ಅಂತ್ಯ ಕ್ರಿಯೆ !

ಅಂತ್ಯ ಕ್ರಿಯೆ !

ಮನೋಜ ಹೆಸರಾಂತ ವೈದ್ಯ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡವನಿಗೆ ತಂದೆಯೇ ಜಗತ್ತು. ಶಾಮರಾಯರು, ತಮ್ಮ ಮಗನಿಗಾಗಿ ಜೀವನವನ್ನೇ ಮುಡುಪಾಗಿಟ್ಟಿರುವರೇನೋ ಎಂಬಷ್ಟು ಶ್ರದ್ದೆಯಿಂದ ಮಗನನ್ನು ಬೆಳೆಸಿದ್ದರು. ತಮ್ಮಾಸೆಗಳನ್ನು ಬದಿಗಿಟ್ಟು, ತಮ್ಮ, ತಂಗಿಯರನ್ನು ನೆಲೆ ಕಾಣಿಸಿದ ನಂತರ ಮದುವೆಯಾದ ರಾಯರಿಗೆ ಇದ್ದದ್ದು ಒಂದೇ ಆಸೆ. ತಮ್ಮ ಮಗ ವೈದ್ಯನಾಗಿ ಜನರ ಸೇವೆ ಮಾಡಲಿ ಎಂದು. ಹಾಗೆಂದು ತಮ್ಮಾಸೆಯನ್ನು ಮಗನ ಮೇಲೆ ಹೇರಿರಲಿಲ್ಲ. ಆದರೆ ಮನೋಜ ತನ್ನಿಷ್ಟದಂತೆ ಮತ್ತು ಅಪ್ಪನ ಆಸೆಯಂತೆ ವೈದ್ಯನೇ ಆಗಿದ್ದು, ತಂದೆ-ಮಗನ ಮಧ್ಯೆ ಸಂಬಂಧ ಇನ್ನೂ ಗಟ್ಟಿ ಆಯಿತು.
 
ಹೀಗೊಂದು ಶುಭ ದಿನ ಮನೋಜನ ಕೈ ಹಿಡಿದಳು ಶಾಲಿನಿ. ಚೆನ್ನಾಗಿ ಓದಿಕೊಂಡಿದ್ದರೂ ಮಾವನ ಸೇವೆಗೆ ಮನೆಯಲ್ಲೇ ಉಳಿದಳು. ರಾಯರನ್ನು ’ಮಾವ’ ಎನ್ನುವ ಬದಲು ಅವಳೂ ’ಅಪ್ಪ’ ಎನ್ನುತ್ತಿದ್ದಳು. ಹಾಗಾಗಿ ಶಾಲಿನಿ ಹೊರಗಿನಿಂದ ಬಂದವಳು ಎಂದು ಅನ್ನಿಸಲೇ ಇಲ್ಲ ರಾಯರಿಗೆ. ಒಟ್ಟಿನಲ್ಲಿ ಚಿಕ್ಕ-ಚೊಕ್ಕ ಸಂಸಾರ. ಮನೋಜನ ಚಿಕ್ಕಪ್ಪನ ಅಂದರೆ ಶಾಮರಾಯರ ತಮ್ಮನ ಮಗಳ ಮದುವೆ ಗೊತ್ತಾಯಿತು. ರಕ್ತ ಸಂಬಂಧದಲ್ಲೇ ಮದುವೆ ಎಂದರೆ ಅತಿಥಿಗಳ ಹಾಗೆ ಹೋಗಲಿಕ್ಕಾಗುತ್ತದೆಯೇ? ಹಿಂದಿನ ದಿನವೇ ಎಲ್ಲರೂ ಛತ್ರದಲ್ಲಿ ಸೇರಿದರು. ಬಂಧುಗಳ ಭೇಟಿ, ಸಾಮಾನು ಸರಂಜಾಮು ಸರಿ ಇದೆಯೋ ಇಲ್ಲವೋ ನೋಡುವುದು, ಅಡುಗೆಯವರು ಬಂದಿದ್ದಾರೋ, ಛತ್ರದ ಬಚ್ಚಲು ಸರಿ ಇದೆಯೋ ಇಲ್ಲವೋ ನೋಡುವುದು ಅಬ್ಬಬ್ಬ ಒಂದೇ ಎರಡೇ ... ರಾತ್ರಿ ಊಟದ ನಂತರ ಎಲ್ಲರೂ ಸ್ವಲ್ಪ ಹೊತ್ತು ಒಂದು ರೂಮಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು ... 
 
ಅಷ್ಟರಲ್ಲಿ ...
 
