ಅಂತರಾತ್ಮದ ಕೂಗು

Submitted by Shreerama Diwana on Thu, 08/06/2020 - 15:10
ಬರಹ

ಪರಿಪರಿಯ ನೋವುಂಡು ಸೋತು ಸೊರಗಿದ ದೇಹ

ಕೊನೆಗೊಮ್ಮೆ ಸಾಯುವುದೇ ಮೇಲೆಂದುಕೊಂಡಿತು

ಅಂತರಾತ್ಮದ ಕೂಗು ಕಿವಿಗೆ ಕೇಳಿಸಿತಾಗ

ಮುಂದೆ ಸಾಗಲು ದಾರಿ ನೂರಾರು ಇದೆ ಎಂದು

 

ಬದುಕಿನುದ್ದಕೂ ಕವಲು ದಾರಿಗಳೇ ವಿನಹ

ಸರಿಯಾದ ಮಾರ್ಗವೇ ಕಾಣಲಿಲ್ಲ

ಆದರೂ ಒಂದನ್ನು ಆಯ್ಕೆ ಮಾಡಲೇಬೇಕು

ಹೊರಟಿರುವೆ ಎತ್ತಲೋ ಗುರಿಯಿಲ್ಲದೆಡೆಗೆ

 

ಕವಿದ ಕತ್ತಲೆಯೊಳಗೆ ಮಸುಕಾದ ಬೆಳಕೊಂದು

ದೂರದಲ್ಲೆಲ್ಲೋ ನನ್ನ ಹಿಂಬಾಲಿಸುವ ಹಾಗೆ

ಹಿಂತಿರುಗಿ ನೋಡಿದರೆ ಮತ್ತದೇ ಮಬ್ಬುಗತ್ತಲು

ಅಂತರಾತ್ಮದ ಕೂಗು ಸುಳ್ಳಾಯಿತೇ?

 

ಹೋಗಲೇಬೇಕೀಗ ಕಲ್ಲು ಮುಳ್ಳನು ತುಳಿದು

ರುಧಿರವನು ಸುರಿ ಸುರಿದು

ನನ್ನಾತ್ಮ ದೇಹವನು ತ್ಯಜಿಸಿ ಹೋಗುವ ಮೊದಲೇ

ಬದುಕೆಂದರೇನೆಂದು ತಿಳಿಯಬೇಕು

 

ಶೂನ್ಯವಾಗಿಹ ಬಯಕೆ ಆಸೆ ಮೋಹಗಳೆಲ್ಲ

ತಲೆಯೆತ್ತುವ ಮೊದಲೇ ಹಿಸುಕಬೇಕು

ನಾ ಬದುಕಬೇಕು ನೀ ನಗುವ ನಾಳೆಗಳ

ನೋಡಿ ನೋಡಿಯೇ ನಾ ಸಾಯಬೇಕು ಮತ್ತೆ ಹುಟ್ಟಬೇಕು…

 

✍🏻ಲತಾ ಬನಾರಿ

ಚಿತ್ರ ಕೃಪೆ: ಅಂತರ್ಜಾಲ

ಚಿತ್ರ್