ಅಂತರಂಗದ ಮೃದಂಗ

ಅಂತರಂಗದ ಮೃದಂಗ

ಪುಸ್ತಕದ ಲೇಖಕ/ಕವಿಯ ಹೆಸರು
ನರಹಳ್ಳಿ ಬಾಲಸುಬ್ರಹ್ಮಣ್ಯ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ.೧೦೦/-

ಆಧುನಿಕ ಜೀವನ ಹಲವು ಸವಾಲುಗಳನ್ನೂ ಬಿಕ್ಕಟ್ಟುಗಳನ್ನೂ ನಮಗೆ ಎದುರಾಗಿಸುತ್ತದೆ. ಇಂತಹ ನಿರಂತರ ಬದಲಾವಣೆಯ ಪ್ರವಾಹದಲ್ಲಿ ಇವುಗಳ ಸೂಕ್ಷ್ಮತೆಗಳನ್ನು ತಮ್ಮ ಬದುಕಿನ ಅನುಭವಗಳ ಬಲದಿಂದ ನಮ್ಮೆದುರು ತೆರೆದಿಡುತ್ತ ನಮ್ಮ “ಅಂತರಂಗದ ಮೃದಂಗ”ವನ್ನು ಮೀಟಿ, ಚಿಂತನೆಗೆ ತೊಡಗಿಸುವುದರಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹತ್ತು ಪ್ರಬಂಧಗಳು ಯಶಸ್ವಿಯಾಗುತ್ತವೆ.

“ನರಹಳ್ಳಿಯವರ ಹರಟೆಗಳಲ್ಲಿ ಅವರ ಇಡೀ ಆಪ್ತ ವಲಯವೇ ಮೂಡಿ ಬಂದಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. … ಅವರೆಲ್ಲರೂ ಈ ಬರಹಗಳಿಂದಾಗಿ ನಮ್ಮ ಆಪ್ತವಲಯಕ್ಕೂ ಸೇರಿ ಬಿಡುತ್ತಾರೆ. …. ಕೌಟುಂಬಿಕತೆ ನರಹಳ್ಳಿಯವರ ಹರಟೆಗಳ ಆಕರ್ಷಕ ಆಯಾಮವಾದರೂ ಅವುಗಳ ಒಟ್ಟು ಮಹತ್ವದ ದೃಷ್ಟಿಯಿಂದ ಅದಕ್ಕೆ ಸೀಮಿತವಾದ ಅರ್ಥವಿದೆ. ನರಹಳ್ಳಿಯವರು ಕುಟುಂಬಪ್ರೇಮಿಯಿದ್ದಂತೆ ಅಥವಾ ಅದಕ್ಕೂ ಹೆಚ್ಚಾಗಿ, ಸಾಹಿತ್ಯ ಹಾಗು ಶಿಕ್ಷಣ ಕ್ಷೇತ್ರಕ್ಕೆ ತಮ್ಮನ್ನು ಕ್ರಿಯಾಶೀಲವಾಗಿ ಒಪ್ಪಿಸಿಕೊಂಡವರು. ಸಹಜವಾಗಿಯೇ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಅನುಭವಗಳು, ಚಿಂತನೆಗಳು ಇಲ್ಲಿಯ ಹರಟೆಗಳಲ್ಲಿ ಮೂಡಿ ಬಂದಿವೆ. ಆದರೂ ಇವು ಕೂಡ ಪ್ರತ್ಯೇಕವಾಗಿರದೆ ಅವರ ಆಳವಾದ ಸಂಸ್ಕೃತಿ ಚಿಂತನದ ಭಾಗಗಳೇ ಆಗಿವೆ. ನರಹಳ್ಳಿ ಆಧುನಿಕತೆಯ ವಿರೋಧಿಯಲ್ಲ. ಆದರೆ, ಅದರ ಹಲವಾರು ಆಯಾಮಗಳ ಬಗ್ಗೆ ಅವರಲ್ಲಿ ಸಂಶಯ, ಹೆದರಿಕೆ, ಅಸಮಾಧಾನಗಳಿವೆ. ಆಧುನಿಕ-ಪೂರ್ವ ಸಂಸ್ಕೃತಿಯನ್ನು ಅವರು ಕಂಡುಂಡಿರುವುದರಿಂದ ಅದರೊಡನೆ ಹೋಲಿಕೆಗಳೂ ಅವರಿಗೆ ಅವಶ್ಯವಾಗುತ್ತವೆ. ಆದರೆ, ಒಟ್ಟಿನಲ್ಲಿ ಅವರ ದೃಷ್ಟಿ ಆರೋಗ್ಯಪೂರ್ಣವಾದುದರಿಂದ ಯಾವುದೇ ರೀತಿಯ ಅತಿರೇಕಗಳಿಂದ ಅವರು ದೂರ ಉಳಿಯುತ್ತಾರೆ. ಆಧುನಿಕತೆಯ ದುಷ್ಪರಿಣಾಮಗಳನ್ನು ಗುರುತಿಸುವಷ್ಟೇ ಅವುಗಳಿಂದ ಪಾರಾಗುವ ಉಪಾಯಗಳೂ ಅವರಿಗೆ ಮಹತ್ತ್ವದ್ದಾಗುತ್ತವೆ" ಎಂದು ಪುಸ್ತಕದ ಮುನ್ನುಡಿಯಲ್ಲಿ ಬರೆದಿದ್ದಾರೆ ಜಿ.ಎಸ್.ಆಮೂರ.