ರೂಮಿನ ಬಾಗಿಲ ಬಳಿ, ಮಾಸಲು ಪಂಚೆ ಉಟ್ಟ, ಹಳೇ ಕೋಟು ತೊಟ್ಟ, ತಲೆಗೆ ಟೋಪಿ ಹಾಕಿಕೊಂಡಿದ್ದ ಒಬ್ಬ ವ್ಯಕ್ತಿ ಬಂದು ನಿಂತರು. ಶಾಮರಾಯರ ಕಡೆ ನೋಡಿ ಸುಮ್ಮನೆ ನಗೆ ಬೀರಿದರು. ಶಾಮರಾಯರ ಎದೆಯಲ್ಲಿ ಏನೋ ಒಂದು ರೀತಿ ಛಳುಕು. "ನಮ್ಮೂರಿನ ಸಿದ್ದಪ್ಪನ ಹಾಗೆ ಇದ್ದಾನಲ್ವ ಆತ" ಎಂದರು. ಮಾತಿನಲ್ಲಿ ಮುಳುಗಿದ್ದ ಮನೋಜ ನಂತರ ತಲೆ ತಿರುಗಿಸಿ ನೋಡಲು ಅಲ್ಲಿ ಯಾರೂ ಇರಲಿಲ್ಲ. ಸುಮ್ಮನಾದ.  ಅಪ್ಪನಿಗೆ ರಾತ್ರಿ ಅಲ್ಲಿ ನಿದ್ದೆ ಸರಿ ಹೋಗೋದಿಲ್ಲ ಎಂದು ಹೇಳಿ ಮೂರೂ ಜನ ಕಾರಿನಲ್ಲಿ ಸಮೀಪದಲ್ಲೇ ಇದ್ದ ತಮ್ಮ ಮನೆಗೆ ವಾಪಸಾದರು. ಮನೋಜನ ತಲೆಯಲ್ಲಿ ಇನ್ನೂ ಆ ಸಿದ್ದಪ್ಪನೇ ಕೂತಿದ್ದ. ಸತ್ತು ಹತ್ತು ವರ್ಷವಾದ ಈ ಸಿದ್ದಪ್ಪ ಏಕಾಏಕಿ ಅಪ್ಪನ ಮನದಲ್ಲಿ ಬಂದದು ಯಾಕೆ? ಊರು ಬಿಟ್ಟು ಬಂದೇ ಎಷ್ಟೊ ವರ್ಷವಾಗಿತ್ತು. ಇನ್ನು ಸಿದ್ದಪ್ಪನ ಸಂಪರ್ಕವಂತೂ ಅಷ್ಟಕ್ಕಷ್ಟೇ. 
 
ಹೇಳಿ ಕೇಳಿ ವೈದ್ಯ. ತನ್ನ ಡೈರಿಯಲ್ಲಿ ಈ ವಿಷಯ ಬರೆದಿಟ್ಟುಕೊಂಡ.
ಮದುವೆಯೂ ಆಯಿತು. ಬೀಗರ ಔತಣದ ಊಟ ಮಾಡುವಾಗ ಅಪ್ಪ ದೂರದಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದರು. ಯಾರು ಎಂದು ಮನೋಜನಿಗೆ ತಿಳಿಯಲಿಲ್ಲ. ಮದುವೆಗೆ ಇಷ್ಟು ಜನ ಬಂದಿದ್ದಾರೆ. ಯಾರೋ ಹಳೇ ಸ್ನೇಹಿತರು ಇರಬೇಕು ಎಂದುಕೊಂಡು ಸುಮ್ಮನಾದ. ಸಂಜೆ ನಾಲ್ಕು ಘಂಟೆಯ ಹೊತ್ತಿಗೆ ಛತ್ರ ಖಾಲಿ ಮಾಡಿ, ಎಲ್ಲರೂ ಸಂತೃಪ್ತಿಯಿಂದ ತಮ್ಮ ತಮ್ಮ ಮನೆ ಹಾದಿ ಹಿಡಿದರು. ಕಾರಿನಲ್ಲಿ ಬರುವಾಗ ಕುತೂಹಲದಿಂದ ಮನೋಜ ಶಾಮರಾಯರನ್ನು ಕೇಳಿದ ಅವರಾರು ಯಾರೆಂದು. ಅದಕ್ಕೆ ಶಾಮರಾಯರು "ಯಾರೋ ಗೊತ್ತಿಲ್ಲಪ್ಪ. ರಾಮೂ ಜೊತೆ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದು ಹೊರಡೋಣವೇ ಅಂದರು. ನಾನು ತಿರುಗಿ ನೋಡಿದರೆ ಇವರು. ನಾನು ಎಲ್ಲಿಗೆ ಅಂದೆ. ನಾನೇನೂ ಹೇಳಲಿಲ್ಲವಲ್ಲ ಅನ್ನೋದೇ. ಆಮೇಲೆ ರಾಮೂನ್ನ ಕೇಳಿದೆ ಅವರು ಏನೆಂದರು ಅಂತ. ರಾಮೂ ಹೇಳಿದ, ಅವರು ಸುಮ್ಮನೆ ಬಂದು ನಿಂತರು ಅಷ್ಟೇ ಅಂತ. ಒಳ್ಳೇ Confusion".
 
ರಾತ್ರಿ ಮಲಗಿದಾಗ ಶಾಲಿನಿ ಕೇಳಿದಳು "ಮನು, ಎನಾಯ್ತು. ತುಂಬಾ ಡಿಸ್ಟರ್ಬ್ ಆಗಿ ಇರೋ ಹಾಗಿದೆ " ಮನೋಜ ಹೇಳಿದ "ಅಪ್ಪ ಕಾರಿನಲ್ಲಿ ಹೇಳಿದ ವಿಷಯ ತುಂಬಾ ಯೋಚನೆ ಮಾಡೋ ಹಾಗಿದೆ". ಶಾಲಿನಿಗೆ ಅರ್ಥವಾಗಲಿಲ್ಲ. ಮನೋಜ ಹೇಳಿದ "ಅಪ್ಪ ಹೇಳಿದ ಸಂಧರ್ಭ ಮತ್ತೊಮ್ಮೆ ನೆನಪಿಸಿಕೊಂಡರೆ, ನಾನು ಕಂಡಂತೆ ಆ ವ್ಯಕ್ತಿ ಮತ್ತು ಅಪ್ಪ ಇಬ್ಬರೇ ಇದ್ದದ್ದು. ಯಾವ ರಾಮೂನೂ ಇರಲಿಲ್ಲ. ಇಷ್ಟಕ್ಕೂ ಈ ರಾಮು ಯಾರು ಅಂತಲೇ ನನಗೆ ಗೊತ್ತಿಲ್ಲ" ! ಶಾಲಿನಿ "ಇತ್ತೀಚೆಗೆ ಹೀಗೆ ಆಗ್ತಿದೆ. ಸ್ವಲ್ಪ ದಿನ ಗಮನಿಸಿ ನೊಡೋಣ" ಅಂದಳು. ಇಬ್ಬರೂ ಮಲಗಿದರು. ಮನೋಜನಿಗೆ ಮನದಿ ಬಂದ ಅಲೋಚನೆಗೆ ಒಮ್ಮೆ ಮೈ ನಡುಗಿತು. ಇದ್ದವರು ನನಗೆ ಕಾಣಿಸುತ್ತಿಲ್ಲವೋ ಅಥವಾ ಅಪ್ಪನಿಗೆ ಇರದವರು ಕಾಣಿಸುತ್ತಿದ್ದಾರೋ ?
 
