ಅಂತರಂಗ ಶುದ್ಧಿಗಿಂತ ಮಿಗಿಲಾದುದಿದೆಯೇ?

ಅಂತರಂಗ ಶುದ್ಧಿಗಿಂತ ಮಿಗಿಲಾದುದಿದೆಯೇ?

ಗುರುಕುಲದಲ್ಲಿ ಓದುತ್ತಿದ್ದ ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು, ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದು ಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯ ಕ್ಶೇತ್ರಗಳಿಗೆ ತೆರಳಿ ಪವಿತ್ರಸ್ನಾನ ಮಾಡಿ, ದೇವರ ದರ್ಶನ ಮಾಡಿ ಬರುತ್ತೇವೆ. ಎಂದು ಹೇಳಿ ಯಾತ್ರೆಗೆ ಗುರುಗಳ ಅನುಮತಿ ಕೋರಿದರು. ಗುರುಗಳು ‘ನೀವು ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಉದ್ದೇಶವೇನು?’ ಎಂದು ಕೇಳಿದರು. ಗುರುಗಳೇ ನಾವು ಅಂತರಂಗ ಶುದ್ಧಿಗಾಗಿ ತೀರ್ಥಯಾತ್ರೆ ಮಾಡುತ್ತಿದ್ದೇವೆ ಎಂದು ಶಿಷ್ಯರು ತಿಳಿಸಿದರು. ಸಂತೋಷ ಹೋಗಿ ಬನ್ನಿ ಶುಭವಾಗಲಿ ಎಂದ ಗುರುಗಳು. ಯಾತ್ರೆಗೆ ಹೊರಟ ಶಿಷ್ಯರೆಲ್ಲರಿಗೂ ಒಂದೊಂದು ಹಾಗಲಕಾಯಿ ಕೊಟ್ಟು, ಈ ಕಾಯಿಯನ್ನೂ ನಿಮ್ಮ ಜೊತೆ ತೆಗೆದುಕೊಂಡುಹೋಗಿ, ನೀವು ಎಲ್ಲೆಲ್ಲಿ ಸ್ನಾನ ಮಾಡುತ್ತೀರೋ ಅಲ್ಲಿ ಈ ಹಾಗಲಕಾಯಿಗೂ ಸ್ನಾನ ಮಾಡಿಸಿ. ನೀವು ಎಲ್ಲೆಲ್ಲಿ ದೇವರ ದರ್ಶನ ಪಡೆಯುತ್ತೀರೋ, ಅಲ್ಲಿ ದೇವರ ಪಾದದ ಬಳಿ ಈ ಕಾಯಿಗಳನ್ನಿಟ್ಟು ಪೂಜೆ ಮಾಡಿಸಿಕೊಂಡು ಬನ್ನಿ ಎಂದು ತಿಳಿಸಿದರು. ಸರಿ ಎಂದು ತಲೆ ಅಲ್ಲಾಡಿಸಿದ ಶಿಷ್ಯರು ಹಾಗಲಕಾಯಿಯ ಜೊತೆ ಯಾತ್ರೆ ಹೊರಟರು. ಗುರುಗಳು ಹೇಳಿದಂತೆ ಯಾತ್ರೆ ಮುಗಿಸಿಕೊಂಡು ಒಂದು ವಾರದ ಬಳಿಕ ಹಿಂತಿರುಗಿದರು. ಶಿಷ್ಯರನ್ನು ಸಂತೋಷದಿಂದ ಬರಮಾಡಿಕೊಂಡ ಗುರುಗಳು ಕ್ಷೇತ್ರ ದರ್ಶನದಿಂದ ನೀವೆಲ್ಲಾ ಪುನೀತರಾಗಿದ್ದೀರಾ? ನಿಮ್ಮ ಅಂತರಂಗ ಪರಿಶುದ್ಧಿಯಾಯಿತೇ? ಎಂದು ಕೇಳಿದರು. ಎಲ್ಲ ಶಿಷ್ಯರು ಒಕ್ಕೊರಲಿನಿಂದ ಹೌದೆಂದರು. ಆಗ ಗುರುಗಳು ‘ಎಲ್ಲಿ ನೀವು ಹಾಗಲಕಾಯಿಗಳಿಗೆ ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿದಿರಾ? ದೇವರ ಬಳಿ ಇರಿಸಿ ಪೂಜೆ ಮಾಡಿಸಿರುವಿರಾ? ಎಂದು ಕೇಳಿದರು. ಎಲ್ಲ ಶಿಷ್ಯರು ಹೌದೆಂದರು.

