ಅಕಾಲ ಮಳೆ ಮತ್ತು ಕೃತಕ ನೆರೆಯ ಅವಾಂತರ

ಅಕಾಲ ಮಳೆ ಮತ್ತು ಕೃತಕ ನೆರೆಯ ಅವಾಂತರ

“ಈ ಮಳೆಗೆ ನೀರು ಮನೆಗೆ ನುಗ್ಗದಂತೆ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಜನರು ಈ ಕಷ್ಟವನ್ನು ಅನುಭವಿಸಲೇಬೇಕು. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ಸುಳ್ಳು ಆಶ್ವಾಸನೆ ನೀಡುವುದಿಲ್ಲ" ಖಾಸಗಿ ವಾರ್ತಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಮಾತುಗಳು ನಿನ್ನೆ ನನ್ನ ಕಿವಿಗೆ ಬಿತ್ತು. ಇದು ಯಾರೂ ಜನ ಸಾಮಾನ್ಯರು ಆಡಿದ ಮಾತಲ್ಲ. ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿರುವ ಓರ್ವ ರಾಜಕಾರಣಿ ಆಡಿದ ಮಾತುಗಳಿವು. ನಾನು ಕೋಣೆಯ ಒಳಗಡೆ ಇದ್ದೆ. ಆ ಮಂತ್ರಿ ಯಾರು ಎಂದು ತಿಳಿಯಲಿಲ್ಲ. ತಿಳಿದುಕೊಳ್ಳಲೂ ಹೋಗಲಿಲ್ಲ. ನಾವು ರಾಜಕಾರಣಿಯ ಮಾತುಗಳನ್ನು ನಂಬುವ ಕಾಲ ಹೊರಟುಹೋಗಿದೆ ಎಂದು ಅನಿಸತೊಡಗಿದೆ. ನೆರೆಯ ಅವಾಂತರವನ್ನು ಸರಿ ಪಡಿಸಲು ಸಾಧ್ಯವಾಗದಿರುವುದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನಾದರೂ ನೀಡಬಹುದಿತ್ತಲ್ಲವೇ ಎಂದು ನನಗೆ ಅನಿಸಿತು. 

ಮೊದಲಾದರೆ ಮಳೆ ಬಂದರೆ, ನೆರೆ ಬಂದರೆ, ಬರ ಬಂದರೆ ರಾಜಕಾರಣಿಗಳು ಓಡೋಡಿ ಬರುತ್ತಿದ್ದರು. ಆಗುತ್ತದೆಯೋ ಇಲ್ಲವೋ ಭರವಸೆಯ ಮಳೆಯನ್ನಂತೂ ಸುರಿಸುತ್ತಿದ್ದರು. ಜನರೂ ಅದೇ ಭರವಸೆಯ ಕಂಬಳಿ ಹೊದ್ದು ಮಲಗಿ ಬಿಡುತ್ತಿದ್ದರು. ಈಗಂತೂ ರಾಜಕಾರಣಿಗಳಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ನನ್ನಿಂದ ಆಗುವುದು ಇಷ್ಟೇ. ಇದರ ಮೇಲೆ ನನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ನಿರ್ಲಜ್ಜರಂತೆ ಆದರೆ ಭಾರೀ ‘ಪ್ರಾಮಾಣಿಕತೆ' ಯ ಫೋಸು ಕೊಟ್ಟು ಮಾತನಾಡುತ್ತಾರೆ. ಜನರು ನಂಬುವುದಿಲ್ಲ. ಆದರೆ ಏನೂ ಮಾಡಲಾರದೇ ಕೈಕೈ ಹಿಸುಕಿಕೊಳ್ಳುತ್ತಾರೆ ಅಷ್ಟೇ. ಕಳೆದ ಕೆಲವು ದಿನಗಳಿಂದ ಈ ಬೇಸಿಗೆ ಕಾಲದಲ್ಲೂ ನಿರಂತರ ಮಳೆಯಾಗುತ್ತಿದೆ. ಅದರಲ್ಲೂ ಮಳೆ ಬಂದರೆ ಕೆರೆಯಂತಾಗುವ ಬೆಂಗಳೂರು ನಗರದಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದೇ, ಮನೆಯೊಳಗೇ ನುಗ್ಗತೊಡಗಿದೆ. ಚರಂಡಿ ಸರಿಯಾಗಿಲ್ಲದ ಕಾರಣದಿಂದ ಮನೆಯ ಗೋಡೆಗಳಿಗೆ ನೀರು ಹೊಕ್ಕು ಅವು ಕುಸಿಯಲಾರಂಭಿಸಿವೆ. ಕುಸಿಯುತ್ತಿರುವ ಹಳೆಯ ಮಣ್ಣಿನ ಗೋಡೆಗಳು, ಸೋರುತ್ತಿರುವ ಮಾಡು, ಮನೆಯೊಳಗೆ ಹೊಕ್ಕುತ್ತಿರುವ ನೀರು, ನೀರಿನ ಜೊತೆ ಹಾವು, ಮೊಸಳೆ, ಕಸ ಎಲ್ಲವೂ ಜನರ ಬದುಕನ್ನು ಹೈರಾಣಾಗಿಸಿವೆ. ಇದು ಬೆಂಗಳೂರಿನ ಕಥೆ ಮಾತ್ರವಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ.

