ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವ
ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವ
ಅಂತರ್ಜಾಲದಲ್ಲಿ ಜನರ ಬಗ್ಗೆ ಇಲ್ಲ ಸಲ್ಲದ ಮಾಹಿತಿಗಳನ್ನು ಹರಿಯಬಿಟ್ಟು ತಮಾಷೆ ನೋಡುವುದು,ಜನರ ಧಾರ್ಮಿಕ.ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿನ ಬರವಣಿಗೆಗಳನ್ನು ಪ್ರಚಾರಪಡಿಸುವುದು ಇವೆಲ್ಲಕ್ಕೂ ನಿಯಂತ್ರಣ ಹಾಕಬೇಕು ಎಂದು ಕಪಿಲ್ ಸಿಬಾಲ್ ಅವರು ಪೀಠಿಕೆ ಹಾಕಿದಾಗ,ಅವರಿಗೆ ವಿಪಕ್ಷವಾದ ಬಿಜೆಪಿಯ ಸಹಿತ ಹಲವರ ಬೆಂಬಲ ಸಿಕ್ಕಿತು.ಅವರು ಹೇಳಿದ ವಿಷಯ ಸತ್ಯವೇ ಆದರೂ,ಅಂತರ್ಜಾಲಕ್ಕೆ ನಿಯಂತ್ರಣ ಹಾಕುವುದು ಸುಲಭದ ಮಾತಲ್ಲ.ಚೀನಾ,ಕೊರಿಯಾ,ರಶ್ಯಾ,ಸಿರಿಯಾ ಹೀಗೆ ಹಲವು ದೇಶಗಳು ಅಂತರ್ಜಾಲದ ಮೇಲೆ ನಿಯಂತ್ರಣ,ಅಂತರ್ಜಾಲ ತಾಣಗಳ ಮೇಲೆ ನಿಷೇಧ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಿವೆ.
ಗೂಗಲ್ ಪ್ರಕಾರ,ಭಾರತ ಸರಕಾರದ ಕಡೆಯಿಂದ ಅಂತರ್ಜಾಲ ತಾಣಗಳ 358ವಿಷಯಗಳನ್ನು ತೆಗೆದುಹಾಕಲು ಬೇಡಿಕೆ ಬಂದಿದೆ.ಇವುಗಳ ಪೈಕಿ ಶೇಕಡಾ ಎಪ್ಪತ್ತು ಭಾಗದ ಬೇಡಿಕೆ,ಸರಕಾರದ ಬಗೆಗಿನ ಟೀಕೆ ಇದೆಯೆನ್ನುವ ಕಾರಣಕ್ಕೆ ಬಂದಿದೆಯಂತೆ.ಎಂಟು ವಿಷಯಗಳನ್ನು ದ್ವೇಷದ ದಳ್ಳುರಿಯ ಭಾಷಣಗಳು ಎನ್ನುವ ಕಾರಣಕ್ಕೆ ತೆಗೆದುಹಾಕಲು ಬೇಡಿಕೆ ಬಂದಿದೆಯೆಂದು ಗೂಗಲ್ ತಿಳಿಸಿದೆ.
ಅಂತರ್ಜಾಲದಲ್ಲಿ ವಿದೇಶಗಳ ಸರ್ವರ್ ಬಳಸುವ ತಾಣಗಳ ಮೂಲಕ ತಮ್ಮ ಬರವಣಿಗೆಗಳನ್ನು ಪ್ರಕಾಶಿಸುವ ಮೂಲಕ ದೇಶವೊಂದರ ಕಾನೂನು ಅನ್ವಯಿಸದ ಹಾಗೆ ಮಾಡುವುದು ಸಾಧ್ಯವೆನ್ನುವುದು ದೊಡ್ಡ ಸಮಸ್ಯೆಯಾಗಿದೆ.ಹಾಗಾಗಿ ಯಾವುದೇ ದೇಶದ ಕಾನೂನು ಎಷ್ಟೆ ಪ್ರಬಲವಾಗಿದ್ದರೂ ಅದನ್ನು ಮೀರಲು ಸಾಧ್ಯವಾಗುತ್ತದೆ.ಯಾವುದೇ ಮಾಧ್ಯಮವನ್ನು ನಿಯಂತ್ರಿಸಲು ಕಾನೂನುಗಳು ಇರಬೇಕು ಮತ್ತು ಯಾವನೇ ವ್ಯಕ್ತಿಗೆ ಮಾನಹಾನಿಯಾಗುವ ಅಥವಾ ಆತನ ವಿರುದ್ಧ ದ್ವೇಷ ಭುಗಿಲೇಳುವಂತೆ ಮಾಡುವ ವಿಷಯಗಳು ಡಿಜಿಟಲ್ ರೂಪದಲ್ಲಿದ್ದರೂ ಆಕ್ಷೇಪಾರ್ಹ.ಅಂತವನ್ನು ತೆಗೆದು ಹಾಕಲು ಅನುವು ಮಾಡುವ ಅಥವಾ ಅಂತಹ ವಿಷಯವನ್ನು ಪ್ರಚುರಪಡಿಸುವ ಅಂತರ್ಜಾಲ ತಾಣಗಳ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗಬೇಕು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.ಆದರೆ ಇದನ್ನೇ ನೆವವಾಗಿಟ್ಟು,ಮುಕ್ತ ಚರ್ಚೆಯನ್ನು ನಿಷೇಧಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ.
