ಅಂತರಗಂಗೆ ಜಲಕಳೆಯಿಂದ ಉಪಯುಕ್ತ ಉತ್ಪನ್ನಗಳು
ಕೆರೆಗಳನ್ನೇ ಕೊಲ್ಲುವ ಜಲಕಳೆ ಅಂತರಗಂಗೆ! ಕೆರೆ, ಕೊಳ, ಸರೋವರ ಮತ್ತು ನದಿಗಳ ನೀರಿನಲ್ಲಿ ವೇಗವಾಗಿ ಬೆಳೆದು, ವಿಸ್ತಾರವಾದ ಪ್ರದೇಶ ಆಕ್ರಮಿಸುತ್ತದೆ. ಕೊನೆಗೆ, ಆ ನೀರಿನಲ್ಲಿ ಜೀವಿಸುವ ಜಲಸಸ್ಯಗಳಿಗೆ ಅಗತ್ಯವಾದ ಸೂರ್ಯನ ಬೆಳಕು ಸಿಗದಂತೆ ಮಾಡಿ, ಅವನ್ನೆಲ್ಲ ಸಾಯಿಸುವ ಕಳೆ ಇದು.
ಸೂಕ್ತ ಹವಾಮಾನ ಮತ್ತು ಪೋಷಕಾಂಶ ಸಿಕ್ಕರೆ, ಕೇವಲ ೮-೧೦ ದಿನಗಳಲ್ಲಿ ಎರಡು ಪಟ್ಟು ಬೆಳೆಯುತ್ತದೆ ಅಂತರಗಂಗೆ (ವಾಟರ್ ಹೈಯಾಸಿಂಥ್). ನೀರಿನ ಮೇಲ್ಮೈಯನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಆವರಿಸುವ ಇದರ ಧಾಳಿಯಿಂದಾಗಿ ಕೆರೆ, ಸರೋವರಗಳ ಜಲಸಸ್ಯಗಳು ಸತ್ತು ಕೊಳೆಯುತ್ತವೆ. ಆಗ, ಅಲ್ಲಿನ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಅಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳು ಬಲಿಯಾಗುತ್ತವೆ.
ಜಲಾಶ್ರಯಗಳ ನೀರಿನಲ್ಲಿ ದಟ್ಟವಾಗಿ ಹಬ್ಬುವ ಅಂತರಗಂಗೆ ಸೊಳ್ಳೆಗಳ ಪುನರುತ್ಪತ್ತಿಗೆ ಸೂಕ್ತ ತಾಣ ಒದಗಿಸುತ್ತದೆ. ಅನೇಕ ಗ್ರಾಮ ಪಂಚಾಯತುಗಳು, ಮುನಿಸಿಪಾಲಿಟಿಗಳು ಮತ್ತು ಮಹಾನಗರಪಾಲಿಕೆಗಳಿಗೆ ಕೆರೆಗಳು ಹಾಗೂ ಜಲಾಶಯಗಳಲ್ಲಿ ಸೊಕ್ಕಿ ಬೆಳೆಯುವ ಅಂತರಗಂಗೆಯನ್ನು ನಿಯಂತ್ರಿಸುವುದೇ ದೊಡ್ಡ ಕೆಲಸ.
ಅಂತರಗಂಗೆಯ ನಿಯಂತ್ರಣಕ್ಕಾಗಿ ರಾಸಾಯನಿಕಗಳ ಬಳಕೆ ಸಾಮಾನ್ಯ. ಇದರಿಂದ ಪರಿಸರ ಮತ್ತು ಮನುಷ್ಯರ ಮೇಲೆ ತೀವ್ರ ದುಷ್ಪರಿಣಾಮಗಳು ಆಗುತ್ತವೆ. ಇದರ ಬದಲಾಗಿ, ಕೆಲಸಗಾರರ ಮೂಲಕ ಅಂತರಗಂಗೆ ಕಿತ್ತು ಹಾಕಿಸುವುದು ದೊಡ್ಡ ವೆಚ್ಚದ ಕೆಲಸ.
ಈ ಹಿನ್ನೆಲೆಯಲ್ಲಿ, ಕೇರಳದ ಅಳಪುಜಾದ ಸನಾತನ ಧರ್ಮ ಕಾಲೇಜಿನ ಡಾ.ಜಿ. ನಾಗೇಂದ್ರ ಪ್ರಭು ಮತ್ತು ಅವರ ತಂಡದವರು ಅಭಿವೃದ್ಧಿ ಪಡಿಸಿದ ಅಂತರಗಂಗೆಯ ಬಳಕೆಯ ವಿವಿಧ ವಿಧಾನಗಳು ಬಹಳ ಉಪಯುಕ್ತ. ಇದರಿಂದಾಗಿ ನಿರುಪಯುಕ್ತ ಜಲಕಳೆ ಬಳಸಿ ಉತ್ತಮ ಆದಾಯ ಪಡೆಯಲು ಸಾಧ್ಯ. ಅವರು ಅಲ್ಲಿನ ಪ್ರಾಣಿಶಾಸ್ತ್ರದ ಸ್ನಾತಕೋತ್ತರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್.