ಬೆಂಗಳೂರಿನಲ್ಲಿ ಈ ಕಷ್ಟ ಅಧಿಕವಾಗಲು ಒಂದಷ್ಟು ಜನರೇ ಕಾರಣ. ನೀರು ಕ್ರಮವಾಗಿ ಹರಿದು ಹೋಗುತ್ತಿದ್ದ ಕಾಲುವೆ, ಹಳ್ಳ, ಚರಂಡಿ ಎಲ್ಲವನ್ನೂ ಮುಚ್ಚಿ ಅದರ ಮೇಲೆ ಮನೆ ಕಟ್ಟಲು ಪ್ರಾರಂಭಿಸಿದ ಬಳಿಕ ಪ್ರತೀ ವರ್ಷ ಮಳೆ ಬಂದಾಗ ಈ ಸಮಸ್ಯೆ ಎದುರಾಗುತ್ತಲೇ ಇದೆ. ಈ ಕಾಲುವೆಗಳ ಒತ್ತುವರಿಗಳು ಪುಟ್ಟ ಮನೆಯಿಂದ ಹಿಡಿದು ಐಷಾರಾಮಿ ಬಹುಮಹಡಿ ಅಪಾರ್ಟ್ ಮೆಂಟ್ ಗಳ ತನಕ ನಡೆಯುತ್ತಲೇ ಇದೆ. ಇದನ್ನು ತಡೆಯಬೇಕಾದವರೆಲ್ಲಾ ಕಣ್ಣು ಮುಚ್ಚಿ ಕುಳಿತು ಕೊಂಡಿದ್ದಾರೆ. ಬೆಂಗಳೂರಿನ ಯಾವ ಆಯುಕ್ತರಿಗೂ ಒತ್ತುವರಿಗಳನ್ನು ತೆರವು ಗೊಳಿಸಲು ಸಾಧ್ಯವೇ ಆಗಿಲ್ಲ. ಕಳೆದ ಹತ್ತು ವರ್ಷದಲ್ಲಿ ಹನ್ನೆರಡು ಆಯುಕ್ತರು ಆಡಳಿತ ನಡೆಸಿದ್ದಾರೆ. ಬಹುಷಃ ಯಾವ ಆಯುಕ್ತರೂ ತಮ್ಮ ನಿಗದಿತ ಅವಧಿಯನ್ನು ಪೂರ್ಣಗೊಳಿಸಿಲ್ಲ. ಆದರೆ ಮಂತ್ರಿಗಳಿಗೆ ಮಾತ್ರ ನಮ್ಮ ಅಧಿಕಾರಾವಧಿ ಮೊಟಕುಗೊಳ್ಳಬಾರದು. ಕೆಲಸ ಮಾಡದೇ ಇದ್ದರೂ ಪರವಾಗಿಲ್ಲ, ಅಧಿಕಾರ ತಮ್ಮ ಕೈತಪ್ಪಿ ಹೋಗಬಾರದು ಎಂಬ ಮನಸ್ಥಿತಿಗೆ ಬಂದು ತಲುಪಿದ್ದಾರೆ. ಜನರಿಗೂ ಪ್ರತಿಭಟನೆ ಮಾಡಿ ಮಾಡಿ ಸಾಕಾಗಿದೆ. 

