ಅಂತರಂಗದ ಸ್ವಗತ

ಅಂತರಂಗದ ಸ್ವಗತ

ಪುಸ್ತಕದ ಲೇಖಕ/ಕವಿಯ ಹೆಸರು
ಪಾರ್ವತಿ ಜಿ ಐತಾಳ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೯೫.೦೦, ಮುದ್ರಣ: ೨೦೨೫

ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು, ಸಾಂಸ್ಕೃತಿಕ ಸಂಗತಿಗಳು, ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತವೆ. ಹೇಳುವ ರೀತಿಯಲ್ಲಿ ಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು. ಆದರೆ ಮೂಲತತ್ವ ಎಲ್ಲದಕ್ಕೂ ಒಂದೇ.

ಯಶಸ್ಸಿನ ಹಾದಿಯಲ್ಲಿ ಎದುರಿಸಿದ ಕಷ್ಟಗಳಿರಬಹುದು, ಪಡೆದ ಯಶಸ್ಸಿನ ಫಲವಾಗಿ ಸವಿದ ಸಂತೋಷದ ಕ್ಷಣಗಳಿರಬಹುದು. ಏನಿದ್ದರೂ ಹೇಳುವ ವಿಷಯಗಳು ಓದುಗರಿಗೆ ಸ್ಫೂರ್ತಿದಾಯಕವಾಗಿರಬೇಕು, ಮುಂದಿನ ತಲೆಮಾರಿನ ಮಂದಿಗೆ ಪ್ರೇರಣೆ ನೀಡುವಂತಿರಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ, ಆತ್ಮಕಥನದಲ್ಲಿ ಕಲ್ಪನೆಯ ಕಟ್ಟು ಕಥೆಗಳಿಗೆ ಅವಕಾಶವಿಲ್ಲ. ವಾಸ್ತವದಲ್ಲಿ ಏನು ನಡೆಯಿತು ಅನ್ನುವುದಷ್ಟೇ ಇಲ್ಲಿ ಮುಖ್ಯ. ಉದ್ಯೋಗ, ಗೃಹಕೃತ್ಯ, ಸಂಸಾರ ನಿರ್ವಹಣೆಯ ಹೊಣೆಗಳ ನಡುವೆಯೂ ಬರಹಗಾರ್ತಿಯಾಗಿ ಓರ್ವ ಮಹಿಳೆ ಯಶಸ್ವಿಯಾಗಬಲ್ಲಳು ಎಂಬುದಕ್ಕೆ 'ಅಂತರಂಗದ ಸ್ವಗತ' ಕೃತಿಯೇ ಸಾಕ್ಷಿ.

ಪಾರ್ವತಿ ಜಿ ಐತಾಳ್ ತಮ್ಮ ಆತ್ಮಕಥೆ ‘ಅಂತರಂಗದ ಸ್ವಗತ’ ಬಗ್ಗೆ ತಮ್ಮದೇ ನುಡಿಗಳಲ್ಲಿ ಹೇಳಿರುವುದು ಹೀಗೆ.. “ಒಬ್ಬ ಲೇಖಕ/ಲೇಖಕಿ ತನ್ನಆತ್ಮ ಕಥನವನ್ನು ಬರೆಯುವ ಉದ್ದೇಶ ಹೇಳಲಾಗದೆ ಒಳಗೇ ಇಟ್ಟುಕೊಂಡ ಹಲವು ವಿಚಾರಗಳನ್ನುಬೆಳಕಿಗೆ ತರುವುದು ಮತ್ತುಇತರರೊಂದಿಗೆ ಹಂಚಿ ಕೊಳ್ಳುವುದರ ಮೂಲಕ ನಿರಾಳವಾಗುವುದು. ಸತ್ಯ-ಪ್ರಾಮಾಣಿಕತೆಗಳು ಅದರ ಮೂಲ ಮಂತ್ರ. ಲೇಖಕ ಅನುಭವಿಸಿದ ನೋವುಗಳಿರಬಹುದು, ಯಶಸ್ಸಿನ ಹಾದಿಯಲ್ಲಿಎದುರಿಸಿದ ಕಷ್ಟಗಳಿರಬಹುದು, ಪಡೆದ ಯಶಸ್ಸಿನ ಫಲವಾಗಿ ಸವಿದ ಸಂತೋಷದ ಕ್ಷಣಗಳಿರಬಹುದು. ಏನಿದ್ದರೂ ಹೇಳುವ ವಿಷಯಗಳು ಓದುಗರಿಗೆ ಸ್ಫೂರ್ತಿದಾಯಕವಾಗಿರಬೇಕು. ಮುಂದಿನ ತಲೆಮಾರಿನ ಮಂದಿಗೆ ಪ್ರೇರಣೆ ನೀಡುವಂತಿರಬೇಕು ಅನ್ನುವುದರಲ್ಲಿಎರಡು ಮಾತಿಲ್ಲ. ಆತ್ಮಕಥನದಲ್ಲಿ ಕಲ್ಪನೆಯ ಕಟ್ಟು ಕಥೆಗಳಿಗೆ ಅವಕಾಶವಿಲ್ಲ. ವಾಸ್ತವದಲ್ಲಿ ಏನು ನಡೆಯಿತು ಅನ್ನುವುದಷ್ಟೇ ಇಲ್ಲಿಮುಖ್ಯ.

ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು, ಸಾಂಸ್ಕೃತಿಕ ಸಂಗತಿಗಳು, ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತದೆ. ಹೇಳುವ ರೀತಿಯಲ್ಲಿಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು. ಆದರೆ ಮೂಲತತ್ವ ಎಲ್ಲದಕ್ಕೂ ಒಂದೇ.

ಹೌದು, ನಾನು ನನ್ನ ಬಾಲ್ಯ - ಯೌವನಗಳಲ್ಲಿ ನನ್ನಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದೆ ಮಾನಸಿಕವಾಗಿ ಅನೇಕ ಕಷ್ಟಗಳನ್ನು ಅನುಭವಿಸಿದ್ದೆ. ಅಧ್ಯಾಪಕಿಯಾಗಿ ಹಣ ಸಂಪಾದನೆ ಮಾಡಲು ಆರಂಭಿಸಿದರೂ ಅನಂತರ ನಾನು ಹವ್ಯಾಸವಾಗಿ ಆಯ್ದು ಕೊಂಡ ಬರವಣಿಗೆ ವಿಚಾರದಲ್ಲಿ ಬೇರೆ ಬೇರೆ ರೀತಿಯ ಅಡೆತಡೆಗಳನ್ನು ಅನುಭವಿಸಿದ್ದೇನೆ. ಓರ್ವ ಮಹಿಳೆಯೆನ್ನುವ ಕಾರಣಕ್ಕೂ ಹಿಂದೆ ತಳ್ಳಲ್ಪಟ್ಟು ಎಡವಿ ಬಿದ್ದಿದ್ದೇನೆ. ಆದರೆ ಈ ಎಲ್ಲ ಕಷ್ಟಗಳ ನಡುವಿನಿಂದಲೂ ಆತ್ಮ ಬಲದಿಂದ ಎದ್ದು ಬಂದು ಇವತ್ತು ಓರ್ವ ಒಳ್ಳೆಯ ಬರಹಗಾರ್ತಿ, ಅನುವಾದಕಿ, ವಿಮರ್ಶಕಿ ಅನ್ನುವ ಹೆಸರು ಪಡೆದಿದ್ದೇನೆ. ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದೇನೆ. ಆದ್ದರಿಂದ ನನ್ನ ಆತ್ಮಕಥನವನ್ನು ಬರೆದರೆ ಮುಂದೆ ನನ್ನಂತೆಯೇ ಅಡತಡೆಗಳನ್ನು ಎದುರಿಸುವವರಿಗೆ ಇದರಿಂದ ಪ್ರೇರಣೆಸಿಗಬಹುದು ಎಂದು ಆಲೋಚಿಸಿ ಈ ಆತ್ಮಕಥನವನ್ನು ಬರೆದಿದ್ದೇನೆ. ಇಲ್ಲಿ ನಾನು ಹೇಳಿದ ವಿಚಾರಗಳಲ್ಲಿ ಖಂಡಿತಾ ಉತ್ಪ್ರೇಕ್ಷೆಯೇನು ಇಲ್ಲಾ. ಕಪೋಲಕಲ್ಪಿತ ವಿಚಾರಗಳೂ ಇಲ್ಲ. ವಾಸ್ತವದಲ್ಲಿಏನೆಲ್ಲ ನಡೆದವೋ ಅವುಗಳ ಸತ್ಯಾಧಾರಿತ ವಿವರಗಳು ಮಾತ್ರ ಇವೆ.

ನನ್ನ ಬಾಲ್ಯ ಕಾಲದಲ್ಲಿ ಮನೆಯೊಳಗೆ ಅಪ್ಪ ಅಮ್ಮನನ್ನು ಸದಾ ಬೈಯುತ್ತಿದ್ದದು, ವಿಧವೆಯಾದ ಅಜ್ಜಿಯ ದುರವಸ್ಥೆಗಳು ಯಾವಾಗಲೂ ನನ್ನ ಮನಕಲಕುತ್ತಿದ್ದವು. ಅನಂತರ ಮನೆಯ ಹೊರಗೆ ಊರಿನ ಇತರ ಮನೆಗಳಲ್ಲೂ ಹೆಂಗಸರ ಪರಿಸ್ಥಿತಿ ಹೆಚ್ಚು-ಕಡಿಮೆ ಇದೇ ರೀತಿ ಇರುತ್ತಿದ್ದುದನ್ನು ನಾನು ಕಂಡೆ. ಜನರು ಅನುಸರಿಸುವ ಸಂಪ್ರದಾಯಗಳಲ್ಲೂ, ಜನರಮಾತು-ಕತೆಗಳಲ್ಲೂ, ಸಭೆ-ಸಮಾರಂಭಗಳಲ್ಲೂ ಹೆಣ್ಣಿಗೆ ಕೆಳಗಿನ ಸ್ಥಾನ ಇರುವುದನ್ನುನೋಡಿದೆ. ಅಪ್ಪ ಹೇಳುವ ಪುರಾಣ ಕಥೆಗಳಲ್ಲೂ ಹೆಣ್ಣಿಗಿರುವ ಸ್ಥಾನ ಎರಡನೆಯದ್ದೇ. ಹೆಣ್ಣು ಮುಟ್ಟಾಗುತ್ತಾಳೆ ಎಂಬ ನೆಪ ವೊಡ್ಡಿ ಪೂಜೆ - ಪುನಸ್ಕಾರಗಳಲ್ಲೂ ಅವಳನ್ನು ದೂರವಿಟ್ಟು ಅಸ್ಪೃಶ್ಯಳಂತೆ ನಡೆಸುವುದನ್ನು ಕಂಡೆ. ಆಗ ಸ್ತ್ರೀ ವಾದವೆಂದರೆ ಏನೆಂದೇ ತಿಳಿದಿರಲಿಲ್ಲ. ಮುಂದೆ ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿದ ನಂತರ ಪುಸ್ತಕಗಳನ್ನೋದುವ ಮೂಲಕ ಪುರುಷ ಪ್ರಧಾನ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿಗಾಗುತ್ತಿರುವ ಅನ್ಯಾಯದ ಬಗ್ಗೆ ಹೆಚ್ಚು ತಿಳಿದುಕೊಂಡಾಗ ನಾನೂ ಸ್ತ್ರೀಯರ ಪರವಾಗಿ ವಾದಿಸುವುದನ್ನು ಕಲಿತೆ. ಆದರೆ ಕೆಲವು ಪಾಶ್ಚಾತ್ಯ ಸ್ತ್ರೀವಾದಿಗಳಿಗಿಂತ ಭಿನ್ನವಾದ ಸಿದ್ಧಾಂತವನ್ನುನಾನು ರೂಪಿಸಿಕೊಂಡೆ. ಭಾರತೀಯ ಸಂಸ್ಕೃತಿಯು ಕೌಟುಂಬಿಕ ಬದುಕಿಗೆ ಮಹತ್ವ ನಿಡುತ್ತ ಬಂದ ಹಿನ್ನೆಲೆಯಲ್ಲಿ ಸ್ತ್ರೀವಾದವು ಅದನ್ನು ಮುರಿಯುವ ಪ್ರಯತ್ನ ಮಾಡದೆ ಸ್ತ್ರೀ-ಪುರುಷರು ಪರಸ್ಪರರನ್ನು ಗೌರವಿಸಿ, ಅರ್ಥ ಮಾಡಿಕೊಂಡು ಬದುಕನ್ನು ಸಹ್ಯವೂ ಸುಂದರವೂ ಆಗಿಸ ಬಹುದಾದ ದಾರಿಗಳನ್ನು ಕಂಡುಕೊಳ್ಳಬೇಕು ಎಂದು ವಾದಿಸ ತೊಡಗಿದೆ. ನನ್ನ ಈ ಆತ್ಮಕಥನವೂ ಸ್ತ್ರೀ ಕೇಂದ್ರಿತವಾಗಲು ಇದು ಕಾರಣವಾಗಿದೆ.”