ಅಂತರ್ಜಾಲ ಅಂತರ್ಧಾನ!

ಅಂತರ್ಜಾಲ ಅಂತರ್ಧಾನ!

ಬರಹ

2008:ಐಟಿ,ದೂರಸಂಪರ್ಕ ಕ್ಷೇತ್ರಗಳನ್ನೂ ಬಾಧಿಸಿರುವ ಆರ್ಥಿಕ ಹಿನ್ನಡೆ
ಚೇತೋಹಾರಿ ಬೆಳವಣಿಗೆಯ ನಿರೀಕ್ಷೆಯಲ್ಲಿ 2008ಕ್ಕೆ ಕಾಲಿರಿಸಿದ್ದ, ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಉದ್ಯಮಗಳು ವರ್ಷಾಂತ್ಯದಲ್ಲಿ ತತ್ತರಿಸುತ್ತಿರುವುದು ವಿಪರ್ಯಾಸ.ಆರ್ಥಿಕ ಹಿನ್ನಡೆಯು ವಿಶ್ವವನ್ನು ಬಾಧಿಸುವಾಗ, ಕಂಪೆನಿಗಳು ತಮ್ಮ ಐಟಿ ಖರ್ಚನ್ನು ಕಡಿಮೆ ಮಾಡಲು ಮುಂದಾಗುವುದು ಸ್ವಾಭಾವಿಕ. ಕೆಲಸ ಕಳೆದುಕೊಂಡ ಜನರು ತಮ್ಮ ಖರ್ಚು ಕಡಿಮೆ ಮಾಡಲು ದೂರಸಂಪರ್ಕ ಅಗತ್ಯಗಳಿಗೆ ಕಡಿವಾಣ ಹಾಕುವುದೂ ಸಂಭವನೀಯ. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ತೊಡಗಿರುವ ಕಂಪೆನಿಗಳು ಸದ್ಯೋಭವಿಷ್ಯತಿನ ಬಗ್ಗೆ ಹೆಚ್ಚೇನೂ ಉತ್ಸಾಹ ತಾಳುವ ಪರಿಸ್ಥಿತಿ ಇಲ್ಲ.ಭಾರತದ ಐಟಿ ಉದ್ಯಮವಂತೂ ವಿದೇಶೀ ಕಂಪೆನಿಗಳ ಸೇವೆಯ ಅಗತ್ಯಗಳನ್ನು ಪೂರೈಸುವ ವ್ಯವಹಾರವನ್ನೇ ಅವಲಂಬಿಸುವುದರಿಂದ ಮುಂದಿನ ದಿನಗಳಲ್ಲಿ ವ್ಯವಹಾರಹಿನ್ನಡೆಯಾಗಲಿರುವುದೋ,ಅಲ್ಲ ಪರಿಸ್ಥಿತಿ ಸುಧಾರಣೆ ಆಗಲಿದೆಯೋ ಎನ್ನುವುದರ ಬಗ್ಗೆ ಖಂಡಿತವಾಗಿ ಏನನ್ನೂ  ಹೇಳಲಾರದದ ಪರಿಸ್ಥಿತಿಯಲ್ಲಿವೆ. ಹೊರಗುತ್ತಿಗೆಯ ಮೇಲೆ ಅವಲಂಬಿತವಾದ ಬಿಪಿಓ ಕ್ಷೇತ್ರವಂತೂ ಮುಂದಿನ ಅಧ್ಯಕ್ಷ ಒಬಾಮಾ ನಿರ್ಧಾರಕ್ಕಾಗಿ ಕಾತರತೆಯಿಂದ ಕಾದಿವೆ.ಐಟಿ ದಿಗ್ಗಜಗಳೂ, ಹೊಸಬರ ನೇಮಕ ನಿಲ್ಲಿಸುವುದು, ದೈನಂದಿನ ಕೆಲಸದ ಅವಧಿ ಹೆಚ್ಚಿಸುವುದು,ವೇತನ ಕಡಿತ,ಮಿತವ್ಯಯ ಕ್ರಮಗಳು ಮತ್ತು ನೌಕರಿಯಲ್ಲಿ ಕಡಿತವನ್ನು ಮಾಡಲು ಆರಂಭಿಸಿವೆ.
