ಅಂತರಿಕ್ಷದ ಸೋಜಿಗಗಳು (ಭಾಗ ೨)

ಅಂತರಿಕ್ಷದ ಸೋಜಿಗಗಳು (ಭಾಗ ೨)

ಅಂತರಿಕ್ಷ ಉಡುಪು : ಅಂತರಿಕ್ಷದಲ್ಲಿ ಭೂಮಿಯ ಮೇಲಿನ ಉಡುಪನ್ನು ಧರಿಸುವುದು ಸಾಧ್ಯವಿಲ್ಲ. ಏಕೆಂದರೆ ಅಂತರಿಕ್ಷದಲ್ಲಿನ ತಾಪಮಾನ, ಗಾಳಿಯ ಕೊರತೆ ಮತ್ತು ವಿಕಿರಣಗಳು ಕ್ಷಣಮಾತ್ರದಲ್ಲಿ ಹಾನಿ ಮಾಡಬಲ್ಲವು. ಆದ್ದರಿಂದ ಅಂತರಿಕ್ಷಕ್ಕೆ ಹೋಗಬೇಕೆಂದರೆ ‘ಅಂತರಿಕ್ಷ ಉಡುಪು' ಅನಿವಾರ್ಯ. ಈ ಅಂತರಿಕ್ಷ ಉಡುಪು ಅದನ್ನು ಧರಿಸಿದವರನ್ನು ಬಿಟ್ಟು ಸುಮಾರು ೨೮೦ ಪೌಂಡ್ (೧೪೦ ಕಿ.ಗ್ರಾಂ) ತೂಗುತ್ತದೆ ! ಈ ಉಡುಪು ಮೈಸನ್ ೧೫ ಡಿಗ್ರಿಯಿಂದ ೧೨೧ ಡಿಗ್ರಿ ಸೆಲ್ಸಿಯಸ್ ತಾಪಮಾನದ ಏರಿಳಿತಗಳನ್ನು ತಡೆಯಬಲ್ಲದು. ಇದನ್ನು ಧರಿಸಲು ಸುಮಾರು ೪೫ ನಿಮಿಷಗಳು ಬೇಕಾಗಬಹುದು.

ವಾಸದ ಆಕಾಶನೌಕೆ: ಅಮೇರಿಕಾ ಸ್ಕೈಲ್ಯಾಬ್ (Sky Lab) ಆಕಾಶ ನಿಲ್ದಾಣ ಕೇಂದ್ರ (ಚಿತ್ರ ನೋಡಿ) ಸುಮಾರು ೧೨ ಅಂತಸ್ತಿನ ಕಟ್ಟಡದಷ್ಟು ದೊಡ್ದದಿತ್ತು. ಇದರ ಮೇಲೆ ನಿಮ್ಮ ಆಕಾಶ ನೌಕೆ ಇಳಿಯುತ್ತದೆ. ಈ ಆಕಾಶ ನಿಲ್ದಾಣದಲ್ಲಿ ವಾಸಿಸುವ ಜಾಗವೇ ೧೨ ಸಾವಿರ ಘನ ಅಡಿಗಳಷ್ಟು ಇದೆ. ನಿಮ್ಮ ಆಕಾಶ ನೌಕೆಯಲ್ಲಿ ನಿಮಗೆ ಪ್ರತಿದಿನ ೩.೮ ಪೌಂಡಿನಷ್ಟು ಆಹಾರವನ್ನೂ ಒದಗಿಸಲಾಗುತ್ತದೆ. ಈ ಆಹಾರವೆಲ್ಲವೂ ಮೊದಲೇ ಬೇಯಿಸಿ ಸಂಸ್ಕರಿಸಿ ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಆಹಾರವಾದರೂ ಅಷ್ಟೇ ಸುಲಭ ರೀತಿಯಲ್ಲಿ ನೀರನ್ನು ಬೆರೆಸಿ ಅಥವಾ ಬಿಸಿ ಮಾಡಿ ಬಳಸುವಂತಿರುತ್ತದೆ. ಹಣ್ಣು ಹಂಪಲಿಗೆ ಮಾತ್ರ ರೆಫ್ರಿಜರೇಟರ್ ಗಳನ್ನು ಬಳಸಲಾಗುತ್ತದೆ.

ಅಂತರಿಕ್ಷ ಬಳಲಿಕೆ: ಗುರುತ್ವರಹಿತ ಸ್ಥಿತಿಯಲ್ಲಿ ನಮ್ಮ ದೇಹದ ಒಳಾವರಣದ ಸ್ಥಿತಿ ಮತ್ತು ದೇಹದ ಮೇಲಿನ ಒತ್ತಡಗಳು ಅನೇಕ ಏರುಪೇರುಗಳನ್ನು ಅನುಭವಿಸುತ್ತದೆ. ಬಾಹ್ಯಾಕಾಶದಲ್ಲಿ ನಮ್ಮ ದೇಹಕ್ಕೆ ಗುರುತ್ವ ಕೇಂದ್ರವೇ (Center of Gravity) ಇಲ್ಲದಿರುವುದರಿಂದ ಎಷ್ಟೋ ಬಾರಿ ನೇರ ನಿಲ್ಲಲು ಸಾಧ್ಯವಾಗದೇ ತಲೆ ಕೆಳಗಾಗುವ ಸಾಧ್ಯತೆಯೇ ಹೆಚ್ಚು. ನಿಮಗೆ ಕೈ ಕಾಲುಗಳು ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಇದನ್ನು ‘ಆಕಾಶ ಹೊದಿಕೆಯ ಕಾಯಿಲೆ' ಎಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಗಗನಯಾತ್ರಿಗಳು ತಲೆನೋವು, ತಲೆ ಸುತ್ತುವಿಕೆ, ವಾಂತಿ ಇಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಆದರೆ ಇದೆಲ್ಲಾ ಕೆಲವು ದಿನಗಳು ಮಾತ್ರ. ನಂತರದಲ್ಲಿ ಹೊಂದಿಕೊಂಡು ಬಿಡುತ್ತಾರೆ.