ರಶ್ಯಾ,ಚೀನಾ,ಉಜಬೇಕಿಸ್ತಾನ,ತಾಜಿಕಿಸ್ತಾನದಂತಹ ದೇಶಗಳು ಅಂತರ್ಜಾಲದ ಮೇಲೆ ತಮ್ಮ ಸರಕಾರಗಳಿಗೆ ಹೆಚ್ಚಿನ ನಿಯಂತ್ರಣ ಬಯಸಿ,ವಿಶ್ವಸಂಸ್ಥೆಯಲ್ಲಿ ಪ್ರಸ್ತಾವವನ್ನಿಟ್ಟಿವೆ.ಸದ್ಯ ಅಂತರ್ಜಾಲದಲ್ಲಿ ಸ್ವನಿಯಂತ್ರಣವೇ ಪ್ರಧಾನ.ಯಾವುದೇ ಬಾಹ್ಯ ನಿಯಂತ್ರಣ ಅಂತರ್ಜಾಲ ತಾಣಗಳ ಮೇಲೆ ವಿಧಿಸಲಾಗುತ್ತಿಲ್ಲ.ಇದೇ ರೀತಿ ಮುಂದುವರಿದರೆ ಚೆನ್ನವೆಂದು ಬಹುತೇಕ ಅಂತರ್ಜಾಲಿಗರ ಅನಿಸಿಕೆ ಕೂಡಾ.ಹೀಗಾಗಿ ಯಾರೇ ಆದರೂ ನಿಯಂತ್ರಣ,ನಿಷೇಧಗಳ ಬಗ್ಗೆ ಮಾತೆತ್ತಿದ್ದರೆ,ಅದಕ್ಕೆ ಟ್ವಿಟರ್,ಫೇಸ್ಬುಕ್ ತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತದೆ.ಕಪಿಲ್ ಸಿಬಾಲ್ ಅವರೂ ಟ್ವಿಟರ್ ಮತ್ತಿತ್ತರ ತಾಣಗಳಲ್ಲಿ ಖಳನಾಯಕನಂತೆ ಚಿತ್ರಿತರಾದರು.
ಕಾಕತಾಳಿಯವೆಂಬಂತೆ,ಇದೇ ಸಮಯದಲ್ಲಿ ಅಂತರ್ಜಾಲಕ್ಕೆ ಸೆನ್ಸಾರ್ ಅನ್ವಯಿಸುವ ಯಾವುದೇ ಕ್ರಮದಿಂದ ದೂರವುಳಿಯಬೇಕೆಂದು ಅಮೆರಿಕಾದ ಸಚಿವೆ ಹಿಲರಿಕ್ಲಿಂಟನ್ ಪ್ರತಿಪಾದಿಸಿದ್ದಾರಂತೆ.ವಿಕಿಲೀಕ್ಸ್ ಅಂತಹ ತಾಣವು ಮಾಹಿತಿಯನ್ನು ಬಹಿರಂಗಗೊಳಿಸಿ,ಅಮೆರಿಕಾಕ್ಕೆ ಇರಿಸುಮುರಿಸು ಮಾಡಿದಾಗ,ವಿಕಿಲೀಕ್ಸ್ ಅನ್ನು ಹತ್ತಿಕ್ಕಲು ಹಿಂದೆ ಮುಂದೆ ನೋಡದ ಅಮೆರಿಕಾ,ಈಗ ಈ ರೀತಿ ಪ್ರತಿಪಾದಿಸುತ್ತಿರುವುದು ಅಚ್ಚರಿಯೇ ಸರಿ!
