ಅಂತರಿಕ್ಷದಲ್ಲಿ ಮಿನುಗುತ್ತಿದೆ ಸುನಿತಾ ಹೆಸರಿನ ಬಡಗಚುಕ್ಕಿ!

ಅಂತರಿಕ್ಷದಲ್ಲಿ ಮಿನುಗುತ್ತಿದೆ ಸುನಿತಾ ಹೆಸರಿನ ಬಡಗಚುಕ್ಕಿ!

"ಸಿತಾರೋಂ ಕೆ ಆಗೆ ಜಹಾಂ ಔರ್ ಭಿ ಹೈ...!"- ಸರ್ ಮೊಹಮ್ಮದ್ ಇಕ್ಬಾಲ್,ವಿದ್ವಾಂಸರು ಮತ್ತು ಕವಿಗಳು.

ಅಂತರಿಕ್ಷದಲ್ಲಿ ಅತೀ ಹೆಚ್ಚು ಬಾರಿ (ಏಳು ಸಲ) ಅಂತರಿಕ್ಷ ನಡಿಗೆ ನಡೆಸಿ ಮತ್ತು ಅಂತರಿಕ್ಷದ ನಡಿಗೆಯಲ್ಲಿ ಅತೀ ಹೆಚ್ಚು ಸಮಯ ಕಳೆದ (ಐವತ್ತು ಗಂಟೆಗಳು, ನಾಲವತ್ತು ನಿಮಿಷಗಳು) ದಾಖಲೆಯನ್ನು ನಿರ್ಮಿಸಿದ ಏಕೈಕ ಗಗನಯಾತ್ರಿ - 'ಸುನಿತಾ ವಿಲಿಯಮ್ಸ್' ಆಗಿದ್ದಾರೆ. ಅಂತರೀಕ್ಷದಲ್ಲಿ ಮ್ಯಾರಥಾನ್ ಓಟ ನಡೆಸಿದ ಮೊತ್ತಮೊದಲ ಗಗನಯಾತ್ರಿಯೂ ಸುನಿತಾ ವಿಲಿಯಮ್ಸ್ ಆಗಿದ್ದಾರೆ. ಅವರು ಸರಿಸುಮಾರು 485 ದಿನಗಳು ಅಂತರಿಕ್ಷದಲ್ಲಿ ಇದ್ದು ಇನ್ನೊಂದು ಮುರಿಯಲಾಗದ ದಾಖಲೆಯನ್ನೂ ನಿರ್ಮಿಸಿದ್ದಾರೆ. (ಸದ್ಯಕ್ಕೆ, ಅವರು ಅಂತರಿಕ್ಷದಲ್ಲಿ ಇದ್ದಾರೆ).

ಹಿಂದೆ ಅವರು ಅಮೆರಿಕಾದ ನಿವೃತ್ತ ನೌಕಾದಳದ ಅಧಿಕಾರಿಯಾಗಿದ್ದರು; ಪ್ರಸ್ತುತ ದಿನಗಳಲ್ಲಿ ಅವರು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಾದ ನಾಸಾದಲ್ಲಿ ಗಗನಯಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2012ರಲ್ಲಿ, ಅವರು ಎಕ್ಸ್ಪೆಡಿಷನ್-32 ಅಂತರಿಕ್ಷ ಯಾತ್ರೆಯಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು; ನಂತರ, ಎಕ್ಸ್ಪೆಡಿಷನ್- 33ಯಲ್ಲಿ ಕಮಾಂಡರ್ ಆಗಿ ತಮ್ಮ ಕರ್ತವ್ಯವನ್ನು ಮುಂದುವರಿಸಿದರು.

2024ರಲ್ಲಿ, ಅವರು ಬೋಯಿಂಗ್ ಸ್ಟಾರ್ಲೈನರ್ನ ಮೊದಲ ಮಾನವ ಸಹಿತ ಯೋಜನೆಯ ಪ್ರಯೋಗಕ್ಕಾಗಿ ಬೋಯಿಂಗ್ ಕ್ರೀವ್ ಫ್ಲೈಟ್ ನಲ್ಲಿ ISSಗೆ [International Space Station] ತಮ್ಮ ಪಯಣವನ್ನು ಬೆಳೆಸಿದ್ದರು; ಈಗ, ಅವರು ಭೂಮಿಗೆ ಮರಳುವುದು ಫೆಬ್ರವರಿ 2025ರವರೆಗೆ ವಿಳಂಬವಾಗಿದೆ. ಈ ವಿಳಂಬನೆಯಿಂದ ಅವರು ಬಾಹ್ಯಾಕಾಶದಲ್ಲಿ ವಿಸ್ತೃತ ವಾಸ್ತವ್ಯದಿಂದಾಗಿ ಗಂಭೀರ ಅರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ; ಆಮ್ಲಜನಕದ ಕೊರತೆಯಿಂದಾಗಿ ಅವರ ಮಿದುಳಿಗೆ ಹಾನಿಯಾಗುವ ಸಂಭಾವ್ಯತೆಯಂತಹ ಗಂಭೀರ ವಿಷಯವೂ ಅವರು ಎದುರಿಸುತ್ತಿದ್ದಾರೆ. ಇಂತಹ ಸವಾಲುಗಳ ಹೊರತಾಗಿಯೂ ಅವರು ಎದೆಗುಂದದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ[ISS]ದಲ್ಲಿ ಭೂಮಿಗೆ ಮರಳುವವರೆಗೆ ವಿವಿಧ ವೈಜ್ಞಾನಿಕ ಪ್ರಯೋಗಗಳ ಪರೀಕ್ಷೆಗಳನ್ನು ಮುಂದುವರಿಯಲು ನಿರ್ಧರಿಸಿದರು.

