ಅಂತರಿಕ್ಷದ ದುರಂತಗಳು

ಅಂತರಿಕ್ಷದ ದುರಂತಗಳು

ಅಂತರಿಕ್ಷ ಹಾರಾಟದ ಇತಿಹಾಸದಲ್ಲಿ ಅನೇಕ ಭೀಕರ ಅಪಘಾತಗಳು ಸಂಭವಿಸಿವೆ. ಮನುಷ್ಯ ಸಹಿತ ಅಂತರಿಕ್ಷ ಹಾರಾಟದಲ್ಲಿ ೨೦೧೦ರವರೆಗೆ ಸಿಕ್ಕಿರುವ ಲೆಕ್ಕದಲ್ಲಿ ೧೮ ಗಗನಯಾತ್ರಿಗಳು ದುರಂತದ ಸಾವು ಕಂಡಿದ್ದಾರೆ. ಇದಲ್ಲದೆ ಇತರೆ ಅಂತರಿಕ್ಷ ಚಟುವಟಿಕೆಗಳಲ್ಲಿ ಹಾಗೂ ಹಾರಾಟದ ಪ್ರಾರಂಭ ಮತ್ತು ತರಭೇತಿಯಲ್ಲಿ ಅಪಘಾತಗಳು ಸಂಭವಿಸಿ, ಅನೇಕ ತಂತ್ರಜ್ಞರೂ ತರಭೇತಿ ಪಡೆಯುತ್ತಿದ್ದವರೂ ಹೀಗೆಯೇ ಅಸುನೀಗಿದ್ದಾರೆ. ಅಂತಹ ಕೆಲವು ಘಟನೆಗಳನ್ನು ನೋಡೋಣ ಬನ್ನಿ.

೧೯೬೭ರ ಪ್ಯಾರಚೂಟ್ ವೈಫಲ್ಯ: ಒಂದು ದಿನದ ಈ ಅಂತರಿಕ್ಷ ಯಾತ್ರೆಯಲ್ಲಿ ಪ್ಯಾರಾಚೂಟ್ ಕೈಕೊಟ್ಟಿದ್ದರಿಂದ ವ್ಲಾಡಿಮಿರ್ ಕೊಮೊರೋವ್ ಎಂಬ ರಷ್ಯಾ ಗಗನಯಾತ್ರಿ ಕೊನೆಯುಸಿರೆಳೆದರು. ಇದು ನಡೆದದ್ದು ೧೯೬೭ರ ಎಪ್ರಿಲ್ ೨೪ರಂದು. ಆ ಆಕಾಶ ನೌಕೆಯ ಹೆಸರು ಸೂಯೆಜ್-೧. ಅದು ಅಂತರಿಕ್ಷದಿಂದ ಮರಳುವಾಗ ಅತ್ಯಂತ ಎತ್ತರದಲ್ಲಿದ್ದ ಆಕಾಶ ನೌಕೆಯಿಂದ ವ್ಲಾಡಿಮಿರ್ ಪ್ಯಾರಾಚೂಟಿನೊಂದಿಗೆ ಜಿಗಿದರು. ಆದರೆ ಆತನ ದುರಾದೃಷ್ಟವೋ ಏನೋ, ಪ್ಯಾರಾಚೂಟ್ ಬಿಚ್ಚಿಕೊಳ್ಳಲಿಲ್ಲ. ಇದರಿಂದಾಗಿ ವ್ಲಾಡಿಮಿರ್ ಒಂದು ಪ್ರಚಂಡ ವೇಗದೊಂದಿಗೆ ಕೆಳಕ್ಕೆ ಬಿದ್ದ. ಪರಿಣಾಮವಾಗಿ ಕ್ಷಣಾರ್ಧದಲ್ಲಿ ಸತ್ತ. ಈತ ಹೀಗೆ ತನ್ನ ಅಂತ್ಯ ಕಂಡ ಸ್ಥಳವೆಂದರೆ, ರಷ್ಯಾದ ಓರೆನ್ ಬರ್ಗ್. ಇಲ್ಲಿ ಈತನ ಸ್ಮರಣೆಗಾಗಿ ಒಂದು ಸುಂದರ ಉದ್ಯಾನವಿದೆ.

