ಅಂತರ್ಜಾಲದ ಮೂಲಕ ಪದವಿ ಪರೀಕ್ಷೆಗಳು!
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ವಿನೂತನ ಹೆಜ್ಜೆಗಳನ್ನು ಇಟ್ಟು ಪ್ರಸಿದ್ಧವಾಗಿದೆ.ಈಗ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನೂ ಆನ್ಲೈನ್ನಲ್ಲಿ ನಡೆಸಿ ವಿಶ್ವವಿದ್ಯಾಲಯ ಹೊಸಹಾದಿ ಹಿಡಿದಿದೆ.ಎಂ ಟೆಕ್(ಅರೆಕಾಲಿಕ) ಪರೀಕ್ಷೆಗಳನ್ನು ಈ ರೀತಿ ನಡೆಸಲಾಗುತ್ತಿವೆ. ಮಧ್ಯಾವಧಿ ಪರೀಕ್ಷೆಗಳೂ ಆನ್ಲೈನ್ನಲ್ಲಿ ನಡೆಯುತ್ತಿದೆ. ಆದರೆ ಈ ಪರೀಕ್ಷೆಗಳು ಪ್ರಬಂಧ ರೀತಿಯ ಉತ್ತರಗಳನ್ನು ಬಯಸುವ ಪ್ರಶ್ನೆಗಳನ್ನು ಹೊಂದಿರದೆ,ಬಹು ಆಯ್ಕೆ ಉತ್ತರಗಳನ್ನು ಹೊಂದಿದ ಪ್ರಶ್ನೆಗಳಾಗಿವೆ.ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಅಂತರ್ಜಾಲ ಸಂಪರ್ಕ ಹೊಂದಿದ ಕಂಪ್ಯೂಟರ್ ಕೇಂದ್ರದಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ.ಪ್ರಶ್ನೆಪತ್ರಿಕೆಗಳನ್ನು ಪಡೆಯಲು ವಿವಿಯ ಅಂತರ್ಜಾಲ ತಾಣಕ್ಕೆ ಲಾಗಿನ್ ಆಗಬೇಕಾಗುತ್ತದೆ.ಗುಪ್ತಸಂಕೇತಗಳನ್ನು ನೀಡಿದರೆ,ಪ್ರಶ್ನೆಪತ್ರಿಕೆ ಕಾಣಿಸಿಕೊಳ್ಳುತ್ತದೆ.ಪ್ರಶ್ನೆಗಳಿಗೆ ನೀಡಿದ ಉತ್ತರಗಳಲಿ ಅತ್ಯಂತ ಸೂಕ್ತವಾದದ್ದನ್ನು ಆಯ್ದು ಕ್ಲಿಕ್ಕಿಸಿದರೆ ಸರಿ.ನಿಗದಿತ ಅವಧಿಯ ನಂತರ,ಉತ್ತರಗಳನ್ನು ವಿವಿಯ ಸರ್ವರಿಗೆ ಒಪ್ಪಿಸಿದರೆ ವಿದ್ಯಾರ್ಥಿಯ ಕೆಲಸ ಮುಗಿಯಿತು.ಪರೀಕ್ಷೆಯ ಅವಧಿಯಲ್ಲಿ ಪರೀಕ್ಷಾರ್ಥಿಯ ಮೇಲೆ ಕಣ್ಣಿಡಲು ಉಪನ್ಯಾಸಕರು ಇರುತ್ತಾರೆ.ಅಂತರ್ಜಾಲದಲ್ಲಿ ಯಾವುದೇ ವಿಷಯದ ಬಗ್ಗೆ ಮಾಹಿತಿಯು ಲಭ್ಯವಾಗುತ್ತದೆ.ಅದನ್ನು ವಿದ್ಯಾರ್ಥಿಗಳು ಬಳಸದಂತೆ ಉಪನ್ಯಾಸಕರು ಕಣ್ಣಿಡಬೇಕಾಗುತ್ತದೆ.ಇತರ ಅಂತರ್ಜಾಲ ತಾಣಗಳಿಗೆ ಸಂಪರ್ಕ ಸಿಗದಂತೆ ನಿರ್ಬಂಧಿಸುವ ವ್ಯವಸ್ಥೆಯ ಉಪಯೋಗ ಪಡೆಯಬಹುದು.