“ಹುತ್ತ ಗಟ್ಟದೆ ಚಿತ್ತ…" ಎಂಬ ಎರಡನೆಯ ಪ್ರಬಂಧವನ್ನು ನರಹಳ್ಳಿಯವರು ಹೀಗೆ ಆರಂಭಿಸುತ್ತಾರೆ: ಕೈಯಲ್ಲಿ ರಿಮೋಟ್ ಹಿಡಿದು ಟಿ.ವಿ. ಮುಂದೆ ಕುಳಿತ ಯಾವ ಹುಡುಗ ಹುಡುಗಿಯನ್ನಾದರೂ ಗಮನಿಸಿ. ಪ್ರತಿನಿಮಿಷವೂ ಚಾನೆಲ್ ಬದಲಾಗುತ್ತಿರುತ್ತದೆ. ಯಾವುದೇ ಒಂದು ಚಾನೆಲ್ಲನ್ನು ಅವರು ತದೇಕ ಚಿತ್ತರಾಗಿ ಆಸ್ವಾದಿಸುತ್ತಿದ್ದಾರೆ ಎಂದು ಅನ್ನಿಸುವುದಿಲ್ಲ. … ಅವರ ಮನಃಸ್ಥಿತಿಯೇ ಹಾಗಿದೆ. ಯಾವುದರಲ್ಲೂ ತಮ್ಮನ್ನು ಇಡಿಯಾಗಿ ತೊಡಗಿಸಿಕೊಳ್ಳಲಾಗದ ಸ್ಥಿತಿ. ತನ್ಮಯತೆ ಸಾಧ್ಯವಾಗದ ಗೊಂದಲದ ಚಡಪಡಿಕೆಯ ಮನೋಭಾವ. ಇದೊಂದು ಸಣ್ಣ ನಿದರ್ಶನ ಅಷ್ಟೆ. ಸಮಾಜದ ಎಲ್ಲ ರಂಗಗಳಲ್ಲಿಯೂ ನಾವು ಇದೇ ಸ್ಥಿತಿಯನ್ನು ಕಾಣುತ್ತಿದ್ದೇವೆ.” ಇದಕ್ಕೆ ಶಾಲಾ-ಕಾಲೇಜುಗಳ ತರಗತಿಗಳ ವಿದ್ಯಾರ್ಥಿಗಳ, ಸಭೆಸಮಾರಂಭಗಳ ಸಭಿಕರ, ಮದುವೆ-ಮುಂಜಿಗಳಂತಹ ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವವರ ನಿದರ್ಶನಗಳನ್ನು ಕೊಟ್ಟು ಸಮರ್ಥಿಸುತ್ತಾರೆ.

