ಅಂತಿಮವಾದ

ಅಂತಿಮವಾದ

ಪುಸ್ತಕದ ಲೇಖಕ/ಕವಿಯ ಹೆಸರು
ರವೀಂದ್ರ ಶೆಟ್ಟಿ ಕುತ್ತೆತ್ತೂರು
ಪ್ರಕಾಶಕರು
ದಿಗಂತ ಸ್ಟೇಶನರ್ಸ್ ಎಂಡ್ ಪಬ್ಲಿಷರ್ಸ್, ಯೆಯ್ಯಾಡಿ, ಮಂಗಳೂರು-೫೭೫೦೦೮
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೦೩

ಕಥೆಗಾರ, ಪತ್ರಕರ್ತ ರವೀಂದ್ರ ಶೆಟ್ಟಿ ಕುತ್ತೆತ್ತೂರು ಇವರ ಎರಡನೇ ಕಥಾ ಸಂಕಲನವೇ 'ಅಂತಿಮವಾದ'. ಕರ್ಮವೀರ, ಹೊಸದಿಗಂತ, ಕುಂದಪ್ರಭ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕಥೆಗಳು ಈ ಸಂಕಲನದಲ್ಲಿವೆ. ಈ ಕಥಾ ಸಂಕಲನದಲ್ಲಿ ಅಂತಿಮವಾದ, ದೊಡ್ಮನೆ ನಾಯಿ, ಆಧುನಿಕ ಭಸ್ಮಾಸುರ, ಸೀಮಾ, ತೀರಗಳು, ಕೊರಡು ಕೊನರುವುದೇ?, ಬಲಿ, ದಾರಿ ತೋರಿಸಿದಾಕೆ, ಭ್ರಮೆ, ಹೀಗೊಬ್ಬ ಕಥೆಗಾರ ಎಂಬ ಹತ್ತು ಕಥೆಗಳಿವೆ.

ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಅಮೃತ ಸೋಮೇಶ್ವರ. ಇವರು ತಮ್ಮ ನುಡಿಯಲ್ಲಿ "ಕನ್ನಡದಲ್ಲಿ ಪಂಜೆ ಮಂಗೇಶರಾಯರಿಂದ ತೊಡಗಿದ ಆಧುನಿಕ ಸಣ್ಣ ಕತೆಗಳ ಪರಂಪರೆ ಹರಿಗಡಿಯದೆ ಮುಂದುವರಿದಿದ್ದು, ಪ್ರಮಾಣ, ವೈವಿಧ್ಯ, ಸತ್ವ, ಮೌಲ್ಯಗಳಲ್ಲಿ ಯಾವುದೇ ಇತರ ಭಾಷೆಯ ಸಣ್ಣ ಕತೆಗಳ ಪ್ರಕಾರಕ್ಕೆ ಕಡಿಮೆಯಿಲ್ಲದಂತೆ ಸಂವರ್ಧನಗೊಳ್ಳುತ್ತಾ ಬಂದಿದೆ. ನೂರಾರು ಹಳೆಯ, ಹೊಸ, ಹಿರಿಯ, ಕಿರಿಯ ಕತೆಗಾರರು ಈ ಕ್ಷೇತ್ರವನ್ನು ತಮ್ಮ ವಿಶಿಷ್ಟ ಕೊಡುಗೆಗಳಿಂದ ಸಮೃದ್ಧಗೊಳಿಸಿದ್ದಾರೆ. ತರುಣ ಕತೆಗಾರರಾದ ಶ್ರೀ ರವೀಂದ್ರ ಶೆಟ್ಟಿ ಕುತ್ತೆತ್ತೂರು ಇವರು ಈ ಪರಂಪರೆಗೆ ಈಚಿಗಿನ ಉತ್ತಮ ಸೇರ್ಪಡೆಯಾಗಿದ್ದು, ಮೊದಲ ಓದಿನಲ್ಲಿಯೇ ಓದುಗರ ಗಮನ ಸೆಳೆಯುವ ಮೋಡಿಯನ್ನು ಪ್ರದರ್ಶಿಸಿದ್ದಾರೆ…

ವರ್ತಮಾನ ಕಾಲದಲ್ಲಿ ನಾವು ಕಾಣುವ, ಕೇಳುವ ಹಲವು ವಿಶಿಷ್ಟ ಘಟನೆ, ಸನ್ನಿವೇಶಗಳು ಈ ಸಂಕಲನದಲ್ಲಿ ಸಣ್ಣ ಕತೆಗಳ ಆಕಾರ ಪಡೆದಿದೆ. ಆಧುನಿಕ ಬದುಕಿನ ಆಶೋತ್ತರಗಳು, ಆತಂಕಗಳು, ಸವಾಲುಗಳು, ತಲ್ಲಣಗಳು, ಧಾವಂತ, ವಿಕ್ಷಿಪ್ತತೆ, ಹತಾಶೆ, ಅತಂತ್ರ ಸ್ಥಿತಿ ಇತ್ಯಾದಿಗಳು ಆಧುನಿಕ ಲೇಖಕರನ್ನು ಕಾಡುವುದು ಸಹಜ. ಇಂಥ ವಿದ್ಯಮಾನಗಳಿಗೆ ಈ ಲೇಖಕರೂ ಮಾರ್ಮಿಕವಾಗಿ ಸ್ಪಂದಿಸಿದ್ದಾರೆ. ಇವರ ಕಥನ ಕೌಶಲ ಹಾಗೂ ಬರವಣಿಗೆಯ ಶೈಲಿ ಸಾಕಷ್ಟು ಪ್ರಬುದ್ಧವಾಗಿದೆ. ಕತೆಯ ಓಟದಲ್ಲಿ ಕುತೂಹಲವನ್ನು ಉಳಿಸಿ ಬೆಳೆಸುವ ಶೈಲಿ ಲೇಖಕರಿಗೆ ಕರಗತವಾಗಿದೆ. ನಗರ ಅಥವಾ ಗ್ರಾಮೀಣ ಹೀಗೆ ಯಾವುದೇ ಪರಿಸರದ ಹಿನ್ನಲೆಯನ್ನು ಪರಿಣಾಮಕಾರಿಯಾಗಿ ಇವರು ಚಿತ್ರಿಸಬಲ್ಲರು."  ಅಭಿಪ್ರಾಯ ಪಟ್ಟಿದ್ದಾರೆ.

೫೬ ಪುಟಗಳ ಈ ಪುಸ್ತಕವನ್ನು ರವೀಂದ್ರ ಶೆಟ್ಟಿ ಇವರು ತಮ್ಮ ತೀರ್ಥರೂಪರಾದ ದಿ.ದೊಡ್ಡಣ್ಣ ಶೆಟ್ಟಿ ಇವರಿಗೆ ಅರ್ಪಣೆ ಮಾಡಿದ್ದಾರೆ. ಪುಸ್ತಕದ ಎಲ್ಲಾ ಕಥೆಗಳು ಸರಾಗವಾಗಿ, ಕುತೂಹಲವನ್ನು ಕಾಪಾಡಿಕೊಂಡು ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ.