ಅಂತರಂಗದ ಚಳವಳಿ ನಮ್ಮೆಲ್ಲರಲ್ಲೂ ಮೂಡಲಿ!
ಪತ್ರಿಕೆಗಳು, ಟಿವಿಗಳು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಸಂಭ್ರಮದ ಸುದ್ದಿಗಳು, ಹುಟ್ಟುಹಬ್ಬದ, ನಾಮಕರಣದ, ವಾರ್ಷಿಕೋತ್ಸವದ, ಜಯಶಾಲಿಯಾದ, ಕಾರು ಬಂಗಲೆ ಆಸ್ತಿ ಖರೀದಿಸಿದ, ಅಧಿಕಾರ ಸ್ವೀಕರಿಸಿದ.. ಇನ್ನೂ ಹಲವಾರು ಸಂತೋಷದ ಸುದ್ದಿಗಳನ್ನು ನೋಡುತ್ತೇನೆ. ಸಾಧ್ಯವಾದರೆ ಪರಿಚಿತರಿಗೆ ಅಭಿನಂದನೆಗಳನ್ನೂ ಹೇಳುತ್ತೇನೆ. ನನಗೂ ಸಮಾಧಾನ. ನನ್ನಿಂದ ಅವರು ಏನನ್ನೂ ನಿರೀಕ್ಷಿಸುವುದಿಲ್ಲ. ಏನನ್ನಾದರೂ ಕೊಡಲು ನನ್ನಲ್ಲಿ ಏನೂ ಉಳಿದಿಲ್ಲ. ಅವರಿಗೆ ಒಳ್ಳೆಯದಾಗಲಿ.
ಆದರೆ, ಇದೇ ಮಾಧ್ಯಮಗಳಲ್ಲಿ - ವೇದಿಕೆಗಳಲ್ಲಿ ಅನೇಕ ಜನರ ಕಷ್ಟ ನಷ್ಟ ನೋವು ಸಂಕಟಗಳು ಕಾಣುತ್ತಿರುತ್ತದೆ. ಬದುಕಿಗಾಗಿ - ಉಳಿವಿಗಾಗಿ, ಮಕ್ಕಳ ಪೋಷಣೆಗಾಗಿ - ತಂದೆ ತಾಯಿಯರ ಸಾಕುವಿಕೆಗಾಗಿ - ಗಂಡ ತ್ಯಜಿಸಿದ - ಹೆಂಡತಿ ದೂರಾದ - ಅಪಘಾತ ಸಂಭವಿಸಿದ - ಅನಾರೋಗ್ಯ ಕಾಡಿದ - ಆತ್ಮಹತ್ಯೆ ಮಾಡಿಕೊಂಡ - ಅನಿವಾರ್ಯವಾಗಿ ದೇಹ ಮಾರಿಕೊಂಡ… ಅನೇಕಾನೇಕ ಸುದ್ದಿಗಳನ್ನು ನೋಡುತ್ತಲೇ ಇದ್ದೇನೆ. ಅನುಭವಿಸುತ್ತಲೇ ಇದ್ದೇನೆ. ಯೋಚಿಸುತ್ತಲೇ ಇದ್ದೇನೆ. ಅದಕ್ಕಾಗಿ ಸಮಯವನ್ನೂ ಮೀಸಲಿಟ್ಟಿದ್ದೇನೆ.
ಆದರೆ, ಅವರಿಗಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಅಕ್ಷರಗಳಲ್ಲಿ ನೋವು ಆಕ್ರೋಶ ಅಸಹಾಯಕತೆ ವ್ಯಕ್ತಪಡಿಸುವುದು ಬಿಟ್ಟು ಹೆಚ್ಚೇನು ಮಾಡಲಾಗುತ್ತಿಲ್ಲ. ವ್ಯವಸ್ಥೆಯ ಒಳಹೊಕ್ಕು ಏನಾದರೂ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಹೊಡೆತ ಬೀಳುತ್ತಲೇ ಇದೆ. ದೂರದಿಂದ ಕಾಣುವ ಮನಸ್ಸುಗಳು ಹತ್ತಿರದಿಂದ ನೋಡಿದಾಗ ಮತ್ತದೇ ವ್ಯವಸ್ಥೆಯ ಮುಖಗಳು. ನಮ್ಮ Social structure ನಿರ್ಮಾಣವಾಗಿರುವುದೇ ಬಹುತೇಕ ಮುಖವಾಡಗಳಿಂದ, ಭ್ರಮೆಗಳಿಂದ, ಭಾವನೆಗಳಿಂದ, ಭಕ್ತಿಗಳಿಂದ, ನಂಬಿಕೆಗಳಿಂದ, ಸಂಪ್ರದಾಯಗಳಿಂದ, ಸಂಕುಚಿತತೆಯಿಂದ. ವಾಸ್ತವ ಮತ್ತು ಪ್ರಾಯೋಗಿಕ ಯೋಚನೆಗಳು ಇಲ್ಲಿ ಹುಚ್ಚುತನವಾಗಿ ಕಾಣುತ್ತವೆ. ಅದಕ್ಕಾಗಿ ಯಾರನ್ನೂ ದೂರುವ ಹಾಗಿಲ್ಲ. ಅವರ ಅಸಹಾಯಕತೆ, ಅಜ್ಞಾನ, ಬಡತನ, ಅನಿವಾರ್ಯತೆ, ಸಾಮಾಜಿಕ ವಾತಾವರಣ ಅವರ ಯೋಚಿಸುವ ಕ್ರಮವನ್ನೇ ಕುಂಠಿತಗೊಳಿಸಿದೆ ಅಥವಾ ಕುಬ್ಜಗೊಳಿಸಿದೆ.