ಅಂತರ್ಜಾಲ ಸಂಪರ್ಕ ಕಡಿತವಾಗಿ ತೊಂದರೆಯಾಗಬಾರದೆಂದು,ಪ್ರಶ್ನೆಪತ್ರಿಕೆಗಳ ಮುದ್ರಿತ ಪ್ರತಿಯನ್ನೂ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.ಅವರು ಅಂತರ್ಜಾಲದಲ್ಲಿ ಉತ್ತರಗಳನ್ನು ಕ್ಲಿಕ್ಕಿಸುವ ಜತೆ,ಮುದ್ರಿತ ಪ್ರತಿಯಲ್ಲೂ ಉತ್ತರಗಳನ್ನು ಗುರುತು ಮಾಡುತ್ತಾರೆ.ಇದನ್ನು ಪರೀಕ್ಷೆಯ ನಂತರ ವಿವಿಗೆ ರವಾನಿಸಲಾಗುತ್ತದೆ.ಅಂತರ್ಜಾಲದ ಮೂಲಕ ಒಪ್ಪಿಸಿದ ಅಭ್ಯರ್ಥಿಯ ಉತ್ತರಗಳು ಕಾರಣಾಂತರದಿಂದ ವಿವಿಗೆ ಲಭ್ಯವಾಗದಿದ್ದರೆ,ಉತ್ತರಪತ್ರಿಕೆಯ ಉತ್ತರಗಳು ಇರುತ್ತವಲ್ಲವೇ?ತಂತ್ರಾಂಶ ಬಳಸಿ ಮೌಲ್ಯಮಾಪನ ಮಾಡುವುದು ಸುಲಭ.ನಿಜವಾಗಿಯಾದರೆ,ಅಭ್ಯರ್ಥಿ ಪಡೆದ ಅಂಕಗಳನ್ನು ಪರೀಕ್ಷೆ ನಡೆದ ತಕ್ಷಣ ಲಭ್ಯವಾಗಿಸಬಹುದು.ಆದರೆ ವಿಶ್ವವಿದ್ಯಾಲಯ ಸದ್ಯ ಹೀಗೆ ಮಾಡುತ್ತಿಲ್ಲ.ನಂತರದ ದಿನಗಳಲ್ಲಿ ಫಲಿತಾಂಶವನ್ನು ಪ್ರಕಟಿಸುತ್ತದೆ.
ಟ್ರ್ಆನ್ಸಿಸ್ಟರ್ ಜಾಗಕ್ಕೆ ಮೆಮ್ರಿಸ್ಟರ್?
ಎಪ್ಪತ್ತರ ದಶಕದಲ್ಲಿ ಸಂಶೋಧನೆಯಾದ ಇಲೆಕ್ಟ್ರಾನಿಕ್ಸ್ ವಸ್ತುವೊಂದು ಈಗ ಸುದ್ದಿ ಮಾಡುತ್ತಿದೆ ಎನ್ನುವುದು ಆಶ್ಚರ್ಯ ಹುಟ್ಟಿಸಬಹುದಾದರೂ ಸತ್ಯ.ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಲಿಯೋನ್ ಚುವಾ ಅವರು ಇಲೆಕ್ಟ್ರೋಡುಗಳ ನಡುವೆ ಟೈಟಾನಿಯಮ್ ಆಕ್ಸೈಡೈನ ಪದರವಿದ್ದಾಗ,ಸಿಗುವ ಇಲೆಕ್ಟ್ರಾನಿಕ್ ಸಾಧನವನ್ನು ಮೆಮ್ರಿಸ್ಟರ್ ಎಂದು ಕರೆದರು.ಇದರ ವಿದ್ಯುತ್ ನಿರೋಧಕ ಶಕ್ತಿಯು,ಇದರಲ್ಲಿ ಸಂಗ್ರಹವಾಗಿದ್ದ ವಿದ್ಯುದಾವೇಶದ ಮೇಲೆ ಅವಲಂಬಿತವಾಗಿರುವುದನ್ನು ಅವರು ಕಂಡು ಕೊಂಡಿದ್ದರು.ಅಂದರೆ,ಇದಕ್ಕೆ ತನ್ನ ವಿದ್ಯುದಾವೇಶದ "ನೆನಪು" ನಂತರದಲ್ಲಿ ವಿದ್ಯುದಾವೇಶ ಇಲ್ಲದಾಗಲೂ ಇರುತ್ತದೆ! ಈ ಮೆಮ್ರಿಸ್ಟರ್ಗಳನ್ನು ಬಳಸಿ ಕಂಪ್ಯೂಟರಿನ ಸ್ಮರಣಕೋಶಗಳನ್ನು ತಯಾರಿಸಬಾರದೇಕೆ ಎನ್ನುವ ಕಡೆ ಈಗ ಯೋಚನೆ ಹರಿದಿದೆ.
ಇಂತಹ ಸ್ಮರಣಕೋಶಗಳನ್ನು ತಯಾರಿಸಿದರೆ,ಅವು ವಿದ್ಯುತ್ ಇಲ್ಲದ ವೇಳೆಯೂ ನೆನಪಿಟ್ಟುಕೊಳ್ಳಬಲ್ಲವು.ಸದ್ಯ ಲಭ್ಯವಿರುವ "ರಾಂ"(RAM) ಸ್ಮರಣಕೋಶಗಳು ಟ್ರಾನ್ಸಿಸ್ಟರ್ಗಳನ್ನು ಬಳಸಿ ತಯಾರಿಸಿದವು- ವಿದ್ಯುತ್ ಕಡಿತವಾದರೆ ಇವು ತಮ್ಮಲ್ಲಿ ಸಂಗ್ರಹವಾಗಿದ್ದ ಮಾಹಿತಿಯನ್ನು ಉಳಿಸಿಕೊಳ್ಳಲಾರವು.ಮೆಮ್ರಿಸ್ಟರುಗಳನ್ನು ಬಳಸಿದ ಮೊಬೈಲ್ ಹ್ಯಾಂಡ್ಸೆಟ್ಗಳು ಭಾರೀ ಕಡಿಮೆ ವಿದ್ಯುಚ್ಛಕ್ತಿ ಅಪೇಕ್ಷಿಸುತ್ತವೆ.ಇಂತಹ ಸ್ಮರಣಕೋಶಗಳನ್ನು ಕಂಪ್ಯೂಟರುಗಳಲ್ಲಿ ಬಳಸಿದರೆ,ಅವು ವಿದ್ಯುತ್ ನೀಡಿದೊಡನೆ,ತಮ್ಮ ಹಳೆಯ ಸ್ಥಿತಿಯಿಂದ ಚಾಲೂ ಆಗುತ್ತವೆ.ಆದರೆ ಮೆಮ್ರಿಸ್ಟರುಗಳನ್ನು ಬಳಸಿ ದೊಡ್ದ ಸ್ಮರಣಕೋಶಗಳನ್ನು ತಯಾರಿಸಲು ಸಾಧ್ಯವೇ ಎನ್ನುವುದನಿನ್ನೂ ಕಾದು ನೋಡಬೇಕಿದೆ.
ಸೆಲ್ಪೋನ್ ಹ್ಯಾಂಡ್ಸೆಟ್ಗಳನ್ನು ಬಳಸಿನೋಡಿ!
