ಅಕ್ಕನ ಮದುವೆ(ನೀಳ್ಗತೆ)...ಕೊನೆಯ ಭಾಗ
ಪುಟ್ಟ ಇಸ್ಕೂಲಿನಿಂದ ವಾಪಾಸು ಬಂದಾಗ ಅಕ್ಕ ಇನ್ನೂ ಕುಣಿಗಲ್ಲಿನಿಂದ ಬಂದಿರಲಿಲ್ಲ. ಒಳಗೆ ಬಂದು ಕೈಕಾಲು ಮುಖ ತೊಳೆದುಕೊಂಡ ಮೇಲೆ ಅವ್ವ ಬಂದು ‘ತಾಯೀಗೆ ಅದೇನೋ ಕಾಗದ ಬಂದದೆ ಅಂತ ಪೋಸ್ಟೋನು ಕೊಟ್ಟೋದ.. ನೋಡು ನಿಂಗೇನಾರ ಗೊತ್ತಾಯ್ತದಾ..’ ಅಂತ ಹೇಳಿ ಕೊಟ್ಟಳು. ಭಾವನೇನಾದರೂ ಅಕ್ಕನಿಗೆ ಬಾ ಅಂತ ಕಾಗದ ಬರೆದಿರಬಹುದು ಅಂದುಕೊಂಡ ಪುಟ್ಟ ಅದನ್ನು ಒಡೆಯದೆ ಸುತ್ತಾಮುತ್ತಾ ತಿರುಗಿಸಿ ನೋಡಿದ. ಅದರ ಮೇಲೆ ಇಂಗ್ಲೀಷಿನಲ್ಲಿದ್ದ ಅಕ್ಕನ ಹೆಸರು ಅಡ್ರಸ್ಸು ಓದಿ ಹಿಂದೆ ತಿರುಗಿಸಿ ನೋಡಿದ. ಯಾರದೋ ಹೆಸರಿನ ಕೆಳಗೆ ಅಡ್ವೋಕೇಟ್ ಬೆಂಗಳೂರು ಅಂತ ಇದ್ದದ್ದು ಕಂಡು ‘ ಅದೇನೋ ನಂಗೆ ಗೊತ್ತಾಯ್ತಾ ಇಲ್ಲ.. ಒಡೆಯದು ಬ್ಯಾಡ ಅಕ್ಕುನೇ ಬರ್ಲಿ ತಡಿ..’ ಎಂದು ಹೇಳಿ ಕಾಗದ ಹಿಡಿದುಕೊಂಡೇ ಅಕ್ಕನಿಗಾಗಿ ಆತುರದಿಂದ ಕಾಯತೊಡಗಿದ.
ಅಕ್ಕ ಬಂದ ತಕ್ಷಣ ಪಡಸಾಲೆಯಲ್ಲಿ ಅವ್ವನೊಂದಿಗೆ ಕುಳಿತಿದ್ದ ಪುಟ್ಟ ‘ಅಕ್ಕೋ.. ತಗೋಳೇ ಯಾರೋ ನಿಂಗೆ ಕಾಗ್ದ ಬರ್ದವ್ರೆ..’ ಅಂತ ಹೇಳಿ ಕೊಟ್ಟ. ಕಾಗದವನ್ನು ಹಿಂದೆ ಮುಂದೆ ತಿರುಗಿಸಿ ನೋಡಿದ ಅಕ್ಕ ಅದನ್ನು ಒಡೆದು ಓದಿದವಳ ಮುಖ ಸಿಟ್ಟಿನಿಂದ ಕೆಂಪಾಗಿದ್ದು ಕಂಡು ಪುಟ್ಟನಿಗೆ ಹೆದರಿಕೆಯಾಯಿತು. ಅಕ್ಕ ‘ಅವ್ವೋ ಲಾಯರ್ ನೋಟೀಸು ಕಳಿಸವ್ರೆ ಕಣವ್ವೋ..’ ಅಂದಾಗ ಅವ್ವನಿಗೆ ಏನೆಂದು ತಿಳಿಯದೆ ‘ಏನಂತ ಕಳಿಸವ್ರೇ ತಾಯಿ..’ ಅಂದಳು. ‘ ನನ್ನನ್ನು ಬಿಟ್ಟುಬಿಡಕ್ಕೆ ಕೋರ್ಟಿಗೆ ಹಾಕವ್ರೆ.. ನಾನು ಅಲ್ಲಿಗೆ ಹೋಗಬೇಕಂತೆ..’ ಅಂದಾಗ ಅವ್ವ ಕುಳಿತವಳು ಒಂದೇ ಸಾರಿ ಮೇಲಕ್ಕೆದ್ದು ಹಣೆ ಚಚ್ಚಿಕೊಂಡು ‘ಅಯ್ಯೋ.. ಅಯ್ಯೋ..ಅಯ್ಯೋ.. ನನ್ನ ಮನೆ ಹಾಳ್ಮಾಡುಟ್ರಲ್ಲೇ ಕಂದಾ.. ನಾವೇನು ಪಾಪ ಮಾಡಿದ್ವೆ..’ ಅಂತ ಗೋಳಾಡತೊಡಗಿದಾಗ ಅಕ್ಕನೇ ‘ಅದುಕ್ಯಾಕೆ ಅಳ್ತೀಯವ್ವೋ.. ಪ್ರಪಂಚ ಏನು ಮುಳುಗೋಯ್ತದಾ.. ನಂಗೆ ಇಷ್ಟು ಬುದ್ಧಿ ಇದ್ದಿದ್ರೆ ಯಾವಾಗ್ಲೋ ನಾನೇ ಈ ಕೆಲ್ಸ ಮಾಡ್ತಿದ್ದೆ ..’ಅಂದಿದ್ದು ಕಂಡು ಪುಟ್ಟನಿಗೆ ಆಶ್ಚರ್ಯವಾಯಿತು. ಆದರೂ ಅವ್ವನಿಗೆ ಸಮಾಧಾನವಾಗದೆ ‘ಇರವ್ವಾ.. ಮುಂಚೆ ನಿಮ್ಮಪ್ಪುನ್ನ ಕರ್ಕಂಬತ್ತೀನಿ..’ ಅಂತ ಎದ್ದು ಹೊಲದ ಕಡೆಗೆ ಬಿರಬಿರನೆ ನಡೆದುಹೋದಳು.
