ಅಂತರಿಕ್ಷದ ಸೋಜಿಗಗಳು (ಭಾಗ ೧)
ಸುಮಾರು ೧೦೦ ವರ್ಷಗಳಿಗಿಂತಲೂ ಹಿಂದೆ ವಿದೇಶ ಪ್ರವಾಸ ಎಂಬುದು ಅತ್ಯಂತ ಪ್ರತಿಷ್ಟೆ ಹಾಗೂ ವಿಶೇಷವಾದ ಸಂಗತಿಯಾಗಿತ್ತು. ಆದರೆ ಅದು ಇಂದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅಂತರ್ ಗ್ರಹ ಯಾತ್ರೆ ಹಾಗೂ ಬಾಹ್ಯಾಂತರಿಕ್ಷಗಳಲ್ಲಿ ಯಾನ ಮಾಡುವ ದಿನಗಳು ದೂರವಿಲ್ಲ. ಅನೇಕ ಪ್ರಸಿದ್ಧ ಸಂಸ್ಥೆಗಳು ಈಗಾಗಲೇ ಇಂತಹ ಯಾತ್ರೆಗಳ ನೀಲನಕ್ಷೆಯನ್ನು ಸಿದ್ಧಪಡಿಸಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಒಂದಂತೂ ನಿಜ. ಈ ಪ್ರವಾಸಗಳು ಅತ್ಯಂತ ವೆಚ್ಚದಾಯಕ. ಜನಸಾಮಾನ್ಯರಿಗಂತೂ ಕನಸಿನ ಮಾತು. ಇರಲಿ ಬಿಡಿ, ಆದರೆ ಅಂತರಿಕ್ಷದಲ್ಲಿ ನಮಗಾಗುವ ಕೆಲವು ಅನುಭವಗಳನ್ನು ತಿಳಿದುಕೊಳ್ಳಲು ಅಡ್ಡಿಯಿಲ್ಲವಷ್ಟೇ?
ಒಂದೇ ದಿನಕ್ಕೆ ೧೬ ಸೂರ್ಯೋದಯ: ಭೂಮಿಯ ಸಮೀಪದ ಕಕ್ಷೆಯಲ್ಲಿ ನೀವು ಭೂಮಿಯನ್ನು ಆಕಾಶ ನೌಕೆಯಲ್ಲಿ ಪರಿಭ್ರಮಿಸುತ್ತಿದ್ದೀರಿ ಎಂದು ಭಾವಿಸಿಕೊಳ್ಳಿ. ಪರಮಾಶ್ಚರ್ಯದ ಸಂಗತಿ ಎಂದರೆ ನೀವು ಪ್ರತಿ ೯೦ ನಿಮಿಷಗಳಿಗೊಮ್ಮೆ ಸೂರ್ಯನ ಹುಟ್ಟು ಮತ್ತು ಮುಳುಗುವಿಕೆಯನ್ನು ನೋಡಬಲ್ಲಿರಿ. ಅಂದರೆ ಒಂದು ದಿನದಲ್ಲಿ (೨೪ ಗಂಟೆಗಳಲ್ಲಿ) ಒಟ್ಟು ೧೬ ಬಾರಿ ಸೂರ್ಯ ಉದಯಿಸಿ, ಅಸ್ತಂಗತನಾಗುತ್ತಾನೆ. ನಿಮ್ಮ ನಿಯಮಿತ ದಿನ-ರಾತ್ರಿಗಳು ಮಾಯವಾಗುವುದರಿಂದ ನಿಮಗೆ ಗಾಢ ನಿದ್ರೆಯಂತೂ ಅಸಾಧ್ಯದ ಮಾತು. ಹಾಗಾಗಿ ಗಗನಯಾತ್ರಿಗಳಿಗಾಗಿಯೇ ವಿಶೇಷವಾದ ೨೪ ಗಂಟೆಗಳ ದಿನಚರಿಯನ್ನು ರೂಪಿಸಲಾಗುತ್ತದೆ. ಕೇವಲ ಅಲಾರ್ಮ್ ಗಳ ಸಹಾಯದಿಂದ ಮಾತ್ರ ವೇಳೆಯನ್ನು ತಿಳಿಯಬಲ್ಲಿರಿ. ಇಲ್ಲಿ ಅಂತರಾಷ್ಟ್ರೀಯ ಕಾಲಮಾನದ (ಐ ಎಸ್ ಟಿ) ಪ್ರಕಾರ ವೇಳೆಯನ್ನು ಅಳೆಯಲಾಗುತ್ತದೆ.
