ಅಂದದ ವಿಸ್ಮೃತಿ ( ಕವನ )

ಅಂದದ ವಿಸ್ಮೃತಿ ( ಕವನ )

ಕವನ

 


ಬೆಳದಿಂಗಳ ರಾತ್ರಿಯಲಿ ಸ್ವಪ್ನದ ಹೊಳೆಯಲಿ


ಒಲವ ನಾವೆಯನೇರಿ ಹೊರಡೋಣ ವಿಹಾರ


ಬೀಸುತಿಹ ತಂಗಾಳಿ ಸುಳಿದಾಡಿ ನಿನ್ನ ಬಳಿ


ನೇವರಿಸುತಿದೆ  ನಿನ್ನ ಹಾರುವ ಮುಂಗುರುಳು


 


ನೀಲ ದಿಗಂತದಲಿ ಬಿಡಿಸಿದ ನೀಲ ಚಿತ್ತಾರ


ನೀರಿನಲಿ ಹೊಳೆವ ಚುಕ್ಕಿಗಳ ಬಡಿವಾರ


ಕಣಿವೆಗಳ ಕೊರಳಿಂದ ಹರಿದು ಬರುತಿದೆ ಗಾನ


ಓ ! ನಲ್ಲೆ ನನ್ನೆದೆ ತುಂಬ ನಿನದೆ ಧ್ಯಾನ


 


ತಣ್ಣನೆಯ ಜಾವದ ಹಿತಕರ ತಂಗಾಳಿ


ಹೊತ್ತು ತರುತಿದೆ ಮಲ್ಲಿಗೆಯ ಮಧುರ ಕಂಪು


ಯಾರ ಒಲವಿನದಿದು ಮುರಳಿ ನಾದದ ಇಂಪು


ಕೃಷ್ಣ ರಾಧೆಯರ ಮಧುರ ಸಲ್ಲಾಪದಿಂಪು


 


ಮೆಲ್ಲಗೆ ಸಾಗುತಿವೆ ಬಿಳಿ ಮೋಡವಲ್ಲಲ್ಲಿ


ಸಾಗುತಿದೆ ಒಲವ ನಾವೆ ಪ್ರೇಮ ಕಡಲಲ್ಲಿ


ಚೆಂ ದದ ಪ್ರಕೃತಿ ಅಂದದ ವಿಸ್ಮೃತಿ


ಚಂದ್ರಕಂಸ ರಾಗದಲಿ ಹಾಡೋಣ ಗೆಳತಿ


 


ಧ್ಯಾನಸ್ಥ ಸ್ಥಿತಿಯಲಿ ಏಕೆ ಕುಳಿತಿರುವೆ ?


ಮನದಂತರಾಳದಲಿ ಏನು ಯೋಚಿಸುತಿರಿಉವೆ ?


ಮಧುರಾನುಭವ ತರುವ ಬೆಳದಿಂಗಳು


ಅನವರತ ಬೆರೆಯಲೆಮ್ಮ ತನು ಮನಗಳು


 


ರಾತ್ರಿ ಕಳೆಯದಿರಲಿ ಸೂರ್ಯ ಬೆಳಗದಿರಲಿ


ಶಾಶ್ವತವಾಗಿರಲಿ ಹು್ಣ್ಣಿಮೆಯ ಬೆಳದಿಂಗಳು


ನೀನೊಬ್ಬಳು  ಎನ್ನ ಜೊತೆಗಿರೆ ಸಾಕು


ಹಸಿವೆ ಬಾಯಾರಿಕೆ ಹಂಗು ನಮಗೇಕೆ ಬೇಕು?


 


ಎಲ್ಲ ಭಾವಗಳಲಿ ಪ್ರೇಮ ಭಾವವು ಮೇಲು


ಎಲ್ಲ ರಾಗಗಳಲಿ ಪ್ರೇಮ ರಾಗ !


ಯುಗಗಳು ಬರಲಿ ಮನ್ವಂತರಗಳು ಹೋಗಲಿ


ನಮ್ಮಿಬ್ಬರ ಒಲವು ಶಾಶ್ವತವಾಗಿರಲಿ


 

Comments