ಅದೇ ಪ್ರಬಂಧದಲ್ಲಿ, ತನ್ನ ಮಗಳ ಮದುವೆಯ ಎಲ್ಲ ವ್ಯವಸ್ಥೆಗಳನ್ನೂ “ಈವೆಂಟ್ ಮ್ಯಾನೇಜರ್ಸ್” ಅವರಿಗೆ ವಹಿಸಿದ ತನ್ನ ಗೆಳೆಯನ ಬಗ್ಗೆ ಬರೆಯುತ್ತಾರೆ. ಮದುವೆಗೆ ಛತ್ರ ಹುಡುಕುವುದರಿಂದ ತೊಡಗಿ, ಮದುವೆಯ ಆಹ್ವಾನ ಪತ್ರ ಹಂಚುವುದರ ವರೆಗಿನ ಎಲ್ಲ ಕೆಲಸಗಳನ್ನೂ ಅವರಿಗೆ ವಹಿಸಿದ್ದ ನರಹಳ್ಳಿಯವರ ಗೆಳೆಯ. ನರಹಳ್ಳಿಯವರು ಆಶ್ಚರ್ಯದಿಂದ ಕೇಳುತ್ತಾರೆ, "ಮದುವೆ ಯಾರದು?” ಗೆಳೆಯನ ಉತ್ತರ, "ನನ್ನ ಮಗಳದು.” ನರಹಳ್ಳಿಯವರ “ನಿನ್ನ ಪಾತ್ರ ಏನು?" ಎಂಬ ಮರುಪ್ರಶ್ನೆಗೆ ಗೆಳೆಯನ ಉತ್ತರ, “ದುಡ್ಡು ಕೊಡುವುದಷ್ಟೆ!" ಇದನ್ನು ಕೇಳಿ ಮೂಕವಿಸ್ಮಿತರಾದ ನರಹಳ್ಳಿ ಅಲ್ಲಿಂದ ಹೊರಡುತ್ತಾರೆ.

ಈ ಸನ್ನಿವೇಶವನ್ನು ತನ್ನ ಮದುವೆಗೆ ಹೋಲಿಸಿ ನರಹಳ್ಳಿಯವರು ಬರೆಯುತ್ತಾರೆ: “ಗೆಳೆಯನ ಮನೆಯಲ್ಲಿ ಯಾವುದೇ ಸಡಗರವಿಲ್ಲ. ಸದ್ದುಗದ್ದಲವಿಲ್ಲ. ಬಂಧುಗಳಿಲ್ಲ. ಇವರೂ ಸಹ ಯಾರದೊ ಮನೆಯಲ್ಲಿ ಮದುವೆ ಎಂಬಂತೆ ನಿರ್ಲಿಪ್ತವಾಗಿದ್ದಾರೆ. ಅವನ ಮಗಳ ಮದುವೆಯಲ್ಲಿ ಅವನೇ ಅತಿಥಿ ಎಂಬಂತಿದ್ದಾನೆ. ... ಯಾವುದನ್ನೂ ಒಳಗೊಳ್ಳಲಾರದ, ಯಾವುದರಲ್ಲೂ ತನ್ಮಯತೆ ಸಾಧ್ಯವಾಗದ ಈ ಸ್ಥಿತಿ ಆಧುನಿಕ ಬದುಕು ಸೃಷ್ಟಿಸಿರುವ ಬಹುದೊಡ್ಡ ಸವಾಲು. ಭೋಗ ಸಂಸ್ಕೃತಿಯ ನೇರ ಪರಿಣಾಮವಿದು. ನಮ್ಮ ಮನೆಗಳಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೂ ಇದು ಅನುಭವಕ್ಕೆ ಬರುತ್ತದೆ.” ಹೀಗೆಂದು, ತಮ್ಮನ ಮನೆಯಲ್ಲಿ ಇದೇ ರೀತಿಯಲ್ಲಿ ಆಚರಿಸಿದ ಗಣೇಶನ ಹಬ್ಬದ ವಿವರಗಳನ್ನು ನೀಡುತ್ತಾರೆ.