---------------------------------
ಅಂತರ್ಜಾಲ ಶೋಧಿಸದಿರಿ:ಫ್ಲಿಪ್ ಮಾಡಿ
.infoaxe.com ಇನ್ನೊಂದು ಶೋಧ ತಾಣ.ಆದರಿದು ಕೆಲಸ ಮಾಡುವ ರೀತಿ ಮಾತ್ರ ತುಸು ಭಿನ್ನ.ಶೋಧ ಗುಚ್ಚವನ್ನು ನೀಡಿದ ವ್ಯಕ್ತಿಯು ಈ ಹಿಂದೆ ಭೇಟಿ ನೀಡಿದ್ದ ತಾಣಗಳಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯಿದೆಯೇ ಎಂದು ಹುಡುಕಿಕೊಡಲು ಈ ತಾಣ ಪ್ರಯತ್ನಿಸುತ್ತದೆ.ಸಾಮಾನ್ಯವಾಗಿ ಜನರು ತಾವು ಹಿಂದೆ ಭೇಟಿ ನೀಡಿದ ತಾಣದಲ್ಲಿ ಕಂಡ ಯಾವುದೋ ಮಾಹಿತಿಯ ಬಗ್ಗೇ ಶೋಧಿಸುವುದೇ ಹೆಚ್ಚು ಎನ್ನುವ ಸಂಶೋಧನೆಯ ಅನ್ವಯ ಈ ತಾಣದ ಶೋಧವನ್ನು ನಡೆಸಲಾಗುತ್ತದೆ.ಈ ರೀತಿಯ ಶೊಧ ನಡೆಸುವ ಕಾರಣ ,ತಾಣವು ನೋಂದಾವಣೆಯನ್ನು ಬಯಸುತ್ತದೆ.ಪ್ರತಿಯೋರ್ವನ ಅಂತರ್ಜಾಲ ಚರಿತೆಯನ್ನದು ನೆನಪಿನಲ್ಲಿರಿಸಿ,ಶೋಧ ಫಲಿತಾಂಶ ನೀಡುತ್ತದೆ.ಹೀಗಾಗಿ,ಖಾಸಗಿತನದ ಬಗ್ಗೆ ಕಾಳಜಿ ಇದ್ದವರು ಈ ತಾಣವನ್ನು ದೂರವಿಡಲೂ ಬಹುದು.
--------------------
ಆಂಡ್ರಾಯಿಡ್:ಹತ್ತು ಬಿಲಿಯನ್ ಡೌನ್ಲೋಡ್
ಆಂಡ್ರಾಯಿಡ್ ಬಹು ಜನಪ್ರಿಯ ಸ್ಮಾರ್ಟ್ಫೋನ್ ನಿರ್ವಹಣಾ ವ್ಯವಸ್ಥೆ ತಂತ್ರಾಂಶವೆನ್ನುವುದು ಈಗ ಹೆಚ್ಚಿನವರಿಗೆ ಗೊತ್ತಿರುವ ವಿಷಯ.ಇತ್ತೀಚೆಗೆ ಅದರ ಆಂಡ್ರಾಯಿಡ್ ಸ್ಟೋರಿನಿಂದ ಹತ್ತು ಬಿಲಿಯನ್ನೇ ಡೌನ್ಲೋಡ್ ದಾಖಲಾಯಿತು.ಒಂದು ಬಿಲಿಯನ್ ಡೌನ್ಲೋಡ್ ಆಗಲು ಇಪ್ಪತ್ತೆರಡು ತಿಂಗಳು ಬೇಕಾಯಿತು.ಕೊನೆಯ ಒಂದು ಬಿಲಿಯನ್ ಡೌನ್ಲೋಡ್ ಒಂದು ತಿಂಗಳ ಒಳಗೇ ಆಯಿತು ಎಂದರೆ,ಇತ್ತೀಚೆಗೆ ಆಂಡ್ರಾಯಿಡ್ ಅದೆಷ್ಟು ಜನಪ್ರಿಯವಾಗ ಹತ್ತಿದೆ ಎನ್ನುವುದರ ಚಿತ್ರಣ ಲಭಿಸದಿರದು.ಇದರ ಪ್ರಯುಕ್ತ ಸಂಭ್ರಮಾಚರಣೆಯಾಗಿ ಮುಂದಿನ ಕೆಲವು ದಿನಗಳಲ್ಲಿ ಜನಪ್ರಿಯ ಅಪ್ಲಿಕೇಶನ್ಗಳನ್ನು ಅಗ್ಗದ ದರಗಳಲ್ಲಿ ಡೌನ್ಲೋಡ್ ಮಾಡಲು ಬಳಕೆದಾರರಿಗೆ ಅವಕಾಶ ಸಿಗಲಿದೆ.
-------------------------------------------
ಚಂದ್ರ:ಶಿಲೆಗಳು ಮಾಯ!