ಮೊದಲೆಲ್ಲಾ ಬಸ್ ದರ ಹತ್ತು ಪೈಸೆ ಅಧಿಕವಾದರೂ ಕಮ್ಯೂನಿಸ್ಟ್ ಪಕ್ಷದವರು, ಜನಪರ ಸಂಘಟನೆಯವರು ಮುಷ್ಕರ ಮಾಡುತ್ತಿದ್ದರು. ಆದರೆ ಈಗ ಪ್ರತಿಭಟನೆ ಸಾಂಕೇತಿಕವಾಗಿದೆ, ಅದನ್ನು ರಾಜಕಾರಣಿಗಳು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಉಪವಾಸ ಕುಳಿತುಕೊಂಡವನಿಗೆ ವಾರಗಟ್ಟಲೇ ಉಪವಾಸವೇ, ಕೊನೆಗೆ ಆತನೇ ಯಾವುದಾದರೂ ಜನಪ್ರತಿನಿಧಿಗೆ ಸಂದೇಶ ಕಳುಹಿಸಿ ಕರೆಯಿಸಿ, ಮನವಿ ಕೊಟ್ಟಂತೆ ಮಾಡಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ಕಾಲ ಬಂದಿದೆ. ಇದಕ್ಕೆಲ್ಲಾ ಕಾರಣ ಜನರಿಗೆ ಈ ಪ್ರತಿಭಟನೆಗಳ ಮೇಲೆ ನಂಬಿಕೆ ಹೊರಟು ಹೋಗಿದೆ. ನೈಜವಾದ ಪ್ರತಿಭಟನೆಗಳು ನಿಂತು ಈಗ ಕೇವಲ ಕೆಲಸವಿಲ್ಲದ ಜನರು ಹಣ ಪಡೆದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಕಾರಣ, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೂ-ಮಾಫಿಯಾ ನಡೆಯುತ್ತಿದ್ದು, ಬಹಳಷ್ಟು ಭೂಮಿ ಒತ್ತುವರಿಯಾಗಿದೆ. ಈ ಕಾರಣದಿಂದ ಸರಾಗವಾಗಿ ಹರಿಯಬೇಕಾದ ನೀರು ಹರಿದುಹೋಗದೆ ಕೃತಕ ನೆರೆ ಸೃಷ್ಟಿಯಾಗಿದೆ. ಪ್ರತೀ ವರ್ಷ ಮಳೆಗಾಲದ ಪ್ರಾರಂಭ ಅಥವಾ ಅಕಾಲಿಕ ಮಳೆಯ ಸಮಯದಲ್ಲಿ ನೆರೆಯ ಪರಿಸ್ಥಿತಿ ಉಂಟಾಗುತ್ತದೆ. ಲಕ್ಷಾಂತರ ರೂಪಾಯಿಯ ಸೊತ್ತು ನಾಶವಾಗುತ್ತದೆ. ಅಲ್ಪಸ್ವಲ್ಪ ಪರಿಹಾರ ನೀಡಿ ಜನರ ಕಣ್ಣೊರೆಸುವ ತಂತ್ರ ಮಾಡುತ್ತಾರೆ. ಜನರ ಪ್ರತಿಭಟನೆಯ ದನಿಯೇ ಇಂಗಿ ಹೋದಮೇಲೆ ರಾಜಕಾರಣಿಗಳಿಗೆ ಇನ್ನು ಯಾರ ಹೆದರಿಕೆ ಇದೆ. ಕೋಲೆ ಬಸವನಂತೆ ಪ್ರತೀ ಐದು ವರ್ಷಗೊಮ್ಮೆ ಮತದಾನ ಮಾಡುವ ಹಕ್ಕೊಂದು ಬಿಟ್ಟರೆ ಬೇರೆ ಯಾವ ಅಧಿಕಾರ ಮತದಾರನಿಗಿದೆ? ನಮ್ಮ ಜನಪ್ರತಿನಿಧಿ ಉತ್ತಮವಾಗಿ ಕೆಲಸ ಮಾಡುತ್ತಿಲ್ಲ, ನಮ್ಮ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವನನ್ನು ಹಿಂದೆ ಕರೆಸುವ (ಅಧಿಕಾರ ಮುಕ್ತಗೊಳಿಸುವ) ಅಧಿಕಾರ ಮತದಾರನಿಗಿದೆಯೇ? 