ನಿಜವಾದ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಇರಲಿ ಅದನ್ನೇ ಅಪಹಾಸ್ಯ ಮಾಡುವಷ್ಟು ಮನಸ್ಸುಗಳು ದುರ್ಬಲಗೊಂಡಿದೆ. ಒಬ್ಬರು ಪ್ರಾಮಾಣಿಕರಾಗಿರುತ್ತಾರೆ ಆದರೆ ದುರಹಂಕಾರಿಗಳಾಗಿರುತ್ತಾರೆ. ಇನ್ನೊಬ್ಬರು ದಕ್ಷರಾಗಿರುತ್ತಾರೆ ಆದರೆ ಜಾತಿವಾದಿಯಾಗಿರುತ್ತಾರೆ. ಮಗದೊಬ್ಬರು ಬುದ್ದಿವಂತರಾಗಿರುತ್ತಾರೆ ಆದರೆ ಅಮಾನವೀಯರಾಗಿರುತ್ತಾರೆ. ಒಬ್ಬರು ಅತ್ಯಂತ ಒಳ್ಳೆಯವರಾಗಿರುತ್ತಾರೆ ಆದರೆ ಆಡಳಿತಾತ್ಮಕ ವಿಷಯದಲ್ಲಿ ಏನೂ ತಿಳಿದಿರುವುದಿಲ್ಲ. ಇಂತಹ ವ್ಯವಸ್ಥೆಯಲ್ಲಿ ಮತ್ತು ಅತಿಯಾದ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಸ್ಥಿತಿಯಲ್ಲಿ ಸಂಘಟನೆ ಮಾಡುವುದಾದರೂ ಹೇಗೆ ?
ಹಣ ಬಲವಿಲ್ಲ, ಜಾತಿಯ ಬಲವಿಲ್ಲ, Face value ಇಲ್ಲದ ಸಂದರ್ಭದಲ್ಲಿ ಹೋರಾಟ ಮಾಡುವುದಾದರೂ ಹೇಗೆ? ಒಂದು ಹೋರಾಟವನ್ನು ತುಳಿಯಲು ಪಟ್ಟಭದ್ರ ಹಿತಾಸಕ್ತಿಗಳು ಅತ್ಯಂತ ಪ್ರಬಲವಾಗಿ ಕಾಯುತ್ತಿರುವಾಗ ಕೇವಲ ಆಕ್ರೋಶಭರಿತ ಜನರಿಂದ ಮತ್ತು ಬದುಕಿನ ಅನಿವಾರ್ಯತೆಯಿಂದಾಗಿ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೇ ಒದ್ದಾಡುತ್ತಿರುವ ಜನರಿಂದ ಹೋರಾಡುವುದು ಹೇಗೆ ? ಅದೂ , ಯಾವುದೇ ದ್ವೇಷವಿಲ್ಲದ ಪ್ರೀತಿ ಸ್ನೇಹ ವಿಶ್ವಾಸಗಳೆಂಬ ಅಸ್ತ್ರವಿಡಿದು ಯಾವುದೇ ಮುಖವಾಡವಿಲ್ಲದೆ, ಅಪಾರ ನಿರೀಕ್ಷೆಗಳ ಜನಸಾಗರದಲ್ಲಿ ಇದು ಹೇಗೆ ಸಾಧ್ಯ.
ಆದರೂ, ನಿರಾಶರಾಗದೆ, ಇರುವ ಅವಕಾಶದಲ್ಲೇ ಜನರ ಮನಸ್ಸುಗಳನ್ನು ಪ್ರವೇಶಿಸಿ ಅವರಲ್ಲಿರುವ ಯೋಚಿಸುವ ಶಕ್ತಿಯನ್ನು ಹೆಚ್ಚಿಸಿ ವಿಶಾಲ ಮನೋಭಾವ ಬೆಳೆಸಿ ಇಡೀ ಜನ ಸಮೂಹ ನಾಗರಿಕ ಸಮಾಜದತ್ತ ಮುನ್ನಡೆಯಲು ಎಲ್ಲರೂ ಪ್ರಯತ್ನಿಸೋಣ. ಇದು ಅಂತರಂಗದ ಚಳವಳಿಯಾಗಿ ನಮ್ಮೆಲ್ಲರಲ್ಲಿ ಮೂಡಲಿ. ಮುಂದೊಂದು ದಿನ ಇದು ಬದಲಾವಣೆಗೆ ನಾಂದಿಯಾಗಲಿ ಎಂದು ಆಶಿಸುತ್ತಾ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