ಅಂತರ್ಜಾಲದ ಮೂಲಕ ಆಫೀಸ್ ತಂತ್ರಾಂಶ

ಅಂತರ್ಜಾಲದ ಮೂಲಕ ಆಫೀಸ್ ತಂತ್ರಾಂಶ

ಬರಹ

(ಇ-ಲೋಕ-50)(28/11/2007) 

Udayavani

 ಹಾಟ್‍ಮೇಲ್ ಎಂಬ ಅಂತರ್ಜಾಲ ಮಿಂಚಂಚೆ ಸೇವೆಯನ್ನು ಮೊದಲಾಗಿ ಆರಂಭಿಸಿದವ ಭಾರತೀಯ ಮೂಲದ ಸಬೀರ್ ಭಾಟಿಯಾ. ನಂತರ ಇದನ್ನು ಮೈಕ್ರೋಸಾಫ್ಟ್ ಕಂಪೆನಿಗೆ ನಾಲ್ಕುನೂರು ಮಿಲಿಯನ್ ಡಾಲರಿಗೆ ಮಾರಿಕೊಂಡು ಲಾಭ ಮಾಡಿಕೊಂಡು ಈಗಾಗಲೇ ಒಂಭತ್ತು ವರ್ಷಗಳೇ ಉರುಳಿದುವು.ಸಬೀರ್ ಭಾಟಿಯಾನ ಹೊಸ ಸಾಹಸ ಮೈಕೋಸಾಫ್ಟ್ ಕಂಪೆನಿಗೆ ಸಡ್ಡು ಹೊಡೆಯುವಂತಹುದು.ಮೈಕ್ರೋಸಾಫ್ಟ್ ಕಂಪೆನಿಯ ಆಫೀಸ್ ತಂತ್ರಾಂಶ ಜಗತ್ತಿನಲೇ ಅತ್ಯಧಿಕ ಮಾರಾಟವಾಗುವ ತಂತ್ರಾಂಶಗಳಲ್ಲೊಂದು.ಇಂತಹ ಸೇವೆಯನ್ನು ಅಂತರ್ಜಾಲ ಮೂಲಕ ಒದಗಿಸುವ ವಿನೂತನ ಸೇವೆಯನ್ನು ಸಬೀರ್ ಭಾಟಿಯಾನ ಇನ್ಸ್ಟಾಕೊಲ್ಲ್(www.instacoll.com) ನೀಡುತ್ತದೆ.ಜತೆಗೆ ಒಂದು ಪುಟವನ್ನು ಹಲವರು ಸಂಕಲಿಸುವ ವ್ಯವಸ್ಥೆಯನ್ನು ಇದು ನೀಡುತ್ತದೆ.ಅಂತರ್ಜಾಲ ಸಂಪರ್ಕ ಇಲ್ಲದಾಗ ಆಫೀಸ್ ತಂತ್ರಾಂಶ ಬಳಸಿ ರಚಿಸಿದ ದಾಖಲೆಯನ್ನು,ಅಂತರ್ಜಾಲ ಸಂಪರ್ಕ ಬಂದಾಗ ಇತರರ ಜತೆ ಹಂಚಿಕೊಳ್ಳುವ ಅವಕಾಶವನ್ನು ಇನ್ಸ್ಟಾಕೊಲ್ಲ್ ನೀಡುತ್ತದೆ. ಈ ದಶಕದ ಅಂತ್ಯದ ವೇಳೆಗೆ ತಂತ್ರಾಂಶವನ್ನು ಖರೀದಿಸುವ ಪರಿಪಾಠಕ್ಕೆ ಅಂತ್ಯ ಬೀಳಲಿದೆ ಎನ್ನುವುದು ಸಬೀರ್ ಭಾಟಿಯಾ ಭವಿಷ್ಯವಾಣಿ.ಅಂತರ್ಜಾಲ ಮೂಲಕ ತಂತ್ರಾಂಶದ ಎರವಲು ಸೇವೆ ಪಡೆಯುವುದೇ ಜನಪ್ರಿಯವಾಗಬಹುದು ಎನ್ನುವುದವರ ಊಹೆ.ಹೆಚ್ಚೆಂದರೆ ಪಡೆದ ಸೇವೆಗೆ ನಿಗದಿತ ದರ ತೆರಬೇಕಾದೀತು.ಗೂಗಲ್ ಡೋಕ್,ಥಿಂಕ್‍ಫ್ರೀ,ಜೋಹೋ,ಅಡೊಬ್ ಬಜ್‍ವರ್ಡ್ ಮುಂತಾದ ಸೇವೆಗಳೂ ಈ ನಮೂನೆ ಸೇವೆಯನ್ನು ಇದೀಗಲೇ ನೀಡುತ್ತಿವೆ.

