ಅಕ್ಕಿ ಅಕ್ರಮ ದಂಧೆಗೆ ಕಡಿವಾಣ ಬೀಳಲಿ

ಅಕ್ಕಿ ಅಕ್ರಮ ದಂಧೆಗೆ ಕಡಿವಾಣ ಬೀಳಲಿ

ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಡಿತರ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿವೆ. ಆದರೆ ರಾಜ್ಯದಲ್ಲಿ ‘ಅಕ್ಕಿ ಅಕ್ರಮ ದಂಧೆ' ಅವ್ಯಾಹತವಾಗಿ ನಡೆಯುತ್ತಿದೆ. ಬಡವರಿಗೆ ಹಣದ ಆಮಿಷವೊಡ್ಡಿ ಪಡಿತರ ಅಕ್ಕಿಯನ್ನು ಕೆಲವು ದಂಧೆಕೋರರು ಖರೀದಿಸುತ್ತಿದ್ದು, ಅಕ್ಕಿಯನ್ನು ಪಾಲಿಶ್ ಮಾಡಿ ಹೆಚ್ಚಿನ ಬೆಲೆಗೆ ಮತ್ತೆ ಮಾರುಕಟ್ಟೆಗೆ ಮಾರುವ ಮೂಲಕ ಕೋಟ್ಯಾಂತರ ರೂ. ಕೊಳ್ಳೆ ಹೊಡೆಯುತ್ತಿದ್ದಾರೆ. ಸರಕಾರದಿಂದ ವಿತರಣೆಯಾಗುವ ಪಡಿತರವನ್ನು ಎರಡು ರೀತಿಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ. ಕೆಲ ಸಣ್ಣಪುಟ್ಟ ಏಜೆಂಟರು ಗ್ರಾಹಕರಿಂದ ಅಕ್ಕಿಯನ್ನು ಖರೀದಿಸಿ ಮಿಲ್ ಗಳಿಗೆ ನೀಡುವುದು ಒಂದೆಡೆಯಾದರೆ, ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡದೆ ಅಕ್ರಮವಾಗಿ ದಾಸ್ತಾನು ಮಾಡಿದ ಅಕ್ಕಿಯನ್ನು ನೇರವಾಗಿ ಮಿಲ್ ಗಳಿಗೆ ಸಾಗಿಸುತ್ತಾರೆ. ಸ್ಥಳೀಯ ಮಟ್ಟದ ಅಧಿಕಾರಿಗಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳದೆ ಮೌನವಾಗಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಕಳೆದ ಎರಡು ವರ್ಷಗಳಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಹಾಗೂ ಸಾಗಣೆ ಮಾಡುತ್ತಿದ್ದ ೫೦.೬೨ ಕೋಟಿ ರೂ. ಮೌಲ್ಯದ ೧,೪೨,೭೩೯ ಕ್ವಿಂಟಾಲ್ ಪಡಿತರವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪಡಿತರ ಅಕ್ರಮ ಸಂಗ್ರಹ ಹಾಗೂ ಸಾಗಣೆಯಲ್ಲಿ ಭಾಗಿಯಾಗಿದ್ದ ಸಾವಿರಾರು ಜನರನ್ನು ಬಂಧಿಸಲಾಗಿದ್ದು, ನೂರಾರು ಪ್ರಕರಣಗಳು ದಾಖಲಾಗಿವೆ. ಅದಾಗಿಯೂ ಕನ್ನ ಹಾಕುವವರಿಗೆ ಪ್ರಭಾವಿಗಳ ಬೆಂಬಲ ಇರುವ ಕಾರಣದಿಂದಾಗಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಇಲ್ಲದ ಕಾರಣದಿಂದಾಗಿ ರಾಜಾರೋಷವಾಗಿ ಅಕ್ಕಿಯನ್ನು ಪಾಲಿಶ್ ಮಾಡುವ ದಂಧೆಯಲ್ಲಿ ಕೆಲವರು ತೊಡಗಿಸಿಕೊಂಡಿದ್ದಾರೆ. ಇಲಾಖೆಯಿಂದ ಸಾವಿರಾರು ಕೇಸ್ ಗಳನ್ನು ದಾಖಲಿಸಿದರೂ ಆರೋಪಿಗಳಿಗೆ ಮಾತ್ರ ಸಮರ್ಪಕವಾಗಿ ಶಿಕ್ಷೆಯಾಗುತ್ತಿಲ್ಲ. ಆದ್ದರಿಂದ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆ ನಿಯಂತ್ರಣಕ್ಕೆ ವಿಶೇಷ ತಂಡ ರಚಿಸಬೇಕು. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವ ದಂಧೆಕೋರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಆ ಮೂಲಕ ಸರಕಾರದ ಮಹತ್ತರ ಯೋಜನೆಯೊಂದು ವಿಫಲವಾಗದಂತೆ ತಡೆಯಬೇಕು.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೩-೦೨-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