ಮುಂದಿನ ಎರಡು ದಿನಗಳು ಮಾಮೂಲಿನಂತೆ ಸಾಗಿತು. ಈ ವೈಚಿತ್ರ್ಯಗಳು ತೆರೆಗೆ ಸರಿಯಿತು ಅನ್ನುವಷ್ಟರಲ್ಲಿ ಮತ್ತೊಂದು ಘಟನೆ ನೆಡೆಯಿತು. ಮನೋಜ ಸಂಜೆ ಮನೆಗೆ ಹೋದಾಗ, ಶಾಲಿನಿ ಮುಖ ಸ್ವಲ್ಪ ಕಳೆಗೆಟ್ಟಂತೆ ಇತ್ತು. "ಏನಾಯ್ತು" ಎಂದ. ಶಾಲಿನಿ ನುಡಿದಳು "ಇವತ್ತು ಅಪ್ಪ ಹತ್ತರ ನೋಟು ಹರಿದು ಹಾಕಿದರು. ನಾನು ಕೇಳಿದೆ ಯಾಕೆ ಹಾಗೆ ಮಾಡಿದಿರಿ ಅಂತ. ಅವರಿಗೆ ತಾವು ಏನು ಮಾಡಿದ್ದು ಎಂದು ಅರಿವಾಗಿ ನಾಚಿಕೆಯಿಂದ ತಲೆ ಬಗ್ಗಿಸಿದರು. ನಾನು ಯಾಕಾದರೂ ಕೇಳಿದೆನೋ ಅನ್ನಿಸಿತು. ಸಾರಿ" ! ಮನೋಜ ನುಡಿದ "ಈ ವಾರ ಎರಡು ಮೂರು ಆಪರೇಷನ್ ಮತ್ತೆ ಕೆಲವು ಸೆಮಿನಾರ್’ಗಳು ಇದೆ. ಮುಂದಿನ ವಾರ ನಾನೇ ಚೆಕಪ್’ಗೆ ಕರೆದುಕೊಂಡು ಹೋಗ್ತೀನಿ. ಯೋಚನೆ ಮಾಡಬೇಡ" ಎಂದು ಸಮಾಧಾನಪಡಿಸಿದ.  ತುಂಬಾ ಬ್ಯುಸಿ ಇದ್ದುದರಿಂದ ಆ ವಾರ ಮನೆ ಕಡೆ ಹೆಚ್ಚು ಗಮನಿಸಲು ಆಗಲಿಲ್ಲ ಮನೋಜನಿಗೆ. ಬೇರೇನೂ ಘಟನೆ ನೆಡೆಯದೆ ಇದ್ದುದರಿಂದ ಈ ಚರ್ಚೆ ಹಿಂದಕ್ಕೆ ಸರಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಘಟನೆ ನೆಡೆಯಿತು.
 
ಸಂಜೆ ಏಳಕ್ಕೆ ಮನೋಜ ಮನೆಗೆ ಬಂದಾಗ, ಅಪ್ಪ ಮೈಮೇಲೆ ಶರಟು-ಬನಿಯನ್ ಇಲ್ಲದೆ ಕುರ್ಚಿ ಮೇಲೆ ಕುಳಿತಿದ್ದರು. ತನಗೆ ಬುದ್ದಿ ಬಂದಾಗಿನಿಂದ ಈ ರೀತಿ ಎಂದೂ ನೋಡಿರಲಿಲ್ಲ ಎಂದೆನಿಸಿ ಹಾಗೇ ಒಳಗೆ ನೆಡೆದ. ಇವನು ಮನೆ ಒಳಗೆ ಬಂದಿದ್ದೂ ಶಾಮರಾಯರಿಗೆ ಗೊತ್ತಾಗಲಿಲ್ಲ. ಶಾಲಿನಿ ನುಡಿದಳು "ಅಪ್ಪನಿಗೆ ನಾನೂ ಹೇಳಿದೆ. ಹೊರಗೆ ಛಳಿ ಇದೆ. ಎದೆಗೆ ಥಂಡಿ ಗಾಳಿ ಬಡಿದೀತು. ಶರಟು ಹಾಕಿಕೊಳ್ಳಿ ಅಂತ. ಏನೂ ಜವಾಬು ನೀಡಲಿಲ್ಲ. ಹಾಗೇ ಕುಳಿತಿದ್ದಾರೆ. ಕಾಫಿ ಕೊಡಲೇ ಅಂದೆ. ಬೇಡ ಅಂದರು". ಮನೋಜನಿಗೆ ತಲೆ ತಿರುಗಿದಂತೆ ಆಯಿತು. ಕುರ್ಚಿಯ ಮೇಲೆ ಕುಸಿದು ಕುಳಿತು, ಎರಡೂ ಕೈಯಲ್ಲಿ ಮುಖ ಮುಚ್ಚಿಕೊಂಡ. ದೇಹದಲ್ಲಿನ ಒಂದು ಭಾಗವೇ ಬಿದ್ದು ಹೋಗುತ್ತಿರುವ ಅನುಭವವಾಯಿತು ಅವನಿಗೆ. ಹಿಂದೆಯೇ ಬಂದ ಶಾಲಿನಿ ಅವನ ಹೆಗಲ ಮೇಲೆ ಕೈ ಇಟ್ಟಾಗ, ಮುಖದ ಮೇಲಿಂದ ಕೈ ತೆಗೆದು ಶಾಲಿನಿಯನ್ನು ನೋಡಿದ. ಅವಳು ಹೌದೇ ಎನ್ನುವಂತೆ ನೋಡಿದಳು. ಇವನು ಹೌದು ಎನ್ನುವಂತೆ ತಲೆ ಆಡಿಸಿದ. 
 
