅರ್ಥಪೂರ್ಣ ಮುನ್ನುಡಿಯನ್ನು ಬರೆದವರು ವಿಕ್ರಮ್ ಸಾರಾಭಾಯಿ.

ಈ ಮೇಲಿನ ವಿಜ್ಞಾನಿಗಳಲ್ಲದೇ ಇನ್ನೂ ಹಲವಾರು ಮಂದಿ ವಿಜ್ಞಾನಿಗಳ ಅಂಚೆ ಚೀಟಿಗಳನ್ನು ಹೊರತರುವ ಮೂಲಕ ಸರಕಾರವು ಅವರ ಸಾಧನೆಯನ್ನು ಗೌರವಿಸಿದೆ. ಸಾಮಂತ ಚಂದ್ರಶೇಖರ್, ಸತೀಶ್ ಧವನ್, ಡಾ. ಎ ಪಿ ಜೆ ಅಬ್ದುಲ್ ಕಲಾಂ ಮಾತ್ರವಲ್ಲದೇ ಬಹಳ ಹಿಂದಿನ ಆರ್ಯಭಟ್ಟ, ಚರಕ, ಸುಶ್ರುತ ಮೊದಲಾದವರನ್ನೂ ಅಂಚೆ ಚೀಟಿಯಲ್ಲಿ ಮುದ್ರಿಸುವುದರ ಮೂಲಕ ಗುರುತಿಸಲಾಗಿದೆ. ಅಂಚೆ ಚೀಟಿ ಸಂಗ್ರಹ ಮಾಡುವವರ ಬಳಿ ಈ ಅಂಚೆ ಚೀಟಿಗಳು ನೋಡಲು ಸಿಗುತ್ತವೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