ಅಂತರಿಕ್ಷದಿಂದ ಮರಳಿದಾಗ...: : ಅಂತರಿಕ್ಷದಿಂದ ನೀವು ಮರಳಿ ಭೂಮಿಗೆ ಬಂದ ತಕ್ಷಣ ಹೊಂದಿಕೊಳ್ಳುವುದು ಇನ್ನೂ ಕಷ್ಟ. ಏಕೆಂದರೆ ನೀವು ಪುನಃ ಗುರುತ್ವದ ಬಂಧಿಯಾಗುತ್ತೀರಿ. ಭೂಮಿಗೆ ಬಂದೊಡನೆ ನಿಲ್ಲಲು ಆಗದೆ ತಕ್ಷಣ ನೆಲಕ್ಕೆ ಬಿದ್ದುಬಿಡುತ್ತೀರಿ. ಮೊದಮೊದಲು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಭೂಮಿಗೆ ಮರಳಿದಾಗ ಊಟ ಮಾಡುವುದನ್ನು ಮತ್ತು ಕುಡಿಯುವುದನ್ನು ಮತ್ತೆ ಅಭ್ಯಾಸ ಮಾಡಬೇಕಾಗುತ್ತದೆ.

ಕಾಸ್ಮಿಕ್ ಕಿರಣಗಳು: ನೀವು ಅಂತರಿಕ್ಷ ಉಡುಪಿಲ್ಲದೇ ಒಂದು ಕ್ಷಣ ಶೂನ್ಯಾಕಾಶಕ್ಕೆ ತೆರೆದುಕೊಂಡಿರೋ ಕ್ಷಣಮಾತ್ರದಲ್ಲಿ ವಿಕಿರಣಗಳು ನಿಮ್ಮನ್ನು ಅಪೋಶನ ಮಾಡಿಬಿಡುತ್ತವೆ. ಗಾಳಿಯೂ ಇಲ್ಲದೇ ಸಾವೇ ಗತಿ ! ಈ ಕಾಸ್ಮಿಕ್ ಕಿರಣಗಳಿಂದಾಗಿ ನಿಮ್ಮ ಅಂತರಿಕ್ಷ ನೋಟವೂ ಕಿರಿಕಿರಿಯಾಗುತ್ತದೆ. ಏಕೆಂದರೆ, ಈ ಕಾಸ್ಮಿಕ್ ಕಿರಣಗಳು ನಿಮ್ಮ ಕಣ್ಣನ್ನು ಕುಕ್ಕಿ ನೋಟ ಕಷ್ಟವಾಗುತ್ತದೆ. ಸುಮಾರು ೩೯ ಜನ ಗಗನಯಾತ್ರಿಗಳು ತಮ್ಮ ಅಂತರಿಕ್ಷ ಯಾನದ ನಂತರ ಕಣ್ಣಿನ ಸಮಸ್ಯೆಯಿಂದ ಬಳಲಿದ್ದಾರೆ.

ಅಂತರಿಕ್ಷದಲ್ಲಿ ಕ್ಷೌರ, ಸ್ನಾನ: ನೀವು ಕ್ಷೌರ ಮಾಡಿಕೊಳ್ಳಬಹುದು. ಆದರೆ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಒಂದು ಸಣ್ಣ ಕೂದಲೂ ಸಹ ಹಾರಾಡಿ ನಿಮಗೆ ಅಥವಾ ಯಂತ್ರಗಳಿಗೆ ತೊಂದರೆಯನ್ನು ನೀಡಬಹುದು. ಕ್ಷೌರದ ನಂತರ ಉಳಿಯುವ ಎಲ್ಲ ತ್ಯಾಜ್ಯಗಳನ್ನು ವಿಶೇಷ ಪೊಟ್ಟಣಗಳಲ್ಲಿ ತುಂಬಿ ಇಡಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ಹೊರಕ್ಕೆಸೆದಿರೋ ಅದು ನಿಮ್ಮನ್ನು ಹಿಂಬಾಲಿಸುವುದು ಗ್ಯಾರಂಟಿ! ಇನ್ನು ಸ್ನಾನ. ಇಲ್ಲಿ ನಿಮಗೆ ಸ್ಪಂಜಿನ ಸ್ನಾನವೇ ಗತಿ ! ನೀರನ್ನು ಭೂಮಿಯ ಮೇಲೆ ಉಪಯೋಗಿಸಿದಂತೆ ಬಳಸಿದರೆ ನೀರಿನ ಹನಿಗಳು ಕೋಣೆಯ ತುಂಬೆಲ್ಲಾ ತುಂಬಿ ಮತ್ತಷ್ಟು ಕಷ್ಟಕ್ಕೆ ಸಿಲುಕಿಬಿಡುತ್ತೀರಿ. !

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