ಶಾಲಿನಿಗೆ ದು:ಖ ಉಕ್ಕಿ ಬಂತು.
 
ಜೋರಾಗಿ ಅತ್ತರೆ ಮಾವನಿಗೆ ಎಲ್ಲಿ ತಿಳಿಯುತ್ತದೆಯೋ ಎಂದು ಮೌನವಾಗಿಯೇ ಅತ್ತಳು. ಹೆಣ್ಣಾದರೂ ಅವಳ ಸಂಯಮ ಮೆಚ್ಚಬೇಕಾದ್ದೆ. ಕಣ್ಣೀರು ಹಾಕಿದರೆ ಮಾವನಿಗೆ ಸರಿ ಬರುವುದಿಲ್ಲ ಎಂಬುದನ್ನು ಈ ಮನೆಗೆ ಕಾಲಿಟ್ಟ ದಿನವೇ ಅರಿತಿದ್ದಳು. ಶಾಲಿನಿ ಮನದಲ್ಲಿ ಅಂದಿನ ನೆನಪು ಬಂತು.ಈ ಮನೆಗೆ ಕಾಲಿಟ್ಟಾಗ ಅಳುತ್ತ ಅಪ್ಪ-ಅಮ್ಮನನ್ನು ಬೀಳ್ಕೊಟ್ಟಿದ್ದೆ. ಎಲ್ಲರೂ ಹೋದ ಮೇಲೆ, ನಾನೂ ಸ್ವಲ್ಪ ಶಾಂತಳಾದ ಮೇಲೆ, ಮಾವ ನುಡಿದಿದ್ದರು "ನೀನು ಅತ್ತು ಅವರನ್ನು ಕಳಿಸಿಕೊಟ್ಟರೆ ಅವರಿಗೆ ಧೈರ್ಯ ಕೆಡುತ್ತೆ. ಕಷ್ಟ ಹೇಳಿಕೊಳ್ಳಲು ಒಂದು ಹೆಣ್ಣು ಜೀವ ಇಲ್ಲದ ಈ ಮನೆಯಲ್ಲಿ ಮಗಳು ಹೇಗಿದ್ದಾಳು ಎಂಬ ಆತಂಕ ಅವರನ್ನು ಕಾಡುತ್ತದೆ. ಅದರ ಬದಲಿಗೆ ನಗು ನಗುತ್ತ ಅವರನ್ನು ಕಳಿಸಿಕೊಟ್ಟಲ್ಲಿ, ನಾವು ಬೆಳೆಸಿದ ಮಗಳು ಎಲ್ಲಿದ್ದರೂ ಗೆಲ್ಲುತ್ತಾಳೆ ಎಂಬ ಧೈರ್ಯ ಅವರಲ್ಲಿ ಬರುತ್ತೆ. ನಿನ್ನಲ್ಲೂ ಆತ್ಮ ವಿಶ್ವಾಸ ಮೂಡುತ್ತೆ. ನನ್ನ ಮಾತು ಸರಿ ಎನ್ನಿಸಿದರೆ ಅವರಿಗೆ ಕರೆ ಮಾಡಿ ನಗು ನಗುತ್ತ ನಾಲ್ಕು ಮಾತನಾಡು" ಎಂದಿದ್ದರು. ನಾನು ಕೂಡಲೇ ಅಪ್ಪ-ಅಮ್ಮನಿಗೆ ಕರೆ ಮಾಡಿದ್ದೆ.
ಈ ಮನೆಯ ಮೊದಲ ದಿನವೇ ಮಾವ, ಅಪ್ಪನಾಗಿದ್ದರು.  ಅಂತಹ ’ಅಪ್ಪ’ ಈಗ ..... ಶಾಲಿನಿಗೆ ಮುಂದೆ ಆಲೋಚಿಸುವ ಶಕ್ತಿ ಇರಲಿಲ್ಲ.
---
 