ದೇವರು ಮರೆವು ಎಂಬ ವರ (?!) ನೀಡಿದ್ದು ಬಹುಷಃ ರಾಜಕಾರಣಿಗಳಿಗೆ ಬಹಳ ಉಪಯೋಗವಾಗಿದೆ ಎಂದು ಅನಿಸುತ್ತದೆ. ಜೋರು ಮಳೆ ಬಂದು ಮನೆಯೊಳಗೆ ನೀರು ಹೊಕ್ಕಿದಾಗ ಮೈಮೇಲೆ ದೆವ್ವ ಹೊಕ್ಕಿದಂತೆ ಹಾರಾಡುವ ಜನರು ನಾಲ್ಕೇ ದಿನದಲ್ಲಿ ನೆರೆ ಇಳಿದ ತಕ್ಷಣ ಶಾಂತವಾಗುತ್ತಾರೆ. ತಮ್ಮ ಸಮಸ್ಯೆಗಳನ್ನು ಮರೆತು ಮತ್ತೆ ನೆಮ್ಮದಿಯಾಗಿರುತ್ತಾರೆ. ಇದು ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ ಗುಂಡಿಗಳು ಹೀಗೆ ಯಾವುದೇ ಸಮಸ್ಯೆಯಾಗಿರಲಿ ನಮ್ಮ ಮರೆವು ಬಹಳ. ಕರೆಂಟ್ ಇಲ್ಲದಿರುವಾಗ ಮಾತ್ರ ನಾವು ವಿದ್ಯುತ್ ಇಲಾಖೆ, ಸರಕಾರ, ಜನಪ್ರತಿನಿಧಿಯವರನ್ನೆಲ್ಲಾ ಬೈಯುತ್ತೇವೆ. ಕರೆಂಟ್ ಬಂತೋ ಎಲ್ಲವನ್ನೂ ಮರೆತು ಧಾರಾವಾಹಿ, ಕ್ರಿಕೆಟ್ ವೀಕ್ಷಣೆಯಲ್ಲಿ ಬಿಜಿಯಾಗುತ್ತೇವೆ. ಈ ನಮ್ಮ ನೆನಪಿನ ಸಮಸ್ಯೆಯಿಂದ ರಾಜಕಾರಣಿಗಳು ಹಾಗೂ ಅಧಿಕಾರಶಾಹಿ ವರ್ಗಗಳು ಬಹಳ ಆರಾಮದಿಂದ ಕಾಲ ಕಳೆಯುತ್ತಾರೆ. 

ಈ ಕಾರಣದಿಂದಲೇ ಅಧಿಕಾರ ಹಿಡಿದ ರಾಜಕಾರಣಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅಧಿಕಾರ ಸಿಕ್ಕ ಒಂದು ಅವಧಿಯಲ್ಲೇ ಸಾಕಷ್ಟು ತಿಂದು ತೇಗಿ ತಮ್ಮ ಮೂರು ತಲೆಮಾರಿಗೆ ಆಗುವಷ್ಟು ಸಂಪತ್ತನ್ನು ಮಾಡಿಡುತ್ತಾರೆ. ಈ ಅಧಿಕಾರವನ್ನು ಪಡೆಯಲೂ ಅವರು ಚುನಾವಣೆಯ ಸಮಯದಲ್ಲಿ ಕೋಟಿಗಟ್ಟಲೆ ಹಣವನ್ನು ವೆಚ್ಚ ಮಾಡಿರುತ್ತಾರೆ. ಅವೆಲ್ಲವನ್ನೂ ನಮ್ಮದೇ ತೆರಿಗೆ ಹಣದಿಂದ ಮರಳಿ ಪಡೆಯುವ ಪ್ರಯತ್ನ ಮಾಡುತ್ತಾರೆ. ಇದನ್ನೆಲ್ಲಾ ಗಮನಿಸುವಾಗ ನನಗೆ ಹಿಂದೊಮ್ಮೆ ಓದಿದ ಹಾಸ್ಯ ಪ್ರಸಂಗವೊಂದು ನೆನಪಾಗುತ್ತದೆ.

