ಅಂಧರ ಬಾಳಿನ ಬೆಳಕಾದ ಲೂಯಿ ಬ್ರೈಲ್

ಅಂಧರ ಬಾಳಿನ ಬೆಳಕಾದ ಲೂಯಿ ಬ್ರೈಲ್

ಮಾನವನ ಪ್ರತಿಯೊಂದು ಅಂಗಾಂಗವೂ ಅತ್ಯಮೂಲ್ಯ. ಯಾವುದಕ್ಕೂ ಬೆಲೆಕಟ್ಟಲಾಗದು. ಅದರಲ್ಲೂ ಕಣ್ಣುಗಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಈ ಸುಂದರ ಪ್ರಪಂಚವನ್ನು ನೋಡಲು ನಮಗೆ ಸಹಾಯ ಮಾಡುವುದೇ ಕಣ್ಣುಗಳು. ಆದರೆ ದುರಾದೃಷ್ಟವಶಾತ್ ಪ್ರಪಂಚದಲ್ಲಿ ಲಕ್ಷಾಂತರ ಮಂದಿ ಹುಟ್ಟುವಾಗಲೇ ಅಂಧರಾಗಿ ಜನಿಸುತ್ತಾರೆ. ಕೆಲವರು ನಂತರದ ದಿನಗಳಲ್ಲಿ ವಿವಿಧ ಕಾರಣಗಳಿಂದ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಬಿಡುತ್ತಾರೆ. ಅಂಧರ ಬದುಕು ಎಷ್ಟೊಂದು ಕಷ್ಟ ಎಂಬುದು ನಮಗೆ ಅರಿವಿರಲಾರದು. ವಿಜ್ಞಾನದಲ್ಲಾದ ಹಲವಾರು ಬೆಳವಣಿಗೆಗಳು ಅಂಧರ ಬಾಳಿಗೆ ಬೆಳಕು ತಂದಿವೆ. ನೇತ್ರದಾನದಿಂದ ಇಬ್ಬರು ಅಂಧರ ಬಾಳು ನಾವು ಬೆಳಗಬಹುದಾಗಿದೆ. ಈ ಸಂಗತಿ ಈಗ ಬಹಳವಾಗಿ ಪ್ರಚಾರದಲ್ಲಿದೆ. ಬಹಳಷ್ಟು ಮಂದಿ ತಮ್ಮ ಮರಣಾನಂತರ ಕಣ್ಣುಗಳನ್ನು ದಾನವಾಗಿ ನೀಡುತ್ತಿದ್ದಾರೆ. ಇದು ಅಭಿನಂದನಾರ್ಹ ಸಂಗತಿ.

ಆದರೆ ನಾನು ಈಗ ಹೇಳ ಹೊರಟಿರುವ ಸಂಗತಿ ಅದಲ್ಲ. ಅಂಧರಿಗೆ ಅಕ್ಷರಾಭ್ಯಾಸ ಮಾಡಿಸಿ, ಅವರಿಗೋಸ್ಕರ ಒಂದು ಲಿಪಿಯನ್ನೇ ಕಂಡು ಹಿಡಿದ ಮಹಾನ್ ವ್ಯಕ್ತಿ ಲೂಯಿಸ್ (ಲೂಯಿ) ಬ್ರೈನ್ ಬಗ್ಗೆ. ಇಂದು ಈ ಮಹಾತ್ಮರ ಜನ್ಮದಿನ. ಲೂಯಿ ಬ್ರೈನ್ ದಿನವನ್ನು ವಿಶ್ವ ಬ್ರೈಲ್ ದಿನವೆಂದು ಕರೆಯುತ್ತಾರೆ. 