ಮನೋಜ ಆಸ್ಪತ್ರೆಯ ಮುಖ್ಯಾಧಿಕಾರಿಗಳ ಕೋಣೆಯಲ್ಲಿ ಕುಳಿತಿದ್ದ. ಅವರು ಮನೋಜನನ್ನು ಕೇಳಿದರು "ದಿನ ನಿತ್ಯದಲ್ಲಿ ನಿಮ್ಮ ಅವಶ್ಯಕತೆ ನಮಗೆ, ಅದಕ್ಕಿಂತ ಹೆಚ್ಚಾಗಿ ರೋಗಿಗಳಿಗೆ ಎಷ್ಟಿದೆ ಎಂದು ನಿಮಗೆ ಗೊತ್ತು. ಹೀಗಿರುವಾಗ ನೀವು ಎರಡು ತಿಂಗಳು ರಜೆ ಹಾಕಿದರೆ ಹೇಗೆ ? ನಿಮಗೆ ಹೇಳಬಹುದು ಎನ್ನಿಸಿದರೆ ರಜೆ ಏಕೆ ಎಂದು ಕೇಳಬಹುದೇ ?" ಒಬ್ಬ ಅಧಿಕಾರಿಯಾಗಿ ಮನೋಜನನ್ನು ಹೀಗೆ ಕೇಳಿದರು ಎಂದಲ್ಲಿ ಅವನು ಅಲ್ಲಿಗೆ ಎಷ್ಟು ಅನಿವಾರ್ಯ ಎಂಬುದು ತಿಳಿಯುತ್ತದೆ. ಆದರೆ ಅದನ್ನೆಂದೂ ದುರುಪಯೋಗ ಮಾಡಿಕೊಂಡಿರಲಿಲ್ಲ ಮನೋಜ. ಮನೋಜ ನುಡಿದ "ರೋಗಿಗಳ ಯೋಗಕ್ಷೇಮದ ಬಗ್ಗೆ ನನಗೆ ಆತಂಕವಿಲ್ಲ, ಏಕೆಂದರೆ, ಈ ಆಸ್ಪತ್ರೆಯಲ್ಲಿ ನನಗಿಂತ ಉತ್ತಮ ವೈದ್ಯರ ಇದ್ದಾರೆ. ಅವರ ಕೈಯಲ್ಲಿ ನನ್ನ ರೋಗಿಗಳು ಚೆನ್ನಾಗಿ ಆಗುತ್ತಾರೆ ಎಂಬ ಭರವಸೆ ನನಗಿದೆ. ಆದರೆ ನಾನು ಮಾಡಬೇಕೆಂದಿರುವ ಈ ಕೆಲಸಕ್ಕೆ ನಾನೇ ಇರಬೇಕು. ಕೆಲಸ ಹೋಗುತ್ತದೆ ಎಂದರೂ ಈ ರಜೆ ನನಗೆ ಬೇಕೇ ಬೇಕು ಸರ್. ಬಹಳ ಅವಶ್ಯಕ ಕೆಲಸ ಇದೆ". ಅವರು ನುಡಿದರು "ಛೆ! ಛೆ! ಕೆಲಸ ಕಳೆದುಕೊಳ್ಳೋ ಮಾತು ಯಾಕೆ. ಅಂತಹ ತುರ್ತು ಏನಿದೆ ಎಂದು ನಾನು ಕೇಳಿದ್ದು ಅಷ್ಟೇ" ಎಂದು ರಜೆ sanction ಮಾಡಿದರು.
 
"ನಮ್ಮಪ್ಪನ ಅಂತ್ಯ ಕ್ರಿಯೆಗೆ ಈ ರಜೆ" ಎಂದ ಮನೋಜ. ಪಕ್ಕದಲ್ಲೇ ಬಾಂಬು ಸಿಡಿದಂತೆ ಆಯಿತು ಮುಖ್ಯಾಧಿಕಾರಿಗೆ. ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡಿದರು. ಅವರು ಅಧಿಕಾರಿಯೇ ಆಗಿದ್ದರೂ ಮನೋಜನ ಕುಟುಂಬದ ಸದಸ್ಯನಂತೆ ಇದ್ದರು. ಶಾಮರಾಯರನ್ನು ಬಲ್ಲವರು !
 
"ಮನೋಜ್, ನೀವು ನನಗೆ confuse ಮಾಡ್ತಿದ್ದೀರ. ಅಲ್ಲಾ ... ಅದು .." ಎಂದು ಏನು ಹೇಳಬೇಕೆಂದು ತಿಳಿಯದೆ ತಡವರಿಸಿದರು. "ಇಲ್ಲ ಸರ್. ನಮ್ಮಪ್ಪ ಇನ್ನೂ ಸತ್ತಿಲ್ಲ. ಅದೇ ಹಾದಿಯಲ್ಲಿದ್ದಾರೆ. ಶ್ರೀಘ್ರದಲ್ಲೇ ಎಂದು ನನಗೆ ಅನಿಸುತ್ತಿದೆ. ನನ್ನ ಅನಿಸಿಕೆ ತಪ್ಪಿರಬಹುದು. ಹಾಗಿದ್ದಲ್ಲಿ ನಾನೇ ಭಾಗ್ಯಶಾಲಿ."  ಮನೋಜ್, ಸ್ವಲ್ಪ ಶಾಂತರಾಗಿ. ಉದ್ವೇಗ ಮಾಡಿಕೊಳ್ಳಬೇಡಿ. ನಿಮ್ಮ ಅನಿಸಿಕೆ ಧುತ್ತನೆ ಬಂದುದಲ್ಲ ಎಂದು ನಾ ಬಲ್ಲೆ.  ವಿಷಯ ಹೇಳಿ",ಮನೋಜ ನುಡಿದ "ಇದ್ದಕ್ಕಿದ್ದಂತೆ ಇಲ್ಲದವರು ನೆನಪಿಗೆ ಬರುತ್ತಾರೆ. ಹೋದವರನ್ನು ಕಾಣುತ್ತಿದ್ದಾರೆ. ಇಲ್ಲದವರೊಂದಿಗೆ ಮಾತನಾಡಿದಂತೆ ಭ್ರಮಿಸುತ್ತಿದ್ದಾರೆ. ಹಣ, ಬಟ್ಟೆ, ಊಟ ಎಂಬ ವ್ಯಾಮೋಹ ತೊರೆಯುತ್ತಿದ್ದಾರೆ. ಮಗ, ಸೊಸೆ ಎಂಬ ಬಂಧನದಿಂದ ಹೊರ ಬರಲು ಮೌನ ಹೊಂದುತ್ತಿದ್ದಾರೆ. ಅಮ್ಮನನ್ನು ನೆನೆಸಿಕೊಂಡು ನೆನ್ನೆ ಗಂಟೆಗಟ್ಟಲೆ ಸುಮ್ಮನೆ ಕುಳಿತಿದ್ದರು. ಅವರಲ್ಲಿ ಈ ಬದಲಾವಣೆಗಳು ಆಗುತ್ತಿದೆ. ಅವರಿಗೂ ಅದು ಅರಿವಾಗಿರಬಹುದೇನೋ ಆದರೆ ಬಾಯಿ ಬಿಟ್ಟು ಹೇಳುತ್ತಿಲ್ಲ. ಸರ್, ನಮ್ಮಪ್ಪ, ನನ್ನ ದೇಹದ ಒಂದು ಭಾಗವಿದ್ದಂತೆ. ಅವರಿಗೆ ನೋವಾದರೆ ನನಗೂ ಆಗುತ್ತದೆ. ಹಾಗಾಗಿ ಇದೇ ಇಂದಿನ ಪರಿಸ್ಥಿತಿ ಎಂದು ನಾ ಬಲ್ಲೆ." "ಮತ್ತೆ ಅಂತ್ಯ ಕ್ರಿಯೆ ಎಂದೇಕೆ ಹೇಳಿದಿರಿ ಮನೋಜ್. ಹಾಗೆಲ್ಲ ಹೇಳಬೇಡಿ. ಸರಿ ಹೋಗಬಹುದು" ಎಂದರು ಅಧಿಕಾರಿಗಳು.
 