ತನ್ನ ಪಿ.ಎಚ್.ಡಿ.ಗಾಗಿ ಸಂಶೋಧನೆ ಮಾಡುತ್ತಿದ್ದಾಗ, ಅಂತರಗಂಗೆಯಲ್ಲಿರುವ ಲಿಗ್ನೋ ಸೆಲ್ಯುಲೊಸಿಕ್ ಪದಾರ್ಥವನ್ನು ಬಳಸಿ, ಎಲ್-ಗ್ಲುಟಮಿನೇಸ್ ಬೇರ್ಪಡಿಸುವ ವಿಧಾನ ಕಂಡು ಹಿಡಿದಿದ್ದಾರೆ ಡಾ. ನಾಗೇಂದ್ರ ಪ್ರಭು. ಇದು ವೈದ್ಯಕೀಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಬಹುಮುಖ್ಯವಾದ ಕಿಣ್ವ (ಎನ್-ಝೈಮ್).
ಅಂತರಗಂಗೆ (ಸಸ್ಯಶಾಸ್ತ್ರೀಯ ಹೆಸರು - ಐಕಾರ್ನಿಯ ಕ್ರಸಿಪ್ಸ್) ಮತ್ತು ನೀರಿನ ಮೊಸ್ಸ್ (ಸಾಲ್ವಿನಿಯಾ ಮೊಲೆಸ್ಟಾ) ಇಂತಹ ಜಲಕಳೆಗಳಿಂದ ಬ್ಯಾಕ್ಟೀರಿಯಾದ ಮೂಲಕ ಜೀವಕೋಶಗಳ ಕಿಣ್ವ ಉತ್ಪಾದಿಸುವ ಪ್ರಯೋಗಶಾಲೆ ಹಂತದ ತಂತ್ರಗಳನ್ನು ಡಾ. ನಾಗೇಂದ್ರ ಪ್ರಭು ಅಭಿವೃದ್ಧಿ ಪಡಿಸಿದರು. ಕ್ರಮೇಣ ಇತರ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅವರ ಜೊತೆಗೂಡಿ, ಅಂತರಗಂಗೆಯಿಂದ ವಿವಿಧ ಉಪಯುಕ್ತ ವಸ್ತುಗಳನ್ನು ಉತ್ಪಾದಿಸುವ ವಿಧಾನಗಳನ್ನು ಆವಿಷ್ಕಾರ ಮಾಡಿದರು.
“ಜೈವಿಕ ಇಟ್ಟಿಗೆಗಳನ್ನು ಮತ್ತು ಅಣಬೆ ಬೆಳೆಸಲಿಕ್ಕೆ ಹಾಗೂ ಹೈಡ್ರೊಫೋನಿಕ್ಸಿಗೆ ಅಗತ್ಯವಾದ ಬುಡವಸ್ತುವನ್ನು ಅಂತರಗಂಗೆಯಿಂದ ತಯಾರಿಸಬಹುದೆಂದು ನಮ್ಮ ಸಂಶೋಧನೆ ತೋರಿಸಿಕೊಟ್ಟಿತು” ಎನ್ನುತ್ತಾರೆ ಡಾ. ಪ್ರಭು. ಜೈವಿಕ ಇಟ್ಟಿಗೆಗಳನ್ನು ಹಸುರುಕಸ ಮತ್ತು ಸಾವಯವ ವಸ್ತುಗಳಿಂದ ತಯಾರಿಸಲಾಗುತ್ತದೆ. ವಿದ್ಯುತ್ ಮತ್ತು ಉಷ್ಣ ಉತ್ಪಾದನೆಗೆ ಇಂಧನವಾಗಿ ಮತ್ತು ಪುನರ್ ಬಳಕೆಯ ಇಂಧನವಾಗಿ ಇವಕ್ಕೆ ಭಾರೀ ಬೇಡಿಕೆಯಿದೆ.
ಅಂತರಗಂಗೆಯ ಪಲ್ಪಿನಿಂದ ಹಣ್ಣು ಮತ್ತು ಕೋಳಿಮೊಟ್ಟೆ ಟ್ರೇ, ಬಳಸಿ-ಎಸೆಯುವ ಪ್ಲೇಟು, ಬಹುಬಳಕೆಯ ಬೋರ್ಡ್ ಮತ್ತು ಪೈಂಟಿಂಗ್ ಕ್ಯಾನ್-ವಾಸ್ ತಯಾರಿಸಬಹುದು ಎಂಬುದನ್ನು ಇವರ ಸಂಶೋಧನಾ ತಂಡ ತೋರಿಸಿಕೊಟ್ಟಿದೆ. ಅವಲ್ಲದೆ, ಆಟಿಕೆಗಳು, ಪಾತ್ರೆಗಳು ಮತ್ತು ವಿವಿಧ ವಸ್ತುಗಳ ಪುಟ್ಟ-ಮಾದರಿಗಳ ತಯಾರಿಕೆಗೂ ಅಂತರಗಂಗೆಯ ಪಲ್ಪ್ ಬಳಸಬಹುದು.
