ಅಂಬೇಡ್ಕರ್ ಮತ್ತು ಸಂವಿಧಾನ

ಅಂಬೇಡ್ಕರ್ ಮತ್ತು ಸಂವಿಧಾನ

ಡಿಸೆಂಬರ್ ಆರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಇತ್ತೀಚಿನ ವರ್ಷಗಳಲ್ಲಿ ಅದರ ಪ್ರಾಮುಖ್ಯತೆ ಮತ್ತು ರಚನೆಯ ವಿಷಯದಲ್ಲಿ ಇತರರ ಪಾತ್ರ ಕುರಿತು ವಿವಾದವೊಂದು ಸೃಷ್ಟಿಯಾಗಿದೆ ಅಥವಾ ಸೃಷ್ಟಿಸಲಾಗಿದೆ. ಇರಲಿ ಬಿಡಿ, ಅದನ್ನು ಮೆಟ್ಟಿ ನಿಂತು ಶತಶತಮಾನಗಳ ಆಚೆ ಮುನ್ನಡೆಯುವಷ್ಟು ಶಕ್ತಿ, ವ್ಯಕ್ತಿತ್ವ, ವಿಚಾರವಂತಿಕೆ, ದೂರದೃಷ್ಟಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಇದೆ.

ಸಂವಿಧಾನ ಎಂದರೇನು ? ಭಾರತದ ಸಂವಿಧಾನ ಹೇಗೆ ರಚಿಸಲ್ಪಟ್ಟಿತು ? ಅದರಲ್ಲಿ ಅಂಬೇಡ್ಕರ್ ಅವರ ಪಾತ್ರವೇನು ? ಅಂಬೇಡ್ಕರ್ ಅವರ ಒಟ್ಟು ವ್ಯಕ್ತಿತ್ವ ಮತ್ತು ಅಧ್ಯಯನ ಏನು ? ಇದಕ್ಕಾಗಿ ಬಹುದೊಡ್ಡ ಅಧ್ಯಯನದ ಅವಶ್ಯಕತೆ ಇಲ್ಲ. ನಮಗಿರುವ ಸಾಮಾನ್ಯ ಜ್ಞಾನದಲ್ಲಿಯೇ ಇದನ್ನು ಗ್ರಹಿಸಬಹುದು. ಕೇವಲ ಸುಮಾರು ‌78 ವರ್ಷಗಳ ಹಿಂದಿನ ಈ ಘಟನೆಗಳು ಇತಿಹಾಸದ ಕಾಲ ಗರ್ಭದಲ್ಲಿ ಹುದುಗಿಲ್ಲ. ಇನ್ನೂ ಎಲ್ಲರ ನೆನಪಿನಾಳದಲ್ಲಿ ಹಸಿಹಸಿಯಾಗಿಯೇ ಉಳಿದಿದೆ. ನಾಗರಿಕತೆಯ ಪ್ರಾರಂಭದಲ್ಲಿ ಕೌಟುಂಬಿಕ ವ್ಯವಸ್ಥೆ ನಿರ್ಮಾಣವಾದ ನಂತರ ಸಮುದಾಯಗಳು ಸೇರಿ ಸಮಾಜ ಎಂಬ ಪರಿಕಲ್ಪನೆ ವಿಶ್ವದೆಲ್ಲೆಡೆ ಅಸ್ತಿತ್ವಕ್ಕೆ ಬಂದವು. ಆ ಸಮಾಜದ ಕ್ರಮಬದ್ಧ ಮತ್ತು ಶಾಂತಿಯುತ ಮುಂದುವರಿಕೆಗಾಗಿ ಲಿಖಿತ - ಅಲಿಖಿತ - ಸಾಮಾಜಿಕ - ಧಾರ್ಮಿಕ - ಅನುಭಾವಿಕ ಆಧಾರದ ಮೇಲೆ ನೀತಿ ನಿಯಮಗಳು ರೂಪಿತಗೊಂಡವು ಅಥವಾ ರೂಪಿಸಲಾಯಿತು. ಆ ನೀತಿ ನಿಯಮಗಳು ಆಯಾ ಕಾಲದ ಆಯಾ ಪ್ರದೇಶದ ಆಡಳಿತಾತ್ಮಕ ವ್ಯವಸ್ಥೆಗೆ ತಕ್ಕಂತೆ ಬೆಳೆದು ಬಂದವು.