ಮನೋಜ ಒಣ ನಗೆ ನಕ್ಕು "ಸರ್, ನಾನೊಬ್ಬ ವೈದ್ಯ. ಹೋಗ್ಲಿ ಬಿಡಿ. ಸತ್ತಾಗ ಚಿತೆಗೆ ಬೆಂಕಿ ಇಡುವುದು, ಹದಿನೈದು ದಿನ ಅವರ ಹೆಸರಲ್ಲಿ ಬಂಡಿ ಅನ್ನ ತಿನ್ನೋದು, ಪಿಂಡ ಇಡುವುದು ಅಂತ್ಯಕ್ರಿಯೆ ಅಲ್ಲ. ಅಂತ್ಯ ಕಾಲದಲ್ಲಿ ಅವರ ಮನದಲ್ಲಿ ಏನಾದರೂ ಆಸೆ ಇದ್ದಲ್ಲಿ ಅದನ್ನು ಪೂರೈಸುವ ಕ್ರಿಯೆ ’ಅಂತ್ಯ ಕ್ರಿಯೆ’. ಎಲ್ಲ ತೊರೆಯಲು ಯತ್ನಿಸುತ್ತಿರೋ ಇವರಿಗೆ ಅಂಥಾ ಆಸೆಗಳೇನೂ ಇಲ್ಲ ಎಂದೂ ನಾ ಬಲ್ಲೆ. ಅವರಿಗೆ ಹೆಚ್ಚು ಸಮಯವಿಲ್ಲ. ನಾನು ಅವರೊಂದಿಗೆ ಸ್ವಲ್ಪ ದಿನ ಕಳೆಯಬೇಕು. ಅವರ ಮನಕ್ಕೆ ಶಾಂತಿ ನೀಡುವ ಪ್ರಯತ್ನ ಮಾಡುತ್ತೇನೆ. ಅವರು ಸಂತೃಪ್ತಿಯಿಂದ ನಗು ನಗುತ್ತ ಹೋದಲ್ಲಿ ನನ್ನೀ ಜೀವನ ಸಾರ್ಥಕ. ಅದೇ ನನಗೆ ಅವರ ಆಶೀರ್ವಾದ. ಎಷ್ಟೋ ಜನರಿಗೆ ಈ ಭಾಗ್ಯ ಸಿಗುವುದಿಲ್ಲ. ಏಕೆಂದರೆ, ಈ ರೀತಿ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ಹೋದ ಮೇಲೆ ದು:ಖಿಸುತ್ತಾರೆ. ಇಲ್ಲ, ಇಲ್ಲ. ಹಾಗಾಗಲು ನಾ ಬಿಡಲಾರೆ. ಅಪ್ಪನನ್ನು ನಗು ನಗುತ್ತ ಕಳಿಸಿಕೊಡಬೇಕು .... ಅಷ್ಟೇ .. ಅಷ್ಟೇ " ಎಂದು ಹೇಳುತ್ತಲೇ ಬಿಕ್ಕಿ ಬಿಕ್ಕಿ ಅತ್ತ ಮನೋಜ.
 
ಆಗ ಅವನು ವೈದ್ಯನಾಗಿರಲಿಲ್ಲ. ಜೀವದ ಗೆಳೆಯನನ್ನು ಕಳೆದುಕೊಳ್ಳುತ್ತಿರುವ ಸ್ನೇಹಿತನಾಗಿದ್ದ ... ಗುರುವನ್ನು ಕಳೆದುಕೊಳ್ಳುತ್ತಿರುವ ಶಿಷ್ಯನಾಗಿದ್ದ ... ತಂದೆಯನ್ನು ಕಳೆದುಕೊಳ್ಳುತ್ತಿರುವ ಒಬ್ಬ ಮಗನಾಗಿದ್ದ !