ಅಪ್ಪ, ಅವ್ವನ ಜೊತೆ ಅಳುಮುಖ ಹಾಕಿಕೊಂಡು ಬಂದವನೇ ಪಡಸಾಲೆಯಲ್ಲಿ ಕುಳಿತು ‘ತಾಯೀ...’ ಅಂತ ಕೂಗಿದವನು ಅಕ್ಕ ಹೊರಗೆ ಬಂದ ಮೇಲೆ ‘ಎಲ್ಲಾ ಮುಗಿದೋಯ್ತಲ್ಲವ್ವಾ.. ಬಡ್ಡೀಮಕ್ಳು ಮೋಸ ಮಾಡ್ಬುಟ್ರು..’ ಅಂತ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತ. ‘ಸುಮ್ನಿರ್ತೀರಾ ನೀವಿಬ್ರೂ.. ಏನಾಗದೆ ಅಂತ ಹಿಂಗೆ ಗೋಳಾಡ್ತಿದೀರಾ.. ಅವನಿಲ್ದೆ ಬೆಳಕಾಗಲ್ವಾ.. ದೇವ್ರು ನಂಗೂ ದುಡಿಯೋ ದಾರಿ ತೋರಿಸವ್ನೆ.. ನನ್ನ ಅನ್ನ ನಾನು ಹುಟ್ಟಿಸ್ಕಂಡು ತಿಂತೀನಿ ಸುಮ್ನಿರಿ.. ಹೆಂಗೋ ಒಬ್ಬ ತಮ್ಮ ಅವ್ನೆ.. ಅವುನುನ್ನೇ ಚೆನ್ನಾಗಿ ಓದ್ಸಿ ನನ್ನ ಮಗ ಅಂದ್ಕತೀನಿ..’ ಅಂತ ಅಕ್ಕ ಹೇಳಿದಾಗ ಪುಟ್ಟ ಹೋಗಿ ‘ಅಕ್ಕೋ..’ ಅಂತ ಅಕ್ಕನನ್ನು ತಬ್ಬಿಕೊಂಡು ಬಿಕ್ಕಳಿಸತೊಡಗಿದ. ‘ಹೆಂಗಾರ ಆಗ್ಲಿ ಪಟೇಲ್ರುನ ಕರ್ಕಂಡೋಗಿ ಒಂದ್ಸತಿ ನ್ಯಾಯ ಮಾಡ್ಸನ.. ಇಂತೋವೆಲ್ಲಾ ಎಷ್ಟೋ ಸಮಸ್ಯೇನಾ ಪಟೇಲ್ರು ಬಗೆಹರಿಸವ್ರೆ ಆಮ್ಯಾಲೆ ಏನು ಮಾಡಾದು ನೋಡಾನ..’ ಅಂದ ಅಪ್ಪನ ಮಾತು ಕೇಳಿ ಅಕ್ಕ ‘ಗಂಡ ಹೆಂಡ್ತಿ ಚೆನ್ನಾಗಿದ್ರು.. ಏನೋ ಒಂದು ಮಾತು ಬಂದದೆ, ಒಂಚೂರು ಬುದ್ಧಿ ಹೇಳುದ್ರೆ ಹೆಂಗೋ ಸರಿಯಾಯ್ತರೆ ಅನ್ನಂಗಿದ್ದರೆ ನೀನೇಳುದಂಗೆ ನ್ಯಾಯ ಪಂಚಾಯ್ತಿ ಮಾಡ್ಬೋದಿತ್ತು.. ದುಡ್ಡು ತರದೇ ಇದ್ರೆ ಮನೀಗೆ ಬರ್ಬೇಡ ಅಂತ ಕಟ್ಟಕೊಂಡೋಳುನ್ನ ತವರು ಮನಿಗೆ ಕಳ್ಸೋ ಮುಠ್ಠಾಳುನತ್ರ ಏನು ಮಾತಾಡೋದಯ್ತೆ..’ ಅಂದದನ್ನು ಕೇಳಿ ಅವ್ವ-ಅಪ್ಪ ಇಬ್ಬರಿಗೂ ಸರಿಯೆನ್ನಿಸಿತೇನೋ ಸುಮ್ಮನೆ ಮಾತನಾಡದೆ ಕುಳಿತರು. ಅಕ್ಕನಿಗೆ ಇಷ್ಟು ಧೈರ್ಯ ಎಲ್ಲಿಂದ ಬಂತು ಅಂತ ಪುಟ್ಟನಿಗೆ ಸೋಜಿಗವಾಯಿತು.