ಎಂಟು-ಹತ್ತು ವರ್ಷದ ಚಂದದ ಹುಡುಗಿಯೊಬ್ಬಳು ಭಿಕ್ಷೆ ಬೇಡುತ್ತ ಬಂದಾಗ ನರಹಳ್ಳಿಯವರ ಗೆಳೆಯ ಕುಬೇರಪ್ಪ ಇಪ್ಪತ್ತು ರೂಪಾಯಿ ಭಿಕ್ಷೆ ಕೊಟ್ಟ. "ಏನಯ್ಯಾ ಗೆಳೆಯ, ಇಷ್ಟೊಂದು ಔದಾರ್ಯ!” ಎಂಬ ಇವರ ಪ್ರಶ್ನೆಗೆ ಲೆಕ್ಕಾಚಾರದ ವ್ಯಕ್ತಿ ಕುಬೇರಪ್ಪ ನೀಡಿದ ಉತ್ತರವನ್ನು ದಾಖಲಿಸಿ, ನರಹಳ್ಳಿ ಬರೆಯುತ್ತಾರೆ, “ಮನುಷ್ಯನ ಕ್ರೌರ್ಯವನ್ನು ಕಂಡು ನನಗೆ ದಿಗ್ಭ್ರಾಂತಿಯಾಯಿತು. ಮಾತು ಹೊರಡಲಿಲ್ಲ. ಆ ಕ್ಷಣದಿಂದ ಕುಬೇರಪ್ಪನೊಂದಿಗೆ ಎಂದೂ ನನಗೆ ಆಪ್ತಭಾವ ಸಾಧ್ಯವಾಗಲೇ ಇಲ್ಲ.”

ಇಂತಹ ಮನಃಸ್ಥಿತಿಯ ಮೂಲ ಯಾವುದು? ಈ ಬಗೆಯ ಲೆಕ್ಕಾಚಾರ ಮನಸ್ಸಿಗೆ ಹೇಗೆ ಸಾಧ್ಯ? ಎಂಬ ಜಿಜ್ನಾಸೆಯಲ್ಲಿ ತೊಡಗುತ್ತಾರೆ ನರಹಳ್ಳಿಯವರು. ಸ್ವಾರ್ಥ, ವಂಚನೆ ಮಕ್ಕಳ ಮನಸ್ಸನ್ನು ಮಾತ್ರವಲ್ಲ ಇಂದು ಸಮಾಜವನ್ನೇ ಕ್ಯಾನ್ಸರಿನಂತೆ ಆವರಿಸಿಕೊಳ್ಳುತ್ತಿದೆ. ಇದಕ್ಕೆ ಪರಿಹಾರವೇನು? ಎಂದು ಪ್ರಶ್ನಿಸುವ ನರಹಳ್ಳಿಯವರು ಸೂಚಿಸುವ ಪರಿಹಾರ ಹೀಗಿದೆ: “ಹಿಂಸಾಕ್ರಮಣದಿಂದ ತತ್ತರಿಸುತ್ತಿರುವ ಈ ಆಧುನಿಕ ಜಗತ್ತಿನಲ್ಲಿ ಮತ್ತೆ ನಾವು ಅಂತಃಕರಣದ ಲೋಕವೊಂದನ್ನು ಸೃಷ್ಟಿಸಿಕೊಳ್ಳಬೇಕಿದೆ. ಅದಕ್ಕಿರುವ ಏಕೈಕ ಮಾರ್ಗವೆಂದರೆ ಅಂತರಂಗದ ಪಿಸುದನಿಯನ್ನು ಕೇಳಿಸಿಕೊಳ್ಳುವ ಏಕಾಂತದ ಗೂಡುಗಳನ್ನು ನಾವು ನಿರ್ಮಿಸಿಕೊಳ್ಳಬೇಕು."