Comments

Submitted by Shobha Kaduvalli Mon, 02/18/2013 - 21:54

ಭಲ್ಲೆಯವರೇ, "ಅಂತ್ಯಕ್ರಿಯೆ"ಯ ಸರಿಯಾದ ಅರ್ಥವನ್ನು ತಿಳಿಸಿದ್ದೀರಿ. ಕಥೆ ಮನಸ್ಸನ್ನು ತಟ್ಟುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
Submitted by bhalle Tue, 02/19/2013 - 21:25

In reply to by ಗಣೇಶ

ಈ ಕಥೆ ಬರೆದೇ ಒಂದೆರಡು ವರ್ಷಗಳಾದರೂ ಪ್ರಕಟಿಸಲು ಆಗಿರಲಿಲ್ಲ ... ಮನಸ್ಸು ಬರಲಿಲ್ಲ ಅನ್ನೋದು ಉತ್ತಮ ಎನಿಸುತ್ತದೆ. ಕವಿಗಳ ಲೇಖನ ಓದಿದ ಮೇಲೆ ಇದು ಪೂರಕ ಎನ್ನಿಸಿತು. ಧನ್ಯವಾದಗಳು ಗಣೇಶಜಿ ...
Submitted by venkatb83 Tue, 02/19/2013 - 17:30

"ಸತ್ತಾಗ ಚಿತೆಗೆ ಬೆಂಕಿ ಇಡುವುದು, ಹದಿನೈದು ದಿನ ಅವರ ಹೆಸರಲ್ಲಿ ಬಂಡಿ ಅನ್ನ ತಿನ್ನೋದು, ಪಿಂಡ ಇಡುವುದು ಅಂತ್ಯಕ್ರಿಯೆ ಅಲ್ಲ. ಅಂತ್ಯ ಕಾಲದಲ್ಲಿ ಅವರ ಮನದಲ್ಲಿ ಏನಾದರೂ ಆಸೆ ಇದ್ದಲ್ಲಿ ಅದನ್ನು ಪೂರೈಸುವ ಕ್ರಿಯೆ ’ಅಂತ್ಯ ಕ್ರಿಯೆ’." "ಎಷ್ಟೋ ಜನರಿಗೆ ಈ ಭಾಗ್ಯ ಸಿಗುವುದಿಲ್ಲ. ಏಕೆಂದರೆ, ಈ ರೀತಿ ಸೂಚನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ಹೋದ ಮೇಲೆ ದು:ಖಿಸುತ್ತಾರೆ." >>>ಭಲ್ಲೆ ಅವ್ರೆ ನಾ ನಿಮ್ಮನು ಕೆಲ ತಿಂಗಳುಗಳಿಂದ ಬಲ್ಲೆ...! ನಾ ನೋಡಿದ ಹಾಗೆ ನೀವ್ ಈ ತರಹದ ಕಥೆ-ಬರಹ ಬರೆದ ನೆನಪಿಲ್ಲ(ಅದೊಮ್ಮೆ ತಾಯಿಯವರ ಬಗ್ಗೆ ಬರೆದದ್ದು -ಅದೋ ನೈಜ ಘಟನೆ)... ಇದು ಕಲ್ಪಿತ ಕಥೆ ಅನ್ಸುತ್ತೆ... ನಿಮ್ಮ ಬಹುಪಾಲು ಬರಹಗಳಲ್ಲಿನ ಭಲ್ಲೆ ಅವರ ಶೈಲಿ ಇಲ್ಲಿಲ್ಲ-ಆದರೆ ಅದರ ಕಥಾ ವಸ್ತು-ನಿರೂಪಿಸಿದ ಶೈಲಿಯಿಂದ ಮನದಲ್ಲಿ ಒಂಥರಾ ಅವ್ಯಕ್ತ ಭಾವ ಮೂಡುವ ಹಾಗೆ ಮಾಡುವುದು... ಇದ್ದಾಗ ಚೆನ್ನಾಗಿ ನೋಡಿಕೊಳ್ಳದೆ-ಇಲ್ಲದಿರೆ ಏನೆಲ್ಲಾ ಮಾತಾಡಿ ಏನುಪಯೋಗ? ಇಲ್ಲದಿರುವುದರ ಅರಿವು ಪ್ರಾಮುಖ್ಯತೆ ಅದಿಲದಿರುವಾಗಲೆ ಅರಿವಾಗುವುದು..ಸತ್ಯ.. ಈಗಂತೂ ದೈನಂದಿನ ಗಡಿಬಿಡಿ- ಹಡಾವುಡಿ ಜೀವನ ಶೈಲಿಯಲ್ಲಿ ಒಂದರೆ ಕ್ಷಣ ನಿಂತು ಕಣ್ಣಲಿ ಕಣ್ಣಿಟ್ಟು ನೋಡುತ ಮುಕ್ತವಾಗಿ ಮಾತಾಡುವವರನ್ನು ಕಾಣೋದೆ ಕಷ್ಟ ಆಗಿದ್ದು ಆ ತರಹದ ಸನ್ನಿವೇಶಗಳನ್ನು ಸಿನೆಮ ಧಾರಾವಾಹಿಗಳಲ್ಲಿ ನೋಡಿ ಅರೆ ಕ್ಷಣ ನಾವೂ ಹಾಗಿದ್ದರೆ ಹೇಗೆ ಎಂಬ ಭಾವ ಬಂದರೂ ಮತ್ತೆ ಗಡಿಬಿಡಿಗೆ ಮರಳಿ ಅದೂ ಮರೆತು ಹೋಗುವುದು....:((( ನಮ್ಮ ಪ್ರೀತಿ ಪಾತ್ರರಿಗಾಗಿ ಸಮಯ ಮೀಸಲಾಗಿಡೋಣ-ಮುಕ್ತವಾಗಿ ಮಾತಾಡಿ ಸದಾ ನಗುತ್ತಿರೋಣ ಬಾಳಿ ಬದುಕೋಣ.. ಶುಭವಾಗಲಿ.. \।
Submitted by bhalle Tue, 02/19/2013 - 21:33

