ಅಂಬೇಡ್ಕರ್ ಜಯಂತಿ, ಕೆಜಿಎಫ್ ಚಿತ್ರ ಮತ್ತು ಕನ್ನಡ ಮಾಧ್ಯಮಗಳು
ಏಪ್ರಿಲ್ 14....
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನ ಹಾಗೂ ಕೆಜಿಎಫ್ ಚಾಪ್ಟರ್ ೨ ಚಲನಚಿತ್ರ... ಯಾವುದು ಬ್ರೇಕಿಂಗ್ ನ್ಯೂಸ್...? ಯಾವ ಸುದ್ದಿಗೆ ಎಷ್ಟು ಮಹತ್ವ ಕನ್ನಡ ಸುದ್ದಿ ಮಾಧ್ಯಮಲೋಕದಲ್ಲಿ ನೀಡುತ್ತಾರೆ ಎಂಬುದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ...
ಸಿನೆಮಾ ಮತ್ತು ಸಿನಿಮಾ ನಟ ಸಂವಿಧಾನ ರಚನಾಕಾರರ ಓವರ್ ಟೇಕ್ ಮಾಡಿದ ಸುದ್ದಿಯನ್ನು ನಿಮ್ಮ ಮುಂದಿಡುತ್ತಾ… 75 ವರ್ಷಗಳ ಹಿಂದೆಯೇ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಸಂವಿಧಾನದಲ್ಲಿ ಒಂದು ಮಹತ್ವದ ಅಂಶವೆಂದು ಸ್ಥಾನ ಕಲ್ಪಿಸಿದ ವ್ಯಕ್ತಿಗೆ ಮಾಧ್ಯಮ ತೋರುತ್ತಿರುವ ಗೌರವ ಎಷ್ಟು? ಮೀರ್ ಸಾದಕರು ಯಾರು ? ನಮಕ್ ಹರಾಮ್ ಗಳು ಯಾರು ? ಮೌಲ್ಯಗಳ ಅಧಃಪತನದ ಕಾರಣರಾರು ? ಎಂದು ಯೋಚಿಸುತ್ತಾ....
ಸುದ್ದಿ ಸಂಪಾದಕನೊಬ್ಬ " Violence Violence Violence I don't like Violence But Violence likes me " ಎಂಬ ಸಿನಿಮಾದ ಸಂಭಾಷಣೆಯನ್ನು ಅತ್ಯದ್ಭುತ ಎಂಬುದಾಗಿ ತಾನು ಸಹ ಅದನ್ನು ಮತ್ತೆ ಮತ್ತೆ ಉಚ್ಚರಿಸುವ ಮೂಲಕ ಅದಕ್ಕೆ ಪ್ರಚಾರ ನೀಡಿದ. ಹಿಂಸೆಯ ಪ್ರಚೋದನೆ ಒಂದು ಸುದ್ದಿ ಮಾಧ್ಯಮದ ಸಂಪಾದಕರಿಂದ. ಉಪ್ಪಿನಕಾಯಿಯೇ ಊಟವಾದರೇ - ಮನರಂಜನೆಯೇ ಬದುಕಿಗೆ ಮಹತ್ವವಾದರೇ - ಕೊರೋನಾ ನಾಲ್ಕನೆಯ ಅಲೆಯ ಭೀತಿಯ ಸಮಯದಲ್ಲಿ ನಮ್ಮ ಆದ್ಯತೆಗಳು ಏನಿರಬೇಕು?
ಆದರ್ಶಗಳನ್ನು ಹೇಳುವವರೇ ಹೆಚ್ಚಾದರೆ ಪಾಲಿಸುವವರು ಯಾರು ? ಎಲ್ಲರಿಗೂ ಹೊಟ್ಟೆ ಪಾಡು ನಿಜ. ಮಾಧ್ಯಮದವರಿಗೂ ಸಹ. ಆದರೆ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗಗಳು ಯಾವುದು ? ವಿದ್ಯಾರ್ಥಿಯೊಬ್ಬ ಹೆಚ್ಚು ಅಂಕ ಪಡೆಯಲು ಕಷ್ಟ ಪಟ್ಟು ಓದಬೇಕೆ ಅಥವಾ ಕಾಪಿ ( ನಕಲು ) ಮಾಡಬೇಕೆ ? ವ್ಯಕ್ತಿಯೊಬ್ಬ ಹಣ ಸಂಪಾದಿಸಲು ಕಷ್ಟ ಪಟ್ಟು ದುಡಿಯಬೇಕೆ ಅಥವಾ ವಂಚನೆ ಮಾಡಬೇಕೆ ?
ಮಾಧ್ಯಮವೊಂದು ಜನಪ್ರಿಯತೆ ಪಡೆಯಲು ಒಳ್ಳೆಯ ಕಾರ್ಯಕ್ರಮ ರೂಪಿಸಬೇಕೆ ಅಥವಾ ಸಾಮಾಜಿಕ ಮೌಲ್ಯಗಳಿಗೆ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಬೇಕೆ ? ಸಂವಿಧಾನ ಇಂದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿರುವಾಗ ಅದರ ಬಗ್ಗೆ ಎಚ್ಚರಿಸಬೇಕಾದ ಸಂದರ್ಭದಲ್ಲಿ ಅದರ ಕತೃ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಯನ ಚಿಂತನೆ ಶ್ರಮ ತ್ಯಾಗ ಮಹತ್ವಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಸಮಯದಲ್ಲಿ ಭ್ರಮಾತ್ಮಕ ಮನರಂಜನೆಯ ಸುತ್ತ ಸುತ್ತುತ್ತಿರುವ ಮಾಧ್ಯಮಗಳ ಬಗ್ಗೆ ಒಂದು ರೀತಿಯ ಜಿಗುಪ್ಸೆ ಉಂಟಾಗುತ್ತಿದೆ. ಕನಿಷ್ಠ ಜಾಗೃತ ಮನಸ್ಥಿತಿಯ ಜನರಾದರೂ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಉತ್ತಮ ವಿಷಯಗಳನ್ನು ಚರ್ಚಿಸೋಣ.
***
ಮಾನವತಾವಾದಿಯ ಹೆಜ್ಜೆಗಳು...
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಅಲೆಯುತ್ತಾ ಅವರನ್ನು ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ.
ದಲಿತ ಸಮುದಾಯಕ್ಕೆ ಅಂಬೇಡ್ಕರ್ ನಂಬಿಕೆಯ ಕಾಲ್ಪನಿಕ ದೇವರಿಗಿಂತ ಅತಿ ಹೆಚ್ಚು ಆರಾಧಿಸಲ್ಪಡುವ ವ್ಯಕ್ತಿತ್ವ. ಅವರನ್ನು ಪ್ರತಿ ಕ್ಷಣ ನೆನೆಯುತ್ತಲೇ ಇರುತ್ತಾರೆ. ಇನ್ನು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಸ್ವಲ್ಪ ಮಟ್ಟಿಗೆ ಗೌರವ ಪೂರ್ವಕ ಅಭಿಮಾನ ಬೆಳೆಸಿಕೊಂಡಿದ್ದಾರೆ. ಇಲ್ಲಿಯೂ ಅವರನ್ನು ಅರ್ಥಮಾಡಿಕೊಂಡವರು ಕೆಲವರು ಮಾತ್ರ. ಉಳಿದವರು ಬೇರೆ ಪ್ರಭಾವಕ್ಕೆ ಒಳಗಾಗಿ ಮೀಸಲಾತಿಯ ಕಾರಣದಿಂದಾಗಿ ಒಂದಷ್ಟು ಅಸಮಾಧಾನ ಹೊಂದಿದ್ದಾರೆ. ಮತ್ತೆ ಮೇಲ್ವರ್ಗದವರು ಸಮಾನತೆಯ ಸಂವಿಧಾನದ ಕಾರಣಕ್ಕಾಗಿ, ಅವರ ಮನು ಧರ್ಮ ಶಾಸ್ತ್ರದ ಅನೇಕ ಆಚರಣೆಗಳಿಗೆ ಮಹತ್ವ ದೊರೆಯದ ಕಾರಣದಿಂದಾಗಿ ಒಂದಷ್ಟು ಅತೃಪ್ತಿ ವ್ಯಕ್ತಪಡಿಸುತ್ತಾರೆ. ಆದರೆ ಬಹಿರಂಗವಾಗಿ ಹೇಳಿಕೆ ನೀಡುವುದಿಲ್ಲ.
2022 ರ ಈ ಸಮಯದಲ್ಲಿ, ಬಲಪಂಥೀಯ ಚಿಂತನೆಯ ಪಕ್ಷ ಬಹುಮತದಿಂದ ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ, ದೇಶದ ಸಾಮಾಜಿಕ ಸಾಮರಸ್ಯ ಪ್ರಕ್ಷುಬ್ಧ ವಾತಾವರಣದಲ್ಲಿ ದಲಿತ ಸಮುದಾಯಗಳಿಗೆ ಅಂಬೇಡ್ಕರ್ ಅವರನ್ನು ಪರಿಚಯಿಸುವ ಅವಶ್ಯಕತೆ ಇಲ್ಲ. ಹಿಂದುಳಿದ, ಅಲ್ಪಸಂಖ್ಯಾತ, ಮೇಲ್ವರ್ಗದ ಅದರಲ್ಲೂ ಮುಖ್ಯವಾಗಿ ಸಾಮಾನ್ಯ ಯುವ ಸಮುದಾಯಕ್ಕೆ ಅವರ ಮನಸ್ಸಿನಾಳಕ್ಕೆ ಅವರಿಗೆ ಅರ್ಥವಾಗುವಂತೆ ಅಂಬೇಡ್ಕರ್ ಅವರನ್ನು ಪರಿಚಯಿಸುವುದು ಬಹಳ ಮುಖ್ಯವಾಗಿದೆ.
ಅಂಬೇಡ್ಕರ್ ಅವರ ಬಗ್ಗೆ ನಮಗೆ ತಿಳಿದಿದೆ ಎಂದು ಬುದ್ದಿ ಪ್ರದರ್ಶನ ಮಾಡುವುದಕ್ಕಿಂತ ಎಲ್ಲಾ ಆಯಾಮಗಳಲ್ಲಿ ಅಂಬೇಡ್ಕರ್ ಎಷ್ಟು ಪ್ರಸ್ತುತರಾಗುತ್ತಾರೆ ಅವರಿಂದ ನಾವು ಅಳವಡಿಸಿಕೊಳ್ಳಬಹುದಾದದ್ದು ಏನು ಎಂಬುದನ್ನು ಗಮನಿಸೋಣ. ಆ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಈ ಲೇಖನದಲ್ಲಿ. ಕಾರಣವೇನೇ ಇರಲಿ, ಸಂದರ್ಭ ಏನೇ ಇರಲಿ, ಸಮರ್ಥನೆ ಏನೇ ಇರಲಿ, ಭಾರತೀಯ ಸಮಾಜದಲ್ಲಿ ವರ್ಣಾಶ್ರಮ ವ್ಯವಸ್ಥೆಯೊಂದಿಗೆ ಜಾತಿ ಎಂಬ ಭಯಂಕರ ಭೂತವೊಂದು ಸೃಷ್ಟಿಯಾಯಿತು. ಅದು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಅತಿಮುಖ್ಯ ಭಾಗವಾಯಿತು. ಕೊನೆಗೆ ಮನುಷ್ಯನ ನರನಾಡಿ ರಕ್ತ ಉಸಿರು ಹೃದಯ ಮೆದುಳು ಎಲ್ಲದರಲ್ಲೂ ಆಕ್ರಮಿಸಿಕೊಂಡಿತು. ಈ ಕ್ಷಣಕ್ಕೂ ಅದು ಬೆಳೆಯುತ್ತಲೇ ಹೋಗುತ್ತಿದೆ.
ಪ್ರಜಾಪ್ರಭುತ್ವ, ಸಂವಿಧಾನ, ಮಹಾನ್ ಸಮಾಜ ಸುಧಾರಕರು ಯಾರಿಂದಲೂ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಜಾತಿ ವ್ಯವಸ್ಥೆಯ ಅತ್ಯಂತ ಕೆಳಸ್ತರದ ಒಂದು ವರ್ಗವೇ ದಲಿತ ಸಮುದಾಯ. ಕೇವಲ ಕೆಳ ಸ್ತರ ಮಾತ್ರವಲ್ಲ ಕಾಡು ಮೃಗಗಳು ವಾಸಿಸುವ ಅಥವಾ ಪಶುಗಳು ವಾಸಿಸುವ ಸ್ಥಳಕ್ಕಿಂತ ಕಡೆಯದಾದ ಊರ ಹೊರಗಿನ ಅತ್ಯಂತ ಕೆಟ್ಟ ಜಾಗಕ್ಕೆ ಇವರನ್ನು ಅಟ್ಟಲಾಯಿತು ಮತ್ತು ಮುಟ್ಟಿಸಿಕೊಳ್ಳದ ಅಸ್ಪೃಶ್ಯರು ಎಂದು ಕರೆಯಲಾಯಿತು. ಅದಕ್ಕೆ ತಕ್ಕಂತೆ ಬಡತನ ಅಜ್ಞಾನ ಮುಂತಾದ ಕಾರಣಗಳಿಂದ ಈ ಜನರೂ ಸಹ ಅತ್ಯಂತ ಅಸಹ್ಯ ಕೀಳು ಮಟ್ಟದ ಬೇರಾರು ಊಹಿಸದ ಇತರರ ಮಲಮೂತ್ರಗಳ ಶುದ್ದೀಕರಣ, ಚಪ್ಪಲಿ ಹೊಲೆಯುವುದು, ಕಲ್ಲು ಹೊಡೆಯುವುದು, ಮೋರಿ ಸ್ವಚ್ಛಗೊಳಿಸುವುದು ಮುಂತಾದ ನಿಕೃಷ್ಟ ಮತ್ತು ಶ್ರಮದಾಯಕ ಕೆಲಸಗಳನ್ನು ಹೊಟ್ಟೆ ಪಾಡಿಗಾಗಿ ಮಾಡಬೇಕಾಯಿತು. ಆಯ್ಕೆಗಳೇ ಇಲ್ಲದೆ ಸತ್ತ ಪ್ರಾಣಿಗಳನ್ನು ತಿಂದು ಬದುಕಬೇಕಾಯಿತು.
ಇದು ಕೇವಲ ಕೆಲವು ವರ್ಷಗಳಲ್ಲ, ಶತಶತಮಾನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಿತು. ಊಟಕ್ಕೇ ಪರದಾಡುವಾಗ ಇನ್ನು ಬಟ್ಟೆ ವಸತಿ ಶಿಕ್ಷಣದ ಬಗ್ಗೆ ಯೋಚಿಸುವುದು ಎಲ್ಲಿಂದ ಬರಬೇಕು. ಕೆಲವು ಸಣ್ಣ ಪುಟ್ಟ ಪ್ರಯತ್ನಗಳು ಮತ್ತು ಬುದ್ಧ ಬಸವಣ್ಣ ಪುಲೆ ಮುಂತಾದವರ ಅತ್ಯುಗ್ರ ಚಿಂತನೆ ಮತ್ತು ಹೋರಾಟಗಳ ನಡುವೆಯೂ ಈ ಸಮಾಜದ ಅಸ್ಪೃಶ್ಯತೆ ನಿವಾರಣೆಯಾಗಲೇ ಇಲ್ಲ. ಜನರಲ್ಲಿ ಜಾಗೃತಿ ಮೂಡಲೇ ಇಲ್ಲ. ಹುಟ್ಟು ಸಾವು ಕರ್ಮ ಪುನರ್ಜನ್ಮ ಪಾಪ ಪುಣ್ಯ ಮುಂತಾದ ಪರಿಕಲ್ಪನೆಯ ನೆರಳಲ್ಲಿ ಜಾತೀಯತೆಯನ್ನು ಪೋಷಿಸುತ್ತಾ ಸಮರ್ಥಿಸುತ್ತಾ ಮುಂದುವರಿಸುತ್ತಾ ಬರುತ್ತಲೇ ಇದ್ದಾರೆ.
ಇಂತಹ ಒಂದು ಅಸ್ಪೃಶ್ಯತಾ ಸಮುದಾಯದಲ್ಲಿ ಹುಟ್ಟಿದ ಒಬ್ಬ ಹುಡುಗ ಅದು ಯಾವ ಮಾಯೆಯಿಂದ ವಿಶ್ವದ ಆಧ್ಯಾತ್ಮದ ತವರೂರು ಎಂದು ಕರೆಯಲ್ಪಡುವ ಈ ಬೃಹತ್ ವೈವಿಧ್ಯಮಯ ಭಾರತಕ್ಕೆ ನೀತಿ ನಿರೂಪಣೆ, ದಿಕ್ಕುಗಳನ್ನು ನಿರ್ಧರಿಸುವ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಲು ಹೇಗೆ ಸಾಧ್ಯವಾಯಿತು ಎಂದು ಮನಸ್ಸು ಈಗಲೂ ಚಿಂತಿಸುತ್ತಿದೆ. ಆಗಿನ್ನೂ ದಲಿತ ಸಮುದಾಯಗಳು ಜಾಗೃತವಾಗಿರಲಿಲ್ಲ, ಆದರೂ ಊಹಿಸಲಸಾಧ್ಯ ಅಧ್ಯಯನ ಮತ್ತು ಪ್ರತಿಭೆಯಿಂದ ಅಂಬೇಡ್ಕರ್ ಆ ಸ್ಥಾನ ಅಲಂಕರಿಸಿದ ಘಟನೆಗೆ ಈ ನೆಲ ಸಾಕ್ಷಿಯಾಗಿದೆ.
ಈಗ ಅಂಬೇಡ್ಕರ್ ವ್ಯಕ್ತಿತ್ವಕ್ಕಿಂತ ಅವರ ಚಿಂತನೆಗಳು ಹೇಗೆ ಭಾರತೀಯ ಸಮಾಜಕ್ಕೆ ಮಹತ್ವಪೂರ್ಣ ಎಂಬುದನ್ನು ಆಧುನಿಕ ಯುವಕರಿಗೆ ಮನವರಿಕೆ ಮಾಡಿಕೊಡುವ ಅಗತ್ಯತೆ ಇದೆ. ಕಣ್ಣು ಕುಕ್ಕುವಂತೆ ಮೀಸಲಾತಿಯನ್ನೇ ದೊಡ್ಡದು ಮಾಡಿ ಅಂಬೇಡ್ಕರ್ ಅವರ ಚಿಂತನೆ ಕುಗ್ಗಿಸುವ ಕೆಲಸ ಕೆಲವು ವರ್ಗಗಳಿಂದ ನಿರಂತರವಾಗಿ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಆಕ್ರೋಶ ಭರಿತ ದಲಿತ ಸಮುದಾಯದ ಕೆಲವು ಯುವಕರು ಸುಲಭವಾಗಿ ಅದರ ಬಲೆಯೊಳಗೆ ಬೀಳುತ್ತಿದ್ದಾರೆ.
ಶತಶತಮಾನಗಳ ಸ್ವಾಭಾವಿಕ ಮೀಸಲಾತಿ, ಜಾತಿಯ ಅಸಮಾನತೆ, ಅದೇ ನೆಪದಲ್ಲಿ ಮನುಷ್ಯರನ್ನು ಪ್ರಾಣಿಗಳಂತೆ ನಡೆಸಿಕೊಂಡದ್ದು, ಈಗಲೂ ದಲಿತ ಕೇರಿಗಳ ಪ್ರವೇಶ, ದಲಿತರೊಂದಿಗೆ ಊಟ ಮಾಡುವುದೇ ಬಹುದೊಡ್ಡ ಸುಧಾರಣೆ ಎಂಬಂತೆ ಚಿತ್ರಿಸುತ್ತಾ, ಅವರ ಕ್ಷಮಿಸಲಾಗದ ತಪ್ಪುಗಳನ್ನು ಮುಚ್ಚಿ ಹಾಕಿ ಸಾಂವಿಧಾನಿಕ ಮೀಸಲಾತಿಯೇ ದೊಡ್ಡ ಅಸಮಾನತೆ ಎಂದೇ ಬಿಂಬಿಸಲಾಗುತ್ತಿದೆ. ಆ ಆಕ್ರಮಣಕ್ಕೆ ವಿರುದ್ದವಾಗಿ ರಕ್ಷಣಾತ್ಮಕ ತಂತ್ರಗಳಿಗೇ ಮಹತ್ವ ನೀಡಿ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತಾ ಅಂಬೇಡ್ಕರ್ ಚಿಂತನೆಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿಲ್ಲ.
ಎಲ್ಲಾ ವರ್ಗದ ಮಹಿಳೆಯರು, ಕಾರ್ಮಿಕರು, ಸಾಮಾನ್ಯ ವರ್ಗದವರ ಅಭಿವ್ಯಕ್ತಿ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಈ ಯಾವುದನ್ನೇ ಆಗಲಿ ಅಂಬೇಡ್ಕರ್ ಹೊರತುಪಡಿಸಿ ಬೇರೆ ಯಾರೇ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರೆ ಇಷ್ಟೊಂದು ಸ್ವಾತಂತ್ರ್ಯ ಸಮಾನತೆ ಪಡೆಯುತ್ತಿರಲಿಲ್ಲ. ಆ ಜಾಗೃತಿ ಮತ್ತು ಕೃತಜ್ಞತೆ ನಮ್ಮ ಜನರಿಗೆ ಇಲ್ಲದಿರುವುದು ಒಂದು ದುರಂತ.