“ಉದರಂಭರಣಂ ಬಹುಮುಖಿ ತಾಣಂ” ಪ್ರಬಂಧದಲ್ಲಿ, ಬದಲಾಗುತ್ತಿರುವ ಹೋಟೆಲುಗಳು, ಅಲ್ಲಿನ ತಿನಿಸುಗಳು, ಸೇವಾ ವೈಖರಿ, ಬೆಲೆಗಳ ಬಗ್ಗೆ ಬರೆದು, ನರಹಳ್ಳಿ ಹೀಗೆ ದಾಖಲಿಸಿದ್ದಾರೆ; "ಹೊಟೇಲುಗಳು ಈಗ ಕೇವಲ ತಿಂಡಿ ತಿನಿಸುಗಳ ತಾಣಗಳಾಗಿ ಉಳಿದಿಲ್ಲ. ಮನರಂಜನೆಯ ಕೇಂದ್ರಗಳಾಗಿ, ಮೋಜಿನ ತಾಣಗಳಾಗಿ ರೂಪಾಂತರ ಹೊಂದಿವೆ. ಕೆಲವೊಮ್ಮೆ ಇವು ಸಂಚಿನ ಕೇಂದ್ರಗಳಾಗಿಯೂ ಕಾಣಿಸಿಕೊಳ್ಳುತ್ತಿವೆ. ನಮ್ಮ ಜನಪ್ರತಿನಿಧಿಗಳ ಅನೇಕ ಪ್ರಮುಖ ನಿರ್ಧಾರಗಳು “ರೆಸಾರ್ಟ್" ಹೊಟೇಲುಗಳಲ್ಲೇ ರೂಪುಗೊಳ್ಳುತ್ತಿವೆ. ಹೊಟೇಲುಗಳು ಈಗ ಹಣೆಬರಹ ಬರೆಯುವ ತಾಣಗಳೂ ಹೌದು.. ಭೋಗಸಂಸ್ಕೃತಿಯ
ಈ ವಿರಾಟ್ ಸ್ವರೂಪ ಕಂಡು ನನ್ನ ಮನಸ್ಸು ದಿಗ್ಭ್ರಾಂತಗೊಂಡಿದೆ. ಒಳ ಚೇತನ ಮಂಕಾಗಿದೆ…."

“ನಿಮ್ಮ ಮನೆಗೆ ಬರಲೇ?” ಪ್ರಬಂಧದಲ್ಲಿ, ತನ್ನ ವೃತ್ತಿಜೀವನದಲ್ಲಿ ಎದುರಿಸಿದ ಕೆಲವು ಸವಾಲುಗಳನ್ನು ಹಂಚಿಕೊಂಡಿದ್ದಾರೆ ನರಹಳ್ಳಿಯವರು. (ಅವರು ಬೆಂಗಳೂರಿನ ಶೇಷಾದ್ರಿಪುರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಹಾಗೂ ಪ್ರಾಂಶುಪಾಲರಾಗಿ ೩೫ ವರುಷಗಳ ಅವಧಿ ಸೇವೆ ಸಲ್ಲಿಸಿದವರು.)