-------------------------------------------------
ಇಂಟರ್ನೆಟ್ ಎಕ್ಸ್‌ಪ್ಲೋರರ್ 8 ಬಂದರೂ ಬ್ರೌಸರ್ ಇನ್ನೂ ಆಗಿಲ್ಲ ಸುಭದ್ರ!ie
ಈ ವರ್ಷ ಗೂಗಲ್‌ನ ಕ್ರೋಮ್ ಬಿಡುಗಡೆಯಾಗುವುದರ ಸುಳಿವು ಸಿಕ್ಕಿಯೋ ಏನೋ,ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಜನಪ್ರಿಯ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಎಂಟನೇ ಆವೃತ್ತಿಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಕ್ರೋಮಿನಲ್ಲಿ ಇರುವ ಬ್ರೌಸರ್ ಅಭ್ಯಾಸದ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಸೌಲಭ್ಯವನ್ನು ನೀಡಿತ್ತು.  ಬಳಕೆದಾರನ ಕಂಪ್ಯೂಟರನ್ನು ಹ್ಯಾಕರುಗಳು ಕೈವಶ ಮಾಡಿಕೊಳ್ಳಲು ಇಂಟರ್ನೆಟ್ ಎಕ್ಸ್‌ಪ್ಲೋರರ್(ಐಇ) ಆಸ್ಪದ ನೀಡುತ್ತಿರುವುದು ಕಂಡು ಬಂದಿದೆ. ಹೀಗಾಗಲು ಬಳಕೆದಾರ ಕೆಲವೊಂದು ಅಂತರ್ಜಾಲ ತಾಣಗಳಿಗೆ ಭೇಟಿ ನೀಡುವ ತಪ್ಪೆಸಗಿದರೇ ಸಾಕು. ಆ ತಾಣಗಳಲ್ಲಿ ಹುದುಗಿರುವ ತಂತ್ರಾಂಶಗಳು ಕೆಲಸ ಆರಂಭಿಸಿ, ಬಳಕೆದಾರನ ಗುಪ್ತ ಮಾಹಿತಿಗಳನ್ನು ಕದಿಯುವ ಕೆಲಸವನ್ನು ನಿರ್ಭಿಡೆಯಿಂದ ಮಾಡುತ್ತವೆ.ಐಇನ ಹಲವಾರು ಆವೃತ್ತಿಗಳು ಈ ತೊಂದರೆಗೆ ಒಳಗಾಗುವುದನ್ನು ಮೈಕ್ರೋಸಾಫ್ಟ್ ಕಂಪೆನಿಯೇ ಒಪ್ಪಿಕೊಂಡಿತು.ನಂತರ ಅವಸರದಲ್ಲೇ ಅದಕ್ಕೆ ಪರಿಹಾರವೊದಗಿಸುವ ತಂತ್ರಾಂಶದ ಕಡತವನ್ನು ಒದಗಿಸಿದೆ.ವಿಂಡೋಸ್‌ನ ಅಪ್ಡೇಟ್ ಮಾಡಿಕೊಂಡಾಗ,ಐಇಯನ್ನು ನೇರ್ಪುಗೊಳಿಸುವ ತಂತ್ರಾಂಶವೂ ಕಂಪ್ಯೂಟರಿನಲ್ಲಿ ಅನುಸ್ಥಾಪಿತವಾಗುತ್ತದೆ.ಈ ಭದ್ರತೆ ಎಲ್ಲಾ ಆವೃತ್ತಿಗಳಿಗೆ ಇನ್ನೂ ಬಿಡುಗಡೆಯಾಗಿಲ್ಲ.
