ಅಂತರ್ಜಾಲ ದೂರದರ್ಶನ

ಅಂತರ್ಜಾಲ ದೂರದರ್ಶನ

ಮೊಬೈಲಿನಲ್ಲಿ ಎಫ್ ಎಂ ರೇಡಿಯೋ ಕೇಳುವ ಸೌಲಭ್ಯ ಲಭ್ಯವಾದ ನಂತರ ನಾವು ಎಲ್ಲಿದ್ದರೂ (ಎಫ್ ಎಂ ರೇಡಿಯೋ ಪ್ರಸಾರ ಇರುವ ನಗರಗಳಲ್ಲಿ) ರೇಡಿಯೋ ಸೆಟ್ ಇಲ್ಲದೇ ರೇಡಿಯೋ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಯಿತು.  ಇಂದು ಬೆಂಗಳೂರಿನಂಥ ನಗರಗಳಲ್ಲಿ ಬಸ್ಸುಗಳಲ್ಲಿ ಸಂಚರಿಸುತ್ತಿರುವ ಜನಸಾಮಾನ್ಯರು ತಮ್ಮ ಮೊಬೈಲುಗಳಲ್ಲಿ ಎಫ್ ಎಂ ರೇಡಿಯೋ ಕೇಳುತ್ತಾ ಪ್ರಯಾಣಿಸುವ ದೃಶ್ಯ ಕಂಡುಬರುತ್ತದೆ.  ತಂತ್ರಜ್ಞಾನದ ಮುನ್ನಡೆಯ ಫಲವಾಗಿ ಈಗ ಮೊಬೈಲಿನಲ್ಲಿ ಟಿವಿ ವಾಹಿನಿಗಳನ್ನು ನೋಡುವ ಸೌಲಭ್ಯವೂ ಲಭ್ಯವಾಗುತ್ತಿದೆ.  3ಜಿ ಮೊಬೈಲ್ ಸಿಗ್ನಲ್ ಇರುವೆಡೆ ಈಗ 3ಜಿ ಸೌಲಭ್ಯವಿರುವ ಮೊಬೈಲ್ ಮೂಲಕ ಟಿವಿ ವಾಹಿನಿಗಳನ್ನೂ ನೋಡಬಹುದು.  ಇದಕ್ಕೆ ಮೊಬೈಲ್ ಕಂಪನಿಗಳು ನೀಡುವ ಟಿವಿ ಪ್ಯಾಕೇಜ್ ದರವನ್ನು ನೀಡಬೇಕಾಗುತ್ತದೆ.  ಸದ್ಯಕ್ಕೆ ಇದು ದುಬಾರಿಯಾಗಿದೆ.  ಇದರ ಬಳಕೆ ಹೆಚ್ಚಾದಂತೆ ಇದರ ದರ ಕಡಿಮೆಯಾಗಬಹುದು.  ಅಂತರ್ಜಾಲದ ಮೂಲಕ ಈಗ ಹಲವು ಟಿವಿ ವಾಹಿನಿಗಳು ಉಚಿತವಾಗಿ ಲಭ್ಯ ಇವೆ.  ಲ್ಯಾಪ್ಟಾಪ್ ಕಂಪ್ಯೂಟರ್ ಮೂಲಕ ಇವುಗಳನ್ನು ೩ಜಿ ಅಂತರ್ಜಾಲ ಸಂಪರ್ಕ ಇರುವವರು ಚಲನೆಯಲ್ಲಿರು ವಾಗಲೂ 3ಜಿ ಮೊಬೈಲ್ ಜಾಲ ಇರುವ ಕಡೆ ನೋಡಬಹುದು.  ಅನ್ಲಿಮಿಟೆಡ್ ಇಂಟರ್ನೆಟ್ ಪ್ಯಾಕೇಜ್ ಪಡೆದುಕೊಂಡಿರುವವರು ಇವುಗಳನ್ನು ನೋಡಲು ಸಾಧ್ಯವಿದೆ.  ಉದಾಹರಣೆಗೆ turbotv.in ವಿಳಾಸದಲ್ಲಿ ಕನ್ನಡ ವಾಹಿನಿಗಳ ಅಡಿಯಲ್ಲಿ ಸುವರ್ಣ ನ್ಯೂಸ್, ಸುವರ್ಣ ಪ್ಲಸ್, ಜನಶ್ರೀ ನ್ಯೂಸ್, ಪಬ್ಲಿಕ್ ಟಿವಿ, ಕಸ್ತೂರಿ ನ್ಯೂಸ್ 24, ರಾಜ್ ನ್ಯೂಸ್ ಕನ್ನಡ, ಸಮಯ ಟಿವಿ, ಕಸ್ತೂರಿ ಟಿವಿ, ಡಿಡಿ ಚಂದನ ಮೊದಲಾದ ವಾಹಿನಿಗಳನ್ನು ನೋಡಬಹುದು.  512 ಕೆಬಿಪಿಎಸ್ ಅಥವಾ ಅದಕ್ಕಿಂಥ ವೇಗದ ಅಂತರ್ಜಾಲ ಸಂಪರ್ಕ ಹಾಗೂ ಕಂಪ್ಯೂಟರಿನಲ್ಲಿ ಫ್ಲಾಶ್ ಪ್ಲೇಯರ್ ಇದ್ದರೆ ಇವುಗಳು ಕಾಣಿಸುತ್ತವೆ.  newtvworld.com ವಿಳಾಸದಲ್ಲಿ 261 ಟಿವಿ ವಾಹಿನಿಗಳು ಉಚಿತವಾಗಿ ಅಂತರ್ಜಾಲದಲ್ಲಿ ಲಭ್ಯವಿವೆ.  ಹಾಸ್ಟೆಲ್, ಪಿಜಿಗಳಲ್ಲಿ ನೆಲೆಸಿರುವವರು ಅವರಲ್ಲಿ ಲ್ಯಾಪ್ಟಾಪ್ ಕಂಪ್ಯೂಟರ್ ಹಾಗೂ ಅನ್ಲಿಮಿಟೆಡ್ ಇಂಟರ್ನೆಟ್ ಸಂಪರ್ಕ ಇದ್ದಲ್ಲಿ ಈ ವಾಹಿನಿಗಳನ್ನು ನೋಡಬಹುದು ಅಥವಾ ಬೇರೆ ಬೇರೆ ಕಡೆ ಪ್ರವಾಸದ ಮೇಲೆ ಇರುವವರು ಬೇರೆ ಬೇರೆ ಊರಿನಲ್ಲಿಯೂ 3ಜಿ ಮೊಬೈಲ್ ಜಾಲ ಇರುವಲ್ಲಿ ಇವುಗಳನ್ನು ಟಿವಿ ಇಲ್ಲದೆಯೂ ನೋಡಬಹುದು.