ಅಂತಾರಾಷ್ಟ್ರೀಯ ಕುಂಬಳಕಾಯಿ

ಅಂತಾರಾಷ್ಟ್ರೀಯ ಕುಂಬಳಕಾಯಿ

ಪುಸ್ತಕದ ಲೇಖಕ/ಕವಿಯ ಹೆಸರು
ಅಬ್ದುಲ್ ರಶೀದ್
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಖ್ಯಾತ ಕತೆಗಾರ ಅಬ್ದುಲ್ ರಶೀದ್ ಮತ್ತೊಮ್ಮೆ ತಮ್ಮ ಕಥಾ ಸಂಕಲನದ ಜೊತೆ ಬಂದಿದ್ದಾರೆ. ಈ ಬಾರಿ ಅವರು ಅದಕ್ಕೊಂದು ವಿಲಕ್ಷಣ ಹೆಸರನ್ನೂ ನೀಡಿದ್ದಾರೆ. ‘ಅಂತರಾಷ್ಟ್ರೀಯ ಕುಂಬಳಕಾಯಿ' ಎನ್ನುವ ಶೀರ್ಷಿಕೆಯೇ ಕಥಾ ಸಂಕಲನವನ್ನು ಓದುವಂತೆ ಪ್ರೇರೇಪಿಸುತ್ತದೆ. ೯೬ ಪುಟಗಳ ಪುಟ್ಟ ಕಥಾ ಸಂಕಲನ. ಮುನ್ನುಡಿಯನ್ನು ಬರೆದಿದ್ದಾರೆ ಕನ್ನಡದ ಮತ್ತೊರ್ವ ಖ್ಯಾತ ಕತೆಗಾರ ಎಸ್ ದಿವಾಕರ್ ಇವರು. ಇವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

“ಕನ್ನಡದಲ್ಲಿ ಸಣ್ಣಕತೆಗೆ ಪುನಃಶ್ಚೈತನ್ಯವನ್ನು ತಂದುಕೊಡುವ ಹೊಸ ದನಿಯೊಂದು ತೀರ ಅಪರೂಪಕ್ಕೆಂಬಂತೆ ಕೇಳಿಸುವುದುಂಟು. ಈಗ ಅಂಥದೊಂದು ದನಿ ಅಬ್ದುಲ್ ರಶೀದರ ಮೂಲಕ ಕೇಳಿಸುತ್ತಿದೆ. ಅವರ ವಿನೋದಭರಿತವಾದ, ಯಾತನೆಯ, ಏಕಾಕಿತನದ ಸುಳಿವಷ್ಟೇ ಹಿನ್ನೆಲೆಯಲ್ಲಿರುವ, ಒಂದಿಷ್ಟೂ ಪೂರ್ವನಿಯೋಜಿತವಲ್ಲದ, ತೀರ ಸಮಂಜಸವೆನ್ನಿಸುವ ಕತೆಗಳು ನಮಗೆ ಬದುಕಿನಲ್ಲಿದೆಯೆಂದು ಗೊತ್ತೇ ಇಲ್ಲದ ಅಪೂರ್ವ ದೃಶ್ಯಗಳನ್ನು ತೋರಿಸುವ ಕಿಟಕಿಗಳನ್ನು ತೆರೆಯುತ್ತವೆ. ಪ್ರಸ್ತುತ ಸಂಕಲನದಲ್ಲಿ ಎದ್ದು ಕಾಣುವ ಅಂಶವೆಂದರೆ ಇಲ್ಲಿನ ಕತೆಗಳ ವಸ್ತುಗಳಲ್ಲ, ಕತೆ ಹೇಳುವ ರಶೀದರ ಪ್ರತಿಭೆ. ಎಲ್ಲ ಕತೆಗಳಲ್ಲೂ 'ನಾನು' ಎಂಬ ಉತ್ತಮ ಪುರುಷ ನಿರೂಪಕನಿದ್ದು ಅವನು ಒಮ್ಮೊಮ್ಮೆ ಬಹುಮುಖ್ಯ ಪಾತ್ರವೂ ಆಗಿಬಿಡುತ್ತಾನೆ.