ಕಾಡಿನ ನ್ಯಾಯದ ಬಲಿಷ್ಠತೆಯೇ ಇರಲಿ, ರಾಜ ಪ್ರಭುತ್ವವೇ ಇರಲಿ, ಧರ್ಮದ ಆಡಳಿತವೇ ಇರಲಿ, ಸರ್ವಾಧಿಕಾರವೇ ಇರಲಿ, ಸೈನಿಕ ಆಡಳಿತವೇ ಇರಲಿ ಎಲ್ಲಾ ಕಾಲದಲ್ಲೂ ಒಂದು ನಿರ್ಧಿಷ್ಟ ನಿಯಮಗಳು ಇದ್ದೇ ಇರುತ್ತಿದ್ದವು. ( ಅದರ ಅನುಷ್ಠಾನ ಹೇಗೆ ಆಗುತ್ತಿತ್ತು ಎಂಬುದು ಬೇರೆ ವಿಷಯ. ಭಾರತದ ಮಟ್ಟಿಗೆ ಸಿಂಧೂ ನದಿ ತೀರದ ಹರಪ್ಪ, ಮಹೆಂಜೋದಾರೊ ನಾಗರಿಕತೆಯಿಂದ ಬ್ರಿಟೀಷರು ನಮ್ಮನ್ನು ಸಂಪೂರ್ಣ ಆಕ್ರಮಿಸುವವರೆಗೆ ಅನೇಕ ಭಾಗಗಳಾಗಿ ಹಂಚಿಹೋಗಿದ್ದ ಪ್ರಾಂತ್ಯಗಳು, ರಾಜ ಮನೆತನಗಳು, ಅರಬ್ ಮತ್ತು ಪರ್ಶಿಯನ್ನರ ಆಕ್ರಮಣ, ಅವರ ಆಡಳಿತ ಮುಂತಾದ ಎಲ್ಲಾ ಸಂದರ್ಭಗಳಲ್ಲೂ ಬೇರೆ ಬೇರೆ ನೀತಿ ನಿಯಮಗಳು ಇದ್ದವು. ಬ್ರಿಟೀಷರು ಅಲ್ಲಿನ ಆಡಳಿತದ ಮಾದರಿಯನ್ನು ಸ್ಥಳೀಯ ವ್ಯವಸ್ಥೆಗೆ ಅನುಕೂಲವಾಗುವಂತೆ ಭಾರತದಲ್ಲಿ  ಅಳವಡಿಸಿದರು. 1947 ರ ಸಮಯದಲ್ಲಿ, ಭಾರತ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಸನ್ನಿವೇಶದಲ್ಲಿ ಭಾರತಕ್ಕೆ ತನ್ನದೇ ಆದ ನೀತಿ ನಿಯಮಗಳ ಅವಶ್ಯಕತೆ ಉಂಟಾಯಿತು. ಆಗ ರಚಿತವಾದ ನಿಯಮಗಳೇ ಇಂದಿನ ಭಾರತದ ಬೃಹತ್ ಸಂವಿಧಾನ ಮತ್ತು ವಿಶ್ವದ ಅತಿದೊಡ್ಡ ಸಂವಿಧಾನ ಕೂಡ.

ಸ್ವಾತಂತ್ರ್ಯ ಸಮಯದಲ್ಲಿ ಆ ಸಂವಿಧಾನ ರಚಿಸಲು ಒಂದು ಕರಡು ಸಮಿತಿಯನ್ನು ರಚಿಸಲಾಗುತ್ತದೆ. ಇಲ್ಲಿಂದ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಅಂದಿನ ಕಾಲದಲ್ಲಿ ಬ್ಯಾರಿಸ್ಟರ್ ಆಗಿ ಅತ್ಯಂತ ಜನಪ್ರಿಯ ವಕೀಲರಾಗಿ, ಭಾರತ ಸ್ವಾತಂತ್ರ್ಯ ಹೋರಾಟದ ಏಕಮೇವಾಧಿಪತ್ಯ ನಾಯಕರಾಗಿದ್ದ ಗಾಂಧಿಯವರು ತಮಗೆ ಮೆಚ್ಚುಗೆಯಾದ, ತಮ್ಮ ಸಿದ್ಧಾಂತಗಳನ್ನು ಒಪ್ಪುವ ಯಾರನ್ನೇ ಆದರೂ ಆ ಬಹುಮುಖ್ಯ ಕರಡು ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ಮಾಡುವ ಪರೋಕ್ಷ ಮತ್ತು ಅನಧಿಕೃತ ಪರಮಾಧಿಕಾರ ಹೊಂದಿದ್ದರು. ಚುನಾವಣೆಯೇ ಇರಲಿ ಅಥವಾ ನೇರ ನೇಮಕಾತಿಯೇ ಇರಲಿ ಗಾಂಧಿ ಪ್ರಭಾವ ಇದ್ದೇ ಇರುತ್ತದೆ.  ನೆಹರು, ಪಟೇಲ್, ಬ್ರಿಟಿಷ್ ಆಡಳಿತ ಮುಂತಾದವರ  ಅಭಿಪ್ರಾಯವನ್ನು ದಿಕ್ಕರಿಸುವ ರಾಜಕೀಯ ಶಕ್ತಿಯನ್ನು ಗಾಂಧಿ ಪಡೆದಿದ್ದರು. 

ಗಾಂಧಿ, ಅಂಬೇಡ್ಕರ್ ಅವರೊಂದಿಗೆ ಬಹಳಷ್ಟು ಭಿನ್ನಾಭಿಪ್ರಾಯ ಹೊಂದಿದ್ದರು. ಸನಾತನ ಧರ್ಮದಲ್ಲಿ ಅಪಾರ ನಂಬಿಕೆಯಿಂದಿದ್ದರು. ಆದರೂ ಈಗ ಊಹಿಸಲಾಗದ ಒಂದು ಪವಾಡ ಎಂದು ಕರೆಯಬಹುದಾದ ಘಟನೆ ಆಗ ನಡೆಯುತ್ತದೆ. ವೇದ ಉಪನಿಷತ್ತುಗಳು, ರಾಮಾಯಣ ಮಹಾಭಾರತ, ಮನುಸ್ಮೃತಿಗಳು, ಆಧ್ಯಾತ್ಮದ ಬೇರುಗಳು, ಭಕ್ತಿ ಪಂಥದ ಪ್ರಭಾವ, ನಂಬಿಕೆಗಳ ಗಾಢ ಪ್ರಭಾವ ಹೊಂದಿದ್ದ ವೈವಿಧ್ಯಮಯ ಸಂಸ್ಕೃತಿ - ಜೀವನಶೈಲಿಯ ದೇಶಕ್ಕೆ ಸಂವಿಧಾನ ರಚಿಸಲು ತಮ್ಮ ಸೈದ್ದಾಂತಿಕ ವಿರೋಧಿಯೂ, ಆಗಿನ‌ ಕಾಲಕ್ಕೆ  ಅಸ್ಪೃಶ್ಯ ಸಮುದಾಯ ಎಂದು ಸಮಾಜದಲ್ಲಿ ಗುರುತಿಸಲಾಗಿದ್ದ ಮಹರ್ ಜಾತಿಯ ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ರಚಿಸಲು ಅವಕಾಶ ನೀಡಿದರು ಎಂದರೆ ಅದು ‌ಈ ಕ್ಷಣಕ್ಕೂ ಪವಾಡವೆಂದೇ ಭಾಸವಾಗುತ್ತದೆ.

ಜೊತೆಗೆ ಇನ್ನೊಂದು ವಾಸ್ತವರೂಪದ ಪವಾಡವೂ ಇದೆ. ಬಹುಶಃ ಆಗಿನ ಕಾಲದಲ್ಲಿ ಇಡೀ ಭಾರತದಲ್ಲಿ ರಾಜಕೀಯ ಶಾಸ್ತ್ರ, ತತ್ವಶಾಸ್ತ್ರ ಮಾನವಶಾಸ್ತ್ರ, ಅರ್ಥಶಾಸ್ತ್ರ, ಭಾಷಾಶಾಸ್ತ್ರದಲ್ಲಿ ಅಂಬೇಡ್ಕರ್ ಅವರಷ್ಟು ಪ್ರಾವೀಣ್ಯತೆ ಪಡೆದ ವ್ಯಕ್ತಿ ರಾಜಕೀಯ ಜೀವನದಲ್ಲಿ ಇರಲಿಲ್ಲ. ( ಅನಾಮಧೇಯರು  ಯಾರಾದರೂ ಇರಬಹುದೇನೋ ನನಗೆ ತಿಳಿದಿಲ್ಲ.) ಅಂಬೇಡ್ಕರ್ ಅವರ ವಿದ್ಯಾರ್ಹತೆ ಬಗ್ಗೆ ಹೇಳಬೇಕೆಂದರೆ ಪದವಿಗಳನ್ನು ಹೊರತುಪಡಿಸಿ ನೋಡಿದರೂ ಬಹುಶಃ ಒಂದು ಜೀವಮಾನದಲ್ಲಿ ಒಬ್ಬ ವ್ಯಕ್ತಿ ಓದಲು ‌ಸಾಧ್ಯವಾಗಬಹುದಾದ ಗರಿಷ್ಠ ಮಿತಿಯನ್ನು ದಾಟಿ ಅಂಬೇಡ್ಕರ್ ಓದಿದ್ದಾರೆ. ಓದು ಓದು ಓದು ಅವರ ಬದುಕಿನ ಪ್ರತಿಕ್ಷಣದ ಜೀವನದ ಭಾಗವೇ ಆಗಿತ್ತು. ಗ್ರಂಥಾಲಯ ಅವರ ಮೊದಲ ಮನೆಯಾಗಿತ್ತು.

