ಅಂತರ್ಜಾಲದಲ್ಲಿ ಸಂಶೋಧನೆಗೆ ಬೇಕಾದ ಉಪಯುಕ್ತ ತಂತ್ರಾಂಶಗಳು
ಇಂದು ಅಂತರ್ಜಾಲ, ಮುದ್ರಿತ ಮಾಧ್ಯಮ ಮೊಬೈಲುಗಳು ಎಲ್ಲಾ ಕಡೆಯಿಂದಲೂ ಬೇಕಾದ, ಬೇಡವಾದ ಮಾಹಿತಿಗಳು ಸುದ್ದಿಗಳು ಬರುತ್ತಲೇ ಇರುತ್ತವೆ (ಈ ಲೇಖನ ಕೂಡ ಅವುಗಳಲ್ಲಿ ಒಂದು ;-) ).
ಈ ಮಾಹಿತಿ ಸ್ಫೋಟವನ್ನು ಸಮರ್ಪಕವಾಗಿ ಎದುರಿಸಿ ಬೇಕಾದದ್ದನ್ನು ಶ್ರಮವಿಲ್ಲದೇ ಹೆಕ್ಕಿ ಮಿಕ್ಕವನ್ನು ಬದಿಗಿಡುವುದು ಒಂದು ಸವಾಲೇ ಸರಿ. ಇದಕ್ಕಾಗಿ ಹಲವು ಉಪಯುಕ್ತ ತಂತ್ರಾಂಶಗಳಿವೆ. ಅವುಗಳಲ್ಲಿ ಎರಡು ತಂತ್ರಾಂಶಗಳನ್ನು ನಾನು ನನ್ನ ಕೆಲಸ ಕಾರ್ಯಗಳಲ್ಲಿ ಉಪಯೋಗಿಸುತ್ತಿದ್ದೇನೆ. ನನಗೆ ಇವು ಹಿಡಿಸಿವೆ, ಉಪಯುಕ್ತವಾಗಿವೆ. ಈ ತಂತ್ರಾಂಶಗಳು ಸಂಪದದ ಇತರ ಓದುಗರಿಗೂ ಉಪಯೋಗಕ್ಕೆ ಬರಬಲ್ಲವು ಎಂಬುವ ಆಶಯದಿಂದ ಇಲ್ಲಿ ಅವುಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ.
೧. ನ್ಯೂಸ್ರ್ಯಾಕ್: ಇಂದು ಭಾರತದ ಹಲವು ಪತ್ರಿಕೆಗಳು ಅಂತರ್ಜಾಲ ಪ್ರತಿಗಳನ್ನು ಹೊರತರುತ್ತಿವೆ. ಇದರಿಂದ ನಮಗಿಷ್ಟವಾದ ಪತ್ರಿಕೆಗಳನ್ನು ಅಂತರ್ಜಾಲದಲ್ಲಿ ಮುಕ್ತವಾಗಿ ಓದಬಹುದು. ಆದರೆ ಐವತ್ತಕ್ಕೂ ಹೆಚ್ಚಿರುವ ಪತ್ರಿಕೆಗಳನ್ನು ದಿನಾ ಓದುವುದು ಕಷ್ಟವಾಗಬಹುದು. ನಮಗೆ ಬೇಕಾಗಿರುವ ಒಂದೆರೆಡು ವಿಷಯಗಳನ್ನು ಇಡೀ ದಿನಪತ್ರಿಕೆಯಲ್ಲಿ ಹುಡುಕುವುದೂ ದುಸ್ತರವೇ. ಇದಕ್ಕಾಗಿ ಕರ್ನಾಟದವರೇ ಆದ ಸುಬ್ರಮಣ್ಯ ಶಾಸ್ತ್ರಿಗಳು Newsrack ಎನ್ನುವ ಮುಕ್ತ web-solution ಹೊರತಂದಿದ್ದಾರೆ. ಈ ವೆಬ್-ಸೈಟಿನಲ್ಲಿ ನಮಗೆ ಬೇಕಾಗಿರುವ ಪತ್ರಿಕೆಗಳ ಫೀಡ್ (RSS) ಗಳನ್ನು ಆಯ್ಕೆ ಮಾಡಿ, ನಮಗೆ ಬೇಕಾಗಿರುವ ವಿಷಯಗಳ key-word ಪದಗುಂಪುಗಳನ್ನು ರಚಿಸಿ ನಮ್ಮ ಪ್ರೊಫೈಲ್ ರಚಿಸಿಕೊಳ್ಳಬಹುದು. ನ್ಯೂಸ್ರಾಕ್ ನಂತರ ನಮ್ಮ ಪ್ರೊಫೈಲಿಗೆ ಹೊಂದುವ ಲೇಖನಗಳನ್ನು ನಾವು ಆರಿಸಿರುವ ಫೀಡ್ಗಳಲ್ಲಿ ಹುಡುಕಿ ಅದನ್ನು archive ಮಾಡುತ್ತದೆ. ದಿನದಲ್ಲಿ ಹಲವು ಬಾರಿ ಪತ್ರಿಕೆಗಳ ಫೀಡ್ಗಳು update ಆಗುವುದರಿಂದ ಸುಮಾರು ೨೦೦೨ರಿಂದ ಹಿಡಿದು ಇಂದಿನ ವರೆಗೆ ನಿಮಗೆ ಬೇಕಾದ ವಿಷಯದ ಬಗ್ಗೆ ಪ್ರಕಟಿತವಾದ ಲೇಖನಗಳು ತಾನಾಗಿಯೇ archive ಆಗಿರುತ್ತದೆ, ಅದರ RSS ಫೀಡ್ ಕೂಡ ನಿಮಗೆ ಲಭ್ಯವಾಗುತ್ತದೆ. ಉದಾಹರಣೆಗೆ ನಾನು ಕರ್ನಾಟಕದ ಕೃಷಿ ಸಂಬಂಧಿತ ವಿಷಯಗಳನ್ನು ಸಂಗ್ರಹಿಸಲು ಬಳಸುವ ಫೀಡ್ ಇಲ್ಲಿದೆ.