ಇಲ್ಲಿನ ಕತೆಗಳಲ್ಲಿ ಉಜ್ವಲ ಬದುಕಿರುವ ಹಾಗೆಯೇ ಪುಟಗಳಿಂದ ಹೊರಕ್ಕೆ ಜಿಗಿದು ಜೀವನದಲ್ಲಿ ಒಂದಾಗುವಂಥ ಪಾತ್ರಗಳೂ ಇವೆ. ಸಹಾನುಭೂತಿಯಿಂದ ಸೃಷ್ಟಿಸಲಾಗಿರುವ ಈ ಪಾತ್ರಗಳೋ, ತಮ್ಮ ಸಂಸ್ಕೃತಿಯ, ಚರಿತ್ರೆಯ, ಅಸ್ಮಿತೆಯ ಸರಹದ್ದುಗಳನ್ನು ಒಡೆದುಹಾಕುವಷ್ಟು ಶಕ್ತವಾಗಿವೆ. ನಮ್ಮ ಅನೇಕ ಕತೆಗಾರರು (ವಿಮರ್ಶಕರು ಕೂಡ) ನೇರವಾಗಿ ಕತೆ ಹೇಳುವುದನ್ನು ಸಂಶಯದಿಂದ ನೋಡುತ್ತಿರುವ ಈ ಕಾಲದಲ್ಲಿ ಏಕಕಾಲಕ್ಕೆ ನೇರವಾಗಿದ್ದೂ ಸಂಕೀರ್ಣತೆಯನ್ನು ಸಾಧಿಸುವ ಈ ಕತೆಗಳು ಗಾಢ ಅನುಭವವನ್ನು ಕೊಡುವ, ವಾಸ್ತವ ಮತ್ತು ಫ್ಯಾಂಟಸಿಯ ನಡುವಣ ಗೆರೆಯನ್ನು ಅಳಿಸಿಹಾಕುವ ಅಪ್ಪಟ ಕತೆಗಳು.

ರಶೀದರು ಸೃಷ್ಟಿಸುವುದು ತಮ್ಮ ದುರ್ಗತಿಗಾಗಿ ದುರ್ಗತಿಯಲ್ಲೇ ಸಿಕ್ಕಿಕೊಳ್ಳುವ, ಆದರೂ ಹೆದರುವ, ಅದನ್ನು ದಾಟಿಹೋಗುವ ಸೃಷ್ಟಿಸಿದ್ದು, ಅವು ಬೇರೆ ಬೇರೆ ದಾರಿಗಳ ಗುರುತು ಮಾಡುತ್ತ, ಪ್ರೀತಿಯಲ್ಲಿ, ಪಾತ್ರಗಳನ್ನು, ಅವರಿಲ್ಲಿ ಅಂಥ ಪಾತ್ರಗಳ ಒಂದು ಮೆರವಣಿಗೆಯನ್ನೇ ಬಹುಮಟ್ಟಿಗೆ ನಿರೀಕ್ಷಿತವಾದದ್ದನ್ನು ಸಾಧಿಸದೆ ಸೋಲುತ್ತವೆ. ಆದರೂ ಛಲದಲ್ಲಿ, ಸಾಹಸದಲ್ಲಿ, ಹುಚ್ಚುತನದಲ್ಲಿ ತಮ್ಮನ್ನು ತಾವೇ ಕಳೆದುಕೊಳ್ಳುತ್ತ ಒಮ್ಮೊಮ್ಮೆ ಮುಗುಳುನಗೆಯನ್ನು ಉಕ್ಕಿಸುವ, ಕೆಲವೊಮ್ಮೆ ತಲ್ಲಣಗೊಳಿಸುವ ಈ ಪಾತ್ರಗಳ ಜೀವನೋತ್ಸಾಹಕ್ಕಂತೂ ಎಲ್ಲೆಯೇ ಇಲ್ಲ.