ಸರಿ, ಹಾಗಾದರೆ ಈ ಕಾಯಿಗಳನ್ನು ಹಾಕಿ ಇಂದು ಅಡುಗೆ ಮಾಡಿ ಎಂದು ಅಪ್ಪಣೆ ಮಾಡಿದರು. ಅದರಂತೆ ಹಾಗಲಕಾಯಿಯಿಂದ ಅಡುಗೆ ಮಾಡಿದ ಶಿಷ್ಯರು ಗುರುಗಳಿಗೆ ಊಟ ಬಡಿಸಿದರು. ಊಟಕ್ಕೆ ಕುಳಿತಾಗ ಗುರುಗಳು ಹಾಗಲಕಾಯಿ ತಿಂದ ಗುರುಗಳು, ‘ಅಯ್ಯೋ ! ಇದೇನು ಹಾಗಲಕಾಯಿ ಇಷ್ಟು ಕಹಿಯಾಗಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಶಿಷ್ಯನೊಬ್ಬ ಅಲ್ಲ ಗುರುಗಳೇ ಹಾಗಲಕಾಯಿಯ ಗುಣವೇ ಕಹಿ ಅದು ಸಿಹಿ ಆಗಲು ಹೇಗೆ ಸಾಧ್ಯ? ಎಂದು ಉತ್ತರಿಸಿದನು.

ಆಗ ಗುರುಗಳು ಪವಿತ್ರ ಸ್ನಾನ ಮಾಡಿ, ದೇವರ ದರ್ಶನ ಮಾಡಿದ ಮಾತ್ರಕ್ಕೆ ನಿಮ್ಮ ಅಂತರಂಗಶುದ್ಧಿ ಆಗುವುದಾದರೆ ಈ ಹಾಗಲ ಕಾಯಿಯೂ ನಿಮ್ಮೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ ಮಾಡಿ ಪುನೀತವಾಗಿದೆ. ದೇವರ ದರ್ಶನದಿಂದ ಇದರ ಅಂತರಂಗ ಶುದ್ಧಿ ಆಗಿರಬೇಕಲ್ಲ. ಹಾಗಾದರೆ ಸಿಹಿ ಆಗುವ ಬದಲು ಕಹಿ ಏಕಾಯಿತು? ಎಂದು ಪ್ರಶ್ನಿಸಿದರು. ಗುರುಗಳ ಅಂತರ್ಯದ ಗುಟ್ಟು ಅರಿತ ಶಿಷ್ಯರು ತಲೆ ತಗ್ಗಿಸಿ ನಿಂತರು. ಗುರುಗಳು ಪ್ರಿಯ ಶಿಷ್ಯಂದಿರೇ, ಮಾಡುವ ಪಾಪವನ್ನೆಲ್ಲಾ ಮಾಡಿ ದೇವರ ಬಳಿ ಹೋದರೆ ನೀವು ಪುನೀತರಾಗುವುದಿಲ್ಲ. ನಿಮ್ಮಲ್ಲಿ ದುರ್ಗುಣ ತುಂಬಿಕೊಂಡು ಪುಣ್ಯ ಸ್ನಾನ ಮಾಡಿದರೆ ನಿಮ್ಮ ಅಂತರಂಗ ಶುದ್ಧಿಯಾಗುವುದಿಲ್ಲ. ಮೊದಲು ನಿಮ್ಮ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಿ. ಸತ್ಯವನ್ನೇ ನುಡಿಯಿರಿ, ಧರ್ಮದಿಂದ ನಡೆಯಿರಿ. ಎಲ್ಲವನ್ನೂ ನಿಮ್ಮಂತೆಯೇ ಕಾಣಿ. ಮೋಸ, ವಂಚನೆ ಮಾಡಬೇಡಿ, ಜಗತ್ತಿನಲ್ಲಿರುವ ಎಲ್ಲವೂ ನನಗೆ ಬೇಕು ಎಂದು ಕೂಡಿಡುವ ಮನಸ್ಥಿತಿ ಬಿಡಿ. ನಿಮ್ಮ ಬದುಕನ್ನು ಪರೋಪಕಾರಕ್ಕೆ ಮೀಸಲಿಡಿ. ಆಗ ಭಗವಂತನೂ ಮೆಚ್ಚುತ್ತಾನೆ. ನೀವೂ ಪುನೀತರಾಗುತ್ತೀರಿ ಎಂದು ಹೇಳಿದರು. ಮಾನವರ ಪರಿಶುದ್ಧ ಉತ್ತಮ ನಡತೆಯ ಮೂಲಕ ಬಾಹ್ಯ ಹಾಗೂ ಆಂತರಿಕ ಶುದ್ಧಿಯಾಗಬೇಕಿದೆ. ಸಮಾಜದಲ್ಲಿ ಒಬ್ಬ ಅಂತರಂಗ ಶುದ್ಧಿಯನ್ನು ಸಾಧಿಸಿದರೆ ಅದರ ಪ್ರಭಾವ ಇನ್ನೊಬ್ಬರ ಮೇಲಾಗಿ, ಆತನು ಅಂತರಂಗ ಶುದ್ಧಿಯನ್ನು ಸಾಧಿಸಬಹುದು. ಅಂತರಂಗ ಶುದ್ಧಿಯಾದರೆ ಸಾಕು ಅದರ ಜೊತೆಯಲ್ಲಿಯೇ ಬಹಿರಂಗ ಶುದ್ದಿಯು ತಾನಾಗಿಯೇ ಆಗುತ್ತದಲ್ಲವೇ?

-ರವಿ ರಾ.ಕಂಗಳ (ವಿಶ್ವವಾಣಿಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ

Comments