೨. ಜ಼ೊಟೇರೊ: ಈಗ ನ್ಯೂಸ್ರ್ಯಾಕ್ ಮೂಲಕ, ಪತ್ರಿಕೆಗಳನ್ನೆಲ್ಲಾ ಶೋಧಿಸಿ ನಿಮಗೆ ಬೇಕಾದ ವರದಿಗಳನ್ನೆಲ್ಲ ಹೆಕ್ಕಿ ತೆಗೆದಿದ್ದಾಯಿತು. ಅವುಗಳನ್ನು ಸಮರ್ಪಕವಾಗಿ ಬಳಸಿ, ಮುಂದೆ ನಿಮ್ಮ ಸ್ವಂತ ಸಂಶೋಧನೆಯಲ್ಲೋ, ನಿಮ್ಮದೇ ಲೇಖನದಲ್ಲೋ ಬಳಸಬೇಕೆಂದಾಗ ಈ ವರದಿಗಳನ್ನೆಲ್ಲ ಸಮರ್ಪಕವಾಗಿ tag ಮಾಡಿ ತಕ್ಷಣ ಸಿಗುವಂತೆ (offline ಕೂಡ) ಜೋಡಿಸಿಟ್ಟುಕೊಳ್ಳುವುದರಲ್ಲಿ ಜ಼ೊಟೇರೊ ಸಹಾಯಕಾರಿಯಾಗುತ್ತದೆ. ಇದು firefox browserಗೆ plug-in ಆಗಿ ಲಭ್ಯವಿದೆ.
ಇದು ನಿಮಗೆ ಉಪಯುಕ್ತವಾದ ಸಂಶೋದನಾ ಲೇಖನಗಳು, ಹಾಡುಗಳು, ಬ್ಲಾಗ್, ವಾರ್ತೆ, ವರದಿ ಇತ್ಯಾದಿಗಳನ್ನು ಸಮರ್ಪಕವಾಗಿ ಶೇಖರಿಸುವುದಲ್ಲದೇ ಉಲ್ಲೇಖಗಳನ್ನು auto-format ಮಾಡಿ ನಿಮ್ಮ ಲೇಖನಗಳಿಗೆ ಲಗತ್ತಿಸುವುದಕ್ಕೆ ಸಹಾಯಕಾರಿಯಾಗುತದೆ. ಯಾವುದೇ ಲೇಖನವನ್ನು ಬರೆಯುವಾಗ Referenceಗಳನ್ನು ಟೈಪಿಸುವುದು ಎಷ್ಟು ಕಷ್ಟದ ಕೆಲಸ ಎಂಬುವುದು ನಿಮಗೆ ಗೊತ್ತಿರಬಹುದು. ಲೇಖನ ಬರೆಯುವುದಕ್ಕಿಂತ referenceಗಳನ್ನು ಬೇಕಾದ formatನಲ್ಲಿ ಟೈಪಿಸುವುದೇ ದೊಡ್ಡ ತಲೆನೋವು :-( )
ಉದಾಹರಣೆಗೆ ಇತ್ತೀಚೆಗೆ ರೈತರ ಆತ್ಮಹತ್ಯೆಗಳ ಬಗ್ಗೆ ದಿ ಹಿಂದು ದಿನಪತ್ರಿಕೆಯಲ್ಲಿ ಸಾಯಿನಾಥ್ ಬರೆದ ಲೇಖನವನ್ನು (Sainath 2007) ನಾನು ಜ಼ೊಟೇರೊದಲ್ಲಿ ಸಂಗ್ರಹಿಸಿದ್ದೆ. ಅದರ reference ಅನ್ನು ಜ಼ೊಟೇರೊ ತಾನಾಗಿಯೇ ರಚಿಸಿ ಕೊಡುತ್ತದೆ:
೧. Sainath, P. 2007. One farmer’s suicide every 30 minutes. The Hindu, November 15. http://www.thehindu.com/2007/11/15/stories/2007111554771300.htm (accessed November 28, 2007).
ಈ ತಂತ್ರಾಂಶಗಳು ಮುಕ್ತವಾಗಿ ಲಭ್ಯವಿದ್ದು ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಸಹಾಯಕಾರಿಯಾಗಬಲ್ಲದು. ಖುಷಿ ಏನೆಂದರೆ ಇವೆರೆಡೂ ಯೂನಿಕೋಡ್ ಅಕ್ಷರಗಳನ್ನು ತೊಂದರೆಯಿಲ್ಲದೇ ನಿರ್ವಹಿಸುತ್ತವೆ.