ಈ ಸಂಕಲನದ ಕತೆಗಳನ್ನು ಓದುತ್ತಿರುವಾಗ ನನಗೆ ಅಮೆರಿಕನ್ ಲೇಖಕಿ ಫ್ಲಾನೆರಿ ಓ'ಕೋನ‌ರ್ ಸಣ್ಣಕತೆಯ ಬಗ್ಗೆ ಬರೆದಿರುವ ಈ ಮಾತುಗಳು ನೆನಪಿಗೆ ಬಂದವು: “ನೀವು ಒಂದು ಕತೆಯ ವಸ್ತುವನ್ನು ವಿವರಿಸಬಲ್ಲಿರಾದರೆ, ಕತೆಯಿಂದ ವಸ್ತುವನ್ನು ಬೇರ್ಪಡಿಸಬಲ್ಲಿರಾದರೆ ಅದು ಒಳ್ಳೆಯ ಕತೆಯಲ್ಲವೆಂದೇ ಅರ್ಥ. ಒಂದು ಕತೆಯ ಅರ್ಥ ಆ ಕತೆಯೊಳಗೇ ಅಂತರ್ಗತವಾಗಿರಬೇಕು, ಅದರೊಳಗೇ ಮೂರ್ತಗೊಂಡಿರಬೇಕು. ಕತೆಯೆನ್ನುವುದು ಒಂದು ಅನುಭವವನ್ನು ಹೇಳುವ ವಿಧಾನ; ಬೇರೆ ಯಾವ ರೀತಿಯಿಂದಲೂ ಹೇಳಲಾಗದ ವಿಧಾನ. ಆದ್ದರಿಂದ ಕತೆಯ ಅರ್ಥವೇನಿದೆಯೋ ಅದು ಸ್ಪುರಿಸುವುದಕ್ಕೆ ಅದರ ಪ್ರತಿಯೊಂದು ಶಬ್ದವೂ ಅಗತ್ಯ. ಒಂದು ಹೇಳಿಕೆ ಕತೆಯಾಗುವುದಿಲ್ಲ. ಅದು ಸಾಕಾಗದೆಂದೇ ನೀವು ಕತೆ ಹೇಳುತ್ತೀರಿ. ಒಂದು ಕತೆ ಯಾವ ವಸ್ತುವಿನ ಬಗ್ಗೆ ಇದೆ ಎಂದು ಯಾರಾದರೂ ಕೇಳಿದರೆ ಅವರಿಗೆ ಆ ಕತೆಯನ್ನೇ ಓದಿ ಎಂದು ಹೇಳುವುದು ಒಳ್ಳೆಯದು. ಇನ್ನು ಕತೆಯ ಅರ್ಥವೆಂದರೆ ಅಮೂರ್ತವಾದ ಅರ್ಥವಲ್ಲ, ಅದರ ಅನುಭವಿಸಲಾದ ಅರ್ಥ.” ರಶೀದರ ಕತೆಗಳಲ್ಲಿರುವುದು ಈ ಅನುಭವಿಸಲಾದ ಅರ್ಥವಾಗಿರುವುದರಿಂದ ಇಲ್ಲಿನ ಯಾವ ಕತೆಯ ವಸ್ತುವನ್ನೂ ಪ್ರತ್ಯೇಕಿಸಿ ನೋಡಲಾಗದು. ಉದಾಹರಣೆಗೆ 'ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು' ಎಂಬ ಕತೆಯನ್ನೇ ತೆಗೆದುಕೊಳ್ಳಿ. ಇದು ಅರಬ್ಬಿ ಕಡಲಿನ ದ್ವೀಪಗಳ ಸೌಂದರ್ಯವನ್ನು ತೋರಿಸುತ್ತ ಅಲ್ಲಿನ ಕೆಲವು ವಿದ್ಯಮಾನಗಳನ್ನು ವಿವರಿಸುತ್ತಿದೆಯೆ? ಮಾಂಟೆನೀಗೋದ ರೂಪದರ್ಶಿಯ ಅವಳಿ ಸಹೋದರ ನಾಪತ್ತೆಯಾದ ಸಂಗತಿ ಹೇಗೆ ಹಲವು ಸಾಹಸಗಳಿಗೆ ಕಾರಣವಾಯಿತು ಎಂದು ಹೇಳುತ್ತಿದೆಯೆ? ಕಲ್ಲಿಕೋಟೆಯ ಜಿಲ್ಲಾ ನ್ಯಾಯಾಲಯದಲ್ಲಿರುವ ಮುಕ್ತಿಯಾರರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತಿದೆಯೆ? ಮೂವತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥರಂತೆ ನಟಿಸುತ್ತಿರುವ ಮುತ್ತುಕೋಯಾ ಮತ್ತು ಅವರ ಪತ್ನಿಯ ನಿಗೂಢ ಕತೆಯನ್ನು ಅನಾವರಣಗೊಳಿಸುತ್ತಿದೆಯೆ? ರಾಷ್ಟ್ರದ್ರೋಹದ ಅಪರಾಧವೊಂದುಎಷ್ಟು ಅತಾರ್ಕಿಕವಾಗಿದೆ ಎಂಬ ವ್ಯಂಗ್ಯವನ್ನು ಧ್ವನಿಸುತ್ತಿದೆಯೆ? ಇವೆಲ್ಲವೂ ಹೌದು, ಆದರೆ ಅಲ್ಲ. ಯಾಕೆಂದರೆ ಕತೆ ಇವೆಲ್ಲವುಗಳನ್ನೂ ಮೀರಿ ಜೀವನದ ನಿಗೂಢವನ್ನು ಕುರಿತ ಒಂದು ವ್ಯಾಖ್ಯಾನವಾಗಿದೆ. ಅದು ಸೂಕ್ಷ್ಮ ಓದಿಗೆ ಮಾತ್ರ ಅನುಭವಗಮ್ಯವಾಗಬಲ್ಲ ವ್ಯಾಖ್ಯಾನ.

'ಕಾಮ್ರೇಡ್ ಆಲಿ ರೈಟರ ಕೆಂಪು ಕಾರಿಡಾರು' ಎಂಬ ಕತೆಯಲ್ಲಿ ಒಂದು ಸಿದ್ಧಾಂತಕ್ಕೆ ಬದ್ಧವಾದ ಜೀವ ಕೇವಲ ಭರವಸೆಯೊಂದರಿಂದಲೇ ಬದುಕುತ್ತ ಎಲ್ಲ ಸಂಕಷ್ಟಗಳನ್ನು ತಾಳಿಕೊಳ್ಳುವ ಚಿತ್ರವಿದೆ. ಕಾವೋಡ್ ಆಲಿಯವರ ಪತ್ನಿ ಅಮ್ಮಾಯಿ, ಓಡಿಹೋಗಿರುವ ಮಗಳು ಖತೀಜಾ ಇವರ ವೈಯಕ್ತಿಕ ದುರಂತಕ್ಕೆ ಎದುರಾಗಿ ಮೈಸೂರಿನ 'ಸನ್‌ಲೈಟ್' ಬೆಂಕಿಪೆಟ್ಟಿಗೆ ಕಾರ್ಖಾನೆಯ ಮಾಲೀಕ ಚಂಗಪ್ಪ ಮತ್ತು ಕಾರ್ಮಿಕರು ಇದ್ದಾರೆ. ಅನಿಷ್ಟದ ಅಥವಾ ದುರ್ದೈವದ ಒತ್ತಡದಲ್ಲಿ ತೊಳಲಾಡುವ ಇವರೆಲ್ಲರೂ ಸಮಾನ ದುಃಖಿಗಳು. ಕಲಾತ್ಮಕ ಪರಿಣತಿಯನ್ನು ಸಾಧಿಸಿರುವ ಈ ಕತೆ ತೀರ ಕನಿಷ್ಠ ನಿರೂಪಣಾ ಸಂಜ್ಞೆಗಳಿಂದಷ್ಟೇ ಬಹಳಷ್ಟನ್ನು ಹೇಳುತ್ತದೆ ಮತ್ತು ಕೆಲವೇ ಪಟಗಳಲ್ಲಿ ಜೀವನದ ಸಂಕೀರ್ಣತೆಯನ್ನು ಚಿತ್ರಿಸುವ ಹೊತ್ತಿಗೆ ಅರಿವಿನಿಂದಾಗುವ ಬೆರಗನ್ನು ಹೇಗೋ ಹಾಗೆ ಅದರ ಪರಿಣಾಮವನ್ನೂ ಚಿತ್ರಿಸುತ್ತದೆ.