ಗುಜರಾತಿನ ಮೆಹ್ಸಾನಾ ಜಿಲ್ಲೆಯ ನರರೋಗಶಾಸ್ತ್ರಜ್ಞ ದೀಪಕ್ ಪಾಂಡ್ಯ ಮತ್ತು ಉರ್ಸುಲಿನ್ ಬೋನಿ ಪಾಂಡ್ಯ ದಂಪತಿಯ ಕಿರಿಯ ಮಗಳಾಗಿ ಹುಟ್ಟಿದ್ದ ಸುನಿತಾ ವಿಲಿಯಮ್ಸ್ ಅವರು ತಮ್ಮ ಪ್ರಾರಂಭಿಕ ಪದವಿ ಶಿಕ್ಷಣವನ್ನು 1983ರಲ್ಲಿ ಪಡೆದು, ನಂತರ ಅವರು ಅಮೆರಿಕಾದ ನಾವಲ್ ಅಕಾಡೆಮಿಯಿಂದ 1987ರಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದರು. 1995ರಲ್ಲಿ ಫ್ಲಾರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅವರು ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಪಡೆದರು.

1983ರಲ್ಲಿ ಸುನೀತಾ ಅವರು ಮೇರಿಲ್ಯಾಂಡಿನ ಅನ್ನಾಪೊಲಿಸ್ ನ US ನೇವಲ್ ಅಕಾಡೆಮಿಯಲ್ಲಿ ತರಬೇತಿಗಾಗಿ ದಾಖಲಿಸಿಕೊಂಡರು. 1989ರಲ್ಲಿ ಅವರು ಯುದ್ಧ ಹೆಲಿಕಾಪ್ಟರ್ ಅನ್ನು ಹಾರಿಸುವ ತರಬೇತಿಯನ್ನು ಪಡೆದರು. ಪರ್ಷಿಯನ್ ಗಲ್ಫ್ ಯುದ್ಧದ ಹೊಸ್ತಲಿನಲ್ಲಿ ಮತ್ತು ಇರಾಕಿನ ಕುರ್ದಿಶ್ ಪ್ರದೇಶಗಳ ಮೇಲೆ ಹಾರಾಟ-ನಿಷೇಧ ವಲಯಗಳ ಸ್ಥಾಪನೆಯ ಕಾಲದಲ್ಲಿ ಅವರು ಸ್ಕ್ವಾಡ್ರನ್ ಗಳಲ್ಲಿ ಹೆಲಿಕ್ಯಾಪ್ಟರ್ ಅನ್ನು ಹಾರಿಸಿದ್ದರು; ಅದರೊಂದಿಗೆ 1992ರಲ್ಲಿ ಅವರು ಮಿಯಾಮಿಯಲ್ಲಿ ಅಪ್ಪಳಿಸಿದ್ದ ಆಂಡ್ರ್ಯೂ ಚಂಡಮಾರುತದ ಸಮಯದಲ್ಲಿ ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಹೆಲಿಕಾಪ್ಟರ್ ಅನ್ನು ಹಾರಿಸಿ ಮಾನವೀಯ ನೆರವನ್ನು ಒದಗಿಸಿದ್ದರು.

1993ರಲ್ಲಿ ಅವರು ನೌಕಾಪಡೆಯಲ್ಲಿ ಪೈಲಟ್ ಆದರು; ನಂತರ, ಅವರು ಪರೀಕ್ಷಾ ಪೈಲಟ್ ಕಲಿಸುಗರಾದರು. ಅವರು 30ಕ್ಕೂ ಹೆಚ್ಚು ವಿವಿಧ ರೀತಿಯ ವಿಮಾನಗಳನ್ನು ಹಾರಿಸಿ ತಮ್ಮ ಉಡ್ಡಯನದ ಸಾಮರ್ಥ್ಯವನ್ನು ಸಾಬೀತುಪಡಿಸಿದರು; ಆಗ, ಅವರು 1998ರಲ್ಲಿ ಗಗನಯಾತ್ರಿಯ ತರಬೇತಿಗೆ ಚುನಾಯಿತರಾದರು. ಆಗಸ್ಟ್ 1998ರಲ್ಲಿ ಅವರು ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ತಮ್ಮ ಗಗನಯಾತ್ರಿ ಅಭ್ಯರ್ಥಿಯಾಗಿ ತರಬೇತಿಯನ್ನು ಪ್ರಾರಂಭಿಸಿದರು. ಕೊಲಂಬಿಯಾ ದುರಂತದಲ್ಲಿ ಮಡಿದ ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಕ್ಕೆ ಹೋದ ಭಾರತೀಯ ಮೂಲದ ಎರಡನೇ ಅಮೇರಿಕನ್ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಸುನೀತಾ ವಿಲಿಯಮ್ಸ್ ಅವರು ಪಾತ್ರರಾದರು!

STS-116 : ಸುನಿತಾ ವಿಲಿಯಮ್ಸ್ ಅವರನ್ನು ಡಿಸೆಂಬರ್ 9, 2006ರಂದು ಎಕ್ಸ್ಪೆಡಿಶನ್-14ರ ಸಿಬ್ಬಂದಿಯರೊಂದಿಗೆ ಸೇರಲು STS-116 ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಬಾಹ್ಯಾಕಾಶ ನೌಕೆಯಾದ: 'ಡಿಸ್ಕವರಿ'ಯಲ್ಲಿ ಕಳುಹಿಸಿಕೊಟ್ಟರು. ಇದು ಸುನಿತಾ ಅವರ ಪ್ರಪ್ರಥಮ ಬಾಹ್ಯಾಕಾಶ ಯಾತ್ರೆಯಾಗಿತ್ತು!

ಬಾಹ್ಯಾಕಾಶ ನಿಲ್ದಾಣದಲ್ಲಿ ಅವರು ತಂಗಿದ್ದ ಕಾಲದಲ್ಲಿ, ಅವರು ನೌಕೆಯ ಹೊರಗೆ ಒಟ್ಟು 29 ಗಂಟೆಗಳಿಗಿಂತ ಹೆಚ್ಚು ಕಾಲ ನಾಲ್ಕು ಅಂತರೀಕ್ಷ ನಡಿಗೆಗಳನ್ನು ಸಫಲವಾಗಿ ನೆರವೇರಿಸಿದರು; ಇದೊಂದು ಬಾಹ್ಯಾಕಾಶದಲ್ಲಿ ನಿರ್ಮಿತ ದಾಖಲೆಯಾಗಿದೆ. ಆಗಸ್ಟ್ 2012ರ ಹೊತ್ತಿಗೆ, ಸುನೀತಾ ವಿಲಿಯಮ್ಸ್ ಅವರು ಒಟ್ಟು 50 ಗಂಟೆ 40 ನಿಮಿಷಗಳ ಕಾಲ ಏಳು ಬಾಹ್ಯಾಕಾಶ ನಡಿಗೆಗಳಲ್ಲಿ ಕಳೆದುದರಿಂದ, ಆ ಸಮಯದಲ್ಲಿ ಅವರನ್ನು ಅತ್ಯಂತ ಅನುಭವಿ ಬಾಹ್ಯಾಕಾಶ ನಡಿಗರ ಪಟ್ಟಿಯಲ್ಲಿ ಐದನೇ ಸ್ಥಾನ ದೊರೆದಿತ್ತು. [ರಷ್ಯಾದ  ಅನಾಟೊಲಿ ಸೊಲೊವಿಯೆವ್ ಅವರು 82 ಗಂಟೆ 22 ನಿಮಿಷಗಳನ್ನು ಬಾಹ್ಯಾಕಾಶ ನಡಿಗೆಯಲ್ಲಿ ಕಳೆದು ಅತ್ಯಂತ ಅನುಭವಿ ಬಾಹ್ಯಾಕಾಶ ನಡಿಗರ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ]    

ಮೇ 2020ರಲ್ಲಿ, ಸುನಿತಾ ವಿಲಿಯಮ್ಸ್ ಅವರು ಅಮೆರಿಕಾದಲ್ಲಿ 500,000ಕ್ಕೂ ಹೆಚ್ಚು ಭಾರತೀಯ ಮತ್ತು ಇತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಾಷಿಂಗ್ಟನ್, D.Cಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವಿದ್ಯಾರ್ಥಿ ಕೇಂದ್ರ ಆಯೋಜಿಸಿದ್ದ ವರ್ಚುವಲ್ ಸಂದರ್ಶನದಲ್ಲಿ ಉಪನ್ಯಾಸ ನೀಡಿದರು.