ಸ್ವಲ್ಪ ಹೊತ್ತು ಸುಮ್ಮನಿದ್ದ ಅಕ್ಕ ‘ಏನೋ ನೀವಿಬ್ರು ನನ್ಮಗಳು ಬಾಳು ಹಿಂಗಾಗೋಯ್ತಲ್ಲಾ ಅಂತ ಕೊರಗ್ತಿರ ಅಂತ ನಾನೂ ಯೋಚ್ನೆ ಮಾಡಿ ಇದೊಂದು ಸತಿ ನೋಡಾನ ಅಂತ ಹೊರಟಿದ್ದೆ. ಅಷ್ಟರಲ್ಲಿ ಘನಂದಾರಿ ಕೆಲ್ಸ ಮಾಡಿದೀನಿ ಅಂತ ಲಾಯರ್ ನೋಟೀಸ್ ಕಳಿಸವ್ನೆ.. ಕಟ್ಕಂಡ ಹೆಂಡ್ತಿ ಜೊತೆ ನೆಟ್ಟುಗೆ ಸಂಸಾರ ಮಾಢ್ಬೇಕು ಅನ್ನೋನು ಮಾಡ ಕೆಲ್ಸವಾ ಇದು.. ಇನ್ನ ಇವರು ದುಡ್ಡು ಕೊಡಂಗೆ ಕಾಣ್ಸಲ್ಲ.. ಇನ್ನೊಬ್ಳುನ್ನ ಕಟ್ಕಂಡು ಅವಳ ಅಪ್ಪ-ಅವ್ವನ ಹತ್ರ ವಸಿ ಕಿತ್ತುಕಳಾನ ಅಂತ ಮಾಡಿರ್ಬೇಕು... ನಾನೂ ತಪ್ಪು ಮಾಡ್ಬುಟ್ಟೆ ಅವೊತ್ತೇ ಹೋಗಿ ಬೆಂಗಳೂರಲ್ಲೇ ಪೋಲೀಸ್ನೋರಿಗೆ ಕಂಪ್ಲೇಂಟು ಕೊಟ್ಟು ಬರ್ಬೇಕಾಗಿತ್ತು.. ನೀವೇನು ಯೋಚ್ನೆ ಮಾಡ್ಬೇಡಿ.. ಕುಣಿಗಲ್ಲಿಗೋಗಿ ಯಾರಾರ ಲಾಯರ್ ನೋಡಿ ಏನ್ ಮಾಡಾದು ವಿಚಾರಿಸಿ ಅವನಿಗೂ ಅವನು ಕಟ್ಟಿರೋ ತಾಳೀಗೂ ಎಳ್ಳು ನೀರು ಬಿಟ್ಟು ಬರ್ತೀನಿ..’ ಅಂದಳು.