ಬಾಹ್ಯಾಕಾಶ ತೆರೆದುಕೊಂಡದ್ದು...: ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರೆದುಕೊಳ್ಳುವುದು ಎಂದರೆ, ಮೃತ್ಯು ಕೂಪಕ್ಕೆ ಬಿದ್ದಂತೆಯೇ ! ಈ ದುರಂತ ನಡೆದದ್ದು ೧೯೭೧ರ ಜೂನ್ ೩೦ರಂದು. ಇದರಲ್ಲಿ ೧೧ ಗಗನಯಾತ್ರಿಗಳು ಒಟ್ಟಾಗಿ ಸತ್ತು ಹೋದರು. ಸೆಲ್ಯೂಟ್ ೧ ಅಂತರಿಕ್ಷ ನಿಲ್ದಾಣದಲ್ಲಿ ಮೂರು ವಾರಗಳಿಂದ ವಾಸವಾಗಿದ್ದ ಗಗನಯಾತ್ರಿಗಳಿಗೆ ಇದ್ದಕ್ಕಿದ್ದಂತೆಯೇ ಸೇವಾಕೋಶ (Service Module) ಅಂತರಿಕ್ಷ ನೌಕೆಯಿಂದ ಬೇರ್ಪಡುವಾಗ ಒಂದು ವಾಲ್ವ್ (Volve) ತೆರೆದುಕೊಂಡು ಗಾಳಿಯಲ್ಲಿ ಹೊರನುಗ್ಗಿ ನಿರ್ವಾತ ಏರ್ಪಟ್ಟಿದ್ದೇ ಇದಕ್ಕೆ ಕಾರಣ. ಈ ದುರಂತ ನಡೆದದ್ದು ಭೂಮಿಯಿಂದ ೧೦೦ ಕಿ.ಮೀ. ಎತ್ತರದಲ್ಲಿ. ಈ ದುರ್ಘಟನೆ ನಡೆದದ್ದು ನೂಯೆಜ್ -೨ ಆಕಾಶನೌಕೆಯಲ್ಲಿ. ಈ ದುರಂತದ ನೆನಪಿಗೆ ಕಝಗಿಸ್ತಾನದ ಕಾರ್ಗಂಡಿಯಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದೆ.

ಚಾಲೆಂಜರ್ ದುರಂತ: ಇದು ಅಮೆರಿಕದ ಬಹೋಪಯೋಗಿ ಆಕಾಶನೌಕೆ. ಇದರ ಹೆಸರೇ ಚಾಲೆಂಜರ್. ಈ ದುರಂತ ನಡೆದದ್ದು ೧೯೮೬ರ ಜನವರಿ ೨೮ರಂದು. ‘ಸಾಲಿಡ್ ರಾಕೆಟ್ ಬೂಸ್ಟರ್' ನಿಂದ ಸೋರಿದ ಬಿಸಿ ಅನಿಲಗಳಿಂದ ೭ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಮೃತರಾದರು. ಈ ಘಟನೆ ನಡೆದಾಗ ಕೆಲವು ಗಗನಯಾತ್ರಿಗಳು ಕೃತಕ ಆಮ್ಲಜನಕದ ಮಾಸ್ಕ್ ಧರಿಸುವುದರೊಳಗೆ ಈ ದುರಂತ ಸಂಭವಿಸಿತು. ಈ ಚಾಲೆಂಜರ್ ನೌಕೆ ಕೊನೆಗೆ ಫ್ಲೋರಿಡಾದ ಹತ್ತಿರದ ಬ್ರೇವರ್ಡ್ ಕೌಂಟಿ ಹತ್ತಿರ ಸಮುದ್ರದ ಮೇಲೆ ಬಂದು ಬಿತ್ತು. ಇಂದಿಗೂ ಇದರ ಅರ್ಧ ಭಾಗ ಅವಶೇಷವೂ ಸಿಕ್ಕಿಲ್ಲ !