-------------------------------------------------------
3Gಐಪೋನ್ v/s ಗೂಗಲ್ ಆಂಡ್ರಾಯ್ಡ್3g
ಐಫೋನ್ ತನ್ನ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ತ್ರೀಜಿ ಸೌಕರ್ಯವನ್ನು ಒದಗಿಸುತ್ತಿದೆ. ಇದರೊಂದಿಗೆ ಶರವೇಗದ ಅಂತರ್ಜಾಲ ಸೇವೆ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಲಭ್ಯವಾಗುತ್ತಿದೆ. ಜಿಪಿಎಸ್ ಸೌಕರ್ಯವೂ ಇರುವುದರಿಂದ ಇರುವ ಸ್ಥಾನ ಮತ್ತು ಎತ್ತ ಹೋಗಬೇಕೋ ಅಲ್ಲಿಗೆ ದಾರಿ ತೋರಿಸುವಂತಹ ಸೇವೆಗಳೂ ಐಪೋನಿನಲ್ಲಿ ಸಿಗುತ್ತಿದೆ.ಐಪಾಡ್ ಕೂಡಾ ಲಭ್ಯವಿರುವ ಈ ಹ್ಯಾಂಡ್‌ಸೆಟ್‌ಗಳು ಹಾಡಿನ ಸಂಗ್ರಹಕ್ಕೂ ಅನುವು ಮಾಡುತ್ತವೆ. ಕ್ಯಾಮರಾ ಇರುವುದರ್ ಬಗ್ಗೆ ಪ್ರತ್ಯೇಕವಾಗಿ ಪ್ರಸ್ತಾಪಿಸುವ ಅಗತ್ಯವೇ ಇಲ್ಲವೇನೋ?
ಅತ್ತ ಗೂಗಲ್ ತನ್ನದೇ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಹೊರತಂದಿದೆ. ಅದನ್ನು ಆಂಡ್ರಾಯ್ಡ್ ಎಂದು ಹೆಸರಿಸಿರುವ ಗೂಗಲ್,ತನ್ನದೇ ಆದ ಹ್ಯಾಂಡ್‌ಸೆಟ್ ತರುವ ಸಾಹಸಕ್ಕೆ ಕೈಹಾಕದೆ, ಹ್ಯಾಂಡ್‌ಸೆಟ್ ತಯಾರಕರು ತನ್ನ ಆಂಡ್ರಾಯ್ಡನ್ನು ಬಳಸುವುದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಟಿ-ಮೊಬೈಲ್ ಹ್ಯಾಂಡ್‌ಸೆಟ್ ಇದೀಗಲೇ ಆಂಡ್ರ್‍ಆಯ್ಡ್ ಬಳಸುತ್ತಿದೆ.