ದೃಷ್ಟಿ ವಿಕಲಚೇತನರ ಬಾಳಿನಲ್ಲಿ ಬೆಳಕಾದ ಲೂಯಿ ಬ್ರೈಲ್ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ನಿಮಗೊಂದು ಸಂಗತಿಯನ್ನು ಮೊದಲಿಗೇ ಹೇಳಿಬಿಡುವೆ. ಲೂಯಿ ಬ್ರೈಲ್ ಕೂಡಾ ಸ್ವತಃ ಅಂಧರಾಗಿದ್ದೇ ಈ ಸಾಧನೆ ಮಾಡಿದರು ಎಂದರೆ ನಿಮಗೆ ಅಚ್ಚರಿಯಾದೀತು ಅಲ್ಲವೇ? ಇದು ಸತ್ಯ. ಹುಟ್ಟುವಾಗ ಎಲ್ಲರಂತೆ ನೋಡಲು ಸಾಧ್ಯವಿದ್ದ ಲೂಯಿ ಮೂರು ವರ್ಷದವನಿದ್ದಾಗ ಒಮ್ಮೆ ತನ್ನ ತಂದೆಯ ಕಾರ್ಖಾನೆಗೆ ಹೋಗಿದ್ದ. ಅವನ ತಂದೆ ಕುದುರೆ ಸವಾರರಿಗೆ ಅವಶ್ಯಕವಾಗಿದ್ದ ಚರ್ಮದ ಜೀನ್ ತಯಾರಿಸುವ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಹೋಗಿದ್ದ ಬಾಲಕ ಲೂಯಿ ಅಲ್ಲಿಯೇ ಇದ್ದ ಚರ್ಮವೊಂದನ್ನು ದಬ್ಬಣದಿಂದ ತೂತು ಮಾಡಲು ಹೋಗಿ ತನ್ನ ಎಡಕಣ್ಣಿಗೆ ಏಟು ಮಾಡಿಕೊಳ್ಳುತ್ತಾನೆ. ಹತ್ತೊಂಬತ್ತನೇ ಶತಮನದಲ್ಲಿ ನಮ್ಮ ವೈದ್ಯಕೀಯ ವಿಜ್ಞಾನ ಅಷ್ಟಾಗಿ ಬೆಳವಣಿಗೆ ಹೊಂದಿರಲಿಲ್ಲ. ಲೂಯಿ ಬ್ರೈನ್ ಹೆತ್ತವರು ತಮಗೆ ಗೊತ್ತಿದ್ದ ಗಿಡಮೂಲಿಕೆಗಳಿಂದ ಅವನ ಕಣ್ಣಿನ ಶುಷ್ರೂಷೆ ಮಾಡುತ್ತಾರೆ. ಆದರೆ ಈ ಮದ್ದು ಸಹಕಾರಿಯಾಗುವುದಿಲ್ಲ. ಅವನ ಎಡಕಣ್ಣು ಊದಿ ಕೆಂಪಾಗಿ, ಅದರಲ್ಲಿ ಕೀವಾಗಿ ಅವನು ಕಣ್ಣನ್ನು ಕಳೆದುಕೊಳ್ಳುತ್ತಾನೆ. ಅದೇ ಕೀವು ಸೋಂಕಾಗಿ ಸರಿಯಾಗಿದ್ದ ಅವನ ಬಲಗಣ್ಣನ್ನೂ ಬಲಿತೆಗೆದು ಬಿಡುತ್ತದೆ. ಇದರ ಪರಿಣಾಮವಾಗಿ ಸಣ್ಣ ವಯಸ್ಸಿನಲ್ಲೇ ಬಾಲಕ ಲೂಯಿಯ ದೃಷ್ಟಿಯು ಮಂಜಾಗಿ ಕ್ರಮೇಣ ಕಳೆದುಕೊಳ್ಳುತ್ತಾ ಹೋಗುತ್ತಾನೆ. ತನ್ನ ಐದನೇ ವಯಸ್ಸಿನಲ್ಲಿ ಅವನು ಶಾಶ್ವತ ಅಂಧನಾಗಿ ಬಿಡುತ್ತಾನೆ. 

೧೮೦೯ರ ಜನವರಿ ೪ರಂದು ಫ್ರಾನ್ಸ್ ದೇಶದ ಕೂವ್ರೆ ಗ್ರಾಮದಲ್ಲಿ ಸೈಮನ್ ಬ್ರೈಲ್ ಹಾಗೂ ಮೋನಿಕಾ ಬ್ರೈಲ್ ಇವರ ಸುಪುತ್ರನಾಗಿ ಜನಿಸುತ್ತಾನೆ ಲೂಯಿಸ್ ಬ್ರೈಲ್ ( Louis Braille). ಮೇಲಿನ ಘಟನೆಯಿಂದ ಲೂಯಿಸ್ ಬ್ರೈಲ್ ಅಥವಾ ಲೂಯಿ ಧೃತಿಗೆಡುವುದಿಲ್ಲ. ತನಗೆ ಕಣ್ಣು ಕಾಣುವುದಿಲ್ಲ ಎಂದು ಸುಮ್ಮನಿರದೇ, ತನ್ನ ಓದು ಮತ್ತು ವಿದ್ಯಾಭ್ಯಾಸದತ್ತ ಗಮನ ಹರಿಸುತ್ತಾನೆ. ತನ್ನಂತೇ ಕಣ್ಣುಕಾಣದವರಿಗಾಗಿ ಓದಲು ಸಹಾಯವಾಗುವಂತೆ ಏನಾದರೂ ಲಿಪಿಯ ಸಂಶೋಧನೆ ಮಾಡಬೇಕೆಂಬ ತುಡಿತ ಅವನಲ್ಲಿ ಸದಾ ಇರುತ್ತಿತ್ತು. ಒಂದು ಪೇಪರ್ ತುಂಡಿನಲ್ಲಿ ಸೂಜಿಯಂತಹ ವಸ್ತುವಿನಿಂದ ಚುಕ್ಕಿಗಳನ್ನು ಮಾಡಿ ಅದನ್ನು ಕೈಯ ಬೆರಳಿನ ಸಂವೇದನೆಯಿಂದ ಓದುವ ಒಂದು ಲಿಪಿಯನ್ನು ಅನ್ವೇಷಣೆ ಮಾಡಿದಾಗ ಲೂಯಿಗೆ ಬರೇ ೧೫ ವರ್ಷ ವಯಸ್ಸು. ಇದನ್ನು ಗಮನಿಸಿದ ಕೆಲವು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರೂ ಅದನ್ನು ಬಳಸುವುದು ಕಷ್ಟ ಎಂದು ವಿರೋಧಿಸಿದವರು ಅನೇಕರು. ನಂತರದ ದಿನಗಳಲ್ಲಿ ಈ ಲಿಪಿಯಲ್ಲಿ ಸುಧಾರಣೆಯನ್ನು ಮಾಡಿ ಪ್ರತಿಯೊಂದು ಅಕ್ಷರಕ್ಕೂ ಬೇರೆ ಬೇರೆ ವಿಧದ ಆಕಾರಗಳನ್ನು ಪೇಪರ್ ನಲ್ಲಿ ಚುಚ್ಚಿ ಮೊದಲಿನ ಲಿಪಿಯನ್ನು ಪರಿಷ್ಕರಿಸಿದರು. ಇದರಿಂದ ಅಂಧರ ಬಾಳಿನಲ್ಲಿ ಹೊಸ ಬೆಳಕಿನ ಸಾಧ್ಯತೆಯೊಂದು ಗೋಚರಿಸತೊಡಗಿತು 

ಅಂಧರಿಗಾಗಿ ಲೂಯಿ ಬ್ರೈಲ್ ಗೂ ಮೊದಲು ಕೆಲವೊಂದು ಲಿಪಿಗಳು ಚಾಲ್ತಿಯಲ್ಲಿ ಇದ್ದುವು. ಆದರೆ ಅವುಗಳು ಸ್ಪಷ್ಟವಾಗಿರದೇ ಅವುಗಳನ್ನು ಕೈಬೆರಳಿನ ಸಂವೇದನೆಯಿಂದ ಓದಲು ಸಾಧ್ಯವಾಗುತ್ತಿರಲಿಲ್ಲ. ಪ್ಯಾರಿಸ್ ನ 'ದಿ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ಲೈಂಡ್ ಯೂತ್ ಸಂಸ್ಥೆ' ನಡೆಸುವ ಶಾಲೆಯಲ್ಲಿ ತಾಮ್ರದ ತಂತಿಯಿಂದ ವರ್ಣಮಾಲೆಯ ಅಕ್ಷರಗಳನ್ನು ತಯಾರು ಮಾಡಿ, ಅದನ್ನು ಬೆಂಕಿಯಲ್ಲಿ ಕಾಯಿಸಿ ಮೇಣದ ಕಾಗದದ ಮೇಲೆ ಒತ್ತಲಾಗುತ್ತಿತ್ತು. ಆದರೆ ಇದರಲ್ಲಿ ಅಕ್ಷರಗಳು ಅಸ್ಪಷ್ಟವಾಗಿ ಮೂಡುತ್ತಿದ್ದುದರಿಂದ ಓದಲು ಬಹಳ ತ್ರಾಸವಾಗುತ್ತಿತ್ತು. ಫ್ರಾನ್ಸ್ ನ ಸಿಪಾಯಿ ಪಡೆಯಲ್ಲಿ ಉಬ್ಬಿದ ಚುಕ್ಕೆ ಹಾಗೂ ಗೆರೆಗಳನ್ನು ಬಳಸಿ ರಾತ್ರಿ ಬರವಣಿಗೆಯನ್ನು ರೂಪಿಸಲಾಗಿತ್ತು. ಇದನ್ನು ಅಂಧರ ಕಲಿಕೆಗೆ ಬಳಸಲು ಯೋಚಿಸಿದರೂ ಅವೂ ಸರಾಗ ಓದಿಗೆ ಸಹಕಾರಿಯಾಗಿರಲಿಲ್ಲ.