ಲೆಸ್ಬಿಯನ್ ಪ್ರೇಮದ ಉತ್ಕಟಾವಸ್ಥೆಯೇ ಕೇಂದ್ರವಾಗಿರುವ 'ಕಾರ್ತ್ಯಾಯಿನಿ' ಕತೆಯಲ್ಲಿ ಅದೇ ಹೆಸರಿನ ನಾಯಕಿ ತನ್ನ ಜರ್ಮನ್ ಗೆಳತಿಗಾಗಿ ಹಂಬಲಿಸಿ ಹಂಬಲಿಸಿ ಕೊನೆಗೆ ಅದು ಪ್ರೀತಿಯಲ್ಲ. ಅದು ಇನ್ನೊಂದು ತರಹದ ಸಾಯಿಸುವ ಆಟವಾಗಿತ್ತು. ಆ ಆಟದಿಂದ ಅವಳು ನನ್ನನ್ನು ಸಾಯಿಸಿಬಿಟ್ಟಳು. ಎಂದು ಕೊರಗುತ್ತಾಳೆ. ಅವಳು ಕೆಲಸ ಮಾಡುತ್ತಿರುವುದು ಅಂಗಮರ್ದನ ಕೇಂದ್ರದಲ್ಲಿ ಒಬ್ಬ ಅಂಗಮರ್ದಕಿಯಾಗಿ, ಅವಳ ಆ ಕೆಲಸವೇ ಕತೆಗೊಂದು ಸಾಂಕೇತಿಕ ಮಹತ್ವ ತಂದುಕೊಟ್ಟಿದೆ. ಇನ್ನು ಆ ಜರ್ಮನ್ ಗೆಳತಿ ಕೊಟ್ಟಿದ್ದ ಒಂದು ರಬ್ಬರಿನ ಪುರುಷ ಜನನಾಂಗ ಸಾಕುನಾಯಿ ಪಮ್ಮಿಯ ಬಾಯಿಗೆ ಸಿಕ್ಕಿ ಅದು ಜಗಜ್ಜಾಹೀರಾಗುವ ಪ್ರಸಂಗ ಈ ಕತೆಗಾರರ ಹುಡುಗಾಟದ, ಕೀಟಲೆಯ, ಹಾಸ್ಯದ ಧಾಟಿ ಏನೆಲ್ಲ ಸೂಚಿಸುತ್ತದೆ ಎಂಬುದನ್ನು ಓದಿಯೇ ತಿಳಿಯಬೇಕು.

ಈ ಸಂಕಲನದ ಕತೆಗಳು ಒಂದು ಅರ್ಥದಲ್ಲಿ ಜಾಗತಿಕ ಎನ್ನಬಹುದಾದ ಕತೆಗಳು, ಯಾಕೆಂದರೆ ಇವುಗಳ ಕ್ರಿಯಾಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ವಿದ್ಯಮಾನಗಳು ನಿಜಕ್ಕೂ ಅಂತಾರಾಷ್ಟ್ರೀಯ ಎನ್ನಬಹುದಾದವು. ಇಲ್ಲಿ ಮಾಂಟೆನೀಗೋದ ರೂಪದರ್ಶಿಯಿದ್ದಾಳೆ; ಕ್ರಿಸ್ತಿನಾ ಎಂಬ ಜರ್ಮನ್ ಹೆಣ್ಣುಮಗಳಿದ್ದಾಳೆ; ಯಾವುದೋ ದೇಶದಿಂದ ಬಂದು ಅಸುನೀಗುವ ಔಲಿಯಾ ಮಹಾನುಭಾವರಿದ್ದಾರೆ; ಭೂತಾನ್ ಮೂಲದ ಹಸುಳೆಗಳಿದ್ದಾರೆ; ಪೋರ್ಚುಗೀಸ್ ಮೂಲದ ರಾಬಿನ್ ಡಿಸಿಲ್ವಾ ಇದ್ದಾನೆ. ಅರಬ್ಬಿ ಕಡಲಿನ ದ್ವೀಪಗಳಿವೆ, ತೈಲ ಸಾಗಿಸುವ ಅಂತಾರಾಷ್ಟ್ರೀಯ ಹಡಗುಗಳಿವೆ. ನಮ್ಮ ಕಾಲ ಹೇಗಿದೆಯೆಂದರೆ, ಒಂದು ಕತೆಯಲ್ಲಿ ಚಿತ್ರಿಸಲಾಗಿರುವಂತೆ, "ಲೋಕದ ಯಾವುದೋ ಕೊನೆಯಲ್ಲಿ ಸಂಕಟವನ್ನು ಉಂಟುಮಾಡುವ ದುರ್ಘಟನೆಯೊಂದರ ಆರಂಭ ನಮ್ಮ ಕಣ್ಣ ಎದುರಿನ ಬಯಲಲ್ಲೇ ಶುರುವಾಗುತ್ತದೆ. ಅಥವಾ ಲೋಕದ ಎಲ್ಲೋ ಮೂಲೆಯಲ್ಲಿ ಶುರುವಾದ ಪರಿಮಳವೊಂದು ನಮ್ಮ ಕಣ್ಣ ಮುಂದೆಯೇ ಹೂವಿನಂತೆ ಅರಳಿ ಇಲ್ಲೇ ಬಾಡಿ ಬಿದ್ದುಬಿಡುತ್ತದೆ. ಲೋಕದ ಸಮಸ್ತ ವಹಿವಾಟುಗಳೂ ಕೊನೆಗೆ ಒಂದು ಸಣ್ಣ ಚೀತ್ಕಾರದೊಂದಿಗೆ ಕೊನೆಗೊಳ್ಳುತ್ತವೆ.” ಈ ಮಾತುಗಳನ್ನು ಪುರಸ್ಕರಿಸುವಂತಿರುವ 'ಅಂತಾರಾಷ್ಟ್ರೀಯ ಕುಂಬಳಕಾಯಿ' ಕತೆಯಲ್ಲಿ ಧಾರ್ಮಿಕ ದಬ್ಬಾಳಿಕೆಗೆ ಕಾರಣವಾದ ಕೃತ್ಯವೊಂದು ಅಂತಾರಾಷ್ಟ್ರೀಯ ನೆಲೆಯಿಂದಲೇ ಹೇಗೆ ಸ್ಥಳೀಯ ಜೀವನವನ್ನು ಪಲ್ಲಟಗೊಳಿಸುತ್ತದೆ ಎಂಬ ವ್ಯಂಗ್ಯವಿದೆ. ಇಲ್ಲಿರುವ ಫೋಟೋಗ್ರಾಫರ್ ರಾಬಿನ್ ಡಿಸಿಲ್ವಾ ಸರ್ವಸಾಕ್ಷಿಪ್ರಜ್ಞೆಯಿದ್ದಂತೆ. ಇವನ ಮೂಲಕ ಅನಾವರಣಗೊಳ್ಳುವ ಪೋಲಿಸ್ ಇಲಾಖೆಯ ಏಎಸೈ, ಭಾರತ ಟಿಬೆಟ್ ಸ್ನೇಹಬಳಗದ ಅಧ್ಯಕ್ಷ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ, ಮಾಜಿ ಸೈನಿಕ, ಕಾಫಿ ತೋಟದಲ್ಲಿ ಕೂಲಿಯಾಗಿರುವ ಅವನ ಹೆಂಡತಿ, ಇವರೆಲ್ಲರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಪರಸ್ಪರ ಸಂಪರ್ಕಕ್ಕೆ ಬರುವುದು ಟಿಬೆಟಿಯನ್ ಕ್ಯಾಂಪಿನ ಮೂವರು ಹಸುಳೆಗಳು ಕಾಣೆಯಾಗುವ ಸಂದರ್ಭದ ನಿಮಿತ್ತ. ಇಲ್ಲಿ ಭೂತಾನದಿಂದ ಆ ಮೂವರು ಹಸುಳೆಗಳನ್ನು ಬಂಧಿಸಿ ತಂದ ಲಾಮಾನ ಕ್ರೌರ್ಯ, ತನ್ನ ಹೆಂಡತಿಯನ್ನು ಹಿಂಸಿಸುವ ಮಾಜಿ ಸೈನಿಕನ ಕ್ರೌರ್ಯ ಎದುರುಬದುರಾಗಿದ್ದರೆ, ಉಳಿದವರದು ಹೇಗಾದರೂ ತಮ್ಮ ಬೇಳೆ ಬೇಯಿಸಿಕೊಳ್ಳಬಯಸುವ ಅಥವಾ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಯಸುವ ತಣ್ಣಗಿನ ಕ್ರೌರ್ಯ. ಈ ವರ್ತುಲದಲ್ಲಿ ನಿವೃತ್ತ ಸೈನಿಕನ ಹೆಂಡತಿ ಮಾತ್ರ ಅಪ್ಪಟ ಮಾನವೀಯತೆಯ ಪ್ರತಿರೂಪವಾಗಿದ್ದಾಳೆ. ಆರ್ಥಿಕ ಅನುಕೂಲವಿಲ್ಲದ, ಕಾನೂನು ಗೋಜಲಿನ ಅರಿವಿಲ್ಲದ, ಗಂಡನ ಬೆಂಬಲವೂ ಇಲ್ಲದ ಈ ಬಡವಿಯೊಬ್ಬಳೇ ಅನಾಥ ಮಕ್ಕಳನ್ನು ತನ್ನ ಮಕ್ಕಳೆಂದು ಬಗೆದು ಆದರಿಸುವವಳು. ರಾಬಿನ್ ಡಿಸಿಲ್ವಾ ತೆಗೆದಿರುವ ಫೋಟೋಗಳಲ್ಲಿ ಅವಳ ಫೋಟೋಗೇ ಒಂದು ವಿಶಿಷ್ಟ ಕಾಂತಿಯಿದೆ.

ರಷ್ಯನ್ ಯೆಹೂದಿ ಕಲಾವಿದ ಮಾರ್ಕ್ ಷಗಾಲ್‌ನ ಪೇಂಟಿಂಗುಗಳಲ್ಲಿ ಪ್ರಕೃತಿವಾದಕ್ಕೋ ವಿಚಾರವಾದಕ್ಕೋ ಎಡೆಯಿರುವುದಿಲ್ಲ. ಸರಿಯಲಿಸ್ಟರು ಕಾವ್ಯದಲ್ಲಿ ಮಾಡಿದ ಪ್ರಯೋಗಗಳನ್ನು ನೆನಪಿಗೆ ತರುವಂಥ ವಿಧಾನವೊಂದನ್ನು ಅನುಸರಿಸಿ ತೀರ ಗಾಢವಾದ ಭಾವಗಳಿಗೂ ನಂಬಿಕೆಗಳಿಗೂ ದೃಶ್ಯರೂಪಕಗಳನ್ನು ರಚಿಸಿದವನು, ಅವನ ಚಿತ್ರಗಳಲ್ಲಿ ಅವಕಾಶದ ಅಥವಾ ಗುರುತ್ವಾಕರ್ಷಣೆಯ ತರ್ಕವನ್ನು ಉಲ್ಲಂಘಿಸುವ ಮನುಷ್ಯರೂಪಗಳು ನಗರಗಳ ಮೇಲಷ್ಟೇ ಅಲ್ಲ, ಮನೆಮಾಡುಗಳ ಮೇಲೆ ಮತ್ತು ಮನೆಗಳೊಳಗೂ ಕೂಡ ನೇರವಾಗಿ, ಇಲ್ಲವೆ ತಲೆಕೆಳಗಾಗಿ, ದೊಂಬರಾಟ ಆಡುತ್ತಿರುವಂತೆ ಹಾರುತ್ತಿರುತ್ತಾರೆ. ನಮ್ಮ ರಶೀದ್ ಕೂಡ ಜೀವನೋತ್ಸಾಹವನ್ನು ಚಿತ್ರಿಸುವ ಮಾರ್ಕ್ ಷಗಾಲನ ಹಾಗೆ, ಸೃಜನಶೀಲ ಕಲ್ಪಕತೆಯೂ ಸೂಕ್ಷ್ಮಜ್ಞತೆಯೂ ಅನುಭವಿಸಲ್ಪಟ್ಟ ಬದುಕೂ ಧಾರಾಳವಾಗಿರುವ ಈ ಕತೆಗಳನ್ನು ಯಾರು ಓದಿದರೂ ಅವರ ಮನಸ್ಸು ವಿನೋದದಿಂದ, ಭಾವತೀವ್ರತೆಯಿಂದ, ಮಧುರ ಯಾತನೆಯಿಂದ, ಮೆಚ್ಚುಗೆಯಿಂದ ಅರಳುತ್ತವೆ.”