ಅಂತರ್ಜಾಲದ ಮಹಿಮೆ !
ಹೆಚ್ಚಿನವರ ಹತ್ತಿರ ಮೊಬೈಲ್ ಬಂದಾಗ ನನಗೋ ಮುಜುಗರ. ಸ್ಥಿರವಾಣಿ ಅಭ್ಯಾಸವಿತ್ತು. ಈ ಚರವಾಣಿ ಕೈಯಿಂದ ಮುಟ್ಟಿ ಸಹ ಗೊತ್ತಿಲ್ಲ. ಕಛೇರಿಯಿಂದ ಆಜ್ಞೆಯಾಯಿತು. ಎಲ್ಲರಲ್ಲೂ (ಮುಖ್ಯ ಶಿಕ್ಷಕರಲ್ಲಿ) ಮೊಬೈಲ್ ಕಡ್ಡಾಯ. ಮಗರಾಯ ತಂದು ಕೊಟ್ಟೂ ಆಯಿತು. ಸತ್ಯ ಹೇಳ್ತೇನೆ ‘ಸಿಮ್’ ಅಂದರೆ ಏನೆಂದು ಗೊತ್ತಿಲ್ಲದ ದಡ್ಡಿ ಆಗ ನಾನು ಮೊಬೈಲ್ ವಿಷಯದಲ್ಲಿ. ಅಂತೂ ಬಂದಾಯಿತು, ಯಾರು ಯಾರ ಕೈಕಾಲು ಹಿಡಿದು ಹೇಗೋ ಕರೆ ಮಾಡಲು ಕಲಿತೆ, ಅದೂ ಕಾಗದದಲ್ಲಿ ಬರೆದಿಟ್ಟು. ಇಷ್ಟೆಲ್ಲ ಆದಾಗ ಪುನ:ಕಛೇರಿಯಿಂದ ವಾಟ್ಸಪ್ ಓಪನ್ ಮಾಡಬೇಕು ಕಡ್ಡಾಯ ಎಂದರು. ನನಗೋ ಆಕಾಶವೇ ತಲೆ ಮೇಲೆ ಬಿದ್ದ ಹಾಗಾಯಿತು. ಗುಡ್ಡಗಾಡಿನ ಯಾವುದೇ ಸೌಕರ್ಯಗಳಿಲ್ಲದ ಹಳ್ಳಿ ಮೂಲೆಯ ಶಾಲೆ. ರೇಂಜ್ ಮೊದಲೇ ಇಲ್ಲ. ಹೇಳಿದರೂ ಅರ್ಥಮಾಡಿಕೊಳ್ಳಲಾರದ ಕಛೇರಿ ಸಿಬ್ಬಂದಿಗಳು.ಈ ಮೊಬೈಲನ್ನು ಎತ್ತಿ ಹಿಡಕೊಂಡು ಅಂಗಳದಲ್ಲಿ ಬಲಿ (ಓಡಾಡ ಬೇಕು) ಬರಬೇಕು, ಎಲ್ಲಿ ನೆಟ್ವರ್ಕ್ ಸಿಗ್ತದೆ ಎಂಬುದಾಗಿ. ಕನ್ನಡ ಟೈಪ್ ಗೊತ್ತಿಲ್ಲ. ಆಂಗ್ಲ ಭಾಷೆ ಹೊಡಕಾಡಿ ಹೇಗೋ ಕಲಿತಾಯಿತು. ಅದರೆಡೆಯಲ್ಲಿ ಉ.ಭಾರತದ ಒಂದು ಸೇವಾಸಂಸ್ಥೆಗೆ ನಿತ್ಯವೂ ಶಾಲಾ ಮಕ್ಕಳ ದಾಖಲಾತಿ, ಅವರ ಕರೆ ಬಂದ ಕೂಡಲೇ ಕೊಡಬೇಕು. ಆಂಗ್ಲ ಭಾಷೆಗೆ ೧ನ್ನು ಒತ್ತಿ, ಕನ್ನಡಕ್ಕೆ ೨ನ್ನು ಒತ್ತಿ ಉಪದ್ರ ಬೇರೆ. ಕಷ್ಟ ಪಟ್ಟು ಕಲಿತೆ.(ಅನಿವಾರ್ಯ-ಆಗ ವಯಸ್ಸು ಸಹ ೫೮ ದಾಟಿತ್ತು , ಮಂಡೆಗೆ (ತಲೆಗೆ) ಹೋಗಬೇಕಲ್ಲ)
ಯಾರೋ ಹೇಳಿದರು, ಫೇಸ್ಬುಕ್ ಓಪನ್ ಮಾಡಿ ಎಂದು, ಅದೂ ಆಯಿತು. ಅಂತೂ ಅಂತರ್ಜಾಲ ತಾಣಗಳು ಮಾಹಿತಿಗಳ ಅವಸ್ಥೆ ನೋಡುವಾಗ ‘ತಂದೆ ತಾಯಿ’ ಬಿಟ್ಟು ಮತ್ತೆಲ್ಲ ಇದೆ ಅನ್ನಿಸಿತು. ದಿನ ಹೋದಹಾಗೆ ಅಯ್ಯಯ್ಯೋ ಅದರಲ್ಲಿ ಕಂಡು ಬರುವ ಕೆಲವೊಂದನ್ನು ನೋಡಿ ,ಅದನ್ನು ಬೇಡವೆಂದು ಮಾಡುವುದು,ಅಳಿಸಿಹಾಕುವುದು ಹೇಗೆ ತಿಳಿಯದೆ ಕಕ್ಕಾಬಿಕ್ಕಿಯಾದೆ. ಸೊಸೆ ಹತ್ತಿರ ಕೇಳಿ ಅದೂ ಕಲಿತೆ.
ನಿವೃತ್ತಳಾದ ಅನಂತರ ಕನ್ನಡ ಟೈಪಿಂಗ್ ಬಿಳಿಹಾಳೆಯಲ್ಲಿ ಬರೆದಿಟ್ಟು ಹೇಗೋ ಹೊಡಚಾಡಿ ಕಲಿತವಳು, ಇಂದು ಈ ಮಟ್ಟದಲ್ಲಿರುವೆ. ಹಾಗೆಂದು ಮೊಬೈಲಿನೊಳಗಣ ನೂರಕ್ಕೆ ನೂರೂ ಜಾದುಗಳ ಕಲಿತೆನೆಂದು ಎದೆತಟ್ಟಿ ಹೇಳಲಾರೆ.
‘ಅಂತರ್ಜಾಲ’ದಲ್ಲಿ ೨೪ ಗಂಟೆ ಮುಳುಗದೆ ಎಷ್ಟು ಬೇಕೋ ಅಷ್ಟೇ ಬಳಸಿದರೆ ಆರೋಗ್ಯ ಹಾಗೂ ಕ್ಷೇಮ. ನಮ್ಮ ಊರಿನ ಆಸುಪಾಸಲ್ಲಿ ನನಗೆ ಗೊತ್ತಿದ್ದ ಹಾಗೆ ಶಾಲಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ೧೦--೧೫ ಜನ ಈ ಮೊಬೈಲ್ ಕಾರಣವಾಗಿ ಉಸಿರನ್ನು ಕಳಕೊಂಡಿದ್ದಾರೆ. ದಯವಿಟ್ಟು ಹೀಗೆ ಮಾಡ್ಬೇಡಿ, ‘ಮೊಬೈಲೇ ನಮ್ಮ ಬದುಕಲ್ಲ, ಅದರಾಚೆಗೆ ಕತ್ತು ಎತ್ತಿ, ಉದ್ದ ಮಾಡಿ ನೋಡಿ ಎಂದು ಕಳಕಳಿಯ ವಿನಂತಿ’ ಮನೆಯೊಳಗಿನ ಬಾಂಧವ್ಯ, ಪತಿ-ಪತ್ನಿ ಸಂಬಂಧ ಕೆಡದಿರಲಿ. ಮೊಬೈಲ್, ಲ್ಯಾಪ್ ಟಾಪ್, ಅಂತರ್ಜಾಲ ಪ್ರಪಂಚದಲ್ಲಿ ಮುಳುಗಿ ನಮ್ಮವರನ್ನು ಕಡೆಗಣಿಸದಿರೋಣ. ‘ಮೊಬೈಲ್ ಹಾಳಾದರೆ ತರಬಹುದು. ಸಂಬಂಧಗಳು ಹಾಳಾದರೆ, ಜೀವಮಾನದಿ ಸಿಗದು, ಇರುವುದೊಂದೇ ಜನುಮ ಮರೆಯದಿರೋಣ’
ಅಂತರ್ಜಾಲದ ವ್ಯಾಮೋಹದಲ್ಲಿ, ದಿನವಿಡೀ ಅದರಲ್ಲೇ ಮುಳುಗಿ, ಅಡುಗೆ ಮನೆ ಪಾಕಗಳು ಸೀದು ಪಾತ್ರೆಗಳು ಹಾಳಾದ ಉದಾಹರಣೆಗಳು ಬಹಳಷ್ಟು ಇದೆ. ನಮ್ಮ ಸುಖ-ಸಂತೋಷಗಳಿಗೆ ಅಂತರ್ಜಾಲ ಅಡ್ಡಗೋಡೆಯಾಗದಿರಲಿ. ಅತ್ಯುತ್ತಮ ಮಾಹಿತಿಗಳನ್ನು ನಮ್ಮದಾಗಿಸಿಕೊಳ್ಳೋಣ. ಬೇಕಾದ್ದನ್ನು ಈ ತಾಂತ್ರಿಕ ಯುಗದಲ್ಲಿ, ಪ್ರಸಕ್ತ ಸನ್ನಿವೇಶದಲ್ಲಿ ಉಪಯೋಗಿಸೋಣ. ಎಲ್ಲರಿಗೂ ಬೇಕಾದಂತಹ ಮಾಹಿತಿಗಳು (೦-೧೦೦ ರ ವಯೋಮಾನದವರೆಗೂ) ಇತಿಮಿತಿಯರಿತು ಪಡೆದುಕೊಳ್ಳೋಣ.
ಅಂತರ್ಜಾಲದಿಂದ ಸಾಕಷ್ಟು ಸಾಹಿತ್ಯ ಚಟುವಟಿಕೆಗಳು ವಿಸ್ತರಿಸಲ್ಟಟ್ಟಿತು. ಅದರಲ್ಲೂ ‘ಕೃತಿಚೌರ್ಯದ’ ವಾಸನೆ ಬಡಿಯುತ್ತಿದೆ. ಇದು ದುರಂತವೇ ಸರಿ. ನಮಗೆ ಗೊತ್ತಿಲ್ಲದ ಹಲವಾರು ಪ್ರಕಾರಗಳ ಮಾಹಿತಿಯನ್ನು ಸಹ ಕಲಿತೆವು. ಉತ್ತಮ ಸಾಹಿತ್ಯಗಳು ಹೊರಗೆ ಬರಲಿ, ಬರೆಯಲ್ಪಡಲಿ ಮನೆ ಮನಗಳನ್ನು ಬೆಳಗಲಿ. ‘ಅಂತರ್ಜಾಲ ಜೇಡರ ಬಲೆಯಾಗದೆ ಜೇನಿನ ಹೊಳೆಯಾಗಲಿ, ಸಿಹಿಯಾಗಲಿ’ ಎಂಬ ಆಶಯ.
-ರತ್ನಾ ಕೆ ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