ಕೊಲಂಬಿಯಾ ದುರಂತ: ಭಾರತ ಮೂಲದ ಹೆಮ್ಮೆಯ ಗಗನಯಾತ್ರಿ ಕಲ್ಪನಾ ಚಾವ್ಲಾ ನಿಮಗೆ ನೆನಪಿದೆಯೇ? ಈಕೆ ಮಡಿದದ್ದು ಈ ದುರಂತದಲ್ಲಿಯೇ. ಈ ದುರಂತ ನಡೆದದ್ದು ೨೦೦೩ರ ಫೆಬ್ರವರಿ ೧ರಂದು. ಇದು ನಡೆದದ್ದು ಎರಡು ವಾರಗಳ ಅವಧಿಯ ಬಾಹ್ಯಾಕಾಶ ಯಾತ್ರೆಯ ಅಂತಿಮ ಕ್ಷಣಗಳಲ್ಲಿ. ಆಗ ಅದರಲ್ಲಿದ್ದ ಗಗನಯಾತ್ರಿಗಳು, ‘ಇನ್ನೇನು ಕೆಲವೇ ನಿಮಿಷಗಳಲ್ಲಿ ನಾವು ಭೂಮಿಯನ್ನು ತಲುಪಿಬಿಡುತ್ತೇವೆ' ಎನ್ನುವ ಖುಷಿಯಲ್ಲಿದ್ದರು. ನೌಕೆ ಅಷ್ಟು ಹೊತ್ತಿಗಾಗಲೇ ನಮ್ಮ ವಾಯುಮಂಡಲವನ್ನೂ ಪ್ರವೇಶಿಸಿತ್ತು. ಆಗ ಈ ಶೋಧ ನೌಕೆಯ ಎಡರೆಕ್ಕೆಯಲ್ಲಿ ಇದ್ದಕ್ಕಿದ್ದಂತೆ ದೋಷ ಕಾಣಿಸಿಕೊಂಡು, ಅದರ ಶಾಖ ನಿರೋಧಕ ವ್ಯವಸ್ಥೆ (Thermal Protection System) ಕೈಕೊಟ್ಟಿದ್ದೇ ಇದಕ್ಕೆ ಕಾರಣ. ಇದರ ಎಡಭಾಗದಲ್ಲಿ ಲೋಹದ ತುಣುಕೊಂದು ಕಿತ್ತುಕೊಂಡು ಹೊರಬಂದು, ಹೊರಭಾಗದ ಟ್ಯಾಂಕ್ ಗೆ ಢಿಕ್ಕಿ ಹೊಡೆಯಿತು. ಇದರಿಂದಾಗಿ ಶಾಖ ನಿರೋಧಕ ವ್ಯವಸ್ಥೆ ಕುಸಿದು ನೌಕೆಯ ಒಳಭಾಗದ ಶಾಖ ಒಮ್ಮೆಗೇ ಹೆಚ್ಚತೊಡಗಿತು. ಶಾಖ ಕೆಲವೇ ಸೆಕೆಂಡುಗಳಲ್ಲಿ ವಿಪರೀತ ಹೆಚ್ಚಿ ಒಮ್ಮೆಲೇ ನೌಕೆ ಸ್ಫೋಟಿಸಿತು. ಪರಿಣಾಮವಾಗಿ ನಮ್ಮ ಹೆಮ್ಮೆಯ ಕಲ್ಪನಾ ಚಾವ್ಲಾ ಜತೆ ಇನ್ನೂ ಆರು ಗಗನಯಾತ್ರಿಗಳು ಸುಟ್ಟು ಭಸ್ಮವಾದರು. (ಚಿತ್ರ ನೋಡಿ)

