ಅಂದದ ಕೈಗೆ ಬಣ್ಣದ ಬಳೆಗಳು

ಅಂದದ ಕೈಗೆ ಬಣ್ಣದ ಬಳೆಗಳು

ಕವನ

ಅಂದದ ಕೈಯಲಿ ಬಣ್ಣದ ಬಳೆಗಳು

ಚಂದದಿ ಮಿರುಗಿವೆ ಫಳಫಳನೆ

ವಂದನೆ ಮಾಡುವ ಕರಗಳ ನೋಡಿರಿ

ನಂದನ ಖುಷಿಯದು ಥಳಥಳನೆ||

 

ಕಿನ್ನರಿ ಮೊಗವದು ಹಾಸದಿ ಮಿಂಚಿದೆ

ಬನ್ನಿರಿ ನೋಡಲು ಅವಳಂದ

ಚಿನ್ನದ ಬಣ್ಣದಿ ಸೊಬಗನು ಸೂಸಿವೆ

ಹೊನ್ನುಡಿ ಚೆಲ್ಲುವ ನುಡಿಯಂದ||

 

ಕಿಂಕಿಣಿ ಬಾರಿಸಿ ಢಮರುಗ ನುಡಿಸುತ

ಕಂಕಣದಿಂದಲೆ ಮಿರುಗುವಳು

ಕಂಕರಿ ವಾದ್ಯದ ಜತನದಿ ಸೇರುತ

ಪಂಕಜ ಹೂವಳು ಹೊಳೆಯುವಳು||

 

ಹಸಿರಿನ ಬಳೆಗಳು ಶುಭವನು ಸೂಚಿಸಿ

ಸಸಿಮೊಗ ಬಿಂಬದಿ ಶೋಭಿತವು

ವಿಸರುಹ ದಳವದು ಮೃದುದಲಿ ತೇಲುವ

ವಸುಮತಿ ಮಡಿಲಲಿ ಭೂಷಿತವು||

 

ಶುಭಕರ ಬಳೆಯಿವು ಹೆಣ್ಣಿನ ಬಾಳಲಿ

ಸಬಲೆಗೆ ಬೆಂಬಲ ಮಾರ್ಗವಿದು

ತಬಲದ ಜೊತೆಯಲಿ ದನಿಯನು ಗೂಡಿಸಿ

ಗಭಸ್ತಿ ಬೆಳಕಿನ ರಾಗವಿದು||

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್