ಆಮೆಗತಿಗಿಳಿಯಲಿರುವ ಅಂತರ್ಜಾಲ

ಅಂತರ್ಜಾಲದ ಮೂಲಕ ವಿಡಿಯೋ ತುಣುಕುಗಳ ವಿನಿಮಯದಂತಹ ಸೇವೆಗಳು ದಿನೇ ದಿನೇ ಜನಪ್ರಿಯವಾಗುತ್ತಿವೆ.ಯುಟ್ಯೂಬ್ ಅಂತಹ ಜಾಲತಾಣಗಳು ವಿಡಿಯೋ ತುಣುಕುಗಳ ದೊಡ್ಡ ಭಂಡಾರವನ್ನು ಹೊಂದಿ ದಿನೇ ದಿನೇ ಹೆಚ್ಚೆಚು ಜನರನ್ನು ಆಕರ್ಷಿಸುತ್ತಿವೆ.ಅದರ ಜತೆಗೆ ಚಲನಚಿತ್ರ,ಟಿವಿ ಮುಂತಾದ ಸೇವೆಗಳೂ ಅಂತರ್ಜಾಲ ಮೂಲಕ ಜನರನ್ನು ತಲುಪುತ್ತಿವೆ.ಸಂಗೀತ ಮುದ್ರಿಕೆಗಳೂ ಅಂತರ್ಜಾಲ ತಾಣಗಳ ಮೂಲಕವೇ ಜನರನ್ನು ತಲುಪುತ್ತಿವೆ.ಇಂತಹ ಪರಿಸ್ಥಿತಿಯಲ್ಲಿ ಅಂತರ್ಜಾಲದ ಬ್ಯಾಂಡ್‍ವಿಡ್ತ್‍ಗೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಇದೇ ಟ್ರೆಂಡ್ ಮುಂದುವರಿದರೆ,ಈ ದಶಕದ ಅಂತ್ಯದ ವೇಳೆಗೆ ಅಂತರ್ಜಾಲ ಈಗಿನ ಶರವೇಗದಿಂದ ಆಮೆಗತಿಗಿಳಿಯುವುದು ನಿಶ್ಚಿತವೆಂದು ಇಂಟರ್ನೆಟ್ ಇನೊವೇಶನ್ ಅಲಾಯೆನ್ಸ್ ಎಂಬ ಸಂಸ್ಥೆ ಭವಿಷ್ಯ ನುಡಿದಿದೆ.ಇದಕ್ಕೆ ಪರಿಹಾರವೆಂದರೆ ಭಾರೀ ಬಂಡವಾಳ ಹೂಡಿ,ತಾಮ್ರದ ಸಂಪರ್ಕ ತಂತಿಗಳು ಮತ್ತು ಕೇಬಲ್ ಜಾಲ ಬದಲಿಸಿ ಫೈಬರ್ ಅಪ್ಟಿಕ್ ಜಾಲಕ್ಕೆ ಬದಲಾಯಿಸುವುದು.ಹಾಗೆಯೇ ಈಗ ಜನಪ್ರಿಯವಾಗಿರುವ ನಿಸ್ತಂತು ಜಾಲಗಳ ಸಾಮರ್ಥ್ಯ ಹೆಚ್ಚಿಸುವ ಕ್ರಮಗಳನ್ನೂ ಕೈಗೊಳ್ಳಬೇಕು.ಉತ್ತರ ಅಮೆರಿಕಾವೊಂದರಲ್ಲೇ ಇದಕ್ಕೆ ಐವತ್ತೈದು ಬಿಲಿಯನ್ ಡಾಲರುಗಳ ಖರ್ಚು ಬರಬಹುದು ಎಂದು ಅಂದಾಜು.