ಬಾಹ್ಯಾಕಾಶದಲ್ಲಿ ಮಹಿಳೆಯರ ಸಾಧನೆಗಳು :

ಮೇ 2020ರ ಹೊತ್ತಿಗೆ, ಒಟ್ಟು 634 ಬಾಹ್ಯಾಕಾಶ ಪ್ರಯಾಣವನ್ನು ನಡೆಸಿದವರಲ್ಲಿ 73 ಗಗನಯಾತ್ರಿಯರು ಮಹಿಳೆಯರಾಗಿದ್ದರು.

1. ವ್ಯಾಲೆಂಟಿನಾ ಟೆರೆಶ್ಕೋವಾ : ಬಾಹ್ಯಾಕಾಶಕ್ಕೆ ಲಗ್ಗೆಯಿಟ್ಟ ಮೊತ್ತಮೊದಲ ಮಹಿಳೆ ವ್ಯಾಲೆಂಟಿನಾ ಟೆರೆಶ್ಕೋವಾ ಅವರು ಆಗಿದ್ದಾರೆ; ಅದರೊಂದಿಗೆ, ಅವರು ಏಕಾಂಗಿಯಾಗಿ ಬಾಹ್ಯಾಕಾಶಕ್ಕೆ ಹಾರಾಟ ನಡೆಸಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

2. ಸ್ವೆಟ್ಲಾನಾ ಸವಿತ್ಸ್ಕಾಯಾ :  ಬಾಹ್ಯಾಕಾಶ ನಿಲ್ದಾಣದತ್ತ ಹಾರಾಟ ನಡೆಸಿದ ಮೊದಲ ಮಹಿಳೆ ಸ್ವೆಟ್ಲಾನಾ ಸವಿತ್ಸ್ಕಾಯಾ ಅವರು ಆಗಿದ್ದಾರೆ. ಬಾಹ್ಯಾಕಾಶದಲ್ಲಿ ನಡೆದ ಮೊದಲ ಮಹಿಳೆ (Jul. 25, 1984) ಎಂಬ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ; ಎರಡು ಸಲ ಬಾಹ್ಯಾಕಾಶದ ಹಾರಾಟಗಳನ್ನು ಮಾಡಿದ ಮೊದಲ ಮಹಿಳೆ ಎಂಬ ಹೆಮ್ಮೆ ಇವರಿಗೆ ಸಲ್ಲುತ್ತದೆ.

3. ಸ್ಯಾಲಿ ರೈಡ್ :  ಬಾಹ್ಯಾಕಾಶಕ್ಕೆ ಹೋದ ಮೊದಲ ಅಮೆರಿಕನ್ ಮಹಿಳೆ ಸ್ಯಾಲಿ ರೈಡ್ ಆಗಿದ್ದರೆ.

4. ಅನ್ನಾ ಲೀ ಫಿಷರ್ : ಬಾಹ್ಯಾಕಾಶಕ್ಕೆ ಹೋದ ಮೊದಲ ತಾಯಿ ಅನ್ನಾ ಫಿಷರ್ ಆಗಿದ್ದಾರೆ.

ಬಾಹ್ಯಾಕಾಶದಲ್ಲಿ ಎರಡು ಸಲ ಹುಟ್ಟುಹಬ್ಬವನ್ನೂ ಆಚರಿಸಿದ ಹಿರಿಮೆ ಸುನಿತಾ ಅವರಿಗೆ ಸಲ್ಲುತ್ತದೆ; ಹಿಂದೆ 2012ರಲ್ಲಿ ಅವರು ಬಾಹ್ಯಾಕಾಶದಲ್ಲಿ ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವರ್ಷ ಅವರು 59ನೇ ಹುಟ್ಟುಹಬ್ಬವನ್ನು ಬಾಹ್ಯಾಕಾಶದಲ್ಲಿ ಆಚರಿಸಿ ವಿಚಿತ್ರ ದಾಖಲೆಯನ್ನು ನಿರ್ಮಿಸಿದರು. ಸದ್ಯಕ್ಕೆ, ಸುನೀತಾ ವಿಲಿಯಮ್ಸ್ ಅವರನ್ನು ಶೀಘ್ರವೇ ಭೂಮಿಗೆ ವಾಪಸ್ ಕರೆತರಲು ನಾಸಾ ವಿವಿಧ ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ನಮ್ಮ ದೇಶದ ಹೆಮ್ಮೆಯ ಸುಪುತ್ರಿಯಾಗಿರುವ ಸುನಿತಾ ವಿಲಿಯಮ್ಸ್ ಅವರು ಸುರಕ್ಷಿತರಾಗಿ ಭೂಮಿಗೆ ಮರಳಿ ಬರಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳಿವೆ. 

-ಶಿಕ್ರಾನ್ ಶರ್ಫುದ್ದೀನ್ ಎಂ. ಮಂಗಳೂರು