-------------------------------------------
ವೈಮಾಕ್ಸ್ ನಿಸ್ತಂತು ಸೇವೆಗೆ ಕಂಕಣ ಬದ್ಧವಾಗಿರುವ ಇಂಟೆಲ್
ಅತ್ತ ತ್ರೀಜಿ ಸೇವೆಗಳಿಗೆ ಚಾಲನೆ ದೊರಕಿ, ಮೊಬೈಲ್ ಮೂಲಕ ಶರವೇಗ ಅಂತರ್ಜಾಲಕ್ಕೆ ಹಾದಿ ಸುಗಮವಾಗಿದೆ. ಇತ್ತ ನಿಸ್ತಂತು ಸೇವೆಯ ಮೂಲಕ ಅಂತರ್ಜಾಲ ಲಭ್ಯವಾಗಿಸುವ ವೈಮ್ಯಾಕ್ಸ್ ಅದ್ಯಾಕೋ ಈ ವರ್ಷದಲ್ಲಿ ಮುನ್ನಡೆ ಕಂಡಿಲ್ಲ. ಎಪ್ಪತ್ತು ಮೆಗಾಬಿಟ್ಸ್ ವೇಗದಲ್ಲಿ ಬ್ರಾಡ್ ಬ್ಯಾಂಡ್ ಸೇವೆ ಒದಗಿಸಲು ಶಕ್ತವಾಗಿರುವ  ವೈಮ್ಯಾಕ್ಸ್,ಸೇವೆಗೆ ಅನುಮತಿಯನ್ನು ಭಾರತ ಸರಕಾರ ನೀಡಲು ಮುಂದಾಗಿದೆ. ಲೈಸನ್ಸ್ ಸುಲ್ಕ ನಿರ್ಣಯಕ್ಕೆ ಹರಾಜು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ನಡುವೆ ಇಂಟೆಲ್ ಕಂಪೆನಿಯು ದೂರಸಂಪರ್ಕ ಸೇವೆ ನೀಡುವ ಕಂಪೆನಿಗಳ ಜತೆ ಸಂಧಾನ ನಡೆಸಿ, ತಾನು ಈ ಸೇವೆಯನ್ನು ಜನಪ್ರಿಯವಾಗಿಸುವ ಪಣ ತೊಟ್ಟಿರುವುದನ್ನು ಸ್ಪಷ್ಟಪಡಿಸಿದೆ. ತನ್ನ ಸಂಸ್ಕಾರಕಗಳಲ್ಲಿ ಈ ಸೇವೆ ಪಡೆಯಲು ಅವಶ್ಯಕ ಬದಲಾವಣೆಗಳನ್ನು ಮಾಡಲು ಕಂಪೆನಿ ಮುಂದೆ ಬಂದಿದೆ.ಅಂತೆಯೇ ವೈಮ್ಯಾಕ್ಸ್ ಮೂಲಕ ಅಂತರ್ಜಾಲ ಸಂಪರ್ಕಕ್ಕೆ ಅವಕಾಶ ನೀಡುವ ಸಾಧನಗಳನ್ನು ತಯಾರಿಸಲೂ ಕಂಪೆನಿಯು ಮಾತುಕತೆ ನಡೆಸುತ್ತಿದೆ.ದೂರಸಂಪರ್ಕ ಕಂಪೆನಿಗಳಿಗೆ ಹಣಕಾಸಿನ ನೆರವು ನೀಡಲೂ ಇಂಟೆಲ್ ಸಿದ್ಧವಿದೆಯಂತೆ.
-----------------------------------------------
ಅಣುಬಂಧ:ಅವಕಾಶಗಳ ಪೂರ
ಭಾರತವು ಅಮೆರಿಕಾದೊಂದಿಗೆ ಅಣುಬಂಧ ಒಪ್ಪಂದಕ್ಕೆ ಸಹಿ ಮಾಡಿದ್ದು ವರ್ಷದ ಮಹತ್ತ್ವದ ಬೆಳವಣಿಗೆ. ಇದರೊಂದಿಗೆ ಭಾರತವು ಅಣುವಿದ್ಯುತ್ ಸ್ಥಾವರದ ತಂತ್ರಜ್ಞಾನ ಮತ್ತು ಅಣು ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಹಾದಿ ಸುಗಮವಾಗಿದೆ. ಖಾಸಗಿ ಕಂಪೆನಿಗಳಿಗೂ ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಹಾದಿ ಸುಗಮವಾಗುವ ನಿರೀಕ್ಷೆಯಿದ್ದು, ಟಾಟಾ ಪವರ್, ರಿಲಾಯೆನ್ಸ್ ಪವರ್ ಕಂಪೆನಿಗಳು,ಜಿ ಎಂ.