ಅಂದರೆ ಅತ್ಯಂತ ಅರ್ಹ ವ್ಯಕ್ತಿಯನ್ನು ಆತನ ಪ್ರತಿಭೆ ಸಾಮರ್ಥ್ಯದ ಕಾರಣದಿಂದ ಆ ಸ್ಥಾನಕ್ಕೆ ಆರಿಸಲಾಯಿತು ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ ಆ ಸಮಿತಿಯಲ್ಲಿ ಇತರೆ ಕೆಲವು ಸದಸ್ಯರು ತಮ್ಮ ಅರ್ಹತೆಯ ಆಧಾರದಲ್ಲಿ ಸೇರ್ಪಡೆಯಾಗುತ್ತಾರೆ.

ಅದರಲ್ಲಿ ಒಬ್ಬರ ನಿಧನ, ಒಬ್ಬರ ರಾಜೀನಾಮೆ, ಒಬ್ಬರ ನಿರಾಸಕ್ತಿ ಹೀಗೆ ನಾನಾ ಕಾರಣಗಳು ಇರುತ್ತವೆ. ಒಂದು ಸಮಿತಿ ಎಂದ ಮೇಲೆ ಅದರಲ್ಲಿ ಒಂದಷ್ಟು ಚರ್ಚೆ, ವಿರೋಧ, ಸಲಹೆಗಳು ಇರಲೇಬೇಕು. ಬಹುಶಃ ಅದೆಲ್ಲವೂ ನಡೆದಿರಬೇಕು. ಅದನ್ನು ಅಧ್ಯಕ್ಷರು ಸ್ವೀಕರಿಸಿರಬಹುದು ಅಥವಾ ನಿರಾಕರಿಸಿರಲೂ ಬಹುದು. ಆದರೆ ಸಮಿತಿ ಹಲವಾರು ಸಲ ಸಭೆ ಸೇರಿ ಚರ್ಚೆಯಾಗಿರುವುದನ್ನು ಸ್ವತಃ ಅಂಬೇಡ್ಕರ್ ಅವರೇ ಹೇಳಿದ್ದಾರೆ.

ಆದರೆ.. ಅಲ್ಲಿಯವರೆಗಿನ ಅಂಬೇಡ್ಕರ್ ಅವರ ಹೋರಾಟ ಚಿಂತನೆಗಳು, ರಾಜಕೀಯ ಸಂಘರ್ಷ ಗಮನಿಸಿದಾಗ ಭಾರತದ ಸಂವಿಧಾನದ ಬಹುತೇಕ ವಿಧಿ ವಿಧಾನಗಳು ಅಂಬೇಡ್ಕರ್ ಅವರ ಇಚ್ಚೆಯಂತೆಯೇ ರಚಿತವಾಗಿರುವುದು ಕಂಡುಬರುತ್ತದೆ. ಮುಖ್ಯವಾಗಿ ಮೀಸಲಾತಿ ಇರಬಹುದು, ಕಾರ್ಮಿಕ ಹಕ್ಕುಗಳು ಇರಬಹುದು, ಅಲ್ಪಸಂಖ್ಯಾತ ರಕ್ಷಣೆಯ ಕಾನೂನುಗಳು, ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆ, ಧಾರ್ಮಿಕ ನಂಬಿಕೆಗಳು, ಸಂಸದೀಯ ಪ್ರಜಾಪ್ರಭುತ್ವ, ಹಕ್ಕು ಮತ್ತು ಕರ್ತವಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಎಲ್ಲವೂ ಅವರ ಚಿಂತನೆಗಳಿಗೆ ಪೂರಕವಾಗಿಯೇ ಇದೆ. ಪಾಶ್ಚಾತ್ಯ ಸಂಸ್ಕೃತಿ, ‌ಸಂಪ್ರದಾಯ, ಕಾನೂನುಗಳನ್ನು ಅವರು ಆಳವಾಗಿ ಅಧ್ಯಯನ ಮಾಡಿ‌ ಅದರಿಂದಲೂ ಪ್ರಭಾವಿತರಾಗಿ ಆ ಅಂಶಗಳನ್ನು ‌ಅಳವಡಿಸಿಕೊಂಡಿದ್ದಾರೆ.