ಅವೊತ್ತು ರಾತ್ರಿ ಅಕ್ಕ ಊಟ ಮಾಡಿ ಚಾಪೆ ಹಾಸಿಕೊಂಡು ಸಮಾಧಾನವಾಗಿ ಮಲಗಿದಳು. ಅಕ್ಕನ ಪಕ್ಕದಲ್ಲಿ ಮಲಗಿದ್ದ ಪುಟ್ಟನ ಕಣ್ಣಿಗೆ ನಿದ್ರೆ ಹತ್ತದೆ ಹೊರಗೆ ಹೋಗಿ ಪಡಸಾಲೆಯಲ್ಲಿ ಅಪ್ಪನೊಂದಿಗೆ ಮಾತನಾಡುತ್ತಾ ಕುಳಿತಿದ್ದ ಅವ್ವನ ತೊಡೆಯ ಮೇಲೆ ಮಲಗಿಕೊಂಡ. ‘ನಾವೂ ತೆಪ್ಪು ಮಾಡ್ದೋ.. ಕಷ್ಟವೋ ಸುಖವೋ ಕಾಲೇಜು ಓದ್ಸಿ ಆಮ್ಯಾಲೆ ಮದುವೆ ಮಾಡ್ಬೇಕಾಗಿತ್ತು. ಅದುಕ್ಕೂ ಪ್ರಪಂಚ ನೋಡಿ ತಿಳುವಳಿಕೆ ಬಂದಿರೋದು.. ಬುದ್ಧೀನೂ ಬಲ್ತೀರೋದು.. ಜವಾಬ್ದಾರಿ ಕಳಕಳಾನ ಅಂತ ಆತುರಪಟ್ಟು ಏನು ಎತ್ತ ಅಂತ ಸರಿಯಾಗಿ ಇಚಾರಿಸ್ದೆ ಮದ್ವೆ ಮಾಡ್ಬುಟ್ಟೋ..’ ಅಂತ ಅಪ್ಪ ಉಸಿರುಬಿಟ್ಟಿದ್ದು ಪುಟ್ಟನಿಗೆ ಕಾಣಿಸಿತು. ‘ಹಿಂಗಾಯ್ತದೆ ಅಂತ ಯಾರಿಗ್ಗೊತ್ತಿತ್ತು.. ಏನೋ ಅವಳ ಹಣೇಲಿ ಏನು ಬರದದೋ ನೋಡಾನ ತಗೋ.. ಈಗಿನ ಕಾಲುದಲ್ಲಿ ದುಡ್ಡಿಗೆ ಪೀಡಿಸಿ ಹೆಣ್ಮಕ್ಕಳು ಜೀವ ತೆಗೆಯೋ ಜನಾನು ಅವ್ರೆ.. ಅದುನ್ನೋಡ್ಕಂಡ್ರೆ ದೇವ್ರು ನಮಿಗೆ ಒಳ್ಳೇದೇ ಮಾಡವ್ನೆ.. ಹೆಂಗೋ ನನ್ಮಗಳು ನಮ್ಮ ಕಣ್ಣ್ಣೆದುರಿಗೆ ಇರ್ತಳೆ..’ ಅಂದ ಅವ್ವನ ಮಾತು ಕೇಳಿ ಪುಟ್ಟ ‘ನಾನೇ ನಮ್ಮಕ್ಕುನ್ನ ನೋಡ್ಕತೀನಿ ಬುಡವ್ವೊ..’ ಅಂತ ಹೇಳಬೇಕೆಂದುಕೊಂಡವನು ಹೇಳದೆ ಸುಮ್ಮನಾದ.
ಬೆಳಿಗ್ಗೆ ಅಕ್ಕ ‘ಅವ್ವೋ ಕುಣಿಗಲ್ಲಿಗೆ ಹೋಗಿ ಬರ್ತೀನಿ’ ಅಂತ ಹೇಳಿ ಹೊರಟವಳು ವಾಪಾಸು ಬಂದಾಗ ಸಾಯಂಕಾಲ ಆಗಿತ್ತು. ‘ಬ್ಯಾಂಕಲ್ಲಿ ವಿಚಾರಿಸ್ದೆ.. ಹೊಲಿಗೆ ಮೆಷಿನ್ ತಗೋಳ್ಳಕ್ಕೆ ಸಾಲ ಕೊಡ್ತಾರಂತೆ.. ಮಾಗಡಿಪಾಳ್ಯ ಕ್ರಾಸಲ್ಲಿ ಅಂಗಡಿ ಬಾಡಿಗೆಗೆ ತಗಂಡು ಬಟ್ಟೆ ಹೊಲಿತೀನಿ..’ ಅಂದ ಅಕ್ಕನ ಮಾತಿಗೆ ಅವ್ವ ‘ಅಂಗೇ ಮಾಡು..’ ಅಂದಳು. ಸ್ವಲ್ಪ ದಿನದ ಓಡಾಟದ ನಂತರ ಅಕ್ಕ ಕ್ರಾಸಿನಲ್ಲಿ ಹೊಸ ಅಂಗಡಿ ತೆಗೆದು ಬಟ್ಟೆ ಹೊಲಿಯಲು ಶುರು ಮಾಡಿದಳು. ದಿನಾ ಬೆಳಿಗ್ಗೆ ಅವ್ವ ಮಾಡಿದ ರೊಟ್ಟಿ ತಿಂದು ಮದ್ಯಾಹ್ನುಕ್ಕೆ ಅನ್ನಸಾರು ಕಟ್ಟಿಕೊಂಡು ಹೋಗುತಿದ್ದವಳು ಸಾಯಂಕಾಲ ಹೊತ್ತುಮುಳುಗುವ ಹೊತ್ತಿಗೆ ಮನೆಯಲ್ಲಿರುತಿದ್ದಳು. ಒಂದು ದಿನ ಅವ್ವನನ್ನು ಕರೆದುಕೊಂಡು ಬೆಂಗಳೂರಿಗೆ ಕೋರ್ಟಿಗೂ ಹೋಗಿಬಂದವಳ ಮುಖದಲ್ಲಿ ಖುಷಿ ಕಾಣಿಸುತಿತ್ತು. ಮತ್ತೆ ಮೂರ್ನಾಲ್ಕು ಸರ್ತಿ ಕೋರ್ಟಿಗೆಂದು ಬೆಂಗಳೂರಿಗೆ ಹೋಗಿಬಂದಳು. ಹೀಗೆ ಒಂದು ದಿನ ಕೋರ್ಟಿಗೆ ಹೋಗಿಬಂದ ಮೇಲೆ ಅಕ್ಕನ ಕತ್ತಿನಲ್ಲಿದ್ದ ತಾಳಿ ಮತ್ತು ಕಾಲುಬೆರಳಿನಲ್ಲಿದ್ದ ಕಾಲುಂಗರಗಳು ಮಾಯವಾಗಿದ್ದವು. ಅಕ್ಕನಿಗೆ ಪೀಡಿಸುತಿದ್ದ ಭಾವನಿಂದ ಬಿಡುಗಡೆ ಸಿಕ್ಕಿತು ಎಂದು ಪುಟ್ಟನಿಗೆ ಅನ್ನಿಸಿ ಅಲ್ಲಿಯವರೆಗೂ ಬ್ಯಾಗಿನಲ್ಲೇ ಇದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನ ಹರಿದು ಚೂರು ಚೂರು ಮಾಡಿ ತಿಪ್ಪೆಯ ಮೇಲೆ ಬಿಸಾಕಿದ. ದಿನವೂ ಕಷ್ಟಪಟ್ಟು ಓದುತಿದ್ದ ಪುಟ್ಟ ಐದನೇ ತರಗತಿಯಲ್ಲಿ ಇಸ್ಕೂಲಿಗೇ ಫಸ್ಟು ಬಂದು ಪಾಸಾಗಿದ್ದ.
ಅಕ್ಕ ದಿನವೂ ಕ್ರಾಸಿಗೆ ನಡ್ಕಂಡು ಹೋಗಿ ಅಲ್ಲೂ ಹೊಲಿಗೆ ಮೆಷಿನ್ ತುಳಿಬೇಕು ಅನ್ನುವುದನ್ನು ನೆನಪಿಸಿಕೊಂಡು ಪುಟ್ಟನಿಗೆ ಸಂಕಟವಾಗುತಿತ್ತು. ತನ್ನ ಸ್ನೇಹಿತ ಮಂಜ ತರುತಿದ್ದ ಸೈಕಲ್ಲಿನಲ್ಲಿ ಸೈಕಲ್ ಹೊಡೆಯುವುದು ಕಲಿತಿದ್ದ ಪುಟ್ಟ ಒಂದು ದಿನ ‘ಅಪ್ಪೋ ನಂಗೊಂದು ಸೈಕಲ್ ಕೊಡ್ಸಪ್ಪೋ..’ ಎಂದು ಅಪ್ಪನನ್ನು ಕೇಳಿದ. ‘ನಿಂಗ್ಯಾಕೆ ಈಗ್ಲೇ ಸೈಕಲ್ ಸುಮ್ನಿರೋ..ದುಡ್ಡೆಲ್ಲಿಂದ ತರಾನ..’ಅಂತ ಅಪ್ಪ ರೇಗಿದ. ಅಕ್ಕ ಬಟ್ಟೆ ಹೊಲಿಯುವುದರಿಂದ ಬಂದ ದುಡ್ಡನ್ನು ಅವ್ವನ ಕೈಲಿ ತಂದುಕೊಡುತಿದ್ದವಳು ‘ಅವ್ವೋ ದುಡ್ಡು ಕೊಡವ್ವೋ ಅವನಿಗೊಂದು ಸೈಕಲ್ ತಕ್ಕೊಡಾನ..’ ಅಂದಾಗ ಅವ್ವ ‘ಸುಮ್ನಿರೆ ತಾಯಿ.. ಬ್ಯಾಂಕಿನ ಸಾಲ ತೀರಿಸಕ್ಕೆ ಬ್ಯಾಡ್ವಾ..’ಅಂದಳು. ‘ಅದನ್ನೂ ತೀರಿಸಿದ್ರಾಯ್ತು ಇನ್ನೂ ಟೈಮದೆ’ ಎಂದು ಹೇಳಿದ ಅಕ್ಕ ಪುಟ್ಟನನ್ನು ಕುಣಿಗಲ್ಲಿಗೆ ಕರೆದುಕೊಂಡು ಹೋದಳು. ಪುಟ್ಟ, ಹುಡುಗಿಯರು ತುಳಿಯುವ ಸೈಕಲನ್ನು ಆರಿಸಿದಾಗ ‘ಅದುನ್ಯಾಕೋ ತಗತೀಯಾ..’ ಅಂದಳು ಅಕ್ಕ. ನಂಗೆ ಕಾಲು ಎಟುಕದಿಲ್ಲ ಸುಮ್ನಿರು ಎಂದು ಹೇಳಿ ಅದೇ ಸೈಕಲ್ ತಂದ ಪುಟ್ಟ ಆಗಾಗ ಅಕ್ಕನನ್ನು ಪುಸಲಾಯಿಸಿ ‘ನೀನೂ ಸೈಕಲ್ ಕಲ್ತುಕಳೆ ಅಕ್ಕೋ..’ ಎಂದು ಹೇಳಿ ಅಕ್ಕನಿಗೆ ಸೈಕಲ್ ಕಲಿಸಿದ. ಅಕ್ಕ ಅದಾದ ಮೇಲೆ ಸೈಕಲ್ಲಿನಲ್ಲಿಯೇ ಕ್ರಾಸಿಗೆ ಹೋಗಿ ಬರುತಿದ್ದುದು ಕಂಡು ಪುಟ್ಟನಿಗೆ ಸಮಾಧಾನವಾಗಿತ್ತು. ಅಕ್ಕ ಬಟ್ಟೆ ಹೊಲಿಯುವ ಕೆಲಸದಲ್ಲಿ ಎಲ್ಲವನ್ನು ಮರೆತು ಮೊದಲಿನಂತೆ ನಗುನಗುತ್ತಾ ಇರತೊಡಗಿದಳು. ಪುಟ್ಟನಿಗೆ ಅಕ್ಕನ ಮುಖವನ್ನು ನೋಡಿದಾಗಲೆಲ್ಲಾ ನಮ್ಮಕ್ಕ ಅಂದ್ರೆ ಅಕ್ಕ.. ಅವಳಂತೋರು ಊರಲ್ಲೇ ಯಾರೂ ಇಲ್ಲ ಎನಿಸಿ ಹೆಮ್ಮೆಯಾಗುತಿತ್ತು.
ಒಂದು ದಿನ ಮನೆಗೆ ಬಂದ ಅಕ್ಕ ಯಾಕೋ ಮುಖ ಚಿಕ್ಕದು ಮಾಡಿಕೊಂಡು ‘ಅವ್ವೋ ಈಗ ಮೂರು ದಿನದಿಂದ ಆ ಕೊನೆಮನೆ ರಾಜ ನಾನು ಸೈಕಲ್ಲು ಹೊಡ್ಕಂಡು ಬರ್ತಿದ್ರೆ ಹಿಂದೇನೆ ಆಟೋ ಓಡಿಸ್ಕಂಡು ಬರ್ತನೆ..’ ಅಂತ ಅವ್ವನ ಬಳಿ ಹೇಳಿದ್ದು ಕಂಡು ಅವ್ವ ‘ಅವನಿಗೇನು ತಿಂದಿಟ್ಟು ಹೆಚ್ಚಾಗದೇನೋ.. ಇನ್ನೊಂದು ಸತಿ ಅಂಗೇನಾರ ಮಾಡುದ್ರೆ ಹೇಳು ವಸಿ ಗಾಚಾರ ಬುಡಿಸ್ತೀನಿ.. ನಮ್ಮ ಪಾಡಿಗೆ ನಾವಿರೋಕ್ಕು ಬುಡೋದಿಲ್ಲ ಈ ಹಾಳು ಜನ.. ಈ ಗಂಡುಸು ಜಾತೀನೇ ಅಂತದು..’ ಎಂದು ಸಿಟ್ಟಿನಿಂದ ಹೇಳಿದ್ದು ಕಂಡು ಪುಟ್ಟನಿಗೂ ‘ಅವ್ನಿಗೆಲ್ಲೋ ಗಾಚಾರ ಕೆಟ್ಟುಹೋಗದೆ’ ಅನ್ನಿಸಿತು. ರಾತ್ರಿ ಅಪ್ಪ ಬಂದ ಮೇಲೆ ಅಪ್ಪನಿಗೂ ಅವ್ವ ವಿಷಯ ತಿಳಿಸಿದಳು. ಅಪ್ಪ ‘ಯಾಕೆ ಅವ್ನಿಗೇನು ತಲೆಗಿಲೆ ಕೆಟ್ಟದಾ.. ಇನ್ನೊಂದು ಸತಿ ಅವ್ನು ಅಂಗೇನಾರ ಮಾಡುದ್ರೆ ಊರು ಮುಂದೆ ಕಂಬುಕ್ಕೆ ಕಟ್ಟಿಸ್ತೀನಿ..’ ಅಂದ. ‘ಅಯ್ಯೋ ಅದುಕ್ಯಾಕೆ ನೀನು ಎದೆ ನೋಯಿಸಕ್ತೀಯಾ ಸುಮ್ನಿರಪ್ಪೋ.. ಅವ್ನು ಅಂಗೇ ಆಡ್ತಾ ಇದ್ರೆ ಮೈಯ್ಯಿಗೆ ಎಂಗದೆ ಅಂತ ನಾನೇ ಕೇಳ್ತಿನಿ..’ ಅಂದು ಅಕ್ಕ ಸುಮ್ಮನಾದಳು.