ಇನ್ನೂ ಒಂದು ಆಶ್ಚರ್ಯಕರ ವಿಷಯವೆಂದರೆ, ಭಾರತದ ವೇದ ಉಪನಿಷತ್ತು, ಸ್ಮೃತಿಗಳು, ಪುರಾಣಗಳು, ಧಾರ್ಮಿಕ ಗ್ರಂಥಗಳು ಎಲ್ಲವನ್ನೂ ಒಂದು ಸಮಚಿತ್ತ ಮನೋಭಾವದಿಂದ ಓದಿ ಅಧ್ಯಯನ ಮಾಡಿ ಅರ್ಥಮಾಡಿಕೊಂಡು, ವಾಸ್ತವಕ್ಕೆ ಹತ್ತಿರದ ಅಭಿಪ್ರಾಯ ರೂಪಿಸಿಕೊಂಡ ಮತ್ತು ಅದನ್ನು ಕಾರ್ಯರೂಪಕ್ಕೆ ಇಳಿಸಲು ಸಾಧ್ಯವಾದ ಏಕೈಕ ವ್ಯಕ್ತಿ ಅಂಬೇಡ್ಕರ್ ಎಂದು ಬಹುಶಃ ಖಚಿತವಾಗಿ ಹೇಳಬಹುದು. ಪಾಶ್ಚಾತ್ಯ ಸಂಸ್ಕೃತಿ ಮತ್ತು ಸಂವಿಧಾನಗಳ ಜೊತೆಗೆ ಇದನ್ನು ಸಮೀಕರಿಸಿ ಮಣ್ಣಿನ ಗುಣ ಕಾಪಾಡುವ ಸಾಮರ್ಥ್ಯ ಅಂಬೇಡ್ಕರ್ ಅವರಿಗೆ ಇತ್ತು. ಅದನ್ನು ಸಂವಿಧಾನದಲ್ಲಿ ಮಾಡಿದ್ದಾರೆ. ಆದರೆ ಯಾಕೋ ಇದು ಸಾಮಾನ್ಯ ಜನರ ತಿಳಿವಳಿಕೆ ಸಿಗುತ್ತಿಲ್ಲ.
ಇದಕ್ಕೆ ಕೆಲವು ಐತಿಹಾಸಿಕ ಕಾರಣಗಳು ಸಹ ಇವೆ. ಕೆಲವು ಜನರ ಮನಸ್ಸಿಗೆ ಬೇಸರವಾಗಬಹುದು ಅಥವಾ ಕೋಪ ಬರಬಹುದು. ಆದರೂ ನನ್ನ ಅನಿಸಿಕೆಗಳನ್ನು ಇಲ್ಲಿ ದಾಖಲಿಸುತ್ತೇನೆ. ಹಿಂದಿನಿಂದಲೂ ಹಿಂದೂ ಧರ್ಮದ ಮೂಲಭೂತವಾದದ ಒಂದು ವರ್ಗ ಸಂವಿಧಾನದ ಜಾತಿಯ ಮೀಸಲಾತಿ, ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ, ಮಹಿಳಾ ಸ್ವಾತಂತ್ರ್ಯವನ್ನು ವಿರೋಧಿಸುತ್ತಿತ್ತು. ಅದಕ್ಕೆ ಕಾರಣರಾದ ಅಂಬೇಡ್ಕರ್ ಬಗ್ಗೆ ಅಸಮಾಧಾನವಿತ್ತು. ಆದರೆ ಸಾಮಾನ್ಯ ವರ್ಗದವರಿಗೆ ಅಂಬೇಡ್ಕರ್ ಬಗ್ಗೆ ಅಭಿಮಾನವಿತ್ತು. ಆದರೆ ಕಾಂಶಿರಾಂ ಮತ್ತು ನಂತರದಲ್ಲಿ ಮಾಯಾವತಿಯವರ ಅಂಬೇಡ್ಕರ್ ವಾದಿಗಳ ಸಂಘಟನೆ, ರಾಜಕೀಯ ಪ್ರವೇಶ, ಚುನಾವಣಾ ತಂತ್ರಗಾರಿಕೆ, ಅಧಿಕಾರಕ್ಕೇರುವ ಪ್ರಯತ್ನ ಎಲ್ಲವೂ ಸೇರಿ ಎಂಬತ್ತರ ದಶಕದಲ್ಲಿ ಒಂದು ಆಕ್ರಮಣಕಾರಿ ನೀತಿಯನ್ನು ಅಳವಡಿಸಿಕೊಂಡಿತು. ಆಗ ಇಡೀ ದೇಶದಲ್ಲಿ ಪ್ರಬಲವಾಗಿದ್ದ ಕಾಂಗ್ರೇಸ್ ಮತ್ತು ಮಹಾತ್ಮ ಗಾಂಧಿಯವರ ವಿರುದ್ಧದ ದ್ವೇಷದ ಭಾಷಣಗಳನ್ನು ತನ್ನ ತಂತ್ರವಾಗಿಸಿತು. ಅಲ್ಲಿಂದ ಅಂಬೇಡ್ಕರ್ ಒಂದು ವರ್ಗದ ಸ್ವತ್ತಾಗತೊಡಗಿದರು. ಆಗಿನ ಸನ್ನಿವೇಶದಲ್ಲಿ ಅಂಬೇಡ್ಕರ್ ಅವರು ಗಾಂಧಿಯನ್ನು ಕಟುವಾಗಿ ಟೀಕಿಸುತ್ತಿದ್ದರು. ಅದನ್ನೇ ಉದಾಹರಣೆಗೆ ಇಟ್ಟುಕೊಂಡು ಗಾಂಧಿಯನ್ನು ಅತ್ಯಂತ ದುಷ್ಟರಂತೆ ಚಿತ್ರಿಸಿ ದ್ವೇಷಿಸಲಾಯಿತು. ಅದು ಚಿಂತನೆಗಳ ವಿರೋಧಕ್ಕಿಂತ ಹಿಂಸೆಯ ರೂಪ ಪಡೆಯಿತು.