ಕಾರುಗಳನ್ನು ಖರೀದಿಸುವ ಮೊದಲು ಟೆಸ್ಟ್ ಡ್ರೈವ್ ಮಾಡಿನೋಡುವ ಅವಕಾಶವನ್ನು ಮಾರಾಟಗಾರರು ನೀಡುತ್ತಾರೆ ತಾನೇ?ಸೆಲ್ಫೋನ್ ಖರೀದಿಸುವ ಮೊದಲು ಅದರ ಬಗ್ಗೆ ಇತರರ ಅಭಿಪ್ರಾಯಗಳನ್ನು ಅಂತರ್ಜಾಲದಲ್ಲಿ ಪಡೆಯಬಹುದು.ಅವುಗಳ ಗುಣಾವಗುಣಗಳ ಪಟ್ಟಿ,ಇತರ ಸೆಟ್ಗಳ ಜತೆ ಹೋಲಿಕೆ ಇವೆಲ್ಲಾ ಅಂತರ್ಜಾಲದಲ್ಲಿ ಲಭ್ಯವಾಗುತ್ತದೆ.ಆದರೆ ಅವನ್ನು ಬಳಸಿ, ಎಸ್ ಎಂ ಎಸ್ ಕಳಿಸುವುದು,ಅಡ್ರೆಸ್ಬುಕ್ ಪರಿಶೀಲಿಸುವುದು ಸುಲಭವೇ ಎಂದು ಮುಂತಾಗಿ ಪರೀಕ್ಷಿಸುವಂತಿದ್ದರೆ?ಮನೆಯಿಂದಲೇ ನಿಮ್ಮ ಆಯ್ಕೆಯ ಹ್ಯಾಂಡ್ಸೆಟ್ನ್ನು ಪರೀಕ್ಷಿಸಿ ನೋಡಲು ಅಂತರ್ಜಾಲತಾಣವೊಂದು ಅವಕಾಶ ನೀಡುತ್ತದೆ.www.tryphone.com ಎನ್ನುವ ಈ ಅಂತರ್ಜಾಲತಾಣದಲ್ಲಿ ಹಲವು ಮಾಡೆಲ್ ಸೆಟ್ಗಳನ್ನು ಪರೀಕ್ಷಿಸಲು ಅನುಕೂಲ ಇದೆ.ಹ್ಯಾಂಡ್ಸೆಟ್ ಮೇಲೆ ಕ್ಲಿಕ್ಕಿಸಿ,ಬಳಸುವ ಅನುಕೂಲತೆ ಇಲ್ಲಿ ಲಭ್ಯ.ಬೇಕೆಂದರೆ ಅವುಗಳ ಪ್ರದರ್ಶನದ ವಿಡಿಯೋ ಕ್ಲಿಪ್ಪಿಂಗ್ ಇಲ್ಲಿದೆ. ಬಳಸಿದವರು ನೀಡಿರುವ ಅಭಿಪ್ರಾಯಗಳೂ ಸಿಗುತ್ತವೆ.ತಯಾರಕರು ಅಂತರ್ಜಾಲ ತಾಣಕ್ಕೆ ನಿಗದಿತ ದರ ಪಾವತಿಸಿ ಈ ಸೇವೆ ಪಡೆದುಕೊಳ್ಳಬಹುದು.
ಚಂದ್ರನ ಮೇಲೆ ನಿಮ್ಮ ಹೆಸರು!
ನಾಸಾದವರು ಈ ವರ್ಷದ ಮಧ್ಯಭಾಗದಲ್ಲಿ ಚಂದ್ರನ ಭೂಪರೀಕ್ಷೆ ಮಾಡುವ ಚಂದ್ರನ ಸುತ್ತ ಸುತ್ತುವ ವಾಹನವನ್ನು ಕಳುಹಿಸಲಿದ್ದಾರೆ.ಅದರಲ್ಲಿ ಚಂದ್ರನ ಮೇಲೆ ಇಡಲಿರುವ ಡಿಜಿಟಲ್ ದತ್ತಾಂಶ ಸಂಗ್ರಹದಲ್ಲಿ ಜನರ ಹೆಸರುಗಳನ್ನು ಸೇರಿಸಲು ಅನುಕೂಲ ಕಲ್ಪಿಸಲಾಗಿದೆ.ನಿಮ್ಮ ಹೆಸರನ್ನು ಸೇರಿಸಬೇಕೆಂದಿದ್ದರೆ ನೀವು http://lro.jhuapl.edu/NameToMoon/index.php ತಾಣಕ್ಕೆ ಭೇಟಿ ನೀಡಿ,ಅಲ್ಲಿ ನಿಮ್ಮ ಹೆಸರನ್ನು ಟೈಪಿಸಿ.ಈ ಬಗ್ಗೆ ಪ್ರಮಾಣಪತ್ರವನ್ನೂ ಪಡೆದುಕೊಳ್ಳಬಹುದು.
ashokworld
*ಅಶೋಕ್ಕುಮಾರ್ ಎ