ಅಮೇಜಾನ್ ಕಂಪೆನಿಯ ಇ-ಬುಕ್ ರೀಡರ್ ಪೂರ್ತಿ ಖಾಲಿ

 ಅಮೇಜಾನ್ ಕಂಪೆನಿಯು ಕಿಂಡಲ್ ಎಂಬ ಹೆಸರಿನ ಇ-ಬುಕ್ ರೀಡರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಇ-ಬುಕ್ ರೀಡರ್ ಎನ್ನುವುದು ಕೈಯಲ್ಲಿ ಹಿಡಿಯುವ ಸಾಧನ.ಇದು ಸಣ್ಣ ಪುಸ್ತಕದ ಆಕಾರದಲ್ಲಿದ್ದು ಇದರಲ್ಲಿ ಲೋಡ್ ಮಾಡಿದ ಪುಸ್ತಕವನ್ನು ಸಲೀಸಾಗಿ ಓದಬಹುದು.ಓದಲು ಕಣ್ಣಿಗೆ ಶ್ರಮವಾಗದಂತಹ ತೆರೆಯನ್ನಿದು ಹೊಂದಿದೆ ಎಂದು ಗ್ರಾಹಕರಲ್ಲಿ ಹಲವರು ಮೆಚ್ಚಿಗೆಯ ನುಡಿದಿದ್ದಾರೆ.ಇದಕ್ಕೆ ಐದರಲ್ಲಿ ಎರಡೂವರೆ ಅಂಕಗಳು ಲಭ್ಯವಾಗಿವೆ.ಇದರ ನಾಲ್ಕುನೂರು ಡಾಲರು ಬೆಲೆ ಹೆಚ್ಚೆಂದು ಹಲವರ ಟೀಕೆ.ಜತೆಗೆ ಇದಕ್ಕೆ ಪತ್ರಿಕೆಯನ್ನು ಲೋಡ್ ಮಾಡಲು ಮಾಸಿಕ ಹದಿನೈದು ಡಾಲರು ದರ ನೀಡಬೇಕಾಗುತ್ತದೆ.ಅಂತರ್ಜಾಲ ಮೂಲಕ ಉಚಿತವಾಗಿ ದೊರೆಯುವ ಪತ್ರಿಕೆಗಳಿಗೆ ಈ ತೆರ ದರ ವಿಧಿಸುವ ಅಮೇಜಾನ್ ಕಂಪೆನಿಯ ನಿರ್ಧಾರವೂ ಟೀಕೆಗೊಳಗಾಗಿದೆ.ಇಷ್ಟೆಲ್ಲಾ ಆದರೂ ಮಾರುಕಟ್ಟೆಗೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇ-ಬುಕ್ ರೀಡರ್ ಮಾರಾಟವಾಗಿ ದಾಖಲೆ ನಿರ್ಮಿಸಿತು.ಇದನ್ನು ಖರೀದಿಸಲಿಚ್ಛಿಸುವವರು ಮುಂದಿನ ಒಂದೆರಡುವಾರ ಕಾಯಬೇಕಾದೀತು.

ಧೂಳು ನಿಲ್ಲದ ಲ್ಯಾಪ್‍ಟಾಪ್ ತೆರೆ

ಲ್ಯಾಪ್‍ಟಾಪ್ ಕಂಪ್ಯೂಟರಿನ ತೆರೆಯ ಮೇಲೆ ಬೆರಳುಗುರುತುಗಳು ಬೀಳುವುದು ಬೇಗ.ಹಾಗೆಯೇ ಇದರ ಮೇಲೆ ಧೂಳು ಕುಳಿತು ಕೊಳ್ಳುವುದೂ ಜಾಸ್ತಿ.ಇದರ ಜತೆಗೆ ತೆರೆಯಿಂದ ಪ್ರಕಾಶ ಪ್ರತಿಫಲಿಸಿ ಓದುವುದು ಕಷ್ಟವಾಗುವುದೂ ಸಾಮಾನ್ಯ.ಇವೆಲ್ಲಾ ಸಮಸ್ಯೆಗಳನ್ನೂ ನಿವಾರಿಸುವ ಹೊಸ ತಂತ್ರಜ್ಞಾನವನ್ನು ಎಲ್ಜಿ ಫಿಲಿಪ್ಸ್ ಕಂಪೆನಿ ಸಂಶೋಧಿಸಿದೆ.ಅಡುಗೆಯ ತವಾಗಳಿಗೆ ನಾನ್‍ಸ್ಟಿಕ್ ಲೇಪನ ಮಾಡುವುದಕ್ಕೆ ಸಮನಾದ ಲೇಪನವನ್ನು ಲ್ಯಾಪ್‍ಟಾಪಿನ ಎಲ್‍ಸಿಡಿ ತೆರೆಯ ಮೇಲೆ ಲೇಪಿಸುವ ತಂತ್ರವನು ಕಂಪೆನಿ ಬಳಸಲಿದೆಯಂತೆ.ಈ ಲೇಪನ ಧೂಳಿಗೆ ಪ್ರತಿರೋಧ ಒಡ್ಡುತ್ತದೆ.ಎಣ್ಣೆ,ಶಾಯಿಯ ಕಲೆ ಇದ್ದರೂ ಇದನ್ನು ಒರೆಸಿದರೆ ಸುಲಭವಾಗಿ ಮಾಯವಾಗುತ್ತದೆ.ಕಾಲೇಜು ವಿದ್ಯಾರ್ಥಿಗಳು ಲ್ಯಾಪ್‍ಟಾಪಿನ ಜತೆ ಪೆನ್ ಬಳಸುವಾಗ ಅಕಸ್ಮಾತ್ ಕಲೆಗಳಾಗುವ ಸಂಭವ ಹೆಚ್ಚು.ಆದರೆ ಅವನ್ನು ಸ್ವಚ್ಛ ಮಾಡುವುದೂ ಸುಲಭ.ವಿದ್ಯಾರ್ಥಿಗಳಿಗೆ ಇಂತಹ ಲ್ಯಾಪ್‍ಟಾಪ್‍ಗಳು ಇಷ್ಟವಾಗಬಹುದು ಎಂಬುದು ಕಂಪೆನಿಯ ಲೆಕ್ಕಾಚಾರ. *ಅಶೋಕ್‍ಕುಮಾರ್ ಎ