ಇದೇ ಸಮಯದಲ್ಲಿ ಹಿಂದುತ್ವದ ಮೂಲಭೂತವಾದ ಅಯೋಧ್ಯೆ ವಿವಾದವನ್ನು ಉಪಯೋಗಿಸಿಕೊಂಡು ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಪ್ರಾರಂಭಿಸಿತು. ಎಡ ಬಲ ಪಂಥಗಳ ನಡುವೆ ಅಂಬೇಡ್ಕರ್ ವಾದವೂ ಪ್ರತ್ಯೇಕ ಅಸ್ತಿತ್ವ ಪಡೆಯಿತು. ಇದು ಅಂಬೇಡ್ಕರ್ ನಾನಾ ಕಾರಣದಿಂದಾಗಿ ಒಂದು ವರ್ಗದ ನಾಯಕರಾಗಿ ಸಾಮಾನ್ಯ ಜನರಲ್ಲಿ ಮೂಡಲು ಕಾರಣವಾಯಿತು. ಇದು ದಲಿತ ಜಾಗೃತಿಯ ದೃಷ್ಟಿಯಿಂದ ಉತ್ತಮ ನಡೆಯೂ, ಅಂಬೇಡ್ಕರ್ ಚಿಂತನೆಯ ಪ್ರಚಾರದ ವಿಚಾರದಲ್ಲಿ ಸ್ವಲ್ಪ ತಪ್ಪು ನಡೆ ಎಂದೂ ಭಾವಿಸಬಹುದು.
ವಾಸ್ತವವಾಗಿ ಈಗ ಬಹುಜನ ಪಕ್ಷ ಅಥವಾ ದಲಿತ ಸಂಘಟನೆಗಳು ಬಿಂಬಿಸುವಷ್ಟು ಆಕ್ರಮಣಕಾರಿ ಮನೋಭಾವ ಅಂಬೇಡ್ಕರ್ ಹೊಂದಿರಲಿಲ್ಲ ಎಂದು ಅವರ ಬರಹಗಳನ್ನು ಗಮನಿಸಿದಾಗ ತಿಳಿದು ಬರುತ್ತದೆ. ಹಿಂದೂ ಧರ್ಮದ ಹುಳುಕುಗಳನ್ನು ಎತ್ತಿ ತೋರಿಸುವಾಗಲೂ ಅಂಬೇಡ್ಕರ್ ವಿವೇಚನೆ, ವಿಮರ್ಶೆ, ಸಂಯಮ ಮರೆಯುತ್ತಿರಲಿಲ್ಲ. ಓದುಗ ಅಥವಾ ಕೇಳುಗ ಹೌದು ಹೌದು ಎನ್ನುವಷ್ಟು ಪ್ರಬುದ್ದತೆ ಅವರಲ್ಲಿತ್ತು. ಈಗಿನ ಕೆಲವು ಭಾಷಣಕಾರರಂತೆ ಬೆಂಕಿ ಉಗುಳುತ್ತಿರಲಿಲ್ಲ.
ಆಗಿನ ಕಾಲದಲ್ಲೇ ಹಿಂದುತ್ವದ ಕೆಲವು ಆಚರಣೆಗಳ ವಿರುದ್ಧ ಮಾತನಾಡಿಯೂ ಅವರು ಜೀವಂತ ಉಳಿದರು ಎಂಬುದು ಇಲ್ಲಿ ಬಹುಮುಖ್ಯವಾಗುತ್ತದೆ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಈಗಲೂ ಮೂಲಭೂತವಾದಿಗಳ ವಿರುದ್ಧ ಮಾತನಾಡಿ ಬದುಕುಳಿಯುವುದು ತುಂಬಾ ಕಷ್ಟವಾಗಿದೆ. ಆ ಸಂಯಮ, ಸಭ್ಯತೆ, ಸಂಸ್ಕಾರ, ಪಾಂಡಿತ್ಯವನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ. ಇಂದಿನ ಆಧುನಿಕ ಯುವ ಸಮುದಾಯ ಆಕ್ರೋಶದ ಮೊರೆ ಹೋಗುತ್ತಿದೆ. ಅದರ ನೆರಳಿನಲ್ಲಿ ಅಂಬೇಡ್ಕರ್ ಒಂದು ಮಿತಿಗೆ ಒಳಪಡುತ್ತಿದ್ದಾರೆ.