ಬೆಳಿಗ್ಗೆ ಎದ್ದ ಪುಟ್ಟ ಮುಖ ತೊಳೆದುಕೊಂಡು ಬಂದು ಓದಲು ಕುಳಿತಾಗ ರಾಜಣ್ಣ ಮತ್ತು ಅವನ ಅವ್ವ ಇಬ್ಬರೂ ಒಳಗೆ ಬಂದಿದ್ದು ಕಂಡು ದಿಗಿಲಾಗಿ ಎದ್ದವನೇ ಹಿತ್ತಲಿನಲ್ಲಿ ಕಸ ಗುಡಿಸುತಿದ್ದ ಅವ್ವನಿಗೆ ವಿಷಯ ಮುಟ್ಟಿಸಿದ. ಅಡಿಗೆ ಮನೆಯಲ್ಲಿ ಕಾಫಿ ಸೋಸುತಿದ್ದ ಅಕ್ಕನಿಗೂ ಅದು ಕೇಳಿಸಿ ಅವಳೂ ಎದ್ದು ನಡುಮನೆಗೆ ಬಂದಳು. ಅಷ್ಟರಲ್ಲಿ ಬೀಡಿ ತರಲೆಂದು ಅಂಗಡಿಗೆ ಹೋಗಿದ್ದ ಅಪ್ಪನೂ ಒಳಗೆ ಬಂದು ರಾಜಣ್ಣ ಮತ್ತು ಅವನ ಅವ್ವನನ್ನು ಕಂಡು ಮುಖ ದಪ್ಪಗೆ ಮಾಡಿಕೊಂಡು ‘ಏನಕ್ಕಾ ಬೆಳಿಗ್ಗೇನೆ ಬಂದಿದೀರಿ..’ ಅಂದ. ‘ಏನೂ ಇಲ್ಲ ಕಣೋ ದೊಡ್ಡೋನೆ.. ನಿಂತಾವ ವಸಿ ಮಾತಾಡ್ಬೇಕಿತ್ತು.’ ಅಂದ ರಾಜಣ್ಣನ ಅವ್ವನಿಗೆ ಅಪ್ಪ ‘ಅದೇನು ಮಾತಾಡ್ಬೇಕು ಹೇಳು..’ ಅಂದ.
‘ನಮ್ಮುಡುಗ ನಿಮ್ಮ ತಾಯವ್ವುನ್ನ ಮುದುವೆ ಆಯ್ತಿನಿ ಕೇಳಾನ ನಡಿ.. ಅಂತ ಕರ್ಕಂಬಂದವ್ನೆ..’ ಅಂದಾಗ ಅಪ್ಪ, ಅವ್ವ ಮತ್ತು ಅಕ್ಕನ ಮುಖದಲ್ಲಿ ಮೂಡಿದ ಆಶ್ಚರ್ಯ ಪುಟ್ಟನಿಗೆ ಕಾಣಿಸಿತು. ಏನು ಹೇಳಬೇಕೆಂದು ತಿಳಿಯದೇ ಅವರೆಲ್ಲಾ ಕಲ್ಲಿನಂತೆ ನಿಂತಿದ್ದನ್ನು ಕಂಡು ಪುಟ್ಟ ಹೋಗಿ ಮೂಲೆಯಲ್ಲಿದ್ದ ಚಾಪೆಯನ್ನು ತಂದು ಹಾಸಿದ. ಅವ್ವ ಎಚ್ಚರಗೊಂಡವಳಂತೆ ‘ಕುತ್ಕೋಳಕ್ಕಾ.. ಕುತ್ಕಳೋ ರಾಜ..’ ಅಂದಳು. ಅಪ್ಪನಿಗೆ ಏನನ್ನಿಸಿತೋ ‘ಅಕ್ಕೋ ನಿಂದು ಎಂತಾ ದೊಡ್ಡ ಮನಸ್ಸಕ್ಕೋ..’ ಎಂದು ರಾಜಣ್ಣನ ಅವ್ವನ ಕೈ ಹಿಡಿದುಕೊಂಡ. ‘ಅದ್ರಲ್ಲೇನದೆ ತಗೊಳೋ ದೊಡ್ಡೋನೆ.. ಮೈಯಿಗಾಗಿರೋ ಮದುವೆ ಮದುವೇನೆ ಅಲ್ಲ.. ಮದುವೆ ಯಾವಾಗ್ಲೂ ಮನಸ್ಸಿಗಾಗ್ಬೇಕು.. ಚಿಕ್ಕುದ್ರಲ್ಲೇ ಗಂಡುನ್ನ ಕಳಕಂಡು ನನ್ಮಗುನ್ನ ಬೆಳಿಸಿ ನಾನು ಗಂಡಸಿಲ್ದೆ ಹೆಂಗ್ಸು ಬದುಕ್ಬೋದು ಅಂತ ತೋರಸಿಲ್ವಾ.. ಆದ್ರೂ ಗಂಡುಸು ಮಾತ್ರ ಎಷ್ಟು ಸತಿನಾದ್ರೂ ಮದ್ವೆಯಾಗ್ಬೋದು.. ಹೆಂಗ್ಸು ಯಾಕಾಗಬಾರ್ದು ಅಂತ ನಂಗೆ ಅನ್ನಿಸ್ತಿದ್ರೂ ಅದುನ್ನ ಯಾರತ್ರನೂ ಹೇಳಿಕಳದಲೇ ಅಂಗೇ ಜೀವ್ನ ಸವುಸ್ಬುಟ್ಟೆ. ನಿನ್ನ ಮಗಳಿಗೆ ಅಂಗಾಗದು ಬ್ಯಾಡ. ಅವುಳುನ್ನೂ ಒಂದು ಸತಿ ಕೇಳು..’ ಅಂದಾಗ ಅಕ್ಕ ಗೋಡೆಗೊರಗಿ ನಿಂತಿದ್ದವಳು ‘ನಂದೇನೂ ಇಲ್ಲ ಅಪ್ಪ-ಅವ್ವ ಒಪ್ಪಿಕಂಡ್ರೆ ಆಯ್ತು’ ಅಂದಳು. ಅವ್ವ ‘ಅಕ್ಕೋ.. ನಮ್ಮ ಪಾಲಿಗೆ ನೀನು ಬ್ಯಾರೆ ಅಲ್ಲ ಆ ದೇವ್ರು ಬ್ಯಾರೆ ಅಲ್ಲ ಕಣಕ್ಕಾ..’ ಎಂದು ಕಣ್ಣಿನಲ್ಲಿ ನೀರು ತುಂಬಿಕೊಂಡಳು. ‘ಅಷ್ಟೊಂದು ದೊಡ್ಡ ಮಾತು ಬ್ಯಾಡ.. ಯಾರೂ ದೇವ್ರಾಗಕ್ಕಾಗಲ್ಲ.. ಇನ್ನೊಬ್ರು ಕಷ್ಟಸುಖುಕ್ಕೆ ಆಗೋ ಒಳ್ಳೇ ಮನುಸ್ರಾದ್ರೆ ಅಷ್ಟೇ ಸಾಕು..’ ಅಂತ ರಾಜಣ್ಣನ ಅವ್ವ ಹೇಳಿದಾಗ ಪುಟ್ಟನಿಗೆ ಆ ಮಾತು ನಿಜವೆನ್ನಿಸಿತು. ಮತ್ತೆ ಅಕ್ಕನ ಮದುವೆಯ ಚಪ್ಪರ ಕಣ್ಣುಮುಂದೆ ಬಂದು ವಾಲಗದ ಸದ್ದು ಕೇಳಿಸಿದಂತಾಗಿ ಅವನ ಮನಸ್ಸು ಹಕ್ಕಿಯಂತೆ ಹಾರಾಡತೊಡಗಿತ್ತು.
*************************
Comments
ತಿಮ್ಮಪ್ಪ ರವರಿಗೆ ನಮಸ್ಕಾರಗಳು,
In reply to ತಿಮ್ಮಪ್ಪ ರವರಿಗೆ ನಮಸ್ಕಾರಗಳು, by neela devi kn
ಒಳ್ಳೆಯ ಸಂದೇಶ ನೀಡುವ ಕತೆ.
In reply to ಒಳ್ಳೆಯ ಸಂದೇಶ ನೀಡುವ ಕತೆ. by Premashri
ಸಿಂಪಲ್ಲಾಗಿ ಒಂದು ಸಣ್ಣ ಸುಂದರ
In reply to ಸಿಂಪಲ್ಲಾಗಿ ಒಂದು ಸಣ್ಣ ಸುಂದರ by Shreekar
ಶ್ರೀಕರ್ ರವರೇ ಧನ್ಯವಾದಗಳು..
In reply to ಒಳ್ಳೆಯ ಸಂದೇಶ ನೀಡುವ ಕತೆ. by Premashri
ಪ್ರೇಮಾಶ್ರೀರವರಿಗೆ ಧನ್ಯವಾದಗಳು..
In reply to ತಿಮ್ಮಪ್ಪ ರವರಿಗೆ ನಮಸ್ಕಾರಗಳು, by neela devi kn
ನೀಳಾ ದೇವಿ ಮೇಡಮ್, ನಮಸ್ಕಾರ..
In reply to ನೀಳಾ ದೇವಿ ಮೇಡಮ್, ನಮಸ್ಕಾರ.. by tthimmappa
ತಿಮ್ಮಪ್ಪ ನವರಿಗೆ ನಮಸ್ಕಾರಗಳು,
In reply to ತಿಮ್ಮಪ್ಪ ನವರಿಗೆ ನಮಸ್ಕಾರಗಳು, by neela devi kn
ಮೇಡಮ್ ನಮಸ್ಕಾರ...............