ಇಲ್ಲಿ ಇನ್ನೊಂದು ಬಹುಮುಖ್ಯ ವಿಷಯವೂ ಅಡಕವಾಗಿದೆ. ಅಂಬೇಡ್ಕರ್ ಮೂಲಭೂತವಾಗಿ ಶೋಷಿತರ ಧ್ವನಿಯಾಗಿ ಗುರುತಿಸಿಕೊಂಡಿದ್ದರು ಕೂಡ ಅವರಿಗೆ ಇಲ್ಲಿನ ಮನು ಸಂಸ್ಕೃತಿಯ ಸಂಪ್ರದಾಯ ಆಚರಣೆಗಳ ಬಗ್ಗೆ ಅಪಾರವಾದ ಜ್ಞಾನವಿತ್ತು ಮತ್ತು ವಾಸ್ತವಿಕ ಪ್ರಜ್ಞೆಯೂ ಇತ್ತು, ಅದರ ಹುಳುಕುಗಳ ಅರಿವಿತ್ತು, ವಿಶಾಲ ಮನೋಭಾವವೂ ಇದ್ದಿತು. ಅದಕ್ಕೆ ‌ಸಾಕ್ಷಿ ಎಂಬಂತೆ ಅವರ ಸಂವಿಧಾನ ರಚಿಸುವ ಬಹುದೊಡ್ಡ ಅಧಿಕಾರ ಸಿಕ್ಕಾಗಲು ಎಲ್ಲಿಯೂ ಮೇಲ್ವರ್ಗದ ಜನರು ಈ ಸಂವಿಧಾನದ ಅಡಿಯಲ್ಲಿ ಜೀವನ ಮಾಡುವುದು ಅಸಹನೀಯವಾಗುವ ಯಾವುದೇ ಅಂಶಗಳನ್ನು ಸೇರಿಸಲಿಲ್ಲ. ಅವರ ಮೇಲೆ ಸೇಡಿನ ಯಾವುದೇ ಕುರುಹುಗಳು ಈವರೆಗೂ ನನಗೆ ಕಾಣುತ್ತಿಲ್ಲ. ಮೀಸಲಾತಿಯನ್ನು ಸಹ ಅಸ್ಪೃಶ್ಯರಿಗೆ ಅದೂ ತಾತ್ಕಾಲಿಕ ವ್ಯವಸ್ಥೆ ಮಾತ್ರ ಕಲ್ಪಿಸಿದರು.

ಹಾಗೆಂದು ಅಂಬೇಡ್ಕರ್ ಮತ್ತು ಸಂವಿಧಾನ ಸರ್ವಶ್ರೇಷ್ಠ ಮತ್ತು ಪರಿಪೂರ್ಣ ಎಂದು ಭಾವಿಸಬಾರದು. ಕಾಲಕ್ಕೆ ತಕ್ಕಂತೆ ಬದಲಾವಣೆ, ಪ್ರಗತಿಪರತೆ, ಸಾಂದರ್ಭಿಕ ಅಳವಡಿಕೆಗೆ ಸಂವಿಧಾನದಲ್ಲಿ ಅವಕಾಶವೂ ಇದೆ. ಅದನ್ನು ಅಂಬೇಡ್ಕರ್  ಅವರೇ ಕಲ್ಪಿಸಿಕೊಟ್ಟಿದ್ದಾರೆ‌.