ಮೀಸಲಾತಿಯೂ ಸೇರಿ ಅಂಬೇಡ್ಕರ್ ಚಿಂತನೆಗಳನ್ನು ದಲಿತರ ಹೊರತಾಗಿ ಇತರರಿಗೆ ಮುಖ್ಯವಾಗಿ ಯುವ ಸಮುದಾಯಕ್ಕೆ ತಿಳಿಸಿಕೊಡುವಾಗ ಅತ್ಯಂತ ತಾಳ್ಮೆಯಿಂದ ವಿವರಿಸಬೇಕಾಗುತ್ತದೆ. ನಾವು ಈಗ ವಾಸಿಸುತ್ತಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಸೂಕ್ಷ್ಮಗಳನ್ನು ಗಮನಿಸಿ ಅವರ ಮಾನಸಿಕ ಹಂತ ಗುರುತಿಸಿ ಮಾತನಾಡಬೇಕಾಗುತ್ತದೆ. ನಮ್ಮ ಪಾಂಡಿತ್ಯವನ್ನು ಅವರ ಮುಂದೆ ಪ್ರದರ್ಶಿಸಿದರೆ ಅದು ಜೀವ ಇಲ್ಲದ ಪ್ರವಚನದಂತೆ ಆಗುತ್ತದೆ. ಯಾವುದೇ ರೀತಿಯ ಪ್ರಚೋದನೆಗೂ ಒಳಗಾಗಾಬಾರದು.
ಮಾನವೀಯತೆ, ಸಮಾನತೆ, ಸಂವಿಧಾನ ಇವುಗಳನ್ನು ಹೇಳುವಾಗ ನ್ಯಾಯದ ದಂಡ ಸಮಾನಾಂತರವಾಗಿ ಇರುವಂತೆ ನೋಡಿಕೊಳ್ಳಬೇಕು. ನಮಗೆ ಅನುಕೂಲಕರ ಅಂಶಗಳನ್ನು ಮಾತ್ರ ಉಲ್ಲೇಖಿಸುವ ಪಲಾಯನವಾದಿ ಸೂತ್ರ ಅಳವಡಿಸಿಕೊಳ್ಳಬಾರದು. ನಮ್ಮ ವಿರೋಧಿ ಚಿಂತನೆಯವರು ನಮ್ಮ ಮೇಲೆ ವಿಶ್ವಾಸ ಇಡುವಂತಿರಬೇಕು. ನಿಜ, ಈಗಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಇದು ತುಂಬಾ ಕಷ್ಟ. ಆದರೆ ಅಂಬೇಡ್ಕರ್ ವಾದದ ಜಾಗೃತ ಮನಸ್ಥಿತಿಯ ಜನ ಇದರ ಜವಾಬ್ದಾರಿ ಹೊರಬೇಕಿದೆ.
ಶಿಕ್ಷಣ ಸಂಘಟನೆ ಹೋರಾಟದ ಮೂಲ ಆಶಯಕ್ಕೆ ಹೊಸ ಆಯಾಮ ನೀಡಬೇಕಿದೆ. ಮೀಸಲಾತಿಯನ್ನು ಮೀರಿ ಭಾರತೀಯ ಸಮಾಜದ ಜೀವನ ಶೈಲಿಯನ್ನು ದಲಿತ ಪ್ರಜ್ಞೆಯೊಂದಿಗೆ ದಲಿತ ಪ್ರತಿಭಾ ಸಾಮರ್ಥ್ಯದ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಹೆಚ್ಚು ಚಿಂತಿಸಬೇಕಿದೆ. ಒಮ್ಮೆ ಈ ಜೀವನ ವಿಧಾನ ವೈಚಾರಿಕ ಪ್ರಜ್ಞೆ ಮುನ್ನಲೆಗೆ ಬಂದರೆ ಆಗ ಸಮ ಸಮಾಜದ ಕನಸು ತಾನೇತಾನಾಗಿ ಈಡೇರುತ್ತದೆ. ಇಲ್ಲಿ ಮುಖ್ಯವಾಗಿ ಸಮ ಸಮಾಜ ಎಂದರೆ ಇಡೀ ಮನುಷ್ಯ ವರ್ಗ ಒಂದು ಎಂಬುದೇ ಹೊರತು ಮೇಲ್ವರ್ಗದ ಮೇಲಿನ ದ್ವೇಷ ಸಾಧನೆಯಲ್ಲ ಎಂಬುದನ್ನು ಈ ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಾದ ಜವಾಬ್ದಾರಿ ಸಹ ಇದೆ. ಬರೆಯುತ್ತಾ ಹೋದಂತೆ ಅಕ್ಷರಗಳು ವಾಕ್ಯಗಳು ಅದಕ್ಕೆ ತಕ್ಕ ಭಾವನೆಗಳೂ ಮೂಡುತ್ತಲೇ ಇರುತ್ತದೆ. ಏನಾದರಾಗಲಿ ಅಂಬೇಡ್ಕರ್ ಅವರನ್ನು ಹೊಸ ರೂಪದಲ್ಲಿ ಈ ಸಮಾಜಕ್ಕೆ ಅರ್ಥ ಮಾಡಿಸುವ ಜವಾಬ್ದಾರಿ ನಮ್ಮೆಲ್ಲರದು. ಅದನ್ನು ನಿಭಾಯಿಸುವ ಆಶಯದೊಂದಿಗೆ…
ಅಂಬೇಡ್ಕರ್.....
ಮುಟ್ಟಿಸಿಕೊಳ್ಳದವನಾಗಿ ಹುಟ್ಟಿದಾ ನೀನು ಅಪ್ಪಿಕೊಳ್ಳುವವನಂತಾದೆ,
ಸಮಾನತೆಗಾಗಿ ಹೋರಾಡಿದ ನೀನು ಅಸಾಮಾನ್ಯನಾದೆ,
ಒಂಟಿ ಸಲಗವಾಗಿ ಬಡಿದಾಡಿದ ನೀನು ಕೋಟ್ಯಾಂತರ ಜನರು ಆರಾಧಿಸುವಂತಾದೆ,
ಕತ್ತಲೆ ಕೂಪದಲ್ಲಿ ಬೆಳೆದ ನೀನು ಇಡೀ ಸಮಾಜದ ಆಶಾಕಿರಣವಾದೆ,
ಶಾಲೆಗೆ ಸೇರಲು ಒದ್ದಾಡಿದ ನೀನೇ ಪಠ್ಯವಾದೆ, ವಿಶ್ವವಿದ್ಯಾಲಯವಾದೆ,
ಸಂಕೋಲೆಗಳ ಬಂದಿಯಾಗಿದ್ದ ನೀನೇ ಸ್ವಾತಂತ್ರ್ಯ ದೇವರಂತಾದೆ,
ಅಸ್ತಿತ್ವ ಇಲ್ಲದವನಾಗಿದ್ದ ನೀನೇ ಬೃಹತ್ ದೇಶದ ಸಂವಿಧಾನ ಕರ್ತನಾದೆ,
ಶೋಷಿತರ ಧ್ವನಿಯಾಗಿದ್ದ ನೀನೇ ಮೂಕನಾಯಕನಾದೆ,
ಮಾನವೀಯತೆಯ ಪ್ರತಿರೂಪವಾದ ನೀನೇ ಅಮಾನವೀಯ ಹಿಂಸೆಗೆ ಒಳಗಾದೆ,
ಅದ್ಭುತ ಸಂಘಟಕನಾದ ನೀನೇ ಚುನಾವಣೆಯಲ್ಲಿ ಸೋತು ಹೋದೆ,
ಆದರೂ...
ನಿನ್ನ ಅಪಾರ ಓದು ನಮಗೆ ಅರ್ಥವಾಗಲಿಲ್ಲ,
ನಿನ್ನ ಸಂಘಟನಾ ಶಕ್ತಿ ನಮಗೆ ಗೊತ್ತಾಗಲಿಲ್ಲ,
ನಿನ್ನ ಹೋರಾಟ ಶ್ರಮ ನಮಗೆ ಸರಿಯಾಗಿ ದಕ್ಕಲಿಲ್ಲ,
ನಿನ್ನ ಮಾನವೀಯತೆ ನಮಗೆ ಬರಲಿಲ್ಲ,
ನಿನ್ನ ಸಮಾನತೆ ನಮಗೆ ಅರಿವಾಗಲಿಲ್ಲ,
ನಿನ್ನ ಜ್ಞಾನ ನಮಗೆ ಸಿಗಲಿಲ್ಲ,
ನಿನ್ನ ನೋವು ನಮಗೆ ತಟ್ಟಲಿಲ್ಲ,
ಎಲ್ಲರಂತೆ ನಮಗೂ ನೀನು ಗೋಡೆಯ ಪಟವಾದೆ,
ಮೇಲ್ವರ್ಗದವರು ಮನಸ್ಸಿನಲ್ಲೇ ದ್ವೇಷಿಸುತ್ತಾರೆ ನಿನ್ನನ್ನು,
ಕೆಳವರ್ಗದವರು ತೋರಿಕೆಗಾಗಿ ಪ್ರೀತಿಸುತ್ತಾರೆ ನಿನ್ನನ್ನು,
ಶೋಷಿತರು ಎಲ್ಲೆಡೆಯೂ ಪೂಜಿಸುತ್ತಾರೆ ನಿನ್ನನ್ನು,
ಆದರೆ,
ಆದರೆ,
ಆದರೆ........
ಅರ್ಥಮಾಡಿಕೊಂಡವರು ,
ಅನುಸರಿಸುವವರು ಯಾರಿಲ್ಲ,
ಇಡಿಯಾಗಿ ನೀನು ದಕ್ಕಲಿಲ್ಲ,
ವಿಶ್ವಮಾನವನಾದ ನಿನ್ನನ್ನು ಅಲ್ಪಮಾನವನನ್ನಾಗಿಸಿದೆವು,
ಅದಕ್ಕೆ ನಾವೆಲ್ಲರೂ ಸಾಕ್ಷಿಯಾದೆವು,
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದ ನೀನೇ ಅದರಲ್ಲಿ ಬಂದಿಯಾದೆ.
ಇರಲಿ, ಇನ್ನು ಮುಂದಾದರೂ ನಿನ್ನ ದೂರದೃಷ್ಟಿಯ ಅದ್ಬುತ ಚಿಂತನೆಗಳು ವಾಸ್ತವ ನೆಲೆಯಲ್ಲಿ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತಾ...ಸಮಾನತೆಯನ್ನು, ಮಾನವೀಯತೆಯನ್ನು, ಒಂದಿಡೀ ಸಮುದಾಯದ ಸ್ವಾಭಿಮಾನವನ್ನು, ಜಾಗೃತಗೊಳಿಸಿ, ಶಕ್ತಿ ತುಂಬಿ, ತಲೆ ಎತ್ತುವಂತೆ ಮಾಡಿದ, ನಿನಗೆ ಹುಟ್ಟುಹಬ್ಬದ ಶುಭಾಶಯಗಳು ಡಾಕ್ಟರ್ ಭೀಮರಾವ್ ರಾಮ್ಜಿ ಅಂಬೇಡ್ಕರ್....
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