ಅಂತರಿಕ್ಷ ತರಭೇತಿಯಲ್ಲಿನ ದುರಂತಗಳು: 

* ೧೯೬೧ರ ಮಾರ್ಚ್ ೨೩ರಂದು ವ್ಯಾಲೆಂಟೀನ್ ಬೊಂಡಾರೆಂಕೊ ಕಡಿಮೆ ಒತ್ತಡದ ಕೋಣೆಯಲ್ಲಿ ತರಭೇತಿ ಪಡೆಯುತ್ತಿದ್ದಾಗ ಬೆಂಕಿ ಹತ್ತಿಕೊಂಡು ಪ್ರಾಣ ನೀಗಿದರು.

* ೧೯೬೪ರ ಅಕ್ಟೋಬರ್ ೩೧ರಂದು ಥಿಯೋಡರ್ ಫ್ರೀಮನ್ ಟಿ -೩೦ ಜೆಟ್ ನಲ್ಲಿ ಹಾರಾಟ ನಡೆಸುತ್ತಿದ್ದಾಗ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಜೆಟ್ ಸ್ಫೋಟಗೊಂಡಿತು.

* ೧೯೬೬ರ ಫೆಬ್ರವರಿ ೨೮ರಂದು ಈಲಿಯಟ್ ಸೀ ಮತ್ತು ಚಾರ್ಲ್ಸ್ ಬೇಸೆಟ್ ಎಂಬಿಬ್ಬರು ತರಭೇತಿ ಪಡೆಯುತ್ತಿದ್ದಾಗ ಕೆಟ್ಟ ಹವಾಮಾನದಿಂದಾಗಿ ಜೆಟ್ ವಿಮಾನ ಕಾರ್ಖಾನೆಗೇ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡರು. 

* ೧೯೬೭ರ ಜನವರಿ ೨೭ರಂದು ಅಪೋಲೊ ಶೋಧನೌಕೆಯನ್ನು ಪರೀಕ್ಷಾ ಉಡ್ದಯನಕ್ಕೆ ಅಣಿಗೊಳಿಸಲಾಗಿತ್ತು. ಅದು ಶಾರ್ಟ್ ಸರ್ಕ್ಯೂಟ್ ನಿಂದ ಸ್ಫೋಟಗೊಂಡು ಗಾಸ್ ಗ್ಯಾರಿಸಮ್, ಎಡ್ವರ್ಡ್ ವೈಟ್ ಮತ್ತು ರೋಜರ್ ಚಾಫ್ ಎಂಬ ಮೂವರು ಸತ್ತು ಹೋದರು.

* ೧೯೬೭ರ ಅಕ್ಟೋಬರ್ ೫ರಂದು ಕ್ಲಿಫ್ ಜನ್ ಸಿ ಸಿ ವಿಲಿಯಮ್ಸ್ ಚೆರತ್ ವಿಮಾನದಲ್ಲಿ ದುರಂತ ಸಾವನ್ನಪ್ಪಿದರು. 

* ೧೯೬೮ರ ಮಾರ್ಚ್ ೨೭ರಂದು ವಿಶ್ವದ ಪ್ರಥಮ ಗಗನಯಾತ್ರಿ ಯೂರಿ ಗಾಗರಿನ್ ಜೆಟ್ ವಿಮಾನ ದುರಂತದಲ್ಲಿ ಮೃತಪಟ್ಟರು.

* ೧೯೯೩ರ ಜುಲೈ ೧೧ರಂದು ರಷ್ಯಾದ ಸೆರ್ಗಿ ವೊಜೊವಿಕೋವ್ ನೀರಿನಲ್ಲಿ ವಿಶೇಷ ತರಭೇತಿಯನ್ನು ಪಡೆಯುತ್ತಿದ್ದಾಗ ಮುಳುಗಿ ಜಲಸಮಾಧಿಯಾದರು.

-ಕೆ.ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