“ಲಜ್ಜೆ ಎಂಬ ಸಾಮಾಜಿಕ ಮೌಲ್ಯ" ಪ್ರಬಂಧದಲ್ಲಿ ನರಹಳ್ಳಿಯವರು ಸಮಾಜದಲ್ಲಿ "ನಾಚಿಕೆ" ಎಂಬ ಮೌಲ್ಯ ಒಂದು ನಿಯಂತ್ರಣ ಶಕ್ತಿಯಾಗಿ ನಿಸ್ಸಂದೇಹವಾಗಿ ಕೆಲಸ ಮಾಡುತ್ತಿತ್ತು ಎಂಬುದಕ್ಕೆ ಹಲವು ಉದಾಹರಣೆಗಳನ್ನು ನೀಡುತ್ತಾರೆ. ನಮ್ಮೆಲ್ಲರಿಗೂ ಎರಡು ಜಗತ್ತಿರುತ್ತವೆ. ಒಂದು ವೈಯುಕ್ತಿಕ ಜಗತ್ತು ಮತ್ತೊಂದು ಸಾಮಾಜಿಕ ಜಗತ್ತು. ವೈಯುಕ್ತಿಕ ಜಗತ್ತಿನಲ್ಲಿ ನಮಗೆ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಆದರೆ ಸಾಮಾಜಿಕ ಜಗತ್ತಿನಲ್ಲಿ ಕೆಲ ರೀತಿ ನೀತಿಗಳನ್ನು ಅನುಸರಿಸಬೇಕಾಗುತ್ತದೆ. ಇವುಗಳನ್ನೇ ನಾವು “ಸಾಮಾಜಿಕ ಮೌಲ್ಯ”ಗಳೆಂದು ಗುರುತಿಸುತ್ತೇವೆ. ಬಸವಣ್ಣ ಇಂತಹ ಸಾಮಾಜಿಕ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಮನಮುಟ್ಟುವಂತೆ ಹೀಗೆ ಹೇಳಿದ್ದಾರೆ: “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ..." ಈ ಮೌಲ್ಯಗಳನ್ನು ಆಚರಿಸುವುದು ಸಹಬಾಳ್ವೆಗೆ ಅತ್ಯಗತ್ಯ. ಇವನ್ನು ಅನುಸರಿಸುವಂಥವನು ಸುಸಂಸ್ಕೃತ. … ಅವುಗಳನ್ನು ಆ ಸಮಾಜಕ್ಕೆ ಸೇರಿದ ವ್ಯಕ್ತಿ ಅನುಸರಿಸಬೇಕು; ವಿರುದ್ಧವಾಗಿ ನಡೆದುಕೊಂಡರೆ ಆತನನ್ನು ಆ ಸಮಾಜ ತಿರಸ್ಕರಿಸುತ್ತದೆ. ಅಂಥವನು ನಾಚಿಕೆಯಿಂದ ತಲೆತಗ್ಗಿಸಬೇಕಾಗುತ್ತದೆ ಎಂದು ವಿವರಿಸುತ್ತಾರೆ. "ಈಗ ನಾಚಿಕೆ ನಮ್ಮ ಸಾಮಾಜಿಕ ಬದುಕಿನಲ್ಲಿ ಸಂಪೂರ್ಣ ಕಣ್ಮರೆಯಾದಂತೆ ತೋರುತ್ತಿದೆ. ಅಧಿಕಾರಕ್ಕಾಗಿ, ಹಣಕ್ಕಾಗಿ ನಾವು ಎಂತಹ ನೀಚ ಕೆಲಸ ಮಾಡಲೂ ಹೇಸದ ಸ್ಥಿತಿ ತಲುಪಿದ್ದೇವೆ” ಎಂಬ ಆತಂಕ ಅವರದು.

“ಕೋಪವ ತಾಳದೆ ಸಮಾಧಾನಿಯಾಗಿರಬೇಕು” ಪ್ರಬಂಧದಲ್ಲಿ ಕೋಪದಿಂದಾದ ಅನೇಕ ಅನಾಹುತ ಹಾಗೂ ದುರಂತಗಳನ್ನು  ದಾಖಲಿಸಿ, "ಕೋಪ ಬಂದಾಗ ನಿಯಂತ್ರಿಸಿಕೊಳ್ಳುವುದು, ಮನಸ್ಸನ್ನು ಕೋಪದಾವೇಶಕ್ಕೆ ಬಲಿ ಕೊಡದೆ ಹತೋಟಿಯಲ್ಲಿಟ್ಟು ಕೊಳ್ಳುವುದು ವಿವೇಕಿಗಳ ಲಕ್ಷಣ. ಆಗ ಬದುಕು ಸಹನೀಯವಾಗುತ್ತದೆ” ಎಂಬ ಸಲಹೆ ನರಹಳ್ಳಿಯವರದು.