In reply to by venkatb83

ಈ ಕಥೆಯ ವಸ್ತುವೇ ಹಾಗೇ ಸಪ್ತಗಿರಿ ... ಭಾವನೆಗಳ ಕಡಲಲ್ಲಿ ಒಮ್ಮೆ ಮುಳುಗಿಸಿ ಮೇಲಕ್ಕೆತ್ತುತ್ತದೆ ... ನಿಮ್ಮ ಮಾತುಗಳು ಸತ್ಯ ... ತುಂಬಾ ಸೀರಿಯಸ್ ವಿಷಯಗಳ ಮೇಲೆ ನನ್ನ ಬರಹಗಳು ಕಡಿಮೆ ... ಹಾಸ್ಯ ಒಂದು ತುಣುಕೂ ಈ ಕಥೆಯಲ್ಲಿ ಇಲ್ಲ ... ಈವರೆಗೆ ಎಷ್ಟು ಬಾರಿ ಈ ಕಥೆ ಓದಿದ್ದೇನೋ ಅಷ್ಟೂ ಬಾರಿ ಮನಸ್ಸಿಗೆ ವೇದನೆ ಆಗಿದ್ದಿದ್ದೆ. ಇನ್ನು ಈ ಕಥೆ ನೈಜವೇ? ನನ್ನ ಜೀವನದಲ್ಲಿ ಅಲ್ಲದಿದ್ದರೂ ಯಾರದಾದರೂ ಜೀವನದಲಿ ಆಗಿರಲು ಸಾಧ್ಯ ... ಹಾಗಾಗಿ ಇದನ್ನು ಸತ್ಯ ಘಟನೆ ಅನ್ನೋಣ.
Submitted by kavinagaraj Tue, 02/19/2013 - 20:22

ಮಕ್ಕಳ ನೈಜ ಕರ್ತವ್ಯವನ್ನು ನೆನಪಿಸುವ ಉತ್ತಮವಾದ ಕಥೆ! ಮನ ತುಂಬಿಬಂದಿತು. ಹೃದಯಪೂರ್ವಕ ಅಭಿನಂದನೆಗಳು, ಭಲ್ಲೆಯವರೇ.
Submitted by bhalle Tue, 02/19/2013 - 21:37

In reply to by kavinagaraj

ಧನ್ಯವಾದಗಳು ಕವಿಗಳೇ ... ನಿಮಗೆ ಮಾತು ಕೊಟ್ಟಂತೆ ಒಂದು ಕಥೆಯನ್ನು ಪ್ರಕಟಿಸಿದ್ದೇನೆ. ಮತ್ತೊಂದು ಶ್ರೀಘ್ರದಲ್ಲಿ ... ಈ ಕಥೆಯನ್ನು ಓದಿದಾಗ ನನಗೇ ಅನ್ನಿಸುತ್ತೆ, ಇದು ಬರೀ ಕಥೆಯಲ್ಲ ಅಂತ.
Submitted by shejwadkar Tue, 03/19/2013 - 18:26

ವ್ಹಾ... ವ್ಹ್ಹಾ..... ವ್ಹಾ........ ಎಂಥ ಕಥೆ ಭಲ್ಲೆಯವರೇ.... ಕ್ಷಮಿಸಿ ಇದು ಕಥೆ ಅಲ್ಲ. ತನ್ನನ್ನ ಹೊತ್ತು ಹೆತ್ತು ಸಾಕಿದವರನ್ನ ಕೊನೆಗಾಲದಲ್ಲಿ ಅಲಕ್ಷಿಸಿ, ಅವರಿಟ್ಟ ಹಣ ಆಸ್ತಿಗಳಿಗಾಗಿ ಹೊಡೆದಾಡುತ್ತ. ಮನೆಯ ಹೊರಗಿನ ಕೊಣೆಯಲ್ಲಿ ಪ್ರ್ರಾಣಿಯಂತೆ ಇಟ್ಟು, ಅಥವ ಅನಾಥಾಶ್ರಮಕ್ಕೆ ಸೇರಿಸುವ, ದುಸ್ಟರಿಗೆ........... ಇದೊಂದು ಚಾಟಿ ಏತಟು...... ಸತ್ತಮೇಲೆ ದೊಡ್ಡ ಫೊಟೊ ಹಾಕಿ ದಿನವಿಡೀ ಪೂಜೆ ಮಾಡಿದರೇನು ಫಲ? ಅಂತ್ಯಕ್ರಿಯೆ....... ಆ ಪದದ ಅರ್ಥ್ವನ್ನೆ ಬದಲಾಇಸಿದಿರಿ............. ಕಥೆಯಲ್ಲಿ ಮನೊಜ ಆ ಶಬ್ದ ಬಳಸಿದಾಗ ಖಂಡಿತ ವಾಗೂ ಶಾಕ್ ಆಗಿತ್ತು. ಮುಂದೆ ಅದರ ಅರ್ಥ್ ವಿವರಿಸಿದಾಗ............ ಬೆರಗಾಗಿ ಹೊದೆ. ತುಂಬಾನೆ ಒಳ್ಳೆಯ ಚಿಂತನೆ ಧನ್ಯವಾದಗಳು
Submitted by bhalle Mon, 04/01/2013 - 05:00

In reply to by shejwadkar

ಶ್ರೀನಾಥರೇ ನಿಮ್ಮ ಪ್ರತಿಕ್ರಿಯೆಗೆ ತುಂಬಾ ತಡವಾಗಿ ಮರು ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ ಕ್ಷಮೆ ಇರಲಿ ಇದ್ದಾಗ ನೋಡಿಕೊಳ್ಳದೆ ಹೋದ ಮೇಲೆ ದೊಡ್ಡ ಪಟ ಇಟ್ಟು ಅವರ ಮೂಗಿಗೆ ಸೇರಿದ ಗಂಧದ ಹಾರ ಹಾಕಿ ಶೋಕಿ ಮಾಡುವ ಹಲವಾರು ಮಂದಿ ಇದ್ದಾರೆ. ಬಹಳ ಚೆನ್ನಾಗಿ ಹೇಳಿದಿರಿ. ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು