ಅಂಪೈರ್ ಮೇಡಂ

ಕನ್ನಡ ಸಾಹಿತ್ಯದಲ್ಲಿ ಕೆ. ಸತ್ಯನಾರಾಯಣರ ಕಾದಂಬರಿಗಳು ತಮ್ಮ ವಿಶಿಷ್ಟ ಶೈಲಿಯಿಂದಲೇ ಗುರುತಿಸಿಕೊಂಡಿವೆ. ಅವರ ಕಾದಂಬರಿಗಳು ಕೇವಲ ಕಥೆಯನ್ನು ಹೇಳುವುದಕ್ಕಿಂತಲೂ, ಮನುಷ್ಯನ ಜೀವನದ ಆಳವಾದ ಭಾವನೆಗಳನ್ನು, ಸಂಕೀರ್ಣ ಸಂಬಂಧಗಳನ್ನು, ಮತ್ತು ಸಮಾಜದ ವೈರುಧ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ಈ ಕಾದಂಬರಿಯು ಒಬ್ಬ ವೃದ್ಧೆಯ ಕಥೆಯಿಂದ ಆರಂಭವಾಗಿ, ಆಕೆಯ ಜೀವನದ ಕೆಲವು ನೋವಿನ ಕ್ಷಣಗಳ ಜಾಡಿನಿಂದ ಸಮಾಜದ ವಿವಿಧ ಆಯಾಮಗಳನ್ನು ತೆರೆದಿಡುವ ಕಾದಂಬರಿಯಾಗಿ ರೂಪುಗೊಳ್ಳುತ್ತದೆ.
ಕಥೆಯ ಸಾರಾಂಶ: ಒಬ್ಬ ಹಿರಿಯಾಕೆಯ ಕೆಲವು ಮಾತುಗಳಿಂದ ಆರಂಭವಾಗುವ ಈ ಕಥೆ, ಆಕೆಯ ಸಂಬಂಧಿಕರ ಜೀವನದ ವಿವಿಧ ಘಟ್ಟಗಳನ್ನು ಸಾಹಿತಿಯೊಂದಿಗೆ ಸಂಪರ್ಕಕ್ಕೆ ತಂದು, ಒಂದು ಸಂಪೂರ್ಣ ಚಿತ್ರಣವನ್ನು ರಚಿಸುತ್ತದೆ. ಈ ಜಾಡು, ಆಕಸ್ಮಿಕವೋ ಅಥವಾ ಯೋಜಿತವೋ ಎಂಬ ಸಂಶಯವನ್ನು ಹುಟ್ಟಿಸುತ್ತದೆ. ಕಾದಂಬರಿಕಾರರು, ಸಂಬಂಧಗಳ ಗಟ್ಟಿತನ ಮತ್ತು ಒಡಕಿನ ಸೂಕ್ಷ್ಮತೆಯನ್ನು ಅತ್ಯಂತ ಕೌಶಲ್ಯದಿಂದ ಚಿತ್ರಿಸಿದ್ದಾರೆ.
ಕಾದಂಬರಿಯ ಕೇಂದ್ರಬಿಂದುವಾದ ವಿಮಲಾಬಾಯಿಯ ಕಥೆಯು, ಜಾತಿಗಳ ನಡುವಿನ ಘರ್ಷಣೆ, ಸಾಮಾಜಿಕ ಒತ್ತಡಗಳು ಮತ್ತು ವೈಯಕ್ತಿಕ ಆಯ್ಕೆಗಳ ಸಂಘರ್ಷವನ್ನು ಎತ್ತಿ ತೋರಿಸುತ್ತದೆ. ವಿಮಲಾಳ ಅಕ್ಕ ಮಾಲಿನಿಯ ಅಂತರ್‌ಧರ್ಮೀಯ ವಿವಾಹವು ಸಿರಿವಂತಿಕೆಯ ಹಿನ್ನೆಲೆಯಿಂದ ಸ್ವೀಕಾರಾರ್ಹವಾದರೂ, ವಿಮಲಾಳ ಆಯ್ಕೆಯನ್ನು ಒಪ್ಪದ ಮನೆಯವರ ಸ್ವಾರ್ಥಪರತೆಯನ್ನು ಕಾದಂಬರಿಕಾರರು ತೆರೆದಿಡುತ್ತಾರೆ. ವರದಕ್ಷಿಣೆಯಂತಹ ಸಾಮಾಜಿಕ ಒತ್ತಡಗಳು ಮತ್ತು ಮಾನವ ಸ್ವಭಾವದ ದ್ವಂದ್ವಗಳು ಕಥೆಯಲ್ಲಿ ಸೂಕ್ಷ್ಮವಾಗಿ ಚಿತ್ರಿತವಾಗಿವೆ.
ಕಾದಂಬರಿಯ ಶೀರ್ಷಿಕೆಯಾದ ‘ಅಂಪೈರ್ ಮೇಡಂ’ ವಿಮಲಾಳ ಅಣ್ಣ ವಲ್ಲಭನ ಕ್ರಿಕೆಟ್ ಆಟದಿಂದ ಉದ್ಭವಿಸುತ್ತದೆ. ಅವನ ಆಟದ ಯಶಸ್ಸಿಗೆ ತಕ್ಕಂತೆ, ವಿಮಲಾಳಿಗೆ “ಬ್ಯಾಟ್ಸ್‌ಮನ್ ತಂಗಿ” ಅಥವಾ “ಸ್ಪಿನ್ನರ್ ಮೇಡಂ” ಎಂಬ ಗುರುತುಗಳು ದೊರಕುತ್ತವೆ. ಈ ಗುರುತುಗಳು ಆಕೆಯ ಸ್ವಂತ ಅಸ್ತಿತ್ವಕ್ಕಿಂತಲೂ ಬೇರೆಯವರ ಯಶಸ್ಸಿನಿಂದ ರೂಪಿತವಾಗಿವೆ ಎಂಬ ಅನುಮಾನವನ್ನು ಕಾದಂಬರಿಯು ಹುಟ್ಟಿಸುತ್ತದೆ. ಈ ಸಂಗತಿಯೇ ಕಾದಂಬರಿಯ ಕೇಂದ್ರೀಯ ವಿಷಯವಾಗಿದ್ದು, ವೈಯಕ್ತಿಕ ಗುರುತು ಮತ್ತು ಸಾಮಾಜಿಕ ಒತ್ತಡಗಳ ನಡುವಿನ ಸಂಘರ್ಷವನ್ನು ಚರ್ಚಿಸುತ್ತದೆ.
ಈ ಕಾದಂಬರಿಯು ಕೇವಲ ಒಂದು ಕಥೆಯಾಗಿ ಮಾತ್ರವಲ್ಲದೆ, ಸಂಬಂಧಗಳ ಸೂಕ್ಷ್ಮತೆ, ಸಾಮಾಜಿಕ ಶ್ರೇಣೀಕರಣ, ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹೋರಾಟವನ್ನು ಚಿತ್ರಿಸುವ ಒಂದು ಆಳವಾದ ಚಿಂತನೆಯಾಗಿದೆ. ಸತ್ಯನಾರಾಯಣರ ಶೈಲಿಯು ಓದುಗರನ್ನು ಕಾಡುವಂತಹ ಪ್ರಶ್ನೆಗಳನ್ನು ಎದುರಿಗಿಟ್ಟು, ಜೀವನದ ಸಂಕೀರ್ಣತೆಯನ್ನು ಒಡಮೂಡಿಸುತ್ತದೆ.
ತಮ್ಮ ಕಾದಂಬರಿಯ ಬಗ್ಗೆ ಕೆ ಸತ್ಯನಾರಾಯಣ ಇವರು ಹೇಳುವುದು ಹೀಗೆ… “ಸುಮಾರು ೫೨ ವರ್ಷಗಳ ಹಿಂದೆ ಮಂಡ್ಯದ ಸಮೀಪದಲ್ಲಿರುವ ಹಳ್ಳಿಯೊಂದಕ್ಕೆ ಗೆಳೆಯರೊಬ್ಬರನ್ನು ನೋಡಲು ಹೋಗಿದ್ದೆ.ಭೇಟಿಯ ನಂತರ ಇಬ್ಬರೂ ವಾಪಸ್ ಬರುತ್ತಿದ್ದಾಗ, ಗ್ರಾಮದ ಪ್ರವೇಶ ಭಾಗದಲ್ಲಿ ನಡುವಯಸ್ಸನ್ನು ಮೀರಿದ ಹೆಂಗಸರೊಬ್ಬರು ಎದುರಾದರು. ಗೆಳೆಯ ಅವರನ್ನು ಪರಿಚಯಿಸಿದ. ಆಕೆ ದಣಿದಿದ್ದರು. ಮುಖದಲ್ಲಿ ಆಯಾಸವಿತ್ತು, ವ್ಯಗ್ರತೆಯಿತ್ತು. ಅವರಿಗೇ ಅವರ ಬಗ್ಗೆ ಯಾವ ರೀತಿಯ ಆಸಕ್ತಿಯೂ ಇರಲಿಲ್ಲವೆಂದು ಅವರ ವೇಶಭೂಷಣ, ಕೇಶವಿನ್ಯಾಸ, ಉಸಿರಾಟಕ್ಕಿಂತ ನಿಟ್ಟುಸಿರೇ ಮುಖ್ಯವಾದ ಆಂಗಿಕಭಾಷೆಯಿಂದ ವ್ಯಕ್ತವಾಗುತ್ತಿತ್ತು. ಬೆಂಗಳೂರಿನ ಪ್ರಸಿದ್ಧ ಕುಟುಂಬವೊಂದಕ್ಕೆ ಸೇರಿದ್ದ ಆಕೆ ತುಂಬಾ ಆಯಾಸದ ಧ್ವನಿಯಲ್ಲಿ ಎರಡು ಮೂರು ವಾಕ್ಯಗಳಲ್ಲಿ ತಮ್ಮ ಒಂಟಿತನದ ಬದುಕನ್ನು ಕುರಿತು ಹೇಳಿಕೊಂಡರು. ಏಕೆ ಅವರು ನನಗೆ ಆವತ್ತು ಸಿಕ್ಕಿದರು? ಏಕೆ ಎರಡು ಮೂರು ವಾಕ್ಯಗಳಲ್ಲೇ ತಮ್ಮ ಬದುಕನ್ನು ಕುರಿತು ಹೇಳಿಕೊಂಡರು?
ಎಂಟು ಹತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ಆಕೆಯ ಕುಟುಂಬದ, ಸಮಾಜದ ಬೇರೆ ಬೇರೆ ವಲಯಗಳೊಡನೆ ನನಗೆ ಹಲವು ಸ್ತರಗಳ ಒಡನಾಟ ಬಂತು. ನನ್ನ ತಂಗಿ ಮತ್ತು ತಮ್ಮನ ಕುಟುಂಬ ಕೂಡ ಇವರೆಲ್ಲ ವಾಸಿಸಿದ, ವಾಸಿಸುತ್ತಿದ್ದ (ಕ್ರಮೇಣ ಕಣ್ಮರೆಯಾದ) ನಗರದ ಭಾಗದಲ್ಲೇ ವಾಸಿಸುತ್ತಿದ್ದರು. ಈ ಬಡಾವಣೆಗಳ ಸುತ್ತ ಬದುಕು ಕಟ್ಟಿಕೊಂಡಿದ್ದ, ಕಟ್ಟಿಕೊಳ್ಳಲಾಗದೇ ಹೋದ ಬೇರೆ ಸಮುದಾಯಗಳ ಜನ ಕೂಡ ಒಡನಾಟಕ್ಕೆ ಸಿಕ್ಕಿದರು. ಇವರೆಲ್ಲರ ಬದುಕಿಗೂ, ನನ್ನ ಬದುಕಿಗೂ ಪರಸ್ಪರ ಸಂಬಂಧ ಇದೆ, ಇವರೆಲ್ಲ ಅಸಾಮಾಜಿಕವಾಗಿ ಆದರೆ ಸಾಂಸ್ಕೃತಿಕವಾಗಿ ಮತ್ತು ಮಾನವೀಯವಾಗಿ ನನ್ನ ಜ್ಞಾತಿಗಳು ಎಂಬುದು ಕಾದಂಬರಿಯನ್ನು ಬರೆಯುವಾಗ ತಿಳಿದು, ಮನಸ್ಸು ತುಂಬಿ ಬಂತು.
ಹನ್ನೆರಡು ಹದಿನೈದು ವರ್ಷಗಳ ನಂತರ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾಗ, ಎರಡು ಮೂರು ನಿಮಿಷದಲ್ಲಿ ತನ್ನ ಬದುಕಿನ ಬಗ್ಗೆ ಹೇಳಿಕೊಂಡಾಕೆಯ ಸಮುದಾಯದವರ ಒಡನಾಟ ಮತ್ತೆ ಸಿಕ್ಕಿತು. ಇವರೆಲ್ಲ ಬೆಂಗಳೂರಿಗೆ, ಕರ್ನಾಟಕಕ್ಕೆ, ಮೈಸೂರಿಗೆ ಆಗಾಗ್ಗೆ ಬಂದು ಹೋಗಿದ್ದರು. ಈ ಕಾದಂಬರಿಯಲ್ಲಿ ಬರುವ ಎಲ್ಲರನ್ನೂ ಭೇಟಿ ಮಾಡಿದ್ದರು.
ವಿವಾಹ, ಕುಟುಂಬ ವ್ಯವಸ್ಥೆಯಿಂದ ಹೊರಬಂದು, ಕಲಾವಿದೆಯಾಗಿ ತನ್ನ ಬದುಕನ್ನು, ತನ್ನ ಮಗಳ, ಮೊಮ್ಮಗಳ ಬದುಕನ್ನು ಕಟ್ಟಿಕೊಳ್ಳಲು ಹೋಗಿ ಹೈರಾಣಾಗಿದ್ದ, ಆದರೆ ಗೆಲ್ಲುತ್ತಿದ್ದ ಹಿರಿಯಾಕೆಯೊಬ್ಬರು ಇವರೆಲ್ಲರ ಬದುಕಿನಲ್ಲಿ ಪ್ರವೇಶಿಸಿಯೂ ಪ್ರವೇಶಿಸದ ಹಾಗೆ ನಿರ್ದೇಶಿಸುತ್ತಿದ್ದರು. “ನೋಡಿ ನನ್ನ ಮಗಳನ್ನು. ಮದುವೆ, ಮಕ್ಕಳು, family ಅಂತ ಅಡ್ಡದಾರಿ ಹಿಡಿಯಲು ಹೊರಟಿದ್ದಾಳಲ್ಲ” ಎಂದು ನನ್ನ ಬಳಿ ಒಮ್ಮೆ ಅಲವತ್ತುಕೊಂಡಾಗ, ಆ ಧೀಮಂತ ಮಹಿಳೆ, ನಾವೆಲ್ಲ ಬದುಕುತ್ತಿರುವ ರೀತಿಯನ್ನು ವ್ಯಾಖ್ಯಾನಿಸುತ್ತಿರುವಂತೆಯೂ, ಈ ಬರವಣಿಗೆಗೂ ಮುಂದಿನ ಬರವಣಿಗೆಗೂ ಬೇಕಾದ ದೃಷ್ಟಿಕೋನ, ಪ್ರಬುದ್ಧತೆಯನ್ನು ದಾನ ಮಾಡುತ್ತಿರುವಂತೆಯೂ ಕಂಡಿತು. ಸುಂದರಮ್ಮ ಎಂಬ ಕಲ್ಪಿತ ಹೆಸರಿರುವ ಆಕೆಗೂ, ಆಕೆ ಸೇರಿದ ನರಸೀಪುರ, ಮೂಗೂರು ಸೀಮೆಗೂ, ಅವರೆಲ್ಲರ ಕಳೆದು ಹೋದ ಬದುಕಿನ ವಿನ್ಯಾಸಕ್ಕೂ ಈ ಬರವಣಿಗೆ ನಾನಾ ರೀತಿಯಲ್ಲಿ ಋಣಿಯಾಗಿದೆ.
ಇದೆಲ್ಲ ಸೇರಿ ಒಂದು ಕಾದಂಬರಿಯಾಗುತ್ತದೆ ಎಂದು ಹಲವು ವರ್ಷಗಳಿಂದ ನನಗೆ ನಾನೇ ಹೇಳಿಕೊಂಡಿದ್ದರೂ, ಬರೆಯಲು ಧೈರ್ಯ ಬಂದಿರಲಿಲ್ಲ. ಈ ವರ್ಷದ ಮೊದಲ ಆರೇಳು ತಿಂಗಳು ಸಿಯಾಟಲ್‌ನಲ್ಲಿ ಮಗನ ಮನೆಯಲ್ಲಿ ಇದ್ದಾಗ ಬರೆಯುವ ಹೆಣಗಾಟ ಶುರುವಾಯಿತು. ಮೊದ ಮೊದಲ ಪುಟಗಳೊಡನೆ ಹೋರಾಡುತ್ತಿದ್ದಾಗ ನನ್ನ ಮಗ ಚಂದನ್, ಕಾದಂಬರಿ ಯಾತರ ಬಗ್ಗೆ, ಯಾರ ಬಗ್ಗೆ ಎಂದು ಕೇಳಿದ. ಅರ್ಧ ಶತಮಾನದ ಹಿಂದಿನ ನೆನಪು ಹೇಳಿದೆ. ಅಷ್ಟು ಹಿಂದಿನ ನೆನಪು ಈಗ ಬರವಣಿಗೆಯಲ್ಲಿ ರೂಪಾಂತರಗೊಳ್ಳುವಾಗ, ನೆನಪಿನ ಹಿಂದೆಯೇ ಬರವಣಿಗೆಗೆ ಬೇಕಾದ ಒತ್ತಡ ಮತ್ತು ಜೀವಂತಿಕೆಯನ್ನು ಕೂಡ ತಾನೇ ತಾನಾಗಿ ಎಳೆದುಕೊಂಡುಬರುತ್ತದೆ, ಪಟ್ಟು ಹಿಡಿದು ಬರಿ ಎಂದು ಪ್ರೋತ್ಸಾಹಿಸಿದ. ಅವನು ಹೇಳಿದ ಹಾಗೆಯೇ ಆಯಿತು. ಪ್ರಾರಂಭದ ಪ್ರಸವ ವೇದನೆಯ ನಂತರ ಬರವಣಿಗೆ ಕೈ ಹಿಡಿಯಿತು. ೧೯೨ ಪುಟಗಳ ಈ ಕಾದಂಬರಿಯು ಉತ್ತಮ ರೋಚಕ ಕಾದಂಬರಿಯ ಓದಿಗೆ ರಹದಾರಿ.