ಅಂತರ್ಜಾಲ ಆಧಾರಿತ ತಂತ್ರಾಂಶ ಸೇವೆಯನ್ನು ತಿರಸ್ಕರಿಸಬೇಕೇ?

ಅಂತರ್ಜಾಲ ಆಧಾರಿತ ತಂತ್ರಾಂಶ ಸೇವೆಯನ್ನು ತಿರಸ್ಕರಿಸಬೇಕೇ?

ಬರಹ

ಗೂಗಲ್ ತನ್ನ ಪದಸಂಸ್ಕರಣ, ಸ್ಪ್ರೆಡ್‌ಶೀಟ್ ಮುಂತಾದ ತಂತ್ರಾಂಶಗಳನ್ನು ಅಂತರ್ಜಾಲದಲಿ ಮುಕ್ತವಾಗಿ ಒದಗಿಸಿ ಹೊಸ ಮಾದರಿ ಸೇವೆಯನ್ನು ಹುಟ್ಟಿ ಹಾಕಿತು.ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸದೆ, ಅದನ್ನು ಬೇಕೆಂದಾಗ ಅಂತರ್ಜಾಲ ಮುಖಾಂತರ ಪಡೆಯುವ ಆಯ್ಕೆಯನ್ನು ಗೂಗಲ್ ಒದಗಿಸಲು ಮನ ಮಾಡಿದ್ದು, ಮೈಕ್ರೋಸಾಫ್ಟ್ ಕಂಪೆನಿಗೆ ಹೊಡೆತ ನೀಡುವ ಉದ್ದೇಶದಿಂದವೆನ್ನುವುದು ಸ್ಪಷ್ಟ. ಈ ಸೇವೆ ಮೂಲಕ ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶಕ್ಕೆ ಮೊರೆ ಹೋಗ ಬೇಕಾದುದನ್ನು ತಪ್ಪಿಸಿ, ತನ್ನ ತಂತ್ರಾಂಶವನ್ನು ಮಾರಿ ಏಕಸ್ವಾಮ್ಯ ಸಾಧಿಸುತ್ತಿರುವ ಮೈಕ್ರೋಸಾಫ್ಟಿಗೆ ಸ್ಪರ್ಧೆ ನೀಡಲು ಗೂಗಲ್ ಬಯಸಿತ್ತು.

ಅದರ ನಂತರ ಈ ಮಾದರಿ, ನಮ್ಮ ಕಡತಗಳನ್ನು ಉಳಿಸಲು ಸ್ಮರಣಕೋಶಗಳನ್ನು ಅಂತರ್ಜಾಲದಲ್ಲೇ ಪಡೆಯುವ  ಸೇವೆಗೂ ವಿಸ್ತಾರವಾಯಿತು. ಈಗ ಗಿಗಾಬೈಟುಗಳ ವರೆಗೆ ದಾಸ್ತಾನು ಮಾಡುವ ಅವಕಾಶ ಅಂತರ್ಜಾಲದಲ್ಲೇ ಇದೆ. ಈ ಹೊಸ ಮಾದರಿಯು ಹೆಚ್ಚು ಜನಪ್ರಿಯವಾದರೆ ನಮ್ಮ ಡೆಸ್ಕ್‌ಟಾಪುಗಳು ಅಂತರ್ಜಾಲಕ್ಕೆ ಸಂಪರ್ಕ ನೀಡುವ ಸಾಮರ್ಥ್ಯ ಹೊಂದಿದರೆ ಸಾಕು.ಉಳಿದ ನಮ್ಮ ಅಗತ್ಯದ ತಂತ್ರಾಂಶಗಳನ್ನು ಮತ್ತು ಸ್ಮರಣಸಾಮರ್ಥ್ಯವನ್ನು ಅಂತರ್ಜಾಲದ ಸರ್ವರುಗಳಿಂದಲೇ ಪಡೆಯಬಹುದು. ಹೀಗೆ ಕಂಪ್ಯೂಟರುಗಳ ಬೆಲೆ ಇಳಿಸಿ, ಜನಸಾಮಾನ್ಯರಿಗೂ ಕಂಪ್ಯೂಟರನ್ನು ಬಳಸುವುದು ಸಾಧ್ಯವಾಗಿಸ ಬಹುದು ಎನ್ನುವ ಯೋಚನೆ ಇತ್ತು.ಇದನ್ನು ಕೌಡ್ ಕಂಪ್ಯೂಟಿಂಗ್ ಎಂದೂ ಹೇಳುವರು.

ಮುಕ್ತ ತಂತ್ರಾಂಶಗಳ ಚಳುವಳಿಯ ಹರಿಕಾರ ರಿಚಾರ್ಡ್ ಸ್ಟಾಲ್‌ಮನ್  ಈ ಮಾದರಿ ಸೂಕ್ತವಲ್ಲ. ಅಂತರ್ಜಾಲ ಆಧಾರಿತ ತಂತ್ರಾಂಶ ಮತ್ತು ಸ್ಮರಣ ಸಾಮರ್ಥ್ಯದ ಮೇಲೆ ಅವಲಂಬಿತವಾಗುವುದು  ಮೂರ್ಖತನ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿ ವಿವಾದದ ಅಲೆ ಎಬ್ಬಿಸಿದ್ದಾರೆ.ಇದು ಮುಕ್ತತೆ ಮತ್ತು ಖಾಸಗಿತನಕ್ಕೆ ವಿರುದ್ಧ- ಇಂತ ಅವಲಂಬನೆ ಕೂಡದು ಎಂದು ಜನರಿಗೆ ಅವರು ಎಚ್ಚರಿಕೆ ನೀಡಿದ್ದಾರೆ.ಇದು ಕಂಪೆನಿಯೊಂದರ ಹಕ್ಕುಸ್ವಾಮ್ಯ ಇರುವ ತಂತ್ರಾಂಶ ಖರೀದಿಸಿ ಬಳಸುವಷ್ಟೇ ಅಪಾಯಕಾರಿ.ಇತರರ ತಂತ್ರಾಂಶ ಬಳಸಿ,ಅವರ ಸರ್ವರಿನಲ್ಲಿ ನಿಮ್ಮ ಮಾಹಿತಿ ಇಡುವುದು,ನಿಮ್ಮನ್ನು ಯಾವುದೇ ರಕ್ಷಣೆಯಿಲ್ಲದ ಅಪಾಯಕ್ಕೆ ಒಡ್ಡುತ್ತದೆ ಎಂದು ಬಳಕೆದಾರರಿಗೆ ಅವರ ಕಿವಿಮಾತು.