ಸ್ಮಶಾನದಲ್ಲಿ ಸಮಾಧಿಯೊಂದರ ಮೇಲೆ ಹೀಗೆ ಬರೆದಿತ್ತಂತೆ ‘ಇದು ಪ್ರಾಮಾಣಿಕ ರಾಜಕಾರಣಿಯೊಬ್ಬರ ಸಮಾಧಿ' ಎಂದು. ಇದನ್ನು ಓದಿದ ಓರ್ವ ತನ್ನ ಗೆಳೆಯನ ಬಳಿ ಹೇಳಿದನಂತೆ “ ಇಲ್ಲಿ ಇಬ್ಬರನ್ನು ಒಟ್ಟಿಗೇ ಸಮಾಧಿ ಮಾಡಿರುವರೇ?” , ಗೆಳೆಯ ಅಚ್ಚರಿಯಿಂದ ಕೇಳಿದ “ ಇಲ್ಲ, ಯಾಕೆ ನಿನಗೆ ಆ ಸಂಶಯ?” ಅದಕ್ಕೆ ಮೊದಲಿನ ಮಿತ್ರ ಹೇಳಿದನಂತೆ “ ಪ್ರಾಮಾಣಿಕ ಮತ್ತು ರಾಜಕಾರಣಿ ಎರಡೂ ಜೊತೆಯಾಗಿಯೇ ಇರುವುದು ಸಾಧ್ಯವೇ? ಅದಕ್ಕೇ ನನಗೆ ಈ ಸಂಶಯ ಬಂತು “ . ಈ ಹಾಸ್ಯ ಪ್ರಸಂಗ ಈಗೀಗ ಬಹಳ ಸತ್ಯ ಎಂದು ಅನಿಸುತ್ತದೆ. 

ಇನ್ನಾದರೂ ಜನರು, ಜೊತೆಗೆ ರಾಜಕಾರಣಿಗಳು ನೆರೆ, ಬರ ಮುಂತಾದ ಸಮಸ್ಯೆಗಳಿಗೆ ಈ ವರ್ಷದಿಂದಲೇ ಕೂಡಲೇ ಸ್ಪಂದಿಸಿ, ಮುಂದಿನ ವರ್ಷ ಈ ರೀತಿ ತೊಂದರೆಯಾಗದಂತೆ ಏನೆಲ್ಲಾ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಳ್ಳಬಹುದು ಎಂಬ ಬಗ್ಗೆ ಯೋಚನೆ ಮಾಡಲಿ. ಏಕೆಂದರೆ ಈ ಸಮಸ್ಯೆಗಳಿಗೆ ಒಂದೆರಡು ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಹಲವಾರು ವರ್ಷದಿಂದ ನೀರು ಹರಿದು ಹೋಗುತ್ತಿದ್ದ ದಾರಿಯಲ್ಲಿ ಚರಂಡಿ ನಿರ್ಮಾಣ ಮಾಡದೇ ರಸ್ತೆಯ ಎಲ್ಲೋ ಒಂದು ಭಾಗದಲ್ಲಿ ಚರಂಡಿ ಮಾಡಿದರೆ ನೀರು ಅಲ್ಲಿ ಹರಿದೀತೇ? ಖಂಡಿತಾ ಇಲ್ಲ. ಇಂತಹ ಹಲವಾರು ಎಡೆಬಿಡಂಗಿ ಯೋಜನೆಗಳನ್ನು ರದ್ದು ಮಾಡಿ ಇನ್ನಷ್ಟು ಜನಸ್ನೇಹಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಜನಪ್ರತಿನಿಧಿಗಳು ಮುಂದೆ ಬರಬೇಕಾಗಿದೆ.

ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್ ಜಾಲ ತಾಣ