ನಾಸಾವು ಚಂದಯಾನದ ಮೂಲಕ ಗಳಿಸಿದ ಚಂದ್ರನ ಮಣ್ಣು ಮತ್ತು ಶಿಲೆಗಳ ತುಣುಕುಗಳಲ್ಲಿ ಸುಮಾರು ಐನೂರು ತುಣುಕುಗಳು ಈಗ ನಾಸಾದಲ್ಲಿಲ್ಲವಂತೆ.ಸಂಶೋಧಕರು ಎರವಲು ಪಡೆದು,ಈಗ ಅದು ತಮ್ಮಲ್ಲಿಲ್ಲ ಎನ್ನುತ್ತಿದ್ದಾರಂತೆ.ಇನ್ನು ಕೆಲವು ಹೇಗೆ ಮಾಯವಾಗಿದೆ ಎನ್ನುವ ಮಾಹಿತಿ ನಾಸಾದಲ್ಲಿಲ್ಲ.ಕೆಲವು ಸಂಶೋಧಕರು ಎರವಲು ಪಡೆದು,ಅವನ್ನು ಹಿಂತಿರುಗಿಸದೆ,ಈಗ ಮರಣ ಹೊಂದಿದ್ದಾರೆ.ಇನ್ನುಕೆಲವರು ನಾಸಾ ಕೇಳಿದರೂ ಮೌನ ತಾಳಿದ್ದಾರೆ.
---------------------------------------------------
ಬಯೋಲೈಟುಗಳು
ಜೈವಿಕವಾಗಿ ಬೆಳಕನ್ನು ಉತ್ಪಾದಿಸಲು ಸಾಧ್ಯವೇ?ಮಿಂಚುಹುಳ ಬೆಳಕನ್ನು ಬೀರುವಂತೆ,ಇತರ ಕ್ರಿಮಿಕೀಟಗಳು ಮತ್ತು ಬ್ಯಾಕ್ಟೀರಿಯಾಗಳು ಪ್ರಕಾಶವನ್ನು ಹೊರಹೊಮ್ಮುವಂತೆ ಮಾಡಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ಬೆಲಕು ಬೀರುವ ಶಕ್ತಿಯಿರುವ ಬ್ಯಾಕ್ಟೀರಿಯಾಗಳು ಮಿಥೇನ್ ಅನಿಲವನ್ನು ಸೇವಿಸಿ,ಬೆಳಕನ್ನು ಹೊರಹೊಮ್ಮಿಸುತ್ತವೆ.ಇಂತಹ ಬ್ಯಾಕ್ಟೀರಿಯಾಗಳನ್ನು ಗಾಜಿನ ಭರಣಿಗಳಲ್ಲಿ ತುಂಬಿ,ಅವಕ್ಕೆ ಮಿಥೇನ್ ಅನಿಲ ಸರಬರಾಜು ಮಾಡುತ್ತಿದ್ದರೆ,ಈ ಭರಣಿಗಳು ಪ್ರಕಾಶದ ಪುಂಜಗಳಾಗಿ ಬಿಡುತ್ತವೆ.ಪಿಲಿಫ್ಸ್ ಕಂಪೆನಿಯು ಇಂತಹ ಜೈವಿಕ ಪ್ರಕಾಶ ಮೂಲಗಳನ್ನು ಅಭಿವೃದ್ಧಿ ಪಡಿಸಲು ಬಯಸಿದೆ.ಮುಂದಿನ ದಿನಗಳಲ್ಲಿ ಬೆಳಕು ಬೀರುವ ಮರಗಳನ್ನೂ ಅಭಿವೃದ್ಧಿ ಪಡಿಸಲು ಪಿಲಿಫ್ಸ್ ಕಂಪೆನಿಯು ಯೋಜಿಸಿದೆ.
-----------------------------
ಕಾಲೇಜುಗಳಿಗೆ ಗೂಗಲ್+ ಪುಟಗಳು
ಕಾಲೇಜುಗಳು ತಮ್ಮ ವಿದ್ಯಾರ್ಥಿ ಸಮುದಾಯದ ಜತೆ ಸಂಪರ್ಕ ಹೊಂದಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿರುವುದು ಈಗಿನ ವೈಖರಿ.ಫೇಸ್ಬುಕ್ ಪುಟ ಒಂದು ಜನಪ್ರಿಯ ಸಹಜ ಆಯ್ಕೆಯಾದರೆ,ಈಗ ಗೂಗಲ್+ ಇನ್ನೊಂದು ಆಯ್ಕೆ.ಈಗಲೇ ಗೂಗಲ್+ ಪುಟವನ್ನು ಹೊಂದುವುದು ಜಾಣತನವಾಗುತ್ತದೆ.ಗೂಗಲ್ ಶೋಧದಲ್ಲಿ ಕಾಲೇಜಿನ ಬಗ್ಗೆ ಶೋಧಿಸುವವರಿಗೆ ಕಾಣಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.ಹೆಚ್ಚಿನ ಪ್ರಚಾರ,ಪ್ರತಿಸ್ಪರ್ಧಿಗಳ ಮೇಲೆ ಮೇಲುಗೈ ಸಾಧಿಸಲು ಮೊದಲಾಗಿ ಪುಟ ಆರಂಭಿಸುವುದು ಜಾಣತನವಾಗುತ್ತದೆ.
UDAYAVANI
ಅಶೋಕ್ಕುಮಾರ್ ಎ