ಅವರ ವಿದ್ಯಾರ್ಥಿಗಳಾದ ಜಿ. ಗೋಪಿಕಾ ಮತ್ತು ವಿ. ಅನೂಪ್ ಕುಮಾರ ಅಂತರಗಂಗೆಯ ದಟ್ಟ ಕೆನ್ನೀಲಿ ಹೂಗಳಿಂದ ಬಣ್ಣ ತಯಾರಿಸುವ ಸಂಶೋಧನೆ ಮಾಡಿದರು. ಆ ಹೂಗಳಿಂದ ಅವರು ಬೇರ್ಪಡಿಸಿದ ಸಹಜ ಬಣ್ಣವನ್ನು ಬಟ್ಟೆಗಳಿಗೆ ಬಣ್ಣ ನೀಡಲು ಬಳಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಈ ಸಂಶೋಧನೆಗೆ ೨೦೧೭ರಲ್ಲಿ ಜರಗಿದ ೨೭ನೇ ಸ್ವದೇಶೀ ವಿಜ್ನಾನ ಸಮ್ಮೇಳನದಲ್ಲಿ ಅತ್ಯುನ್ನತ ಪುರಸ್ಕಾರ ಲಭಿಸಿದೆ.
ಸನಾತನ ಧರ್ಮ ಕಾಲೇಜಿನ ಜಲ ಸಂಪನ್ಮೂಲಗಳ ಕೇಂದ್ರದ ಪ್ರಧಾನ ಸಂಶೋಧಕರಾಗಿರುವ ಡಾ.ನಾಗೇಂದ್ರ ಪ್ರಭು “ಕೇರಳದ ಹಲವೆಡೆ ಸಮಸ್ಯೆಯಾಗಿರುವ ಈ ಜಲಕಳೆಯನ್ನು ನಿಯಂತ್ರಿಸಿ, ಅದರಿಂದ ಮೌಲ್ಯವರ್ಧಿತ ವಸ್ತುಗಳನ್ನು ಉತ್ಪಾದಿಸುವ ಪರಿಸರಸ್ನೇಹಿ ತಂತ್ರಜ್ನಾನಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ವಾಣಿಜ್ಯೀಕರಣಗೊಳಿಸುವುದು ತಮ್ಮ ಮುಂದಿನ ಯೋಜನೆ” ಎನ್ನುತ್ತಾರೆ.
ಜಲಕಳೆಗಳಿಂದ ಮೌಲ್ಯವರ್ಧಿತ ವಸ್ತುಗಳ ತಯಾರಿ ಬಗ್ಗೆ ತರಬೇತಿ ನೀಡಲಿಕ್ಕಾಗಿ ಸಮುದಾಯ ತರಬೇತಿ ಕೇಂದ್ರವನ್ನು ತಮ್ಮ ಕಾಲೇಜಿನಲ್ಲಿ ಆರಂಭಿಸಿದ್ದಾರೆ ಡಾ. ಪ್ರಭು. ಈ ತರಬೇತಿ ಕಾರ್ಯಾಗಾರಗಳಲ್ಲಿ ಕುಟುಂಬಶ್ರೀ ಸ್ವಸಹಾಯ ಸಂಘದ ಮಹಿಳಾ ಸದಸ್ಯೆಯರು, ಜೈಲುಗಳಲ್ಲಿ ಶಿಕ್ಷೆ ಪಡೆಯುತ್ತಿರುವವರು, ವಿಕಲಚೇತನರ ವಿಶೇಷ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಸುತ್ತಿರುವುದು ಗಮನಾರ್ಹ.
ನಮ್ಮ ದೇಶದ ಸ್ಥಳೀಯ ಆಡಳಿತಗಾರರು, ಅಂತರಗಂಗೆ ನಿಯಂತ್ರಣಕ್ಕಾಗಿ ಮಾರಕ ರಾಸಾಯನಿಕಗಳನ್ನು ಬಳಸಿ, ಲಕ್ಷಗಟ್ಟಲೆ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಅದರ ಬದಲಾಗಿ ಈ ಪರಿಸರಸ್ನೇಹಿ ವಿಧಾನಗಳನ್ನು ಬಳಸಿ, ಜನೋಪಯೋಗಿ ಮೌಲ್ಯವರ್ಧಿತ ವಸ್ತುಗಳನ್ನು ಉತ್ಪಾದಿಸುವುದು ಜಾಣತನ, ಅಲ್ಲವೇ?