ಆದರೆ ಲೂಯಿ ಶಬ್ದಗಳನ್ನು ಗುರುತಿಸುವ ಗೆರೆ, ಚುಕ್ಕಿಗಳ ಬದಲಾಗಿ ಚುಕ್ಕೆಗಳನ್ನು ಅಕ್ಷರಗಳಿಗೆ ಸಾಕೇತಿಕವಾಗಿ ಹೊಂದುವಂತೆ ಮಾಡಿದರು. ದಪ್ಪ ಕಾಗದದ ಮೇಲೆ ಚಿಕ್ಕ ಮೊಳೆ (ಸ್ಟೈಲಸ್) ಯ ಸಹಾಯದಿಂದ ಕೇವಲ ೬ ಚುಕ್ಕೆಗಳಿಂದ ೬೩ ವಿನ್ಯಾಸಗಳನ್ನು ರೂಪಿಸಿದರು. ಇದರಿಂದಾಗಿ ಇಡೀ ವರ್ಣಮಾಲೆಯ ಅಕ್ಷರ ಹಾಗೂ ಚಿನ್ಹೆಗಳಿಗೆ ಸಂಕೇತ ಕಂಡು ಹಿಡಿಯಲು ಸಾಧ್ಯವಾಯಿತು. ಇದು ತಾಂತ್ರಿಕವಾಗಿ ಮೊದಲಿದ್ದ ಎಲ್ಲಾ ವಿಧಾನಗಳಿಗಿಂತಲೂ ಸುಲಭವಾಗಿತ್ತು. ಆದರೆ ಜನರಿಂದ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಮತ್ತೆ ಪ್ರಯತ್ನ ಮಾಡಿ ಲೂಯಿ ಈ ಲಿಪಿಗಳನ್ನು ಪರಿಷ್ಕರಿಸಿದರು. ೧೮೪೪ರ ಹೊತ್ತಿಗೆ ಈ ಲಿಪಿಗೆ ಮಾನ್ಯತೆ ದೊರೆತು ಜನಮಾನ್ಯವಾಯಿತು.

೧೯೫೬ರಲ್ಲಿ ಕ್ಷಯ ರೋಗಕ್ಕೆ ತುತ್ತಾದ ಲೂಯಿ ಬ್ರೈಲ್ ನಿಧನಹೊಂದಿದರು. ಅವರ ನಿಧನದ ನಂತರ ಅವರ ಗೌರವಾರ್ಥ ಈ ಲಿಪಿಗೆ ಅವರದ್ದೇ ಹೆಸರು ನೀಡಲಾಯಿತು. ಬ್ರೈಲ್ ಲಿಪಿ ಎಂದು ಕರೆಸಿಕೊಂಡು ಲೂಯಿ ಹೆಸರಲ್ಲಿ ಹಲವಾರು ಅಂಧರ ಶಾಲೆಗಳು ತೆರೆಯಲ್ಪಟ್ಟವು. ಅವರ ಹುಟ್ಟೂರಿನಲ್ಲಿ ಅವರ ಸ್ಮರಣಾರ್ಥ ಅಮೃತ ಶಿಲೆಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಯಿತು. ಲೂಯಿ ಬ್ರೈಲ್ ಅವರ ನಿಧನದ ಸುಮಾರು ೧೦೦ ವರ್ಷಗಳ ನಂತರ ಫ್ರಾನ್ಸ್ ಸರಕಾರವು ೧೯೫೨ರಲ್ಲಿ ಅವರ ಸಮಾಧಿಯನ್ನು ಅಗೆದು ಅವರ ಶವವನ್ನು ಹೊರತೆಗೆದು ಅದಕ್ಕೆ ಸೂಕ್ತ ಸರಕಾರಿ ಮರ್ಯಾದೆ ಮತ್ತು ಗೌರವನ್ನು ನೀಡಿ ಪ್ಯಾರಿಸ್ ನ ಪಾಂಥೆಯೋ ಶ್ಮಶಾನದಲ್ಲಿ ಮರು ಸಮಾಧಿ ನಿರ್ಮಾಣವನ್ನು ಮಾಡಿದರು. 