ಈ‌ ಎಲ್ಲದರ ಹಿನ್ನೆಲೆಯಲ್ಲಿ ಗಮನಿಸಿದಾಗ, ತಾಂತ್ರಿಕವಾಗಿ ಭಾರತದ ಸಂವಿಧಾನ ರಚಿಸಿದ್ದು ಅಂಬೇಡ್ಕರ್ ನೇತೃತ್ವದ ಕರಡು ಸಮಿತಿ, ಆದರೆ ಅದರ ಒಟ್ಟು ಆಶಯವನ್ನು ಪರಿಶೀಲಿಸಿದರೆ ನಮ್ಮ ಸಂವಿಧಾನ ಅಂಬೇಡ್ಕರ್ ಚಿಂತನೆಯಲ್ಲಿ ಮೂಡಿದ ನೀತಿ ನಿಯಮಗಳ ಕಾನೂನು ಮತ್ತು ‌ಅದರ ಪಿತಾಮಹ - ಶಿಲ್ಪಿ  ಅಂಬೇಡ್ಕರ್ ಎಂದು ನಿಸ್ಸಂಶಯವಾಗಿ ಹೇಳಬಹುದು. ಅಂಬೇಡ್ಕರ್ ಅವರನ್ನು ಆರಾಧಿಸುವವರು, ಅವರನ್ನು ಬೇರೆ ಬೇರೆ ಕಾರಣಗಳಿಗಾಗಿ ವಿರೋಧಿಸುವವರು ಯಾರೇ ಆಗಲಿ ಆತ್ಮವಂಚನೆ ಮಾಡಿಕೊಳ್ಳದೆ ರಾಜಕೀಯ ಲಾಭದ ವಿವಾದಗಳನ್ನು ನಿರ್ಲಕ್ಷಿಸಿ ವಾಸ್ತವ ಪ್ರಜ್ಞೆಯಿಂದ ಅವಲೋಕಿಸಿದಾಗ ‌ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಅದು ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ವಿವಾದಗಳ ಹಿನ್ನಲೆಯ ಹುಚ್ಚುತನ ಗುರುತಿಸುವ ಪ್ರಬುದ್ಧ ಸಮಾಜ ನಮ್ಮದಾಗಲಿ ಎಂದು ಆಶಿಸುತ್ತಾ..

ಸಂವಿಧಾನದ ಸಮಾನತೆ ಎಂದರೆ ಬ್ರಾಹ್ಮಣ ದ್ವೇಷವಲ್ಲ ಅಥವಾ ದಲಿತರ ಶ್ರೇಷ್ಠತೆಯಲ್ಲ. ಅದು ಸಮಾನ ನಾಗರಿಕ ಪ್ರಜ್ಞೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಅಂಬೇಡ್ಕರ್ ಅವರು ಕೇವಲ ದಲಿತಪರವಾದಿಯಲ್ಲ. ನಿಜ ಭಾರತೀಯ ಪ್ರಜ್ಞೆಯ ರಾಯಭಾರಿ ಎಂದು ಪ್ರತಿಯೊಬ್ಬರೂ ಗೌರವಿಸಬೇಕಾಗಿದೆ. ಧರ್ಮಕ್ಕೆ ಪರ್ಯಾಯ ಮಾರ್ಗವೇ ಸಂವಿಧಾನ. ಕಾಲಕ್ಕೆ ತಕ್ಕಂತೆ ಬದಲಾವಣೆಯ ಅವಶ್ಯಕತೆ ಇದ್ದರೂ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಮತ್ತು ಗೌರವಿಸುವ ಜವಾಬ್ದಾರಿ ಮತ್ತು ಕರ್ತವ್ಯ ಪ್ರತಿ ಭಾರತೀಯರದಾಗಿರುತ್ತದೆ.

ಆದ್ದರಿಂದ ಡಿಸೆಂಬರ್ 6… ಮೇಲ್ವರ್ಗ ಮತ್ತು ಕೆಳವರ್ಗಗಳ ಹಾಗು ಹಿಂದೂ, ಮುಸ್ಲೀಮರು, ಕ್ರಿಶ್ಚಿಯನ್ ಮುಂತಾದ ಧರ್ಮಗಳ ದ್ವೇಷದ ದಿನವಾಗದೆ ಇಡೀ ಭಾರತೀಯತೆಯ ನಾಗರಿಕ ಪ್ರಜ್ಞೆಯನ್ನು ಎತ್ತಿಹಿಡಿಯುವ ದಿನವಾಗಲಿ.  ಕೆಡವುವ ಮನಸ್ಥಿತಿ ತೊಲಗಿ ಕಟ್ಟುವ ಕ್ರಿಯೆಗೆ ನಾಂದಿಯಾಗಲಿ, ಒಡೆದ ಹೃದಯಗಳು ಬೆಸೆಯುವ ದಿನದ ನೆನಪಾಗಲಿ ಎಂದು ಆಶಿಸುತ್ತಾ..

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