ಹೆಚ್ಚು ಎತ್ತರಕ್ಕೆ ಬೆಳೆಯಬಲ್ಲಿರಿ !: ನಿಮ್ಮ ಮೇಲಿನ ಭೂಮಿಯ ಗುರುತ್ವ ಗಣನೀಯವಾಗಿ ಕಡಿಮೆಯಾಗುವುದರಿಂದ, ನಿಮ್ಮ ಬೆನ್ನು ಹುರಿಯ ಸ್ತಂಭವು (Spinal Column) ಹಿಗ್ಗಿ ನೀವು ಎತ್ತರಕ್ಕೆ ಬೆಳೆಯಬಲ್ಲಿರಿ. ಭೂಮಿಯ ಮೇಲಿನ ಬೆಳವಣಿಗೆಗಿಂತ ಸುಮಾರು ೫ ರಿಂದ ೮ ಸೆಂ. ಮೀ. ಹೆಚ್ಚು ಎತ್ತರಕ್ಕೆ ಬೆಳೆಯುತ್ತೀರಿ. ಹೆಚ್ಚು ಬೆಳವಣಿಗೆಯಿಂದ ಹಿಗ್ಗದಿರಿ. ಏಕೆಂದರೆ ಈ ಬೆಳವಣಿಗೆ ನಿಮಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಬಲ್ಲವು. ಬೆನ್ನುನೋವು, ನರಗಳ ದೌರ್ಬಲ್ಯಗಳನ್ನು ನೀವು ಎದುರಿಸಬೇಕಾಗಬಹುದು.
ಗೊರಕೆ ನಿಂತುಬಿಡಬಹುದು: ನೀವು ಭೂಮಿಯ ಮೇಲೆ ಗೊರಕೆ ಹೊಡೆಯುವವರಾಗಿದ್ದು ಒಂದು ವೇಳೆ ನೀವು ಗಗನಯಾತ್ರಿಯಾಗಿ ಅಂತರಿಕ್ಷಕ್ಕೆ ಹೋಗಿದ್ದೇ ಆದರೆ ನಿಮ್ಮ ಗೊರಕೆ ನಿಂತೇ ಹೋಗುತ್ತದೆ. ಗೊರಕೆಗೆ ಗಗನಯಾತ್ರೆ ಎಂತಹ ದಿವ್ಯ ಔಷಧ. ಇದು ಖಂಡಿತಾ ನಿಜ. ೨೦೦೧ರ ಅಧ್ಯಯನದ ಪ್ರಕಾರ ಅಂತರಿಕ್ಷದಲ್ಲಿ ಗೊರಕೆ ಮಾಯ ! ಏಕೆಂದರೆ ಗುರುತ್ವ ಉಸಿರಾಟದ ಕ್ರಿಯೆಯ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಬಲ್ಲದು.
ದ್ರವರೂಪದ ಆಹಾರವನ್ನೇ ಸೇವಿಸಬೇಕು: ನಾವು ತಿನ್ನುವ ಆಹಾರಕ್ಕೆ ಉಪ್ಪು ಮತ್ತು ಮೆಣಸಿನಕಾಳಿನ ಪುಡಿ ಎಷ್ಟು ಅನಿವಾರ್ಯ ಎಂಬುದು ನಿಮಗೆ ತಿಳಿದೇ ಇದೆ. ಹಾಗೆಂದು ನೀವೇನಾದರೂ ಇವುಗಳನ್ನು ಪುಡಿ ರೂಪದಲ್ಲಿಯೇ ಏನಾದರೂ ಬಳಸಿದರೋ ಅದು ಕ್ಷಣ ಮಾತ್ರದಲ್ಲಿ ನಿಮ್ಮ ಇಡೀ ಕೋಣೆಯ ತುಂಬಾ ಹರಡಿ ಮುಂದಿನ ತೊಂದರೆಗಳಿಗೆ ಕಾರಣವಾಗಿಬಿಡುತ್ತದೆ. ಆದುದರಿಂದ ಸಾಮಾನ್ಯವಾಗಿ ಇಂತಹ ಪುಡಿಗಳನ್ನು ದ್ರವರೂಪದ ಆಹಾರವಾಗಿ ಪರಿವರ್ತಿಸಿಬಿಡುತ್ತಾರೆ. ಅಲ್ಲದೆ ಅಲ್ಲಿ ಗುರುತ್ವ ಕಡಿಮೆ ಇರುವುದರಿಂದ ಘನಪದಾರ್ಥಗಳು ಗಂಟಲು, ಹೊಟ್ಟೆಯೊಳಗೆ ಇಳಿಯುವುದು ಕಷ್ತವಾಗುತ್ತದೆ.
(ಇನ್ನೂ ಇದೆ)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