ಬ್ರೈಲ್ ಲಿಪಿಯ ಅವಿಷ್ಕಾರವಾದ ಸುಮಾರು ಒಂದು ಶತಮಾನದ ಬಳಿಕ ಇದು ಭಾರತವನ್ನು ಪ್ರವೇಶಿಸಿತು. ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಬ್ರೈಲ್ ಲಿಪಿಯ ಬಳಕೆ ಇದೆ. ಈ ಲಿಪಿಯನ್ನು ಕಂಪ್ಯೂಟರ್ ಗಳಲ್ಲೂ ಅಳವಡಿಕೆ ಮಾಡಲಾಗಿದೆ. ಬ್ರೈಲ್ ಲಿಪಿಯನ್ನು ಮುದ್ರಿಸಲು ಮುದ್ರಣ ಯಂತ್ರಗಳ ಆವಿಷ್ಕಾರವೂ ಆಗಿದೆ. ದೃಷ್ಟಿ ವಿಕಲಚೇತನರ ಅನುಕೂಲಕ್ಕಾಗಿ ಹಲವಾರು ಬ್ರೈಲ್ ಲಿಪಿಯಲ್ಲಿ ಮುದ್ರಿತವಾದ ಪುಸ್ತಕಗಳು, ಶೈಕ್ಷಣಿಕ ಸಾಮಗ್ರಿಗಳು, ವಾಕಿಂಗ್ ಸ್ಟಿಕ್ ಗಳು ಎಲ್ಲವೂ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ನಲ್ಲಿರುವ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವಿಶ್ಯುವಲ್ ಹ್ಯಾಂಡಿಕ್ಯಾಪ್ ಸಂಸ್ಥೆಯ ಮೂಲಕ ದೇಶದಾದ್ಯಂತ ಪೂರೈಸಲಾಗುತ್ತಿದೆ. 

೨೦೧೮ರ ನವೆಂಬರ್ ತಿಂಗಳಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯು ಜನವರಿ ೪ ನ್ನು ವಿಶ್ವ ಬ್ರೈಲ್ ದಿನ ಎಂದು ತೀರ್ಮಾನಿಸಿತು. ಅದರಂತೆ ೨೦೧೯ರ ಜನವರಿ ೪ ನ್ನು ಮೊತ್ತ ಮೊದಲ ಬಾರಿಗೆ ವಿಶ್ವ ಬ್ರೈಲ್ ದಿನ ಎಂದು ಆಚರಿಸಲಾಯಿತು. ನಮ್ಮ ಸಮಾಜದಲ್ಲಿ ಹಲವಾರು ಮಂದಿ ದೃಷ್ಟಿ ಹೀನರು ಸಾಧನೆಯ ಶಿಖರವೇರಿದ್ದಾರೆ. ಖ್ಯಾತ ಲೇಖಕಿ ಹೆಲನ್ ಕೆಲ್ಲರ್ ಇವರಿಗೆ ಕಿವಿಯೂ ಕೇಳಿಸುತ್ತಿರಲಿಲ್ಲ, ಮಾತೂ  ಬರುತ್ತಿರಲಿಲ್ಲ, ಅದರ ಮೇಲೆ ದೃಷ್ಟಿಯೂ ಕಾಣಿಸುತ್ತಿರಲಿಲ್ಲ. ಕವಿ ಜಾನ್ ಮಿಲ್ಟನ್, ಹುಟ್ಟು ಅಂಧರಾಗಿ ಸಂಗೀತದಲ್ಲಿ ಸಾಧನೆ ಮಾಡಿದ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ಮುಂತಾದವರನ್ನು ಮರೆಯಲು ಸಾಧ್ಯವೇ? ಇವರೆಲ್ಲರೂ ತಮ್ಮ ದೈಹಿಕ ವೈಕಲ್ಯವನ್ನು ಮೆಟ್ಟಿ ನಿಂತು ಜಯಿಸಿದವರು. ಇಂದು ಜನವರಿ ೪, ಲೂಯಿಸ್ ಬ್ರೈಲ್ ಜನ್ಮ ದಿನ. ಅವರು ಮಾಡಿದ ಸಾಧನೆಯಿಂದ ಈಗಲೂ ಲಕ್ಷಾಂತರ ಮಂದಿ ಬ್ರೈಲ್ ಲಿಪಿಯನ್ನು ಬಳಸುತ್ತಿದ್ದಾರೆ. ಅವರ ನೆನಪಿಗೊಂದು ಸಲಾಂ.

ಚಿತ್ರ : ಅಂತರ್ಜಾಲ ತಾಣ