ಅಂತರಂಗದಂತಃಪುರದ ಕದಪದ ಮನದನ್ನೆಯರು..!

ಅಂತರಂಗದಂತಃಪುರದ ಕದಪದ ಮನದನ್ನೆಯರು..!

ಕವನ

 

ಈ ಆಧುನಿಕ ಯುಗದಲಿ 
ಒಬ್ಬೊಬ್ಬರೂ ರಾಜರು, ಮಹರಾಜರು,
ಚಕ್ರವರ್ತಿಗಳು.
ಎಲ್ಲರ ಮನದಲೂ ವಿಸ್ತಾರ
ವಾಹ್! ಎಷ್ಟು ದೊಡ್ಡ ಅಂತಃಪುರ!
ತುಂಬಿ ತುಳುಕುವ ಜನಾನದಲ್ಲಿ
ಎಷ್ಟೊಂದು ರಾಣಿಯರಿಲ್ಲಿ
ಮಹರಾಣಿಯರೆ ತುಂಬಿದ ಗಲ್ಲಿ
ಮನದನ್ನೆಯರೂ ಅಲ್ಲಲ್ಲಿ;
ಬರುವ ಬರದಿರುವ 
ಅರಸನ ಕಾಯುವ ಮಲ್ಲಿಗಳ
ಹೆಕ್ಕಿ, ಅಪ್ಪಿ, ಮುದ್ದಾಡಿ ಬಳಸುವ
ಸರ್ವಸ್ವವೇ ನೀನೆಂದು 
ಓಲೈಸುವ
ಬರದಿರುವನೆ? ಬಂದೆ ಬರುವ!
ಎಂದು ಗತ್ತಲಿ ಮೆರೆವ,
ಕ್ಷಣ ಗಳಿಗೆ ದಿನವೂ ಎಡಬಿಡದೆ
ಮನದಂತಃಪುರದ
ಮನದನ್ನೆಯರಾಗಿ 
ಜೊತೆಗೆ ಜೋತುಬಿದ್ದು 
ಜೋಳಿಗೆಯಾದ,
ಬರಲೆ ಇಲ್ಲವಲ್ಲವೆಂದು
ಬಾಯಾರಿ, ಕಾದು, ಬೇಸತ್ತು
ಹೆಚ್ಚೂಕಡಿಮೆ ಸತ್ತೂ ಹೋದ,
ಅರಸುತ್ತಲೆ ಬಳಲಿದ
ಎಷ್ಟೊಂದು ಅರಸಿಯರ 
ಬಳುಕು ನಲ್ಲೆಯರ
ಅವರ ದಾಸದಾಸಿಯರ
ಸದ್ದಿಂದಲೆ ತುಂಬಿ 
ಮೌನವಾಗಿ ಅಳುತಿಹ 
ಸಾವಿರ ಸಾವಿರ 
ಮನಕದಪದಗಳ ಅವಾಂತರ
ಈ 'ಪಾಸ್ವರ್ಡುಗಳೆಂಬ'
ರಾಣಿಯರಿಂದ ತುಂಬಿ
ಚೆಲ್ಲಾಡುವ
ನಮ್ಮ ನಿಮ್ಮೆಲ್ಲರ
ಈ ಮನದಂತಃಪುರ!
 
--------------------------------------------------------------------------------------------------------------------------------------------------------------------------------------
ನಾಗೇಶ ಮೈಸೂರು, ಸಿಂಗಾಪುರ, 06.04.2013 ( https://nageshamysore.wordpress.com/ )
(ಪಾಸ್ವರ್ಡ್ ಅರ್ಥಾತ್ ಮನಕದಪದಗಳ ಕುರಿತಾದ ಲೇಖನದ ಮುನ್ನುಡಿ ಈ ಕವನ - ಅರ್ಥಾತ್ ಪಾಸ್ವರ್ಡುಗಳ ಚರಿತೆ. ಲೇಖನವೋದಬೇಕೆಂದಿದ್ದರೆ ಈ ಕೆಳಗಿನ ಜಾಲ-ತಾಣದಲ್ಲಿ ಜಾಲಾಡಿ!
https://nageshamysore.wordpress.com/%e0%b2%85%e0%b2%82%e0%b2%a4%e0%b2%b0%e0%b2%82%e0%b2%97%e0%b2%a6%e0%b2%82%e0%b2%a4%e0%b2%83%e0%b2%aa%e0%b3%81%e0%b2%b0%e0%b2%a6-%e0%b2%95%e0%b2%a6%e0%b2%aa%e0%b2%a6-%e0%b2%ae%e0%b2%a8%e0%b2%a6%e0%b2%a8/ )
----------------------------------------------------------------------------------------------------------------------------------------