ಆರ್. ಕಂಪೆನಿಗಳು ಇಂತಹ ಅಣುಸ್ಥಾವರಗಳನ್ನು ಸ್ಥಾಪಿಸಲು ಉತ್ಸಾಹ ಹೊಂದಿವೆ.ಈ ನಿಟ್ಟಿನಲ್ಲಿ ತರಬೇತಿ ಮತ್ತು ಅಣುಸ್ಥಾವರಗಳ ಸ್ಥಾಪನೆ-ನಿರ್ವಹಣೆಯ ಬಗ್ಗೆ ತರಬೇತಿ ಪಡೆಯಲು ಈ ಕಂಪೆನಿಗಳು ಹೆಜ್ಜೆಯಿಟ್ಟಿವೆ.ಮಕರಂದ್ ರಾಜಾಧ್ಯಕ್ಷ ಎಂಬ ಐಐಟಿಯ ಹಳೆವಿದ್ಯಾರ್ಥಿ,ಸ್ಥಾಪಿಸಿರುವ ಪಿ ಎಂ ಡೈಮೆನ್ಷನ್ಸ್ ಎಂಬ ಕಂಪೆನಿಯು ಇಂತಹ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ಈಗಾಗಲೇ ಹಲವು ಕಂಪೆನಿಗಳಿಗೆ ತರಬೇತಿ ನೀಡಿದೆ.ಸುರಕ್ಷತೆ,ಸ್ಥಾಪನೆಯ ಕ್ರಮ,ಸ್ಥಾವರವನ್ನು ನಡೆಸುವ ರೀತಿ ಇವೆಲ್ಲವನ್ನೂ ತರಬೇತಿ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ.
------------------------------------------
ಸಮುದ್ರದಡಿಯ ಕೇಬಲ್ ಕಡಿತ: ಅಂತರ್ಜಾಲ ಅಂತರ್ಧಾನ!
ವರ್ಷದುದ್ದಕ್ಕೂ ಸಮುದ್ರದಡಿಯ ಕೇಬಲ್ ಕಡಿಯುವ ಪ್ರಸಂಗ ಆಗಾಗ ನಡೆಯಿತು. ಇದರಿಂದ ಅಂತರ್ಜಾಲ ಸೇವೆ ಬಾಧಿತವಾಗಿ ಬಿಪಿಓ ಉದ್ಯಮದ ಸೇವೆಗೆ ಚ್ಯುತಿಯಾಗುವ ಪರಿಸ್ಥಿತಿ ಬಂತು.ನಿನ್ನೆ ತಾನೇ ಯುರೋಪ್-ಏಶ್ಯಾವನ್ನು ಬೆಸೆಯುವ ಸಮುದ್ರದಡಿಯ ಕೇಬಲ್ ಮೆಡಿಟರೇನಿಯನ್ ಸಮುದ್ರದಲ್ಲಿ ಕಡಿದು, ಯುರೋಪ್ ದೇಶಗಳಿಗೆ ಸೇವೆ ಒದಗಿಸುವ ಭಾರತೀಯ ಕಂಪೆನಿಗಳ ಸೇವೆ ತುಸು ಮಟ್ಟಿಗೆ ಬಾಧಿತವಾದುವು. ಆದರೆ ಹೆಚ್ಚಿನ ಬಿಪಿಓ ಕಂಪೆನಿಗಳು ತಮಗೆ ಬೇಕಾದ್ದಕ್ಕಿಂತ ಹೆಚ್ಚು ಬ್ಯಾಂಡ್‌ವಿಡ್ತ್ ಪಡೆದು, ಇಂತಹ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಯಾರಾಗಿರುವುದು ವರದಾನವಾಯಿತು.ಅಂತರ್ಜಾಲ ಸೇವೆಯಲ್ಲಿ ಆಗಿರುವ ಏರುಪೇರಿನ ಹೊರತಾಗಿಯೂ ಬಿಪಿಓ ಕಂಪೆನಿಗಳು ತಮ್ಮ ಸೇವೆಯನ್ನು ಅಬಾಧಿತವಾಗಿ ನೀಡುತ್ತಿವೆ.


udayavani

ashokworld

*ಅಶೋಕ್‌ಕುಮಾರ್ ಎ